ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

Updated : 16.06.2022

ಜಿನೆವಾ: ವಿಶ್ವದಾದ್ಯಂತ ಮಂಕಿಪಾಕ್ಸ್ ಪ್ರಕರಣ ಅಸಾಮಾನ್ಯ ಮತ್ತು ಆತಂಕಕಾರಿ ರೀತಿಯಲ್ಲಿ  ಏರಿಕೆಯಾಗುತ್ತಿದ್ದು ಇದೀಗ 39 ದೇಶಗಳಿಗೆ ವ್ಯಾಪಿಸಿರುವ ಸಾಂಕ್ರಾಮಿಕ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲು ಮುಂದಿನ ವಾರ ತುರ್ತು ಸಮಿತಿ ಸಭೆ ನಡೆಯಲಿದೆ  ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.

ಮಂಕಿಪಾಕ್ಸ್ ಪ್ರಕರಣಗಳ ಅಸಾಮಾನ್ಯ ಉಲ್ಬಣವು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗೆ ಸಂಬಂಧಿಸಿದೆಯೇ ಎಂಬುದನ್ನು ಪರಿಶೀಲಿಸಲು ಮುಂದಿನ ವಾರದ  ಗುರುವಾರ ತುರ್ತು ಸಮಿತಿಯ ಸಭೆ ಕರೆಯಲಾಗಿದೆ ಎಂದವರು ಹೇಳಿದ್ದಾರೆ.

ಪಶ್ಚಿಮ ಅಥವಾ ಮಧ್ಯ ಆಫ್ರಿಕಾದಲ್ಲಿ ಹೆಚ್ಚಾಗಿ ದಂಶಕ ಮತ್ತು ಸಸ್ತನಿ ವರ್ಗದ  (ಹೆಗ್ಗಣ, ಮುಂಗುಸಿಯಂತಹ ಪ್ರಾಣಿ) ಕಾಡುಪ್ರಾಣಿಗಳಲ್ಲಿ ಕಂಡು ಬರುವ ಅಪರೂಪದ ಸಾಂಕ್ರಾಮಿಕವಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಹೇಳಿದೆ. ರೋಗವು ಸೌಮ್ಯವಾದ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಜತೆಗೆ ದೇಹದ ಉಷ್ಣಾಂಶದಲ್ಲಿ ಏರಿಕೆ, ತಲೆನೋವು, ಬೆನ್ನುನೋವು ಹಾಗೂ ಸಿಡುಬು ರೋಗದಂತಹ ಹುಣ್ಣುಗಳು ದೇಹದಲ್ಲಿ ಮೂಡುತ್ತವೆ. 

ಮಂಕಿಪಾಕ್ಸ್ ರೋಗಿಗಳ ಚರ್ಮವನ್ನು ಸ್ಪರ್ಷಿಸಿದಾಗ, ಅಥವಾ ರೋಗಿಗಳು ಬಳಸುವ ಬಟ್ಟೆ, ಟವೆಲ್, ಕರ್ಚೀಪುಗಳನ್ನು ಬಳಸುವವರಿಗೆ ಹರಡುತ್ತದೆ. ಆದರೆ ಇದೀಗ ಆಫ್ರಿಕಾದ ಗಡಿ ದಾಟಿರುವ ಮಂಕಿಪಾಕ್ಸ್ ಪ್ರಕರಣ ಕ್ರಮೇಣ ವಿಶ್ವದ 39 ದೇಶಗಳಿಗೆ ವ್ಯಾಪಿಸಿದ್ದು 1,600ಕ್ಕೂ ಅಧಿಕ ದೃಢೀಕೃತ ಪ್ರಕರಣ, ಸುಮಾರು 1,500 ಶಂಕಿತ ಪ್ರಕರಣ ವರದಿಯಾಗಿದೆ. 39 ದೇಶಗಳಲ್ಲಿ 7 ದೇಶಗಳಲ್ಲಿ ಈ ಹಿಂದೆಯೂ ಪ್ರಕರಣ ವರದಿಯಾಗಿದ್ದರೆ ಉಳಿದ 32 ದೇಶಗಳಲ್ಲಿ ಇದೇ ಮೊದಲ ಬಾರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಈ ಹಿಂದೆ ಪ್ರಕರಣ ವರದಿಯಾದ ದೇಶಗಳಲ್ಲಿ ಈ ವರ್ಷ ಇದುವರೆಗೆ 72 ಸಾವು ಸಂಭವಿಸಿದ್ದರೆ, ಹೊಸದಾಗಿ ಪ್ರಕರಣ ವರದಿಯಾದ ದೇಶದಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ. ಬ್ರೆಝಿಲ್‌ನಲ್ಲಿ ವರದಿಯಾದ ಸಾವಿನ ಪ್ರಕರಣ ಮಂಕಿಪಾಕ್ಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನಿಗಾ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸೋಂಕಿತ ರೋಗಿಗಳನ್ನು ಪ್ರತ್ಯೇಕವಾಗಿರಿಸುವಿಕೆ ಪ್ರಕ್ರಿಯೆ ಮೂಲಕ ಸೋಂಕಿನ ಉಲ್ಬಣಕ್ಕೆ ಬ್ರೇಕ್ ಹಾಕುವುದು ಮತ್ತು ಹರಡದಂತೆ ತಡೆಯುವುದು ನಮ್ಮ ಗುರಿಯಾಗಿದೆ ಎಂದು ಘೆಬ್ರಯೇಸಸ್ ಹೇಳಿದ್ದಾರೆ. 

ಮಂಕಿಪಾಕ್ಸ್ ವೈರಸ್‌ನ ಹೆಸರು ಮತ್ತು ಅದು ಉಂಟುಮಾಡುವ ರೋಗದ ಹೆಸರನ್ನು ಬದಲಾಯಿಸುವ ಕುರಿತು ಪ್ರಪಂಚದಾದ್ಯಂತದ ಪಾಲುದಾರರು ಮತ್ತು ತಜ್ಞರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮಂಕಿಪಾಕ್ಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವರದಿ ಪ್ರಕಟಿಸುವಾಗ ಮುಖ್ಯವಾಹಿನಿಯ ಮಾಧ್ಯಮಗಳು ಆಫ್ರಿಕಾದ ರೋಗಿಗಳ ಫೋಟೋ ಬಳಸುವುದನ್ನು ಗಮನಿಸಿರುವ ಕೆಲವು ಅಂತರಾಷ್ಟ್ರೀಯ ವಿಜ್ಞಾನಿಗಳು, ಮಂಕಿಪಾಕ್ಸ್ ವೈರಸ್‌ಗೆ ತಾರತಮ್ಯರಹಿತ ಮತ್ತು ಕಳಂಕರಹಿತ ತುರ್ತು ನಾಮಕರಣದ ಅಗತ್ಯವಿದೆ ಎಂದು ಜೂನ್ 10ರಂದು ಪತ್ರಿಕೆಯಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದ್ದಾರೆ.


© Copyright 2022, All Rights Reserved Kannada One News