Flash News:
ಗೆದ್ದು ಸೋತು ಗೆಲ್ಲಿಸಿದವಳು

ಗೆದ್ದು ಸೋತು ಗೆಲ್ಲಿಸಿದವಳು

Updated : 10.07.2022

ಇಂತಿ,
ನಿನ್ನ ಪ್ರೀತಿಯನ್ನು ಗೆದ್ದು, ನಿನ್ನನ್ನು ಸೋಲಿಸಿದವಳು ಅಂತ ಓದಿ ಮುಗಿಸುತ್ತಲೇ, ಗರುಡಗಂಬದಂತೆ ಎದೆಯುಬ್ಬಿಸಿ ಕೈಯಲ್ಲಿ ಪತ್ರ ಹಿಡಿದುಕೊಂಡು ನಿಂತಿದ್ದ ನಾನು, ಧಡಕ್ಕನೆ ನೆಲಕ್ಕೆ ಮೊಣಕಾಲೂರಿ, ತಲೆ ತಗ್ಗಿಸಿ ಗರಬಡಿದವನಂತೆ ಕುಳಿತುಬಿಟ್ಟೆ. ದುಃಖದ ಉದ್ಘೋಷದಿಂದ ತಬ್ಬಲಿತನ ತಬ್ಬಿಕೊಂಡಂತಾಗಿ ಮನಸ್ಸು ಪತರುಗುಟ್ಟಿ ಹೋಯಿತು.
 
"ನೋಡು, ನಂಗಿದೆಲ್ಲ ಇಷ್ಟವಾಗಲ್ಲ. ಮೊದಲು ಚೆನ್ನಾಗಿ ಓದಬೇಕು. ಈ ಪ್ರೀತಿ-ಪ್ರೇಮ, ಅದೂ-ಇದೂ... ಊಹೂಂ, ನನಗೂ ನಮ್ಮ ಮನೆಮಂದಿಗೂ ಚೂರೂ ಇಷ್ಟವಾಗಲ್ಲ. ನೀನು ಇಷ್ಟಕ್ಕೇ ನಿಲ್ಲಿಸಿ ಬಿಟ್ರೆ, ನನ್ನ ಪಾಡಿಗೆ ನನ್ನ ಬಿಟ್ಟು ಬಿಟ್ರೇ ಒಳ್ಳೇದು...." ಅಂತ ಅವತ್ತು ಅಂದಾಗ ಖಂಡಿತ ನಿರಾಶನಾಗಿರಲಿಲ್ಲ. ಆದರೆ ನನ್ನ ಪ್ರೀತಿಯ ಹುಡುಗಿಯ ಕೊನೆಯ ಪತ್ರ ಓದಿದಾಗ, ಅವಳ ಒಂದೊಂದೇ ಅಕ್ಷರ ನೀರಿನಂತೆ ಮೂಗಿನೊಳಗೆ ಸೇರಿ, ಮೆದುಳಿನ ತುಂಬ ನೀರು ತುಂಬಿಕೊಂಡಂತಾಗಿ ಸತ್ತೇ ಹೋದೆನೇನೋ ಅನಿಸಿತು.

ಅದು ಕಾಕತಾಳೀಯವಾ? ಗೊತ್ತಿಲ್ಲ; ವಿಧಿ ಲಿಖಿತವಾ? ನಾನದನ್ನ ನಂಬಲ್ಲ. ವಿಪರ್ಯಾಸವಾ? ಈ ಬದುಕಿನ ವಿಚಿತ್ರವಾ? ಇವತ್ತಿಗೂ ನಂಬಿಕೆ ಬರ್ತಿಲ್ಲ. ಇಷ್ಟಾದರೂ ನಾನು ಯಾವತ್ತಿಗೂ ಊಹಿಸಿರದ ಎರಡು ಘಟನೆಗಳು ಒಂದರ ಹಿಂದೊಂದು ಜರುಗಿಯೇ ಬಿಟ್ಟವು. ಒಂದು - ಅವಳ ಮದುವೆ; ಅದಕ್ಕೆ ಅವಳೇ ಕಾರಣವಾ? ಇರಲಿಕ್ಕಿಲ್ಲ. ಎರಡನೆಯದು - ಅರ್ಧಕ್ಕೆ ನಿಂತು ಹೋದ ನನ್ನ ಓದು; ಇದಕ್ಕಂತೂ ಅರ್ಧ ನಾನೇ ಕಾರಣ, ಇನ್ನರ್ಧ ನನ್ನವಳು!

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕೃಷಿ ಪದವಿಯನ್ನು ಓದಬೇಕು ಅಂತ ಯಾವತ್ತಿಗೂ ನನಗೆ ಅನಿಸಿರಲೇ ಇಲ್ಲ. ಆ ಮಣಗಾತ್ರದ ಪುಸ್ತಕಗಳು, ವಿನಾಕಾರಣದ ಖರ್ಚು, ಅರ್ಥವೇ ಇಲ್ಲದ ಶಿಸ್ತು, ಕರೆಕ್ಟಾಗಿ ತಿಂಗಳಿಗೊಮ್ಮೆ ನಡೆದೇ ಬಿಡುತ್ತಿದ್ದ ಪರೀಕ್ಷೆ,- ಉಫ್... ಇದ್ಯಾವುದೂ ನನಗೆ ಇಷ್ಟವಿರಲಿಲ್ಲ. ಆದರೆ ಅದ್ಯಾವುದೂ ನನಗೆ ಕಷ್ಟವೂ ಇರಲಿಲ್ಲ! ಬಾಲ್ಯದ ಗೆಳತಿಗಾಗಿ ಓದಲು ಒಪ್ಪಿಕೊಂಡೆ. ಅವಳ ನೆಪದಲ್ಲೇ, ಅವಳ ನೆನಪಲ್ಲೆ ಓದಿದೆ. ಅವಳಿಗೋಸ್ಕರವೇ ಓದಿದೆ. ಅವಳ ಖುಷಿಗೆ ಅಂತ ಹಾಡಿದೆ. ಅವಳ ಸಂತೋಷಕ್ಕೆ ಅಂತಾನೇ ಕುಣಿದೆ. ಆದರೆ ಅದೊಂದು ದಿನ ಸಣ್ಣ ಸುಳಿವೂ ನೀಡದೇ ಅವಳು ನನ್ನಿಂದ, ನನ್ನ ಬದುಕಿನಿಂದ ಎದ್ದು ಹೋದಳು ಅಂತ ಗೊತ್ತಾದದ್ದೇ ತಡ, ಓದೋದೇ ನಿಲ್ಲಿಸಿಬಿಟ್ಟೆ!

ಬಾಲ್ಯದಿಂದ ನಾವಿಬ್ಬರೂ ಒಂದೇ ತರಗತಿಯಲ್ಲಿ ಓದಿದವರು. ಒಂದೇ ಊರಿನವರು. ಇನ್ನೇನು ಹೈಸ್ಕೂಲ್ ಮುಗಿಯಲು ಒಂದೆರಡು ತಿಂಗಳು ಮಾತ್ರ ಬಾಕಿ. ಅವತ್ತು ಶಾಲೆಯಲ್ಲಿ ನಮಗೆ ಬೀಳ್ಕೊಡುವ ಸಮಾರಂಭ. ಸ್ನೇಹದ ನೆನಪಿಗಾಗಿ ಪರಸ್ಪರ ಆಟೋಗ್ರಾಫ್ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಅದರಲ್ಲಿ ಬರೀ ಸ್ನೇಹದ ಬಗ್ಗೆ ವ್ಯಾಖ್ಯಾನಗಳು. ಈಗಲೂ ನೆನಪಾಗುವ ಸಾಲು ಎಂದರೆ "ಸ್ನೇಹವೆಂಬ ಬುತ್ತಿಯಲ್ಲಿ ನನ್ನದೊಂದು ತುತ್ತಿರಲಿ". ಎಲ್ಲರ ಆಟೋಗ್ರಾಫ್ ಪುಸ್ತಕದಲ್ಲಿ ಈ ಸಾಲು ಹರಿದಾಡುತ್ತಿತ್ತು. ನನಗೆ ಎಷ್ಟು ಸಾರಿ ಅನಿಸಿದ್ದಿದೆ - ಸ್ನೇಹಿತರಿಲ್ಲದ ಬದುಕು ನೀರಸನಾ?
ನನಗೂ ಒಬ್ಬ ಅಪೂರ್ವ ಸ್ನೇಹಿತೆ ಇದ್ದಳು. ಅವಳು ನನ್ನ ಜೀವದ ಜೀವನವಾಗಿದ್ದಳು. ನನ್ನ ಮನಸ್ಸಿನ ವಿಚಾರದ ಬೆಳಕನ್ನು ಹತ್ತಿಸಿದವಳಾಗಿದ್ದಳು. ನನ್ನೆಲ್ಲಾ ಕೆಲಸಗಳಿಗೆ ಸ್ಫೂರ್ತಿಯಾಗಿದ್ದಳು. ಅವಳ ಹೆಸರು ಕಲ್ಪನಾ!

ಬಿಟ್ಟು ಹೋಗಲು ಇನ್ನು ಒಂದೆರಡು ತಿಂಗಳ ಸಮಯವಿದ್ದರೂ ಬೀಳ್ಕೊಡುಗೆ ಸಮಾರಂಭದ ದಿನ ಆಟೋಗ್ರಾಫ್ ಪುಸ್ತಕ ಹಿಡಿದುಕೊಂಡು ಬಂದ ಕಲ್ಪನಾ
"ಉಮರ್ ಮುಂದೇನು ಓದುತ್ತೀಯ?" ಅಂತ ಕೇಳಿದಳು.
"ನನಗೆ ಇಂಜಿನಿಯರಿಂಗ್ ಓದಬೇಕು ಅಂತ ಆಸೆ. ಅದರಲ್ಲೇ ಆಸಕ್ತಿ ಹೆಚ್ಚು". ಅನ್ನುತ್ತಾ ನನ್ನ ಶರ್ಟಿನ ಜೇಬಿನೊಳಗವಿತ್ತಿದ್ದ ಪೆನ್ನನ್ನು ಹೊರತೆಗೆದು, ಶಿರಸ್ತ್ರಾಣ ಕಿತ್ತು ಸಹಿ ಮಾಡಲು ಮುಂದಾಗುತ್ತಿದ್ದಂತೆ, ಆಟೋಗ್ರಾಫ್ ಪುಸ್ತಕವನ್ನು ಹಿಂತೆಗೆದು, ಬೆನ್ನಿನ ಹಿಂದೆ ಅವಿತಿಟ್ಟುಕೊಂಡ ಕಲ್ಪನಾ
"ನಿನ್ನ ಸಹಿ ಏನು ನನಗೆ ಬೇಕಾಗಿಲ್ಲ. ನೀನೂ ನನ್ನೊಂದಿಗೆ ಅಗ್ರಿಕಲ್ಚರ್ ಓದಲು ಬರುತ್ತೀಯ ಅಷ್ಟೇ!" ಅಂತ ಹೇಳಿದವಳೇ ಜಡೆ ತಿರುವಿಕೊಂಡು ಹೊರಟು ಹೋಗಿದ್ದಳು.

