ಹೇ ರಾಮ್: ಸರ್ಜಾಶಂಕರ ಹರಳೀಮಠ ಅವರ ಕಥೆ

ಹೇ ರಾಮ್: ಸರ್ಜಾಶಂಕರ ಹರಳೀಮಠ ಅವರ ಕಥೆ

Updated : 16.10.2022

ಆ ಕ್ಷಣದಲ್ಲಿ ರುದ್ರಮ್ಮ, ಗಾಂಧಿಯ ಹೆಸರೇಳಿದರೆ ಉರಿದೇಳುತ್ತಿದ್ದ ಘಟ್ಟದ ಕೆಳಗಿನ ಮಾರಪ್ಪನ ತಾಯಿ ಸೂರಕ್ಕೆಯಂತಾಗಿದ್ದಳು. ಸೂರಕ್ಕೆ ಕಾಲದಲ್ಲಾದರೂ ಗಾಂಧಿಯಿದ್ದ, ಆದರೆ ಆ ಗಾಂಧಿ ಈ ದೇಶದಲ್ಲಿ ಸತ್ತುಹೋಗಿ ಎಷ್ಟೋ ಕಾಲವಾಯಿತು ಎಂಬ ಕನಿಷ್ಟ ತಿಳಿವಳಿಕೆ ಕೂಡ ರುದ್ರಮ್ಮನಿಗಿರಲಿಲ್ಲ. ಆಕಸ್ಮಾತ್ ಗ್ರಾಚಾರ ಕೆಟ್ಟು  ಗಾಂಧಿಯೇನಾದರೂ ಮತ್ತೆ ಹುಟ್ಟಿ ಬಂದಿದ್ದರೆ ತನ್ನ ಕೈಲಿದ್ದ ಬಾರುಕೋಲಿನಿಂದಲೇ ಆತನ ಜೀವ ತೆಗೆಯುವಷ್ಟು  ಆಕೆ ರೋಷಗೊಂಡಿದ್ದಳು. ‘ಏನೋ ಹೋರಾಟ ಪಾರಾಟ ಅಂತ ಉಪಯೋಗಕ್ಕೆ ಬಾರದಿದ್ದು ಮಾಡ್ಕೊಂಡು ಮುರ್ಹೋತ್ತು ಬೀದಿ ಮೇಲಿರೊ ಗಂಡ ಈಗ ನೋಡಿದ್ರೆ ಇರೋ ಚೂರು ಜಮೀನನ್ನೇ ದಾನ ಮಾಡ್ತೀನಿ ಅಂತಿದಾನೆ, ನಮ್ಮ ಹೊಟ್ಟೇಲ್ ಹುಟ್ಟಿದ ಸೂರಿ ಎಲ್ಲಿಗೋಗಿ ಸಾಯ್ಬೇಕು? ಮನೇಲಿದ್ದಾಗಲೆಲ್ಲಾ ಅದೊಂದು ಪುಸ್ತಕ ಹಿಡ್ಕಂಡಿರ್ತಾನೆ, ಆ ಪುಸ್ತಕ ಓದಿ ಓದೀನೇ  ಆತ ಹಾಳಾಗಿದ್ದು. ಆ ಬೇವರ್ಸಿ ಲಚ್ಚರ್ರು ಕೃಷ್ಣಮೂರ್ತಿ ಕೊಟ್ಟಿದ್ದಂತೆ. ಬರ್ಲಿ ಅವನು ಮನೆಗೆ. . .’ ಹೀಗೆ ಉರಿಯುವ ಬಿಸಿಲಲ್ಲಿ ಬೆವರಿನಿಂದ ತೋಯ್ದು ತೊಪ್ಪೆಯಾಗಿ ಎತ್ತುಗಳಿಗೆ ನೇಗಿಲು ಕಟ್ಟಿಕೊಂಡು ಗದ್ದೆಯನ್ನು ಉಳುತ್ತಿದ್ದ ರುದ್ರಮ್ಮ ತನ್ನೊಳಗೇ ಬಯ್ಗುಳದ ಸುರಿಮಳೆ ಸುರಿಸುತ್ತಿದ್ದಳು. ರುದ್ರಮ್ಮನ ಬದುಕನ್ನು ಹಿಂಸಿಸುತ್ತಿದ್ದ ಆ ಗಾಂಧಿಯ ಪುಸ್ತಕ ಆಕೆಯ ಗಂಡ ರಾಮಪ್ಪನಿಗೆ ಬಂದಿದ್ದರ ಹಿನ್ನೆಲೆಯಲ್ಲಿ ಒಂದಷ್ಟು  ಹೊತ್ತು ಚಪ್ಪರಿಸಿ ಕಾಲ ದೂಡಬಹುದಾದ ಸ್ವಾರಸ್ಯದ ಸಂಗತಿಗಳಿವೆ.   

ಸ್ವತಃ ತನ್ನ ಹೆಂಡತಿಗೂ ಅರ್ಥವಾಗದ ರಾಮಪ್ಪನ ಕ್ಯಾರೆಕ್ಟರೇ ವಿಚಿತ್ರ. ಒಂಥರಾ ಅಸಂಗತ ನಾಟಕದ ನಾಯಕನಂತೆ. ತನ್ನ ಹರೆಯದಲ್ಲಿ ಇಡೀ ಜಿಲ್ಲೆಯ ಪೈಲ್ವಾನರನ್ನು ಮಣಿಸಿದ್ದ ಜಗಜಟ್ಟಿ ಈ ರಾಮಪ್ಪ. ಸರ್ಕಾರಿ ನೌಕರನಾಗಿದ್ದರೆ ಆಗಲೇ ನಿವೃತ್ತನಾಗಿರುತ್ತಿದ್ದ. ಆತ ಓದಿದ್ದೇ ನಾಲ್ಕನೇ ಕ್ಲಾಸು, ಹೀಗಿರುವಾಗ ಸರ್ಕಾರಿ ನೌಕರಿ ಹೇಗೆ ಸಿಗುತ್ತದೆ. ನೋಡಲು ನಮ್ಮ ಹೊಲೆಯರ ಮಾದನ ಅಣ್ಣನಂತಿದ್ದಾನೆ. ವೇಷಭೂಷಣದಲ್ಲಿ ಥೇಟು ಹಮಾಲಿಯೇ. ಹಳೆಯದೊಂದು ಪಂಚೆ, ಅದರ ಮೇಲೊಂದು ಮಾಸಿದ ಅಂಗಿ, ಆಗಾಗ ಪಂಚೆಯ ಬದಲಿಗೆ ಎಂದೋ ಕೊಂಡ ಪೈಜಾಮ, ಹೆಗಲ ಮೇಲೊಂದು ಟವೇಲು. ಆಗಾಗ ದೊಡ್ಡ ಚಡ್ಡಿ ಹಾಕಿಕೊಳ್ಳುವುದೂ ಇದೆ. ಆತ ಯುವಕನಾಗಿದ್ದಾಗ ಸಂಘದ ಕಾರ್ಯಕರ್ತನಾಗಿದ್ದನಂತೆ.  ಮಸೀದಿ ಒಡೆದ ದಿನ ಸಂಘಕ್ಕೆ ಬೆನ್ನು ಹಾಕಿದವನು ಆಮೇಲೆ ಆ ಕಡೆ ತಿರುಗಿಯೂ ಮುಖ ಹಾಕಲಿಲ್ಲವಂತೆ. ಆದರೂ ಗಟ್ಟಿಮುಟ್ಟಾದ ಚಡ್ಡಿ ಯಾಕೆ ಹಾಳು ಮಾಡಬೇಕು ಎಂಬುದು ಆತನ ಥಿಯರಿ.

ರಾಮಪ್ಪ ಹಮಾಲಿ ಥರ ಕಾಣಿಸುವುದು ಮಾತ್ರವಲ್ಲ, ಆತ ಒಂದಷ್ಟು ವರ್ಷ ಹಮಾಲಿ ಕೆಲಸವನ್ನೂ ಮಾಡಿದವನೇ. ಆದರೆ ಹೆಚ್ಚು ಕೆಲಸ ಮಾಡಿದ್ದು ಮೇಸ್ತ್ರಿ ಉಸ್ಮಾನ್ ಸಾಬರ ಬಳಿಯೇ. ಆಗಲೇ ಈ ಘಟನೆ ನಡೆದಿದ್ದು. ಒಂದು ಮಧ್ಯಾಹ್ನ ಬುತ್ತಿ ಉಂಡು ಕಲ್ಲುಚಪ್ಪಡಿಯ ಮೇಲೆ ಕಾಲಿನ ಮೇಲೆ ಕಾಲು ಹಾಕಿಕೊಂಡು ರಾಮಪ್ಪ ಎಲೆಯಡಿಕೆ ಜಗಿಯುತ್ತಿದ್ದ. ಆ ಹೊತ್ತಿಗೆ ಕೆಲಸ ಪರೀಕ್ಷಿಸಲು ಬಂದ ಇಂಜಿನಿಯರಿಗೆ ರಾಮಪ್ಪ ಕುಳಿತ ರೀತಿ ನೋಡಿ ಸಹಜವಾಗಿಯೇ ಪಿತ್ಥ ನೆತ್ತಿಗೇರಿದೆ. ಒಬ್ಬ ಸರ್ಕಾರಿ ಅಧಿಕಾರಿಯ ಮುಂದೆ ಕೂಲಿ ಕೆಲಸ ಮಾಡೋನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಂದರೆ ಏನು? ಬಂದವನೇ ‘ಯಾವನೋ ನೀನು’ ಎಂದು ರಾಮಪ್ಪನಿಗೆ ಒದ್ದಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಾಮಪ್ಪ ತನ್ನ ಪಕ್ಕದಲ್ಲಿಯೇ ಇದ್ದ ಕಬ್ಬಿಣದ ಹಾರೆಗೋಲನ್ನು ಎತ್ತಿಕೊಂಡು ಇಂಜಿನಿಯರತ್ತ ಮುನ್ನುಗ್ಗಿ ‘ನೀನು ತಪ್ಪಾಯ್ತೆಂದು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಾನು ಜೈಲಿಗೆ ಹೋದರೂ ಪರವಾಗಿಲ್ಲ, ನಿನ್ನ  ಬುರುಡೆ ಒಡೆಯುತ್ತೇನೆ’ ಎಂದು ಹೂಂಕರಿಸಿದ್ದಾನೆ. ವಿಶ್ರಾಂತಿ ಪಡೆಯುತ್ತಿದ್ದ ಕೂಲಿಯಾಳುಗಳೆಲ್ಲ ಗದ್ದಲ ಕೇಳಿ ಬಂದರೂ ರಾಮಪ್ಪನನ್ನು ತಡೆಯುವ ಧೈರ್ಯ ಸಾಲದೆ ದೂರವೇ ನಿಂತಿದ್ದಾರೆ. ಆಗಲೇ ಆತನ ರೌದ್ರಾವತಾರ ನೋಡಿ ತನ್ನ ಸರ್ಕಾರಿ ಅಧಿಕಾರಿಯ ರೂಪವನ್ನು ಕಳಚಿಕೊಂಡು ನರಮನುಷ್ಯನಾಗಿ ನಡುಗುತ್ತಿದ್ದ ಇಂಜಿನಿಯರು ರಾಮಪ್ಪನ ಕಾಲಿಗೆ ಬಿದ್ದು ಅಂಗಲಾಚಿದ್ದಾನೆ.

