Flash News:
ಹೊಸ ಮನುಷ್ಯ: ವಿ.ಆರ್.ಕಾರ್ಪೆಂಟರ್ ಬರೆದ ಕಥೆ

ಹೊಸ ಮನುಷ್ಯ: ವಿ.ಆರ್.ಕಾರ್ಪೆಂಟರ್ ಬರೆದ ಕಥೆ

Updated : 17.07.2022

ಕದ ತೆರೆದ ಸದ್ದಿನೊಳಗೆ ನೋಡಲು ಬಹಳ ಶುಭ್ರವಾಗಿರುವ ವ್ಯಕ್ತಿಯೊಬ್ಬ ಮನೆಯೊಳಗೆ ಬಂದು ಬಾಗಿಲು ಮುಚ್ಚುವನು. ಕಬೋರ್ಡ್ ತೆರೆದು, ಬಟ್ಟೆ ಬದಲಿಸುವನು. ಒಂದಷ್ಟು ಹೊತ್ತು ಕಿಟಕಿಯ ಬಳಿ ನಿಂತು ಹೊರಗಿನ ಗಾಳಿಯನ್ನು ಎಳೆದುಕೊಂಡು, ನಿಟ್ಟುಸಿರು ಬಿಡುವನು. ಟೇಬಲ್ಲಿನ ಮೇಲಿದ್ದ ಕಾರವಾನ್ ರೇಡಿಯೋವನ್ನು ಆನ್ ಮಾಡುವನು. ಕುವೆಂಪು ಅವರ ಅನಿಕೇತನ ಹಾಡಿನ ‘ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು, ಅನಂತವಾಗಿರು...’ ಎಂಬ ಕೊನೆಯ ಸಾಲುಗಳು ಕೇಳಿಬರುತ್ತಿದ್ದಂತೆ ರೇಡಿಯೋವನ್ನು ನಿಲ್ಲಿಸಿ, ಚೇರನ್ನು ಎಳೆದು ಟೇಬಲ್ಲಿನ ಮುಂದೆ ಕುಳಿತು, ಖಾಲಿ ಹಾಳೆಗಳ ಬಂಡಲ್‍ನಿಂದ ಮೂರ್ನಾಲ್ಕು ಪೇಪರ್‍ಶೀಟ್‍ಗಳನ್ನು ಎಳೆದು ನೋಟ್ ಪ್ಯಾಡಿನ ಕ್ಲಿಪ್‍ಗೆ ಸಿಕ್ಕಿಸಿ, ಡ್ರಾನಿಂದ ಪೆನ್ ತೆಗೆಯುವನು. ಶುದ್ಧ ಚಿನ್ನ ಮಿಶ್ರಿತ ಕೆಂಪುಬಣ್ಣದ ಮಾಂಟ್ ಬ್ಲಾಕ್ ಫೌಂಟೇನ್ ಪೆನ್ ಅದು. ಅದನ್ನೇ ತದೇಕ ಚಿತ್ತದಿಂದ ನೋಡುತ್ತಾ, ಪೆನ್ ಕ್ಯಾಪ್ ಬಿಚ್ಚಿ ಹಾಳೆಯ ಬಲತುದಿಯಲ್ಲಿ ‘ನನ್ನ ಅರಗಿಳಿಯೇ’ ಎಂದು ಬರೆದು ಮತ್ತೆ ಪೆನ್ನನ್ನೇ ಮೋಹಕವಾಗಿ ನೋಡುತ್ತಾ,

ಜಿಂಕೆಯ ಮೈದಾನದಂತಿರುವ
ನಿನ್ನ ಕಣ್ಣ ಒನಪಿನ ವೈಯ್ಯಾರವನ್ನು
ನಾನು ಅದಾರಲ್ಲೂ ಕಾಣದೇ ಹೋದೆನು
ವೃದ್ಧ ವಸಂತಕ್ಕೆ ಕಾಯುವ
ಗುಲ್‍ಮೊಹರ್ ವೃಕ್ಷಗಳು
ಮೇ ತಿಂಗಳನ್ನು
ಬಲುಮೋಹಕಗೊಳಿಸುವ
ಬೋಗನ್‍ವಿಲ್ಲಾ ಬಳ್ಳಿಗಳು
ಕಡು ಮಧ್ಯಾಹ್ನದ
ಬಿಸಿಲನ್ನು ತಂಪು ಮಾಡುವ
ತಣ್ಣನೆಯ ಬಿಯರ್‍ನ ನೊರೆ
ಎಂ ಜಿ ರಸ್ತೆಯುದ್ದಕ್ಕೂ ಸುಳಿದಾಡುವ
ಮೋಹನಾಂಗಿನಿಯರ ಒನಪು
ಎಲ್ಲವೂ ನನಗೆ ಕೃತಕವೆನಿಸುತ್ತದೆ
ಮತ್ತದೇ ನಿನ್ನ ಜಿಂಕೆಯ ಮೈದಾನದಂತಿರುವ
ಕಣ್ಣ ಹೊಳಪು ನನ್ನ ಕೆಣಕುತ್ತದೆ
ಕೆಣಕಿ, ಕೆಣಕಿ
ನನ್ನನ್ನು ಸೋಲಿಸಿ
ನನಗಾಗಿ ತಾನೂ ಸೋತು
ನನ್ನನ್ನಾವರಿಸಿಕೊಳ್ಳುತ್ತದೆ...

ಎಂದು ಪದ್ಯ ಬರೆದ ಪ್ರೇಮಭಾವವನ್ನು ಮುಖದಲ್ಲಿ ಮೂಡಿಸಿಕೊಂಡು, ಹಾಳೆಯ ಮೇಲೆ ಮಲಗಿರುವ ಪೆನ್ ಅನ್ನು ಮತ್ತೆ ನೋಡುವನು. ಆ ಪೆನ್ ಪದ್ಯ ಬರೆದ ಯಾವುದೇ ನೆನಪುಗಳ ಭಾರವನ್ನು ಹೊತ್ತುಕೊಳ್ಳದೆ ಪೆನ್ ಕ್ಯಾಪ್ ಬಿಚ್ಚಿದ ಕಾರಣಕ್ಕೇನೋ ನಾಚಿಕೆಯಿಂದ ಮೈಚಾಚಿಕೊಂಡಿದೆ. ಆ ಪೆನ್‍ನ ಎದೆಯಮೇಲೆ ‘ಟೂ ಮೈ ಲವ್’ ಎಂದು ಬರೆದಿರುತ್ತದೆ. ಇದ್ಯಾವುದನ್ನೂ ಲೆಕ್ಕಿಸದವನಂತೆ ವ್ಯಕ್ತಿಯು ಚೇರಿನಿಂದ ಮೇಲೆದ್ದು ಪಕ್ಕದ ಆರಾಮ ಕುರ್ಚಿಯಲ್ಲಿ ಕುಳಿತು ನೆನಪುಗಳ ಪ್ರಭೆಯಿಂದ ಬೇಯಲು ತಯಾರಿರುವಂತೆ ಕಾಣಿಸುತ್ತಾನೆ. ಒಂದು ಕ್ಷಣ ಕಣ್ಣುಮುಚ್ಚಿಕೊಂಡು ಏನನ್ನೋ ಧೇನಿಸುವವನಂತೆ ಕಂಡುಬಂದ ಅವನು ಅದೇ ಭಾವದಲ್ಲಿ ಎದ್ದು ಫ್ರಿಡ್ಜ್ ತೆಗೆದು ಅದರೊಳಗಿರುವ ಬಿಯರ್ ಬಾಟಲ್ ಒಂದನ್ನು ತೆಗೆದು, ಮುಚ್ಚಳ ಬಿಚ್ಚುತ್ತಲೇ ನೊರೆ ಚೆಲ್ಲಿಕೊಂಡಿತು.
*
ಇರುಳು ಕಳೆದು, ಬೆಳಕು ಮೂಡಿದ ಬೆಳಗ್ಗೆ. ನಿನ್ನೆಯ ನೆನಪುಗಳನ್ನು ಇನ್ನೂ ಉಳಿಸಿಕೊಂಡಿರುವಂತೆ ವ್ಯಕ್ತಿಯು ಕಂಡುಬರುವನು. ಒಂಚೂರು ಪೋಲಿತನ, ಹುಡುಗಾಟಿಕೆಯನ್ನು ಹೊತ್ತು ಮೆರೆಯುತ್ತಿರುವಂತೆ ಕಾಣಿಸುತ್ತದೆ. ನಿನ್ನೆ ಬರೆದಿಟ್ಟಿದ್ದ ಪದ್ಯವನ್ನು ಮತ್ತೆ ಪರಿಶೀಲಿಸಿ ಗೋಡೆಯ ಮೇಲಿನ ನೋಟೀಸ್ ಬೋರ್ಡಿಗೆ ಸಿಕ್ಕಿಸಿ, ಅಲ್ಲೇ ನಿಂತು ನಗುವನು. ಮೇಜಿನ ಮೇಲೆ ಅನಾಥವಾಗಿ ಬಿದ್ದಿರುವ ಸಿಗರೇಟ್ ಪ್ಯಾಕಿನ ಮೈ ಸವರಿ, ಅದರೊಳಗಿನಿಂದ ಒಂದು ಸಿಗರೇಟ್ ಎಳೆದು, ತುಟಿಗಳ ನಡುವೆ ಇಟ್ಟುಕೊಂಡು ಲೈಟರ್ ತಡಕುವನು, ಅದು ಸಿಗುವುದಿಲ್ಲ. ತುಟಿಯಿಕ್ಕಳದಿಂದ ಸಿಗರೇಟ್ ಅನ್ನು ಹೊರಗೆಳೆದಾಗ ಅದು ನಿರಾಳವಾದಂತೆ ಮೈ ಮುರಿಯುತ್ತದೆ. ಅವನಿಗೆ ಮೌನ ಸಾಕೆನ್ನಿಸುತ್ತದೆ. ತುಟಿಯ ಒತ್ತಡದಿಂದ ಬಿಡುಗಡೆಗೊಂಡು ಅದೀಗತಾನೇ ಸುಧಾರಿಸಿಕೊಳ್ಳುತ್ತಿರುವ ಸಿಗರೇಟಿನ ಮಗ್ಗುಲಿಗೆ ಪೆನ್ ಇಟ್ಟು ನೋಡುತ್ತಾ,

