ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 15.11.2022

ಅಂದು ಟ್ರೋಲ್ ಮಾಡುವ ಭಕ್ತಗಣಗಳಿಗೆ ಬಟವಾಡೆ ದಿನ. 

ಭಕ್ತಗಣಗಳು ಸಾಮ್ರಾಟನಂತೆ ದಿನದ ಹದಿನೆಂಟು ಗಂಟೆ ಸಾಮಾಜಿಕ ಜಾಲತಾಣಗಳಲ್ಲಿ ಗುಲಾಮರಂತೆ ದುಡಿದು - ಸಾಮ್ರಾಟ ಅಥವಾ ಅವನ ಸರ್ವಾಧಿಕಾರದ ಜನವಿರೋಧಿ ಆಡಳಿತವನ್ನು ವಿರೋಧಿಸುವ ಮತ್ತು ವಿಜ್ಞಾನದ ಬಗ್ಗೆ ಸಾಮ್ರಾಟನಿಗಿರುವ ಅಜ್ಞಾನವನ್ನು ಅಪಹಾಸ್ಯ ಮಾಡುವವರ ಮೇಲೆ ಬಿದ್ದು, ಹತಾರು ಮಾಡಿಕೊಂಡ ನಾಲಿಗೆಯಿಂದ ಬಾಯಿ ಮುಚ್ಚಿಸುವುದು ಪ್ರಜೆಗಳಿಗೆ ತಿಳಿದ ವಿಷಯವಷ್ಟೆ. ಆದರೆ, ಅದಕ್ಕಾಗಿ ಪ್ರತಿ ಟ್ರೋಲಿಗೆ ಸಿಗುತ್ತಿದ್ದ ಎರಡು ವರಹಗಳು ಸಾಮ್ರಾಟನ ದುಬಾರಿ ಯುಗದಲ್ಲಿ ಸಂಜೆ ಹೆಂಡಕ್ಕೂ, ಸೇದುವ ಬೀಡಿಗೂ ಸಾಲದಾಗಿತ್ತು. ಹಾಗಿರುವಾಗ ಓದಿ, ಕಲಿತಿದ್ದ ಕೆಲಸಗಳನ್ನು ಬಿಟ್ಟು ಬರೀ ಟ್ರೋಲ್ ಗಂಜಿಕಾಸಿಂದ ಸಂಸಾರ ತೂಗಿಸುವುದು ಭಕ್ತರಿಗೆ ಕಷ್ಟಸಾಧ್ಯವಾಗಿತ್ತು. ಆದ್ದರಿಂದಲೇ ಬಟವಾಡೆ ದಿನ ಭಕ್ತ ಟ್ರೋಲ್ ಗಳು ಕಾಮೆಂಟ್ ಹಾಕಿದ್ದಕ್ಕಿಂತ ಹೆಚ್ಚಿಗೆ ಲೆಕ್ಕ ಕೊಟ್ಟು ಹಣ ಗಿಟ್ಟಿಸಲು ಹವಣಿಸುತ್ತಿದ್ದರು. 

ಆದರೆ, ಮಾಧವ ಕೃಪಾಕಟಾಕ್ಷ ಕುಟೀರದ ಅರ್ಚಕ ಭಾರೀ ಹುಷಾರಿ ಆಸಾಮಿ. ವಾಟ್ಸಪ್ ಯೂನಿವರ್ಸಿಟಿಯ ಪಂಡಿತ - ಕುಟೀರದ ಚಡ್ಡಿಶಿಷ್ಯನನ್ನು ಪಕ್ಕದಲ್ಲಿರಿಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಜಾಲಾಡಿ, ಭಕ್ತರು ಮಾಡಿದ ಟ್ರೋಲ್ ಗಳನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ, ಅದಕ್ಕೆ ತಕ್ಕಂತೆ ಅವರವರ ಖಾತೆಗೆ ಹಣ ಸಂದಾಯ ಮಾಡಲು ಅರಮನೆಗೆ ಶಿಫಾರಸ್ಸು ಮಾಡುತ್ತಿದ್ದ. 