ರಾಮಪ್ಪನದು ಇದೇ ಸಮಸ್ಯೆ. ಆತನಿಗೆ ನಾಗರಿಕ ಜಗತ್ತಿನ ನಯ ನಾಜೂಕು ಒಂಚೂರೂ ಗೊತ್ತಿಲ್ಲ.  ಕಳೆದ ಎಂಟತ್ತು ವರ್ಷಗಳಿಂದ ಆತನಿಗೆ ಹೋರಾಟಗಾರನ ತರಹದ್ದೊಂದು ಇಮೇಜು ಬೇರೆ ಸೃಷ್ಟಿಯಾಗಿದೆ. ರಾಮಪ್ಪನಿಗೆ ಮೊದಲಿಂದಲೂ ಒಂದು ವಿಚಿತ್ರ ಕಾಯಿಲೆ. ಊರಲ್ಲಿ ಯಾರಿಗಾದರೂ ಏನೋ ಸಮಸ್ಯೆ ಇದೆ ಎಂದು ತಿಳಿದರೆ ಸಾಕು. ಅಲ್ಲಿಗೆ ಓಡೋಡಿ ಹೋಗುತ್ತಾನೆ. ಸಮಸ್ಯೆ ಬಗೆಹರಿಯುವವರೆಗೂ ಆತನಿಗೆ ಮನೆ, ಹೆಂಡತಿ, ಮಕ್ಕಳು ಯಾವುದೂ ನೆನಪಾಗುವುದಿಲ್ಲ ಯಾವುದೋ ಕಾಲದಲ್ಲಿ ಅಗಸರ ಗಣೇಶನ ಅಜ್ಜನಿಗೆ ಸರ್ಕಾರ ಒಂದೆರೆಡೆಕರೆ ಜಮೀನು ಮಂಜೂರು ಮಾಡಿತ್ತು. ‘ಆ ಜಾಗ ನಂದು’ ಎಂದು ಪಕ್ಕದ ಜಮೀನಿನ ವೀರಭದ್ರೇಗೌಡ ತಹಶೀಲ್ದಾರಿಗೆ ಒಂದಷ್ಟು ತಿನ್ನಿಸಿ ದಾಖಲೆ ಸೃಷ್ಟಿ ಮಾಡಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಜಮೀನಿನ ಒಳಗೆ ಯಾರೂ ಹೋಗದ ಹಾಗೆ ಅಗಳು ತೆಗೆಯಲು ಜೇಸಿಬಿ  ಯಂತ್ರದೊಂದಿಗೆ  ಪೊಸೀಸರನ್ನು ಜತೆಗಿಟ್ಟುಕೊಂಡೇ ಬಂದಿದ್ದ. ಅದೂ ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ. ಸುದ್ಧಿ ಹೇಗೊ ರಾಮಪ್ಪನಿಗೆ ತಿಳಿಯಿತು. ಅಲ್ಲಿಗೆ ಹೋದ ರಾಮಪ್ಪ ‘ ನಿಮಗೆ ಇಲ್ಲಿ ಅಗಳು ತೆಗೆಯಲು ನಾನು ಬಿಡೊಲ್ಲ, ಬೇಕಾದ್ರೆ  ನನ್ನ ಹೆಣದ ಮೇಲೆ ಜೇಸಿಬಿ  ಓಡಿಸಿ’ ಎಂದು ಅದರ ಮುಂದೆ ಮಲಗಿಯೇಬಿಟ್ಟ.                                                                                

ರಾಮಪ್ಪ ಎಂತಹ ಹುಚ್ಚ ಎಂಬುದು ಗೌಡನಿಗೆ ಗೊತ್ತಿರದ ಸಂಗತಿಯೇನಲ್ಲ. ಜೇಸಿಬಿ ವಾಪಸು ಹೋಯ್ತು. ಮಾರನೇ ದಿನಾನೆ ಗಣೇಶನನ್ನು ಕರೆದುಕೊಂಡು ಪೇಟೆಯ ಕೋರ್ಟಿಗೆ ಹೋದ ರಾಮಪ್ಪ ವೀರಭದ್ರೇಗೌಡನ ಮೇಲೆ ಕೇಸು ಹಾಕಿಸಿದ. ಆ ಜಮೀನಿನ ದಾಖಲೆ ಗಣೇಶನ ಹೆಸರಿಗೆ ಬರೋವರೆಗೂ ತನ್ನ ಮನೆ ಮಠ ಬಿಟ್ಟು ಓಡಾಡ್ತಾನೆ ಇದ್ದ. ರಾಮಪ್ಪನ ಇಂತಹ ಕಾಯಿಲೆ ಆತನನ್ನು ರಾಜಕಾರಣಕ್ಕೂ ಕರೆದು ತಂದಿತು. ಜನ ಆತನನ್ನು ಗ್ರಾಮ ಪಂಚಾಯತಿಗೆ ಅವಿರೋಧವಾಗಿ ಆಯ್ಕೆ ಮಾಡಿ ಅಧ್ಯಕ್ಷನನ್ನಾಗಿಯೂ ಮಾಡಿದರು. ಅದೆಲ್ಲಾ ಒಂದಿಪ್ಪತ್ತು ವರ್ಷದ ಹಿಂದಿನ ಕಥೆ. ಈಗ ರಾಮಪ್ಪ ಅಂದ್ರೆ ಎಲ್ಲಾ ರಾಜಕೀಯ ಪಕ್ಷದೋರು ದೂರಾನೆ ಓಡ್ತಾರೆ.  ಆದರೆ ರಾಮಪ್ಪನಿಗೆ ರಾಜಕಾರಣವೇ ಬೇಕಿಲ್ಲ. ಹಕ್ರ್ಯುಲಸ್ ಹೊತ್ತ ಭೂಭಾರದಷ್ಟು ಸಮಸ್ಯೆಗಳು ಪರಿಹಾರ ಬೇಡುತ್ತಾ ಸದಾ ಆತನ ಹೆಗಲ ಮೇಲೆ ಕುಳಿತಿರುತ್ತವೆ. ಅದು ಎಂತಹುದೇ ಕಛೇರಿಯಿರಲಿ, ಆತ ಎಷ್ಟೇ ದೊಡ್ಡ  ಅಧಿಕಾರಿ  ಇರಲಿ, ರಾಮಪ್ಪ  ನೇರ  ಕಛೇರಿಯೊಳಗೆ ನುಗ್ಗುತ್ತಾನೆ. ಇಂತಹ ಹಮಾಲಿ ಥರದ ಮನುಷ್ಯ ಈ ರೀತಿ  ತಮ್ಮ ಕಛೇರಿಗೆ ಬಂದು ತಮ್ಮನ್ನು ಪ್ರಶ್ನಿಸುವುದೇ ಉದ್ಧಟತನವೆಂದು ಭಾವಿಸುವ ಅಧಿಕಾರಿಗಳು ಅಸಹನೆಯಿಂದ ಏನೋ ಒಂದು ಸಬೂಬು ಹೇಳುತ್ತಾರೆ. ರಾಮಪ್ಪ ತಾಳ್ಮೆ ಕಳೆದುಕೊಂಡು ಜಗಳಕ್ಕೆ ಇಳಿಯುತ್ತಾನೆ. ಹಾಗಾಗಿ ಸಭ್ಯ ಅಧಿಕಾರಿಗಳು ರಾಮಪ್ಪನನ್ನು ಕಂಡರೆ ಹೇಸಿಗೆ ತುಳಿದವರಂತೆ ಮುಖ ಕಿವುಚುತ್ತಾರೆ.

ವಿಚಿತ್ರವೆಂದರೆ ರಾಮಪ್ಪನನ್ನು ಮೆಚ್ಚುವ ಅಧಿಕಾರಿಗಳೂ ಇದ್ದಾರೆ. ಒಮ್ಮೆ ಹೀಗೆ ಆಯಿತು. ದಂಡಿಬೈಲಿನ  ಕೆಳಗಿನ ಬೀದಿಯ ವಿಧವೆ ಬೂಬಮ್ಮನ ಬಗರ್ ಹುಕುಮ್ ಜಮೀನಿನ ಸಕ್ರಮಕ್ಕೆ ತಹಶೀಲ್ದಾರಿಗೆ ಅರ್ಜಿ ಕೊಟ್ರೆ ತನಗೆ ಬರಬೇಕಾದ ಮಾಮೂಲು ಬರದೆ ಆತ ಅದನ್ನು ಏನೋ ತಕರಾರು ಎತ್ತಿ ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದ. ಬೂಬಮ್ಮ ತಹಶೀಲ್ದಾರ್ ಕಛೇರಿಗೆ ಅಲ್ದೂ ಅಲ್ದು ಕೊನೆಗೆ ‘ಏನಾರು ಮಾಡೆಂದು’ ರಾಮಪ್ಪನಿಗೆ ಗಂಟುಬಿದ್ಲು. ರಾಮಪ್ಪ ವಿಚಾರ ತಿಳಿದು ಮೂರ್ನಾಲ್ಕು ಬಾರಿ ಅರವತ್ತು ಮೈಲಿ ದೂರದ ಪೇಟೆಯಲ್ಲಿರುವ ಡೀಸಿ ಕಛೇರಿಗೆ ಹೋಗಿಬಂದ. ಹೋದಾಗಲೆಲ್ಲಾ ಅಲ್ಲಿನ ಗುಮಾಸ್ತ ‘ಸಾಹೇಬ್ರು ಮೀಟಿಂಗನಲ್ಲಿದ್ದಾರೆ’ ಎನ್ನುತ್ತಿದ್ದ. ಈ ಬಾರಿ ಹೋದಾಗಲೂ ಆ ಗುಮಾಸ್ತ ಹಾಗೇ ಹೇಳಿದ. ರಾಮಪ್ಪನ ಮೈ ಉರಿದುಹೋಯಿತು. ಬಾಗಿಲಲ್ಲಿದ್ದ ಜವಾನನನ್ನು ದೂಡಿ ನೇರ ಮೀಟಿಂಗು ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿದ್ದಾನೆ. ಮೀಟಿಂಗಿನಲ್ಲಿದ್ದ ಅಧಿಕಾರಿಗಳು ಏನಾಗುತ್ತಿದೆ ಎಂದು ಅರಿಯುವ ಮೊದಲೇ ಡೀಸಿಯ ಕಾಲರ್ ಹಿಡಿದು ‘ ಯಾವಾಗ ಬಂದ್ರೂ ಮೀಟಿಂಗು ಮೀಟಿಂಗು, ಬೆಂಕಿ ಹಾಕಿ ನಿಮ್ಮ ಮೀಟಿಂಗಿಗೆ’ ಎಂದು ಅಬ್ಬರಿಸಿದ್ದಾನೆ. ತಮ್ಮ ಕೆನ್ನೆಗೇ ಯಾರೋ ಪಟಾರೆಂದು ಹೊಡೆದಂತೆ ದಿಗ್ಭ್ರಾಂತರಾದ ಅಧಿಕಾರಿಗಳಿಗೆ ಜೀವ ಬಂದಿದ್ದು ಡೀಸಿಯ ಸೆಕ್ಯೂರಿಟಿ ಪೋಲಿಸು ಬಂದು ರಾಮಪ್ಪನನ್ನು ಹಿಡಿದ ನಂತರವೇ. ‘ಅರೆಸ್ಟು, ಅವನ್ನ ಅರೆಸ್ಟು ಮಾಡಿ’ ಎಂದು ಕೂಗಲು ಹೋದರೆ ಅವರ ಗಂಟಲಿನಿಂದ ದನಿಯೇ ಬರುತ್ತಿಲ್ಲ.  ಆಗಷ್ಟೇ ಐಯೇಸ್ ಪಾಸು ಮಾಡಿ ಸೇವೆಗೆ ಸೇರಿದ್ದ ಆ ಚಿಗುರುಮೀಸೆಯ ಡೀಸಿಯ ತಲೆಯೊಳಗಿನ ರಕ್ತಚಲನೆಯೇ ನಿಂತಂತೆ, ಹೇಗೆ ಪ್ರತಿಕ್ರಿಯಿಸಬೇಕೆಂಬುದೇ  ತೋಚದೆ ಸಭೆಯನ್ನು ಬರಕಾಸ್ತುಗೊಳಿಸಿ ಅಧಿಕಾರಿಗಳನ್ನು ಹೊರಗೆ ಕಳಿಸಿದ್ದಾನೆ. ಒಂದರೆಕ್ಷಣ ಮಂಕು ಕವಿದಂತೆ ಕುಳಿತವನು ಸಾವರಿಸಿಕೊಂಡು ಪೊಲೀಸನಿಗೆ ರಾಮಪ್ಪನನ್ನು ಬಿಟ್ಟು ಹೊರಹೋಗುವಂತೆ ಸೂಚಿಸಿದ್ದಾನೆ. ರಾಮಪ್ಪನನ್ನು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿ ಆತನ ಸಮಸ್ಯೆ ತಿಳಿದುಕೊಂಡು ಅಧಿಕಾರಿಯಿಂದ ಫೈಲ್ ತರಿಸಿಕೊಂಡು ಸಹಿ ಹಾಕಿದ್ದಾನೆ. ಅದುವರೆಗೂ ಗಂಭೀರನಾಗಿದ್ದ  ರಾಮಪ್ಪ ಡೀಸಿ ಕಛೇರಿಯಿಂದ ಕೆಳಗಿಳಿದು ರಸ್ತೆಗೆ ಬಂದವನೇ ಗಳಗಳನೆ ಅತ್ತಿದ್ದಾನೆ.      

