ಹೈಬ್ರಿಡ್‌ ಕುಲಾಂತರಿ (ಡಿಎಂಎಚ್‌–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ

ಹೈಬ್ರಿಡ್‌ ಕುಲಾಂತರಿ (ಡಿಎಂಎಚ್‌–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ

Updated : 28.10.2022

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೈಬ್ರಿಡ್‌ ಕುಲಾಂತರಿ (ಡಿಎಂಎಚ್‌–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ. ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.

ಒಂದೆರಡು ವರ್ಷಗಳಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗಾಗಿ ಬೆಳೆಯುವ ಅವಕಾಶ ರೈತರಿಗೆ ದೊರೆಯುವ ನಿರೀಕ್ಷೆ ಇದೆ.

ತಜ್ಞರ ಸಮಿತಿಗಳು ವರ್ಷಗಳ ಕಾಲ ನಡೆಸಿದ ಬಹುಹಂತದ ತಪಾಸಣೆ ಮತ್ತು ಪರಾಮರ್ಶೆಯ ನಂತರ ಇದನ್ನು ಅಭಿವೃದ್ಧಿಪಡಿಸಿದ ದೆಹಲಿ ವಿಶ್ವವಿದ್ಯಾಲಯ ಅಧೀನದ ಬೆಳೆ ಸಸ್ಯಗಳ ಆನುವಂಶಿಕ ಕುಶಲತೆಯ ಕೇಂದ್ರದ ತಳಿ ವಿಜ್ಞಾನಿಗಳಿಗೆ ವಾಣಿಜ್ಯ ಉದ್ದೇಶಕ್ಕೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅಧೀನದಲ್ಲಿರುವ ಕುಲಾಂತರಿ ನಿಯಂತ್ರಕ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಪರವಾನಗಿ ನೀಡಿದೆ.

ಈ ಅನುಮತಿ ನಾಲ್ಕು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆದರೆ, ಈ ಕುಲಾಂತರಿ ಬೆಳೆಯು ಜೇನು ಹುಳುಗಳು ಮತ್ತು ಇತರ ಪರಾಗಸ್ಪರ್ಶ ಕೀಟಗಳ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಪರಿಸರವಾದಿಗಳ ಆತಂಕದ ಹಿನ್ನೆಲೆಯಲ್ಲಿ ಬೆಳೆಯ ಕಾರ್ಯಕ್ಷಮತೆ ಆಧರಿಸಿ ಎರಡು ವರ್ಷಗಳ ನಂತರ ಅನುಮತಿಯನ್ನು ಮತ್ತೆ ಪರಾಮರ್ಶೆ ಮಾಡಬಹುದಾಗಿದೆ ಎಂದು ತಳಿವಿಜ್ಞಾನಿ ದೀಪಕ್ ಪೆಂಟಲ್ ನೇತೃತ್ವದ ತಂಡಕ್ಕೆ ನೀಡಿರುವ ಪರವಾನಗಿ ಪತ್ರದಲ್ಲಿ ಹೇಳಿದೆ.


© Copyright 2022, All Rights Reserved Kannada One News