“ಈ ಸಿಗರೇಟ್ ಕೂಡಾ ಪದ್ಯ ಬರೆಯುವಂತಿದ್ದರೆ ಎಷ್ಟು ಚೆನ್ನಾಗಿತ್ತು? ಭಗ್ನಕವಿತೆಗಳ ದಾಳಿಯಿಂದ ಈ ಜಗತ್ತನ್ನು ಮತ್ತಷ್ಟು ನಲುಗಿಸಬಹುದಿತ್ತು.” ಎಂದು ನಗುತ್ತಾ ಪೆನ್ ಅನ್ನು ಪ್ರೇಮದಿಂದ ಎತ್ತಿಕೊಂಡು,

“ನನಗಿನ್ನೂ ನೆನಪಿದೆ ಗೆಳತಿ, ಕಬನ್‍ಪಾರ್ಕಿನ ಬೆಂಚು ಕಲ್ಲುಗಳ ಮೇಲೆ ಕುಳಿತ ನಿನ್ನ ತೊಡೆಗಳ ಮೇಲೆ ನಾನು ತಲೆಯಾನಿಸಿ ಮಲಗಿದ್ದು, ನನ್ನ ಮುಖದ ಮೇಲೆ ನಿನ್ನ ಮುಂಗುರಳ ಚೆಲ್ಲಿ, ನನ್ನ ಎದೆಯ ಕೂದಲುಗಳ ಎಳೆದು ತರಲೆ ಮಾಡಿದ್ದು, `ಹಹ್ಹಹ್ಹ’ ಎಂದು ಸಣ್ಣ ಮಕ್ಕಳ ಥರ ನಕ್ಕು, ಅಕ್ಕಪಕ್ಕದ ಜನಗಳನ್ನು ನಮ್ಮ ಕಡೆ ಸೆಳೆದಿದ್ದು, ನಾನು ಕೊಟ್ಟ ಮುತ್ತಿಗೆ ತಲೆ ತಗ್ಗಿಸಿ, ಏನೊಂದೂ ಮಾತನಾಡದೆ, ಪಾರ್ಕಿನ ಗೇಟಿನವರಗೂ ಬಂದು ‘ಹೆಂಗಿತ್ತು ನನ್ನ ಆ್ಯಕ್ಟಿಂಗ್’ ಎಂದು ಮತ್ತೊಮ್ಮೆ ನನ್ನ ಕಿಚಾಯಿಸಿ, ಎಳೆದು ತಬ್ಬಿಕೊಂಡು ಮುತ್ತಿನ ಮಳೆ ಸುರಿಸಿದ್ದು, ನಿನ್ನ ಮುತ್ತುಗಳನ್ನು ವರ್ಣಿಸಿದ ಕಾರಣಕ್ಕೆ, ‘ನೀನೇನು ಸೀಮೆಗಿಲ್ಲದ ಕವಿನಾ? ಕಾಣ್ಸಿದ್ದೆಲ್ಲಾ ಕವಿತೆ ಥರ ವರ್ಣಿಸಿ ಬೋರು ಹೊಡೆಸುತ್ತೀಯ...’ ಎಂದು ರೇಗಿಸಿದ ಮೇಲೂ, ನೀನು ಉಡುಗೊರೆಯಾಗಿ ಕೊಟ್ಟ ಈ ಪೆನ್ ಅದೆಷ್ಟು ಪದ್ಯಗಳನ್ನು ಬರೆದುಬಿಟ್ಟವು ಗೊತ್ತಾ? ಬಹುಶಃ ನಾಲ್ಕೈದು ಸಂಕಲನವೇ ಆಗಬಹುದು...”

ಥಟ್ಟನೇ ಪೆನ್ ಕೆಳಗಿಟ್ಟು ಯಾವುದೋ ಅಸಂಗತ ಭಾವದಿಂದ ಸಿಗರೇಟನ್ನು ಬಾಯಿಗಿಟ್ಟುಕೊಂಡು ಬೆಂಕಿ ಹೊತ್ತಿಸುವನು.
*
ಅಂದಿನ ಇಳಿ ಸಂಜೆ, ಹೊರಗೆ ದಟ್ಟಮಳೆ, ಕವಿತೆಯೊಂದನ್ನು ಹಡೆದ ತೃಪ್ತಿಭಾವದಲ್ಲಿ ಪೆನ್ ಮೇಜಿನ ಮೇಲೆ ವಿರಮಿಸುತ್ತಿರುತ್ತದೆ. ಫ್ರಿಡ್ಜ್ ತಲೆಯ ಮೇಲೆ ಮುಚ್ಚಳ ತೆಗೆದ ಖಾಲಿ ಬಿಯರ್ ಬಾಟಲ್ ಒಂದು ಸುಮ್ಮನೇ ನಿಂತಿರುತ್ತದೆ. ಕೆಳಗೆ ನಾಲ್ಕೈದು ಸೇದಿ ಬಿಸಾಡಿದ, ಕಾಲಲ್ಲಿ ಹೊಸಗಿ ಕೊಂದ ಸಿಗರೇಟಿನ ತುಂಡು-ತುಣುಕುಗಳು ಬಿದ್ದಿವೆ.