ಅವಳ ನಿರ್ಧಾರವೇ ನನ್ನ ನಿರ್ಧಾರವೂ ಆಗಿತ್ತು. ಇಬ್ಬರೂ ಬಿಜಾಪುರದ ಕೃಷಿ ಮಹಾವಿದ್ಯಾಲಯಕ್ಕೆ ಬಂದು ಸೇರಿದ್ದೆವು. ಇಬ್ಬರ ಮನೆಯಲ್ಲೂ ಓದಿಗೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು. ಇದಕ್ಕಿಂತ ಹೆಚ್ಚಿಗೆ ಏನು ಬೇಕು? ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಸುವ ಸ್ನೇಹಿತರಿಗೆ!

ಕಲ್ಪನಾ ನೋಡಲು ತುಂಬಾ ಲಕ್ಷಣವಾಗಿದ್ದ ಆರಡಿ ಎತ್ತರದ ಹಸನ್ಮುಖಿ. ತೀಕ್ಷ್ಣ ಕಣ್ಣುಗಳು, ನೀಳವಾದ ಮೂಗು, ತುಸು ಹೆಚ್ಚೇ ಎನಿಸುವಷ್ಟು ಬೆಳ್ಳಗಿದ್ದಳು. ನನ್ನ ಆತ್ಮೀಯರಲ್ಲಿ ತುಸು ಹೆಚ್ಚೇ ಆತ್ಮೀಯ ಸ್ನೇಹಿತೆಯಾಗಿದ್ದಳು. ನನ್ನೆಲ್ಲಾ ತಂಟೆ, ತಕರಾರುಗಳನ್ನು ಸಹಿಸಿಕೊಳ್ಳುವ, ಅಷ್ಟೇ ಅಖಂಡವಾಗಿ ಪ್ರೀತಿಸುವ ಸ್ನೇಹಿತೆಯಾಗಿದ್ದಳು. ಅಷ್ಟು ಪ್ರೀತಿಸುವವಳು ಒಮ್ಮೆಯೂ ನೀನಂದರೆ ನನ್ನ ಪ್ರಾಣ, ಬದುಕು, ಸರ್ವಸ್ವ ಮತ್ತೊಂದು ಮಗದೊಂದು ಅಂತ ಊಹೂಂ - ಎಂದೂ ಹೇಳಿದವಳಲ್ಲ. ಅವಳಿಗೆ ನನ್ನ ಮೇಲೆ ಅಂತಹದೊಂದು ಭಾವನೆಯೇ ಇರಲಿಲ್ಲವೇನೋ. ಆದರೂ ನನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದಳು.

ನನಗೆ ಚೆನ್ನಾಗಿ ನೆನಪಿದೆ. ಅವತ್ತು ರವಿವಾರ. ತಲೆಗಚ್ಚಿದ ಕೊಬ್ಬರಿ ಎಣ್ಣೆಯೂ ಕ್ಷಣಮಾತ್ರದಲ್ಲಿ ಆವಿಯಾಗಿ ಹೋಗುವಷ್ಟು ರಣಬಿಸಿಲಿತ್ತು. ಸಂಜೆಯಾಗುತ್ತಿದ್ದಂತೆ ಇಡೀ ಕ್ಯಾಂಪಸ್ಸನ್ನು ಮೋಡ ದಟ್ಟವಾಗಿ ಕವಿದಿತ್ತು. ಹರಟುತ್ತಾ ಕುಳಿತಿದ್ದ ನನಗೆ ಮಾತ್ರವಲ್ಲ, ಜತೆಗಿದ್ದ ಜೀವದ ಗೆಳತಿ ಕಲ್ಪನಾಳಿಗೂ ಲೋಕದ ಪರಿವೆಯೇ ಇರಲಿಲ್ಲ. "ಮಳೆ ಬಂದ್ರೇನು ಮಾಡೋದು ಉಮರ್? ಛತ್ರಿನೇ ಇಲ್ವಲ್ಲ! ಅಂದಿದ್ದೇ ತಡ, ಅದಾಗೀ ಹತ್ತು ನಿಮಿಷಕ್ಕೆ ಆಕಾಶದ ಗರ್ಭ ಒಡೆದು ಹೋದಂತೆ ಮಳೆ ಸುರಿಯತೊಡಗಿತು. ಥಟ್ಟನೆ ಎದ್ದವನೇ ಕೈ ಹಿಡಿದೆಳೆದು ಹೊರಡುತ್ತಿದ್ದಂತೆ, ಹೆದರಿಕೊಂಡಿದ್ದ ಕಲ್ಪನಾ ಪಾರಿವಾಳದಂತೆ ನನ್ನ ತೆಕ್ಕೆಯೊಳಗೆ ಅಡಗಿಕೊಂಡು ಬಿಟ್ಟಳು! ಆ ಕ್ಷಣ ನನಗೆ ಏನೋ ಒಂಥರಾ ಹಿತವೆನಿಸಿತು. ನಾನೂ ಹಾಗೆಯೇ ಮಳೆಯಲ್ಲಿ ನೆನೆಯುತ್ತಾ ನಿಂತು ಬಿಟ್ಟೆ. ಇದೇ ಸರಿಯಾದ ಸಮಯ ಎಂದುಕೊಂಡು ಸ್ವಲ್ಪ ಡಿಫ್ರೆಂಟಾಗಿ, "ನಿನ್ನ ಸಂತೋಷಕ್ಕೆ ನಾನು ಕಾರಣ ಆಗ್ತೀನಿ. ನಂಗೆ ಒಂದು ಅವಕಾಶ ಕೊಡ್ತೀಯಾ ಕಲ್ಪನಾ?" ಅಂತ ಕೇಳಿಯೇ ಬಿಟ್ಟೆ. ಕಾಲೇಜಿಗೆ ಕಾಲಿಟ್ಟ ಮೊದಲ ದಿನದಿಂದಲೇ ಪ್ರೀತಿಸುವ ವಿಚಾರ ಹೇಳಬೇಕೆಂಬ ಮನಸ್ಸಾಗಿತ್ತು. ಆದರೆ ತುಟಿವರೆಗೂ ಬರುತ್ತಿದ್ದ ಪ್ರೇಮ ನಿವೇದನೆಯ ಮಾತು, ತುಟಿಯಿಂದಾಚೆಗೆ ಬರುತ್ತಿರಲಿಲ್ಲ. ಆದರವತ್ತು ಸುರಿದ ಮಳೆಯ ರಭಸದ ಪಿಚಕಾರಿ ನನ್ನ ತುಟಿಯನ್ನು ಸೀಳಿತ್ತು.

ನನ್ನ ಮಾತುಗಳನ್ನು ಕೇಳುತ್ತಿದ್ದ ಕಲ್ಪನಾಳಿಗೆ ಒಂದು ಕಡೆ ಭಯ, ಇನ್ನೊಂದು ಕಡೆ ಸಹಜವಾದ ನಾಚಿಕೆ. ಆದರೂ ಕೆರಳಿ ಕೆಂಡವಾಗಿದ್ದಳು. ಆ ಮಳೆಯಲ್ಲೂ ಅವಳ ಮೈ ಬಿಸಿ ಏರುವಷ್ಟು.
"ನೋಡು ಉಮರ್, ಮುಚ್ಕೊಂಡು ನಿನ್ನದನ್ನು ನೀನು ನೋಡ್ಕೋ, ಈ ಪ್ರೀತಿ-ಪ್ರೇಮದ ಉಸಾಬರಿ ನನಗೆ ಬೇಡ. ನಂಗೆ ಇದೆಲ್ಲಾ ಚೂರೂ ಇಷ್ಟವಿಲ್ಲ. ನನ್ನ ಮನೆಯವರಿಗೆ ಗೊತ್ತಾದ್ರಂತೂ ಮುಗೀತು. ಓದುವುದನ್ನೇ ಬಿಡಿಸಿ ಬಿಡ್ತಾರೆ. ಇನ್ನೊಮ್ಮೆ ಇಂತಹದನ್ನು ಮಾತನಾಡುವುದಾದರೆ, ನನ್ನೊಂದಿಗೆ ಯಾವತ್ತೂ ಮಾತನಾಡಲೇ ಬೇಡ." ಎಂದವಳೇ ಮುಖ ತಿರುಗಿಸಿ ಹೊರಟೇ ಬಿಟ್ಟಳು. ಅಲ್ಲಿಗೆ ಪ್ರೀತಿಯ ಹಪಾಹಪಿಗೆ ಬಿದ್ದ ನನ್ನ ಸ್ನೇಹದ ಸೌಧವೂ ಕುಸಿದು ಬಿದ್ದಿತ್ತು. ಮನಸ್ಸಿನ ವಿರಹ ವೇದನೆಯನ್ನು ಶಾಂತಗೊಳಿಸಲು ನಂಬಿಕೆಯೇ ಸಿಗದಂತಾಗಿ, ಅವಳು ತೊರೆದು ಹೋದ ಅಲೆಯಲ್ಲಿ ಕಣ್ಣನ್ನು ಅರಳಿಸಲು ಸಹಾಯವಿತ್ತ ಕಂಬನಿ ಮಳೆಗಿಂತ ಜೋರಾಗಿ ನೆಲ ಸೇರಿತ್ತು. ಸುತ್ತಲೂ ಕವಿದ ಕತ್ತಲು ಅಣುಕಿಸಿ ಮೌನವಾಗಿ ನಗುತ್ತಿತ್ತು. ಬಾಯ್ಬಿಟ್ಟು ಹೇಳಲೆಂದು ಹೊರಬಂದ ನಾಲಿಗೆ, ಅವಳ ಮಾತಿನಿಂದ ಸಿಡಿದ ಗುಡುಗಿಗೆ ಸೀಳಿ ಹೋಯಿತೆಂಬಂತೆ ಗಾಢ ಮೌನಕ್ಕೆ ಶರಣಾಯಿತು.

ನಿನ್ನ ತಿರುಗಾಟದಿಂದ ನಮಗೆ ತೊಂದರೆ ಎಂದು ಹೇಳಿದರೂ, ಆಕಾಶದಲ್ಲಿ ಅಲೆದು ಸುಸ್ತಾದ ಸೂರ್ಯ ಅಂತರ್ಧಾನನಾಗಿ ಚಂದನೆಯದೊಂದು ಸಂಜೆಯನ್ನು ಚಿಮುಕಿಸುವ ಹೊತ್ತಿಗೆ ಅಲ್ಲಲ್ಲಿ ಒಂದೊಂದೇ ದೀಪಗಳು ಕಣ್ತೆರೆಯತೊಡಗಿದ್ದವು. ಅದರ ಹಿಂದೆಯೇ ಕತ್ತಲು ತನ್ನ ಪ್ರಭುತ್ವ ಸ್ಥಾಪಿಸಿತ್ತು. ಹೀಗಿರುವಾಗಲೇ ನನ್ನ ಮೈ, ಮನ ಎರಡೂ ಭಾರವಾಗಿದ್ದರಿಂದ ಅವತ್ತಿನ ಊಟದ ಶಾಸ್ತ್ರವನ್ನೂ ತಿರಸ್ಕರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡು ಕಣ್ಮುಚ್ಚಿದೆ. ಬಹುಷಃ ಕಲ್ಪನಾಳಂತೆ ನಿದ್ದೆಯೂ ನನ್ನ ಮೇಲೆ ಮುನಿಸಿಕೊಂಡಿತ್ತೇನೋ. ಅದೆಷ್ಟೇ ಉರುಳಾಡಿದರೂ, ಎಷ್ಟೋ ಹೊತ್ತಾದರೂ ನಿದ್ದೆಯೇ ಬರಲಿಲ್ಲ. ಬರೀ ಕಲ್ಪನಾಳ ಮಾತುಗಳೇ ಕಣ್ಮುಂದೆ ತೇಲಿ ಬಂದು ಉಸಿರುಗಟ್ಟಿಸುತ್ತಿದ್ದವು.