ಅರ್ಚಕನ ಈ ಜಿಗುಟುತನದಿಂದ ಟ್ರೋಲ್ ಭಕ್ತಗಣಗಳಿಗೆ ಏನೂ ಮಾಡಲಾಗದ ಇಕ್ಕಟ್ಟು ಪರಿಸ್ಥಿತಿ ಒದಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ದಿನಾ ಬೆಳಗಾದರೆ ವಿರೋಧಿಗಳನ್ನು ಅವರ ಅಪ್ಪ, ಅಮ್ಮ, ಅಕ್ಕಂದಿರ ಬಗ್ಗೆ ಅಸಹ್ಯ ಮಾತುಗಳನ್ನಾಡಿ ಬಾಯಿ ಮುಚ್ಚಿಸುವುದು ಹೆಚ್ಚು ಸಮಯ, ಶ್ರಮ ವ್ಯಯಿಸಬೇಕಾಗಿ ಬಂದು ಬೇಸರವನ್ನುಂಟು ಮಾಡುತ್ತಿತ್ತು. ಅದರಲ್ಲೂ ಇತ್ತೀಚಿಗೆ ದಿನದಿಂದ ದಿನಕ್ಕೆ ಏರುತ್ತಿದ್ದ ಅಡುಗೆ ಸಾಮಗ್ರಿ, ಇಂಧನ ಬೆಲೆಗಳಿಂದ ರೋಸೆದ್ದು ಸಾಮ್ರಾಟನನ್ನು ತರಾಟೆಗೆ ತೆಗೆದುಕೊಂಡವನ ಮೇಲೆ ಒಬ್ಬ ಭಕ್ತ ಅಸಹ್ಯವಾಗಿ ಬಿದ್ದರೆ, ಹತ್ತಾರು ಜನರು ಆ ಭಕ್ತನ ಮೇಲೆ ತಿರುಗಿ ಬಿದ್ದು ಅವನು ಯಾಕಾದರೂ ಹುಟ್ಟಿದೆನೊ ಅನಿಸುವಂತೆ ಜನ್ಮ ಜಾಲಾಡುತ್ತಿದ್ದದ್ದು ಅವರನ್ನು ಹೈರಾಣಾಗಿಸಿತ್ತು. ಇದರ ಜೊತೆಗೆ ವಿರೋಧಿಗಳನ್ನು ಮಣಿಸಲು ಸಾಮ್ರಾಟ ಟಂಕಿಸಿ ಕೊಟ್ಟಿದ್ದ ವಿದೇಶಿ ಗುಲಾಮ, ಗಂಜಿಗಿರಾಕಿ ಇತ್ಯಾದಿ ಪದಗಳು ಸವಕಲಾಗಿ ಅದಕ್ಕೆ ಪ್ರತಿಯಾಗಿ ಚಡ್ಡಿ ಗುಲಾಮ, ಟು ರುಪೀಸ್ ಭಕ್ತ ಇತ್ಯಾದಿ ಪದಗಳು ಜನರಿಂದ ಪ್ರಯೋಗಿಸಲ್ಪಟ್ಟು ಭಕ್ತಗಣಗಳಿಗೆ ಪ್ರತ್ಯುತ್ತರಿಸಲು ಹೊಸಪದಗಳು ಹೊಳೆಯದೆ ಬಾಯಿ ಪಸೆ ಆರಿ, ಗಾಳಿಗಾಗಿ ಶ್ವಾನದಂತೆ ನಾಲಿಗೆ ಬಾಯಿಯಾಚೆ ಬಿದ್ದು ಅದುರುತ್ತಿತ್ತು.