ಕಿಟಕಿಯ ಒಂದು ಫ್ರೇಮಿನ ಅಂಚಿಗೆ ಭುಜ ಆನಿಸಿಕೊಂಡು, ಗೋಡೆಯ ಮೇಲೆ ತೂಗುಹಾಕಲಾಗಿದ್ದ ಒಂದು ಅಸಂಗತ ಪೇಂಟಿಂಗ್ ಅನ್ನು ಅವಲೋಕಿಸುತ್ತಾ ವ್ಯಕ್ತಿ ನಿಂತಿದ್ದಾನೆ. ತಕ್ಷಣಕ್ಕೆ ಅದು ಅರ್ಥವಾಗದ ಅಥವಾ ತನ್ನ ವಿವೇಚನೆಗೆ ದಕ್ಕದ ಸಂತನಂತೆ ನಳನಳಿಸುತ್ತಿರುತ್ತದೆ. ತನ್ನ ಬೌದ್ಧಿಕತೆಗೆ ಅದು ಸವಾಲು ಹಾಕಿದಂತೆ, ತೊಡೆತಟ್ಟಿ ನಿಂತ ಪೈಲ್ವಾನನಂತೆ ತೋರುತ್ತದೆ. ಅದನ್ನು ನೋಡುವ ಬಗೆಯ ಕುರಿತು ತಲೆ ಕೆರೆದುಕೊಳ್ಳುತ್ತಾ ಸಿಗರೇಟ್ ಹಚ್ಚಿ, ಮತ್ತೆ ಆರಾಮ ಕುರ್ಚಿಯ ಮೇಲೆ ಒರಗಿ ಒರಟಾಗಿ ನಾಲ್ಕೈದು ಪಫ್ ಎಳೆದು ಏನಾದರೂ ದಕ್ಕಬಹುದೆಂಬ ತಳಮಳಿಸುತ್ತಿರುತ್ತಾನೆ. ಏನೋ ಹೊಳೆದವನಂತೆ ಮೇಜಿ ಮೇಲಿರುವ ಲ್ಯಾಪ್‍ಟ್ಯಾಪ್ ತೆರೆದ ಅವನ ಕೈ ಪವರ್ ಬಟನ್ ಹತ್ತಿರ ಹೋಗುವುದು. ಆದರೆ, ಮತ್ತೆ ಕೈ ಅನ್ನು ಹಿಂದಕ್ಕೆ ತೆಗೆದುಕೊಂಡು, ಲ್ಯಾಪ್‍ಟಾಪ್ ಅನ್ನು ಮೊದಲಿನಂತೆ ಮುಚ್ಚುವನು.

ನಂತರ ಡ್ರಾ ಎಳೆದು ಒಂದು ಫೈಲ್ ತೆಗೆದು ಅದರೊಳಗಿನ ಪೇಪರ್‍ಗಳನ್ನು ತಡಕುವನು. ತಡಕುತ್ತಾ ಹೋದಂತೆ, ಒಂದು ಬಿಲ್ ಸಿಗುವುದು. ‘Modigliani Art Word’ ಎಂಬ ಆರ್ಟ್ ಗ್ಯಾಲರಿ ಶಾಪಿನ ಬಿಲ್ ಅದು. ಬಿಲ್ ಕೆಳಗೆ ಮೋದಿ ಗ್ಲಿಯಾನಿಯ  ‘With one eye you are looking at the outside world, while with the other you are looking within yourself.’ ಎಂಬ ಕೋಟ್ ಕಾಣಿಸಿಕೊಳ್ಳುತ್ತದೆ. ಆ ಸಾಲುಗಳು ಕೂಡಾ ಆ ಕ್ಷಣಕ್ಕೆ ಅರ್ಥವಾದರೂ, ಅರ್ಥವಾಗದಂತೆ, ಇನ್ನೇನು ದಕ್ಕಿದಳು ಎಂದುಕೊಂಡ ಅವಳು ದಕ್ಕಲಾರದೆ ಹೋದ ಸ್ಥಿತಿಗೆ ಬಂದ ಮುಗ್ದಪ್ರೇಮಿಯಂತೆ ನಿಲ್ಲುವನು.

ಇದೆಲ್ಲದರಿಂದ ಆಚೆ ಬಂದು ಬೇರೆ ರೀತಿಯಲ್ಲಿ, ಅಂದರೆ ಸಾಮಾನ್ಯನೊಬ್ಬ ಜಗತ್ತನ್ನು ನೋಡುವ ಸ್ಥಿತಿಗೆ ಬರಲು ಯತ್ನಿಸುವನು. ಕಡೆಗೊಮ್ಮೆ ಬಿಲ್ ಅನ್ನು ಪರಿಶೀಲಿಸಿ, 1,30,000/- ಬೆಲೆ ಕಣ್ಣಿಗೆ ಬಿದ್ದದ್ದೇ ಹೌಹಾರಿದವನಂತೆ ಪೇಂಟಿಂಗ್‍ನ ಪಕ್ಕದಲ್ಲಿಟ್ಟು ಎರಡನ್ನೂ ನೋಡುತ್ತಾ, ಮುಖವನ್ನು ಸಪ್ಪಗೆ ಮಾಡುವನು. ಸಾಮಾನ್ಯನೊಬ್ಬ ಯೋಚಿಸುವಂತೆಯೇ ತನಗೆ ಆ ಪೇಂಟಿಂಗ್ ಅನ್ನು ಟೋಪಿ ಹಾಕಲಾಗಿದೆ ಎಂಬ ರೀತಿಯ ಮುಖಭಾವದಲ್ಲಿ ಯಶಸ್ವಿಯೂ ಆಗುವನು.

*
ಮಾರನೇ ದಿನದ ಮುಸ್ಸಂಜೆ, ಹಾಸಿಗೆ ಮೇಲಿನ ಹೊದಿಕೆ ಅಸ್ತವ್ಯಸ್ತವಾಗಿರುತ್ತದೆ. ಅದರ ಮೇಲೆ ನಲುಗಿದ ಒಂದಷ್ಟು ಕೆಂಗುಲಾಬಿಯ ಪಕಳೆಗಳು ಬಿದ್ದಿದ್ದರೆ, ಹಾಸಿಗೆ ಪಕ್ಕದ ನೈಟ್‍ಲ್ಯಾಂಪ್ ಟೇಬಲ್ಲಿನ ಮೇಲೆ ಖಾಲಿ ಕಾಂಡೋಮ್ ಪ್ಯಾಕೇಟ್, ಅದರ ಕೆಳಗೆ ಹಸಿಹಸಿತನವನ್ನು ಇನ್ನೂ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ಕಾಣುವ ಬಳಸಿ ಗಂಟುಕಟ್ಟಿ ಬಿಸಾಡಿದ್ದ ಮೂರ್ನಾಲ್ಕು ಕಾಂಡೋಮ್‍ಗಳು, ಖಾಲಿಯಾದ ಬ್ರಾಂಡಿ ಶೀಸೆ, ಆ್ಯಷ್‍ಟ್ರೇನಲ್ಲಿ ಅರ್ಧಸುಟ್ಟ ಮತ್ತು ಪೂರ್ತಿ ಉರಿದ ಸಿಗರೇಟಿನ ತುಂಡುಗಳಲ್ಲದೆ, ಚಿಕನ್ ಪೀಸುಗಳ ಪಳಯುಳಿಕೆಗಳು ಪಾರ್ಸೆಲ್ ಕವರ್‍ನೊಳಗೆ ಅಸುನೀಗಿದ್ದವು.

ಬಾತ್ ರೂಮಿನೊಳಗೆ ನೀರನ್ನು ಫ್ಲಷ್ ಮಾಡಿದ ಶಬ್ದದ ತರುವಾಯ ಬಾಗಿಲು ತೆರೆದುಕೊಳ್ಳುವುದು. ವ್ಯಕ್ತಿ ಹೊರಗೆ ಬರುವನು. ಅವನ ಸೊಂಟದ ಮೇಲೆ ಸುತ್ತಿಕೊಂಡ ಟವಲ್ ಬಿಟ್ಟರೆ ಬೇರೇನೂ ಇಲ್ಲ. ಅಲ್ಲದೆ, ಥೇಟ್ ಹಾಸಿಗೆಯ ರೀತಿಯಲ್ಲೇ ಅವನೂ ಸ್ಪಷ್ಟವಾಗಿ ಅಸ್ತವ್ಯಸ್ತವಾಗಿರುತ್ತಾನೆ. ಸಂತೃಪ್ತನಂತೆ ಕಂಡರೂ, ಸುಸ್ತುಹೊಡೆದಿರುವ ಛಾಯೆಯೇ ಢಾಳಾಗಿ ಎದ್ದು ಕಾಣಿಸುತ್ತಿದೆ. ಹೊರಗಿನ ಗಾಳಿಯು ಅಗತ್ಯವೆನಿಸಿ ಕರ್ಟನ್ ಸರಿಸಿ, ಕಿಟಕಿ ರೆಕ್ಕೆ ಲಾಕ್ ಹುಕ್ ಅನ್ನು ಸಡಿಸಿಲಿದ್ದೇ ತಡ, ತಣ್ಣನೆಯ ಗಾಳಿಯು ದಂಡಯಾತ್ರೆ ಮಾಡಲು ತಯಾರಿರುವ ವಿದೇಶಿ ಯೋಧನಂತೆ ಒಳನುಗ್ಗಿ ಒಳಗಿನ ಗಬೆಯೊಡನೆ ಸೆಣೆಸುತ್ತದೆ.