ಈ ರಾಮಪ್ಪ ಎಂಟ್ರಿಯಾಗದ ಕ್ಷೇತ್ರವೇ ಇಲ್ಲ. ರಸ್ತೆ ಕಾಮಗಾರಿಯಿಂದ ಹಿಡಿದು ಸಣ್ಣಪುಟ್ಟ ಮೋರಿ ರಿಪೇರಿಯ ಖರ್ಚುವೆಚ್ಚದ ವಿವರಗಳೆಲ್ಲ ಆತನಿಗೆ ಬೇಕು. ಈ ಪರಿಯ ಕಿರಿಕಿರಿ ತಡೆಯಲಾಗದೇ ಆಗ ಎಮ್ಮೆಲ್ಲೆ ಆಗಿದ್ದ ಬಸವರಾಜ ತನ್ನ ಚೇಲಾನೊಬ್ಬನ ಮೂಲಕ ಕೇಸು ಹಾಕಿಸಿ ರಾಮಪ್ಪನನ್ನು ಸ್ಟೇಷನ್ನಿನಲ್ಲಿ ಎರಡು ದಿನ ಕೂಡಿ ಹಾಕಿಸಿ ಆತನ ಮೂಳೆ ಮುರಿಯುವಂತೆ ಹೊಡೆಸಿದ್ದಲ್ಲದೆ ಆತನನ್ನು  ಪೊಲೀಸ್ ಠಾಣೆಯ ರೌಡಿ ರಿಜಿಸ್ಟರ್‍ಗೂ ಸೇರಿಸಿಬಿಟ್ಟಿದ್ದ. ಒಂದೆರೆಡು ವರ್ಷಗಳ ನಂತರ, ಒಮ್ಮೆ ನಗರದಿಂದ ಠಾಣಾಪರಿವೀಕ್ಷಣೆಗೆಂದು ಬಂದ ದೊಡ್ಡ ಸಾಹೇಬರು ಹೀಗೆ ರೌಡಿ ರಿಜಿಸ್ಟರಿನ ಮೇಲೆ ಕಣ್ಣಾಡಿಸಿದವರು, ಅಲ್ಲಿ ದಾಖಲಾದ ರಾಮಪ್ಪನ ಸಮಾಜ ವಿರೋಧಿ ಕೃತ್ಯಗಳನ್ನು ಗಮನಿಸಿ ಪೋಲಿಸರನ್ನು ಕರೆಸಿ ಮನಬಂದಂತೆ ಉಗಿದಿದ್ದಾರೆ. ಅಷ್ಟಕ್ಕೂ ಆ  ದಡ್ಡ ಪೊಲೀಸರು ಅದರಲ್ಲಿ ಬರೆದದ್ದೇನೆಂದರೆ.. ‘ಊರ ಗೌಡ ಒತ್ತುವರಿ ಮಾಡಿಕೊಂಡ ಗಣೇಶನ ಜಮೀನನ್ನು ರಾಮಪ್ಪ ಆತನಿಗೆ ಬಿಡಿಸಿಕೊಟ್ಟ’ , ‘ದಂಡಿಬೈಲಿನಿಂದ  ಮುನ್ನೂರು ಮೈಲಿ ದೂರದ ಬೆಂಗಳೂರಿಗೆ ಹತ್ತಾರು ಬಾರಿ ಬರಿಗಾಲಲ್ಲೆ ನಡೆದು ಹೋಗಿ ಹೋಗಿ ಮುಖ್ಯಮಂತ್ರಿ ಜೆ.ಎಚ್.ಪಟೇಲರಿಗೆ  ಮನವಿ ಕೊಟ್ಟೂ ಕೊಟ್ಟೂ  ದಂಡಿಬೈಲಿಗೆ ಹೆರಿಗೆ ಆಸ್ಪತ್ರೆ ಮಂಜೂರು ಮಾಡಿಸಿಕೊಂಡು ಬಂದ’ ಇತ್ಯಾದಿ.

ಹೀಗಿರುವಾಗ ರಾಮಪ್ಪನ ಚಟುವಟಿಕೆಗಳನ್ನು ನೋಡಿ ಥ್ರಿಲ್ಲಾದ ಪಾರ್ಟ್ ಟೈಂ ಲೆಕ್ಚರರ್ ಕೃಷ್ಣಮೂರ್ತಿ ‘ನೀವು ದಂಡಿಬೈಲಿನ ಗಾಂಧಿಯೇ’ ಎಂದು ಬಣ್ಣಿಸಿ ಗಾಂಧಿಯ ಆತ್ಮಚರಿತ್ರೆಯ ಪುಸ್ತಕವೊಂದನ್ನು ತನ್ನ ಹಸ್ತಾಕ್ಷರದೊಂದಿಗೆ ಆತನಿಗೆ ನೀಡಿದ್ದು ಮುಂಗಾರು ಮಳೆಗೆ ಹದಗೊಂಡ ಹೊಲದಲ್ಲ್ಲಿ ಎಡವಟ್ಟಿನ ಬೀಜ ಬಿತ್ತಿದಂತಾಯಿತು.    

ರಾಮಪ್ಪ ಈಗ ಕಾಲಿಗೆ ಚಪ್ಪಲಿಯನ್ನು ಹಾಕುವುದಿಲ್ಲ. ಎಲೆಯಡಿಕೆ ಜಗಿಯುವುದಿಲ್ಲ. ದಿನಕ್ಕೆ ಒಂದೇ ಬಾರಿ ಊಟ. ಮುಖ್ಯವಾಗಿ ಮೊದಲಿನಂತೆ ಹೊಡೆದಾಟವಿಲ್ಲ.  ಇದನ್ನು ಸಮರ್ಥಿಸುವಂತೆ ಒಂದು ಘಟನೆ ನಡೆಯಿತು. ದಂಡಿಬೈಲಿನ ಜಿಲ್ಲಾ ಪಂಚಾಯ್ತಿ ಸದಸ್ಯ ರುದ್ರೇಶನಿಗೆ ತಾನು ಕಣ್ಣಿಟ್ಟಿದ್ದ ರೆವಿನ್ಯೂ ಜಾಗದಲ್ಲಿ ವೀರಭದ್ರೇಗೌಡರ ಕೆಲಸದಾಳು ತಿಮ್ಮಪ್ಪನ ಸಂಸಾರ ಗುಡಿಸಲು ಕಟ್ಟಿಕೊಂಡು ಇರಲಾರಂಭಿಸಿದ ಮೇಲೆ ಆತನ ತಲೆ ಕೆಟ್ಟು ಹೋಗಿದೆ. ಒಂದು ರಾತ್ರಿ ಸುರಿಯೋ  ಮಳೇಲಿ ಬಂದು ಗುಡಿಸಲು ಕಿತ್ತಾಕಿದ್ದಾನೆ. ಮನೆಗೆ ಬಂದು ಗೋಳೋ ಎಂದು ಅತ್ತ ತಿಮ್ಮಪ್ಪನ ಹೆಂಡತಿ ಲಕ್ಷ್ಮಿಯನ್ನು ಸಮಾಧಾನಿಸಿದ  ರಾಮಪ್ಪ ಆಕೆಯೊಂದಿಗೆ ಸ್ಥಳಕ್ಕೆ ಬಂದಿದ್ದಾನೆ. ಆಗಲೇ ರುದ್ರೇಶ ತಿಮ್ಮಪ್ಪನನ್ನು ಆತನ ಗುಡಿಸಿಲಿನಿಂದ ದರದರ ಎಳೆದುಕೊಂಡು ಬರುತ್ತಿದ್ದಾನೆ. ಇದನ್ನು ನೋಡಿಯೇ ರಾಮಪ್ಪನ ರಕ್ತ ಕುದ್ದು ಹೋಗಿದೆ. ಎಂದಿನಂತೆ ರಾಮಪ್ಪ ಅಲ್ಲಿಯೇ ಇದ್ದ ಅಕೇಶಿಯಾ ಮರದ ಹರೆಯೊಂದನ್ನು ಮುರಿದುಕೊಂಡು ರುದ್ರೇಶನ ಬುರುಡೆ ಒಡೆಯಲು  ಧಾವಿಸಿದ್ಧಾನೆ. ಯಾಕೊ ಆ ಕ್ಷಣ ಆತನಿಗೆ ಗಾಂಧಿಯ ನೆನಪಾಗಿ ಕೈಯಲ್ಲಿದ್ದ ಮರದ ಹರೆಯನ್ನು ಕೆಳಕ್ಕೆ ಬಿಸಾಡಿ ನೇರ ಗ್ರಾಮ ಪಂಚಾಯಿತಿ ಕಛೇರಿಯ ಮುಂದೆ ಹೋಗಿ ಏಕಾಂಗಿಯಾಗಿ ಆ ಸುರಿಯುವ ಮಳೆಯಲ್ಲಿಯೇ ಧರಣಿ  ಕುಳಿತಿದ್ದಾನೆ.

