ಟಿಪ್ಪು ಪ್ರತಿಮೆ ನೂರಡಿ ಸಾಕಾ...?: ಎಡಿಟರ್ ಸ್ಪೆಷಲ್

Related Articles

ತನ್ನ ಸಮಯ ಪ್ರಜ್ಞೆಯಿಂದ ತಂದೆಯ ಜೀವ ಉಳಿಸಿದ್ದ ಬಾಲಕಿಗೆ 'ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ'

ಇಂದು ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ ದಿನ

ಲಾಲು ಪ್ರಸಾದ್ ಯಾದವ್ ಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ಮಗಳು

ಕಾವಿಯೊಳಗೊಬ್ಬ ಕಾಮಪಿಶಾಚಿ…!: ಎಡಿಟರ್‌ ಸ್ಪೆಷಲ್

ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಟಿಪ್ಪು ಪ್ರತಿಮೆ ನೂರಡಿ ಸಾಕಾ...?: ಎಡಿಟರ್ ಸ್ಪೆಷಲ್

Updated : 17.11.2022

ರಾಜ್ಯ ರಾಜಕಾರಣದಲ್ಲಿ ಸಾಂಸ್ಕೃತಿಕ ನಾಯಕ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಐದು ವರ್ಷಗಳಿಂದೀಚೆಗೆ ಸಾಂಸ್ಕೃತಿಕ ವಲಯದಲ್ಲಿ ಚರ್ಚೆಯಲ್ಲಿದ್ದ ಟಿಪ್ಪು ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇತಿಹಾಸ ತಿರುಚುವುದನ್ನೇ ಸಾಧನೆ ಮಾಡಿಕೊಂಡಿರುವ ಬಿಜೆಪಿ ಮತ್ತು ಅದರ ಭಾಗವಾದ ಮತಾಂಧ ಸಂಘ ಸಂಸ್ಥೆಗಳು ಟಿಪ್ಪು ಒಬ್ಬ ದೇಶದ್ರೋಹಿ, ಮತಾಂಧ, ಭಾಷಾಂದ ಎಲ್ಲರನ್ನು ಮತಾಂತರ ಮಾಡಿದ ಅಲ್ಲದೇ ಹಿಂದೂಗಳ ವಿರುದ್ಧ ಇದ್ದ ಎಂದು ಹೊಸ ಇತಿಹಾಸವನ್ನ ಬರೆಯಲು ಆರಂಭಿಸಿವೆ. ಹಾಗೂ ರಾಜಕೀಯ ದಾಳವಾಗಿ ಟಿಪ್ಪು ಚರಿತ್ರೆಯನ್ನ ಬಳಸಿಕೊಳ್ತಿವೆ. ಇವೆಲ್ಲಾ ಆಗುಹೋಗುಗಳು ಈ ದೇಶದ ಅಲ್ಪಸಂಖ್ಯಾತರ ಅಸ್ಮಿತೆಗೆ ನೀಡುತ್ತಿರುವ ಹೊಡೆತ ಅಷ್ಟಿಷ್ಟಲ್ಲ.