ಒಂದು ಸಣ್ಣ ಅವಧಿ ಕಳೆದಿರಬಹುದಷ್ಟೇ, ಕಿಟಕಿಯ ಮೂಲಕ ಹೊರಗಿನ ಸಂಜೆಗತ್ತಲು ಕಣ್ಣಿಗೆ ರಾಚುತ್ತಿದ್ದಾಗಲೇ ಈಚಲು ಹುಳುಗಳು ಒಂದೊಂದಾಗಿ ಒಳಗೆ ಬರಲು ಶುರುವಿಟ್ಟವು. ಒಳಗೆ ಯುದ್ಧ ಮಾಡಿ ಗೆದ್ದ ಖುಷಿಯಲ್ಲಿರುವ ತಣ್ಣನೆಯ ಗಾಳಿಗೆ ಎದೆಕೊಡಲು ಸೋತು, ಶಾಖಕ್ಕಾಗಿ ಕೋಣೆಯೊಳಗಿನ ಲೈಟ್‍ಗಳಿಗೆ ಮತ್ತೆಮತ್ತೆ ಡಿಕ್ಕಿ ಹೊಡೆದು, ಸೋಲುತ್ತಾ ಹಾಸಿಗೆ ಮೇಲೆ, ಮೇಜಿನ ಮೇಲೆ ಬಿದ್ದು ಅಸುನೀಗುವವು. ಒಂದೆರಡು ಹುಳುಗಳು ಆ ವ್ಯಕ್ತಿಗೂ ಬಡಿದು ರೇಜಿಗೆ ಹತ್ತಿಸಲು ಹೊಂಚುಹಾಕಿದಂತೆ ಕಂಡವು. ರೋಸಿಹೋಗಿ ‘ಥತ್’ ಎಂದು ಲೈಟ್ ಆರಿಸಿಬಿಡುವನು,

ಕೋಣೆಯು ಗಾಢ ಕತ್ತಲಿಂದ ಮುಚ್ಚಿಕೊಳ್ಳುವುದು. ವ್ಯಕ್ತಿಯು ಅಪರಿಚಿತ ಕಾಡನ್ನು ಹೊಕ್ಕವನಂತೆ ತಡಕಾಡುತ್ತಾ ಅತ್ತಿಂದಿತ್ತ ಓಲಾಡುವನು. ಮತ್ತೆ ಮಳೆ ಹೊಯ್ಯುವ ಸೂಚನೆಯಂತೆ ಸಣ್ಣನೆಯ ಮಿಂಚಿನ ಬೆಳಕು ಕೋಣೆಯಿಂದ ಒಳಗೆ ನುಸುಳುತ್ತದೆ. ಆ ಬೆಳಕಲ್ಲಿ ಕಂಡ ಬ್ರಾಂಡಿಯ ಖಾಲಿ ಸೀಸೆಯನ್ನು ಮೇಲಕ್ಕೆತ್ತಿ ನೆಲಕ್ಕೆ ಒಗೆಯುವನು. ಚೆಲ್ಲಾಪಿಲ್ಲಿಯಾದ ಶಬ್ದದ ತರುವಾಯ ನಿಶ್ಯಬ್ದ ಆವರಿಸುತ್ತದೆ. ತಟಸ್ಥವಾಗಿ ನಿಲ್ಲಲಾರದೆ, ಕತ್ತಲಿನಲ್ಲಿ ಸಹಾಯಕ್ಕಾಗಿ ಕೈ ಚಾಚುವನು. ಮತ್ತೊಂದು ಸಣ್ಣ ಮಿಂಚಿನ ಬೆಳಕಿನಲ್ಲಿ ಅಂದಾಜಿಸಿಕೊಂಡು ಸಾವರಿಸಿಕೊಳ್ಳುತ್ತಾ ಮಂಚದ ಒಂದು ತುದಿಯಲ್ಲಿ ಕುಳಿತುಕೊಳ್ಳುವನು. ಸುಧಾರಿಸಿಕೊಳ್ಳಲು ಯತ್ನಿಸುವನು.

ಇದ್ದಕ್ಕಿದ್ದಂತೆ ದೊಡ್ಡ ಗುಡುಗಿನೊಂದಿಗೆ ಮಿಂಚು ರಾಚುತ್ತದೆ. ಅವನ ಮುಖದ ಮೇಲೆ ರಕ್ತ! ಭೀಕರವಾಗಿ ಕಿರುಚಿಕೊಳ್ಳುವನು...
*
ಬೆಳಗನ್ನು ದೃಢಪಡಿಸುವಂತೆ ಪಕ್ಷಿಗಳ ಚಿಲಿಪಿಲಿಯೋ, ಆರ್ತನಾದವೋ ಕೇಳಿಸುತ್ತಿರುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಕೋಣೆಗೆ ಬಿಳುತ್ತಿವೆ. ಕೋಣೆ ಹಿಂದಿನ ರಾತ್ರಿಯ ಯಾವುದೇ ಚಹರೆಯನ್ನು ಕಳೆದುಕೊಳ್ಳದೆ ಇದ್ದ ಹಾಗೆಯೇ ಇದೆ. ಮನುಷ್ಯ ಮಾತ್ರದವರು ಮಲಗಿಕೊಳ್ಳದಷ್ಟು ಗಬ್ಬುನಾರುತ್ತಿರುವ ಹಾಸಿಗೆಯ ಮೇಲೆ ವ್ಯಕ್ತಿ ಮಲಗಿಕೊಂಡಿದ್ದಾನೆ. ಅವನಿಗೆ ಉದ್ದನೆಯ ಗಡ್ಡ ಬೆಳೆದು, ಕೂದಲೆಲ್ಲಾ ಬೆಳ್ಳಗಾಗಿವೆ, ಚರ್ಮ ಸುಕ್ಕುಗಟ್ಟಿದೆ! ಒಟ್ಟಿನಲ್ಲಿ ಆತ ಮುದುಕನಾಗಿದ್ದಾನೆ.

ಸೂರ್ಯನ ಕಿರಣಕ್ಕೆ ಹೆದರಿದವನಂತೆ ಕಣ್ಣುರೆಪ್ಪೆ ಮುಚ್ಚಿಕೊಂಡೇ ಅತ್ತಿತ್ತ ಕಣ್ಣು ಗುಡ್ಡೆಗಳನ್ನು ಆಡಿಸಿ, ಕಣ್ಣು ಬಿಡಲು ಪ್ರಯತ್ನಿಸುವನು. ಮೆಲ್ಲಗೆ ಹಾಸಿಗೆಯಿಂದ ಮೇಲೇಳಲು ಸತತವಾಗಿ ಪ್ರಯತ್ನಿಸಿ ಸೋಲುವನು. ಮೆಲ್ಲಗೆ ಅರೆಗಣ್ಣಿನ ಸಹಾಯದಿಂದ ಗೋಡೆಯ ಮೇಲೆ ಜಗದ ಯಾವ ಪರಿವೆಯೂ ಇಲ್ಲದಂತೆ ತನ್ನಷ್ಟಕ್ಕೆ ತಾನು ಸುತ್ತುತ್ತಿರುವ ಗಡಿಯಾರದ ಕಡೆಗೆ ನೋಡುವನು. ಅದು 8 ಗಂಟೆಯ ಆಸುಪಾಸನ್ನು ಅದು ತೋರಿಸುತ್ತದೆ.

