ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

Updated : 05.09.2022

ಗೌರಿ ಲಂಕೇಶ್ ಅವರು ನನಗೆ ಪರಿಚಯ ಆದ ಎರಡು ವರ್ಷಗಳ ನಂತರ ಅವರೊಂದಿಗೆ ನನ್ನ ಒಡನಾಟ ಶುರುವಾಯಿತು. ಅಂದರೆ, 2006ರಿಂದ ನಾನು ಅವರಿಗೂ ಪರಿಚಯವಾದೆ; ಹತ್ತಿರವಾದೆ. ಅವರ ಪತ್ರಿಕೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಹನ್ನೊಂದು ತಿಂಗಳುಗಳಲ್ಲಿ ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅಥವಾ ಆ ಅಗತ್ಯ ಬರಲಿಲ್ಲ ಅಥವಾ ಸಮಯ ಇರಲಿಲ್ಲ. ಆದರೆ, ಆ ನಂತರ ನಾನು ಅವರಲ್ಲಿ ಕೆಲಸ ಬಿಟ್ಟಾಗಿನಿಂದ ಅವರು ನನ್ನೊಂದಿಗೆ ಮಾಡುತ್ತಿದ್ದ ಚರ್ಚೆಗಳು, ಬರೆಯಲು ಕೊಡುತ್ತಿದ್ದ ವಿಷಯಗಳು ಮತ್ತು ನಾಡಿನ ಭಿನ್ನ ಆಲೋಚನಾ ಕ್ರಮಗಳನ್ನು ಅವರು ಗ್ರಹಿಸುತ್ತಿದ್ದ ರೀತಿಯಿಂದಾಗಿ ಅವರ ವ್ಯಕ್ತಿತ್ವದ ಭಿನ್ನ ಆಯಾಮಗಳನ್ನು ಗ್ರಹಿಸಲು ಸಾಧ್ಯವಾಯಿತು.

ಪತ್ರಕರ್ತೆಯಾಗಿ ಗೌರಿ ಲಂಕೇಶ್:
ಗೌರಿ ಮೇಡಂ ಲಂಕೇಶ್ ವಾರ ಪತ್ರಿಕೆ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಕೆಲಸ ಮಾಡುತ್ತಿದ್ದ ಇಂಗ್ಲಿಷ್ ಪತ್ರಿಕೆಗಳನ್ನು ನಾನು ಗಮನಿಸಿಲ್ಲ; ನಾಡಿನ ದೊಡ್ಡ ಪತ್ರಿಕೆಯೊಂದರ ಸಂಪಾದಕರ ಮಗಳಾದ ಗೌರಿ ಅನುಭವಿಸಿರಬಹುದಾದ ಬದುಕಿನ ಐಶಾರಾಮದ ಬಗ್ಗೆ ಹತ್ತಿರದವರಿಂದ ಕೇಳಿದ್ದೆ. ಅವರು ಮದುವೆಯಾಗಿದ್ದ ಚಿದಾನಂದ್ ನಮ್ಮ ತಾಲೂಕಿನವರು ಎಂಬುದನ್ನು ಗೌರಿ ಮೇಡಮ್ಮೇ ಹೇಳಿದ್ದರು. ವಾರಕ್ಕೊಂದು ಸಾರಿಯಾದರೂ ಅವರ ಮತ್ತು ಚಿದಾನಂದ್ ನಡುವಿನ ಸ್ನೇಹದ ಬಗ್ಗೆ ಮಾತಾಡುತ್ತಿದ್ದರು. ‘ಚಿದು ಕೊಡಿಸಿದ ಡ್ರೆಸ್ಸು, ಚಿದು ಕೊಡಿಸಿದ ಲ್ಯಾಪ್‍ಟಾಪು..’ ಹೀಗೆ. ವಿಚ್ಚೇದನದ ನಂತರ ದಂಪತಿಗಳು ಇಷ್ಟು ಅನ್ಯೋನ್ಯ ಸ್ನೇಹವಿಟ್ಟುಕೊಂಡಿದ್ದನ್ನು ನಾನು ಆವರೆಗೆ ಕಂಡಿರಲಿಲ್ಲ. ಸಂಪಾದಕಿಯಾದಮೇಲೆ ಅವರ ಬದುಕು ಪೂರ್ತಿ ಬದಲಾಯಿತು ಅನ್ನುವುದನ್ನು ಹತ್ತಿರದಿಂದ ಬಲ್ಲವರು ಅನುಮೋದಿಸುತ್ತಾರೆ. ಈ ಬದಲಾವಣೆಗೆ ಲಂಕೇಶ್ ಪತ್ರಿಕೆಯ ವಾರಸುದಾರಿಕೆ ಎಷ್ಟು ಮುಖ್ಯವೋ, ಚಿದಾನಂದ್ ಅವರ ಪತ್ರಿಕಾ ಲೋಕದ ಗ್ರಹಿಕೆ ಕೂಡ ಅಷ್ಟೇ ಮುಖ್ಯ. ಗೌರಿ ಮೇಡಂ ಹೆಚ್ಚಿನ ಸಮಯ ಈ ಕುರಿತು ಅವರೊಂದಿಗೆ ಚರ್ಚಿಸುತ್ತಿದ್ದರು. ಆ ಮೊದಲಿನ ಅವರ ಜರ್ನಲಿಸಂ ಬಗೆಗಿನ ಗ್ರಹಿಕೆ ಸಂಪಾದಕಿಯಾದ ಮೇಲೆ ಸಂಪೂರ್ಣ ಬದಲಾಯಿತು.