ಅಂದು ಒಂದು ಪವಾಡವೇ ನಡೆದು ಹೋಗಿದೆ. ಆ ದಿನ ವಿಶೇಷ ಮೂಡಿನಲ್ಲಿದ್ದ ‘ಲೋಕೋದ್ಧಾರ’ ದಿನಪತ್ರಿಕೆಯ ಬಾತ್ಮೀದಾರ ರಂಗನಾಥ ರಾತ್ರೋರಾತ್ರಿ ಆ ಸ್ಪಾಟಿಗೆ ಬಂದು ರಾಮಪ್ಪನ ಫೋಟೊ ತೆಗೆದು ನಾಲ್ಕು ಕಾಲಮ್ಮಿನ ದೊಡ್ಡ ನ್ಯೂಸೊಂದನ್ನೇ ಮಾಡಿದ್ದಾನೆ. ದಿನಬೆಳಗಾಗುವುದರೊಳಗಾಗಿ ಹೋರಾಟಗಾರ ರಾಮಪ್ಪನ ಸುದ್ದಿ ಇಡೀ ನಾಡಿಗೆ ಹರಡಿದೆ. ಆನಂತರ ರಾಮಪ್ಪನ ಈ ಪರಿಯ ಹೋರಾಟ ನಿರಂತರವಾಯಿತು ಎಂದೇ ಹೇಳಬಹುದು. ಊರಿಗೆ ಒಂದೂ ಬಸ್‍ಸ್ಟ್ಯಾಂಡು ಇಲ್ಲವೆಂದು, ಉದ್ಯೋಗ ಖಾತ್ರಿ ಕೆಲಸದಲ್ಲಿ ಕಂಟ್ರ್ಯಾಕ್ಟರು ಜೇಸಿಬಿ ಯಂತ್ರ ಬಳಸುತ್ತಾರೆಂದು,.. ಹೀಗೆ ದಿನಕ್ಕೊಂದು ಧರಣಿಗಳು ಆರಂಭವಾದವು. ಹಾಗೆಂದು ರಾಮಪ್ಪನ ಹೋರಾಟಗಳನ್ನು ಪತ್ರಿಕೆಗಳಲ್ಲಿ  ಓದಿ ಪ್ರೇರಣೆಗೊಂಡು, ದಂಡಿಬೈಲಿನ ಜನರೆಲ್ಲರೂ ಆತನ ಹೋರಾಟಕ್ಕೆ ಬೆಂಬಲವಾಗಿ ನಿಂತರು ಎಂಬುದು ಇದರರ್ಥವಲ್ಲ. ರಾಮಪ್ಪನ ಹೋರಾಟವನ್ನು ಆತ ಎದುರಿಗೆ ಸಿಕ್ಕಾಗಲೆಲ್ಲಾ ಬಾಯ್ತುಂಬಾ ಹೊಗಳುತ್ತ ಆತ ಬೆನ್ನು ಹಾಕಿದ ತಕ್ಷಣ ಆತನ ಹೋರಾಟವನ್ನು ಸಕಾರಣವಾಗಿ ಗೇಲಿ ಮಾಡುವ ಪ್ರಬುದ್ಧತೆ ಇಂಡಿಯಾದ ಎಲ್ಲ ನಾಗರಿಕರಂತೆ ಈಗ ಇವರಿಗೂ ಬಂದಿತ್ತು. ರಾಮಪ್ಪನ   ಹೋರಾಟದ   ಗುರಿಗಳಾದ   ಎಮ್ಮೆಲ್ಲೆ  ರಾಜಣ್ಣ,   ಜಿಲ್ಲಾ   ಪಂಚಾಯ್ತಿ   ಸದಸ್ಯ  ರುದ್ರೇಶ,  ಗ್ರಾಮ ಪಂಚಾಯ್ತಿ  ಅಧ್ಯಕ್ಷ ವೀರಭದ್ರೇಗೌಡ,  ಕಂಟ್ರ್ಯಾಕ್ಟರ್ ಉಮೇಶ ಹೀಗೆ ಎಲ್ಲರೊಂದಿಗೆ ಒಂದು ಸ್ನೇಹಸಂಬಂಧವನ್ನು ಸದಾ ಕಾಯ್ದುಕೊಳ್ಳುತ್ತ ಅವರ ಬಳಿ ರಾಮಪ್ಪನ ಹೋರಾಟಗಳನ್ನು ಬಗೆಬಗೆಯಾಗಿ ವಿಡಂಬಿಸುತ್ತ ಭವಿಷ್ಯದಲ್ಲಿ ಈ ನಾಯಕರಿಂದ ಬರಬಹುದಾದ ತೊಂದರೆ ತಾಪತ್ರಯಗಳಿಗೆ ಆಗಲೇ ನಿರೀಕ್ಷಣಾ ಜಾಮೀನು ಪಡೆಯುತ್ತಿದ್ದರು.   

ಇದರೊಂದಿಗೆ ‘ರಾಮಪ್ಪನ ಹೋರಾಟ ದಿಕ್ಕುತಪ್ಪಿದೆ’ ಎಂದು ಶೆಟ್ಟರ ಕಿರಾಣಿ  ಅಂಗಡಿಯ ಕಟ್ಟೆ ಮೇಲೆ ಕುಳಿತ ದಂಡಿಬೈಲಿನ ವಿಚಾರವಂತರು ಆಗಾಗ ಸಿಗರೇಟು ಸೇದುತ್ತ ಗಂಭೀರವಾಗಿ  ವಿಚಾರಮಂಥನ ನಡೆಸುವುದಿದೆ. ‘ಅಲ್ಲೋ, ನಮ್ಮೂರಲ್ಲಿ ಬಸ್ಟ್ಯಾಂಡ್ ಇಲ್ಲವೆಂದು ರಾಮಪ್ಪ ಹೋರಾಟ ಮಾಡಿದ್ದೇನೋ ಸರಿ. ಈಗ ಗ್ರಾಮ ಪಂಚಾಯ್ತಿಯಿಂದ ಒಂದು, ಶಾಸಕರ ಫಂಡಲ್ಲೊಂದು, ಎಂಪಿ ಫಂಡಲ್ಲಿ ಇನ್ನೊಂದು, ಹೀಗೆ ಮೂರು ಮೂರು ಬಸ್ಟ್ಯಾಂಡುಗಳು  ಒಂದರ ಪಕ್ಕ ಒಂದು ಬಂದಿದಾವೆ. ಮೂರು ಬಸ್ಟ್ಯಾಂಡು ಯಾಕೆ ಅಂತ ಮತ್ತ್ಯಾಕೆ ಹೋರಾಟ ಮಾಡ್ಬೇಕು, ಏನು ರಾಮಪ್ಪನ ಅಪ್ಪಂದಾ ದುಡ್ಡು. ಸರ್ಕಾರದ್ದು. ಹೋಗ್ಲಿ ಬಿಡೀ. ..’ ಇದು ಈ ವಿಚಾರವೇದಿಕೆಯ ಅನಧಿಕೃತ ಅಧ್ಯಕ್ಷನಂತಿರುವ ಪಿಗ್ಮಿ ಕಲೆಕ್ಟರ್ ಭಟ್ಟನ ತಕರಾರು.

‘ಕೆಲ್ಸ ಮಾಡ್ದೇ ಇದ್ರೂ ಮಾತ್ಮಾಗಾಂಧಿ ಉದ್ಯೋಗ ಖಾತ್ರಿ ಸ್ಕೀಮಲ್ಲಿ ನಮ್ಮೂರಿನ ಸುಮಾರು ಐವತ್ತು ಅರವತ್ತು ಜನರ  ಅಕೌಂಟಿಗೆ  ಕಂಟ್ರ್ಯಾಕ್ಟರ್ ಉಮೇಶ ನಿಯತ್ತಾಗಿ  ಜಮಾ ಮಾಡ್ತಾನೆ. ಅವನು ಜೆಸಿಬೀಲೆ ಆ ಕೆಲ್ಸ ಮಾಡ್ಸ್ಲಿ ಬಿಡಿ, ಅದರಿಂದ ಯಾರಿಗೆ ಪ್ರಾಬ್ಲಮ್ಮು . ಇದಕ್ಕೂ ಉಮೇಶ ಸರ್ಕಾರದ ದುಡ್ಡು ದರೋಡೆ ಮಾಡ್ತಿದಾನೆ, ಜನರನ್ನು ಹಾಳು ಮಾಡ್ತೀದಾನೆ ಅಂತ ರಾಮಪ್ಪ ಸ್ಟ್ರೈಕ್ ಮಾಡ್ತಾನಲ್ಲ, ಇವನಿಗೆ ಮಂಡೆ ಸಮ ಇದೆಯಾ? ರೌಡಿ ರಿಜಿಸ್ಟರಿಗೆ ಸೇರಿಸಿದ ಮೇಲಾದರೂ ಸರಿಯಾಗ್ತಾನೆ ಅಂದ್ಕೊಂಡ್ರೆ ಅವನ ಕಿರಿಕಿರಿ ಮತ್ತೂ ಜಾಸ್ತಿಯಾಗಿದೆಯಲ್ಲಾ ಬಟ್ರೆ’ ಭಟ್ಟನ ತಕರಾರಿಗೆ ಪೂರಕವಾಗಿ ಮೇರಿ ಕಾನ್ವೆಂಟಿನ ಡ್ರಿಲ್ ಮೇಷ್ಟ್ರು ಪ್ರಕಾಶನ ಅನುಮೋದನೆ. ರಾಮಪ್ಪ ಈ ಬಾರಿ ಗ್ರಾಮ ಪಂಚಾಯ್ತಿ ಎಲೆಕ್ಷನ್ನಿಗೆ ನಿಂತು ಠೇವಣಿ  ಕಳೆದುಕೊಂಡಿದ್ದೂ ಆಗಾಗ ಈ ವಿಚಾರವೇದಿಕೆಯಲ್ಲಿ ಚರ್ಚೆಗೆ ಬರುವ ಪ್ರಮುಖ ವಿಚಾರ. ಪಿಗ್ಮಿಭಟ್ಟನಿಗೆ ಸಂತೇಲಿ ರಾಮಪ್ಪ ಸಿಕ್ಕಾಗ ‘ ಏನು ಓಟ್ ಕೇಳಲಿಕ್ಕೆ ಮನೆ ಕಡೇ ಬರ್ಲೇ ಇಲ್ಲ’ ಎಂದು ಕೇಳಿದ್ರೆ ‘ನಾನು ಯಾರ ಮನೆಗೂ ಬರಲ್ಲ, ನಾನು ಬೇಕು ಅಂದ್ರೆ ಓಟು ಕೊಟ್ಟು ಗೆಲ್ಸಿ, ನಾನೇನು ನನ್ನ ಉದ್ದಾರಕ್ಕೆ ಎಲೆಕ್ಷನ್ನಿಗೆ ನಿಂತ್ಕಂಡಿಲ್ಲ’ ಅಂತಾ ಮುಖಕ್ಕೆ ಹೊಡ್ದಂಗೆ ಹೇಳಿದ್ನಂತೆ. ‘ಜನಕ್ಕೆ ಮಾನ ಮರ್ಯಾದೆ ಏನೂ ಇಲ್ಲವಾ? ಸರಿಯಾಗೆ ಬುದ್ಧಿ ಕಲ್ಸಿದ್ರು’ ಎಂದು ಭಟ್ಟ ತೀರ್ಪು ನೀಡಿದ. ರಾಮಪ್ಪನ ಎದುರು ಗೆದ್ದೋನು ಕಂಟ್ರ್ಯಾಕ್ಟರು ಉಮೇಶ. ‘ಇರೋ  ಐನೂರು ಓಟಿಗೆ ಆತ ಎಂಟು ಲಕ್ಷ ಖರ್ಚು ಮಾಡಿದ’ ಎಂದು ತಮಗೆ ಬಂದ ಮಾಹಿತಿಯನ್ನು ಗಿರಾಕಿಯಿಲ್ಲದ್ದರಿಂದ ವಿಚಾರಮಂಥನದೊಳಗೆ  ಮಧ್ಯಪ್ರವೇಶಿಸಿದ ಶೆಟ್ಟರು ಉತ್ಸಾಹದಿಂದ ಬಹಿರಂಗಪಡಿಸಿದರು.  

