ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

Updated : 06.11.2022

ಮೊನ್ನೆ ನವೆಂಬರ್ 01 ರಂದು ಬೆಂಗಳೂರಿನ ರಂಗಶಂಕರದಲ್ಲಿ ಕೆ.ಬಿ ಸಿದ್ದಯ್ಯನವರ ‘ದಕ್ಲಕಥಾ ದೇವಿಕಾವ್ಯ’ವನ್ನು ಕೆ.ಪಿ ಲಕ್ಷ್ಮಣ್ ನಾಟಕವಾಗಿಸಿ ಅವರ ತಂಡ ಅಭಿನಯಿಸಿತು. ಇಡೀ ನಾಟಕ ಎರಡೂವರೆ ದಶಕದ ಹಿಂದಿನ ಕಾವ್ಯವನ್ನು ಈ ಕಾಲಕ್ಕೆ ತಲುಪಿಸಿದ ಬಗೆ ವಿನೂತನವಾಗಿತ್ತು. ಆ ನಾಟಕದ ಕಾಡುವಿಕೆಯಿಂದ ಮತ್ತೆ ಕೇಬಿಯನ್ನು ನೋಡಬೇಕೆನಿಸಿ ಈ ಲೇಖನ ನಿಮ್ಮ ಮುಂದೆ.

ಸಾಗಿಸುತ್ತವೆ
ಈ ಇರುವೆಗಳು
ಅರಿವಿನ ಗುಹೆಯೊಳಗೆ... ಇರುವೆಗಾಗಿ..

ಕೇಬಿ ಏಕಕಾಲದಲ್ಲಿ ರಾಜಕಾರಣವನ್ನು, ಸಾಹಿತ್ಯವನ್ನು ಮತ್ತು ಆಧ್ಯಾತ್ಮವನ್ನು ಧ್ಯಾನಿಸಿದ ಕವಿ. ಶಕ್ತಿರಾಜಕಾರಣದ ಬಗ್ಗೆ ಮಾತನಾಡುತ್ತಲೇ ಆ ಧಾರಣ ಶಕ್ತಿಯನ್ನು ಎಲ್ಲಿಂದ ಪಡೆಯಬೇಕು ಎಂಬ ಅರಿವು ಮತ್ತು ಹುಡುಕಾಟ ಅವರ ಆಲೋಚನ ಕ್ರಮವಾಗಿತ್ತು. ಸಮಕಾಲೀನ ರಾಜಕಾರಣದ ನೆಲೆಗಳನ್ನು ಪ್ರಶ್ನಿಸುತ್ತಲೇ ಅದಕ್ಕೆ ಜೀವಪರತೆಯನ್ನು ಮತ್ತು ಸಾಮಾಜಿಕ ನ್ಯಾಯದ ನೆಲೆಗಳನ್ನು ತರುವ ಹಂಬಲವನ್ನು ಹೊತ್ತಿದ್ದರು. ಆ ಕಾರಣಕ್ಕಾಗಿ ಅವರು ಸಾಂಸ್ಕೃತಿಕ ವಲಯದಲ್ಲಿ ಸುತ್ತಾಡಿದ್ದು, ಶೋಧಿಸಿದ್ದು ಅದರೊಳಗಿನಿಂದ ಕಟ್ಟಿದ್ದು ನಮ್ಮ ಮುಂದಿವೆ. ಕೇವಲ ಸಾಹಿತ್ಯವನ್ನಷ್ಟೇ ಉಸಿರಾಡುವವರ ಎದುರು ಅದನ್ನು ಇತರ ಪಠ್ಯಗಳ ಜತೆಯಲ್ಲಿ ಕಟ್ಟುವ, ಬಹುಶಿಸ್ತೀಯ ನೆಲೆಯಲ್ಲಿ ಧ್ಯಾನಿಸುವ, ಆಧುನಿಕತೆ ಮತ್ತು ಆಧ್ಯಾತ್ಮವನ್ನು ಸಮೀಕರಿಸುವ, ತಮ್ಮೆದುರಿಗಿನ ಸಂಕಟಗಳಿಗೆ ಮುಲಾಮು ಹುಡುಕುತ್ತಾ ಪರಂಪರೆಗೆ ಇಳಿಯುವ, ಪರಂಪರೆಯಲ್ಲಿ ಕೌಶಲ ಮತ್ತು ಮಾನವೀಯತೆಯನ್ನು ಆಯ್ದು ತರುವ ಕೆಲಸದಲ್ಲಿ ನಿರತರಾಗಿದ್ದರು.

ಅವರು ಪರಂಪರೆಯ ಕಡೆ ವಾಲಿದ್ದು ಹಿಂದಿನದ್ದೆಲ್ಲವೂ ಶ್ರೇಷ್ಟ ಇವತ್ತಿನದು ಕನಿಷ್ಟ ಎಂಬ ನೆಲೆಯಲ್ಲಿ ಅಲ್ಲ. ಅವರು ಪರಂಪರೆಯನ್ನು ಎದುರಾಗುತ್ತಿದುದು ಕೂಡ ಆಧುನಿಕ ಚಿಂತನೆಯ ಮೂಲಕವೇ. ಹಾಗೇ ಹಾದು ಹೋಗುವಾಗ ಪರಂಪರೆಯೊಳಗಿರುವ ಜೀವಧಾತುವನ್ನು ಈ ಕಾಲಕ್ಕೆ ಉಣಿಸಬೇಕು ಎಂಬ ಮನೋಭಾವ ಕೇಬಿಯವರಲ್ಲಿತ್ತು.

ಕೇಬಿ ಈ ದಾರಿಯನ್ನು ಪರಂಪರೆಯಿಂದಲೇ ಧ್ಯಾನಿಸಿದ್ದರು. ಅಲ್ಲದೇ ಕೇಬಿ ಬರೆಯುವ ಕಾಲಕ್ಕೆ ಒಂದು ದಲಿತ ಕಾವ್ಯದ ಮಾದರಿ ತುಂಬಾ ಜನಪ್ರಿಯವೂ ಮತ್ತು ಸಿದ್ಧಮಾದರಿಯೂ ಆಗಿ ಪ್ರಚಲಿತದಲ್ಲಿತ್ತು. ದಾರಿಗಳ ಆಯ್ಕೆಗಳೇ ಇಲ್ಲ ಎಂಬಂತಹ ವಾತಾವರಣವೂ ನಿರ್ಮಾಣವಾಗಿತ್ತು. ಕೇಬಿ ದಲಿತತನವನ್ನು ಈ ಕಾಲಕ್ಕೆ ಹೊಸದಾಗಿಸುವುದು ಹೇಗೆ ಮತ್ತು ಆ ದಾರಿ ಯಾವುದೆಂದು ಯೋಚಿಸಿದರು. ಆ ಕಡೆ ಹುಡುಕಾಟ ಶುರುವಾಯಿತು.

