Flash News:
ಕಂತ್ರಿ ನಾಯಿ: ಮುನವ್ವರ್ ಜೋಗಿಬೆಟ್ಟು ಅವರ ಕಥೆ

ಕಂತ್ರಿ ನಾಯಿ: ಮುನವ್ವರ್ ಜೋಗಿಬೆಟ್ಟು ಅವರ ಕಥೆ

Updated : 11.09.2022

ಬೆಳಕು‌ ಹರಿವ ಹೊತ್ತಿಗೆ ಸುಮಿತ್ರ ಆಗಷ್ಟೇ ನಿದ್ದೆಯಿಂದೆದ್ದ ತನ್ನ ಎರಡು ವರ್ಷದ ಮಗುವಿಗೆ "ಅಚ್ಚೊಚ್ಚೂ...ನಾಯಿ ಬರುತ್ತೆ ಮಗೂ.. ಬೇಗ ಉಣ್ಣು... ಸಿಂಹ ಬರುತ್ತೆ ಬೇಗ ಉಣ್ಣು" ಎಂದು ಕಥೆ ಹೇಳಿ ಹೆದರಿಸಿ ಉಣಿಸುತ್ತಿದ್ದಳು. ಅದೇ ಹೊತ್ತಿಗೆ ಹೆಗಲಲ್ಲೊಂದು ಹಾರೆ ಹೊತ್ತು ಪಿಲಿಗೂಡ್ ಪಂಚಾಯತ್ ಟ್ಯಾಂಕಿನಿಂದ ಮೊದಲರ್ಧ ಗಂಟೆ ಊರಿನ ಪೈಪ್ಗೆ ನೀರು ಹರಿಸಲು ದುಗ್ಗಪ್ಪ ನಡೆದು ಬರುತ್ತಿದ್ದ. ಅರ್ಧ ತಲೆಗೂದಲು ಬೋಳಾಗಿದ್ದ ಅವನನ್ನು‌ ಕಂಡವರೆಲ್ಲಾ ಅವನ ಮೈ ಬಣ್ಣಕ್ಕೂ ತಾಳೆ ಹಾಕಿ "ಜಯಸೂರ್ಯ" ಅಂತ ಕರೆಯುವುದುಂಟು. ಕಪ್ಪು ತೊಡೆಗಳು ಕಾಣುವಂತೆ ಎತ್ತಿ‌ಕಟ್ಟಿದ ಪಂಚೆಯುಟ್ಟು ದೂರದಲ್ಲಿ‌ ಬರುತ್ತಿದ್ದ ದುಗ್ಗಪ್ಪನನ್ನು‌ ಕಂಡು‌ ಸುಮಿತ್ರ ಮಗುವಿಗೆ "ನೋಡ್ ನೋಡ್ ...ದುಗ್ಗಪ್ಪ ಬಂದ‌ ಬೇಗ ಉಣ್ಣು..ಉಣ್ಣದಿದ್ರೆ ಗೋಣಿಲಿ ಹಾಕೊಂಡು ಹೋಗ್ತಾನೆ" ಎಂದು ಮಗುವಿಗೆ ಹೇಳಿದೊಡನೆ ಮಗು‌ ಅಳು ನಿಲ್ಲಿಸಿ ಬೇಗ ಉಣ್ಣಲು‌ ಶುರುವಿಟ್ಟಿತು. ದುಗ್ಗಪ್ಪನಿಗೆ ಅದು‌ ಸಮಾನ್ಯವಾದ್ದರಿಂದ, ಬಾಯಿಯ ನೇರಕ್ಕೆ ನೇತು ಹಾಕಿದ್ದ ಮಾಸಲು ಬಣ್ಣದ ಮಾಸ್ಕನ್ನು ಕುತ್ತಿಗೆಯಡಿಗೆ ನೂಕಿ "ಯಾರದು‌! ಊಟ ಮಾಡದ್ದು,‌ ಊಟ ಮಾಡದ ಮಕ್ಕಳನ್ನು ಗೋಣಿಯಲ್ಲಿ ಹಾಕಿ ಕೊಂಡು ಹೋಗುತ್ತೇನೆ" ಎಂದು ವಿಕಟವಾಗಿ  ಗಹಗಹಿಸಿ ನಕ್ಕ. ಬೀಡಾ ತಿಂದು ಕೆಂಪಿಟ್ಟಿಗೆಗಳಂತಿದ್ದ ಅವನ ಅಷ್ಟೂ ಹಲ್ಲುಗಳು ಆಗ ಪ್ರದರ್ಶನಗೊಂಡವು. ಅವನು ವಿಮಲ್ ಪಾನ್ ಮಸಾಲಾದ  ರಾಯಭಾರಿಯಂತೆ ಹಾಗೆ ನಕ್ಕರೆ ಮಕ್ಕಳೇನು, ದೊಡ್ಡವರೂ ಒಂದು ಕ್ಷಣ ಭಯ ಬಿದ್ದಾರು.

