ಜಾನ್ಸನ್‌ ಬೇಬಿ ಪೌಡರ್‌ ತಯಾರಿಕಾ ಪರವಾನಿಗೆ ರದ್ದು

ಜಾನ್ಸನ್‌ ಬೇಬಿ ಪೌಡರ್‌ ತಯಾರಿಕಾ ಪರವಾನಿಗೆ ರದ್ದು

Updated : 18.09.2022

ಮುಂಬೈ: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಪ್ರೈವೇಟ್‌ ಲಿಮಿಟೆಡ್‌ನ ಬೇಬಿ ಪೌಡರ್‌ ತಯಾರಿಕೆಯ ಪರವಾನಗಿಯನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ರದ್ದು ಮಾಡಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಮುಂಬೈನ ಮುಲುಂಡ್‌ನಲ್ಲಿ ಕಂಪನಿಯು ತಯಾರಿಕಾ ಘಟಕ ಹೊಂದಿದೆ.

ಕಂಪನಿಯ ಬೇಬಿ ಪೌಡರ್‌, ನವಜಾತ ಶಿಶುಗಳ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಫ್‌ಡಿಎ ಪ್ರಕಟಣೆಯಲ್ಲಿ ತಿಳಿಸಿದೆ. ಕೋಲ್ಕತ್ತ ಮೂಲದ ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೊರೇಟರೀಸ್‌ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

ಗುಣಮಟ್ಟದ ಪರೀಕ್ಷೆ ನಡೆಸಲು ಪುಣೆ ಮತ್ತು ನಾಸಿಕ್‌ನಿಂದ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ತರಿಸಿಕೊಳ್ಳಲಾಗಿತ್ತು. ಸರ್ಕಾರದ ಔಷಧ ಪರೀಕ್ಷಕರ ಪ್ರಕಾರ, ಬೇಬಿ ಪೌಡರ್‌ನ ಮಾದರಿಗಳು, ನವಜಾತ ಶಿಶುಗಳ ಚರ್ಮಕ್ಕೆ ಹೊಂದಿಕೆ ಆಗುವ ಗುಣಮಟ್ಟವನ್ನು ಹೊಂದಿಲ್ಲ. ಹೀಗಾಗಿ, ಡ್ರಗ್ಸ್‌ ಕಾಸ್ಮೆಟಿಕ್ಸ್‌ ಆ್ಯಕ್ಟ್‌ –1940 ಮತ್ತು ನಿಯಮಗಳ ಪ್ರಕಾರ, ಕಂಪನಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ಇರುವ ಬೇಬಿ ಪೌಡರ್‌ಗಳ ದಾಸ್ತಾನನ್ನು ಹಿಂದಕ್ಕೆ ತರಿಸಿಕೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದ ಔಷಧ ಪರೀಕ್ಷಕರ ವರದಿಯಲ್ಲಿರುವ ಅಂಶಗಳನ್ನು ಕಂಪನಿ ಅಲ್ಲಗಳೆದಿದ್ದು, ಕೋರ್ಟ್‌ ಮೆಟ್ಟಿಲೇರಿದೆ. ವರದಿಯನ್ನು ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೊರೇಟರಿಗೆ ಕಳುಹಿಸುವುದಾಗಿ ಹೇಳಿದೆ ಎಂದು ಎಫ್‌ಡಿಎ ಮಾಹಿತಿ ನೀಡಿದೆ.

© Copyright 2022, All Rights Reserved Kannada One News