ಹೇಗೆ ಹಾರಿಸಲಿ ಬಾವುಟ ?-ಬಿದಲೋಟಿ ರಂಗನಾಥ್ ಅವರ ಕವಿತೆ

ಹೇಗೆ ಹಾರಿಸಲಿ ಬಾವುಟ ?-ಬಿದಲೋಟಿ ರಂಗನಾಥ್ ಅವರ ಕವಿತೆ

Updated : 15.08.2022

ಹೇಗೆ ಹಾರಿಸಲಿ ಬಾವುಟ ?

ನನಗೆ
ತ್ರಿವರ್ಣ ಧ್ವಜದ ಮೇಲೆ ಅಪಾರ ಗೌರವ
ಆದರೆ ಹೇಗೆ ಹಾರಿಸಲಿ ?
ಗುಡಿಸಲುಗಳ ನಡು ಮುರಿದು
ಧರ್ಮಾಂಧತೆ ಹೆಗಲೇರಿ
'ಮುಟ್ಟಬಾರದವ' ಎಂಬ ಹಣೆ ಪಟ್ಟಿ
ಸುಡುತ್ತಿರುವಾಗ...

ಸ್ವತಂತ್ರಕ್ಕಾಗಿ ಮಡಿದ ಮಹಾತ್ಮರಿಗೆ
ನಿಜಕ್ಕೂ ಕರ ಜೋಡಿಸುವೆ
ಆಂಗ್ಲರ ಕಪಿ ಮುಷ್ಠಿ ತೊರೆದರೂ
ಜಾತಿ ಸುಡುವ ಕಿಚ್ಚು ಹೊತ್ತಲಿಲ್ಲವೆಂಬ
ಆತಂಕ
ಮಗ ಬೆಳೆದು ಜಾತಿ ತಿಳಿದು
ಎಷ್ಟು ನೊಂದುಕೊಳ್ಳುವನೆಂಬ
ಭಯ

ಹೇಗೆ ಹೇಳಲಿ ?
ಜಾತಿ ತಿಳಿಯದ ಹಾಲುಗಲ್ಲದ ಕೂಸಿಗೆ
ಸ್ವತಂತ್ರ ಸಿಕ್ಕಿದೆ ಅಂತ
ಜೋದಪುರದ ಶಾಲೆಯಲ್ಲಿ
ಮಗು 'ಕೊಡ 'ಮುಟ್ಟಿದ್ದಕ್ಕೆ
ಮಾಸ್ತರನ ಥಳಿತಕ್ಕೆ ಸತ್ತಿದೆ ಅಂತ

ಹೇಗೆ ಹಾರಿಸಲಿ ? ಬಾವುಟ
ಸೂರಿಲ್ಲದ ಮಕ್ಕಳು ಬೀದಿಯಲಿ
ಬಾವುಟವಿಡಿದು ಕೂತಿರುವಾಗ...
ತೊಟ್ಟ ಹರಿದ ಬಟ್ಟೆಗಳು
ಮಾನ ಮುಚ್ಚಲಾರದೆ
ಬಾವುಟವನ್ನೇ ಹೊದ್ದು ಕೂತ ಹೆಣ್ಣು
ಎದುರು ನಿಂತಿರುವಾಗ...

ಹೇಳಿ
ಹೇಗೆ ಹಾರಿಸಲಿ ಭಾವುಟ ?
ವೃದ್ಧರು ಬಿಕ್ಷುಕರು ದೇವರ ಗುಡಿಗಳ ಮುಂದೆ
ಸರತಿ ಸಾಲಿನಲಿ ಕೂತಿರುವಾಗ...
ಉಸಿರಾಡುವ ಗಾಳಿಗೂ
ಜಾತಿ ಸೂತಕ ಮುತ್ತಿ
ನರಳುವ ಮನುಷ್ಯರ ಮುಂದೆ

ಇವತ್ತು
ನನ್ನದೆನ್ನುವುದು
ನಾಳೆ
ನನ್ನದಲ್ಲ
ಪ್ರತಿ ಬಾಗಿಲುಗಳಿಗೂ ಬೀಗ ಬೇಕು !
ಕಾವಲುಗಾರನಿರಲೇ ಬೇಕು
ಹೀಗಿರುವಾಗ ಹೇಗೆ  ಹಾರಿಸಲಿ ಬಾವುಟ

ಠಾಣೆಗಳು ಝಣ ಝಣ ವೆನಿಸುವ
ಕೈಗಳನ್ನಿಡಿದು
ಬಡವನ ಚರ್ಮ ಸುಲಿಯುವುದನ್ನ ಕಂಡು
ಸತ್ಯಧರ್ಮವಿಲ್ಲದ ನ್ಯಾಯದ ಮುಂದೆ
ಹೇಗೆ ಹಾರಿಸಲಿ ಬಾವುಟ ?

ರಕ್ತಹೀರುವ ಪಿಪಾಸುಗಳು
ಎಲ್ಲಿ ಯಾವಾಗ ಬರುತ್ತಾರೋ
ಅಷ್ಟೇ ಯಾಕೆ ?
ತನಗನಿಸಿದ್ದನ್ನ ಅಭಿವ್ಯಕ್ತಿಸಲಾಗದ
ಮುಕ್ತತೆಯಿರದೆ
ಕೊರಗುವ ಕವಿಗಳ ಮುಂದೆ
ಹೇಗೆ ಹಾರಿಸಲಿ ಬಾವುಟ ?

ಒಂದೊಪ್ಪತ್ತಿಗೂ ತಾತ್ವಾರ ಪಡುವ
ಹಸಿವೊತ್ತವರು ಕಣ್ಣೀರು ಕಡೆದು
ಡೇರೆ ಹಾಕಿಕೊಂಡು ಊರೂರು ಸುತ್ತಿ
ಮೊಲೆ ಹಾಲು ಬತ್ತಿದ ಕಾರಣಕ್ಕೆ
ಜೋಳಿಗೆಯಲಿ ಮಲಗಿದ ಕೂಸು
ಅಳುತ್ತಿರುವಾಗ ..
ಹೇಗೆ ಹಾರಿಸಲಿ ಬಾವುಟ..

ಆದರೂ ನನಗೆ ಅಪಾರ ಗೌರವ
ನನ್ನ ದೇಶದ ಬಾವುಟದ ಮೇಲೆ.

-ಬಿದಲೋಟಿ ರಂಗನಾಥ್

© Copyright 2022, All Rights Reserved Kannada One News