ಇಂತಿರುವಾಗ – ಗೂಢಚರ್ಯೆ ಇಲಾಖೆ ಅರಮನೆಗೆ ಒಂದು ಸುದ್ಧಿ ಮುಟ್ಟಿಸಿತು. ಸಾಮಾಜಿಕ ಜಾಲತಾಣದಲ್ಲಿ ಸಾಮ್ರಾಟನ ಭಕ್ತರ ಊಳಿಡುವಿಕೆ ಒಂದೆರೆಡು ಕೆಜಿಯಷ್ಟಾದರೆ, ಸಾಮ್ರಾಟನ ಮೇಲೆ ಟನ್ನುಗಟ್ಟಲೆ ಜನರ ಟೀಕೆಗಳು ತಿರುಗಿ ಬೀಳುತ್ತಿದ್ದವು.

ಸುದ್ಧಿಯನ್ನು ಕೇಳಿದ ಸಾಮ್ರಾಟ ಕಂಗಾಲಾದ. ಟ್ರೋಲ್ ಮಾಡುವ ತನ್ನ ಭಕ್ತರ ಸಾಮರ್ಥ್ಯ ಇಷ್ಟು ಬೇಗ ಕಡಿಮೆಯಾದರೆ ತಾನು ಚಿರಂಜೀವಿಯಾಗಿ ಕೇಸರಿ ಆಳ್ವಿಕೆಯನ್ನು ಮುಂದಿನ ದಿನಗಳಲ್ಲಿ ನಿಶ್ಚಿಂತೆಯಿಂದ ನಡೆಸುವುದಾದರೂ ಹೇಗೆಂದು ಚಿಂತಿತನಾದ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಚಡ್ಡಿದೋಸ್ತು ಅಪರಿಮಿತ ಕುತಂತ್ರಿ ವಿಷಯ ತಿಳಿದು “ಅಯ್ಯೋ…ಅದಕ್ಯಾಕೆ ಅಷ್ಟೊಂದು ಟೆನ್ಶನ್ನು. ವಿರೋಧಿಗಳು ಉಗಿದರೆ ನೆಕ್ಕಿಕೊಂಡು, ಅದನ್ನೇ ಜನರ ಸಿಂಪತಿ ಗಿಟ್ಟಿಸುವ ತಂತ್ರವಾಗಿಸುವುದನ್ನ ನಿಮ್ಮ ನರಿಬುದ್ಧಿಗೆ ನಾನು ಹೇಳಿ ಕೊಡಬೇಕೇ?” ಎಂದಾಗ ಸಾಮ್ರಾಟ ನಸುನಕ್ಕು, ಕಣ್ಣು ಮಿಟುಕಿಸಿದ.  

ಮರುದಿನ ಸಾಮ್ರಾಟ ಅರಮನೆಯ ಬಾಲ್ಕನಿಗೆ ಬಂದ ನಿಂತ. ಕೆಳಗೆ ಭಕ್ತಗಣಗಳು “ದೇಶೋದ್ಧಾರಕ ಸಾಮ್ರಾಟ ಚಿರಾಯುವಾಗಲಿ. ಅವನ ಐವತ್ತಾರು ಇಂಚಿನೆದೆ ಎಪ್ಪತ್ತಾರಾಗಿ ವೈರಿಗಳನ್ನು ಸದೆ ಬಡಿಯಲಿ” ಎಂದು ಜೈಕಾರ ಹಾಕುತ್ತಿದ್ದರು. ಸಾಮ್ರಾಟ ಗಾಳಿಯಲ್ಲಿ ಕೈ ಆಡಿಸುತ್ತ ಭಕ್ತರಿಗೆ ಬಾಯಿ ಮುಚ್ಚಲು ಸನ್ನೆ ಮಾಡಿದ. ತಟ್ಟನೆ ಬಿಕ್ಕಿಬಿಕ್ಕಿ ಅಳುತ್ತ ಮೊಸಳೆ ಕಣ್ಣೀರಿಟ್ಟ. “ಮಿತ್ರೋ...ದೇಶವಾಸಿಯೋ…ದಿನಾಲೂ ನಾನು ವಿರೋಧಿಗಳ ಕೆಜಿಗಟ್ಟಲೆ ಬೈಗುಳಗಳನ್ನು ತಿನ್ನುತ್ತಿದ್ದೇನೆ. ಆದರೇನಾಯಿತು? ದೇಶಕ್ಕಾಗಿ….ಧರ್ಮರಕ್ಷಣೆಗಾಗಿ ಅದನ್ನು ಜೀರ್ಣಿಸಿಕೊಳ್ಳುತ್ತೇನೆ. ಅವೇ ನನಗೆ ಪೌಷ್ಟಿಕಾಂಶಗಳು. ಆ ಬೈಗುಳದ ಉಗುಳಿನ ಮಳೆಗೆ ನಾನೆಂದೂ ಹೆದರುವುದಿಲ್ಲ” ಎಂದು ನಾಲಿಗೆಯಿಂದ ನೆಕ್ಕಿ, ರುಮಾಲಿನಿಂದ ಮುಖ ಒರೆಸಿಕೊಂಡ.     