ಪ್ರಭುತ್ವ ಕುರಿತ ನಿಷ್ಠುರ ವರದಿಗಾರಿಕೆಗೆ ಅವರೂ ರೇಷ್ಮೆ ಮತ್ತು ಸೋಮನಾಥ್ ಅವರನ್ನು ಆಶ್ರಯಿಸಿದ್ದರು. ರವೀಂದ್ರ ರೇಷ್ಮೆಯವರಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದ ಮೇಲೆ ಅವರು ಪತ್ರಿಕೆ ಕಡೆ ಸುಳಿಯಲಿಲ್ಲ ಮತ್ತು ಗೌರಿ ಮೇಡಂ ನಿಲುವುಗಳ ಮೇಲೆ ಅವರಿಗಿದ್ದ ಗುಮಾನಿಗಳು ದೂರ ಹೋಗುವಂತೆ ಮಾಡಿದವು. ರೇಷ್ಮೆ ಶ್ರೀರಾಮುಲು ಪಕ್ಕದಲ್ಲಿ ಓಡಾಟ ಶುರುಮಾಡುವ ಹೊತ್ತಿಗೆ ಗೌರಿ ಅವರು ಕರ್ನಾಟಕ ರಾಜಕಾರಣದ ಆಳ ಅಗಲಗಳನ್ನು ಚೆನ್ನಾಗಿಯೇ ಗ್ರಹಿಸಿದ್ದರು. ಈ ಕಾರಣಕ್ಕೆ ಮತ್ತೆ ರೇಷ್ಮೆಯವರನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಪ್ರತಿ ಭಾನುವಾರ ಪ್ರಿಂಟಿಗೆ ಹೋಗುತ್ತಿದ್ದ ಪತ್ರಿಕೆಯನ್ನು ಇಡೀ ವಾರ ಕುಳಿತು ಎಡಿಟ್ ಮಾಡುತ್ತಿದ್ದರು. ಜಿಲ್ಲಾ ವರದಿಗಾರರ ವರದಿಗಳನ್ನು ಸಂಪೂರ್ಣ ಅಕ್ಷರಕ್ಷರ ಓದಿ ತಿದ್ದುತ್ತಿದ್ದರು. ಕೆಲವೊಮ್ಮೆ ಇಡೀ ವರದಿಯನ್ನು ತಿರಸ್ಕರಿಸುತ್ತಿದ್ದರು. ಪಕ್ಕದಲ್ಲಿ ಇಂಗ್ಲಿಷ್ ಮತ್ತು ಕನ್ನಡ ನಿಘಂಟುಗಳನ್ನು ಇಟ್ಟುಕೊಂಡು ಬಾಷೆಯ ಆಯಾಮಗಳನ್ನು ಗ್ರಹಿಸಲು ಶ್ರಮಿಸುತ್ತಿದ್ದರು. ಇಡೀ ಪತ್ರಿಕೆಯಲ್ಲಿ ಒಂದೇ ಒಂದು ಪದ ಅವರಿಗೆ ಅರ್ಥವಾಗದಿದ್ದರೆ ಅರ್ಥ ಮಾಡಿಕೊಳ್ಳುವವರೆಗೆ ಅಥವಾ ಬದಲಿಸುವವರೆಗೆ ಬಿಡುತ್ತಿರಲಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಬಂದಾಗ ‘ಕೋಜಾ’ (ಕೋಮುವಾದಿ ಜಾತ್ಯತೀತ) ಸರ್ಕಾರ ಎಂದು ಬರೆದರು. (ಅವರಿಗೆ ಈ ಪದ ಕೊಟಿದ್ದು ನಾನೇ, ಗೆಳೆಯ ಮಂಜು ತಮಾಷೆಗೆ ಈ ಪದವನ್ನು ಲಾಂಚ್ ಮಾಡಿದರು. ನಾನು ಗೌರಿ ಮೇಡಂ ಗಮನಕ್ಕೆ ತಂದೆ. ಅವರು ಬಳಸಿದರು. ಆ ಪದ ಬಳಸಿದ್ದರ ಬಗ್ಗೆ ನನಗೀಗಲೂ ಗಿಲ್ಟ್ ಇದೆ) ಕುಮಾರಸ್ವಾಮಿ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಿದಾಗ ನನ್ನಿಂದಲೇ ನಾಡಿನ ಹಿರಿಯರ ಅಭಿಪ್ರಾಯ ಸಂಗ್ರಹಿಸಿ ಪ್ರಕಟಿಸಿದರು. ಜಾತಿ ಕಾರಣಕ್ಕೆ ಯಡಿಯೂರಪ್ಪನವರ ಪಟಾಲಂ ಇವರನ್ನು ಬಳಸಿಕೊಳ್ಳುವ ಪ್ಲಾನ್ ಹಾಕಿದಾಗ ಕೇರ್ ಮಾಡದೆ ಜಾಡಿಸಿದರು. ನಿರ್ಭೀತ ಪತ್ರಿಕೋದ್ಯಮದ ಮಾದರಿಯೊಂದನ್ನು ಕನ್ನಡಕ್ಕೆ ನೀಡಿದ ಲಂಕೇಶರ ವಾರಸುದಾರಿಕೆಯನ್ನು ಗೌರಿ ಮೇಡಂ ಸಮರ್ಥವಾಗಿ ನಿಭಾಯಿಸಿದರು ಹಾಗು ಲಂಕೇಶರಂತೆಯೇ ತಿಂಗಳ ಕೊನೆಯ ದಿನ ಪತ್ರಿಕಾ ಸಿಬ್ಬಂದಿಗೆ ತಪ್ಪದೆ ಸಂಬಳ ನೀಡುತ್ತಿದ್ದರು.

ತಮ್ಮ ಪ್ರಕಾಶನದಿಂದ ‘ಗೈಡ್’ ಎಂಬ ಸ್ಪರ್ಧಾ ಮಾರ್ಗದರ್ಶಿ ಮಾಸ ಪತ್ರಿಕೆಯನ್ನು ಅವರು ಪ್ರಾರಂಭಿಸಿದಾಗ ಲಂಕೇಶ್ ಪತ್ರಿಕೆಗಿಂತ ಹೆಚ್ಚಿನ ಹಣ ಬರಲು ಶುರುವಾಯಿತು. ಅದರಲ್ಲೂ ವಿದ್ಯಾರ್ಥಿಗಳಿಗೆ ಸತ್ಯವನ್ನು ಹೇಳುವ ಕೆಲಸ ಮುಂದುವರಿಸಿದರು. ಬಿ.ಚಂದ್ರೇಗೌಡ ಮತ್ತು ಎಚ್.ಎಲ್.ಕೇಶವಮೂರ್ತಿ ಅವರ ಕಾಲಮ್ಮುಗಳನ್ನು ಆಫೀಸಿನಲ್ಲಿ ಜೋರಾಗಿ ಓದಿ ಖುಷಿ ಪಡುತ್ತಿದ್ದ ಗೌರಿ ಮೇಡಂ ವಾರಕ್ಕೊಂದು ಕತೆ, ಕವಿತೆ ಪತ್ರಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಕವಿತಾ ಮೇಡಂ ಕಾರಣಕ್ಕೆ ಸಿನಿಮಾ ಬಗ್ಗೆಯೂ ಆಗಾಗ ಮಾತಾಡಲು ಶುರು ಮಾಡಿದ್ದರು.