ಇನ್ನೂ ಕೆಂಪೇಗೌಡರ ಪ್ರತಿಮೆ ಅನಾವರಣದ ಹೊತ್ತಿಗೆ ಟಿಪ್ಪು ವಿರುದ್ಧ ಬಿಜೆಪಿ ನಾಯಕರು ರೂಪಿಸಿದ ಕುತಂತ್ರ ಮತ್ತು ಅವರಾಡಿದ ಮಾತುಗಳು ಅಲ್ಪಸಂಖ್ಯಾತ ನಾಯಕರನ್ನ ಮತ್ತು ಆ ಇಡೀ  ಸಮುದಾಯವನ್ನ ರೊಚ್ಚಿಗೆಬ್ಬಿಸಿದ್ದವು ಅಂದ್ರೆ ತಪ್ಪಿಲ್ಲಾ, ಇದೇ ಕಾರಣಕ್ಕೆ ಶಾಸಕ ತನ್ವೀರ್ ಸೇಠ್ ನಾವು ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆಯನ್ನು ನಿಲ್ಲಿಸ್ತೇವೆ ಎಂಬ ಹೇಳಿಕೆಯನ್ನೂ ಕೊಟ್ಟಿದ್ದಾರೆ. ಇದು ಆವೇಶದ ಹೇಳಿಕೆಯಾದರೂ ಟಿಪ್ಪುವಿನ ವ್ಯಕ್ತಿತ್ವವನ್ನ ಹೀಗೆ ನೂರು ಅಡಿ ಪ್ರತಿಮೆಗೆ ಇಳಿಸಬೇಕಿಲ್ಲ. ಯಾಕಂದ್ರೆ ಚರಿತ್ರೆಯಲ್ಲಿ ಟಿಪ್ಪು ಒಬ್ಬ ಮಹಾನ್ ಸಾಧಕ ಆ ಮೇರು ವ್ಯಕ್ತಿತ್ವವನ್ನ ಹೀಗೆ ಸಿಮಿತಗೊಳಿಸುವುದು ಸಾಧ್ಯವೇ ಇಲ್ಲ. ದೇಶಕ್ಕಾಗಿ ಸ್ವತಂತ್ರ್ಯಕ್ಕಾಗಿ ಸ್ವಾಭಿಮಾನಕ್ಕಾಗಿ ಪ್ರಾಣ ಪಣವಿಟ್ಟ ಟಿಪ್ಪು ಇತಿಹಾಸವನ್ನ ನಮ್ಮ ಜನಪದರು ಸದಾ ಕಾಯ್ದುಕೊಂಡು ಬಂದಿದ್ದಾರೆ. ಸಾಲದ್ದಕ್ಕೆ ಟಿಪ್ಪು ಮಾಡಿದ ಸಾಧನೆಗಳು ಹಾಗೂ ಅವನ ಸೌಹಾರ್ದತೆಯ ಕಾರ್ಯಗಳಿಗೆ ಸಾಕಷ್ಟು ಸಾಕ್ಷಿಗಳು ಜೀವಂತವಾಗಿವೆ. ಈ ಮತಾಂಧರ ಕಣ್ಣುಗಳಲ್ಲಿ ಟಿಪ್ಪು ಯಾಕೆ ಧರ್ಮಾಂಧನಾಗೇ ಕಾಣುತ್ತಾನೆ ಅನ್ನೋದನ್ನ ಇವತ್ತಿನ ಎಡಿಟರ್ ಸ್ಪೆಷಲ್ ಕಾರ್ಯಕ್ರಮದಲ್ಲಿ ನಿಮ್ಮ ಮುಂದಿಡುತ್ತೇವೆ...