ಕನ್ನಡದ ದಲಿತ ಚಳುವಳಿ ಮತ್ತು ಚಿಂತನೆಗೆ ಬಾಬಾ ಸಾಹೇಬರ ಚಿಂತನೆ ಮೂಲ ತಳಹದಿ ಆಗಿತ್ತು. ಬಾಬಾ ಸಾಹೇಬರು ತಮ್ಮ ಇಡೀ ಬದುಕಿನ ಉದ್ದಕ್ಕೂ ಮಾಡಿದ ಮೂರು ಹೋರಾಟಗಳು ಅಂಬೇಡ್ಕರರ ಒಟ್ಟು ಚಿಂತನಧಾರೆಯನ್ನು ತಿಳಿಸುತ್ತದೆ. ಅವರ ಬರಹದ ಜತೆ ಅವರು ಕಾಲಕಾಲಕ್ಕೆ ತಳೆದ ನಿಲುವು, ಆಯ್ದುಕೊಂಡ ಹೋರಾಟದ ದಿಕ್ಕುಗಳು ಭಿನ್ನವಾದವು. ಅವುಗಳು ಅಂಬೇಡ್ಕರರ ಜೀವಮಾನದ ನಡೆಗಳೆಂದು ಗುರುತಿಸಬಹುದು. ಅಂಬೇಡ್ಕರ್ ಸಾಗಿದ ದಾರಿ ಮತ್ತು ಸಾಗಬೇಕಾದ ನಮ್ಮ ಚಳವಳಿಯ ದಾರಿಯ ರೂಪವನ್ನು ತೋರಿಸುತ್ತವೆ. ಸಾಮಾಜಿಕ ಹೋರಾಟ, ರಾಜಕೀಯ ಹೋರಾಟ, ಆಧ್ಯಾತ್ಮಿಕ ಹೋರಾಟ ಬಾಬಾಸಾಹೇಬರ ಹೋರಾಟಗಳ ರೂಪಗಳು. ಸಾಮಾಜಿಕ ಹೋರಾಟದಲ್ಲಿ ದೇವಸ್ಥಾನ ಪ್ರವೇಶ, ಕೆರೆ ನೀರನ್ನು ಮುಟ್ಟುವಿಕೆ, ಅಸ್ಪೃಶ್ಯತೆ ವಿರುದ್ಧದ ಹೋರಾಟಗಳನ್ನು ಗುರುತಿಸಿದರೆ. ರಾಜಕೀಯ ಪ್ರವೇಶ, ಸಂವಿಧಾನ ರಚನೆ, ಅನುಷ್ಠಾನ ಇತ್ಯಾದಿಗಳು ಅವರ ರಾಜಕೀಯ ಹೋರಾಟದ ಭಾಗವಾದವು. ಮುಂದೆ ಅಂಬೇಡ್ಕರರು ಆಧ್ಯಾತ್ಮಿಕ ಹೋರಾಟವನ್ನು ಕೈಗೆತ್ತಿಕೊಂಡ ಪರಿಣಾಮ ಎಲ್ಲ ಧರ್ಮಗಳ ಅಧ್ಯಯನ ಮಾಡಿ ಅಂತಿಮವಾಗಿ ಬುದ್ಧಧಮ್ಮವನ್ನು ಅಪ್ಪಿ ಮರಳಿ ಮನೆಗೆ ಹೋಗಿದ್ದು ಅವರ ಪ್ರಮುಖ ಹೋರಾಟ.

ಕನ್ನಡದ ದಲಿತ ಚಳುವಳಿ ಅಂಬೇಡ್ಕರರ ಸಾಮಾಜಿಕ ಹೋರಾಟವನ್ನೇನೋ ಕೈಗೆತ್ತಿಕೊಂಡಿತು. ಆದರೆ ಅಂಬೇಡ್ಕರರವರು ರೂಪಿಸಿದ ಉಳಿದ ಹೋರಾಟದ ದಾರಿಗಳನ್ನು ಅನುಸರಿಸಲಿಲ್ಲ. ಇಂಥ ಪ್ರಮುಖ ಕಾರಣದಿಂದಲೇ ದಲಿತ ಮೂವೆಂಟ್ ಮೂರು ದಶಕದ ಹೊತ್ತಿಗೆ ಇಳಿಮುಖವಾಗತೊಡಗಿತ್ತು. ಇದರ ಬಗೆಗೆ ಡಿ.ಆರ್ ನಾಗರಾಜ್ ಅವರು ಈ ಮುಂಚೆ ಎಚ್ಚರಿಸಿದ್ದರು. ಅದನ್ನು ಅರಿತುಕೊಳ್ಳುವಷ್ಟರಲ್ಲಿ ದಲಿತ ಸಂಘಟನೆಗಳು ಎಷ್ಟು ಒಡೆದುಕೊಳ್ಳಬಹುದು ಅಷ್ಟು ಪ್ರಮಾಣದಲ್ಲಿ ಒಡೆದುಕೊಂಡಿದ್ದವು. ಅಂದರೆ ಮುಂದಿನ ಹೋರಾಟದ ಧಾರೆಗಳು ಪೂರ್ಣಗೊಳ್ಳಲಿಲ್ಲ. ಅಂಬೇಡ್ಕರರ ರಾಜಕೀಯ ಹೋರಾಟದ ಭಾಗವಾಗಿ ಎಂಭತ್ತರ ದಶಕದಲ್ಲಿ ಕನ್ನಡದ ನೆಲದಲ್ಲಿ ಚಿಗುರೊಡೆಯುತ್ತಿತ್ತು. ಆದರೆ ಅದು ಅನೇಕ ಪಕ್ಷಗಳ ನೆಲೆಯಾಗಿ ಚೂರಾಯಿತು. ಬಿ.ಕೃಷ್ಣಪ್ಪನವರು ಅಂಬೇಡ್ಕರರ ಆಶಯದಲ್ಲಿ ಬಿಎಸ್‍ಪಿ ಕಡೆ ಮುಖಮಾಡಿದರೆ, ಇನ್ನ ಕೆಲವು ಚಿಂತಕರು ಆಗಿನ ಕಾಲದ ಜನತಾಪರಿವಾರದ ಕಡೆ, ರಾಮಕೃಷ್ಣ ಹೆಗಡೆಯ ಕಡೆ ಹೋದರು. ಪರಿಣಾಮವಾಗಿ ದಲಿತರ ರಾಜಕೀಯ ಹೋರಾಟ ಛಿದ್ರವಾಯಿತು.

ಅಂಬೇಡ್ಕರರ ಎರಡನೇ ಹೋರಾಟದ ದಾರಿ ಕನ್ನಡದ ನೆಲೆದಲ್ಲಿ ನೂರೆಂಟು ದಿಕ್ಕಾದಾಗ ಮೂರನೆಯ ಆಧ್ಯಾತ್ಮಿಕ ಧಾರೆಯ ಹೋರಾಟ ರೂಪಗೊಳ್ಳಲು ತೊಡರಾಯಿತು. ಚಳುವಳಿ ಮತ್ತು ಸಂಘಟನೆ ಧ್ಯಾನಿಸಬೇಕಾದ ಆಧ್ಯಾತ್ಮಿಕ ಧಾರೆ ಸಾಮಾಜಿಕ ಹೋರಾಟದೊಳಗೆ ಲೀನವಾಯಿತು. ಹಾಗೇನಾದರೂ ಇದು ಸಂಭವಿಸಿದ್ದರೇ ಅಂದರೆ ಚಳವಳಿ ಮತ್ತು ಆಧ್ಯಾತ್ಮಿಕತೆ ಒಟ್ಟಾಗಿ ಸಾಗಿದ್ದರೇ ದಸಂಸ ಮತ್ತಷ್ಟು ಕಸುವನ್ನು ಪಡೆದು ಕನಿಷ್ಠ ಏಳೆಂಟು ದಶಕಗಳ ಕಾಲ ಇಡೀ ಸಮಾಜವನ್ನು ಮುನ್ನಡೆಸುತ್ತಿತ್ತು. ಆದರೆ ಅದು ಸಾಧ್ಯವಾಗದಿದ್ದುದು ನಮ್ಮ ನಾಡಿಗಾದ ಪರಮನಷ್ಟ.