ಭಾರತದಂತಹ ತಾರತಮ್ಯದ ನೆಲದಲ್ಲಿ ಪತ್ರಕರ್ತರಾದವರ ಕೆಲಸ ಏನು ಎಂಬುದನ್ನು ಗೌರಿ ಲಂಕೇಶ್ ಸರಿಯಾಗಿ ಅರಿತಿದ್ದರು. ಅವರು ಇತರೆ ಇಂಗ್ಲಿಷ್ ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖನಗಳಲ್ಲಿಯೂ ನಾವಿದನ್ನು ಕಾಣಬಹುದಾಗಿದೆ. ಲಂಕೇಶ್ ಪತ್ರಿಕೆ ‘ಗೌರಿ ಲಂಕೇಶ್ ವಾರಪತ್ರಿಕೆ’ ಆದಮೇಲೆ ಕರ್ನಾಟಕದ ಕೋಮು ಸೌಹಾರ್ದ ಚಟುವಟಿಕೆಗಳಿಗೆ ಹೆಚ್ಚು ಆಧ್ಯತೆ ನೀಡಲಾಯಿತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು, ತಮ್ಮ ಸಂಪಾದಕತ್ವದ ಪತ್ರಿಕೆಯ ಹೆಚ್ಚು ಪುಟಗಳನ್ನು ಅದಕ್ಕೆ ಮೀಸಲಿಟ್ಟಿದ್ದರು. ಈ ಕಾರಣಕ್ಕೆ ಕರ್ನಾಟಕದ ಕೋಮು ಸೌಹಾರ್ದ ಚಳವಳಿ ಹೆಚ್ಚು ಬಲ ಪಡೆಯಿತು ಮತ್ತು ರಾಜ್ಯದ ತುಂಬಾ ಕೋಮುವಾದದ ವಿರುದ್ಧ ಹೋರಾಡುತ್ತಿದ್ದವರೆಲ್ಲ ಗೌರಿ ಅವರಿಗೆ ಹತ್ತಿರವಾದರು.

ಹೋರಾಟಗಾರ್ತಿಯಾಗಿ ಗೌರಿ:
ಗೌರಿ ಲಂಕೇಶರಿಗೆ ಪತ್ರಿಕೆ ಮತ್ತು ಹೋರಾಟ ಬೇರೆ ಬೇರೆಯಾಗಿರಲಿಲ್ಲ. ಉತ್ತರಹಳ್ಳಿಯ ಮನೆಯಲ್ಲಿ ಒಬ್ಬರೇ ಬದುಕುತ್ತಿದ್ದುದರಿಂದ ದಿನದ ಹೆಚ್ಚು ಸಮಯ ಪತ್ರಿಕಾ ಕಚೇರಿ ಅಥವಾ ಪ್ರತಿಭಟನೆಗಳು ಅಥವಾ ಕೋರ್ಟು ಕೇಸುಗಳಲ್ಲಿ ಬ್ಯುಸಿಯಾಗಿರುತ್ತಿದ್ದರು. ಮೊದಮೊದಲು ವೇದಿಕೆಗಳ ಮೇಲೆ ಮಾತಾಡಲು ಹೆದರುತ್ತಿದ್ದವರು ವಾರದ ಎರಡು ಮೂರು ದಿನಗಳು ರಾಜ್ಯದ ಯಾವುದೋ ಊರಿನ ಯಾವುದಾದರೂ ಕಾರ್ಯಕ್ರಮದ ಅತಿಥಿಯಾಗಿರುತ್ತಿದ್ದರು. ನಗರಿ ಬಾಬಯ್ಯ, ನಗರಗೆರೆ ರಮೇಶ್, ಶಿವಸುಂದರ್, ವಿ.ಎಸ್.ಶ್ರೀಧರ್ ಥರದ ಹಿರಿಯ ಹೋರಾಟಗಾರರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದ ಗೌರಿ ಮೇಡಂ ಕುದುರೇಮುಖ ರಾಷ್ಟ್ರೀಯ ಉದ್ಯಾನದ ಆದಿವಾಸಿಗಳ ಹೋರಾಟ ಮತ್ತು ನಕ್ಸಲೀಯ ಹೋರಾಟಗಳ ಕಡೆ ಹೆಚ್ಚು ಗಮನ ಕೊಟ್ಟರು. ಇದರ ಪರಿಣಾಮವಾಗಿ ಸಾಕೇತ್ ರಾಜನ್ ಸಂದರ್ಶನವನ್ನೂ ಮಾಡಿ ಬಂದರು. ಅಲ್ಲಿಂದ ಮುಂದಕ್ಕೆ ಕೋಮುವಾದಿಗಳ ಉಗ್ರ ಟೀಕೆಗೆ, ವಿರೋಧಕ್ಕೆ ತುತ್ತಾದರು. ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಅವರನ್ನು ನಕ್ಸಲೀಯ ಚಟುವಟಿಕೆಯಿಂದ ಹೊರತರಲು ಶ್ರಮಿಸಿದಂತೆಯೇ ಮಿಕ್ಕೆಲ್ಲಾ ಗೆಳೆಯ ಗೆಳತಿಯರನ್ನು ಮುಖ್ಯವಾಹಿನಿಗೆ ತರುವುದು ಅವರ ಗುರಿಯಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಹಿರಿಯ ಪೋಲೀಸ್ ಅಧಿಕಾರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