ಕೇಳಿರಿ ಕೇಳಿರಿ ಕನ್ನಡ ಜನಗಳೇ ಮೈಸೂರಿನ ಹುಲಿ ಟಿಪ್ಪು ಕಥೆ,
ಹೈದರಾಲಿಯ ಹೆಮ್ಮೆಯ ಮಗನ ಕನ್ನಡ ನಾಡಿನ ಕೀರ್ತಿ ಕಥೆ
ಸೇನೆಯ ಕಟ್ಟಿದ ನಾಡನು ಬೆಳೆಸಿದ
ಭಾವೈಕ್ಯತೆಯನು ಜನರೊಳು ಬಿತ್ತಿದ
ಪೂರ್ಣಯ್ಯರಂತಹ ಮಿತ್ರರ ಜೊತೆಯಲಿ
ನಿಷ್ಠರ ಬಲವನು ಕೂಡಿಸಿದ...
ಇದು ಬಾಲ್ಯದಲ್ಲಿ ನಾವು ಕೇಳಿ ಬೆಳೆದ ಲಾವಣಿ ಪದ. ಟಿಪ್ಪುವಿನ ಇತಿಹಾಸ ಈ ಧರ್ಮಾಂಧರು ತಿರುಚಲಾಗದಷ್ಟು ಗಟ್ಟಿಯಾಗಿ ನಿಲ್ಲುವುದೇ ಇಂಥ ಜನಪದ ಇತಿಹಾಸಗಳಿಂದ. ಯಾಕಂದ್ರೆ ಯಾವುದೇ ಒಬ್ಬ ರಾಜ, ಅವನ ಕಾಲಘಟ್ಟದ ಸಾಮಾಜಿಕತೆ, ಮತ್ತು ವ್ಯಕ್ತಿಯ ನಿಜ ವ್ಯಕ್ತಿತ್ವ ಅರಿಯಬೇಕಿದ್ದರೇ ಆ ಚರಿತ್ರೆಯನ್ನ ನೀವು ಜನಪದರ ಕಣ್ಣುಗಳಿಂದ ನೋಡಬೇಕು, ಅವರ ಮಾತುಗಳಿಂದ, ಬಾಯಿಂದ ಬಾಯಿಗೆ ಸಾಗಿಬಂದ ಜನಪದ ಕಾವ್ಯ, ಲಾವಣಿಗಳಿಂದ ಕೇಳಬೇಕು. ಏಕೆಂದರೇ ಇದು ಯಾರು ಕೊಳ್ಳಲಾಗದ, ಯಾರೂ ಅಭಿಪ್ರಾಯ ಏರಲಾಗದ ಚರಿತ್ರೆಗಳಾಗಿರುತ್ವೆ. ಅಂಥಾದ್ದೇ ಇತಿಹಾಸಗಳಲ್ಲಿ ಟಿಪ್ಪು ಮೈಸೂರಿನ ಹುಲಿಯಾಗಿ ಅಜರಾಮರನಾಗಿದ್ದಾನೆ. ಟಿಪ್ಪು ವಿರುದ್ಧ ನಡೆದ ಕುತಂತ್ರಗಳೆಲ್ಲಾ ತಲೆಕೆಳಗಾದದ್ದು ಇದೇ ನಿಜ ಇತಿಹಾಸಗಳ ಎದುರಿನಲ್ಲಿ. ಅವನ ಇತಿಹಾಸ ಮುಚ್ಚಿ ಮತ್ತೆನನ್ನೋ ಬರೆಯ ಹೊರಟವರಿಗೆ ಇಂದಿಗೂ ಸವಾಲಾಗಿರುವುದು ಆತನ ಕುರಿತಾದ ಜನಪದ ಕಾವ್ಯಗಳು ಮತ್ತು ಲಾವಣಿಗಳು. ಆ ಕಾಲಘಟ್ಟದ ಜನ ಸಾಮಾನ್ಯರು ತಮ್ಮ ಬದುಕಿನೊಂದಿಗೆ ಬೆಸುದುಕೊಂಡ ಇತಿಹಾಸಗಳಲ್ಲಿ ಟಿಪ್ಪು ಮಹಾನ್ ನಾಯಕ ಜೊತೆಗೆ ಆತ ಕಾರ್ಯರೂಪಕ್ಕೆ ತಂದ ಜನಪರ ಯೋಜನೆಗಳಿಗೆ ಸಾಕಷ್ಟು ಸಾಕ್ಷಿಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ.

ಇನ್ನು ಲಿಂಗದೇವರು ಹಳೆಮನೆ ಅವರು ಸಂಪಾದಿಸಿರುವ ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ ಅವರ ಧೀರ ಟೀಪುವಿನ ಲಾವಣಿಗಳು ಟೀಪು ಸುಲ್ತಾನರ ಇಡೀ ಇತಿಹಾಸವನ್ನ ನಮ್ಮ ಕಣ್ಮುಂದೆ ಇಡುತ್ತವೆ.
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾಧಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು||
ಹರಾಮ ಖೋರರ ಕರಾಮತ್ ಅರಿತನು ಟೀಪು ಸುಲ್ತಾನನು ನಿಮಿಷದಲಿ|
ಅರೇ ಹಮಾರೇ ನಮಖ್ಹರಾಮ ಕರೇಸೋ ತಾಯೆಂದ ಮನಸ್ಸಿನಲಿ||
ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ|
ಫರಂಗಿ ಸೋಲ್ಜರ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ||
ಪರಂಪರೆಯಿಂಪರ ವಿರೋಧಿ ಪೋಜನು ಕುರಿಗಳಂದದಿ ಖಡ್ಗದಲಿ|
ಸರಾಸರಿಯಿಲ್ ಬರೆಯಲು ಸಿಗದು ತರಿದನೆಷ್ಟೋ ಶಿರವನಲ್ಲಿ||
ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ|
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ|   