ಈ ಆಧ್ಯಾತ್ಮಿಕ ಧಾರೆಗೆ ಜೊತೆಗೆ ಒಂದು ಸಿಕ್ಕು ಕೂಡ ಇದೆ. ಅದಕ್ಕಿರಬಹುದಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮುಖಗಳನ್ನು ಸ್ಪಷ್ಟವಾಗಿ ಕಂಡುಕೊಳ್ಳುವುದು ಅಗತ್ಯ. ಬಾಬಾಸಾಹೇಬರು ತಮ್ಮ ಕಡೆಗಳಿಗೆಯಲ್ಲಿ ಬೌದ್ಧಧರ್ಮಕ್ಕೆ ಮರಳಿ ಹಿಂತಿರುಗಿದರು. ಅದನ್ನು ಕುರುಡು ಅನುಕರಿಸುವ ಅಗತ್ಯವಿಲ್ಲ. ಕಾಲಕಾಲಕ್ಕೆ ಸಾಗುವ ಜೀವನ ದರ್ಶನಗಳ ಅಧ್ಯಯನಗಳು ಹೊಸ ಕಾಲಕ್ಕೆ ತೆರೆದುಕೊಳ್ಳುವ ಬಗೆಗಳು ಮುಖ್ಯವಾಗುತ್ತವೆ. ಬುದ್ಧದಮ್ಮಕ್ಕೆ ಹಿಂದಿರುಗುವುದರಿಂದ ಎಲ್ಲವು ಬಗೆಹರಿದಂಥಲ್ಲ. ಬುದ್ಧತತ್ವಗಳನ್ನು ಬದುಕಿನೊಳಗೆ ಅಳವಡಿಸಿಕೊಳ್ಳಬೇಕು. ಈಗಾಗಲೇ ಇರಬಹುದಾದ ಅಂತಹ ನೆಲೆಗಳನ್ನು ಶೋಧಿಸಿಕೊಳ್ಳಬೇಕು. ಅಂಥ ಆಧ್ಯಾತ್ಮಿಕ ಧಾರೆಗಳನ್ನು ಈ ಕಾಲಕ್ಕೆ ಎಲ್ಲಿಂದ ಡ್ರಾ ಮಾಡಬೇಕು ಎಂಬ ಅರಿವು ಕೂಡ ಅಗತ್ಯ. ಬಾಬಾಸಾಹೇಬರು ತೋರಿಸಿಕೊಟ್ಟ ನಮ್ಮ ಮೂಲಪರಂಪರೆಯೊಳಗೆ ಸಾಗುವುದು ಬುದ್ಧದರ್ಶನದ ಮತ್ತೊಂದು ದಾರಿ.

ಬುದ್ಧದಮ್ಮ ನೆಲೆಗಳು ತಳಸಮುದಾಯಗಳ ಮೂಲದಲ್ಲಿಯೇ ಇವೆ. ಆದರೆ ಅವುಗಳು ಬಿಡಿಸಿಕೊಳ್ಳಲಾಗದ ಸಿಕ್ಕಿನಲ್ಲಿ ಬಂಧಿಯಾಗಿವೆ. ಆ ಮೂಲನೆಲೆಗಳ ಮೂಲಕವೇ ಬುದ್ಧದರ್ಶನವನ್ನು ಕಾಣಲು ಸಾಧ್ಯವಿದೆ. ಮಾತೃನೆಲೆಯ ಸಮುದಾಯಗಳು ಮೂಲತಃ ಬುದ್ಧದಮ್ಮದವೇ ಆಗಿವೆ. ಲಾಗಾಯ್ತಿನಿಂದ ನಮ್ಮೊಳಗೆ ಅಡಗಿರುವ ಬುದ್ಧದರ್ಶನವನ್ನು ಈ ಕಾಲದ ಮುಂದಿಡುವುದು ಕೂಡ ಬುದ್ಧದಾರಿಯೇ. ಹಾಗಂತ ಎಲ್ಲರೂ ಬೌದ್ಧದಮ್ಮಕ್ಕೆ ಕುರುಡು ಅನುಕರಣೆಯಿಂದ ಹೋಗುವುದು ಆಧ್ಯಾತ್ಮಿಕ ಧಾರೆಯಾಗುವುದಿಲ್ಲ. ಕನ್ನಡದಲ್ಲಿ ಈ ತರದ ಧಾರೆಯೊಂದು ಸಂಪೂರ್ಣವಾಗಿ ಕಳೆದುಹೋಯಿತು.

ಒಂದು ಕಡೆ ಅಂಬೇಡ್ಕರ್ ಅವರ ಆಧ್ಯಾತ್ಮಿಕ ಧಾರೆ ಕನ್ನಡದಲ್ಲಿ ಚಿಗುರಲ್ಲಿಲ್ಲ. ಮತ್ತೊಂದು ಕಡೆ ಕನ್ನಡ ದಲಿತ ಸಾಹಿತ್ಯ ಪ್ರಬಲ ಮಾದರಿಯನ್ನೆ ದಲಿತ ಸಾಹಿತ್ಯ ಎಂಬ ವ್ಯಾಖ್ಯಾನವನ್ನು ಭದ್ರಪಡಿಸುತ್ತಿತ್ತು. ಅಂಥ ಹೊತ್ತಿನಲ್ಲಿ ಕೇಬಿಯವರು ‘ಬಕಾಲ’ದ ಮೂಲಕ ಮೂಡಿಬಂದರು. ಬಕಾಲ ಕಾವ್ಯ ಕನ್ನಡದಲ್ಲಿ ಆವರೆಗೆ ಕಾಣೆಯಾಗಿದ್ದ ಲೋಕವೊಂದನ್ನು, ಆಧ್ಯಾತ್ಮಿಕ ಧಾರೆಯೊಂದನ್ನು ಪರಂಪರೆಯಿಂದ ಹೆಕ್ಕಿ ತಂದಿತ್ತು. ಅಂಬೇಡ್ಕರ್ ಮುಂದೆ ಯಾವ ದಾರಿಯನ್ನು ತುಳಿಯಬೇಕೆಂದು ಬಯಸ್ಸಿದ್ದರೋ ಅದು ಕನ್ನಡದಲ್ಲಿ ಬಕಾಲದ ಮೂಲಕ ಮೂಡಿಬಂದಿತ್ತು.
ಬಕಾಲ ಖಂಡಕಾವ್ಯದ ಬಿಡುಗಡೆ ಸಂದರ್ಭದಲ್ಲಿ ಡಿ. ಆರ್ ನಾಗರಾಜ್ ಅವರು ‘ಬಕಾಲ ರಮಾ ಅಂಬೇಡ್ಕರ್ ಕಣ್ಣುಗಳಿಂದ ಕಟ್ಟಿರುವ ಕಾವ್ಯ’ ಎಂದ ಮಾತನ್ನು ನಮ್ಮ ಕಾಲದ ಹಿರಿಯ ಚಿಂತಕರಾದ ಡಾ.ನಟರಾಜ್ ಹುಳಿಯಾರ್ ಅವರು ನೆನಪಿಸಿಕೊಳ್ಳುತ್ತಾರೆ. ಅಂದರೆ ಮಹಿಳಾ ನೆಲೆಯಿಂದ ಅದರಲ್ಲೂ ರಮಾ ಅಂಬೇಡ್ಕರ್ ಮೂಲಕ ಕೇಬಿ ಕನ್ನಡ ಜಗತ್ತನ್ನು ನೋಡತೊಡಗಿದರು. ಇದು ಆ ಕಾಲಕ್ಕೆ ಹೊಸ ಬಗೆಯದಾಗಿತ್ತು ಜೊತೆಗೆ ದಲಿತಧಾರೆ ಎಲ್ಲಿಂದ ದಕ್ಕಿಸಿಕೊಳ್ಳಬೇಕು ಮತ್ತು ಹೇಗೆ ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಳ್ಳಬೇಕು ಎಂಬ ಹುಡುಕಾಟದ ಭಾಗವಾಗಿಯೂ ಈ ‘ಬಕಾಲ’ ಮೂಡಿಬಂದಿತ್ತು.