ಶಿವಮೊಗ್ಗದಲ್ಲಿ ಚಂಪಾ ಮುಂದಾಳತ್ವದಲ್ಲಿ ನಡೆದ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ವಿಷಯವೊಂದಕ್ಕೆ ಸಂಬಂಧಿಸಿದಂತೆ ಮುಖ್ಯ ಭಾಷಣಕಾರರಾಗಿ ಆಹ್ವಾನಿತರಾದ ಗೌರಿ ಅವರಿಗೆ ಕೋಮುವಾದಿಗಳಿಂದ ದೊಡ್ಡ ವಿರೋಧ ವ್ಯಕ್ತವಾಯಿತು. ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಹೋಗಿ ಭಾಷಣ ಮಾಡಲೇಬೇಕೆಂಬ ಅವರ ಹಠ ಫಲಿಸಿತು ಮತ್ತು ಅಲ್ಲಿನ ಪ್ರಗತಿಪರ ಚಿಂತಕರು, ಹೋರಾಟಗಾರರ ಅಭೂತಪೂರ್ವ ಬೆಂಬಲ ಅವರಿಗೆ ದಕ್ಕಿತು. ಕರ್ನಾಟಕದಲ್ಲಿ ಕೋಮುವಾದಿಗಳ ಬಹಿರಂಗ ಸೋಲು ಅಲ್ಲಿಂದ ಶುರುವಾಗಲು ಗೌರಿ ಕಾರಣರಾದರು.
ಆ ನಂತರದಲ್ಲಿ ನಡೆದ ಬಹುತೇಕ ದಲಿತ, ಪ್ರಗತಿಪರ ಹೋರಾಟಗಳಲ್ಲಿ ಮುಖ್ಯ ಪಾತ್ರ ವಹಿಸಿದ ಗೌರಿ ಮೇಡಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದರಿಂದ ಕೊಂಚ ನಿರಾಳವಾದರು ಮತ್ತು ಸಿದ್ಧರಾಮಯ್ಯನವರನ್ನು ನಂಬಿದರು. ಕಳೆದ ವರ್ಷ ನಡೆದ ‘ಚಲೋ ಉಡುಪಿ’ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು ಮತ್ತು ಅವರ ಪತ್ರಿಕೆಯನ್ನು ಇದಕ್ಕೆ ಹೆಚ್ಚು ತೊಡಗಿಸಿ ಪ್ರಚಾರ ಮಾಡಿದರು. ಈ ನಿಟ್ಟಿನಲ್ಲಿ ಭಾರತದಂತಹ ಶ್ರೇಣೀಕೃತ ಸಮಾಜದ ಸುಧಾರಣೆಗೆ ಏಕಮುಖಿ ಆಲೋಚನಾ ಕ್ರಮದ ಬದಲಾಗಿ ಬಹುತ್ವದ ಮತ್ತು ಒಳಗೊಳ್ಳುವ ಆಲೋಚನಾ ಕ್ರಮಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಸ್ವತಃ ಬದುಕಿ ತೋರಿಸಿದವರು ಗೌರಿ ಲಂಕೇಶ್. ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರು ವಯಕ್ತಿಕ ಬದುಕನ್ನು ಬದುಕಲೇ ಇಲ್ಲ. ಅರವತ್ತಕ್ಕೂ ಹೆಚ್ಚು ಕೋರ್ಟ್ ಕೇಸುಗಳನ್ನು ಎದುರಿಸುತ್ತಿದ್ದ ಅವರು ತಲೆಕೆಡಿಸಿಕೊಳ್ಳದೆ ಅದನ್ನೂ ಹೋರಾಟದ ಭಾಗವೆಂಬಂತೆ ನಡೆಸಿಕೊಂಡು ಬಂದರು. ಹೆಚ್ಚು ಹೆಚ್ಚು ಓದುತ್ತಾ ಸಮಾಜ, ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುತ್ತಾ, ಬಹುತ್ವದ ನೆಲೆಗಳನ್ನು ಶೋಧಿಸುತ್ತಾ ಕನ್ನಡದ ನೆಲಮೂಲೀಯ ವೈಚಾರಿಕತೆಯ ಒಳಕ್ಕೆ ನಿಧಾನ ಪ್ರವೇಶ ಪಡೆದರು. ಅವರ ಈ ಮಾರ್ಗದರ್ಶಿ ಜೀವನ ವಿಧಾನ ಮುಂದಿನ ತಲೆಮಾರಿಗೆ ಹೆಚ್ಚಿನ ಸತ್ವವನ್ನು ಉಳಿಸಿತು.