ಈ ಲಾವಣಿಯೊಂದು ಸಾಕು ಟೀಪುವಿನ ನಿಜ ಇತಿಹಾಸವನ್ನ ತಲೆತಲೆಮಾರಿಗೆ ತಲುಪಿಸೋಕೆ. ಯಾಕಂದ್ರೆ
ಟಿಪ್ಪು ಸುಲ್ತಾನ್ ಕೇವಲ ಮುಸ್ಲಿಮರ ಪ್ರತಿನಿಧಿಯಲ್ಲ. ಅವರು ಯಾವುದೇ ಜಾತಿ ಜನಾಂಗದ ಪರವೂ ಅಲ್ಲ, ವಿರುದ್ಧವೂ ಅಲ್ಲ. ಅಸಲಿಗೆ ಪ್ರತಿಮೆ ನಿರ್ಮಾಣದ ಮೂಲಕ ಟಿಪ್ಪು ಸುಲ್ತಾನರ ಹಿರಿಮೆಯನ್ನು ಉಳಿಸಿ ಬೆಳೆಸುವ ಅಗತ್ಯವೇ ಇಲ್ಲ. ಅಂದಿಗೆ ಬ್ರಿಟಿಷರೊಂದಿಗೆ ಸಂಧಾನವಿಲ್ಲದ ಸಮರ ನಡೆಸಿದ ಟಿಪ್ಪು ಸುಲ್ತಾನ್, ಉಳಿದ ರಾಜರಂತೆ ಯುದ್ಧದಾಹಿಯಾಗಿರಲಿಲ್ಲ. ಹೆಣ್ಣು, ಹೊನ್ನು, ಮಣ್ಣು ಅಂತ ಅದಕ್ಕಾಗಿಯೇ ರಕ್ತ ಹರಿಸಲಿಲ್ಲ. ಟಿಪ್ಪು ಸುಲ್ತಾನರಲ್ಲಿ ಜೀವಪರವಾದ ಒಂದು ಅಂತಃಕರಣವಿತ್ತು. ಆ ಅಂತಃಕರಣ ಈ ನಾಡಿನಲ್ಲಿ ಶತಶತಮಾನಗಳಿಂದ ನೊಂದು ನೋವುಣ್ಣುತ್ತಿದ್ದ ಅಸ್ಪೃಶ್ಯ ಸಮುದಾಯಗಳ ಪರವಾಗಿ, ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿತ್ತು. ಅವರಿಗೆ ಸಾಮಾಜಿಕ ಸ್ಥಾನಮಾನವನ್ನೂ ದೊರಕಿಸಿ ಕೊಟ್ಟಿತ್ತು. ಅಷ್ಟೇ ಏಕೆ ಅವತ್ತಿನ ಕಾಲಕ್ಕೇ ಟಿಪ್ಪು ಸುಲ್ತಾನರಿಂದಲೇ ಇಡೀ ಜಗತ್ತು ಕರ್ನಾಟಕದತ್ತ ತಿರುಗಿ ನೋಡುವಂತಾಗಿತ್ತು. ಅಮೇರಿಕಾದ ಕ್ರಾಂತಿಕಾರರು ಸಹ ಟಿಪ್ಪು ಸುಲ್ತಾನ್ರಿಂದ ಸ್ಪೂರ್ತಿ ಪಡೆದಿದ್ದರು, ಅಮೇರಿಕಾದ ನಾಸಾ ಕಚೇರಿಯಲ್ಲಿ ಟಿಪ್ಪು ಫೋಟೋವನ್ನ ಮಾದರಿಯಾಗಿ ಅಳವಡಿಸಿಕೊಂಡರು, ಇಂದಿಗೂ ಆ ಫೋಟೋ ಹಾಗೇ ಇದೆ. ಅವೆಲ್ಲಕ್ಕೂ ದಾಖಲೆಗಳಿವೆ. ಟಿಪ್ಪು ಸುಲ್ತಾನ್ ಮಾಡಿದ ಸುಧಾರಣೆಗಳನ್ನು ಇಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕದಿಂದ ಅಳಿಸಿ ಹಾಕಿದ್ದರೂ, ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಅವರನ್ನು ಅಳಿಸಿ ಹಾಕಲೂ ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ವಿರುದ್ಧ ಅದೆಷ್ಟೇ ಅಪಪ್ರಚಾರ ನಡೆಸಿದರೂ, ಸಂಘಪರಿವಾರ ಟಿಪ್ಪುವಿನ ವಿಷಯದಲ್ಲಿ ಇದುವರೆಗೆ ಯಶಸ್ಸು ಸಾಧಿಸಿಲ್ಲ. ಅವರ ಸಾಮಾಜಿಕ ಸುಧಾರಣೆ, ಕೋಮು ಸಾಮರಸ್ಯ, ಮತ್ತು ಶೌರ್ಯದ ಕುರಿತ ದಾಖಲೆ ಸಹಿತ ಇತಿಹಾಸ ಜಗತ್ತಿನಾದ್ಯಂತ ಹಬ್ಬಿದೆ. ಹಲವಾರು ರಾಷ್ಟ್ರಗಳಲ್ಲಿ ಟಿಪ್ಪು ಸುಲ್ತಾನ್ ಐಕಾನ್ ಆಗಿ ಮಿಂಚುತ್ತಿದ್ದಾರೆ. ಅಂತ ಟಿಪ್ಪುವಿನ ನೂರಲ್ಲ, ಸಾವಿರ ಅಡಿ ನಿರ್ಮಿಸಿದರೂ, ಅದರಿಂದಷ್ಟೇ ಅವರ ಘನತೆಯನ್ನು ಎತ್ತಿ ಹಿಡಿಯಲಾಗದು..