ಈ ಬಕಾಲ ಮುಂದೆ ಒಂದು ಪರಂಪರೆಯನ್ನೇ ರೂಪಿಸಿಬಿಟ್ಟಿತು. ಖಂಡಕಾವ್ಯ, ನಿರೂಪಣಕಾವ್ಯ, ಜನಾಂಗೀಯ ಕಾವ್ಯ ಇತ್ಯಾದಿ ಹೆಸರಿನಿಂದ ಕರೆದುಕೊಳ್ಳುವ ಈ ಕಾವ್ಯಧಾರೆ ದಲಿತ ಕಾವ್ಯದ ಸಂದರ್ಭದಲ್ಲಿ ಹೊಸತೇ ಆಗಿತ್ತು. ದಲಿತ ಪರಂಪರೆಯನ್ನು ಹೊಸಗಣ್ಣುಗಳಿಂದ ಕಾಣುವ ನೋಟವನ್ನು ಈ ಕಾವ್ಯ ನೀಡಿತು. ಅದರ ಪರಿಣಾಮವಾಗಿ ಕೇಬಿ ತಮ್ಮ ಮುಖ್ಯ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಈ ಪ್ರಕಾರವನ್ನೇ ಬಳಸಿಕೊಂಡರು. ಅವರ ದಕ್ಲಕಥಾದೇವಿ ಕಾವ್ಯ, ಅನಾತ್ಮ, ಗಲ್ಲೆಬಾನಿ, ಅಂಬೇಡ್ಕರ್ ತೋರುಬೆರಳು, ಅಪ್ರಕಟಿತ ತೊಗಲಮಂಟಪ.. ಇವುಗಳು ದಲಿತ ಖಂಡಕಾವ್ಯಗಳು. ಇವುಗಳ ಪಾರಮ್ ಒಂದೇ ಸ್ವರೂಪದ್ದು. ಅದು ಕುಲಮೂಲದಿಂದ ಆಯ್ದು ತಂದದ್ದಾಗಿತ್ತು. ವಸ್ತುವು ಕೂಡ ದಮನಿತ ಸಮುದಾಯದಿಂದ ಆಯ್ದುಕೊಂಡಿದ್ದೇ ಆಗಿತ್ತು.

ಈ ಖಂಡಕಾವ್ಯಗಳಿಗೆ ವಸ್ತುವನ್ನು ಮಾದಿಗ ಸಮುದಾಯದ ಕುಲಪುರಾಣಗಳಿಂದ ಆಯ್ದುಕೊಂಡರೂ ಆ ಸಮುದಾಯದ ವೈಭೋಗ, ಕುಲಶ್ರೇಷ್ಟತೆಯ ವ್ಯಸನದೊಳಗೆ ಮುಳುಗದೇ ಆ ಸಮುದಾಯದಿಂದ ತಳದಲ್ಲಿರುವ ದಕ್ಲ, ಹೆಳವ ಇತ್ಯಾದಿ ಸಮುದಾಯಗಳ ಕಡೆಯೂ ಸಾಗಿದರು. ಮಾದಿಗ ಪರಂಪರೆಯನ್ನು ಈ ಕಾಲಕ್ಕೆ ಮಸೆಯುವ ಕೆಲಸಕ್ಕೆ ತೊಡಗಿದ ಕಾರಣದಿಂದ ಇವರ ಕಾವ್ಯ ಹೆಚ್ಚಿನ ಓದುಗರಿಗೆ ಸಂವಹನಗೊಳ್ಳಲಿಲ್ಲ. ಅಥವಾ ವ್ಯವಸ್ಥಿತವಾಗಿ ಕಡೆಗಣಿಸಿದ ಓದು-ಬರಹದ ರಾಜಕಾರಣ ಈ ನೆಲದಲ್ಲಿ ನಡೆಯಿತು. ಕೆಲವರಂತೂ ಅವರ ಕಾವ್ಯದ ಚರ್ಚೆಗಿಂತ ವೈಯಕ್ತಿಕ ದ್ವೇಷ, ಜನಾಂಗೀಯ ದ್ವೇಷದ ಭಾಗವಾಗಿ ಕೇಬಿಯವರ ಕಾವ್ಯಗಳನ್ನು ನೋಡಲಾರಂಭಿಸಿದರು. ಉದ್ದುದ್ದದ ಕಾವ್ಯ ಎಂಬ ವ್ಯಂಗ್ಯಗಳು, ಅವರ ಜನಾಂಗದ ಕವಿತೆಗಳು, ದ್ವೀಪಕಾವ್ಯ ಎಂದು ಹಂಗಿಸಿದವರೂ ಉಂಟು. ಆದರೆ ಇವ್ಯಾವುಗಳನ್ನು ಲೆಕ್ಕಿಸದೇ ಕೇಬಿ ಖಂಡಕಾವ್ಯದ ದಾರಿಯಲ್ಲೇ ಸಾಗಿದರು; ಒಂದು ಪರಂಪರೆಯನ್ನೇ ನಿರ್ಮಿಸಿದರು. ಕೇಬಿಯವರ ನಂತರದಲ್ಲಿ ಮತ್ತು ಜೊತೆಯಲ್ಲಿ ಖಂಡಕಾವ್ಯವನ್ನು ತಮ್ಮ ಅಭಿವ್ಯಕ್ತಿ ಮಾಡಿಕೊಂಡ ಹೊಸ ತಲೆಮಾರು ನಮ್ಮ ಮುಂದಿದೆ. ವಡ್ಡಗೆರೆ ನಾಗರಾಜಯ್ಯ ಅವರ ‘ಅಸಾದಿ’, ಡಾ.ರವಿಕುಮಾರ್ ನೀಹ ‘ಜಲಜಂಬೂಕನ್ನೇ’, ಲಕ್ಷ್ಮೀನಾರಾಯಣ ಸ್ವಾಮಿ ‘ತೊಗಲಚೀಲದ ಕರ್ಣ’, ಜಾಲಿಮರದ ಜೋಲಿಗೆಯೊಳಗೆ,’ ಹೀಗೆ ಸಾಕಷ್ಟು ಪಟ್ಟಿ ಮಾಡಬಹುದು. ಈಗ ಕವಿಯಾದವರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಖಂಡಕಾವ್ಯದ ಪ್ರಯೋಗ ಮಾಡಲು ಹವಣಿ ಸುವುದನ್ನು ನೋಡಿದರೆ ಇದರ ಪ್ರಭಾವ ಅರಿವಾಗುತ್ತದೆ.

ಹೀಗೆ ಕೇಬಿ ಹೊಸ ಅಭಿವ್ಯಕ್ತಿ ಮಾಧ್ಯಮವನ್ನು ಕಾಲಕ್ಕೆ ತಕ್ಕಂತೆ ತೀಡಿ ರೂಪಿಸಿದರು. ಅದಷ್ಟೇ ಅಲ್ಲದೇ ಆದಿಮ ಮತ್ತು ಆಧುನಿಕತೆಯ ಮುಖಾಮುಖಿ ಮಾಡಲು ಇದನ್ನು ಸಮರ್ಥವಾಗಿಸಿಕೊಂಡರು. ಹೀಗಾಗಿ ಅವರ ಎಲ್ಲ ಖಂಡಕಾವ್ಯಗಳಲ್ಲಿ ಕಾಣುವುದು ಜೀವನ ದರ್ಶನವೇ. ಅದರಲ್ಲೂ ಯಾವ ಸಮುದಾಯಗಳು ಈ ಪರಂಪರೆಯಿಂದ ಅವಮಾನಕ್ಕೆ ಒಳಗಾಗಿವೆ, ತಮ್ಮ ಅಸ್ಮಿತೆಯಿಲ್ಲದೆ ನರಳಿವೆ ಅವುಗಳಿಗೆ ಸಾಮಾಜಿಕ, ಆಧ್ಯಾತ್ಮಿಕ ನೆಲೆಯನ್ನು ತಂದುಕೊಡಲು ಯತ್ನಿಸಿದರು. ಆ ಮೂಲಕ ತಮ್ಮ ಕಾವ್ಯ ಮತ್ತು ಅಭಿವ್ಯಕ್ತಿಯ ಸಮೇತ ಮತ್ತೆ ಮತ್ತೆ ಎದುರುಗೊಳ್ಳುತ್ತಿದುದು ಈ ಕಾಲವನ್ನೇ.