ಬಾಲ್ಯದಿಂದಲೂ ನಾವಿಬ್ಬರು ಆಡಿಕೊಂಡೇ ಬೆಳೆದವರು. ಒಟ್ಟಿಗೆ ಓದಿದ್ದೇವೆ, ಒಟ್ಟಿಗೆ ಊಟ ಮಾಡಿದ್ದೇವೆ. ನನ್ನ ನೋವಿಗೆ ಅವಳು, ಅವಳ ನೋವಿಗೆ ನಾನು ಪರಸ್ಪರ ಸ್ಪಂದಿಸಿದ್ದೇವೆ, ಕಣ್ಣೀರಿಟ್ಟು ಬಿಕ್ಕಳಿಸಿದ್ದೇವೆ. ಹುಟ್ಟಿದಾಗಿನಿಂದ ಒರಟೊರಟಾಗಿ, ಒಡ್ಡೊಡ್ಡಾಗಿ ಇದ್ದ ನನ್ನನ್ನು ಬದಲಿಸಿದ್ದೇ ಕಲ್ಪನಾ. ನನಗೆ ಚೆಂದದ ಇಂಗ್ಲೀಷು ಬರ್ತಿರಲಿಲ್ಲ, ಅಂದದ ಡ್ರೆಸ್ಸು ಉಡೋದೂ ಗೊತ್ತಿರಲಿಲ್ಲ. ಎರಡನ್ನೂ ಕಲಿಸಿದವಳು ಅವಳು. ಅವಳ ಪರಿಶುದ್ಧ ಪ್ರೀತಿ, ವಿಪರೀತ ವಾತ್ಸಲ್ಯ ಮತ್ತು ಅನನ್ಯ ಅಕ್ಕರೆಯ ಸವಿಗೆ ನಿತ್ಯವೂ ಈಡಾಗುತ್ತಿದ್ದೆನಲ್ಲ... ಆಗ ಅವಳ ಮೇಲೆ ಪ್ರೀತಿಯಾಯಿತು. ಈ ಪ್ರೇಮದ ಸಸಿ ಬೆಳೆದು ಹೆಮ್ಮರವಾಯಿತು. ಅದು ತಪ್ಪಾ? ಈಗ ಅವಳು ನನ್ನ ಸ್ನೇಹವೇ ಬೇಡವೆಂದು ಹೊರಟು ಬಿಟ್ಟಳು. ಅದು ಈಗ ಅನಿವಾರ್ಯವಾ? ವಿಧಿಲಿಖಿತವಾ? ನನ್ನ ಪೂರ್ವಜನ್ಮದ ಕರ್ಮವಾ? ನಾನು ಅವಳನ್ನು ಪ್ರೀತಿಸಿ ಮಾಡಿದ ತಪ್ಪಿಗೆ ಈ ಬದುಕು ಕಟ್ಟಿಸಿಕೊಂಡ ಕಂದಾಯವಾ? ನನಗೆ ಏನಂದ್ರೆ ಏನೂ ಅರ್ಥ ಆಗ್ತಿಲ್ಲ. ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ನನ್ನ ತಲೆಯೊಳಗೆ ಪ್ರಶ್ನೆಗಳ ಪರ್ವತವೇ ಬಾಯ್ತೆರೆದು ನಿಂತಿತ್ತು. ಆ ಪ್ರಶ್ನೆಗಳ ಪರ್ವತದಡಿಯಲ್ಲಿ ಸಿಲುಕಿದ ನಾನು ಉತ್ತರವಿಲ್ಲದೆ ಉಸಿರುಗಟ್ಟಿ ಸತ್ತುಹೋದಂತೆನಿಸುತ್ತಿತ್ತು.
ಹಠಮಾರಿ ಸೂರ್ಯ ಪೂರ್ವದ ಬೆಟ್ಟಗಳಾಚೆಯಿಂದ ತನ್ನ ದಿನನಿತ್ಯದ ಕಾರ್ಯಕ್ಕೆ ಹಾಜರಾಗುವ ಮುನ್ನವೇ, "ಇನ್ನು ಮುಂದೆ ಕಲ್ಪನಾಳ ಪ್ರೀತಿಯೂ ಬೇಡ, ಸ್ನೇಹವೂ ಬೇಡ. ಅವಳು ನನಗೆ ದಕ್ಕುವುದಾದರೆ ಪ್ರೇಯಸಿಯಾಗಿಯೇ ದಕ್ಕಲಿ. ಅಲ್ಲಿಯವರೆಗೆ ಅವಳೊಂದಿಗೆ ಮಾತನಾಡುವುದೇ ಬೇಡ" ಎಂದು ಭೀಷ್ಮ ಪ್ರತಿಜ್ಞೆ ಮಾಡಿದೆ. ರೋಮಗಳನ್ನು ನಿಮಿರುಸುವಂಥ ನಸುಕಿನ ತಣ್ಣನೆಯ ಸುಳಿಗಾಳಿ ಹಾಗೂ ಆಗತಾನೇ ಇಣುಕುತ್ತಿದ್ದ ನೇಸರ ನನ್ನ ಪ್ರತಿಜ್ಞೆಗೆ ಸಾಕ್ಷಿಯಾಗಿತ್ತು.

ಘಂಟೆಗಳಾಯ್ತು, ದಿನಗಳಾಯ್ತು, ವಾರಗಳಾಯ್ತು, ಬರಾಬರ್ ಹದಿನೈದು ದಿನಗಳಾಯ್ತು. ಇಬ್ಬರು ಮಾತನಾಡಲಿಲ್ಲ, ಪರಸ್ಪರ ಸಂಧಿಸಲಿಲ್ಲ. ಯಾರ ಹಠ ಜಾಸ್ತಿ ಎನ್ನುವಂತೆ ಹಠಕ್ಕೆ ಬಿದ್ದ ಇಬ್ಬರು, ಎಲ್ಲಾದರೂ ಎದುರಾದರೆ ಪರಸ್ಪರ ಮುಖ ತಿರುಗಿಸುತ್ತಿದ್ದೆವು. ಆದರೂ ಅವಳೇ ನನ್ನೆದೆ ಅರಮನೆಯ ಅರಸಿಯಾಗಬೇಕೆಂಬ ಬಯಕೆಯೊಂದು ಒಳಗಿನಿಂದ ಗುದ್ದುತ್ತಲೇ ಇತ್ತು. ಇದಕ್ಕೆ ರೂಮಿನಲ್ಲಿ ಮಲಗಿದಾಗ ನೆತ್ತಿಯ ಮೇಲೆ ಹಾಲ್ಬೆಳದಿಂಗಳಂತಹ ಬೆಳಕನ್ನು ಸೂಸುತ್ತಾ ಬಿಳಿ ಹಾವಿನಂತೆ ಹರಿದಾಡುತ್ತಿದ್ದ ಬಲ್ಬು ಸಾಕ್ಷಿಯಾಗಿತ್ತು!

ಅವಳ ಸ್ನೇಹವನ್ನೂ ಕಳೆದುಕೊಂಡ ನಾನು ಹೇಗಿದ್ದೇನೆಂದರೆ... ಹೇಗೇಗೋ ಇದ್ದೆ. ಹಿಂದೊಮ್ಮೆ ಅವಳ ಜತೆಗಿದೀನಿ ಅನ್ನೋ ಸಂಭ್ರಮದಲ್ಲಿ ಎಲ್ಲೋ ಕೇಳಿದ್ದ ಹಾಡುಗಳು ಇವತ್ತಿಗೂ ಒಬ್ಬನೇ ಇದ್ದಾಗ ನನ್ನನ್ನು ಬೇಟೆಯಾಡುತ್ತವೆ. ನಾನು ಏನೇ ಮರೆತರೂ, ನನ್ನ ಮನಸ್ಸು ತಕರಾರು ಮಾಡುವುದಿಲ್ಲ. ಆದರೆ ಅವಳನ್ನು ಮರೆತ ದಿನ ಅದು ನನ್ನನ್ನು ಕ್ಷಮಿಸುವುದಿಲ್ಲ. ಯಾಕೆ ಗೊತ್ತಾ? ಅವಳೆಂದರೆ ನನ್ನ ಪಾಲಿಗೆ ಬರೀ ಹುಡುಗಿಯಲ್ಲ. ಬಿಡದೆ ಕಾಡುವ ಕನಸಷ್ಟೇ ಅಲ್ಲ! ಅವಳು ನನ್ನ ದುರ್ಭಿಕ್ಷದ ದಿನಗಳಲ್ಲಿ ಅಂಗೈ ತುಂಬಾ ಹೊಳೆದ ಬೆಳ್ಳಿಯ ಪಾತ್ರೆ. ಅವಳ ನೆನಪೆಂಬುದು ನನಗೆ ಶ್ರಾವಣದ ತುಂತುರು. ಆದರೂ ವಿರಹ ವೇದನೆಯಲ್ಲಿ ನೆನಪುಗಳು ನನ್ನನ್ನು ಒಂದು ಹಗಲಲ್ಲ, ಎರಡು ರಾತ್ರಿಯಲ್ಲ, ದಿನವಿಡೀ ಬೇಟೆಯಾಡುತ್ತಿದ್ದವು. ಹಾಡುಗಳು ಹೊಂಚಿ ಕೊಲ್ಲಲೆತ್ನಿಸುತ್ತಿದ್ದವು. ಸುಳಿಗಾಳಿಯ ಸಡಗರದ ಮಧ್ಯೆ ಸಂಪಿಗೆ ಹೂವಿನ ಕಂಪು ಹಾರಿ ಬಂದು ಕೆನ್ನೆ ತಾಕಿಸಿದ ಹಾಗೆ, ಅವಳ ನೆನಪುಗಳ ಮೂಟೆ ತಾಕಿ ಮುಂದಕ್ಕೆ ಹೋಗುತ್ತಿದ್ದವು.