ಗೌರಿ ಲಂಕೇಶರ ಸೈದ್ಧಾಂತಿಕ ಅರಿವು:
ಕೋಮುವಾದವನ್ನು ಹತ್ತಿರದಿಂದ ಕಂಡು, ಅದನ್ನು ಇಲ್ಲವಾಗಿಸಲು ಹೋರಾಡಲು ಪ್ರಾರಂಭಿಸಿದ ಗೌರಿ ಲಂಕೇಶರಿಗೆ ಪತ್ರಿಕೆಯಿದ್ದ ಕಾರಣಕ್ಕೇ ಕನ್ನಡ ನಾಡಿನ ದಲಿತ- ಮಹಿಳಾ ಚಳವಳಿ ತಕ್ಷಣದ ಪ್ರತಿಕ್ರಿಯಾತ್ಮಕ ಹೋರಾಟದಂತೆಯೇ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಸಮಕಾಲೀನ ತಲ್ಲಣಗಳಿಗೆ ಪತ್ರಿಕೆ ಮೂಲಕ ಪ್ರತಿಕ್ರಿಯೆ ನೀಡುವ ತುರ್ತು ಅವರನ್ನು ಕೊಂಚ ಆತುರಕ್ಕೆ ದೂಡಿತ್ತು. ಕೋಮುವಾದವನ್ನು ತಡೆಗಟ್ಟಲು ಕಾಂಗ್ರೆಸ್ಸನ್ನು ಅಪ್ಪಿಕೊಳ್ಳುವ ಅಪಾಯವನ್ನು ಅವರು ಇನ್ನೂ ಅರ್ಥ ಮಾಡಿಕೊಳ್ಳುವ ದಾರಿಯಲ್ಲಿದ್ದರು. ಎಲ್ಲ ಪ್ರಭುತ್ವದ ಶೋಷಕ ಪ್ರವೃತ್ತಿಯನ್ನು ವಿರೋಧಿಸುತ್ತಿದ್ದ ದಲಿತ ಮತ್ತು ಮಹಿಳಾ ಚಳವಳಿಯನ್ನು ಗೌರಿ ಮೇಡಂ ಆಧ್ಯತೆಯ ವಿಷಯವಾಗಿ ಪರಿಗಣಿಸದೆ ಅಂತರ ಕಾಯ್ದುಕೊಂಡರು ಅಥವಾ ಅವುಗಳ ಸೂಕ್ಷ್ಮತೆಯನ್ನು ಅರಿಯುವ ಸಮಯವಿರಲಿಲ್ಲ ಅವರಿಗೆ. ಎಲ್ಲರಂತೆ ಅವರೂ ದಲಿತ ಸಂಘಟನೆಯ ವಿಘಟನೆಯ ಬಗ್ಗೆ ಮಹಿಳಾ ಚಳವಳಿಯ ಗಂಡು ವಿರೋಧಿ ಗ್ರಹಿಕೆಯ ಬಗ್ಗೆ ತೆಳುವಾಗಿ ಮಾತನಾಡುತ್ತಿದ್ದರು. ಅಲ್ಲದೆ, ಅವರ ಗ್ರಹಿಕೆಯಲ್ಲಿದ್ದ ದೋಷಗಳನ್ನು ಪರಿಹರಿಸಿಕೊಳ್ಳಲು ಅವರು ಸಿದ್ಧರಿದ್ದರು. ದಲಿತರ ಮೀಸಲಾತಿ ಕುರಿತು ಇಂಗ್ಲಿಷ್ ಪತ್ರಕರ್ತರಂತೆ ಉದಾಸೀನವಾಗಿ ಮಾಡನಾಡುತ್ತಿದ್ದ ಅವರು ಆನಂತರದ ದಿನಗಳಲ್ಲಿ ಬದಲಾದಂತೆ, ಬಡ್ತಿ ಮೀಸಲಾತಿ ವಿಷಯದಲ್ಲಿ ಆತುರ ತೋರಿದರು. ಅಲ್ಲಿಯೂ ದಲಿತರ ಏಳಿಗೆ ಪ್ರಾಮಾಣಿಕ ಕಾಳಜಿಯನ್ನು ತೋರಿಸಿದರೇ ಹೊರತು ಸಾಂವಿಧಾನಿಕ ಹಕ್ಕಿನ ಕುರಿತು ಅವರಿಗೆ ಯಾರಾದರೂ ಅರ್ಥ ಮಾಡಿಸುವ ಅಗತ್ಯವಿತ್ತು; ಮತ್ತದನ್ನು ಅವರು ನಿರೀಕ್ಷಿಸಿದ್ದರು.