ಇದಷ್ಟೇ ಕೇಬಿಯ ಕಾವ್ಯ ಎಂದು ನಮ್ಮ ಚರ್ಚೆಯನ್ನು ಕೊನೆಗೊಳಿಸುವಂತಿಲ್ಲ. ಅವರು ಬರೆದದ್ದು ಮೂರ್ನಾಲ್ಕು ಕೃತಿಗಳಷ್ಟೇ. ಎಲ್ಲವೂ ಸೇರಿದರೆ ಮುನ್ನೂರು ಪುಟಗಳಷ್ಟಾಗಬಹುದಷ್ಟೇ. ಅದಷ್ಟೇ ಆಗಿದ್ದರೇ ಕೇಬಿ ಸಾಹಿತ್ಯವಲಯದಿಂದ ಕಾಣೆಯಾಗಿಬಿಡುತ್ತಿದ್ದರು. ಅದಲ್ಲದೇ ಈ ಓದು-ಬರಹದ ರಾಜಕಾರಣದೊಳಗೆ ಸಂಪೂರ್ಣವಾಗಿ ಇಲ್ಲವಾಗುತ್ತಿದ್ದರು. ಕೇಬಿ ಕಾವ್ಯ ಅಲ್ಲದೇ ಇನ್ನಿತರ ನೆಲೆಗಳಲ್ಲೂ ತುಂಬಾ ಮುಖ್ಯವಾಗಿ ಕಂಡುಬರುತ್ತಾರೆ. ಕವಿಮಿತ್ರ ವಿ.ಎಂ ಮಂಜುನಾಥ್ ಕೇಬಿಯವರ ಕಾವ್ಯದ ಅಭಿವ್ಯಕ್ತಿಯನ್ನು ‘ಗ್ರೀಕ್‍ನ ಪ್ರದರ್ಶನಕಾರ’ ಎಂದು ಗುರುತಿಸುತ್ತಾರೆ. ಕೇಬಿ ಕಾವ್ಯವನ್ನು ಮಂಡಿಸುವುದು ‘ಪ್ರದರ್ಶನ’ ರೂಪವಾಗಿಯೇ. ಇದನ್ನು ತಳಸಮುದಾಯಗಳ ಅಭಿವ್ಯಕ್ತಿಯ ನೆಲೆಯಿಂದಲೇ ದಕ್ಕಿಸಿಕೊಂಡಿದ್ದರು.

ಕೇಬಿಯವರ ಯಾವುದೇ ವಾಚನ, ಮಂಡನೆಗೆ ಒಂದು ಆಕರ್ಷಣ ಶಕ್ತಿ ಅವಾಹವಾಗುತ್ತಿತ್ತು. ಸೂಜಿಗಲ್ಲ ರೀತಿಯಲ್ಲಿ ಇಡೀ ವಾತಾವರಣವನ್ನೇ ತಮ್ಮ ಹತೋಟಿಗೆ ತಂದುಕೊಳ್ಳುತ್ತಿದ್ದರು. ಅದು ಕಾವ್ಯದ ಓದಿಗಷ್ಟೇ ಅಲ್ಲ. ಅವರು ಮಂಡಿಸುವ ಯಾವುದೇ ವಿಚಾರ ಕೇಳುಗರ ಹೃದಯದೊಳಗೆ ಇಳಿಸುವ ಹಾಗೆ ಮಾತನಾಡುತ್ತಿದ್ದರು. ಹಾಗೇಯೇ ಅವರ ಮಾತು ಧ್ವನಿ ತುಂಬಾ ಸ್ಪಷ್ಟ ಮತ್ತು ಖಚಿತವಾಗಿರುತ್ತಿತ್ತು. ಅಲ್ಲಿದ್ದ ಎಂಥವರನ್ನೂ ಊಗುಟ್ಟಿಸುವಂತಿರುತ್ತಿತ್ತು. ಹಾಗೇ ನೋಡಿದರೆ ಕೇಬಿ ಮಾತನಾಡುತ್ತಿದ್ದುದು ಕಡಿಮೆಯೇ. ಆ ಮಾತಿನಲ್ಲಿ ತಾವು ತಲುಪಿಸಬೇಕಾದುದನ್ನು ಸಂಕ್ಷಿಪ್ತವಾಗಿ ತಲುಪಿಸಿಬಿಡುತ್ತಿದ್ದರು. ಕೇಬಿಯವರ ನಿಜದ ಶಕ್ತಿ ಇರುವುದು ಅವರು ಮಾಡಿರುವ ಮಾತು, ಭಾಷಣ, ಉಪನ್ಯಾಸಗಳಲ್ಲಿ. ಅವರ ಈ ಎಲ್ಲವುಗಳನ್ನು ಯಾರಾದರೂ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದ್ದರೇ ಚಿಂತನಾ ವಲಯಕ್ಕೆ ಕೇಬಿಯವರ ಇನ್ನೊಂದು ಮುಖ ಪರಿಚಯವಾಗಿರುತ್ತಿತ್ತು. ಆದರೆ ದಕ್ಕದೇ ಹೋದದ್ದು ಈ ವಲಯಕ್ಕೆ ಆದ ನಷ್ಟ.

ಈಗಾಗಲೇ ಹೇಳಿದಂತೆ ಕೇಬಿ ಕೇವಲ ಕವಿಯಾಗಿ ಅರಳಲಿಲ್ಲ. ಏಕಕಾಲದಲ್ಲಿ ಸಾಮಾಜಿಕ ಆಲೋಚನಾಕಾರರಾಗಿ, ಸಾಂಸ್ಕೃತಿಕ ದಂಗೇಕೋರನಾಗಿ, ಲೋಕವಿರೋಧಿಯಾಗಿ, ರಾಜಕಾರಣದ ಚಿಂತಕರಾಗಿ ಅನಾವರಣಗೊಂಡರು. ತಮ್ಮೆದುರಿಗಿನ ತಳಮಳದ ಜೊತೆ ಮುಖಾಮುಖಿಗೊಂಡವರು. ತಮ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ತಮ್ಮ ಬರಹ ಮತ್ತು ಮಾತುಗಳಲ್ಲಿ ಮತ್ತೆ ಮತ್ತೆ ಮಂಡಿಸುತ್ತಿದ್ದರು. ಅದರ ಮುಂದುವರಿಕೆಯಾಗಿಯೇ ಇಡೀ ಚಿಂತನೆಯನ್ನು ‘ಸಮಾಜೋ-ಆಧ್ಯಾತ್ಮಿಕ’ ಧಾರೆಯಾಗಿ ಕಟ್ಟಿಕೊಳ್ಳಲಾರಂಭಿಸಿದರು. ಇದು ಅವರ ಒಟ್ಟು ಸಮಾಜೋ ಆಧ್ಯಾತ್ಮಿಕ ಪ್ರಯಾಣವಾಗಿ ಗುರುತಿಸಬಹುದು. ಇದು ಅವರು ಸಾಗಿರುವ ದಾರಿಯೂ ಹೌದು; ಆಲೋಚಿಸಿರುವ ನೆಲೆಯೂ ಹೌದು.

