ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...: ಸಂವರ್ತ 'ಸಾಹಿಲ್' ಕನ್ನಡಕ್ಕೆ ಅನುವಾದಿಸಿದ ಜೆಹರಾ ನಿಗಾಹ್ ಅವರ ಉರ್ದು ಕವಿತೆ

ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...: ಸಂವರ್ತ 'ಸಾಹಿಲ್' ಕನ್ನಡಕ್ಕೆ ಅನುವಾದಿಸಿದ ಜೆಹರಾ ನಿಗಾಹ್ ಅವರ ಉರ್ದು ಕವಿತೆ

Updated : 29.07.2022

ಕಾಡಿಗೆ ತನ್ನದೇ ಆದ ನೀತಿಸಂಹಿತೆಯಿದೆಯೆಂದು ಕೇಳಿದ್ದೇನೆ...
ಹೊಟ್ಟೆ ತುಂಬಿದ ಹುಲಿ
ಬೇಟೆಯಾಡುವುದಿಲ್ಲ ಎಂದು ಕೇಳಿದ್ದೇನೆ.
ಅದು ಸುಮ್ಮನೆ ಮರದ ಕೆಳಗಡೆ
ನೆರಳಿನಲ್ಲಿ ವಿಶ್ರಮಿಸುತ್ತದೆ
ಎಂದು ಕೇಳಿ ಬಲ್ಲೆ.

ಬೀಸುವ ಗಾಳಿ ಹೆಮ್ಮರವನ್ನೇ ಅಲುಗಾಡಿಸಿದಾಗ
ಮೈನ ತನ್ನ ಮರಿಗಳ ಅರೆಕ್ಷಣ ತೊರೆದು
ಕಾಗೆಯ ಮರಿಗಳಿಗೆ ರಕ್ಷಣೆ ನೀಡುತ್ತದೆ.
ಮರದಲ್ಲಿರುವ ಗೂಡಿನಿಂದ ಒಂದು ಮರಿಯೂ ಜಾರಿದರೆ
ಕಾಡಿಗೆ ಕಾಡೇ ಎಚ್ಚೆತ್ತುಕೊಳ್ಳುತ್ತದೆ.

ಗೀಜಗನ ಗೂಡು ನದಿಯ ನೀರಿಗೆ ಸಮೀಪ ಜೋತಾಡುತ್ತಿದ್ದರೆ
ನದಿಯ ಮೀನುಗಳೆಲ್ಲ ಅದನ್ನು
ತನ್ನ ನೆರೆಯವರು ಎಂದು ಭಾವಿಸುತ್ತದೆ.
ಬಿರುಗಾಳಿ ಬೀಸಿ ಸಂಕ ಮುರಿದಾಗ
ಒಂದೇ ಮರದ ದಿಮ್ಮಿಯ ಮೇಲೆ
ಅಳಿಲು, ಹಾವು, ಆಡು, ಚಿರತೆ ಒಟ್ಟಿಗಿರುತ್ತವೆ

ಕಾಡಿಗೂ ತನ್ನದೇ ಆದ ನಿಯಮವಿದೆಯೆಂದು ಕೇಳಿದ್ದೇನೆ.
ದೇವರೇ, ಪರಮ ಪೂಜ್ಯನೆ
ವಿವೆಕಿಯೇ, ಬಲಿಷ್ಟನೆ...
ನನ್ನೀ ಊರಿನಲ್ಲಿ
ಕಾಡಿನ ನಿಯಮವನ್ನಾದರೂ ಜಾರಿಗೆ ತಾ
ಬದುಕುವ ರೀತಿಯೊಂದನ್ನು ಕರುಣಿಸು.
ಕಾಡಿಗೂ ತನ್ನದೇ ಆದ ರೀತಿನೀತಿಗಳಿವೆ ಎಂದು ಕೇಳಿದ್ದೇನೆ.

ಉರ್ದು ಮೂಲ: ಜೆಹರಾ ನಿಗಾಹ್
ಕನ್ನಡಕ್ಕೆ: ಸಂವರ್ತ 'ಸಾಹಿಲ್' 

© Copyright 2022, All Rights Reserved Kannada One News