ಮೇಲೇಳಲು ಮತ್ತೆ ಪ್ರಯತ್ನಿಸುವನು. ಅವನ ತೋಳುಗಳು ಬಲ ಕಳೆದುಕೊಂಡಿರುವುದು ಅರಿವಿಗೆ ಬರುತ್ತದೆ. ಕಷ್ಟಪಟ್ಟು ಮೇಲೇಳುತ್ತಾನೆ. ಕೆಳಗೆ ಬಿದ್ದ ಗಾಜಿನ ಚೂರೊಂದು ಕಾಲಿಗೆ ಚುಚ್ಚಿ, ರಕ್ತಚೆಲ್ಲಿದ ನೋವಾಗುವುದು. ಕಾಲನ್ನು ದೃಷ್ಟಿಯ ಪರಿಧಿಗೆ ಹೊಂದಿಸಿಕೊಳ್ಳಲು ಹೆಣಗುವನು.

ಇದ್ದಕ್ಕಿದ್ದಂತೆ ಕಿಟಕಿಯಿಂದ ಮಗುವೊಂದು ಅಳುವ ಶಬ್ದ ಕೇಳಿಬರುತ್ತದೆ. ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ, ತಟ್ಟಾಡಿಕೊಂಡು ಎದ್ದುಬಂದು ಕಿಟಕಿಯನ್ನು ಇಣುಕುತ್ತಾನೆ. ಆದರೆ, ಅಲ್ಲಿ ಅವನಿಗೆ ಯಾವ ಮಗುವೂ ಕಾಣಿಸುವುದಿಲ್ಲ. ಮತ್ತೆ ಮತ್ತೆ ಮಗು ಅಳುವ ಶಬ್ದದ ಜೊತೆ ಜೊತೆಗೆ ತಾಯಿ ಅದನ್ನು ಸಂತೈಸಿ ಲಾಲಿ ಹಾಡುವ ದನಿಯೂ ಕೇಳುತ್ತದೆ. ಮತ್ತೆ ಆಸೆಯಿಂದ ನೋಡುತ್ತಾನೆ. ಏನೊಂದೂ ಕಾಣಿಸದ ಬಟಾಬಯಲು ಮಾತ್ರವೇ ಅವನ ದೃಷ್ಟಿಗೆ ತಾಗುತ್ತದೆ.

ಭ್ರಮೆಯನ್ನು ನಿವಾರಿಸಿಕೊಳ್ಳುವ ಪ್ರಯತ್ನವಾಗಿ ತನ್ನನ್ನು ತಾನು ನೋಡಿಕೊಳ್ಳಲು ಶುರುಮಾಡುತ್ತಾನೆ. ತನ್ನದೇ ಮೈ ಅನ್ನು ಅಕ್ಕರೆಯಿಂದ ತಡವಿಕೊಳ್ಳುತ್ತಾನೆ. ಸುಕ್ಕಲು ಚರ್ಮ, ಉದ್ದ ಬೆಳೆದ ಬಿಳೀಗಡ್ಡ, ದೂರದೃಷ್ಟಿಗೆ ಮಂಜಾದ ಕಣ್ಣುಗಳು, ಊರುಗೋಲನ್ನು ಅರಸುವಂತೆ ಅದರುವ ಕೈಗಳು, ಬಾಗಿದ ಬೆನ್ನು, ಉಬ್ಬಸ ತುಂಬಿದ ಉಸಿರು ಎಲ್ಲವೂ ಅವನು ಮುದುಕನಾಗಿರುವುದನ್ನು ನಿಕ್ಕಿಯಾಗಿಸುತ್ತದೆ. `ಹಾಗಾದರೆ ತಾನೆಷ್ಟು ಕಾಲವನ್ನು ಸವೆಸಿರಬೇಕು? ಅಥವಾ ಕಾಲವೇ ನನ್ನನ್ನು ಅನಾಮತ್ತಾಗಿ ಎತ್ತಿ ಬಿಸಾಡಿರಬೇಕು’ ಎಂಬ ಅಚ್ಚರಿ, ಭಯ, ರೋಷ ಎಲ್ಲ ಭಾವವನ್ನು ಆವಾಹಿಸಿಕೊಂಡು ತಡಬಡಾಯಿಸಿಕೊಂಡು ಡ್ರೆಸ್ಸಿಂಗ್ ಟೇಬಲ್‍ಅನ್ನು ತಬ್ಬಿಕೊಂಡು ನಿಂತಿದ್ದ ನಿಲುವುಗನ್ನಡಿಯ ಮುಂದೆ ಬಂದು ನಿಲ್ಲುತ್ತಾನೆ.

ಕನ್ನಡಿಯು ಅವನ ಯೌವ್ವನದಲ್ಲಿದ್ದ ರೂಪವನ್ನೇ ತೋರಿಸುತ್ತದೆ. ಬಹುಶಃ ತನ್ನ ಕಣ್ಣುಗಳು ತನಗೆ ಮೋಸ ಮಾಡುತ್ತಿವೆಯೇ ಎಂಬ ಅನುಮಾನದಿಂದ ಮತ್ತೆ ತನ್ನನ್ನು, ತನಗೆ ಬೆಳೆದಿರಬಹುದಾದ ಉದ್ದನೆಯ ಬಿಳಿ ಗಡ್ಡವನ್ನು ನೋಡಿಕೊಳ್ಳುವನು. ಅವನು ಮುದುಕನಾಗಿರುವುದಕ್ಕೆ ಯಾವುದೇ ಅನುಮಾನ ಇರುವುದಿಲ್ಲ. ‘ಇದ್ದಂತೆಯೇ ತೋರಿಸುವುದು ಕನ್ನಡಿಯ ಗುಣ’ ಎಂದು ಎಲ್ಲೋ ಓದಿದ್ದನ್ನು ಪರೀಕ್ಷಿಸುವ ಮನಸ್ಸಾಗಿ ಮತ್ತೆ ಕನ್ನಡಿಯನ್ನು ನೋಡುವನು. ಅದರೊಳಗೆ ಅವನ ನಿನ್ನೆಯ ಯೌವ್ವನ ಕಂಡು ಬೆಚ್ಚಿಬೀಳುತ್ತಾನೆ. ಒಂದು ಭ್ರಮೆಯಿಂದ ಮತ್ತೊಂದು ಭ್ರಮೆಯೊಳಗೆ ನುಸುಳಿಬಿಟ್ಟೆನೇನೋ ಎಂಬ ಅನುಮಾನ ಅಥವಾ ತಾನು ಎಂದಿಗೂ ನಂಬದ ಭೂತವಿರಬಹುದೆ ಎಂಬ ಹೊಸದಾದ ಭಯದಿಂದ ಕನ್ನಡಿಯೊಂದಿಗೆ ಮಾತನಾಡಲು ಧೈರ್ಯ ಮಾಡುವನು.

