ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಳಿಸಿದ ಎಲಾನ್ ಮಸ್ಕ್

ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಳಿಸಿದ ಎಲಾನ್ ಮಸ್ಕ್

Updated : 28.10.2022

ನ್ಯೂಯಾರ್ಕ್: ಟ್ವಿಟ್ಟರ್ ಇನ್‍ಕಾರ್ಪೊರೇಷನ್ ಸಂಸ್ಥೆ (Twitter Inc) ಯನ್ನು ಖರೀದಿಸುವ 44 ಶತಕೋಟಿ ಡಾಲರ್ ($44 billion) ಒಪ್ಪಂದವನ್ನು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಗುರುವಾರ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಒಪ್ಪಂದದ ಬಗೆಗೆ ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೊಂಡಂತಾಗಿದೆ.

ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆಯೇ ಮಸ್ಕ್ ಅವರು ಹಾಲಿ ಸಿಇಓ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನೂ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

ಉಭಯ ಉನ್ನತಾಧಿಕಾರಿಗಳು ಕಂಪನಿಯ ಸ್ಯಾನ್‍ಫ್ರಾನ್ಸಿಸ್ಕೊ ಕೇಂದ್ರ ಕಚೇರಿ ತೊರೆದಿದ್ದು, ಇನ್ನು ಆಗಮಿಸುವುದಿಲ್ಲ ಎಂದು ಸಿಎನ್‍ಬಿಸಿ ವರದಿ ಮಾಡಿದೆ. ಕಾನೂನು, ನೀತಿ ಮತ್ತು ವಿಶ್ವಾಸ ವಿಭಾಗದ ಮುಖ್ಯಸ್ಥ ವಿಜಯ್ ಗದ್ದೆ, 2012ರಿಂದ ಟ್ವಿಟ್ಟರ್ ಪ್ರಧಾನ ವಕೀಲರಾಗಿದ್ದ ಸಿಯಾನ್ ಎಡ್ಗೆಟ್ ಕೂಡಾ ಕಂಪನಿ ತೊರೆಯತ್ತಿದ್ದರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‍ಬರ್ಗ್ ವರದಿ (Bloomberg report) ಮಾಡಿದೆ.

ಷೇರುದಾರರಿಗೆ ಪ್ರತಿ ಷೇರಿಗೆ 54.20 ಡಾಲರ್ ನೀಡಲಾಗುತ್ತಿದೆ ಮತ್ತು ಟ್ವಿಟ್ಟರ್ ಇದೀಗ ಖಾಸಗಿ ಕಂಪನಿಯಾಗಿ ಕಾರ್ಯ ನಿರ್ವಹಿಸಲಿದೆ. ವಿಶ್ವದ ಅತಿ ಶ್ರೀಮಂತ ಉದ್ಯಮಿ ಕಳೆದ ಜನವರಿಯಲ್ಲಿ ಕಂಪನಿಯ ದೊಡ್ಡ ಪಾಲನ್ನು ಖರೀದಿಸುವ ಮೂಲಕ ಈ ಬಹುಕೋಟಿ ವ್ಯವಹಾರ ಆರಂಭವಾಗಿತ್ತು. ಇದನ್ನು ಖರೀದಿಸುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯಲು ಬಳಿಕ ಮಸ್ಕ್ ಯತ್ನಿಸಿದ್ದು ಕಾನೂನು ಹೋರಾಟಕ್ಕೆ ಕಾರಣವಾಗಿತ್ತು.

ಪ್ರಸ್ತಾವಿತ ಷರತ್ತುಗಳನ್ನು ಅಕ್ಟೊಬರ್ 4ರಂದು ಮಸ್ಕ್ ಒಪ್ಪಿಕೊಂಡಿದ್ದು, ಒಪ್ಪಂದ ಕೊನೆಗೊಳಿಸಲು ಅಕ್ಟೋಬರ್ 28ರವರೆಗೆ ಡೆಲವೆರ್ ಚಾನ್ಸರಿ ನ್ಯಾಯಾಲಯದ ನ್ಯಾಯಾಧೀಶರ ಅವಕಾಶ ನೀಡಿದ್ದರು. ಇದೀಗ ಒಪ್ಪಂದ ಕೊನೆಗೊಳಿಸಲಾಗಿದ್ದು, ಟೆಸ್ಲಾ ಹಾಗೂ ಸ್ಪೇಸ್‍ ಎಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮಸ್ಕ್ ಅವರು ಇದೀಗ ಟ್ವಿಟ್ಟರ್ ಕೂಡಾ ನಿಯಂತ್ರಿಸಲಿದ್ದಾರೆ. ನ್ಯೂಯಾರ್ಕ್ ಸ್ಟಾಕ್ ಎ‌ಕ್ಸ್‌ಚೇಂಜ್‍ನಲ್ಲಿ ಇದೀಗ ಕಂಪನಿಯ ಷೇರುಗಳ ವಹಿವಾಟು ನಡೆಯುವುದಿಲ್ಲ ಎಂದು hindustantimes.com ವರದಿ ಮಾಡಿದೆ.

© Copyright 2022, All Rights Reserved Kannada One News