ಇಲ್ಲೊಬ್ಬ ಹೊರಟಿಹ: ಗುರುಪ್ರಸಾದ್ ಕಂಟಲಗೆರೆ ಅವರ ಕವಿತೆ

ಇಲ್ಲೊಬ್ಬ ಹೊರಟಿಹ: ಗುರುಪ್ರಸಾದ್ ಕಂಟಲಗೆರೆ ಅವರ ಕವಿತೆ

Updated : 16.10.2022


ಇಲ್ಲೊಬ್ಬ ಹೊರಟಿಹ
ಜಾತಿ ಧರ್ಮದಿ ಹೊತ್ತಿ ಉರಿಯುತಿಹ ಮನೆಗೆ
ನೀರು ಹಾಯಿಸುತ
ಗಾಯಗೊಂಡಿರುವ ಮನಕೆ
ಮುಲಾಮು ಹಚ್ಚುತ
ಭಾಷೆ ಬಣ್ಣ ನೀರು ಬೀದಿ ಹೆಸರಲಿ
ಚಿದ್ರಗೊಂಡಿರುವ ಮಣ್ಣಿಗೆ
ಪಾದ ಸ್ಪರ್ಶದಿ ಜೋಡಿಸುತ,

ಇಲ್ಲೊಬ್ಬ ಹೊರಟಿಹ
ಕ್ಷಣಮಾತ್ರದಿ ಉತ್ತರದಿಂದ ದಕ್ಷಿಣಕ್ಕೆ ಹಾರುತ್ತಿದ್ದವ
ಬಾನಿಂದಲೇ ಭುವಿಯನ್ನು ನೋಡುತ್ತಿದ್ದವ
ನೆಲದ ನೋವಿಗೆ, ಆಕ್ರಂದನಕೆ
ಕಣ್ಣು ಕಿವಿಯಾಗಲು
ಕೆಳಗಿಳಿದು ಬಂದ ಬೆಳಕಿವ

ಇಲ್ಲೊಬ್ಬ ನಡೆದೇ ಹೊರಟಿಹ
ತಲತಲಾಂತರದ ಬಿರಿದು ಬಾವಳಿಗಳ ಬದಿಗಿಟ್ಟು
ಪಾರಂಪರಿಕ ಕಿರೀಟವನು ಕಳಚಿಟ್ಟು
ಹಳೆಯದ ಹಿಮ್ಮೆಟ್ಟಿ ಹೊಸ ಸೃಷ್ಟಿಗೆ
ಜನರ ಬಳಿಯೇ ಬಂದಿಹ

ಹೊರಟಾತ
ಬಾಂಬು ಬಂದೂಕಿನ ರುಚಿ ಬಲ್ಲಾತ
ರಕ್ತ ಸಿಕ್ತ ಚರಿತ್ರೆಯ ಸಂಗಾತ
ಸಂಚಿನ ಸಾವಿನ ತುದಿ ಅರಿತು,
ಭವಿಶ್ಯವ ಸುಳ್ಳಾಗಿಸಲು ಹೊರಟ
ಹೂಮನದ ಕಲಿ ಈತ

ಅಂದು ಸಿದ್ದಾರ್ಥ ಮನೆ ತೊರೆದಂತೆ
ಅಶೋಕ ಖಡ್ಗ ಬಿಸುಟಿದಂತೆ
ದ್ವೇಷಾಸೂಯೆಗಳ  ಕಳಚಿ
ಪ್ರೀತಿ ಸ್ನೇಹಗಳ ಹರಹಿ
ಒಡೆದ ದೇಶದ ಅಂಗಾಗಗಳ ಕೂಡಿಸಿ
ಉಸಿರನೀಯಲು ನಡೆದೇ ಸಾಗಿದ
ನಿಜ ಕನಸಿಗ!

- ಗುರುಪ್ರಸಾದ್ ಕಂಟಲಗೆರೆ

© Copyright 2022, All Rights Reserved Kannada One News