ಸಮಾಜವಾದ, ಗಾಂಧಿವಾದ, ಅಂಬೇಡ್ಕರ್‍ವಾದಗಳನ್ನು ಒಟ್ಟಾಗಿ ಮಿಶ್ರಣ ಮಾಡಲೆತ್ನಿಸಿದ ಅವರ ಇತರ ವಾದಗಳು ವಿಶಿಷ್ಟ ಬಗೆಯವು. ಬುದ್ಧದರ್ಶನವನ್ನು ಪರಂಪರೆಯ ಮೂಲಕ, ಗಾಂಧಿವಾದವನ್ನು ಈ ಕಾಲದ ಕೋಮುವಾದದ ವಿರುದ್ಧ ನಿಲ್ಲಿಸುವ ಕಸುವನ್ನು ಪರಂಪರೆಯಿಂದಲೇ ಕಂಡುಕೊಂಡಿದ್ದರು. ಈ ಎಲ್ಲ ನೆಲೆಗಳ ಮೂಲಕ ದಲಿತ ಚಳವಳಿಯನ್ನು ಕಟ್ಟಲು ಹಂಬಲಿಸಿದರು. ಈ ದಲಿತ ಚಳುವಳಿ ಒಳಗೊಳ್ಳಬೇಕಾದ ಅನೇಕ ಧಾರೆಗಳನ್ನು ಸೂಚಿಸಿ ಅವುಗಳನ್ನು ತಂದು ಚಳವಳಿಗೆ ಗಟ್ಟಿತನವನ್ನು ತರಲು ಹಂಬಲಿಸಿದರು. ಆರಂಭದಲ್ಲಿ ಒಂದಾಗಿದ್ದ ದಸಂಸ, ಹತ್ತಾಗಿ, ನೂರಾಗಿ ಲೆಟರ್‍ಹೆಡ್ ಸಂಘಗಳಾಗಿ ಒಡೆದುಕೊಂಡಾಗ ಕೇಬಿ ಅದಕ್ಕೆ ಆತಂಕ ವ್ಯಕ್ತಪಡಿಸುತ್ತಿರಲಿಲ್ಲ. ನೂರಾರು ಬೀಜಗಳು ಬಿದ್ದು ಮರಗಳಾಗಿ, ಹೆಮ್ಮರಗಳಾಗಿ ಸಂಘಟನೆ ಬೆಳೆಯುತ್ತಿದೆ. ಇದು ದಲಿತ ಚಳುವಳಿ ಜೀವಂತವಾಗಿರುವ ಲಕ್ಷಣಗಳು ಎನ್ನುತ್ತಿದ್ದರು.

ಇಷ್ಟೆಲ್ಲ ಆದರೂ ಅವರ ಒಟ್ಟು ಆಶಯ ‘ಮಾನವರಾಗಬೇಕು’ ಎಂಬ ತತ್ವದ ಕಡೆ ಸಾಗುವಂತಿತ್ತು. ಅವರ ‘ಒಂದು ದಹನದ ಕಥೆ’ಯ ‘ಈ ನಾಡ ಮಣ್ಣಿನಲ್ಲಿ’ ಹೋರಾಟದ ಹಾಡು ಕೊನೆಗೊಳ್ಳುವುದು ಈ ತತ್ವದಲ್ಲಿಯೇ. ಯಾವುದೇ ಹೋರಾಟದ ಸಂದರ್ಭದಲ್ಲಿ ಈ ಹಾಡು ಈಗಲೂ ಹೋರಾಟದ ಕಿಚ್ಚನ್ನು ಉಂಟುಮಾಡುತ್ತಿರುವುದನ್ನು ಕಾಣಬಹುದು. ಅವರು ಕಟ್ಟಬಯಸಿದ ಸಮಾಜ ಮತ್ತು ಆಲೋಚಿಸಿದ ಜಗತ್ತು ವಿಶಿಷ್ಟವಾಗಿಯೇ ಮಿಡಿಯುವಂಥದ್ದಾಗಿತ್ತು. ಅದಕ್ಕಾಗಿ ಸಾಕಷ್ಟು ವಿರೋಧಗಳನ್ನು ಎಡರು ತೊಡರುಗಳನ್ನು ಎದುರಿಸಬೇಕಾಯಿತು. ಅಂತಹವುಗಳ ನಡುವೆ ಕಳೆದುಹೋಗದೆ, ತಮ್ಮ ತಾತ್ವಿಕ ನಿಲುವನ್ನು ಸಡಿಲಗೊಳಿಸಿಕೊಳ್ಳದೇ ಸಾಗಿದರು.

ಕೇಬಿ ಕಳೆದ ಒಂದೂವರೆ ದಶಕದಿಂದ ಒಂದೆರಡು ವಿಷಯಕ್ಕೆ ವಿವಾದಕ್ಕೊಳಗಾದರು. ಒಂದು ‘ದಲಿತ’ ಪದವನ್ನು ನಿರಾಕರಿಸಿದ್ದು. ದಲಿತ ಪದವನ್ನು ‘ರಿಕನ್‍ಸ್ಟ್ರಕ್ಟ್’ ಮಾಡಬೇಕು ಎಂಬುದನ್ನು ಒತ್ತಾಯಪೂರ್ವಕವಾಗಿ ಕೇಬಿ ಮಂಡಿಸುತ್ತಿದ್ದರು. ಅವರ ಕೊನೆಗಾಲದಲ್ಲಿ ಇದನ್ನು ಹೆಚ್ಚು ಎನ್ನುವಷ್ಟು ಮಾತನಾಡುತ್ತಿದ್ದರು. ‘ದಲಿತ’ ಪದಕ್ಕೆ ಬಂದೊದಗಿರುವ ಸಂಕುಚಿತತೆಯನ್ನು ವಿಶ್ಲೇಷಿಸುತ್ತಿದ್ದರು. ‘ನನಗೆ ಯಾರಾದರೂ ಏ ದಲಿತ ಅಂದರೆ ಏನೂ ಅನಿಸುವುದಿಲ್ಲ. ಆದರೆ ಅದೇ ಏ ಮಾದಿಗ, ಏ ಹೊಲೆಯ, ಏ ದಕ್ಕಲಿಗ ಎಂದರೆ ಸಿಟ್ಟು ಒಮ್ಮೆಲೆ ಬಂದುಬಿಡುತ್ತದೆ. ದಲಿತ ಪದಕ್ಕೆ ಈ ಎಲ್ಲ ಸಂಕಟಗಳನ್ನು ಹೊರುವ ಶಕ್ತಿ ಈಗಿಲ್ಲ.’ ಎಂದು ತಾತ್ವಿಕವಾಗಿ ಮಂಡಿಸುತ್ತಿದ್ದರು. ಅಷ್ಟೇ ಅಲ್ಲ. ‘ನಾನು ದಲಿತ ಅಲ್ಲ. ಅನ್‍ಟಚಬಲ್ ಮಾದಿಗ’ ಎಂದು ಹೇಳುತ್ತಿದ್ದರು. ಆಶ್ಚರ್ಯ ಎಂದರೆ ಕೇಬಿಯವರ ಹೋರಾಟದ ಹಾಡು ‘ಈ ನಾಡ ಮಣ್ಣಿನಲ್ಲಿ’ ಮಾತ್ರ ದಲಿತ ಪದವನ್ನು ಬಳಸಿದ್ದಾರೆ. ಇನ್ನುಳಿದ ಅವರ ಯಾವ ಖಂಡಕಾವ್ಯದಲ್ಲೂ ‘ದಲಿತ’ ಪದವನ್ನು ಬಳಸಿಯೇ ಇಲ್ಲ. ದಸಂಸವನ್ನೂ ಕೂಡ ಅವರು ‘ಒಂಟಿ ಚಪ್ಪಾಳೆ ಸಮಿತಿ’ ಎಂದು ಕರೆಯುತ್ತಾರೆ. ಸಂಘಟನೆಯ ಜೊತೆಗಿದ್ದು ಅದನ್ನು ಪ್ರಶ್ನಿಸುವ, ಅದರ ಲೋಪದೋಷಗಳನ್ನು ಮುಚ್ಚುಮರೆಯಿಲ್ಲದೇ ಚರ್ಚಿಸುವುದು ಅವರ ತೀರಾ ಸಹಜವಾದ ಮನೋಧರ್ಮವಾಗಿತ್ತು. ದೇವನೂರರ ‘ಎದೆಗೆ ಬಿದ್ದ ಅಕ್ಷರ’ ವನ್ನು ‘ಎದೆಗೆ ಬಿದ್ದ ಬೆಂಕಿಯೋ’ ಎಂದು ಟೀಕಿಸುವಾಗಲೂ ನಿಲುವು ಖಚಿತವಾಗಿತ್ತು. ಈ ನಿಲುವು ಅವರ ಒಳಮೀಸಲಾತಿ ಬಗೆಗಿನ ಆಲೋಚನೆಯಲ್ಲಿ ಮತ್ತಷ್ಟು ಸ್ಪೋಟಗೊಂಡಿತು. ತಾತ್ವಿಕ ಖಚಿತತೆಯ ಕಾರಣಕ್ಕಾಗಿ ಅವರು ಒತ್ತಾಯಿಸುತ್ತಿದ್ದ ಮತ್ತು ಖಚಿತವಾಗಿ ಮಂಡಿಸುತ್ತಿದ್ದ ನಿಲುವು ಭಿನ್ನಭಿನ್ನವಾಗಿ ತೆರೆದುಕೊಳ್ಳುತ್ತಿತ್ತು.