ಊಟತಿಂಡಿ ಮಾಡದೆ ಸಾಮ್ರಾಟ ದಿನಾಲೂ ಜನರ ಬೈಗುಳ ತಿನ್ನುತ್ತಿರುವ ಸುದ್ಧಿ ನಾಡಿನಲ್ಲೆಲ್ಲ ಹರಡಿ, ಅದು ಮಾಧವ ಕೃಪಾಕಟಾಕ್ಷ ಕುಟೀರದ ಅರ್ಚಕನ ಮುಖಕ್ಕೆ ರಪ್ಪೆಂದು ರಾಚಿತು. “ಈ ಅಡ್ನಾಡಿಯನ್ನು ಏನೆಂದು ಸಾಮ್ರಾಟನನ್ನಾಗಿ ಮಾಡಿದ್ದೀನೊ! ಯಾರಾದ್ರು ಬೈದು ಉಗಿದರೆ ನೆಕ್ಕಿಕೊಳ್ತಾರ? ಇವನಿಗೆ ಏನು ಬಂತು ಕರ್ಮ!” ಎಂದು ಗೊಣಗಿಕೊಂಡವನು, ಹಣೆಗೆ ಕೈ ಹಚ್ಚಿ ಸುಧೀರ್ಘವಾಗಿ ಚಿಂತಿಸಿ ವಾಟ್ಸಪ್ ಯೂನಿವರ್ಸಿಟಿ ಪಂಡಿತನನ್ನು ಕರೆದ.     

“ಈ ಭಕ್ತರು ಆರಾಮಾಗಿ ತಿಂದುಂಡು ಒತ್ಲಾ ಹೊಡಿತಿದ್ದಾರೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿರೋಧಿಗಳು ಟನ್ನುಗಟ್ಟಲೆ ಉಗೀತಿರುವಾಗ ಇವರೇನು ಮಾಡುತ್ತಿದ್ದಾರೆ. ಕಡಲೇಕಾಯಿ ಪರಿಷೇಲಿ ಶೇಂಗಾ ತಿನ್ನುತ್ತಿದ್ದಾರ? ಇನ್ಮೇಲೆ ಟ್ರೋಲ್ ಗಂಜಿಕಾಸು ಕೊಡೋ ಸಿಸ್ಟಮ್ಮನ್ನು ಬದಲಿಸಬೇಕು. ಪ್ರತಿ ಟ್ರೋಲಿಗೆ ಎರಡು ವರಹದ ಬದಲಿಗೆ ಕೆಜಿ ಲೆಕ್ಕದಲ್ಲಿ ದುಡ್ಡು ಕೊಡೋಣ. ಪ್ರತಿಯೊಬ್ಬ ಭಕ್ತನೂ ಕಡಿಮೆಯೆಂದರೂ ಒಂದು ಟನ್ ಟ್ರೋಲ್ ಮಾಡ್ಬೇಕು. ಇಲ್ಲಾಂದ್ರೆ ಗಂಜಿಕಾಸಿಲ್ಲ” ಎಂದು ಬುಸುಗುಟ್ಟಿದ. 