ಮೊದಮೊದಲು ಇದೇ ಪಿಗ್ಮಿಭಟ್ಟ, ಪ್ರಕಾಶ ಎಲ್ಲರೂ  ರಾಮಪ್ಪ ಕರೆದ ತಕ್ಷಣ ಬರೋರು. ಕಬಡ್ಡಿ ಪಂದ್ಯ ಇಡೋಣ , ಗಣಪತಿ ಫಂಕ್ಷನ್ ಮಾಡೋಣ ಅಂದ್ರೆ ಹತ್ತಾರು ಜನ ರಾಮಪ್ಪನ ಹಿಂದೆ ಸೇರೋರು. ಯಾವಾಗ  ಹೋರಾಟ, ಧರಣಿ  ಎಂದು ಊರ ಉಸಾಬರಿಯ, ಕಾಸಿನ ಪ್ರಯೋಜನವಿಲ್ಲದ ತಲೆಬಿಸಿಯ ಕೆಲಸ ಆರಂಭಿಸಿದನೋ  ಆಗ ಬರೋ ಜನಾನೂ ಕಡಿಮೆ ಆದ್ರು. ಈ ನಡುವೆ  ಪಿಗ್ಮಿಭಟ್ಟನ ತಮ್ಮನ ಟ್ರ್ಯಾಕ್ಟರನ್ನೇ  ಕಂಟ್ರ್ಯಾಕ್ಟರ್ ಉಮೇಶ ತನ್ನ ಕೆಲಸಗಳಿಗೆ ಬಾಡಿಗೆಗೆ ಪಡೆಯತೊಡಗಿದ. ಪ್ರಕಾಶನ ತಂಗಿಗೆ ಗ್ರಾಮ ಪಂಚಾಯತಿಯಲ್ಲಿ ಲೆಖ್ಖ ಬರಿಯೋ ಕೆಲ್ಸ ಸಿಕ್ತು. ಎಸ್ಸೆಲ್ಸಿ ಫೇಲಾಗಿ ಓಡಾಡುತ್ತಿದ್ದ ನಾಲ್ಕಾರು ಹುಡುಗರಿಗೆ ಎಮ್ಮೆಲ್ಲೆ ರಾಜಣ್ಣ ತಿಂಗಳಾ ಎರಡು ಸಾವಿರ, ಮೂರು ಸಾವಿರ ಕೊಡತೊಡಗಿದ. ರಾಜಣ್ಣ ದಂಡಿಬೈಲಿಗೆ ಬಂದಾಗ ರಾಜಣ್ಣನ ಹಿಂದೆ ಓಡಾಡುತ್ತಾ , ಸಭೆ ಸಮಾರಂಭಗಳಲ್ಲಿ ‘ರಾಜಣ್ಣಂಗೆ ಜೈ’ ಎಂದು ಜೈಕಾರ ಹಾಕುವುದಷ್ಟೇ ಅವರ ಕೆಲಸ. ಕೊನೆಗೆ ಹೋರಾಟದ ಕಣದಲ್ಲಿ ಊರ ಹನುಮಂತನಂತೆ ಏಕಾಂಗಿಯಾಗಿ ಉಳಿದವನು ರಾಮಪ್ಪ ಮಾತ್ರ.

ಗುಡಿಸಲು ಕಳಕೊಂಡ ತಿಮ್ಮಪ್ಪನಿಗೆ ನ್ಯಾಯ ದೊರಕಿಸುವ  ರಾಮಪ್ಪನ ಹೋರಾಟ ಮಾತ್ರ ವಿಚಿತ್ರ ತಿರುವು ಪಡೆದಿತ್ತು. ತಿಮ್ಮಪ್ಪನ ಪರವಾಗಿ ರಾಮಪ್ಪನ ಹೋರಾಟ ತೀವ್ರಗೊಂಡದ್ದನ್ನು ಗಮನಿಸಿ ತಿಮ್ಮಪ್ಪನನ್ನು ಗುಟ್ಟಾಗಿ ಕರೆದು ಆತನಿಗೆ ಕೈಕಾಲು ಮುರಿಯುವ ಬೆದರಿಕೆ ಹಾಕಿದ ರುದ್ರೇಶ ಜೊತೆಗೆ ಐದು ಸಾವಿರ ಕೊಟ್ಟು ಬೇರೆಲ್ಲಾದರೂ ಗುಡಿಸಲು ಕಟ್ಟಿಕೊಳ್ಳುವಂತೆ ತಾಕೀತು ಮಾಡಿದ್ದ. ಆ  ಪೂರ್ತಿ ಐದು ಸಾವಿರವನ್ನು ಶ್ರೀಮಂಜುನಾಥ ಬಾರಿಗೇ ಅರ್ಪಿಸಬೇಕೆಂದು ಹರಕೆ ಹೊತ್ತವನಂತೆ ತಿಮ್ಮಪ್ಪ ಮೂರು ಹೊತ್ತೂ ಬಾರಿನಲ್ಲಿಯೇ ಠಿಕಾಣ  ಹೂಡಿದ್ದ. ತನಗೆ ನ್ಯಾಯ ದೊರಕಿಸಬೇಕೆಂದು ತಾಲ್ಲೂಕಾಫೀಸು, ಡೀಸಿ ಆಫೀಸಿನ ಮುಂದೆ ಪ್ರತಿಭಟನೆಗೆ ಕರೆಕರೆದು ಪೀಡಿಸುತ್ತಿದ್ದ  ರಾಮಪ್ಪ ಬರುವ ಸೂಚನೆ ಸಿಕ್ಕ ತಕ್ಷಣ ಅಲ್ಲಿಂದ ನಾಪತ್ತೆ ಯಾಗುತ್ತಿದ್ದ. ಆದರೆ ಗುಡಿಸಲು ಕಿತ್ತ ಪ್ರಕರಣವನ್ನು ರಾತ್ರೋರಾತ್ರಿ ಸುದ್ಧಿ ಮಾಡಿದ ರಂಗನಾಥ ಮಾರನೇ ದಿನದಿಂದಲೇ ರಾಮಪ್ಪನ ಅಭಿಮಾನಿಯಾಗಿ ದಿನಬೆಳಗಾದರೆ ಆತ ಹಮ್ಮಿಕೊಳ್ಳುತ್ತಿದ್ದ ಧರಣಿ, ಪ್ರತಿಭಟನೆಗಳನ್ನು ಚಾಚೂತಪ್ಪದೆ ವರದಿ ಮಾಡಲಾರಂಭಿಸಿದ. ರಾಮಪ್ಪನ ಮೋಡಿಗೊಳಗಾಗಿ ಆತನಿಗೆ ಗಾಂಧಿಯ ಪುಸ್ತಕ ನೀಡಿದ ಕೃಷ್ಣಮೂರ್ತಿ ಸಮಯ ಸಿಕ್ಕಾಗಲೆಲ್ಲಾ ರಾಮಪ್ಪನ ಹೋರಾಟಗಳಲ್ಲಿ ಜತೆಗೂಡತೊಡಗಿದ. ಆದರೂ ಕೆಲವೊಮ್ಮೆ , ತಿಮ್ಮಪ್ಪನಂಥ ಪ್ರಕರಣಗಳು ನಡೆದಾಗ ಹೋರಾಟಗಳ ಬಗ್ಗೆಯೇ ಆತನಿಗೆ ಜಿಗುಪ್ಸೆ ಮೂಡುತ್ತಿತ್ತು, ರಾಮಪ್ಪನ ಬಗ್ಗೆ ಅನುಕಂಪವಾಗುತ್ತಿತ್ತು.      

ಇಂಥಹ, ಸದಾ ಬೀದಿ ಮೇಲೆಯೇ ಇರುತ್ತಿದ್ದ ರಾಮಪ್ಪನ ಸಂಸಾರವನ್ನು ಆತನ ಹೆಂಡತಿ ರುದ್ರಮ್ಮ ಹೇಗೋ ಹಲ್ಲುಕಚ್ಚಿ ಸಂಭಾಳಿಸುತ್ತಿದ್ದಳು. ರುದ್ರಮ್ಮನಿಗೆ ಇಷ್ಟವಿಲ್ಲದಿದ್ದರೂ ಗಂಡನ ಹಠದಿಂದ ಮೂವರು ಹೆಣ್ಣುಮಕ್ಕಳ ಮದುವೆ ಧರ್ಮಸ್ಥಳದ ಸಾಮೂಹಿಕ ಮದುವೆಗಳಲ್ಲೇ ಮುಗಿದುಹೋಗಿತ್ತು. ಇನ್ನು ಪಿಯುಸಿಯಲ್ಲಿ ಒಂದು ಪಾರ್ಟು ಹೋದ ಮಗ ಸೂರಿಯನ್ನು ಆಗಾಗ ರಾಮಪ್ಪ ತನ್ನ ಜೊತೆ ಹೋರಾಟಗಳಿಗೆ ಎಳೆದುಕೊಂಡು ಹೋಗುತ್ತಿದ್ದ. ಗಂಡನ ಹಾಗೆ ಈತನೆಲ್ಲಿ ಬೀದಿಭಿಕಾರಿಯಾಗುವನೋ ಎಂಬುದೇ ರುದ್ರಮ್ಮನಿಗೆ ದೊಡ್ಡ ಚಿಂತೆಯಾಗಿತ್ತು.

ಈಗ ಇಪ್ಪತ್ತೈದು ವರ್ಷದ ಹಿಂದೆಯೇ ರಾಮಪ್ಪ ಯಾರ್ಯಾರದೋ ಕೆಲಸ ಕಾರ್ಯಗಳಿಗೆ ದಿನಂಪ್ರತಿ ಕಛೇರಿಗೆ ಬರುವುದನ್ನು ನೋಡಿ ಆತನ ಪರಿಸ್ಥಿತಿ ಅರಿತು ಕರಗಿದ ಅಮಲ್ದಾರ್  ವೆಂಕೋಬರಾವ್ ಆತನಿಗೆ ಮೂರೆಕೆರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿದ್ದರು. ಈ  ಜಾಗದ  ಸಾಗುವಳಿ  ಕೆಲಸಗಳಲ್ಲಿ  ಗಂಡ  ಆಗಾಗ  ತನ್ನ  ಸಹಾಯಕ್ಕೆ ಬರುತ್ತಿದ್ದರೂ ಹೋರಾಟಗಳಿಗೆ ದಿನಕ್ಕೆ ನೂರು ವಿಷಯಗಳು ಸಿಗುತ್ತಿದ್ದ ಇತ್ತೀಚಿನ ದಿನಗಳಲ್ಲಿ ಮಾತ್ರ ಆತನನ್ನು  ಹೆಚ್ಚಿಗೆ ನೆಚ್ಚಿಕೊಳ್ಳುವಂತಿರಲಿಲ್ಲ. ಹಾಗಾಗಿ ಈಗ ಜಮೀನು ಸಾಗುವಳಿ ಹೆಚ್ಚು ಕಡಿಮೆ ರುದ್ರಮ್ಮನ ಮೇಲೆ ಬಿದ್ದಿತ್ತು.  ಆ ಮೂರೆಕೆರೆಯಲ್ಲಿ ಎಷ್ಟು ಗೇಯ್ದರೂ ಸಿಗುತ್ತಿದ್ದುದು ವರ್ಷಕ್ಕಾಗುವಷ್ಟು ಅನ್ನ ಮಾತ್ರ. ಹೀಗಾಗಿ ಸಾಲ ಮಾಡದ ವರ್ಷವೇ ಇರುತ್ತಿರಲಿಲ್ಲ. ಇವೆಲ್ಲದರ ಮಧ್ಯೆ ಗಂಡ ಹೊತ್ತು ಗೊತ್ತು ಇಲ್ಲದೆ ಮನೆಗೆ ಕರೆದುಕೊಂಡು ಬರುತ್ತಿದ್ದ ಏನೇನೋ ಸಮಸ್ಯೆಗಳನ್ನು ಹೊತ್ತು ತರುತ್ತಿದ್ದ ಜನರಿಗೆ ಊಟ ಉಪಚಾರ ಹೊಂದಿಸುವುದೇ ರುದ್ರಮ್ಮನ ಎಲ್ಲಾ ಚೈತನ್ಯವನ್ನು ತಿಂದು ಹಾಕುತ್ತಿತ್ತು. ಈಗ ದಿಢೀರನೆ ರಾಮಪ್ಪನಿಗೆ ವಿಚಿತ್ರವಾದ ಮಾನಸಿಕ ಕಾಯಿಲೆಯೊಂದು ಅಡರಿಕೊಂಡಿತ್ತು.  ‘ಇದು ನನ್ನ ಜಮೀನಲ್ಲ, ಸರ್ಕಾರದ್ದು, ನನಗಿಂತ ಬಡೋರು ದೇಶದಲ್ಲಿ ಸಾವಿರಾರು ಜನ ಇದಾರೆ. ನಮಗೆ ಒಂದೆಕೆರೆ  ಸಾಕು, ಉಳಿದ ಎರಡೆಕೆರೆಯನ್ನು ಇಬ್ಬರು  ಬಡೋರಿಗೆ ಕೊಡುತ್ತೀನಿ’  ಎಂದು ಹಾಡುಹಗಲೇ  ಬಡಬಡಿಸತೊಡಗಿದ್ದ. ಇಷ್ಟು ಹೇಳಿದ್ದು ಮಾತ್ರವಲ್ಲ, ತಿಮ್ಮಪ್ಪ ಮತ್ತು  ಮಾದನನ್ನು  ಈ ಜಮೀನಿನ ಫಲಾನುಭವಿಗಳು ಎಂದು ಹೆಂಡತಿಯೆದುರು ಘೋಷಿಸಿಬಿಟ್ಟಿದ್ದ. ಇದನ್ನು ಕೇಳಿದ ರುದ್ರಮ್ಮ ಭೂಮಿಗಿಳಿದುಹೋದಳು. ಬೆಳಬೆಳಿಗ್ಗೆಯೇ ಸೂರಿಯನ್ನು ಕರೆದು ಕೃಷ್ಣಮೂರ್ತಿಯನ್ನು ಎಲ್ಲಿದ್ದರೂ ಕರೆದುಕೊಂಡು ಬರುವಂತೆ ಅಟ್ಟಿದಳು.

