ಕಾಳಿ ಮಾತೆ ಪೋಸ್ಟರ್ ವಿವಾದ: ಲೀನಾ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿಕೆ

ಕಾಳಿ ಮಾತೆ ಪೋಸ್ಟರ್ ವಿವಾದ: ಲೀನಾ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿಕೆ

Updated : 06.08.2022

ನವದೆಹಲಿ: ಲೀನಾ ಮಣಿಮೇಕಲೈ ನಿರ್ಮಿಸಿರುವ ‘ಕಾಳಿ’ ಚಿತ್ರದ ಮೇಲೆ ಶಾಶ್ವತ ತಡೆಯಾಜ್ಞೆ ಹೇರುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಆಗಸ್ಟ್‌ 29ಕ್ಕೆ ಮುಂದೂಡಿದೆ. ಶನಿವಾರ ಅರ್ಜಿಯ ವಿಚಾರಣೆ ನಿಗದಿಯಾಗಿತ್ತು. ನ್ಯಾಯಾಧೀಶರು ರಜೆ ಇರುವುದರಿಂದ ವಿಚಾರಣೆ ಮುಂದೂಡಲಾಗಿದೆ.

ಹಿಂದೂ ದೇವತೆಯಾಗಿರುವ ಕಾಳಿ ಮಾತೆಯನ್ನು ಚಿತ್ರದ ಪೋಸ್ಟರ್‌ನಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ವಕೀಲ ರಾಜ್‌ ಗೌರವ್‌ ದೂರು ದಾಖಲಿಸಿದ್ದರು. ಅವರು ಶನಿವಾರ ಪ್ರಕರಣಕ್ಕೆ ಪೂರಕವಾಗಿರುವ ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಲೀನಾ ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್‌ ಹಂಚಿಕೊಂಡಿದ್ದು ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ. ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

© Copyright 2022, All Rights Reserved Kannada One News