" ಇಲ್ಲ ದುಗ್ಗಪ್ಪ, ಅವನು ಜಾಣ ಮರಿ ಉಣ್ತಾನೆ" ಅಂತ ಸುಮಿತ್ರ ಮಗುವಿನ ಪರ ವಹಿಸಿದಳು. "ಸರಿ ಬರ್ತೇನೆ" ಎಂದು ಕತ್ತಿನಲ್ಲಿದ್ದ ಮಾಸ್ಕನ್ನೆಳೆದು ಯಥಾ ಸ್ಥಾನದಲ್ಲಿಟ್ಟು ಹೊರಟ ದುಗ್ಗಪ್ಪ ಆ ದಾರಿಯಲ್ಲೇ ಓಡಿ ಬಂದ ಬೀಡಾಡಿ ನಾಯಿಯನ್ನು "ಹಛೀ" ಎಂದು ಹಳಿದ‌. ಅವನ ಬೆದರಿಕೆಗೆ ಹೆದರಿ ಅದು ಸುಮಿತ್ರನ ಮನೆ ಬಾಗಿಲ ನೇರಕ್ಕೆ ಓಡಿತು. ಬೆಳಗ್ಗಿನ ಬೆಳ್ತಕ್ಕಿ‌ ಗಂಜಿ ಕುಡಿದು ಬಾಯಿ ಮುಕ್ಕಳಿಸಲು ಹೊರಬಂದ ಸುಮಿತ್ರಳ ಗಂಡ ರಾಘವ ಬರುವುದಕ್ಕೂ ನಾಯಿ ಹಾಯುವುದಕ್ಕೂ ಸರಿ ಹೋಯಿತು. "ಥೂ... ಹಡಬೆ" ಎಂದು ಅಲ್ಲೇ ಬಿದ್ದಿದ್ದ ಕಲ್ಲನ್ನೆತ್ತಿ ಅದರ ಬೆನ್ನ ನೇರಕ್ಕೆಸೆದ. "ದಡ್" ಎಂದು ಕಲ್ಲು ತಾಗಲು ನಾಯಿ "ಕುಯ್ಯೋ ಮುರ್ರೋ" ಎಂದು ಕೂಗುತ್ತಾ ಪೇರಿ ಕಿತ್ತಿತ್ತು.

ಅದೊಂದು ಕಂತ್ರಿ ನಾಯಿ. ವರ್ಷಗಳ ಹಿಂದೆ ರಾಘವನ ಮನೆಯೆದುರು ಕಾರೊಂದಕ್ಕೆ ಸಿಲುಕಿ ಸತ್ತ ಅಮ್ಮನನ್ನು ಕಳೆದುಕೊಂಡ ತಥಾ ಕಥಿತ ಮರಿನಾಯಿ, ಅನ್ನ ನೀರು ಮುಟ್ಟದೆ ಶೋಕ ಆಚರಿಸುತ್ತಿತ್ತು. ಅದನ್ನು ಕಂಡು ಕನಿಕರ ಪಟ್ಟಿದ್ದರಿಂದ ಒಂದು ಹೊತ್ತಿನ ಊಟ ಕೊಟ್ಟ ಬಳಿಕ ಅದು ರಾಘವನ‌‌ ಮನೆಯಲ್ಲೇ ಬೀಡು ಬಿಟ್ಟಿತ್ತು. ಸ್ವಲ್ಪ ದಿನ ಮನೆಯಲ್ಲೇ ಇತ್ತಾದರೂ ಮುಂದೆ ಇತರ ಬೀದಿನಾಯಿಗಳೊಂದಿಗೆ ಸೇರಿ ಊರೂರು ಅಲೆದು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯೋ ನೆಂಟರಂತೆ ಮನೆಗೆ ಬರುತ್ತಿತ್ತು. ಊರೂರ ಸ್ಥಿತಿವಂತರ ಮನೆಯಲ್ಲಿ  ಎಲುಬುಗಳನ್ನು ತಿಂದುಂಡು ದಷ್ಟ ಪುಷ್ಟವಾಗಿ‌ ಬೆಳೆಯತೊಡಗಿತ್ತು. ಲಾಕ್ ಡೌನ್ ಆದ ಬಳಿಕ ಕಲ್ಲು ಬೀರಲು‌ ಜನರಿಲ್ಲದ ಖಾಲಿ ರಸ್ತೆಯಲ್ಲಿ‌ ಯಾವ ಸಾಮಾಜಿಕ ಅಂತರ, ಮಾಸ್ಕು ಹಾಕಬೇಕಿಲ್ಲದ‌ ಕಾರಣ ಇನ್ನಷ್ಟು ಸ್ವಾತಂತ್ರ್ಯ‌ ಸಿಕ್ಕು ಕಂತ್ರಿ‌ನಾಯಿ ಎಂಬ ಹೆಸರಿಗೆ ಅದು ಇನ್ನಷ್ಟು ನ್ಯಾಯ ಒದಗಿಸುತ್ತಿತ್ತು.