ಹೀಗೆ ಎಷ್ಟೋ ವಾರಗಳು ಉರುಳಿದವು. ಹಠ ಸಾಧಿಸುವ ಧಾವಂತದಲ್ಲಿ ಇಬ್ಬರೂ ಮಾತಿಗಿಳಿಯಲಿಲ್ಲ. ಆದರೆ ಅವಳಾಗಿಯೇ ನನ್ನನ್ನು ಮಾತನಾಡಿಸಲು ಬರುತ್ತಾಳೆಂಬ ಬಲವಾದ ನಂಬಿಕೆ ನನ್ನೆದೆಯಲ್ಲಿ ಮೊಳಕೆಯೊಡೆದಿತ್ತು. ಆ ಮೊಳಕೆ ಬೆಳೆದು ಮರವೂ ಆಗಿತ್ತು. ಅದು ಫಲವೂ ಕೊಟ್ಟಿತ್ತು.

ನನಗಿನ್ನೂ ಚೆನ್ನಾಗಿ ನೆನಪಿದೆ. ಅದೊಂದು ದಿನ ಸುಂದರ ಸಂಜೆ ಕಾಲೇಜಿನ ಕ್ಯಾಂಟೀನಿನಲ್ಲಿ ಚಹಾ ಹೀರುತ್ತಿದ್ದೆ. ಕ್ಯಾಂಟೀನಿನ ಹೊರಗಡೆಯೊಂದು ಪುಟ್ಟ ತುಳಸಿಕಟ್ಟೆ, ಅದರೆದುರಿಗೆ ಪಾರಿಜಾತದ ಗಿಡವಿತ್ತು. ಸಂಜೆ ತಿಳಿಗಾಳಿ ಸುಯ್ಯನೆ ಬೀಸಿದರೆ, ಪಾರಿಜಾತದ ಹೂದಳಗಳ ಘಮ ಮೂಗಿಗೆ ಅಡರುತ್ತಿತ್ತು. ಪಾರಿಜಾತದ ಘಮ ಮೈ ಪೂರಾ ತುಂಬಿಕೊಳ್ಳುತ್ತಿರುವಾಗಲೇ, ತಲೆತಗ್ಗಿಸಿ ಚಹಾದ ಸ್ವಾದವನ್ನು ನಾನು ಆಸ್ವಾದಿಸುತ್ತಿದ್ದಾಗಲೇ, ಕಲ್ಪನಾ ಬಂದು ನನ್ನೆದುರಿಗೆ ನಿಂತಿದ್ದಳು. ಮುಖವನ್ನು ನೋಡದೆಯೇ ಅವಳನ್ನು ಗುರುತಿಸಬಲ್ಲವನಾಗಿದ್ದರಿಂದ ಬೇಕಂತಲೇ ತಲೆ ತಗ್ಗಿಸಿ ಚಹಾ ಕುಡಿಯುತ್ತಿದ್ದೆ. ಕನಿಷ್ಠ ಸೌಜನ್ಯಕ್ಕೂ ಮುಖವೆತ್ತಲಿಲ್ಲ.

"ಉಮರ್..." ಅಂದಳು.
ಊಹೂಂ ನಾನವಳತ್ತ ನೋಡಲಿಲ್ಲ.

ಮತ್ತೊಮ್ಮೆ "ಉಮರ್... ನಿನ್ನೊಂದಿಗೆ ಮಾತನಾಡಬೇಕು" ಅಂದಳು.

ತಲೆಯೆತ್ತಿ "ಏನು?" ಅಂದೆ.

"ಇಲ್ಲಿ ಆಗಲ್ಲ, ಹೊರಗಡೆ ಸುತ್ತಾಡಿಕೊಂಡು ಬರೋಣ ಬಾ" ಅಂದಳು.

ನನಗೂ ಅದೇ ಬೇಕಾಗಿತ್ತು. "ಸರಿ" ಎಂದವನೇ ಕ್ಯಾಂಟೀನಿನವನ ಕೈಗೆ 5 ರೂಪಾಯಿ ಇಟ್ಟು, ಹೆಗಲಿಗೆ ಬ್ಯಾಗು ಏರಿಸಿಕೊಂಡು ಅವಳೊಂದಿಗೆ ಹೆಜ್ಜೆ ಹಾಕಿದೆ.
ಕೆಲ ಕ್ಷಣಗಳ ಕಾಲ ಇಬ್ಬರೂ ಬಾಯಿಗೆ ಬೀಗ ಜಡಿದುಕೊಂಡಿದ್ದೆವು. 'ಮೊದಲು ಅವಳೇ ಮಾತು ಶುರು ಮಾಡಲಿ' ಅಂತ ನನಗೆ ಧಿಮಾಕು. 'ಇಲ್ಲ, ಮೊದಲು ನಾನೇ ಮಾತಾಡಬೇಕೆಂದು ಅವಳಿಗೆ ಅಹಂಕಾರ'. ಪಾದವನ್ನೊತ್ತು ಹೆಜ್ಜೆಯನ್ನಿಡುತ್ತಿದ್ದ ನಮ್ಮ ಚಪ್ಪಲಿಗಳ ಶಬ್ದದ ಹೊರತು ಬೇರಾವುದರ ಶಬ್ದವೂ ಅಲ್ಲಿರಲಿಲ್ಲ. ಕೊನೆಗೂ ಈ ಹಟದಲ್ಲಿ ನಾನೇ ಗೆದ್ದಿದ್ದೆ. ಕಲ್ಪನಾ ಮೌನ ಮುರಿದು ಮಾತು ಶುರು ಮಾಡಿದ್ದಳು.

"ಯಾಕೋ ಉಮರ್, ಎಷ್ಟೋ ವರ್ಷದ ಸ್ನೇಹ ನಮ್ಮದು. ಇಷ್ಟು ಬೇಗ ಚಿಕ್ಕ ವಿಷಯಕ್ಕೆ ನನ್ನನ್ನು ದೂರ ಮಾಡಲು ಮನಸ್ಸಾದರೂ ಹೇಗೋ ಬಂತು ನಿನಗೆ?" ಅವಳ ಮಾತಿನಲ್ಲಿ ನೋವು ಬೆರೆತಿತ್ತು.

"ನೋಡು, ಈಗ ಮತ್ತೊಮ್ಮೆ ಹೇಳಿ ಬಿಡ್ತೀನಿ. ಇಲ್ಲಿ ಪ್ರೀತಿಸಲು ಹುಡುಗಿಯರು ಸಾಕಷ್ಟಿದ್ದಾರೆ, ಸ್ನೇಹಕ್ಕೂ ಲೆಕ್ಕವಿಲ್ಲದಷ್ಟಿದ್ದಾರೆ. ಆದರೆ ನನಗೆ ನೀನು ಮಾತ್ರ ಬೇಕು, ನಿನ್ನ ಪ್ರೀತಿ ಬೇಕು. ಇಲ್ಲದಿದ್ದರೆ ನನಗೆ ಯಾವುದೂ ಬೇಡ. ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ. ನಾವಿಬ್ಬರು ಸಾಗುವ ದಿಕ್ಕು ಬೇರೆ ಬೇರೆ". ಅಲ್ಪ ಮುನಿಸಿನೊಂದಿಗೆ ಕಡ್ಡಿ ತುಂಡಾಗುವಂತೆ ಹೇಳಿದ್ದೆ.

ನಾನೊಬ್ಬ ಕೋಪಿಷ್ಟ, ಶಾರ್ಟ್ ಟೆಂಪರ್ ಎನ್ನುವುದು ಗೊತ್ತಿದ್ದ ಅವಳಿಗೆ, ನಾನು ಮನಸಲ್ಲಿರೋದನ್ನ ನೇರಾನೇರ ಹೇಳುವವನು, ಮನಸ್ಸಿಗೂ ಮಾತಿಗೂ ಫಿಲ್ಟರ್ ಇಲ್ಲದವನು ಅಂತ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ನನ್ನ ಸಿಡುಕಿನ ಮಾತುಗಳಿಗೆ ಕೋಪಗೊಳ್ಳದೆ ಮಾತು ಮುಂದುವರೆಸಿದಳು.

"ಯಾಕೋ ನೀನು ಹೀಗೆಲ್ಲ ಮಾತಾಡ್ತೀಯಾ? ಅವತ್ತು ನಾನೇನೋ ಸಿಟ್ಟಿನಲ್ಲಿ ಕೂಗಾಡಿ 'ನಿನ್ನ ಸ್ನೇಹವೂ ಬೇಡ' ಅಂದ್ರೆ, ನೀನೂ ನನ್ನ ಮೇಲೆ ಕೋಪಿಸಿಕೊಂಡು ಹೋಗಿ ಬಿಡೋದಾ? ನಿಜ ಹೇಳ್ತೀನಿ ಕೇಳು ಉಮರ್, ನಿನ್ನನ್ನು ಮರೆಯಬೇಕಂದ್ರೆ ನಾನು ಸತ್ತ ಮೇಲಷ್ಟೇ ಸಾಧ್ಯ! ನಿನ್ನ ಸವಿನೆನಪನ್ನು ಹೃದಯದಲ್ಲಿ ಹೊತ್ತುಕೊಂಡು, ಭಾರವಾದ ಹೃದಯದಿಂದ ನಗುವಿನ ಮುಖವಾಡ ಹಾಕಿಕೊಂಡು ಓಡಾಡುವ ನನ್ನೆದೆಯ ನೋವು ನಿನಗ್ಯಾಕೋ ಅರ್ಥವಾಗಲಿಲ್ಲ? ಹೃದಯದಂಗಳದಲ್ಲಿ ನಿನಗಾಗಿ ಕಾಯ್ದಿಟ್ಟ ಸ್ಥಾನವನ್ನು, ಪ್ರೀತಿಯನ್ನು ನಿನಗಲ್ಲದೆ ಬೇರಾರಿಗೆ ನೀಡಲಿ? ಯಾಕೋ ಹೀಗೆ ಮಾಡಿಬಿಟ್ಟೆ? ನನ್ನೊಂದಿಗೆ ತಿಂಗಳು ಕಾಲ ಮಾತಾಡದೆ ದೂರ ಮಾಡಿ ಬಿಟ್ಟೆ!"
ಅವಳು ನನ್ನ ಕೊರಳಪಟ್ಟಿ ಹಿಡಿದು, ಕಣ್ಣೀರು ಸುರಿಸುತ್ತಲೇ ಪ್ರಶ್ನಿಸುವಾಗ, ನಾನು ಪಿಟ್ಟೆನ್ನದೆ ಸ್ತಬ್ಧನಾಗಿದ್ದೆ. ಅವಳೇ ಮಾತು ಮುಂದುವರೆಸಿದಳು.