“ಅಲ್ಲಾ…ಅರ್ಚಕರೇ…” ಎಂದು ವಾ.ಯೂ.ಪಂಡಿತ ಬಾಯಿ ತೆರೆದದ್ದೇ, ಅರ್ಚಕ “ ಅಲ್ಲಾ…ಅನ್ನಬೇಡ. ನಾಲಿಗೆ ಸಿಗಿದೇನು!” ಅಂದ. ಆದ ಪ್ರಮಾದ ಅರಿವಿಗೆ ಬಂದು ವಾ.ಯೂ.ಪಂಡಿತ “ಸರಿ..ಅರ್ಚಕರೇ…ಬೈಗುಳಗಳನ್ನು ಕೆಜಿಗಟ್ಟಲೆ ಹೇಗೆ ಲೆಕ್ಕ ಹಾಕೋದು?” ಎಂದು ತಲೆ ಕೆರೆದುಕೊಂಡು ನಿಂತ. ಆ ಮಾತಿಗೆ ಮತ್ತಷ್ಟು ಕೋಪಗೊಂಡ ಅರ್ಚಕ “ಅಲ್ಲಯ್ಯ…ಭಾರೀ ವಾಟ್ಸಪ್ ಯೂನಿವರ್ಸಿಟಿ ಪಿಎಚ್ ಡಿ ಹೊಲ್ಡರ್….ಪಂಡಿತ ನೀನು, ಅಷ್ಟೂ ಗೊತ್ತಾಗೊಲ್ವ?” ಎಂದು ಹಲ್ಲುಕಡಿದ.

“ನೋಡು….ಗುಲಾಮ ಅಂತ ಟ್ರೋಲ್ ಮಾಡಿದರೆ ಐದು ಕೆಜಿ ಲೆಕ್ಕ. ಹಾಗೆ ಅರ್ಬಲ್ ನಕ್ಸಲ್ ಅಂತ ಟ್ರೋಲ್ ಮಾಡಿದರೆ ಹತ್ತು ಕೆಜಿ. ಬೆರಕೆಗೆ ಹುಟ್ಟಿದವ ಅಂತ ಬೈದರೆ ಇಪ್ಪತ್ತೈದು ಕೆಜಿ. ವಿರೋಧಿಗಳ ಅಪ್ಪನ ಮಾತೆತ್ತಿದರೆ ಮೂವತ್ತು, ಅವರ ಮನೆಯ ಹೆಣ್ಣುಮಕ್ಕಳನ್ನು ಬೀದಿಗೆ ತಂದರೆ ಐವತ್ತು ಕೆಜಿ….” ಹೀಗೆ ಅರ್ಚಕ ವಿವರಿಸುತ್ತಿದ್ದರೆ ವಾಟ್ಸಪ್ ಯೂನಿವರ್ಸಿಟಿ ಪಂಡಿತ ತಲೆ ಬಗ್ಗಿಸಿ ವಿಧೇಯತೆಯಿಂದ ಅವನ್ನು ಬರೆದುಕೊಳ್ಳುತ್ತಿದ್ದ. 

“ಕಂಡೋರು ಸುಖಾಸುಮ್ಮನೆ ಬೈದರೆ ಸ್ವಾಭಿಮಾನಿಗಳಾದವರು ಸುಮ್ಮನಿರುತ್ತಾರೆಯೇ? ಕನಿಷ್ಟ ಯಾಕೆಂದು ಕೇಳುತ್ತಾರೆ. ಅಂಥದ್ದರಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿ ಜನಗಳು ಬೈದರೆ ಏನೂ ಆಗಿಲ್ಲವಂತೆ ಒರಿಸಿಕೊಳ್ಳೊ ಮೂರು ಬಿಟ್ಟವನು ಇನ್ನೆಂಥ ಶತಮೊಂಡ… ಭಂಡನಿರಬೇಕು?” ಎಂದು ಪ್ರಜೆಗಳು ಹಣೆ ಚಚ್ಚಿಕೊಂಡರು.  

-ಚಂದ್ರಪ್ರಭ ಕಠಾರಿ

cpkatari@yahoo.com

© Copyright 2022, All Rights Reserved Kannada One News