ಕಳೆದೆರಡು ವರ್ಷಗಳ ಹಿಂದೆ ಸೋರುವ ಮನೆಯ ಮಾಡನ್ನು‌‌‌ ಸರಿಪಡಿಸಿದ್ಧ ರಾಘವ ಕೋರೋನಾ‌ ಕೈ ಕೊಟ್ಟು ಕೆಲಸವಿಲ್ಲದೆ ಹೈರಾಣಾಗಿದ್ದ. ಮಳೆಗಾಲದಲ್ಲಿ ಅಲ್ಪ ಸ್ವಲ್ಪ ಸೋರುವುದನ್ನು ತಡೆಯಲು ಅಲ್ಲಲ್ಲಿ ಹೆಂಚು ಬದಲಿಸಿ ಹಾಕಿಸಿದ್ದ.‌ ಕೈಯಲ್ಲಿ ಬಿಡಿಗಾಸಿಲ್ಲದಿದ್ದರೂ ಎರಡು ದಿನಕ್ಕೆ ಅರ್ಧ ಲೀಟರಾದರೂ ಮಗುವಿಗೆ ಹಾಲು‌ ಕೊಳ್ಳಬೇಕು. ಮತ್ತೆ ಸಾರು ಮಾಡಲು ತಿಂಗಳಿಗೊಮ್ಮೆಯಾದರೂ ಮಾಂಸ ಸಿಗದಿದ್ದರೆ ಹೇಗೆ, ದಿನವೂ ಸೊಸೈಟಿ ಕೊಟ್ಟ ಬೇಳೆ ಸಾರು ಕುಡಿದು ಸಾಕಾಯ್ತು ಎಂದು ಚಿಂತಾಕ್ರಾಂತನಾಗಿ ಬಿಕೋ ಎನ್ನುತ್ತಿದ್ದ ರಸ್ತೆ ನೋಡಿ ಕುಳಿತಿರುತ್ತಿದ್ದ.

ಅದೊಂದು‌ ದಿನ ಹಾಲಿಗೆಂದು ಪೇಟೆಗೆ ಹೋದವನು, ಹತ್ತಿರದ ಮೀನಿನಂಗಡಿಗೊಮ್ಮೆ ನೋಡಿದ. "ಮಾಂಜಿ, ಅಂಜಲ್, ನಂಗ್,ಬಂಗುಡೆ, ಬೂತಾಯಿ, ಬೆರಕೆ..." ಎಂದು ಕಂಡೆಕ್ಟರ್ನಂತೆ ಮೀನು ವ್ಯಾಪಾರಿ ಮೀನುಗಳ‌ ಹೆಸರನ್ನು ಉರು ಹೊಡೆಯುವುದು ಕೇಳಿ ಅವನ ಬಾಯಿಯಲ್ಲಿ ನೀರೂರದಿರಲಿಲ್ಲ. ಮೀನು ಅಂಗಡಿಯ ಬಶೀರ್ ಹಳೆಯ ಸಹಪಾಠಿಯೂ ಹೌದು.
ಬಾಯಿ ಚಪಲಕ್ಕೆ " ಬಶೀರಾ... ಬಂಗುಡೆಗೆ ಎಷ್ಟಾ?" ಅಂತ ಕೇಳಿದ. ಬೇರೆ ಗಿರಾಕಿಗಳ ರಶ್ಶಿನ ಮಧ್ಯೆಯೂ
" ಹೋ ಇದ್ಯಾರು ರಾಘವನಾ...ಕೇಜಿಗೆ ನೂರ್ರುಪಾಯಿ ಮಾರಾಯಾ.. ನಿನ್ಗೆ ಎಂಬತ್ತಕ್ಕೆ ಕೊಡ್ವಾ" ಅಂದ."ಅರ್ಧ ಕೆಜಿ ಸಾಕು ಮಾರಾಯ... ಮೂವತ್ತು ರೂಪಾಯಿ ಮಾಡು" ಎಂದು  ಚೌಕಾಸಿ‌ ಮಾಡಿ ಮೂರು ಬಂಗುಡೆ ಕೊಂಡುಕೊಂಡಿದ್ದ. ಕೊಡಲು ಕಿಸೆಯಲ್ಲಿದ್ದ ಹಣವು‌ ಸಾಲದಾದಾಗ "ಪರ್ವಾಗಿಲ್ಲ, ಇನ್ನೊಮ್ಮೆ ಐದು ರೂಪಾಯಿ ಕೊಟ್ಟರಾಯಿತು" ಎಂದು ರಾಘವನಿಗೆ ಪ್ಲಾಸ್ಟಿಕ್ ಲಕೋಟೆಯಲ್ಲಿ ಬಶೀರ್ ಮೀನು ಕಟ್ಟಿಕೊಟ್ಟ. ಬಸ್ಸು ಮೊದಲೇ ಇಲ್ಲ, ಆಟೋ ಮಾಡೋಣವೆಂದರೆ ಕಿಸೆಯಲ್ಲುಳಿದ ಚೂರು ಪಾರು ಹಣವೂ‌ ಸಾಲದೆಂದು ನಡೆದುಕೊಂಡೇ ಮನೆಗೆ ಬಂದ.

 ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ರಾಘವನ ಕೈಯಲ್ಲಿನ ಪ್ಲಾಸ್ಟಿಕ್ ಲಕೋಟೆಯನ್ನು ಕಂಡು ಕಂತ್ರಿ ನಾಯಿ ಹಿಂಬಾಲಿಸುತ್ತಾ ಮನೆಗೆ ಬಂದಿತ್ತು. ಗೇಟು ತೆಗೆಯುವಷ್ಟರಲ್ಲಿ ಪ್ರತ್ಯಕ್ಷವಾದ ನಾಯಿಯನ್ನು ಕಂಡು, ರಾಘವ " ಸಾಡೆ ಸಾತ್... ಎಲ್ಲಿದ್ರೂ ಬರ್ತದೆ.. ಹಚೀ" ಎಂದು ಕಲ್ಲೆತ್ತಿ ಓಡಿಸಿದ. ಅದು ಅವನ ಗದರುವಿಕೆಗೆ ಹೆದರಿ ಪೊದೆಗಳ ಮಧ್ಯೆ ಓಡಿ ಮರೆಯಾಯಿತು.  " ಏ ಸುಮಿತ್ರಾ...  ಬಾರಿ ರೇಟು ಮಾರಾಯ್ತಿ ಮೀನಿಗೆ, ಬಂಗುಡೆ ತಂದಿದ್ದೇನೆ... ಓಳ್ಳೇ ಸಾರಾಗ್ಬೇಕು ನೋಡು" ಎಂದು ರಾಘವ ಕೂಗಿ ಹೇಳಲು,‌ ಮಿನಾಕ್ಷಿ " ಓ ಬಂದೆ" ಎಂದು ಒಳಗಿನಿಂದ ಮಣೆಕತ್ತಿ ಎತ್ತಿಕೊಂಡು ಹೊರ ಬಂದಳು. ರಾಘವನಲ್ಲಿದ್ದ ಹಾಲಿನ ಪ್ಯಾಕೆಟ್ಟನ್ನು ಒಳಗೆ ಕೊಂಡು ಹೋಗಿ, ಮೀನಿನ ಲಕೋಟೆಯನ್ನೆತ್ತಿಕೊಂಡು ಅಂಗಳಕ್ಕೆ ಬಂದಳು. ಮೀನಿನ‌ ಲಕೋಟೆ ಮಧ್ಯಕ್ಕೆ‌ ಮುರಿದು ಸೀರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಮೀನು ಸ್ವಚ್ಫಗೊಳಿಸಲು ಕುಳಿತಳು.‌ ಬಂಗುಡೆಯ ತಲೆ ಸಿಗಿದು ನೋಡಿದವಳು ಕಿವಿರು ಬೆಳ್ಳಗಾಗಿರುವುದು ನೋಡಿ "ಮೀನು ಫ್ರೆಶ್ ಅಂಥ ಏನಿಲ್ಲ, ಐಸ್ ಹಾಕಿ ಇಟ್ಟಿದ್ದು" ಅಂದಳು. ಅವಳ ಮಾತನ್ನು‌ ಕೇಳಿಯೂ‌ ಕೇಳಿಸದಂತೆ ರಾಘವನು ಅಂಗಳದಲ್ಲಿ ನಿಂತು ಅವಳು ಮಣೆಕತ್ತಿಯಲ್ಲಿ ಕುಳಿತು ಹೊಟ್ಟೆ ಸೀಳುವುದನ್ನೂ, ಮುಳ್ಳು ಕತ್ತರಿಸುವುದನ್ನು ಪರವಶನಾಗಿ ನೋಡುತ್ತಾ ಸಾರಿನ ರುಚಿಯನ್ನು ನೆನೆಯುತ್ತಾ ‌ನಿಂತ. ತೆಂಗಿನ‌ ಮರದಲ್ಲಿದ್ದ‌ ಕಾಗೆಗಳ ಗುಂಪು ಮೀನಿನ ವಾಸನೆ ಗ್ರಹಸಿ‌ ಅಲ್ಲೇ ಬೀಡು ಬಿಟ್ಟು ವಿಪರೀತವಾಗಿ ಅರಚುತ್ತಿದ್ದವು. ಹತ್ತಿರದ ಮನೆಯ ಬೆಕ್ಕುಗಳೆರಡು ಜಗಳವಾಡುತ್ತಾ, ಮೀನಿನ ಕರುಳು,ಜಠರಕ್ಕಾಗಿ ಕಾಯುತ್ತಿದ್ದವು. ಅವಳು ಎತ್ತಿ ಎಸೆದಂತೆ ಕಾಗೆ ಬೆಕ್ಕುಗಳೆರಡು ಪಿತ್ರಾರ್ಜಿತ ಆಸ್ತಿಯಂತೆ ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಹೆಣಗುತ್ತಿದ್ದವು.  ಸುಮಿತ್ರಾ ಮೂರನೇ ಮೀನು ತುಂಡರಿಸಿ‌ ತಲೆ ಸೀಳಿದಳಿರಬೇಕು. ಅಷ್ಟರಲ್ಲೇ ಚಂಗನೇ ಹಾರಿ ಬಂದು ಹೊಂಚು‌ ಹಾಕುತ್ತಿದ್ದ ಕಂತ್ರಿ ನಾಯಿ ಸ್ವಚ್ಫಗೊಳಿಸಿಟ್ಟ ಮೀನಿನ ಲಕೋಟೆಯನ್ನೆತ್ತಿಕೊಂಡು ಓಡಿ ಹೋಯಿತು.  ಸುಮಿತ್ರಾ "ಓ... ಆ ನಾಯಿಗೆ ಸನ್ನಿ ಮೀರಿತು" ಎಂದು ಕೂಗುವಷ್ಟರಲ್ಲಿ ರಾಘವ "ಹಚೀ... ಬ್ಯಾವರ್ಸಿ... ಹಡಬೆ...." ಎಂದು ಅದರ ಹಿಂದೆ ಓಡಿದ. ಅಷ್ಟರಲ್ಲೇ ಸಾಕಷ್ಟು‌ ದೂರ ಓಡಿದ್ದ ನಾಯಿ‌ ಲಕೋಟೆಯೊಂದಿಗೆ ಪೊದೆಗಳ ಮಧ್ಯೆ ಮರೆಯಾಯಿತು. ರಾಘವನ‌ ಹೊಟ್ಟೆಯೊಳಗೆ ಕೆಂಡ ಸುಡತೊಡಗಿತು.

"ಅಲ್ಲ ನೀನು ಸತ್ತು‌ ಮಲಗಿ ಮೀನು ಸ್ವಚ್ಫಗೊಳಿಸುವುದಾ?, ಅಷ್ಟು ಗೊತ್ತಾಗುವುದಿಲ್ವಾ?" ಅವನ‌ ಕೋಪ ಅವಳ‌ ಕಡೆ ತಿರುಗಿತು. "ನನ್ಗೇನು ಮಾಡ್ಲಿಕ್ಕಾಗುತ್ತೇ... ನಾಯಿ ಎತ್ಕೊಂಡು ಹೋದ್ರೆ" ಅಂತ ಅವಳು. " ಜಾಗ್ರತೆ ಇರ್ಬಾರ್ದಾ..." ಅಂತ ಮಾತ್ರ ಹೇಳಿ ಅವನು ಮಾತು‌ ನಿಲ್ಲಿಸಿದ‌.ನಾಯಿ ಮೇಲಿನ ಸಿಟ್ಟು ಅವಳಲ್ಲಿ ತೀರಿಸಿ ಏನು ಪ್ರಯೋಜನ ಎಂದು ಅವನಿಗೂ ಅನಿಸಿತರಬೇಕು.