"ಉಮರ್, ಜೊತೆಗೆ ನೀನಿಲ್ಲದೆ ದಿನಾಲೂ ಕಣ್ಣೀರಲ್ಲಿ ಕೈ ತೊಳೀತಿರೋ ನನ್ನೀ ಯಾತನೆಗೆ, ನನ್ನ ಮೂಕ ಪ್ರೀತಿಗೆ - ಓಡುವ ಮೋಡ, ಚಲಿಸುವ ಸೂರ್ಯ, ಬೀಸುವ ಗಾಳಿ, ಸುರಿಯುವ ಮಳೆಯೇ ಸಾಕ್ಷಿ ಕಣೋ. ಬೇಕಾದ್ರೆ ಹೋಗಿ ಕೇಳು. ನಿನಗೆ ಇನ್ನೊಂದು ವಿಷಯ ಗೊತ್ತೇನೋ? 'ಮನಪೂರ್ವಕ ಪ್ರೀತಿಯನ್ನು ವ್ಯಕ್ತಪಡಿಸೋಕೆ ಶಬ್ದವೇ ಇಲ್ವಂತೆ. ಅದನ್ನೇನಿದ್ರೂ ಕಣ್ಣ ಭಾಷೆಯಲ್ಲೇ ತಿಳ್ಕೋಬೇಕಂತೆ'. ಇದೆಲ್ಲಾ ಹುಚ್ಚನಂತೆ ನನ್ನ ಪ್ರೀತಿಸುವ ನಿನಗ್ಯಾಕೆ ಅರ್ಥ ಆಗಲಿಲ್ಲ? ಅಂದು ನೀನು ಪ್ರಪೋಸ್ ಮಾಡಿದ್ದು ನೋಡಿ ಬೆರಗಾಗಿತ್ತು, ಅಚ್ಚರಿಯಾಗಿತ್ತು ಮತ್ತು ಖುಷಿಯಾಗಿತ್ತು. ಅವತ್ತಿನ ನಿನ್ನ ಮಾತು ನೆನಪಾದಾಗಲೆಲ್ಲ ನಾನು ಗರಿಗೆದರಿ ಕುಣಿವ ನವಿಲಾಗ್ತಿದ್ದೆ, ಇಂಪಾಗಿ ಉಲಿವ ಕೋಗಿಲೆಯಾಗ್ತಿದ್ದೆ. ಇದೆಲ್ಲ ನಿನಗೆ ಯಾಕೋ ಅರ್ಥವಾಗಲಿಲ್ಲ? ನೀನ್ಯಾಕೋ ನನ್ನ ಅರ್ಥ ಮಾಡಿಕೊಂಡಿಲ್ಲ? ನೀನು ದೂರಾದ್ದಕ್ಕೆ ಸುರಿಸಿದ ಕಣ್ಣೀರೆಷ್ಟು? ವ್ಯಯಿಸಿದ ಸಮಯವೆಷ್ಟು? ಭರಿಸಿದ ನೋವೆಷ್ಟು? ಅನ್ನುವ ಅಂದಾಜು ನಿನಗಿದೆಯೇನೋ?ನಿನಗಾಗಿ, ನಿನ್ನ ಒಂದು ಪಿಸುಮಾತಿಗಾಗಿ, ಪೆಚ್ಚು ನಗೆಗಾಗಿ, ಹುಚ್ಚು ಹಿಡಿಸೋ ನಿನ್ನ ಪ್ರೀತಿಗಾಗಿ ನಾನು ತಿಂಗಳು ಕಾಲ ಕಾದಿದ್ದೇನೆ- ಅಂಥ ನನ್ನನ್ನೇ ನೀನು ಈ ರೀತಿ ದೂರ ಮಾಡಿದ್ದು ಸರಿಯೇನೋ?" ಬಿಕ್ಕಳಿಸುತ್ತಾ ಪ್ರಶ್ನಿಸುತ್ತಿದ್ದ ಅವಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೆ ಒಳಗೊಳಗೆ ಖುಷಿಯಾಗಿತ್ತು. ಆನಂದಬಾಷ್ಪ ಕೆನ್ನೆಗಿಳಿದಿತ್ತು.

"ಕಲ್ಪನಾ, ನೀನು ನನ್ನ ಜೊತೆಗಿದ್ದಷ್ಟೂ ದಿನ ನಾನು ಕತೆಯಾಗಿದ್ದೆ, ಕವಿತೆಯಾಗಿದ್ದೆ. ನದಿಯಂತೆ ಹರಿಯುತ್ತಿದ್ದೆ, ಕಡಲಿನಂತೆ ಭೋರ್ಗರೆಯುತ್ತಿದ್ದೆ. ಸಿನಿಮಾ ನಾಯಕ ನಟರಂತೆ ಮೆರೆಯುತ್ತಿದ್ದೆ. ಥೇಟ್ ಅಕ್ಬರ್‌ನಂತೆ ದರ್ಬಾರನ್ನೂ ನಡೆಸುತ್ತಿದ್ದೆ. ಹೀಗಿದ್ದಾಗ ನನಗೆ ಪ್ರೀತಿ ಬಿಟ್ಟು ಬೇರೆ ಆಯ್ಕೆಗಳೇ ಇರಲಿಲ್ಲ!'
    'ನನ್ನ ಹೆಸರಲ್ಲಿ ಕಾವ್ಯ ಬರೆದವಳು ನೀನು, ನನ್ನ ಕಂಬನಿಯನ್ನು ಬೊಗಸೆಯಲ್ಲಿ ಹಿಡಿದವಳು ನೀನು, ನನ್ನ ಸಿಡಿಮಿಡಿಗೆ ಮಗುವಂತೆ ಅತ್ತವಳು ನೀನು - ಅಂಥ ನೀನು 'ಸ್ನೇಹವೂ ಬೇಡ'ವೆಂದು ದೂರ ತಳ್ಳಿ ಬಿಟ್ಟರೆ ನಾನಾದರೂ ಏನು ಮಾಡಲಿ ಹೇಳು?" ಬಿಕ್ಕುತ್ತಲೇ ಆಡಿದ್ದ ನನ್ನ ಮಾತಿನ ದನಿಯಲ್ಲಿ ದಮ್ಮಿರಲಿಲ್ಲ.

"ಉಮರ್, ಈ ಕೆಲ ದಿನಗಳಲ್ಲಿ ನೀನು ತುಂಬಾ ನೆನಪಾಗಿಬಿಟ್ಟೆ ಕಣೋ. ಯಾಕೆ ಅಂತ ಗೊತ್ತಿಲ್ಲ. ನಿನ್ನನ್ನ, ನಿನ್ನ ಕೋಪವನ್ನ, ನಿನ್ನ ನೋಟವನ್ನ, ಮಾತಿನ ಮಾಟವನ್ನ ಇನ್ನಿಲ್ಲದಂತೆ ಮೆಚ್ಚಿಕೊಳ್ಳುತ್ತೀನಲ್ಲ - ಅದರರ್ಥ ನಾನು ನಿನ್ನನ್ನ ಪ್ರೀತಿಸ್ತಿದ್ದೀನಿ ಅಂತ ಅರ್ಥ ಕಣೋ. ನಿನ್ನ ಒಂದು ಮಾತು, ಒಂದು ಫೋನು, ಒಂದು ಮೆಚ್ಚುಗೆ ನನಗೆ ಇಷ್ಟವಾಗುತ್ತೆ. ನಿನ್ನ ಒಂದೇ ಒಂದು ಮೆಸೇಜ್ ನೋಡಿದರೂ ಸಾಕು - ಮನಸ್ಸು ಹಕ್ಕಿಯಾಗುತ್ತೆ. ತಿಂಗಳುಗಳ ಕಾಲ ನೀನು ಮಾತಾಡದೆ ನನ್ನ ದೂರವಿಟ್ಟಾಗ ಒಂಥರಾ ದಿಗಿಲಾಗಿತ್ತು, ಏನೋ ಕಳೆದುಕೊಂಡ ಹಾಗಾಗಿತ್ತು, ಯಾವುದೋ ನಿರೀಕ್ಷೆಯಲ್ಲಿ ಮನಸ್ಸು ಚಡಪಡಿಸುತ್ತಿತ್ತು.'
    'ಕೇಳು, ನಾವಿಬ್ಬರೂ ಮುನಿಸಿಕೊಂಡ ದಿನದಂದು ನಂಗೆ ಊಟ ಸೇರಲಿಲ್ಲ, ನಿದ್ದೆ ಬರಲಿಲ್ಲ. ಆ ಕಡೆ ಹೊರಳಿದಾಗ, ಈ ಕಡೆ ತಿರುಗಿದಾಗ ಕೂಡ ನಿನ್ನ ಆ ಮಾತೇ ಕೇಳಿಸುತ್ತಿತ್ತು. ನೀನು ನನ್ನ ಕೈ ಹಿಡಿದಿದ್ದು, ನಾನು ನಿನ್ನ ಬಾಹುಗಳೊಳಗೆ ಬಂಧಿಯಾಗಿದ್ದು, ನಿನ್ನ ಎದೆಯ ದನಿಯನ್ನು ಕಿವಿಗೊಟ್ಟು ಆಲಿಸಿದ್ದು, ಮೌನದಲ್ಲೇ ಮಾತಾಡಿದ್ದು - ಎಲ್ಲವೂ ನೆನಪಾಗುತ್ತಿತ್ತು. ಅಕಸ್ಮಾತ್ ನೀನು ನನ್ನೆದುರಿಗಿದ್ದಿದ್ರೆ ನಿನ್ನ ಮಡಿಲಲ್ಲಿ ಮಲಗಿ ಅಳಬಹುದಿತ್ತು, 'ಉಮರ್... ಉಮರ್..' ಅಂತ ಬಿಕ್ಕಳಿಸಬಹುದಿತ್ತು. ನಿನ್ನ ಒಂದು ಸಾಂತ್ವನದ ಮಾತಿನಿಂದ ಅತ್ತಷ್ಟೇ ಬೇಗ ನಗಬಹುದಿತ್ತು.' ಆದರೂ ಹಿಂದೆಯೇ ಪ್ರೀತಿಯ ಹಪಾಹಪಿಗೆ ಬಿದ್ದು, ನಿನ್ನ ಸ್ನೇಹ ಕಳೆದು ಹೋಗಬಹುದೇನೋ ಎಂಬ ಭಯ, ನಾನು ತಪ್ಪು ಮಾಡುತ್ತಿದ್ದೇನೆ ಅನ್ನೋ ಭಾವ; ಅಪ್ಪ-ಅಮ್ಮನಿಗೆ ಮೋಸ ಮಾಡ್ತಾ ಇದ್ದೀನಿ ಅನ್ನೋ ನೋವು ಕೂಡ ಕಾಡಲಿಕ್ಕೆ ಶುರು ಮಾಡ್ತು ಕಣೋ!'
    'ನಿಜ ಕಣೋ, ನಿನ್ನ ಸ್ನೇಹವನ್ನು ಕಳೆದುಕೊಳ್ಳಲಿಕ್ಕೆ ನನಗೆ ಇಷ್ಟವಿಲ್ಲ. ಕ್ಷಣಗಳು ಇಂದಿದ್ದಂತೆ ನಾಳೆ ಇರಲ್ಲ. ಇವತ್ತು ಗೆಲುವು, ನಾಳೆ ಸೋಲು! ನಿನ್ನ ಪ್ರತಿ ಕ್ಷಣಗಳಲ್ಲೂ ಇರಲು ಬಯಸುವವಳು ನಾನು. ನಿನ್ನ ನಲಿವಲ್ಲಿ ನಗುವಾಗಿ, ಅಳುವಿಗೆ ಸಾಂತ್ವನವಾಗಿ, ನಿನ್ನೊಳಗಿನ ಮಗುವಿಗೆ ಅಮ್ಮನಾಗಿ, ತುಂಟನಿಗೆ ಕೀಟಲೆಯಾಗಿ, ದಣಿವಿಗೆ ಆಸರೆಯಾಗಿ, ದುಃಖಕ್ಕೆ ಮಡಿಲಾಗಿ,  ನಿನ್ನ ಮುಂಗೋಪಕ್ಕೆ ವಿನೀತಳಾಗಿ... ಇರಬೇಕೆಂದು ಅಂದುಕೊಂಡಿದ್ದೇನೆ ಉಮರ್. 'ನಿರೀಕ್ಷೆಯ ಚಿಗುರಲ್ಲಿ ಅರಳಿದ ಪ್ರೀತಿಗೆ ಆಯಸ್ಸು ಕಮ್ಮಿ. ಅದು ಕ್ಷಣದ ಆಕರ್ಷಣೆ ಮಾತ್ರ. ಸ್ನೇಹವೇ ಪರಮಸತ್ಯ, ಅದುವೇ ಶಾಶ್ವತ!" ಎಂದು ಅವಳು ಭಾಷಣ ಶುರು ಮಾಡಿ ಮತ್ತೆ ನನ್ನ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆ ಎಂದು ಗೊತ್ತಾಗುತ್ತಲೇ ನನ್ನ ತಲೆ ರೋಸಿಹೋಯಿತು.