ತಾನು ನೀಡಿದ ಗಾಂಧಿಯ ಪುಸ್ತಕ ಮಾಡಿದ ಅನಾಹುತಗಳನ್ನು ಬೈಯ್ಗುಳ, ಕೋಪ, ಕಣ್ಣೀರುಗಳ ಏರಿಳಿತಗಳಲ್ಲಿ ರುದ್ರಮ್ಮನಿಂದ ಕೇಳಿ ಕೃಷ್ಣಮೂರ್ತಿ ಬೆಚ್ಚಿದ. ತಾನೂ ಗಾಂಧಿಯ ಅಭಿಮಾನಿಯೇ, ಆದರೆ ರಾಮಪ್ಪನದು ತುಂಬ ಅತಿಯಾಯಿತು ಎಂದು ಆತನಿಗನಿಸತೊಡಗಿತು. ರಾಮಪ್ಪನನ್ನು ಸರಿ ಮಾಡುವ ಬಗೆ ಹೇಗೆ ಎಂದು ಕೃಷ್ಣಮೂರ್ತಿ ತಲೆಕೆಡಿಸಿಕೊಳ್ಳತೊಡಗಿದ. ವಾರವಿಡೀ ಈ ಬಗ್ಗೆ ಹಗಲು ರಾತ್ರಿ ಯೋಚಿಸಿದವನಿಗೆ ಕೊನೆಗೂ ಒಂದು ಯೋಜನೆ ಹೊಳೆದು ಅದರಿಂದಲೇ ಮನಸ್ಸು ಹಗುರವಾಗಿ ಈಗಲೇ ಆ ಬಗ್ಗೆ ಚರ್ಚಿಸಬೇಕೆಂದು ಸರಸರನೆ ಗಂಗಾಧರನ ಮನೆಯತ್ತ ನಡೆದ.                                                                                             

ಮೊದಮೊದಲು ಉತ್ಸಾಹದಿಂದ ರಾಮಪ್ಪನ ಹೋರಾಟಗಳ ಬಗ್ಗೆ ವರದಿ ಮಾಡುತ್ತಿದ್ದ ಗಂಗಾಧರ ಇತ್ತೀಚೆಗೆ ಯಾಕೊ ಮಂಕಾಗಿದ್ದ.  ಆತ ದಿನನಿತ್ಯ ಕಳಿಸುತ್ತಿದ್ದ ರಾಮಪ್ಪನ ಹೋರಾಟಗಳ ವರದಿಗಳಿಗೆ ಸಂಪಾದಕರು ಕತ್ತರಿ ಹಾಕಲು ಆರಂಭಿಸಿ ಈಗಂತೂ ವರದಿ ಪ್ರಕಟಿಸುವುದನ್ನೇ ನಿಲ್ಲಿಸಿದ್ದರು. ಗಂಗಾಧರ ಮೊಬೈಲಿನಲ್ಲಿ ಕೇಳಿದ್ದಕ್ಕೆ ‘ಊರು ಅಂದ ಮೇಲೆ ಹತ್ತಾರು ಸಮಸ್ಯೆ ಇದ್ದೇ ಇರ್ತವೆ. ಹಾಗಂತ ದಿನಾಲೂ ಅದನ್ನೇ ಪ್ರಕಟಿಸ್ತಾ ಇದ್ರೆ ಯಾರ್ರೀ ಓದ್ತಾರೆ? ಸೆಕ್ಸು, ಕ್ರೈಮು ಥರದ ಸುದ್ಧಿ ಇದ್ರೆ ಕಳ್ಸಿ. ಅದನ್ನೇ ಈಗ ಜನ ಕೇಳೋದು’ಎಂದು ವಿವೇಕದ ಮಾತನ್ನಾಡಿದ್ದರು. ಇದಕ್ಕೆ ಕಾರಣವಾಗಿರಬಹುದಾದ ಇನ್ನೂ ಒಂದು ಅನುಮಾನ ಗಂಗಾಧರನಿಗಿತ್ತು. ತನ್ನ ಪತ್ರಿಕೆಗೆ ಪೈಪೋಟಿ ಕೊಡುತ್ತಿದ್ದ ‘ಲೋಕೋದ್ಧಾರ’ ಪತ್ರಿಕೆಯ ಸಂಪಾದಕನಿಗೆ  ಕಂದಾಯ ಮಂತ್ರಿ ಬಸಪ್ಪ ಚಿನ್ನದ ಬೆಲ್ಟಿನ ವಾಚನ್ನು ಉಡುಗೊರೆ ಕೊಟ್ಟಿದ್ದಾರೆ’ ಎಂದು ‘ಕೆಂಪು ಕೂಗು’ ಪತ್ರಿಕೆ ಬರೆದಿತ್ತು. ಇದನ್ನು ಗಂಗಾಧರನ ಮನೆಯಲ್ಲೇ ಓದಿದ್ದ ರಾಮಪ್ಪ ತೀರಾ ತಲೆಕೆಡಿಸಿಕೊಂಡು ಪತ್ರಿಕೆಯವರನ್ನೆಲ್ಲ ಬೈಯುತ್ತ ಒಂದಷ್ಟು ದಿನ ತಿರುಗಾಡಿದ್ದ. ಇದು ನಮ್ಮ ಸಂಪಾದಕರ ಕಿವಿಗೆ ಬಿದ್ದಿರಬೇಕು ಎಂದು ಗಂಗಾಧರ ಎಣಿಸಿದ. ತನ್ನ ಉದ್ಯೋಗಕ್ಕೂ ಸಂಚಕಾರ ತರಬಹುದಾದ ಇದರಿಂದೆಲ್ಲ ಆತನಿಗೂ ರಾಮಪ್ಪನ ಬಗ್ಗೆ ಸಣ್ಣ ಅಸಹನೆ ಆರಂಭವಾಗಿತ್ತು.                                                                           

ಗಂಗಾಧರನೊಂದಿಗೆ ಚರ್ಚಿಸಿದ ಮೇಲೆ ಕೃಷ್ಣಮೂರ್ತಿಯ ಮಾಸ್ಟರ್ ಪ್ಲ್ಯಾನ್ ಒಂದು ಖಚಿತ ರೂಪ ಪಡೆಯತೊಡಗಿತು. ‘ಹೀಗೆ’ ಮಾಡಿದ್ದರಿಂದಲೇ ಅಧಿಕಾರಸ್ಥರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಸಾಹಿತಿ ಸಿದ್ಧಾರ್ಥರವರು ಈಗ ಏನೂ ಮಾತನಾಡದೆ ತಣ್ಣಗೆ ಮನೆಯಲ್ಲಿದ್ದಾರೆ  ಎಂದು ಕೃಷ್ಣಮೂರ್ತಿ ಹೇಳಿದ್ದು ಗಂಗಾಧರನಿಗೂ ಇದು ಒಳ್ಳೆಯ ಐಡಿಯಾನೇ ಎನಿಸಿ ತನ್ನ ಅನುಮೋದನೆ ನೀಡಿದ. ಈ ವಿಚಾರವನ್ನು ಪಿಗ್ಮಿಭಟ್ಟನಿಗೆ ತಿಳಿಸಿದಾಗ ‘ಎಷ್ಟೋ ವರ್ಷಗಳ ಹಿಂದೆ ಕೈಗಾ ಯೋಜನೆ ವಿರುದ್ಧದ ಹೋರಾಟದಲ್ಲಿ ಸರ್ಕಾರವನ್ನೇ ನಡುಗಿಸಿದ್ಧ ಹೋರಾಟಗಾರ, ಈಗ ಲೆಕ್ಚರ್ ಆಗಿರುವ ಡಾ.ನಾರಾಯಣ್ ಅವರನ್ನೂ ಕರೆಸಿದರೆ ಅವರ ಮಾತಿಗೆ ರಾಮಪ್ಪ ಎದುರಾಡಲಾರ’ ಎಂದು ತನ್ನ  ಸಲಹೆ ಮುಂದಿಟ್ಟ. ಅದು ಅವರಿಬ್ಬರಿಗೂ ಸರಿಯೆನಿಸಿತು.