"ಆ ದಿನವೇ ನಾನು‌ ಹೇಳಿಲ್ವಾ? ಆ‌ ಕಂತ್ರಿ‌ನಾಯಿನ‌ ಇಲ್ಲಿ ಸಾಕುವುದು ಬೇಡ ಅಂತ, ನಮ್ಮ ಬೆಕ್ಕಿನ ಮರಿಯನ್ನು ಕೊಂದಾಗ್ಲೂ ಹೇಳಿದ್ದೆ ತಾನೇ. ಈಗ ಒಂದು ಮೀನು ಉಳಿದಿದೆ ಅಲ್ವಾ, ಅದನ್ನೇ ಸಾರು ಮಾಡ್ತೀನಿ"ಎಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಗಂಡನಿಗೆ ಸಮಾಧಾನ ಹೇಳಿದಳು. ಆ ದಿನ‌ ಮಿನಾಕ್ಷಿಯ ಬಂಗುಡೆಯ‌ ಸಾರು ರಾಘವನಿಗೆ‌ ಸ್ವಲ್ಪವೂ‌ ಹಿಡಿಸಲಿಲ್ಲ. ಸುಮಿತ್ರಾ ಎಂದಿನಂತೆ "ಸಾರು ಹೇಗಿದೆ" ಎಂದು ಕೇಳಲೂ ಇಲ್ಲ. ಅವನಿಗೆ ನಾಯಿ ಕದ್ದೊಯ್ದ ಬೆಳ್ಳಿ ಬಣ್ಣದ ಬಂಗುಡೆ ಮೀನುಗಳೇ‌ ನೆನಪಿಗೆ ಬರತೊಡಗಿದವು. ಮನಸ್ಸಿನಲಿ ದ್ವೇಷ ಉಕ್ಕೇರುತ್ತಿತ್ತು.‌ " ಅದು ತಿನ್ನುವಾಗ ಗಂಟಲಲ್ಲಿ ಮುಳ್ಳಾದರೂ ಸಿಕ್ಕಿ ಸಾಯಬಾರದಾ" ಎಂದು ಮನಸಿನಲ್ಲೇ ಶಪಿಸಿದ. ಆ ರಾತ್ರಿ ಮಂಚದ ಮೇಲೆ ಮಲಗಿ ಹೆಂಚು ನೋಡುತ್ತಾ ಬದುಕಿನ ಬಗ್ಗೆ ಗಾಢವಾಗಿ ಚಿಂತಿಸತೊಡಗಿದ. ಬೇಕೋ ಬೇಡವೋ ಎಂಬಂತೆ ಮೆಲ್ಲನೆ ತಿರುಗುತ್ತಿದ್ದ ಹಳೆಯ ಫ್ಯಾನು ಅದು ಕೀರಲುಗುಟ್ಟುವಾಗಲೆಲ್ಲಾ  ಅವನಿಗೆ ಕಂತ್ರಿ ನಾಯಿಯ ಉಪದ್ರವಗಳು ಒಂದರ ಮೇಲೊಂದು ನೆನಪಿಗೆ ಬರತೊಡಗಿತ್ತು. ನೆರೆಮನೆಯ ಕೋಳಿ ಹಿಡಿದು ರಣರಂಪವಾಗಿದ್ದು, ಪ್ರೀತಿಯ ಬೆಕ್ಕನ್ನು ಕಚ್ಚಿಕೊಂದದ್ದು, ನೆಂಟರು ಬಂದ ದಿನ ಮನೆಯ ಚಾವಡಿಯ ನೇರದಲ್ಲೇ ಕುಳಿತು ಕಕ್ಕ ಮಾಡಿದ್ದು, ಒಣಗಲು ಹಾಕಿದ್ದ ಮೀನಿನ ಮೇಲೆ ಮೂತ್ರ ಮಾಡಿದ್ದು, ಈಗ ಇವತ್ತಿನ ಬಂಗುಡೆಯ ಸರದಿ. "ವಿಷವಿಕ್ಕಿ ಕೊಲ್ಲಬೇಕು, ಛೆ.... ಛೇ... ಅದಾಗಲಿಕ್ಕಿಲ್ಲ. ಹಾಗೆ ಅದು ತಿನ್ನುತ್ತಿದ್ದರೆ ಊರವರಿಟ್ಟ ವಿಷಕ್ಕೆ ಯಾವಾಗಲೋ ಸತ್ತು ಹೋಗಬೇಕಿತ್ತು. ಇನ್ನು ವಿಷವನ್ನಾದರೂ ಕೊಳ್ಳಲು ಹಣ ಬೇಡವೇ?" ಎಂದು ಚಿಂತಿಸುತ್ತಾ ಎದೆಯ ಕುರುಚಲು ರೊಮಗಳ ಮೇಲೆ ಕೈಯಾಡಿಸುತ್ತಿದ್ದವನಿಗೆ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ. ಆ ರಾತ್ರಿ ಕನಸಿನಲ್ಲೂ ಬರೀ‌ ಕಂತ್ರಿ ನಾಯಿಯೇ ಕಾಡಿತು.
