ಕತ್ತಲೆ ಕುಲದವನು: ವೀರಣ್ಣ ಮಡಿವಾಳರ ಕವಿತೆ

ಕತ್ತಲೆ ಕುಲದವನು: ವೀರಣ್ಣ ಮಡಿವಾಳರ ಕವಿತೆ

Updated : 18.09.2022

ನಿನ್ನ ನಗು ನೋಡಲೆಂದೇ
ನಿನ್ನ ಮನೆಯ ಮುಂದಿನ ದೀಪದ ಕಂಬದ ಮೇಲೆ ಗುಬ್ಬಿಯಾಗಿ ಕೂತಿರುತ್ತೇನೆ ಅಕಾಲಾಂತವಾಗಿ

ಒಳಗೆ ಅತ್ತು ಹೊರಗೆ ನಗುವ
ನಿನ್ನ ಜಾದೂ ನಾನೂ ಕಲಿತಿದ್ದೇನೆ
ಬಿಡು ಬೇಸರ ದುಃಖಿಸಲೇನು ಅವಸರ
ನಿನ್ನ ಪ್ರೀತಿಸಿದ ತಪ್ಪಿಗೆ ಅಥವಾ ಸರಿಗೆ ಒಂಟಿಗಾಲಲ್ಲಿ ಹೀಗೆ ಲೈಟು ಕಂಬದ ಮೇಲೆ ಒಂದೇ ಹೃದಯದಿಂದ ಬಳಲುತ್ತಿದ್ದೇನೆ
ಕೇಳಿಸಿದರೆ ಬಂದು ಬೊಗಸೆ ಮುತ್ತಿನ ಕಾಳು
ತೂರು ನನ್ನೆಡೆಗೆ ಅಥವಾ ತೂರಿದಂಗಾದರೂ ಮಾಡು
ತಿಂದಂತೆ ನಟಿಸಿ ಬದುಕಿದ್ದೇನೆಂಬಂತೆ ನಟಿಸುತ್ತೇನೆ

ನನಗೆ ನೀನೇ ಲೋಕ ನಿನಗೆ ಇನ್ನೊಂದು ಲೋಕ

ಒಮ್ಮೆ ಕಣ್ಣಿಂದ ಕರೆದು ನೋಡು
ಲೋಕ ಲೋಕದ ಅಂತರ ದಾಟಿ ಕಾಗದದ ರೆಕ್ಕೆ ಬರೆದುಕೊಂಡು ನೀ ಬಯಸುವ ಚಿತ್ರವಾಗಿ ನೀ ಬಯಸಿದ ಬಣ್ಣದಲ್ಲಿ ನೀ ಬಯಸಿದಂತೆ ಹಾಗೆ ಹಾರಿ ಬರುವೆ

ಬೆಳದಿಂಗಳ ಹಾಲಿನ  ಸ್ನಾನ ಮಾಡುವ ನಿನಗೆ
ಈ ಕತ್ತಲೆಯ ಕುಲದವನು ಕುಡಿದವನು ಬಯಸುವುದು ತಪ್ಪೇನು
ತಾಯ ಎದೆಹಾಲು ಬಿಟ್ಟಾಗಿನಿಂದ ನಿನ್ನದೇ ಎದೆಯ ತಾವಿಗಾಗಿ ಪರಿತಪಿಸಿದವನು ನಾನು ಮೂವತ್ತೋ ನಲವತ್ತೋ ಬೇಸಿಗೆಗಳಲ್ಲಿ ಕಾದವನು ನಾನು
ನಿನ್ನ ಪ್ರೇಮದ ನೆಳಲ ನೀಡೆಯಾ ನೀನು

ಎಳೆ ಬೆಳದಿಂಗಳ ಮಳೆ ನಿನ್ನ ಗಲ್ಲದ ಅಂಗಳದಲ್ಲಿ
ಎಳೆ ಬಿಸಿಲು ಚೆಲ್ಲಾಪಿಲ್ಲಿ  ಇಲ್ಲಿ ನನ್ನೆದೆಯ ಬಿಡಾರದಲ್ಲಿ
ಬಾಗುವ ಬಿಲ್ಲು ನೀನು ಹೂಡಿದ ಬಾಣ ನಾನು
ಮೋಹದ ಹಕ್ಕಿಯ ಬಂಧನ ಬಿಡಿಸು
ಬಾಣದ ಮೇಲೆ ಸವಾರಿ ಹೊರಡಿಸು
ಲೋಕ ಲೋಕ ದಾಟಿ ಹೊಸ ಲೋಕ ಹುಟ್ಟಲಿ
ನಾನೂ ನೀನೂ ಇಬ್ಬರೇ ಮತ್ತೆ ಅಲ್ಲಿಯೂ ಹುಟ್ಟಲಿ

- ವೀರಣ್ಣ ಮಡಿವಾಳರ

© Copyright 2022, All Rights Reserved Kannada One News