‘ಯಾರು ನೀನು?’
ಕನ್ನಡಿ: ಯಾರು ನಾನೇ?
‘ಹೌದು ನೀನೇ, ಯಾರು ನೀನು ಬೊಗಳು?’
ಕನ್ನಡಿ: ನಾನು ಯಯಾತಿ!
‘ಹಾಗಾದರೆ, ನಾನು ಪುರುನಾ?’
ಕನ್ನಡಿ: ಹೌದು ನೀನು ಪುರು, ನಿನ್ನ ಯೌವ್ವನವ ನನಗೆ ಧಾರೆಯೆರೆದ ಪುರು...
‘ವಾಟ್ ಎ ನಾನ್ಸೆನ್ಸ್!? ಇದು ಎಲ್ಲಾದರೂ ಸಾಧ್ಯವೆ? ಹಾಗಾದರೆ, ಹಾಗಾದರೆ ನನ್ನ ವಯಸ್ಸೆಷ್ಟು?’
ಕನ್ನಡಿ: ನಿನ್ನ ನಿರಾಶೆಯೇ ಹೇಳುತ್ತಿದೆ, ನಿನ್ನದು ಸಾಯುವ ವಯಸ್ಸು! ಸಾಯಲಿರುವ ವಯಸ್ಸು, ಸಾಯಲೇಬೇಕಾದ ವಯಸ್ಸು!
‘ನಾನೇಕೆ ಸಾಯಬೇಕು?’
ಕನ್ನಡಿ: ಸುಮ್ಮನೇ ಕೋಪ ಮಾಡಿಕೊಂಡು ಮತ್ತಷ್ಟು ವೃದ್ಧಾಪ್ಯವನ್ನು ಎಳೆದುಕೊಳ್ಳಬೇಡ. ನೀನೇಕೆ ಸಾಯಬಾರದು ಎಂಬ ಒಂದೇ ಒಂದು ಕಾರಣ ನೀಡು ಸಾಕು.
‘ಇಲ್ಲ ಯಾವುದೂ ನೆನಪಿಗೆ ಬರುತ್ತಿಲ್ಲ.’
ಕನ್ನಡಿ: ನೆನಪಿಲ್ಲದ ವ್ಯಕ್ತಿ ಬದುಕಿದ್ದೇನು ಪ್ರಯೋಜನ. ಕನಿಷ್ಟ ಬದುಕುವುದಕ್ಕಾದರೂ ಒಂದೆರಡು ನೆನಪುಗಳನ್ನು ಉಳಿಸಿಕೊಂಡಿರಬೇಕಲ್ಲವೆ?
‘ಇಲ್ಲ, ಆ ರೀತಿಯ ನೆನಪುಗಳಾವೂ ನನಗೆ ನೆನಪಾಗುತ್ತಿಲ್ಲ... ಆದರೆ... ಹ್ಞಾಂ! ನಿನ್ನನ್ನು ನಾನು ನಿನ್ನೆಯೋ, ಮೊನ್ನೆಯೋ ಅಥವಾ ಯಾವಾಗಲೋ, ಎಲ್ಲೋ ನೋಡಿದ ನೆನಪು.’
ಕನ್ನಡಿ: ಏನೂ? ನನ್ನನ್ನೇ? ಸಾಯುವ ಆಟದಿಂದ ಎಸ್ಕೇಪ್ ಆಗಲು ನನ್ನ ಗುರುತಿನ ಸುಳ್ಳು ಹೇಳುತ್ತಿದ್ದೀಯ?
‘ಸುಳ್ಳು? ಹಾಗೆಂದರೆ?’
ಕನ್ನಡಿ: ನಿಜ ಹೇಳದಿರುವುದು
‘ಯಾವುದು ನಿಜ?’
ಕನ್ನಡಿ: ಸುಳ್ಳಲ್ಲದಿರುವುದು!
‘ನೀನು ಅಲ್ಲಲ್ಲೇ ಗಿರಕಿ ಹೊಡೆಯುತ್ತಿರುವೆ. ಸುಳ್ಳು ಮತ್ತು ನಿಜಗಳ ಸ್ಪಷ್ಟ ವ್ಯತ್ಯಾಸ ಗೊತ್ತಿಲ್ಲ ನಿನಗೆ.’
ಕನ್ನಡಿ: ಸುಮ್ಮನೇ ಗೊಂದಲ ಮೂಡಿಸಬೇಡ, ಸುಳ್ಳು ಸತ್ಯಗಳ ವ್ಯತ್ಯಾಸ ತಿಳಿಯುವುದು ಹೇಗೆ?
‘ಅದಕ್ಕೆ ಮಾಗಬೇಕು. ನಮ್ಮ ನೆನಪುಗಳು ಹೆಪ್ಪುಗಟ್ಟಬೇಕು. ನೀನೊಂದು ಕೇವಲದ ಬಿಂಬ, ನಿನಗೆ ನೆನಪುಗಳ ಬೆನ್ನಿಲ್ಲ, ಮಾಗುವ ಎದೆಯಿಲ್ಲ, ಎಲ್ಲ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವ ಮೆದುಳಂತೂ ಮೊದಲೇ ಇಲ್ಲ.’
ಕನ್ನಡಿ: ನೀನು ಹೀಗೆ ರೂಪಕಗಳ ಆಟ ಹೂಡಿ, ನನ್ನನ್ನು ನಿನ್ನ ನೆನಪುಗಳ ಖೆಡ್ಡಾಕ್ಕೆ ಕೆಡವಲು ಹೊಂಚುಹಾಕಿರುವ ಕಳ್ಳನಂತಿರುವೆ.

‘ಹಹ್ಹಹ್ಹ... ನೆನಪುಗಳು ಇರುವುದೇ ಹೊಂಚು ಹಾಕಲು. ಮತ್ತೊಬ್ಬರನ್ನು ನೆನಪುಗಳ ಋಣದ ದಾಳಿಯಿಂದ ಕಟ್ಟಿಹಾಕಿದಂತೆ ಬೇರಾವುದರಿಂದಲೂ ಕಟ್ಟಿಹಾಕಲು ಸಾಧ್ಯವೇ ಇಲ್ಲ. ಋಣದ ನೆನಪುಗಳಿಗೆ ಇರುವಷ್ಟು ಶಕ್ತಿ ಸೂರ್ಯ ಚಂದ್ರರಿಗೂ ಇಲ್ಲ’
ಕನ್ನಡಿ: ಹಾಗಾದರೆ, ನಿನ್ನ ಒಂದಷ್ಟು ನೆನಪುಗಳನ್ನು ನನಗೆ ಕೊಟ್ಟುಬಿಡು.
‘ನನ್ನ ನೆನಪುಗಳು ಕೇವಲ ಕಿಲುಬು ನೆನಪುಗಳವು! ಇಟ್ಟುಕೊಂಡು ಏನು ಮಾಡುತ್ತೀ?’
ಕನ್ನಡಿ: ತೈಲ ಲೇಪಿಸಿ ಕಿಲುಬುಗಳನ್ನು ಇಲ್ಲವಾಗಿಸುತ್ತೇನೆ, ಮತ್ತು ಮಾಗಿಸುತ್ತೇನೆ.
‘ಲೋಕರೂಢಿಯೊಳಗೆ ಬದುಕ ನಿನ್ನಿಂದ ಅದು ಸಾಧ್ಯವಿಲ್ಲ.’
ಕನ್ನಡಿ: ಯಾಕೆ, ಯಾಕೆ ಸಾಧ್ಯವಿಲ್ಲ? ಲೋಕರೂಢಿಯೊಳಗೆ ನನಗೊಂದು ಅಸ್ತಿತ್ವ ಇಲ್ಲವೆ?
‘ಇಲ್ಲ, ಲೋಕರೂಢಿಯನ್ನು ಖಚಿತಪಡಿಸಲು ನಿನ್ನ ಅಸ್ತಿತ್ವವನ್ನು ಬಳಸುವವರು ಪುಕ್ಕಲರು. ಹಾಗೆಯೇ ನಿನ್ನ ಎದುರು ನಿಲ್ಲುವವರ ನೆನಪುಗಳು ನಿನ್ನವುಗಳಲ್ಲ, ಬೇರೆಯವರ ನೆನಪುಗಳಲ್ಲಿ ನಿನ್ನ ಲೋಕರೂಢಿಯ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.’
ಕನ್ನಡಿ: ಯಾಕೆ, ತೀರಿಹೋದ ನಿನ್ನ ಹೆಂಡತಿಯ ನೆನಪಿನಲ್ಲಿ, ಆಗತಾನೆ ಹುಟ್ಟಿದ ಮೃತ ಕೂಸಿನ ನೆನಪಿನಲ್ಲಿ ನೀನು ಬದುಕುತ್ತಿಲ್ಲವೆ? ಅವರ ನೆನಪುಗಳು ನಿನ್ನ ಅಸ್ತಿತ್ವವೋ ಅಥವಾ ಅಸ್ತಿತ್ವದ ಭಾಗವೋ?
‘ಅವು ನೆನಪುಗಳಲ್ಲ; ನೆರಳುಗಳು. ನಾನು ಹೋದಲ್ಲೆಲ್ಲಾ ತಲೆ ಹೊಡೆಯಲು ನಿಂತ ನೆರಳುಗಳು. ಗುಲ್‍ಮೊಹರ್ ವೃಕ್ಷಗಳ ಕೆಳಗೆ ಮಲಗಿರುವ ಸೋಮಾರಿ ನೆರಳು, ಬೋಗನ್‍ವಿಲಾ ಹೂಗಳ ಅನನ್ಯತೆಯೊಳಗೆ ಒಂದಾಗಿರುವ ನೆರಳು, ಬಿಯರ್‍ನ ನೊರೆಯೊಳಗೆ ಮುಳುಗೇಳುವ ನೆರಳು, ಮೋದಿಗ್ಲಿಯಾನಿಯ ಅಬ್ಸರ್ಡ್ ಪೇಂಟಿಂಗ್ ಥರ ಸದಾಕಾಲ ನನ್ನ ಸುತ್ತಲೇ ಗಿರಕಿ ಹೊಡೆಯುವ ಬಿಟ್ಟು ಬಿಡದ ಗೊಂದಲದ ನೆರಳು...’