ಆ ದಿನ ಬೆಳಗ್ಗೆ "ಇವತ್ತು ನಾಯಿಗೊಂದು ಗತಿ ಕಾಣಿಸಲೇಬೇಕೆಂದು" ರಾಘವ‌ ನಿರ್ಧರಿಸಿ ಮಂಚದಿಂದೆದ್ದ.

ಹೊರ ಬಂದು ಹಲ್ಲುಜ್ಜಿದ. ಆದಾಗಲೇ ಬೆಳಕು ಹರಿದಿತ್ತು. ಕೈಯಲ್ಲಿ ಕಾಸೂ ಇಲ್ಲದ ದಿನಗಳಲ್ಲಿ ಕಂತ್ರಿ‌ನಾಯಿಯ ಉಪದ್ರವಗಳು ಇನ್ನಷ್ಟು ಮನಸ್ಸನ್ನು ಘಾಸಿಗೊಳಿಸಿದ್ದವು. ಬಾಯಿ ಮುಕ್ಕಳಿಸಿದ.‌ ಗೋಡೆಯ ಬದಿಯಲ್ಲಿ ಆನಿಸಿದ ತಾಲೀಮು ದೊಣ್ಣೆ ಎತ್ತಿಕೊಂಡ. ಅಲ್ಲೇ ಹತ್ತಿರದಲ್ಲಿ ಬಿಸಿ ನೀರು ಕಾಯಿಸಲು ಹಾಕಿದ್ದ ಹಂಡೆಯ ಒಲೆಯ ಬಳಿಯಿದ್ದ ಬೂದಿ ಮೇಲೆ ಕಂತ್ರಿ ನಾಯಿ ಬೆಚ್ಚಗೆ ಮಲಗಿತ್ತು. ನಾಲ್ಕು ಸುತ್ತು ದೊಣ್ಣೆಯನ್ನು ಗಾಳಿಯಲ್ಲಿ ಬೀಸಿಕೊಂಡ. ಸ್ವಲ್ಪ ಬಾಗಿ ಪೊಶಿಸನ್ ತಗೆದುಕೊಂಡ. "ರಪ್" ಎಂದು ದೊಣ್ಣೆ ಗಾಳಿಯಲ್ಲಿ ಬಂದು ಕಂತ್ರಿ‌ನಾಯಿ‌ ಪಕ್ಕೆಲುಬಿಗೆ ಬಡಿಯಿತು. ನಿದ್ದೆ ಬಿಟ್ಟು ಕುಂಯ್ಯನೆ ಅರಚುತ್ತಾ‌ ಅದು ನೋವಿನಿಂದ ಹೊರಳಿತು. ಓಡಲು ಶುರುವಿಟ್ಟಂತೆ ರಾಘವ ಅದರ‌ ಹಿಂದೆಯೇ ಓಡಿದ. ಇನ್ನೊಮ್ಮೆ ಬೀಸಿದ ದೊಣ್ಣೆ ಕಂತ್ರಿ ನಾಯಿ ಮುಖಕ್ಕೆ ಝಾಡಿಸಿತು. ಅಷ್ಟರಲ್ಲೇ ರಾಘವ ಮತ್ತು ಕಂತ್ರಿ‌ನಾಯಿ ಮನೆಯ ಎದುರು ರಸ್ತೆಯಲ್ಲಿದ್ದರು. ಕಂತ್ರಿ‌ನಾಯಿಯ ಬಾಯಿಯಲ್ಲಿ ರಕ್ತವೊಸರುತ್ತಿತ್ತು. ಅದು ನೋವಿನಿಂದ ಚೀತ್ಕರಿಸುತ್ತಿತ್ತು. ಕೈಲಿದ್ದ ದೊಣ್ಣೆ ಇನ್ನೊಮ್ಮೆ ಗಾಳಿಯಲ್ಲಿ ತೇಲಿ ನಾಯಿಯ ತಲೆಯ ಮೇಲೆ ಬಿತ್ತು. ಅಷ್ಟಕ್ಕೆ‌‌ ಕಂತ್ರಿ‌ನಾಯಿ ಕೊಸರಾಡುತ್ತಾ ತಣ್ಣಗಾಯಿತು. ರಾಘವ ಸುಮ್ಮನೆ ನಾಯಿಯನ್ನು ನೋಡುತ್ತಾ ನಿಂತ. ಅವನ ಕಣ್ಣು ಮಂಜಾಗುತ್ತಿತ್ತು. ಕೋಪ ಕಣ್ಣುಗಳಲ್ಲಿ ಇಳಿಯುತ್ತಿತ್ತು.‌ ದೊಣ್ಣೆಯನ್ನೆತ್ತಿ‌ ಎಸೆದ. ಪ್ರಾಣ ಬಿಡುತ್ತಿರುವ ನಾಯಿಯ ಬಳಿ‌ ಬಂದ. ಅದಾಗಲೇ ಅದರ ಪ್ರಾಣ ಪಕ್ಷಿ‌ ಹಾರಿ ಹೋಗಿತ್ತು. ಖಾಲಿ‌ ರಸ್ತೆಯ‌ ಮೇಲೆ ರಾಘವ ಹನಿಗಣ್ಣಾಗಿ ನಾಯಿಯ ಶವದ‌ ಬಳಿ ಕುಕ್ಕುರುಗಾಲಲ್ಲಿ‌ ಕುಳಿತ.