      "ನೋಡು ಕಲ್ಪನಾ, ನಿನ್ನ ಹರಿಕಥೆ ಪುರಾಣಗಳೆಲ್ಲ ನನಗೆ ಬೇಡ. ಅದನ್ನೆಲ್ಲ ಕೇಳಿಸಿಕೊಳ್ಳುವಷ್ಟು ತಾಳ್ಮೆಯೂ ನನಗಿಲ್ಲ. ನೀನು ನನ್ನನ್ನು ಪ್ರೀತಿಸುತ್ತೀಯಾ, ಇಲ್ಲವಾ? ಅಷ್ಟು ಮಾತ್ರ ಹೇಳು. 'ಹುಡುಗರ ನಿರ್ಣಯಗಳು ಕೇವಲ ಭಾವುಕತೆಯ ಬಲಿಪೀಠದ ಮೇಲೆ ಹೆಪ್ಪುಗಟ್ಟಲ್ಲ. ನಾನು ಪ್ರೀತಿಸುವವಳಿಗಿಂತ, ನನ್ನನ್ನು ಪ್ರೀತಿಸುವವಳನ್ನು ಪ್ರೀತಿಸಿ ಮದುವೆಯಾದರೇನೇ ಒಳ್ಳೆಯದು ಅಂತ ಪ್ರತಿಯೊಬ್ಬ ಹುಡುಗಾನೂ ಯೋಚಿಸುತ್ತಾನೆ. ನಾನು ಯೋಚಿಸಿದ್ದೂ ಹಾಗೇ' ಧಿಮಾಕಿನಿಂದ ಆರಂಭಗೊಂಡ ನನ್ನ ಮಾತಿನಲ್ಲಿ ಆರ್ಭಟವಿತ್ತು.

ಗರಬಡಿದವಳಂತೆ ನಿಂತುಕೊಂಡಿದ್ದ ಕಲ್ಪನಾ ಸಾವರಿಸಿಕೊಳ್ಳುತ್ತಾ
"ಅದು ಹಾಗಲ್ಲ ಉಮರ್, ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ಪ್ರೀತಿಸಬಾರದು. ನಂತರ ಅದಕ್ಕೆ ಪ್ರತಿಫಲವಾಗಿ ಸಿಗೋದು ನೋವು ಮಾತ್ರ. ಎಲ್ಲಾ ನೋವಿಗೂ ಪ್ರೀತಿಯೇ ಮೂಲ ಕಣೋ" ಅಂತ ಉಲಿದು ಸುಮ್ಮನಾದಳು.
  ನಂತರ ಕೆಲಕಾಲ ಇಬ್ಬರೂ ಸ್ತಬ್ಧ. ನಮ್ಮ ಎದೆಬಡಿತ ನಮಗೆ ಕೇಳಿಸುವಷ್ಟು!
    ನಾನೇ ಮಾತು ಮುಂದುವರೆಸಿದೆ.
  "ಡಿಯರ್ ಕಲ್ಪನಾ, ನನ್ನ ಪ್ರಕಾರ ಪ್ರೀತಿ ಅಂದರೆ ಕಾಮವಲ್ಲ, ಆರಾಧನೆಯಲ್ಲ, ಉನ್ಮಾದವಲ್ಲ, ದೇವರಲ್ಲ; ಅದು ಎರಡೂಮುಕ್ಕಾಲು ಅಕ್ಷರವೂ ಅಲ್ಲ. ಅದು ಇವೆಲ್ಲವೂಗಳ ಸಂಕಲನ.
    "ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ಪ್ರೀತಿಸಬಾರದು ಅಂದ್ಯಲ್ಲ- ಅದು ತಪ್ಪು! ಇದೇ ಮಾತನ್ನು ನೀನಲ್ಲದೆ ಬೇರೆ ಯಾರಾದರೂ ನನ್ನ ಮುಂದೆ ಹೇಳಿದ್ದರೆ, ಒಂದು ಕ್ಷಣವೂ ಯೋಚಿಸದೆ ಕಪಾಳಕ್ಕೆ ಬಾರಿಸುತ್ತಿದ್ದೆ. ಇಲ್ಲಿ ಕೇಳು- ಹಣಕ್ಕಾಗಿ ಮೈ ಮಾರಿಕೊಳ್ಳುವ ಬೀದಿ ಸೂಳೆಯರೂ ಅಗತ್ಯಕ್ಕೆ ತಕ್ಕಷ್ಟು ಪ್ರೀತಿ ಮಾಡುತ್ತಾರೆ. ಪ್ರೀತಿಗೆ ಇತಿಮಿತಿಗಳನ್ನು, ಅವಕಾಶಗಳನ್ನೂ ಇಟ್ಟುಕೊಳ್ಳುವುದಾದರೆ ಅವರಿಗೂ ನಮಗೂ ಯಾವ ವ್ಯತ್ಯಾಸವೂ ಇರಲಾರದು. ನಿಜವಾದ ಪ್ರೀತಿಗೆ ಅಗತ್ಯತೆ ಮಾತ್ರವಲ್ಲ, ಕಾರಣವೂ ಇರಕೂಡದು. ಇದ್ದರೆ ಅದು ಪ್ರೀತಿಯೇ ಅಲ್ಲ! ಪ್ರೀತಿ ಅಂದರೆ ಏನು ಗೊತ್ತಾ? ಮನುಷ್ಯ ಮನುಷ್ಯನಿಗೆ ಕೊಡಬಹುದಾದ ಒಳ್ಳೆಯತನ. ಇದನ್ನು ವ್ಯಾಪಾರಕ್ಕಿಳಿಸದೆ ಕೊಡಬೇಕು. ಕೊಟ್ಟಾಗ ಮಾತ್ರ ಶ್ರೀಮಂತರಾಗುತ್ತೇವೆ. ಕೊಡದಿದ್ದರೆ ಭಿಕಾರಿಗಳಾಗುತ್ತೇವೆ.
   'ಪ್ರೀತಿಗೆ ಜಾತಿ-ಧರ್ಮದ ಹಂಗಿರುವುದಿಲ್ಲ, ವಯಸ್ಸಿನ ಅಂತರವಿರಲ್ಲ, ಸಂಬಂಧಗಳ ಸಂಕೋಲೆಯಲ್ಲಿ ಬಂಧಿಸಿಡಲಾಗುವುದಿಲ್ಲ. ಪ್ರೀತಿ ಎನ್ನುವುದು ಎಲ್ಲದಕ್ಕಿಂತಲೂ ದೊಡ್ಡದು. ಯಾವುದರಲ್ಲೂ ಬಂಧಿಸಿಡಲಾಗದು." ಅಂತ ಮಹಾನ್ ಮೇಧಾವಿಯಂತೆ ಕಲ್ಪನಾಳಿಗೆ ಗೀತೋಪದೇಶ ಬೋಧಿಸಿದೆ.
   ತದೇಕಚಿತ್ತದಿಂದ ನನ್ನ ಮಾತುಗಳನ್ನಾಲಿಸುತ್ತಿದ್ದವಳು ಕೆಲ ಕಾಲ ಮೌನಿಯಾಗಿ ನಿಂತು ಬಿಟ್ಟಳು.
ಕೆಲ ಕ್ಷಣಗಳ ನಂತರ
   "ಉಮರ್ ನಿಂಗೆ ಬದುಕಿನ ಬಿಸಿ ತಟ್ಟದಂತೆ ಮಾಡುವ ಶಕ್ತಿ ನನ್ನಲ್ಲಿದೆಯಾ? ಗೊತ್ತಿಲ್ಲ; ಆದರೂ ಆ ಬಿಸಿಗೆ ತಂಪಾಗುತ್ತೇನೆ. ಬಿಸಿಲು ಬಾರದಂತೆ ತಡೆಗಟ್ಟಲು ಶಕ್ತಳಲ್ಲವೇನೋ? ಆದರೆ ನೆರವಾಗುತ್ತೇನೆ. ಕಂಬನಿ ಜಾರದಂತೆ ನಿನ್ನನ್ನಿರಿಸಲು ಸಾಧ್ಯವಾದೀತಾ? ಗೊತ್ತಿಲ್ಲ; ಆದರೆ ಅದನ್ನು ಪ್ರೀತಿಯಿಂದೊರೆಸಿ ಅಳಿಸಬಲ್ಲೆ" ಎಂದವಳೇ ಕಣ್ಣೊಡೆದು ನಗುನಗುತ್ತಾ ಹೊರಟು ಹೋದಳು!