ಕೃಷ್ಣಮೂರ್ತಿ ಮತ್ತು ಗಂಗಾಧರ ತನ್ನ ಮನೆಗೆ ಬಂದು ನೀಡಿದ ಪ್ರಸ್ತಾಪಕ್ಕೆ ಮೊದಲು ಒಲ್ಲೆನೆಂದ ರಾಮಪ್ಪ ಮತ್ತೆ ಮತ್ತೆ ಒತ್ತಾಯಿಸಿದಾಗ ಒಂದೆರಡು ದಿನ ಯೋಚಿಸಿ ತನ್ನ ತೀರ್ಮಾನ ತಿಳಿಸುವುದಾಗಿ ಅವರನ್ನು ಬೀಳ್ಕೊಟ್ಟ. ನಿರಾಶೆಯಿಂದ ಮರಳಿದ ಅವರು ರಾಮಪ್ಪ ಮೂರನೇ ದಿನವೇ ತಮ್ಮ ಪ್ರಸ್ತಾಪಕ್ಕೆ ಒಪ್ಪಿಗೆ ಕೊಟ್ಟಾಗ ಅಚ್ಚರಿಪಟ್ಟರು. ರಾಮಪ್ಪನನ್ನು ತಣ್ಣಗಾಗಿಸುವ ಈ ಯೋಜನೆ ಇಡೀ ದಂಡಿಬೈಲಿಗೆ ಹರಡಿ ಜನ ಕೃಷ್ಣಮೂರ್ತಿ ಮತ್ತು ಗಂಗಾಧರನ ಬುದ್ಧಿವಂತಿಕೆಯನ್ನು ಹೊಗಳಿದರು. ತಮ್ಮನ್ನು ನಿತ್ಯ ಕಾಡಿಸುವ ಭೂತವೊಂದರಿಂದ ಬಿಡುಗಡೆ ಪಡೆಯುತ್ತಿದ್ದೇವೇನೋ ಎನ್ನುವಂತೆ  ನೆಮ್ಮದಿಯ  ನಿಟ್ಟುಸಿರುಬಿಟ್ಟರು. ಕಾರ್ಯಕ್ರಮಕ್ಕೆ ಚಂದಾ ಎತ್ತಲು ಹೋದಾಗ  ನಿರೀಕ್ಷಿಸಿದ್ದಕ್ಕಿಂತ ಜಾಸ್ತಿ ಹಣವೇ ಸಂಗ್ರಹವಾಯಿತು.   

ಗಾಂಧಿ ಜಯಂತಿಯ ದಿನ ಹನುಮಂತನ ಗುಡಿಯ ಮುಂದಿನ ಬಯಲಿನಲ್ಲಿ ಹೋರಾಟಗಾರ ರಾಮಪ್ಪನನ್ನು ಸನ್ಮಾನಿಸಲು ದಂಡಿಬೈಲು ಸಜ್ಜಾಯಿತು. ಕೃಷ್ಣಮೂರ್ತಿ ಮತ್ತು ಗಂಗಾಧರನ ಜೊತೆಗೆ ಪಿಗ್ಮಿಭಟ್ಟ, ಪ್ರಕಾಶ ಎಲ್ಲರೂ ತುಂಬು ಉತ್ಸಾಹದಿಂದ ಓಡಾಡಿದರು.   ಕೃಷ್ಣಮೂರ್ತಿ ಅತಿಥಿಗಳನ್ನು ಆರಿಸುವಲ್ಲಿಯೂ ಬಹಳ ಎಚ್ಚರಿಕೆ ವಹಿಸಿದ್ದ. ರಾಮಪ್ಪನಿಗೆ ಇಷ್ಟವಾಗುವುದಿಲ್ಲವೆಂದು ರಾಜಕಾರಣಿಗಳನ್ನು ಕಾರ್ಯಕ್ರಮದಿಂದ ದೂರವೇ ಇಟ್ಟಿದ್ದನು. ಕಾರ್ಯಕ್ರಮಕ್ಕೆ ಅರ್ಧ  ಗಂಟೆಯಿರುವಾಗಲೇ ಡಾ.ನಾರಾಯಣ ಮತ್ತು ಸಿದ್ಧಾರ್ಥರವರು ದಂಡಿಬೈಲಿಗೆ  ಬಂದಿಳಿದರು.  ಸ್ವಲ್ಪ ಹೊತ್ತಿನಲ್ಲಿಯೇ ರಾಮಪ್ಪನ ಜಾತಿಯ ಮಠದ ಶ್ರೀಶ್ರೀಶ್ರೀ ಸರಳಾನಂದ ಸ್ವಾಮಿಗಳು ಹೊಚ್ಚಹೊಸ ಸಫಾರಿ ಕಾರಿನಲ್ಲಿ ಬಿಜಂಗೈಯಿಸಿದಾಗ ಜನ ಕಣ್ಣರಳಿಸಿ ನೋಡಿದರು. ಈ ಸ್ವಾಮೀಜಿಗಳನ್ನು ಆಮಂತ್ರಿಸಿದ್ದ ವಿಚಾರವನ್ನು  ಗಂಗಾಧರ ಮತ್ತು ಕೃಷ್ಣಮೂರ್ತಿ ರಾಮಪ್ಪನಿಗೆ ತಿಳಿಯಬಾರದೆಂದು ಬೇಕೆಂದೇ ರಹಸ್ಯವಾಗಿಟ್ಟಿದ್ದರು.         

ಮೈಕಿನಲ್ಲಿ ರಾಜಕುಮಾರನ ಹಾಡುಗಳು ಮೊಳಗಿದ್ದೇ ತಡ ದಂಡಿಬೈಲಿನ ಜನ ಜಾತ್ರೆಗೆ ನೆರೆಯುವಂತೆ ಬಯಲಿನಲ್ಲ್ಲಿ ಸೇರಿದರು. ರಸ್ತೆ ನಿರ್ಮಾಣದ ಕೆಲಸ ಮುಗಿಸಿ ಗುಡಿಯ ಮುಂದಿನ ಕೆರೆಯಿಂದ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ತಮ್ಮ ಬಿಡಾರಕ್ಕೆ ಹೊರಟಿದ್ದ ಐದಾರು ಮಂದಿ ಬಡಕಲು ಹೆಂಗಸರು ಮತ್ತು ಮೂರ್ನಾಲ್ಕು ಚಳ್ಳೆ ಪಿಳ್ಳೆಗಳು ಆರ್ಕೆಸ್ಟ್ರಾ ಕಾರ್ಯಕ್ರಮವೇನಾದರೂ ಇದೆಯಾ ಎಂದು ಕುತೂಹಲಗೊಂಡು ತಮ್ಮ ನೀರಿನ ಬಿಂದಿಗೆಗಳ ಸಮೇತ ವೇದಿಕೆಯ ಮುಂದಿನ ನೆಲದಲ್ಲಿಯೇ ಅಂಡೂರಿದರು.
ನಿರೂಪಕ ಗಂಗಾಧರ ಮೈಕಿನ ಮುಂದೆ  ಬಂದು ಹಾಡನ್ನು ಅಲ್ಲಿಗೇ ನಿಲ್ಲಿಸಿ ಅತಿಥಿಗಳನ್ನೆಲ್ಲ ವೇದಿಕೆಗೆ ಆಹ್ವಾನಿಸಿದ.     

ಕೃಷ್ಣಮೂರ್ತಿ ರಾಮಪ್ಪನ ಇದುವರೆಗಿನ ಹೋರಾಟಗಳು, ಅದರಿಂದ ದಂಡಿಬೈಲಿಗೆ ಆದ ಲಾಭಗಳನ್ನು ಸುದೀರ್ಘವಾಗಿಯೇ ಮಂಡಿಸಿದ. ಸಿದ್ಧಾರ್ಥರವರು ‘ಪ್ರತಿಯೊಂದಕ್ಕೂ ಬೀದಿ ಹೋರಾಟಕ್ಕಿಳಿಯದೆ ಅನುಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ದಾರಿಗಳನ್ನು’ ಉಪದೇಶಿಸಿದರು. ನಾರಾಯಣ್ ತಾವು ಹಿಂದೊಂದು ಕಾಲದಲ್ಲಿ ಮಾಡಿದ ಹೋರಾಟಗಳನ್ನು ಮೆಲುಕು ಹಾಕುತ್ತ, ಈಗ ಹೋರಾಟದ ಸ್ವರೂಪವನ್ನು ಬದಲಿಸಿಕೊಳ್ಳಬೇಕಾದ ಕಾಲ ಬಂದಿದೆಯೆಂದು ರಾಮಪ್ಪನನ್ನು ಉದ್ದೇಶಿಸಿ ಎಂಬಂತೆ ಕರೆ ನೀಡಿದರು. ಸ್ವಾಮೀಜಿಗಳು ‘ರಾಮಪ್ಪ ತನ್ನ ಜಮೀನನ್ನು ಯಾವ ಕಾರಣಕ್ಕೂ ದಾನ ಮಾಡಬಾರದೆಂದು, ಹಾಗೆ ಮಾಡಿದಲ್ಲಿ ಇಡೀ ದಂಡಿಬೈಲಿನ ಜನಕ್ಕೆ ಬಾಳ ಬೇಜಾರಾಗುವುದೆಂದೂ, ಮುಗ್ದ ಜನರನ್ನು ಬೇಸರಪಡಿಸಬಾರದೆಂದೂ’ ಆದೇಶಿಸಿದರು. ‘ವಯಸ್ಸಾಗಿರುವುದರಿಂದ ಇನ್ನುಮೇಲೆ ರಾಮಪ್ಪ ಹೋರಾಟಗಳನ್ನು ಮರೆತು ವಿಶ್ರಾಂತಿಯ ಜೀವನ ನಡೆಸಬೇಕೆಂದು’ ಅಪ್ಪಣೆ ಕೊಡಿಸಿದರು. ಗಂಡ ಕರೆಯದಿದ್ದರೂ ಜನರ ಮಧ್ಯ ಬಂದು ಕುಳಿತಿದ್ದ ರುದ್ರಮ್ಮ ಈ ಮಾತುಗಳನ್ನು ಕೇಳಿ ಗಂಟಲುಬ್ಬಿ, ಸ್ವಾಮೀಜಿಗಳಿಗೆ ಕುಳಿತಲ್ಲಿಯೇ ಅಡ್ಡಬಿದ್ದು, ಅದೇ ಕ್ಷಣದಲ್ಲಿ ಒಸರಿದ ಕಣ್ಣೀರನ್ನು ಸೆರಗಿನಂಚಿನಿಂದ ಒರೆಸಿಕೊಂಡಳು.  ಎಲ್ಲರ ಭಾಷಣಗಳು ಮುಗಿದ ಮೇಲೆ ರಾಮಪ್ಪನನ್ನು ವೇದಿಕೆಯ ಮಧ್ಯಭಾಗಕ್ಕೆ ಕರೆತಂದು ಸನ್ಮಾನಕ್ಕೆಂದೇ ಕಲ್ಯಾಣಮಂಟಪದಿಂದ ಬಾಡಿಗೆಗೆ ತಂದಿದ್ದ ಮಿರಮಿರಮಿಂಚುವ ರಾಜಾಸನದಲ್ಲಿ ಕುಳ್ಳಿರಿಸಲಾಯಿತು. ಈಗೀಗ ಎಲ್ಲರೂ ಇಷ್ಟಪಡುವ, ಶೋಕೇಸಿನಲ್ಲಿಡಲು ಸೂಕ್ತವಾಗುವಂತೆ ಎದೆಮಟ್ಟಕ್ಕೆ ಮಟ್ಟಸವಾಗಿ ಕತ್ತರಿಸಿದ, ಕೈಕಾಲುಗಳಿಲ್ಲದ, ನಸುನಗುತ್ತಿರುವ ಗಾಂಧಿಯ ಶಿರಭಾಗದ ಮೂರ್ತಿಯನ್ನು ಸಿದ್ಧಾರ್ಥರವರು ರಾಮಪ್ಪನಿಗೆ ಪ್ರದಾನ ಮಾಡಿದರು. ಸ್ವಾಮೀಜಿ ರೇಷ್ಮೆಯ ಶಾಲನ್ನು ಹೊದಿಸಿದರು. ನಾರಾಯಣ ಒಂದು ಹಣ್ಣಿನ ಬುಟ್ಟಿಯನ್ನು ನೀಡಿದರು. ಇದನ್ನೆಲ್ಲಾ ಶಾಂತರೀತಿಯಿಂದ ರಾಮಪ್ಪ ಸ್ವೀಕರಿಸಿದ್ದೇ ಕೃಷ್ಣಮೂರ್ತಿಗೆ ಅಚ್ಚರಿ ತಂದಿತು. ಇದೇ ಅಚ್ಚರಿಯಲ್ಲಿ  ರಾಮಪ್ಪನನ್ನು ಅವಲೋಕಿಸಿದ  ಕೃಷ್ಣಮೂರ್ತಿಗೆ ಆತನ ಮುಖದಲ್ಲಿ ಕಿಂಚಿತ್ತೂ ಧನ್ಯತೆಯ ಭಾವವಿಲ್ಲದೆ ಆ ಜಾಗದಲ್ಲಿ ಲೇವಡಿಯ ಕಿರುನಗೆ ಇರುವುದನ್ನು ಕಂಡು ಅವ್ಯಕ್ತ ಭಯದಿಂದ ಕಂಪಿಸಿದನು. ಆಗಲೇ ನಿರೂಪಣೆ ಮಾಡುತ್ತಿದ್ದ ಗಂಗಾಧರ ‘ಈಗ ಹೋರಾಟಗಾರ ರಾಮಪ್ಪನವರು ನಮ್ಮನ್ನುದ್ದೇಶಿಸಿ ಮಾತನಾಡುತ್ತಾರೆ’ ಎಂದು ಘೋಷಿಸಿದ. ದಂಡಿಬೈಲಿನ ಜನ ಪಾಪಪ್ರಜ್ಞೆಯಿಂದಲೋ, ಇಂದಿನಿಂದ ತಾವು ಈತನಿಂದ ಬಿಡುಗಡೆ ಹೊಂದುತ್ತೇವೆ ಎಂಬ ಖುಷಿಯಿಂದಲೋ ಜೋರಾಗಿ ಚಪ್ಪಾಳೆ ತಟ್ಟಿದರು.                                                              