ಮತ್ತೊಂದು ವಿವಾದಕ್ಕೆ ಒಳಗಾದ ಕೇಬಿಯವರ ಘಟನೆಯೆಂದರೆ ‘ಉಡುಪಿಯ ಪೇಜಾವರ ಸ್ವಾಮಿ’ಯನ್ನು ತಮ್ಮ ಮನೆಗೆ ಕರೆಸಿಕೊಂಡದ್ದು. ಇದು ಸಾಂಸ್ಕೃತಿಕ ವಲಯದಲ್ಲಿ ಸಾಕಷ್ಟು ಚರ್ಚೆಗೀಡಾಯಿತು. ದಲಿತ ಚಳುವಳಿಗಾರರು ಮುಜುಗರಕ್ಕೆ ಒಳಗಾಗಿದ್ದು ಉಂಟು. ಸ್ವತಃ ಕೇಬಿಯವರು ಸಾಕಷ್ಟು ವಿರೋಧಗಳನ್ನು ಎದುರಿಸಿದರು. ಕೊನೆಯವರೆಗೂ ಇದು ಪ್ರಶ್ನೆಯಾಗಿಯೇ ಉಳಿಯಿತು. ಆ ಹೊತ್ತಿಗೆ ನಡೆಯುತ್ತಿದ್ದ ದಲಿತ ಕೇರಿಗಳಿಗೆ ಪೇಜಾವರ ಸ್ವಾಮಿ ಪಾದ ಬೆಳಸುತ್ತಿದ್ದುದು ಮತ್ತು ಕೇಬಿಯವರ ಮನೆಗೆ ಬಂದಿದ್ದು ಮುಂದೆ ಸಾಂಸ್ಕೃತಿಕ ಸಂಚಲನಕ್ಕೆ ಕಾರಣವಾಯಿತು. ಅದನ್ನು ತಾತ್ವಿಕವಾಗಿ ಒಪ್ಪಬೇಕೋ? ನಿರಾಕರಿಸಬೇಕೋ ಎಂಬ ಗೊಂದಲದಲ್ಲಿ ಇರುವಾಗಲೇ ಡಾ.ಸಿದ್ದಲಿಂಗಯ್ಯನವರ ಮನೆಗೆ ಅಮಿತ್ ಶಾ ಬಂದಿದ್ದು ದಲಿತ ಚಳವಳಿ ಮತ್ತಷ್ಟು ಗೊಂದಲಕ್ಕೆ ಈಡಾಯಿತು. ಎರಡು ಕಡೆಯೂ ಸಮರ್ಥನೆಗಳು ನಡೆದವು. ಆದರೆ ದಲಿತ ಚಿಂತನೆಗೆ ಈ ಎರಡು ಘಟನೆಗಳು ದೊಡ್ಡಪೆಟ್ಟನ್ನೇ ಕೊಟ್ಟವು. ಅಷ್ಟೇ ಅಲ್ಲ. ದಲಿತ ಹೋರಾಟ ಮತ್ತೊಂದು ಮಗ್ಗಲಿಗೆ ಹೊರಳಿತು. ಚಳವಳಿಗೆ ಮೂಲಭೂತವಾಗಿ ಇದ್ದ ಆಶಯಗಳು ಕಾಲಕ್ಕೆ ತಕ್ಕಂತೆ ಬದಲಾದವು. ಅಗತ್ಯಗಳಿಗಿಂತ ಅವಕಾಶಗಳ ಕಡೆ ಹೊರಳಿತು. ಇದು ಚಳುವಳಿಗೆ ಆದ ಲಾಭವೋ ನಷ್ಟವೋ ಎಂಬುದನ್ನು ಕಾಲವೇ ನಿರ್ಧರಿಸಬೇಕಾಗಿದೆ.

ಕೇಬಿಯವರ ಮತ್ತಷ್ಟು ಹೋರಾಟಗಳು ಎಪ್ಪತ್ತರ ದಶಕದಲ್ಲಿ ಸಾಮಾಜಿಕ ಆಯಾಮ ಮತ್ತು ದಮನಿತ ಸಮುದಾಯಗಳ ಬಗೆಗಿನ ನಿಲುವಾದರೆ ತೊಂಭತ್ತರ ದಶಕ ಮತ್ತು ಎರಡು ಸಾವಿರದ ನಂತರ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿತು. ನಾಡಿನಾದ್ಯಂತ ಸಾಗಿದ್ದ ಅವರ ಹೋರಾಟದ ಹೆಜ್ಜೆಗಳು ಹೊಸ ದಾರಿಯನ್ನು ತುಳಿಯಲು ಹಂಬಲಿಸುತ್ತಿತ್ತು. ಯಾವಾಗ ಮೂಲ ದಸಂಸ ಒಡೆದು ಹೋಯಿತೋ, ಬಿ.ಕೃಷ್ಣಪ್ಪನವರ ನಂತರ ಸಿಡಿದು ಹೋದ ದಲಿತ ಹೋರಾಟಗಾರರು ತಮ್ಮ ದೃಷ್ಟಿಕೋನದಲ್ಲಿ ಹೋರಾಟವನ್ನು ಮುನ್ನಡೆಸಿದರು. ಅದು ರಾಜಕಾರಣದ ಭಾಗವಾಗಿಯೂ ಸಾಗಿತು. ಕೇಬಿ ಯಾವಾಗ ಕುಲಮೂಲಕ್ಕೆ ಇಳಿದರೋ ಅಲ್ಲಿನ ಸಂಕಟಗಳು ಅವರಿಗೆ ಸಂಪೂರ್ಣವಾಗಿ ಅರಿವಾಗತೊಡಗಿದವು. ಅವರಿಗೆ ದಕ್ಕಬೇಕಾದ ನ್ಯಾಯವನ್ನು ಹೇಗೆ ದೊರಕಿಸಿಕೊಡಬೇಕು ಎಂಬುದನ್ನು ಆಲೋಚಿಸಿ ಹೊಸಬಗೆಯ ಹೋರಾಟಕ್ಕೆ ಕೇಬಿ ಶುರುವಿಟ್ಟುಕೊಂಡರು. ಇದರ ಪರಿಣಾಮವಾಗಿ ‘ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆಗೆ ವಿರೋಧ’, ಪ್ರಧಾನವಾಗಿ ‘ಒಳಮೀಸಲಾತಿಯ ಹೋರಾಟ’, ಧಾರ್ಮಿಕ ಮೂಲಭೂತವಾದದ ಬಗ್ಗೆ ಪ್ರತಿರೋಧ ತೀವ್ರವಾಗತೊಡಗಿದವು. ಒಳಮೀಸಲಾತಿ ಸಾಮಾಜಿಕ ನ್ಯಾಯದ ಮತ್ತೊಂದು ರೂಪ ಎಂದು ಮಂಡಿಸಿದ್ದು ಅವರ ಆಲೋಚನೆಯ ಖಚಿತರೂಪವಾಗಿತ್ತು. ಅದಕ್ಕಾಗಿ ತೀವ್ರವಾದಿಯೂ ಆಗತೊಡಗಿದರು ‘ಒಳಮೀಸಲಾತಿ ಜಾರಿಯಾಗಲು ಸಾಧ್ಯವಾಗದಿದ್ದರೇ ಅಂಥ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು’ ಎಂದು ಮೈಸೂರಿನಲ್ಲಿ ವಾದಿಸಿದ್ದು ದೊಡ್ಡ ಗಲಾಟೆಗೆ ಕಾರಣವಾಯಿತು. ಅದಲ್ಲದೇ ಆ ಹೊತ್ತಿನಲ್ಲಿ ‘ಸಂವಿಧಾನ ಬದಲು ಮಾಡಲಿಕ್ಕಾಗಿಯೇ ನಾವು ಬಂದಿರುವುದು’ ಎಂಬ ಆಡಳಿತ ಪಕ್ಷಗಳ ಹೇಳಿಕೆಯಿಂದ ಮೊದಲೇ ನೊಂದಿದ್ದ ದಲಿತ ಸಮುದಾಯ ಕೇಬಿಯವರ ವಿರುದ್ಧವು ತಿರುಗಿಬಿದ್ದಿತು. ಕೇಬಿಯವರ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾಯಿತು. ‘ಸಂವಿಧಾನವನ್ನೇ ಬದಲಿಸಲು ಕೇಬಿ ಕರೆ ಕೊಟ್ಟರು’ ಎಂಬಂತೆ ಬಿಂಬಿಸಲಾಯಿತು. ಆದರೆ ಕೇಬಿಯವರ ಒಳಮೀಸಲಾತಿಯ ಬಗೆಗಿನ ನಿಲುವನ್ನು ಅರ್ಥೈಸಿಕೊಳ್ಳುವಲ್ಲಿ ಆ ಸಂದರ್ಭದಲ್ಲಿ ದಲಿತರಿಗೆ ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಮನವರಿಕೆಯಾಗತೊಡಗಿತು.