ಆಮೇಲಾಮೇಲೆ ನಾವಿಬ್ಬರು ಪ್ರೇಮಿಗಳಾಗಿದ್ದೆವು. ಅವಳನ್ನು ಮಾತನಾಡಿಸಲು, ಮನಸ್ಸಿಗೆ ಇನ್ನಷ್ಟು, ಮತ್ತಷ್ಟು ಹತ್ತಿರವಾಗಲು ನಾನು ಹೂಡಿದ ತಂತ್ರ, ಮಾಡಿದ ಮಂತ್ರಗಳಿವೆಯಲ್ಲ... ಅವುಗಳದ್ದೇ ಒಂದು ದೊಡ್ಡ ಕಥೆ. ಆಗೆಲ್ಲಾ ನಾವು ಹೂವಾಗಿದ್ದೆವು, ಚಿಟ್ಟೆಯಾಗುತ್ತಿದ್ದೆವು. ಹಾಡಾಗುತ್ತಿದ್ದೆವು, ನವಿಲಿನಂತೆ ಕುಣಿಯುತ್ತಿದ್ದೆವು. ಕಡೆಗೆ ಕಲ್ಪನಾ ನನ್ನ ಮದುವೆಯಾಗಲಿಕ್ಕೆ ಒಪ್ಪಿ, ಕಾಲೇಜಿನ ಕ್ಯಾಂಟೀನಿನಲ್ಲಿ ಜತೆಯಾಗಿ ಟೀ ಕುಡಿಯುತ್ತಿದ್ದಾಗ ಸಂಕೋಚ, ನಾಚಿಕೆಯಿಂದಲೇ 'ಐ ಲವ್ ಯೂ' ಎಂದು ಪಿಸುಗುಟ್ಟಿದ ದಿನ ನಾನಂತೂ ಮಂಗನಂತೆ ಕುಣಿದು ಬಿಟ್ಟಿದ್ದೆ. ಕಲ್ಪನಾ ಹತ್ತಿರವಾಗಿದ್ದಕ್ಕೆ ನನ್ನೆದೆ ಹಗುರವಾಗಿತ್ತು. ಪ್ರೀತಿಯ ರೋಮಾಂಚನಕ್ಕೆ ಸಿಕ್ಕಿ ಮನ ಮುದಗೊಂಡಿತ್ತು. ಮನಸೆಂಬೋ ಮನಸು ಭವಿಷ್ಯದ ಕುರಿತು ಲೆಕ್ಕ ಹಾಕಲು ಶುರು ಮಾಡಿತ್ತು. ಆ ನಂತರದ ದಿನಗಳಲ್ಲಿ ಸುಮ್ಮನೆ ಅವಳ ಕಣ್ಣು ನೋಡಿದರೆ ಸಾಕಿತ್ತು, ಅವಳು ಹೇಳಬೇಕೆಂದಿದ್ದ ಮಾತೆಲ್ಲವೂ ತುಂಬಾ ಚೆನ್ನಾಗಿ ಅರ್ಥವಾಗಿ ಬಿಡುತ್ತಿತ್ತು. ಅವಳೊಂದಿಗೆ ಮಾತನಾಡುತ್ತಾ ಕೂತು ಮೈ ಮರೆತಾಗ ನಾನವಳನ್ನು ಗೆದ್ದೆ ಅನ್ನಿಸುತ್ತಿತ್ತು. ಅವಳು ಯಾವತ್ತಿಗೂ ನನ್ನವಳೇ ಅನ್ನಿಸಿತ್ತು!

   ಆದರೆ ಅದೊಂದು ದಿನ ನನ್ನ ಆಸೆ, ಕನಸುಗಳೆಲ್ಲವನ್ನೂ ಬುಡಮೇಲುಗೊಳಿಸಿತ್ತು. ನಾನದನ್ನು ನಂಬುವುದಿಲ್ಲವಾದರೂ, ವಿಧಿಲಿಖಿತವೆಂಬುದು ತನ್ನ ಸಾಮರ್ಥ್ಯ ತೋರ್ಪಡಿಸಿತ್ತು. ಹಿಂದಿನ ಸುಖ, ಮುಂದಿನ ದುಃಖದ ದಿನಗಳು ಅದೊಂದೇ ದಿನದಂದು ಕಲಸುಮೇಲೋಗರವಾಗಿತ್ತು. ಹೌದು, ಅಂತಹದೊಂದು ಘಟನೆಯನ್ನೂ, ಘಳಿಗೆಯನ್ನೂ ನಾನು ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಕಲ್ಪನಾ ನನ್ನೆಡೆಗೆ ಮತ್ತು ನನ್ನೆದೆಗೆ ನಡೆದು ಬಂದಾಗ ಕಾರಣಗಳಿದ್ದವು. ಬಂದಷ್ಟೇ ವೇಗದಲ್ಲಿ ನನ್ನ ಬದುಕಿನಿಂದ ಎದ್ದು ಹೋಗಿ ಬಿಟ್ಟಳಲ್ಲ- ಅದಕ್ಕೆ ಕಾರಣವಿರಲಿಲ್ಲ ಅಥವಾ ಆ ಕಾರಣ ನನಗೆ ಗೊತ್ತಿರಲಿಲ್ಲ. ಒಂದಿನಿತೂ ಹೇಳದೆ ಕೇಳದೆ ನನ್ನಿಂದ ದೂರ ಎಂದರೆ ಬಲು ದೂರ ಹೊರಟು ಹೋಗಿದ್ದಳು. ಎಲ್ಲಿಗೆ ಹೋದಳು ಅಂತ ನನಗೆ ಗೊತ್ತಾಗಲಿಲ್ಲ, ಯಾಕೆ ಹೋದಳೆಂದೂ ಗೊತ್ತಾಗಲಿಲ್ಲ. ಬದುಕೆಂಬ ಸಾವಿರ ಚಕ್ರ ಸುಳಿಗಳ ವಿಲಕ್ಷಣ ಸಮುದ್ರದಲ್ಲಿ ನನ್ನನ್ನು ಸಿಲುಕಿಸಿ ಹೊರಟುಹೋಗಿದ್ದಳು.

ವಾರಗಟ್ಟಲೆ ಅವಳನ್ನು ಹುಡುಕದ ಜಾಗವಿಲ್ಲ, ತಡಕದ ತಾಣವಿಲ್ಲ. ಚಿಂತಿತನಾಗಿ, ದುಃಖಿತನಾಗಿ ನೂರೆಂಟು ನೋವುಗಳಿಗೆ ಈಡಾಗಿ ಕರಗಿ, ‌ಕೊರಗಿ, ಸೊರಗಿ, ಒಣಗಿ ಹೋಗತೊಡಗಿದ್ದ ನಾನು, ಅವಳಿಲ್ಲದ ಕಾಲೇಜೂ ಬೇಡವೆಂದು ಓದುವುದನ್ನು ಅರ್ಧಕ್ಕೇ ನಿಲ್ಲಿಸಿ ಮನೆಗೆ ಬಂದುಬಿಟ್ಟೆ. ನನ್ನಲ್ಲಿ ಅವತ್ತು ಪ್ರಶ್ನೆಗಳಿದ್ದವು. ಇವತ್ತೂ ಪ್ರಶ್ನೆಗಳೇ ಇವೆ. ಅವತ್ತು ಅವಳು ಎಲ್ಲದಕ್ಕೂ ಉತ್ತರವಾಗಿದ್ದಳು. ಆದರಿವತ್ತು ಅವಳು ಮರೆಯಲ್ಲಿನ ನಿರುತ್ತರೆ. ನಾನವಳಿಗೆ ಬಂಧನಗಳಿಲ್ಲದ, ನಿಬಂಧನೆಗಳಿಲ್ಲದ, ಒತ್ತಡಗಳಿಲ್ಲದ, ಒತ್ತಾಯವಿಲ್ಲದ, ಕಾರಣಗಳೂ ಇಲ್ಲದ ಪ್ರೀತಿ ಕೊಟ್ಟಿದ್ದೀನಿ ಅಂತ ನನ್ನಷ್ಟಕ್ಕೆ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೂ ನತದೃಷ್ಟನಾಗಿ ಉಳಿದಿದ್ದಕ್ಕೆ ಖೇದ ಇದ್ದೇ ಇತ್ತು.
ಅದೆಷ್ಟೋ ವರುಷಗಳು ಉರುಳಿದ ಬಳಿಕ ನನಗೊಂದು ಪತ್ರ ಬಂದಿತು. ಆ ಪತ್ರ ಹೀಗಿತ್ತು:

ಡಿಯರ್ ಉಮರ್,
            ಯಾವ ದುಗುಡ ದುಮ್ಮಾನವೂ ಬೇಡ ನಿನಗೆ. ತಲೆದಿಂಬಿಗೆ ತಲೆಯಿಕ್ಕಿ ಮಹಾರಾಜನಂತೆ ಮೈಚಾಚಿ ಮಲಗು. ಬಿಕ್ಕಳಿಕೆ ಬಸಿದುಕೊಳ್ಳಲು ನನ್ನ ಎದೆಯಿದೆ. ನಿನ್ನ ತಲ್ಲಣದ ಘಳಿಗೆಗಳಿಗೆ ನಾನು ಭರವಸೆಯ ಊರುಗೋಲು. ಕರೆದ ತಕ್ಷಣ ನಡೆದು ಬರುತ್ತೇನೆ. ಕರೆಯದಿದ್ದರೆ ಬಂದು ಕಾಡುತ್ತೇನೆ. ತೆರೆದ ಕಿಟಕಿಗೆ ನಾನು ತಂಗಾಳಿಯಾಗಬಲ್ಲೆ. ಕದ ಮುಚ್ಚಿದ ಮನೆಗೆ ದುಂಬಿಯಾಗಿ ನುಸುಳಬಲ್ಲೆ.
     ಹೌದು ಕಣೋ, ಈ ಜನ್ಮವೆಂಬುದು ನಿನಗೇ ಮೀಸಲು. ನೀನು ಎಲ್ಲೋ ಒಬ್ಬಂಟಿ ಕಾವಳದಲ್ಲಿ ಕಣ್ಣೀರಿಟ್ಟರೆ ನನ್ನ ಪ್ರೀತಿ ಅಸಹನೆಯ ಬಾಣಲೆ. ನಾನು ಸತ್ತು ಹೋದ ಮೇಲೆ ಹೇಗೋ ಏನೋ ಹೇಳಲಾರೆ. ಆದರೆ ಬದುಕಿರುವಷ್ಟು ದಿನ, ಬದುಕಿರುವಷ್ಟು ಕ್ಷಣ ನಿನಗೋಸ್ಕರ ಬದುಕುತ್ತೇನೆ. ಸತ್ತು ಹೋದ ಮೇಲೆ ನಿನ್ನ ನೆನಪುಗಳಲ್ಲಿ ನಾನು ಜೀವಂತವಾಗಿಯೇ ಇರುತ್ತೇನೆ.
       ಹಾಂ! ಜನ್ಮ ಕೊಟ್ಟವರು, ಜೊತೆ ಹುಟ್ಟಿದವರು, ಇನ್ನ್ಯಾರೋ ಬಂಧ ಕಳೆದುಕೊಂಡವರು, ಮತ್ತವರಿಗೆ ಜನ್ಮವಿತ್ತವರು ಸಾವಿರ ಪ್ರಶ್ನೆ ಕೇಳಬಹುದು. ಅದಕ್ಕೆ 'ಹುಂ' ಅನ್ನಬೇಡ, 'ಊಹೂಂ' ಅನ್ನಲೂಬೇಡ. ಒಮ್ಮೆ ಮೆಲುವಾಗಿ ನಕ್ಕು ಮುಂದಕ್ಕೆ ಹೊರಡು.
       ನನಗೆ ಚೆನ್ನಾಗಿ ನೆನಪಿದೆ. ನಿನ್ನ ಪ್ರೀತಿಯಲ್ಲಿ, ನಿನ್ನ ಒಳ್ಳೆಯತನದಲ್ಲಿ, ನಿರಂತರ ಮಮತೆಯ ಭಾರದಲ್ಲಿ ಕೊಚ್ಚಿ ಹೋದ ಹುಡುಗಿ ನಾನು. ಕೊಟ್ಟಿದ್ದಕ್ಕಿಂತ ಪಡೆದಿದ್ದೇ ಜಾಸ್ತಿ. ನಿನ್ನ ಜಾಣತನ, ಓದುವ ಹುಚ್ಚು, ಕೀಟಲೆ ಬುದ್ಧಿ, ಪ್ರೀತಿಯ ತಹತಹ ಎಲ್ಲವೂ ನನಗೆ ಇಷ್ಟವಾಗಿತ್ತು. ಅದಕ್ಕಾಗಿಯೇ ನಿನ್ನನ್ನು ವಿಪರೀತ ಹಚ್ಚಿಕೊಂಡೆ. ನೀನು ಬೆರಗಾಗುವ ಹಾಗೆ ಪ್ರೀತಿಸಿದೆ. ಜತೆಗಿದ್ದಷ್ಟೂ ದಿನ ನಿನ್ನ ಪಿಸುಮಾತಿಗೆ ನವಿಲಿನಂತೆ ನಲಿಯುತ್ತಿದ್ದೆ, ನದಿಯಂತೆ ಹರಿಯುತ್ತಿದ್ದೆ, ಹೂವಂತೆ ಅರಳುತ್ತಿದ್ದೆ. ಹೀಗಿದ್ದಾಗಲೇ ಒಂದು ದಿನ ನಮ್ಮ ಪ್ರೀತಿ, ಅದರ ರೀತಿ ತಿಳಿದಾಗ ನಮ್ಮಪ್ಪ ವ್ಯಗ್ರರಾದರು. ವಜ್ರಮುನಿಯಂತೆ ಧಿಮಿಧಿಮಿ ಅನ್ನುತ್ತಲೇ ಊರಿಗೆ ಕರೆಸಿಕೊಂಡರು. ಓದೂ ಬಿಡಿಸಿದರು. ನನಗಾದ್ರೂ ಅಪ್ಪನನ್ನು ಎದುರಿಸಿ ಗೊತ್ತಿಲ್ಲ. ನಿನ್ನನ್ನು ಮರೆತು ಬದುಕಬಲ್ಲೆ ಅಂತ ನಂಬಿಕೆ ಇರಲಿಲ್ಲ. ಅದನ್ನೆಲ್ಲ ಅಮ್ಮ ಕೇಳಲಿಲ್ಲ. ನನ್ನ ಹಠಕ್ಕೆ, ನಿರಂತರ ಅಳುವಿಗೆ, ದಿನದಿನದ ಕೋರಿಕೆಗೆ ಅಪ್ಪ ಕೇರ್ ಮಾಡಲೇ ಇಲ್ಲ. ಒಂದೇ ಒಂದು ಬಾರಿ ಅದ್ಯಾರಿಗೋ ತೋರಿಸಿ, ನಿನಗಿವನು ಇಷ್ಟನಾ? ಅಂತಲೂ ಕೇಳದೆ ನನ್ನ ಮದುವೆ ಮಾಡಿ ಮುಗಿಸಿ ಬಿಟ್ಟರು. "ಕಾಲ ಎಲ್ಲವನ್ನೂ ಮರೆಸುತ್ತೆ. ಅವನನ್ನು ಮರೆತು ಇವನ ಜೊತೆ ಬಾಳು ನಡೆಸು" ಅಂದು ಬಿಟ್ಟರು. ಹೇಳು, ನಾನಾದರೂ ಏನು ಮಾಡಲಿ?
      ನಾನು ನಿನ್ನಿಂದ ಕಳಚಿಕೊಳ್ತೀನಿ ಎಂಬ ಚಿಕ್ಕದೊಂದು ಸುಳಿವು ಸಿಕ್ಕಿದ್ದರೂ ನಿನ್ನನ್ನು ಕಳೆದುಕೊಳ್ಳುತ್ತಿರಲಿಲ್ಲ. ಸುಳಿವು ಸಿಗುವ ಹೊತ್ತಿಗೆ ನಾನೇ ಸುಳಿಗೆ ಸಿಕ್ಕಿ ಬಿಟ್ಟಿದ್ದೆ. ಇವತ್ತಿಗೂ ಅದೆಲ್ಲದರ ಬಗ್ಗೆ ಹೇಗೆಲ್ಲ ಯೋಚಿಸುತ್ತೇನೆ ಗೊತ್ತಾ? ನನಗೆ ಇಷ್ಟೊಂದು ಯಾತನೆಯಾಗುತ್ತಿರುವುದು ನಿನ್ನನ್ನು ಕಳೆದುಕೊಂಡದ್ದಕ್ಕಾ? ನಾನು ನಿನ್ನ ಬದುಕಿನಿಂದ ಹೇಳದೆ ಕೇಳದೆ ಎದ್ದು ಬಂದಿದ್ದಕ್ಕಾ? ನಿನ್ನನ್ನು ಕಳೆದುಕೊಂಡ ದುಃಖ ದೊಡ್ಡದಾ? ನೀನಿಲ್ಲದೆ ಒಬ್ಬಂಟಿಯಾದೆ ಎಂಬ ಯಾತನೆ ದೊಡ್ಡದಾ? ಯೋಚಿಸುತ್ತಾ ಹೋದಂತೆಲ್ಲ ಪ್ರಶ್ನೆಗಳ ಹುತ್ತವೇ ಎದ್ದು ನಿಲ್ಲುತ್ತದೆ. "ಉತ್ತರ" ರೂಪದ ಹಾವು ಅದೆಲ್ಲೋ ತಪ್ಪಿಸಿಕೊಂಡು, ತಪ್ಪಿಸಿಕೊಂಡು ಬಿಡದೆ ಕಾಡುತ್ತದೆ. ನಿನ್ನ ಒಲವಿನ ಹಾಗೆ ಅದರ ನೆನಪಿನ ಹಾಗೆ!
     ನಿನಗೆ ನೆನಪಿದೆಯೋ ಇಲ್ವೋ, ಅವತ್ತು "ಧೋ" ಎಂದು ಸುರಿದ ಮಳೆಯಲ್ಲಿ ನಾವಿಬ್ಬರೂ ಕೈಕೈ ಹಿಡಿದಿದ್ದು. ಇಬ್ಬರ ಪಾಲಿಗೂ ಅದು ಪ್ರೀತಿಯ ಮೊದಲ ದಿನ! ಅವತ್ತು ಎಲ್ಲವನ್ನೂ ಎಲ್ಲರನ್ನೂ ಮರೆತು ನಾನು ನಿನ್ನ ಕೈ ಹಿಡಿದಿದ್ದೆ. (ಇನ್ಯಾವತ್ತು ಕೈ ಬಿಡುವುದಿಲ್ಲ ಎಂದುಕೊಂಡಿದ್ದೆ. ಆದರೆ?) ನಿನ್ನ ಪಿಸು ಮಾತಿಗೆ ಕಿವಿಯಾಗಿದ್ದೆ. ನೀನು ಪ್ರಪೋಸ್ ಮಾಡಿದ್ದು ಕಂಡು ನಾಚಿ ನೀರಾಗಿದ್ದೆ. ಅಂತಹ ಮಳೆಯಲ್ಲೂ ಬೆವೆತು ಹೋಗಿದ್ದೆ.
     ಈಗಲೂ ಅಷ್ಟೇ ನಿನ್ನ ನೆನಪಾದರೆ ಸಾಕು, ಕಣ್ಣಂಚಿನಲ್ಲಿ ಹನಿಯೊಂದು ಥಟ್ಟನೆ ಉದುರುತ್ತೆ. ಅದರ ಹಿಂದೆಯೇ ನೀನು ಯಾರು? ನಾನು ಯಾರು? ಇದೆಲ್ಲ ಹೇಗಾಯ್ತು? ಯಾಕಾಯ್ತು? ಇಂಥ ಯಾತನೆ ಯಾಕೆ ಜತೆಯಾಯ್ತು? ಎಂಬೆಲ್ಲಾ ಪ್ರಶ್ನೆಗಳು ಎದ್ದು ನಿಂತು-  ಹೌದು ಕಣೋ, ಆಗೆಲ್ಲ ನಾನು ತತ್ತರಿಸಿ ಹೋಗ್ತೀನಿ. ಏಟು ತಿಂದ ಹಕ್ಕಿಯ ಥರಾ ವಿಲವಿಲ ಒದ್ದಾಡಿ ಬಿಡ್ತೀನಿ.

ಮತ್ತೆ ಮತ್ತೆ ಕೇಳುತ್ತೇನೆ. ನಿನ್ನಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ನನ್ನನ್ನು ಒಮ್ಮೆ ಕ್ಷಮಿಸಿಬಿಡು. ಉಮರ್, ಈ ಜನ್ಮದಲ್ಲಿ ನಾ ನಿನಗೆ ಹೆಂಡತಿ ಆಗಲಾರೆ, ಪ್ರೇಯಸಿಯಾಗಿ ಉಳಿಯಲಾರೆ. ನಿಂಗೆ ಹೆಗಲಾಗಲಾರೆ, ನಿನ್ನ ನಗುವಾಗಲಾರೆ. ಯಾಕಂದ್ರೆ ನೀ ನೆಟ್ಟ ಪ್ರೇಮದ ಬೀಜಕ್ಕೆ ಯಾರೋ ನೀರೆರೆದರು, ಇನ್ಯಾರೋ ಗೊಬ್ಬರ ಹಾಕಿ ಪೋಷಿಸಿದರು, ಮತ್ಯಾರೋ ಕಳೆ ಕಿತ್ತು ಜೋಪಾನ ಮಾಡಿದರು, ಅದೀಗ ಬೆಳೆದು ಹೆಮ್ಮರವಾಗಿದೆ. ಆದರೆ ಫಲ ಉಣ್ಣುವವರು ಯಾರೋ. ಇಂಥ ದರಿದ್ರ ಬದುಕು ನನಗೆ ಬೇಡ ಉಮರ್. ಈ ಜನ್ಮವೆಂಬುದು, ಈ ಪ್ರೀತಿಯೆಂಬುದು, ಈ ದೇಹವೆಂಬುದು, ಈ ಮನಸೆಂಬುದು, - ಎಲ್ಲವೂ ನಿನಗೇ ಮೀಸಲು. ಸಾವಲ್ಲಿಯೂ ಸಾಯದ ಪ್ರೀತಿ, ಇನ್ಯಾರೊಟ್ಟಿಗೋ ಸೇರುವ ಬದಲು ಮಣ್ಣಲ್ಲಿ ಮಣ್ಣಾಗಿ ಬಿಡಲಿ.

ಈ ಪತ್ರ ಓದಿಯಾದ ಮೇಲೆ ಮರಳಿ ಪತ್ರ ಬರೆಯುವುದಾಗಲೀ, ನನ್ನ ಕಾಣಲಿಕ್ಕೆ ಬರುವುದಾಗಲೀ ಮಾಡಬೇಡ ಕಣೋ. ನೀ ಬರೆದರೆ ಓದಲಿಕ್ಕೆ, ಬಂದರೆ ಭೇಟಿಯಾಗಿ ಮಾತಾಡಲಿಕ್ಕೆ ನಾನಿರಲ್ಲ.
                          ಇಂತಿ
                          ನಿನ್ನ ಪ್ರೀತಿಯನ್ನು ಗೆದ್ದು, ನಿನ್ನನ್ನು ಸೋಲಿಸಿದವಳು


© Copyright 2022, All Rights Reserved Kannada One News