ಇಷ್ಟರಲ್ಲಾಗಲೇ ಕನ್ನಡಿಯೊಳಗಿನ ವ್ಯಕ್ತಿ ಸಂಪೂರ್ಣವಾಗಿ ವೃದ್ಧನಾಗಿಯೂ, ಕನ್ನಡಿ ಎದುರು ನಿಂತ ವ್ಯಕ್ತಿಯು ಯುವಕನಾಗಿಯೂ ಬದಲಾಗಿಬಿಡುತ್ತಾರೆ. ಕನ್ನಡಿಯೊಳಗಿನ ಅನುಭವದ ಬಿಂಬವು ಸ್ಪಷ್ಟತೆಯನ್ನು, ಲೋಕದ ಚಲನೆಯನ್ನು ಪದರುಪದರುಗಳಾಗಿ ಹೊರಹಾಕುವಂತೆ ಕಾಣಿಸಿದರೆ, ಎದುರಿನ ವ್ಯಕ್ತಿಯು ಅನುಭವಸ್ಥನ ಮುಂದೆ ಮಂಡಿಯೂರಿದ, ಆದರೆ ಸೋಲೋಪ್ಪಿಕೊಳ್ಳದ ಹುಂಬ ಪೈಲ್ವಾನನಂತೆಯೂ ಕಾಣಿಸುತ್ತಾನೆ.

ಕನ್ನಡಿ: ಸಾಕುಮಾಡು ನಿನ್ನ ನೆರಳಿನ ಸಹವಾಸ! ನೀನು ಗತಕಾಲದ ನೆರಳುಗಳ ಕೆಳಗೆ ತಲೆಬಗ್ಗಿಸಿಕೊಂಡು ಗಿರಕಿಹೊಡೆಯುತ್ತಿರುವ ರೊಮ್ಯಾಂಟಿಕ್ ಹುಳುವಿನಂತೆ ನನಗೆ ಕಾಣಿಸುತ್ತಿರುವೆ. ಆ ನಿನ್ನ ನೆರಳುಗಳಿಗೆ ಆಯಸ್ಸಿಲ್ಲ. ಅವುಗಳಿಗೆ ನಿರ್ದಿಷ್ಟವಾದ ಆಕಾರವೂ ಇಲ್ಲ. ಆದರೂ ಅದನ್ನೇ ಏಕೆ ಇಷ್ಟು ಕಾಲ ಹೊತ್ತು ತಿರುಗಿ, ತಿರುಗಿ ದಣಿಯುತ್ತಿರುವೆ? ಬೂದಿಯ ತಿಪ್ಪೆಯೊಳಗೆ ಕನಸುತ್ತಿರುವ ನಾಯಿಯಂತೆ ನನ್ನ ಕಣ್ಣಿಗೆ ಕಾಣುತ್ತಿರುವೆ ನೀನು. ಮೈಕೊಡವಿ, ಬೂದಿಯಾದ ನೆರಳುಗಳಿಂದ ಹೊರಗೆ ಬಂದು ಹೊಸಾ ಬಿಸಿಲಿಗೆ ಮೈ ಒಡ್ಡಿ ಹೊಸ ಮನುಷ್ಯನಾಗು. ನಿನ್ನ ಗತಕಾಲದ ನೆರಳುಗಳು ಆಕ್ಷಣಕ್ಕೆ ತಂಪೆರೆಯಬಹುದು, ಆದರೆ ಅವು ನಿನ್ನನ್ನು ನಿಶ್ಕ್ರಿಯನನ್ನಾಗಿಸುತ್ತದೆ. ಬಿಸಿಲು ಮಾತ್ರ ನಿನ್ನಲ್ಲಿ ಹೊಸ ಆಲೋಚನೆ ಹುಟ್ಟಿಸಬಲ್ಲದು, ಕ್ರಿಯಾಶೀಲನನ್ನಾಗಿಸಬಲ್ಲದು. ಅದೇ ಆ ಗುಲ್‍ಮೊಹರ್ ವೃಕ್ಷಗಳನ್ನು ಎಡತಾಕುವ ಗಿಳಿ, ಗುಬ್ಬಿ, ಪಾರಿವಾಳಗಳ ಹಿಂಡು ನಿನಗೆ ಕಾಣಲಿಲ್ಲವೆ? ಬೋಗನ್‍ವಿಲ್ಲಾ ಬಳ್ಳಿಗಳ ಮೇಲಿನ ಹೂಗಳ ಮೇಲೆ ಕುಳಿತು ಪರಾಗಸ್ಪರ್ಷದ ಸೃಷ್ಟಿ ಕ್ರಿಯೆಯ ಕರ್ತವ್ಯದಲ್ಲಿರುವ ಚಿಟ್ಟೆಗಳ, ದುಂಬಿಗಳ ಹಿಂಡುಗಳು ನಿನ್ನನ್ನು ಕಾಡಲಿಲ್ಲವೆ? ಪ್ರತಿಯೊಂದು ಬಿಯರ್ ಬಾಟಲಿನಿಂದ ಹೊರಡುವ ನೊರೆಗೆಷ್ಟು ಆಯಸ್ಸು ಯೋಚಿಸಿನನೋಡು... ಪದೇಪದೇ ಹೋಗುವ ಸ್ಥಳಗಳಿಗೆ ಹಳೆಯ ನೆನಪುಗಳನ್ನು ಹೊತ್ತು ಹೋಗಲೇಬಾರದು. ‘ಕಾಲಕ್ಕೆ ಹುತಾತ್ಮನಾಗಬೇಡ’ ಎಂದು ನಿನ್ನ ನೆಚ್ಚಿನ ಕವಿ ಬೋದಿಲೇರ್ ಹೇಳಿದ್ದು ನೆನಪಿಲ್ಲವೆ? ಮೊದಲು ಎಚ್ಚರಗೊಳ್ಳು... ಹೊಸಮನುಷ್ಯನಾಗು...

ಅಷ್ಟರಲ್ಲಿ ಮೊಬೈಲ್ ಫೋನ್ ರಿಂಗಾಗುವುದು. ಎತ್ತಿಕೊಂಡು ಬಾತ್‍ರೂಮ್ ಒಳಗೆ ಹೋಗುವ ಮೊದಲು ಕನ್ನಡಿಯ ಕಡೆಗೊಮ್ಮೆ ನೋಡುವನು. ಅದು ವಾಸ್ತವವಾಗಿ ವ್ಯಕ್ತಿ ಇರುವ ಸ್ಥಿತಿಯನ್ನೇ ತೋರಿಸಿಸುತ್ತದೆ. ಅವನು ಅವನೇ ಹೊಸ ಮನುಷ್ಯನಂತೆ ಕಾಣಿಸಿಕೊಂಡ ಕಾರಣಕ್ಕೆ ನಕ್ಕು ಬಾತ್‍ರೂಮಿನ ಒಳಗೆ ಹೋಗಿ ಮಾತನಾಡುವನು.
ಬಾತ್‍ರೂಮಿನ ಒಳಗೆ ಮಾತನಾಡುವ ವ್ಯಕ್ತಿಯ ಮಾತು ಮಾತ್ರ ಕೇಳಿಸುವುದು...