ರಾಮಪ್ಪ ತಾನು ಹೊದ್ದಿದ್ದ ರೇಷ್ಮೆ ಶಾಲಿನ ಸಮೇತ ಮೈಕಿನ ಮುಂದೆ ಬಂದು ಗಂಟಲು ಸರಿಮಾಡಿಕೊಂಡು ‘ಎಲ್ಲರಿಗೂ ದೊಡ್ಡ ನಮಸ್ಕಾರ’ ಎಂದ. ‘ಇವನೇನು ಹೀಗೆ ಮಾತಾಡುತ್ತಿದ್ದಾನೆ’  ಎಂದು ಸ್ವಾಮೀಜಿ ಓರೆಗಣ್ಣಿನಲ್ಲೇ ದಿಟ್ಟಿಸಿದರು. ದಂಡಿಬೈಲಿನ ಜನರಿಗೆ ಒಂದು ಕ್ಷಣ ಪಿಚ್ಚೆನಿಸಿದರೂ ರಾಮಪ್ಪನ ವ್ಯಕ್ತಿತ್ವ ಗೊತ್ತಿದ್ದ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಆತನ ಮುಂದಿನ ಮಾತಿಗೆ ಕಾತರಿಸಿದರು.
‘ಹಿಂಗ್ ಹೇಳ್ತೀನಿ ಅಂತ ಬೇಜಾರ್ ಮಾಡ್ಕಂಬೇಡಿ, ನಿಜ ಹೇಳ್ಬೇಕು ಅಂದ್ರೆ ನಮ್ಮೂರಿನ ಕಂಟ್ರ್ಯಾಕ್ಟರ್ ಉಮೇಶನ ಹತ್ರಾನೆ ನನಗೆ ಸನ್ಮಾನ ಮಾಡ್ಸಿದ್ರೆ ಹೆಚ್ಚು ಖುಷಿಯಾಗ್ತಿತ್ತೇನೋ’ ಸ್ವಾಮೀಜಿಗಳಿಗೆ ಮುಜುಗರವಾದರೂ ತೋರ್ಪಡಿಸಿಕೊಳ್ಳದೆ ಗಂಭೀರವಾಗಿ ಕುಳಿತರು. ಇದು ಯಾಕೋ ಎಡವಟ್ಟಾಗುತ್ತಿದೆ ಎನಿಸಿ ಗಂಗಾಧರ ಕೃಷ್ಣಮೂರ್ತಿಯನ್ನು ಕಣ್ಣಲ್ಲೇ ಹುಡುಕಿ ಆತನೆಲ್ಲೂ ಕಾಣದೆ, ನಿಧಾನಕ್ಕೆ ವೇದಿಕೆಯ ಹಿಂದಿನಿಂದ ಬಯಲಿಗೆ ಬಂದನು.
“ನೋಡಿ, ಇನ್ನೂ ನಮ್ಮ ದೇಶ ಹೆಂಗಿದೆ. ಇಲ್ಲಿ ಕುಳ್ತಿರೋ ನಮ್ಮೂರಿನ ರಸ್ತೆ ಮಾಡಕ್ಕೆ ಬರಗಾಲದೂರಿಂದ  ಬಂದ  ಹೆಂಗ್ಸ್ರನ್ನ ನೋಡ್ರೀ, ಅವರಿಗೆ ಒಂದು ಮನೆ, ಒಂದು ಊರು ಅಂತಾ ಇದೆಯಾ? ಅವರ ಮಕ್ಕಳು ಇಸ್ಕೂಲು ಕಂಡೀದಾರಾ?” ರಾಮಪ್ಪ  ಕ್ಷಣ ನಿಲ್ಲಿಸಿ ಗಂಟಲು ಸರಿ ಮಾಡಿಕೊಂಡು ಮತ್ತೆ ಮುಂದುವರಿಸಿದ. “ಇವರಿಗೆ ಕೊಡಕ್ಕೆ ಸರ್ಕಾರದ ಹತ್ರ ದುಡ್ಡಿಲ್ಲ, ಆದ್ರೆ ಮಠಗಳಿಗೆ ಮಾತ್ರ ಕೋಟಿ ಕೋಟಿ ಕೊಡ್ತದೆ”  ಸ್ವಾಮೀಜಿಗಳಿಗೆ ಕಿರಿಕಿರಿಯಾಗತೊಡಗಿತು. ಎದ್ದು ಹೋದರೆ ಸಭಾ ಮರ್ಯಾದೆಗೆ ಕುಂದುಂಟಾಗುತ್ತದೆ. ಅವರು ಏನೂ ಮಾಡಲು ತೋಚದೆ ತನ್ನನ್ನು ಕರೆತಂದ ಕೃಷ್ಣಮೂರ್ತಿಗೆ ಹಿಡಿಶಾಪ ಹಾಕತೊಡಗಿದರು.

ನಮ್ಮ ಸಿದ್ಧಾರ್ಥನೋರು ಪಾಪ ಹಸುವಿನಂತೋರು. ರಾಜ್ಯೋತ್ಸವ ಪ್ರಶಸ್ತಿ ತಗಂಡು ತಣ್ಣಗಿದ್ದಾರೆ. ನಾರಾಯಣ್ ಅವ್ರಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರ್ತಿದೆ. ಅದನ್ನೇ ಎಣಿಸ್ತಾ ಕೂತ್ರೆ ತಿಂಗಳು ಆಗಿದ್ದೇ ಗೊತ್ತಾಗಲ್ಲಾ. ಅದ್ಕೆ ನಾನಂದದ್ದು ಕೆಲ್ಸ ಮಾಡ್ದೇ ಇದ್ರೂ ಜನರ ಅಕೌಂಟಿಗೆ ದುಡ್ಡು ಹಾಕೋ ನಮ್ ಉಮೇಶನೇ ವಾಸಿ ಅಂತಾ.  ಇದನ್ನೆಲ್ಲಾ ನಿಮಗೆ ಹೇಳಾಣ ಅಂತಾನೇ ಈ ಕಾರ್ಯಕ್ರಮಕ್ಕೆ ಒಪ್ಕಂಡೆ.” ಹೀಗೆಂದು ಒಂದೇ ಉಸಿರಿಗೆ ಮಾತನಾಡಿದ ರಾಮಪ್ಪ ರೇಶ್ಮೆಯ ಶಾಲನ್ನು ಕಿತ್ತು ಕೆಳಗೆ ಬಿಸಾಡಿದ.  ಸಿದ್ಧಾರ್ಥ ಮತ್ತು ನಾರಾಯಣರು ಲಕ್ವಾ ಹೊಡೆದಂತೆ, ಗಂಟಲಲ್ಲಿ ಉಸಿರೇ ಸಿಕ್ಕಿ ಹಾಕಿಕೊಂಡಂತೆ ಒದ್ದಾಡಿದರು.

ಜನ ದಿಗ್ಭಾಂತರಾಗಿ ನೋಡುತ್ತಿದ್ದಂತೆ ರಾಮಪ್ಪ “ಸನ್ಮಾನ ಅಂತೆ ಸನ್ಮಾನ , ಥೂ. . .” ಎಂದು ಕ್ಯಾಕರಿಸಿ ಉಗುಳುತ್ತ,  ತನ್ನ ಒಳಚಡ್ಡಿಯೊಂದನ್ನು ಬಿಟ್ಟು, ಉಳಿದಂತೆ ಅಂಗಿ ಪಂಚೆಯನ್ನೆಲ್ಲ ಕಿತ್ತು ಬಿಸಾಡಿ ವೇದಿಕೆಯ ಮೊದಲ ಸಾಲಿನಲ್ಲಿಯೇ  ಕುಳಿತಿದ್ದ ರಸ್ತೆ ನಿರ್ಮಾಣದ  ಹೆಂಗಸರ ಬಳಿಯಿದ್ದ ನೀರಿನ ಬಿಂದಿಗೆಯನ್ನು ಎತ್ತಿಕೊಂಡು ಬಂದು ಮೈಮೇಲೆ ಸುರಿದುಕೊಳ್ಳತೊಡಗಿದ.

ಆ ಇಳಿಹೊತ್ತಿನಲ್ಲಿ, ಈ ಲೋಕದಿಂದ  ಮರೆಯಾದರೂ ಇನ್ನೂ ಮಾಸದ ದಿಗಂತದ ತುಂಬ ಹರಡಿದ್ದ ಸೂರ್ಯನ ಪ್ರಭೆಯಲ್ಲಿ ನೀರಿನಿಂದ ತೋಯ್ದ ಆತನ ದೇಹ ಫಳ ಫಳ ಹೊಳೆಯುತ್ತಿತ್ತು. ರಾಮಪ್ಪನ ಆ  ಕಡುಕಪ್ಪು ಬಣ್ಣದ ಸ್ವಚ್ಛ್ಚ ದೇಹದ ಪ್ರಖರತೆಗೆ ದಂಗಾದ  ದಂಡಿಬೈಲಿನ ಜನ ಒಂದೆರಡು ಕ್ಷಣ ಆತನ ಮೋಡಿಗೆ ಒಳಗಾದವರಂತೆ ಕುಳಿತಿದ್ದು, ಮರುಕ್ಷಣದಲ್ಲಿ ಹಾಗೆ ಕುಳಿತ ತಮ್ಮ ಮೂರ್ಖತನಕ್ಕೆ ಬೈಯ್ದುಕೊಂಡು, ಈ ಭೂತದಿಂದ ತಮಗೆ ಮುಕುತಿಯೇ ಇಲ್ಲವೇನೋ ಎಂದು ಗೊಣಗುತ್ತ , ನಡೆದದ್ದೇ ದಾರಿಗಳಾಗುವ ಆ ಬಯಲಿನಲ್ಲಿ ಮನಬಂದತ್ತ ನಡೆದರು.                                                         
                         
                                                                                                             

© Copyright 2022, All Rights Reserved Kannada One News