ಹಾಗೇ ನೋಡಿದರೆ ಒಳಮೀಸಲಾತಿಯ ಸಂದರ್ಭದಲ್ಲಿ ಮುಖ್ಯವಾಗಿ ಮೂರು ಕತೆಗೆಳು ಜನಪ್ರಿಯವಾದವು. ದೇವನೂರು ಮಹಾದೇವರ ‘ಗಂಡಬೇರುಂಡ ಕತೆ’, ಮೊಗಳ್ಳಿ ಗಣೇಶ ಅವರ ‘ಸಯಾಮಿಗಳ ಕತೆ’, ಮತ್ತು ಕೇಬಿಯವರ ‘ನರಿ ಮತ್ತು ಕರಡಿ ಕತೆ’. ಈ ಮೂರು ಕತೆಗಳು ಇಡೀ ಒಳಮೀಸಲಾತಿ ನಿಲವುವನ್ನು ನಮ್ಮ ಮುಂದಿಡುತ್ತವೆ. ಕೇಬಿಯವರ ವಿಶೇಷ ಎಂದರೆ ಕರಡಿಯ ಮೂಲಕ ತಳ ಸಮುದಾಯಗಳ ಅಸ್ಮಿತೆಯನ್ನು, ಆಗಿರುವ ಅನ್ಯಾಯಗಳನ್ನು ಮಂಡಿಸಿದ್ದು. ಈ ಚರ್ಚೆಗಳು ಏನೇ ಇರಬಹುದು. ಒಡೆದುಹೋಗಬಾರದು ಎಂಬ ನಿಲುವು ಒಂದು ಕಡೆ ಇದ್ದರೆ, ಸರಿಯಾಗಿ ಹಂಚಿಕೊಂಡು ಬದುಕೋಣ ಎಂಬುದು ಇನ್ನೊಂದು ನಿಲುವಾಗಿತ್ತು. ಆದರೆ ಈ ನಿಲುವುಗಳು ಕೂಡಿಕೊಳ್ಳದೇ ದೂರವಾಗುತ್ತಲೇ ಹೋಗಿದ್ದು ಸಮುದಾಯಗಳಿಗಾದ ನಷ್ಟ. ಹಂಚುಣ್ಣುವುದನ್ನು ಸಾಧಿಸದೇ ಅಂಬೇಡ್ಕರ್ ರ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಈ ಕಾಲಕ್ಕೆ ಪ್ರಸ್ತುತಗೊಳಿಸುವುದು ಹೇಗೆ ಎಂಬ ಪ್ರಶ್ನೆ ಕೇಬಿಯವರೊಂದಿಗೆ ಕೊನೆಗೊಂಡಿತು.

ಈಗ ಕೇಬಿ ಇಲ್ಲದ ಹೊತ್ತಿನಲ್ಲಿ ನಿಂತು ಹಿಂತಿರುಗಿ ನೋಡಿದಾಗ ಮತ್ತು ಈಗಿನ ಸಂಕಟಗಳನ್ನು ಮುಂದೆ ಹರಡಿಕೊಂಡಾಗ ಕೇಬಿಯ ಅಗತ್ಯತೆ ಕಣ್ಣು ಮುಂದೆ ನಿಲ್ಲುತ್ತದೆ. ಯಾವುದೇ ಸಮಾಜ ವಿದ್ರೋಹಗಳು ಘಟಿಸಿದಾಗ ನೇರವಾಗಿ ಪ್ರಶ್ನಿಸುತ್ತಿದ್ದ, ಪ್ರತಿರೋಧಿಸುತ್ತಿದ್ದ ಕೇಬಿ ಇಲ್ಲವಾಗಿದ್ದಾರೆ. ಕೇವಲ ಸಾಹಿತ್ಯಕ್ಕಷ್ಟೇ ಅಲ್ಲದೇ ಸಾಂಸ್ಕೃತಿಕ ಲೋಕಕ್ಕೂ ಕೇಬಿಯವರ ಶೂನ್ಯ ಕಾಡುತ್ತಿದೆ. ಅಪಘಾತದಲ್ಲಿ ಮಡಿದ ಕೇಬಿ ಸಾಕಷ್ಟು ತಳ ಸಮುದಾಯಗಳ ಪ್ರತಿನಿಧಿಯಾಗಿ ನಿಂತಿದ್ದರು. ಈಗ ಅಂಥ ಸಮುದಾಯಗಳು ಮತ್ತಷ್ಟು ತಬ್ಬಲಿಯಾಗಿ ಆರ್ತನಾದ ಮಾಡುತ್ತಿವೆ. ತಬ್ಬುವವರೂ ಇಲ್ಲ.

ಈ ದೇಹ ನನ್ನ ದೇಹ ಇಡೀ ದೇಹ
ಭವದ ಸಾಲ
ತೀರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ,
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿಬಿಡು ಈ ದೇಹ
ಹೋಗಲಿಬಿಡು ನನ್ನ ದೇಹ
ಎಂದು ಅರಿತು
ಕಟ್ಟಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ
ಮೆಟ್ಟು ಬಿಡುವ ಜಾಗದಲ್ಲಿ..  (ಗಲ್ಲೆಬಾನಿ)

© Copyright 2022, All Rights Reserved Kannada One News