ಅಷ್ಟರಲ್ಲೇ ಹಿಂದಿನಿಂದ  ಬೈಕೊಂದು ಬಂದು‌ ನಿಂತಿತು. ರಾಘವ ಹಿಂತಿರುಗಿ‌ ನೋಡಿ ಒಂದು ಕ್ಷಣ ಬೆಚ್ಚಿದ. ಗ್ರಾಮ‌ಲೆಕ್ಕಿಗ ಸತೀಶ್ ಬೈಕಿನಿಂದಿಳಿದಿದ್ದ. ರಾಘವನಿಗೆ ಮಾತು‌ ಬಾರಲಿಲ್ಲ, "ನಾಯಿ‌ಕೊಂದಕ್ಕಾಗಿ‌ ಶಿಕ್ಷೆ ಕಟ್ಟಿಟ್ಟ‌ ಬುತ್ತಿ, ಕೊಂದ ಪಾಪ ತಿಂದು ಪರಿಹಾರ" ಅವನು‌ ಮನಸ್ಸಿನಲ್ಲೇ ಹೇಳಿಕೊಂಡ. ಸತೀಶ್ ಇನ್ನಷ್ಟು‌ ಹತ್ತಿರ‌ ಬಂದು "ಓ ರಾಘವ ನಾಯಿಯಾ....ಛೇ.. ಯಾರದೋ ವಾಹನದಡಿಗೆ ಸಿಲುಕಿರಬೇಕು" ರಾಘವ ಏನೂ ಉತ್ತರಿಸಲಿಲ್ಲ. "ಒಂದು ಕೆಲಸ ಮಾಡು, ನಾನು ಮೊಬೈಲಲ್ಲಿ ಫೋಟೋ ತೆಗೀತೀನಿ. ನೀನಿದನ್ನು ಮಣ್ಣು ಮಾಡಿ ಬಿಡು. ಪಂಚಾಯತ್ ವತಿಯಿಂದ ನೈರ್ಮಲ್ಯ ಗ್ರಾಮ ಯೋಜನೆಯಡಿಯಲ್ಲಿ ಮಣ್ಣು ಮಾಡಿದರೆ ೫೦೦ ರುಪಾಯಿ ದೇಣಿಗೆ ಇದೆ. ಈ  ಐನೂರು ತಗೋ, ಮಳೆಗಾಲ ಬೇರೆ, ತುಂಬಾ ಹೊತ್ತು ಹೀಗೆ ಬಿಟ್ರೆ ಕೊಳೆತು ವಾಸನೆ ಬರುತ್ತೆ ಮತ್ತೆ. ಯಾರಾದ್ರೂ ಕಂಪ್ಲೈಂಟ್ ಮಾಡಿದ್ರೆ ಕಿರಿ ಕಿರಿಯಾಗುತ್ತೆ ಮತ್ತೆ. ಲೇಟಾಗ್ತಿದೆ ಹೋಗ್ಬೇಕು" ಎನ್ನುತ್ತಾ ರಾಘವನಿಗೆ ಮಾತನಾಡಲೂ ಅವಕಾಶ ಕೊಡದೆ ಐನೂರರ ನೋಟೊಂದು ಕೈಗೆ ತುರುಕಿ ಸತೀಶ್ ಬೈಕು ಹತ್ತಿ ಹೊರಟು ಬಿಟ್ಟ. ಒಂದು ಕ್ಷಣ ಏನು ನಡೆಯಿತೆಂದೇ ರಾಘವನಿಗೆ ತಿಳಿಯಲಿಲ್ಲ.ಕೆಲಸವಿಲ್ಲದ ದಿನ, ಕೆಲಸವೂ ಸಿಕ್ಕಿತು ಹಣವೂ ದಕ್ಕಿತು. ಅಷ್ಟರಲ್ಲೇ ಭರ್ರನೆ ಮಳೆ ಸುರಿಯಿತು. ಕಂತ್ರಿ ನಾಯಿಯ ಋಣವನ್ನು ನೆನೆದು ರಾಘವನ ಕಣ್ಣುಗಳೂ ಮಳೆಯಾದವು.

© Copyright 2022, All Rights Reserved Kannada One News