‘ಫೇಸ್‍ಬುಕ್ಕಲ್ಲಿ ರಿಕ್ವೆಸ್ಟ್ ಕಳಿಸಿ ಆರು ತಿಂಗಳಾಗಿತ್ತು, ಇವತ್ತು ಅಕ್ಸೆಪ್ಟ್ ಮಾಡಿದೆಯಾ? ಥ್ಯಾಂಕ್ಸ್ ಗಾಡ್! ಅಂದಹಾಗೆ ನನ್ನ ನಂಬರ್ ಎಲ್ಲಿ ಸಿಕ್ತು ನಿಂಗೆ?’

‘ಹೇಯ್, ಹಾಗೇನಿಲ್ಲ... ಕವಿಗಳು ವಾಸ್ತವವಾದಿಗಳೇ... ಏನೋ ರೂಢಿ ಮಾತಿಗೆ ಜೋತುಬಿದ್ದು ದೇವರ ಮೊರೆ ಹೋಗ್ತೀವಿ ಅಷ್ಟೇ. ಯೂ ನೋ... ನಾನು ನಿನ್ನನ್ನು ನಿನ್ನ ಒಂದೇ ಶಬ್ದಕ್ಕೆ ಗುರುತು ಹಿಡಿದೆ. ಅದೇ ಮೋಹಕವಾದ ದನಿ, ಕಿಂಚಿತ್ತೂ ತಗ್ಗಿಲ್ಲ. ಸಂಜೆ ಕಾಫಿಡೇನಲ್ಲಿ ಸಿಗ್ತೀಯ? ತುಂಬಾ ಮಾತಾಡೋದಿದೆ. ಅಲ್ಲದೆ ಹಳೆಯ ಸ್ಟಾಕ್ ಖಾಲಿ ಮಾಡಬೇಕಿದೆ.’

‘ಹೇಯ್, ಭಯ ಪಡಬೇಡ. ನನ್ನ ಮಾತುಗಳು ಬೋರ್ ಹೊಡೆಸೋಲ್ಲ. ಅಸಲಿಗೆ ಕವಿಯಂತೆ ಪ್ರತಿಮೆಗಳ ಮೂಲಕ, ರೂಪಕಗಳ ಮೂಲಕ ಮಾತನಾಡುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ಆಗತಾನೇ ಮೊದಲ ಪ್ರೇಮದ ಸುಖವುಣ್ಣುವ ಪ್ರೇಮಿಯಂತೆ, ಕಾವಿಗಾಗಿ ಕಾತರಿಸುವ ಬೆಕ್ಕಿನಂತೆ ನಿನ್ನ ಮಡಿಲಿನಲ್ಲಿ ಬೆಚ್ಚಗೆ ಇದ್ದುಬಿಡುತ್ತೇನೆ. ನೀನು ಸ್ಫುರಿಸುವ ಪ್ರೇಮವನ್ನು ಯಥಾವತ್ತಾಗಿ ನನ್ನ ಹೃದಯದೊಳಗೆ ಇಳಿಸಿಕೊಂಡುಬಿಡುತ್ತೇನೆ.’

‘ಹೇಯ್ ಹಾಗೇನಿಲ್ಲ, ಪ್ರೇಮಪತ್ರ ಬರೆಯುವ ಕಾಲವೀಗ ಕಾಲನಲ್ಲಿ ಲೀನವಾಗಿದೆ, ಅದಕ್ಕಾಗಿ ಎರಡು ಮಾತುಗಳನ್ನು ಹೆಚ್ಚಿಗೆ ಆಡಿದೆ ಅಷ್ಟೇ!’

‘ಹಾಗೇನಿಲ್ಲ, ಯಾಕೋ ಹೊಸಮನುಷ್ಯ ಆಗಬೇಕು ಅಂತ ಅನಿಸ್ತು ನೋಡು. ಹೀಗೆ ಎಷ್ಟು ಜನಕ್ಕೆ ಅನಿಸುತ್ತದೆ ಹೇಳು...’

‘ಯೆಸ್, ಅದೂ ನನ್ನಂಥವನಿಗೆ ಅನ್ನಿಸಿದ್ದು ಒಂದು ಪವಾಡವೇ ಅಂದುಕೋ’

‘ಪವಾಡಗಳನ್ನು ಮೌಢ್ಯದ ಕನ್ನಡಿಯಲ್ಲೇ ನೋಡಬೇಕಿಲ್ಲ, ಪೌರ್ಣಿಮೆಯಂದೇ ಬುದ್ಧನಿಗೆ ಯಾಕೆ ಜ್ಞಾನೋದಯ ಆಯ್ತು ಅಂದುಕೊಂಡು ಅದನ್ನೂ ಪವಾಡಕ್ಕೆ ಆರೋಪಿಸಿ ವಾದ ಮಾಡೋದು ಸಿಲ್ಲಿ ಎನಿಸಿಬಿಡುತ್ತದೆ. ಅಸಲಿಗೆ ಬುದ್ಧನಾಗುವುದಕ್ಕೆ ಯಾವ ಹುಣ್ಣಿಮೆಯೂ ಬೇಕಿಲ್ಲ; ಬುದ್ಧನಾಗುವುದಕ್ಕೆ ಮನುಷ್ಯನಷ್ಟೇ ಬೇಕು... ಅದೂ ಹೊಸ ಮನುಷ್ಯ’

‘ಓಕೆ, ಎಲ್ಲಾ ಫೋನಲ್ಲೇ ಮಾತನಾಡಿಬಿಟ್ಟರೆ ಹೇಗೆ, ಅವಾಗಲಿಂದ ಪಬ್ಲಿಷರ್ ಒಬ್ಬರ ಕಾಲ್ ವೈಟಿಂಗ್ ಇದೆ. ಸಂಜೆ ಹೇಗೂ ಕಾಫೀ ಡೇಲಿ ಸಿಗ್ತೀವಲ್ಲ? ಬಾಯ್ ಕಣೆ ಲವ್ಯೂ...’
*
‘ಹೆಲೋ, ಹೌದು ಸಾರ್.’
‘ನನ್ನನ್ನು ಬೇರೆ ಗ್ರಹಕ್ಕೆ ಉಡಾವಣೆ ಮಾಡಿದ್ರು ಸರ್, ಅದಕ್ಕೆ ಫೋನ್ ತೆಗೆಯಲು ಸಾಧ್ಯವಾಗಲಿಲ್ಲ’
‘ಅರವತ್ತು ಪದ್ಯಗಳನ್ನಷ್ಟೇ ಆಯ್ಕೆ ಮಾಡಿದ್ದೀನಿ.’
‘ಅಷ್ಟೇ ಸಾಕು ಸರ್, ನಮ್ಮ ಭಗ್ನ ಕವಿತೆಗಳಲ್ಲಿ ಜಗತ್ತನ್ನು ಗೋಳುಹೊಯ್ದುಕೊಳ್ಳೋದು ಬೇಡ ಅಲ್ವಾ? ಹಹ್ಹಹ್ಹ’
‘ಲೇಔಟ್ ನೀವೇ ಮಾಡಿಸಿ ಒಂದು ಪ್ರೂಫ್ ಕೊಡಿ ಸಾಕು, ಒಂದೆರಡು ದಿನಗಳಲ್ಲಿ ಏನಾದರೂ ತಿದ್ದುಪಡಿ ಇದ್ದರೆ ತಿದ್ದಿ ಕಳಿಸುವೆ.’
‘ಹೌದು ಒಂದು ಸಾವಿರ ಪ್ರತಿಗಳು ಸಾಕು.’
‘ಈ ಕಾಲದಲ್ಲಿ ಕವಿತೆ ಓದೋರು ಕಡಿಮೆ, ಅಂತಹುದರಲ್ಲಿ...’
‘ಹೌದು ಸರ್ ಸದ್ಯದಲ್ಲೇ ಬಿಡುಗಡೆ...’
ಫೋನ್ ಕರೆ ಕಟ್ ಆಗುತ್ತಲೇ ನೀರನ್ನು ಫ್ಲಷ್ ಮಾಡುತ್ತಾನೆ...
***© Copyright 2022, All Rights Reserved Kannada One News