ಅವರ ಪ್ರತಿಕ್ರಿಯಾತ್ಮಕ ಹೋರಾಟದ ಮಾದರಿ ದಲಿತ ಸಂಘಟನೆ ಮತ್ತು ಮಹಿಳಾ ಸಂಘಟನೆಗಳ ಮುಂದಾಳುಗಳೊಂದಿಗೆ ಅವರ ವಾಗ್ವಾದವನ್ನು ಮೊಟಕುಗೊಳಿಸಿತು. ಟ್ಯಾಬ್ಲಾಯ್ಡ್ ಭಾಷೆ ಮತ್ತು ತಕ್ಷಣದ ಪ್ರತಿಕ್ರಿಯಾತ್ಮಕ ಸೈದ್ಧಾಂತಿಕ ನಂಬಿಕೆಗಳು ಅವರನ್ನು ಆವರಿಸಿದ್ದ ಕಾರಣದಿಂದ ಸೀಮಿತಗೊಳ್ಳುವಂತಾಯಿತು. ಅಂಬೇಡ್ಕರ್ ಚಿಂತನೆಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಿದ್ದ ಗೌರಿ ಲಂಕೇಶರು ಒಳಕ್ಕೆ ಇಳಿಯುವ ಸಮಯಕ್ಕೆ ಕಾಯುತ್ತಿದ್ದರು. ಮತ್ತು ಅಂಬೇಡ್ಕರ್ ಆಲೋಚನಾ ಕ್ರಮದಿಂದ ಲೋಕವನ್ನು ಗ್ರಹಿಸುವ ತುರ್ತನ್ನು ಇನ್ನೂ ಅವರು ಕಂಡುಕೊಳ್ಳಬೇಕಿತ್ತು. ಗಾಂಧಿ, ಲೋಹಿಯಾ ಚಿಂತನೆಗಳು ಅವರಿಗೆ ಅಷ್ಟು ಆಪ್ತವಾಗಿರದಿದ್ದರೂ ಅವರ ಸುತ್ತಲೂ ಇದ್ದ ಪ್ರಗತಿಪರ ಚಿಂತಕರ ಕಾರಣಕ್ಕೆ ಅನಿವಾರ್ಯದಂತೆ ಅವುಗಳನ್ನು ಒಪ್ಪಿದ್ದರು. ಆ ವಿಷಯದಲ್ಲಿ ಇನ್ನೂ ಅವರು ಗಟ್ಟಿಗೊಳ್ಳಬೇಕಾಗಿತ್ತು.

ಕನ್ನಡದ ಪ್ರಗತಿಪರತೆಯನ್ನು ರೂಪಿಸಿದ ಸಾಹಿತ್ಯಕ ಚಿಂತನಾ ಕ್ರಮವನ್ನು ಗೌರಿ ಮೇಡಂ ಇದೀಗ ಪ್ರವೇಶಿಸಿದ್ದರು. ವಚನ ಚಳವಳಿ ಮತ್ತು ತಳ ಸಮುದಾಯಗಳ ಜಾನಪದ ಮಹಾಕಾವ್ಯಗಳನ್ನು ಅವರು ಪೂರ್ತಿ ಅರಿಯದಿದ್ದರೂ ಅವು ಜನಮುಖಿ ಆಲೋಚನಾ ಮಾದರಿಗಳನ್ನು ನಿರ್ದೇಶಿಸುವ ಬೀಜರೂಪಿ ಅರಿವುಗಳು ಎಂಬುದನ್ನು ಮನಗಂಡಿದ್ದರು. ಅವರು ಕೊಲೆಯಾಗುವ ಒಂದೇ ತಿಂಗಳು ಹಿಂದೆ ಹಿರಿಯ ದಲಿತ ನಾಯಕರೊಬ್ಬರನ್ನು ‘ಯಾರಿವರು..?’ ಎಂದು ಕೇಳಿದ್ದರು; ಮತ್ತವರ ಜೊತೆ ಮಾತಿಗಿಳಿದಾಗ ಇಪ್ಪತ್ತು ಮೂವತ್ತು ವರ್ಷಗಳಿಂದ ಪರಿಚಯವಿದೆಯೇನೋ ಎಂಬಷ್ಟರಮಟ್ಟಿದೆ ಆಪ್ತವಾದರು. ಇನ್ನೂ ಅವರಿಗೆ ಹತ್ತಿರವಾಗಬೇಕಿದ್ದ ಹಲವು ವಿಷಯಗಳು, ವ್ಯಕ್ತಿಗಳು, ಆಲೋಚನಾ ಕ್ರಮಗಳು ಇದ್ದವು. ಸಿನಿಮಾ ಭಾಷೆ ಅವರಿಗೆ ಅರ್ಥವಾಗುತ್ತಿರಲಿಲ್ಲ; ಪ್ರತಿಕ್ರಿಯಾತ್ಮಕ ಕವಿತೆಯನ್ನು ಇಷ್ಟಪಡುತ್ತಿದ್ದರು. ಎದುರಿಗೆ ಸಿಕ್ಕ ಎಲ್ಲರ ಮಾತುಗಳನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಕೆಲವೊಮ್ಮೆ ಪೂರ್ವಗ್ರಹಕ್ಕೆ ಒಳಗಾಗುತ್ತಿದ್ದರು. ಮತ್ತು ಹತ್ತಿರದವರ ಬಗ್ಗೆ ಅನುಮಾನ ಬಂದರೆ ಶೀಘ್ರ ಬಗೆಹರಿಸಿಕೊಳ್ಳುತ್ತಿದ್ದರು.

ಗೌರಿ ಲಂಕೇಶ್ ಸಮಸಮಾಜದ ನಿರ್ಮಾಣಕ್ಕಾಗಿ ದೇಶಾದ್ಯಂತ ನಡೆಯುತ್ತಿರುವ ಜನಮುಖಿ ಚಳವಳಿಗಳೆಲ್ಲದರ ಭಾಗವಾಗಿದ್ದರು. ಆದರೆ, ಈ ಆಂದೋಲನಕ್ಕಿರುವ ಪ್ರಾಚೀನ ತಾತ್ವಿಕ ಬದ್ಧತೆಯನ್ನೂ, ಅಂತರ್ಮುಖಿ ಒಳಹರಿವನ್ನು ಕಾಣುವ ವಿಷಯದಲ್ಲಿ ಕೊಂಚ ಆಲಸ್ಯ ಮಾಡಿದರು. ಕೋಮುವಾದದ ರುದ್ರ ನರ್ತನ, ಸಹಮಾನವರ ಮೇಲಿನ ಹಲ್ಲೆ, ಅಮಾನವೀಯತೆಯನ್ನೇ ಸೈದ್ಧಾಂತಿಕತೆಯಂತೆ ನಂಬಿ ನಡೆಯುವ ಅಪಾಯಕಾರಿ ಬೆಳವಣಿಗೆ ಅವರನ್ನು ಹೀಗೆ ಪ್ರತಿಕ್ರಿಯಾತ್ಮಕ ಹೋರಾಟಕ್ಕೆ ಪ್ರೇರೇಪಿಸಿತ್ತು. ಅವರು ನಂಬಿದ್ದ ಮಾತೆಂಬ ಆಯುಧ ಅವರ ಆಯಸ್ಸನ್ನು ಕಡಿಮೆ ಮಾಡಿತು. ಕ್ರಿಯೆಗೆ ಇಳಿಯುವ ಮೊದಲೇ ಪ್ರತಿಕ್ರಿಯೆಗೆ ಒಳಗಾದ ಗೌರಿ ಸಾವಿನ ನಂತರ ಭಾರತದ ಜನಮುಖಿ ಚಳವಳಿ ಗರಿಗಟ್ಟುತ್ತಿದೆ. ಗೌರಿ ಬದುಕಿದ್ದಾರೆ; ನಮ್ಮನ್ನೂ ಬದುಕಿಸಿದ್ದಾರೆ.....

-ಹುಲಿಕುಂಟೆ ಮೂರ್ತಿ

ಕನ್ನಡ ಮಣ್ಣಿನ ಅಸ್ಮಿತೆ ಗೌರಿ ಲಂಕೇಶ್ ಪುಸ್ತಕದಿಂದ
ಸಂಪಾದಕರು: ವಿ.ಆರ್. ಕಾರ್ಪೆಂಟರ್

© Copyright 2022, All Rights Reserved Kannada One News