ಎಲ್ಲಕ್ಕಿಂತ ಮುಖ್ಯವಾಗಿ ಟಿಪ್ಪು ಅಖಂಡ ಭಾರತದ ಪ್ರತಿನಿಧಿ. ನಿರ್ದಿಷ್ಟ ಜಾತಿ, ಧರ್ಮದ ಪರ ಒಲವು ಹೊಂದಿರದ ಟಿಪ್ಪುವನ್ನು ಇಂದಿಗೂ ಎಲ್ಲಾ ಜಾತಿ ಧರ್ಮದವರು ಸ್ಮರಿಸುತ್ತಾರೆ. ದಲಿತರಿಗೆ ಭೂಮಿ ಕೊಟ್ಟು, ಅಸ್ಪೃಶ್ಯತೆಯಿಂದ ವಿಮೋಚನೆಗೊಳಿಸಿದರೆ, ಕೆರೆಕಟ್ಟೆಗಳನ್ನು ನಿರ್ಮಿಸಿ ಒಕ್ಕಲಿಗರಿಗೆ ಶಾಶ್ವತವಾಗಿ ನೀರು ಸಿಗುವಂತೆ ಮಾಡಿದರು. ಕೇರಳದಲ್ಲಿ ವೈದಿಕರು ವಿಧಿಸುತ್ತಿದ್ದ ಮೊಲೆ ತೆರಿಗೆಯನ್ನು ನಿಷೇಧಿಸಿ ಮಹಿಳೆಯರ ಮಾನ ಪ್ರಾಣವನ್ನು ಕಾಪಾಡಿದರು. ರೇಷ್ಮೆಯಂತಹ ಉದ್ಯಮಿಕ ಬೆಳೆಗಳನ್ನು ರೈತರಿಗೆ ಪರಿಚಯಿಸಿದರು. ಗುಬ್ಬಿಯಲ್ಲಿ ದೇಶದಲ್ಲಿಯೇ ಅತೀದೊಡ್ಡ ಸಂತೆಯನ್ನು ನಿರ್ಮಿಸಿ, ಚನ್ನಪಟ್ಟಣದಲ್ಲಿ ಗೊಂಬೆ ವ್ಯಾಪಾರಕ್ಕೆ ಬುನಾದಿ ಹಾಕಿ, ವ್ಯಾಪಾರಿಗಳ ಬಾಳಿಗೆ ಬೆಳಕಾದರು. ಅಷ್ಟೇ ಅಲ್ಲ ಕೃಷಿಯಲ್ಲಿ ಅತ್ಯಂತ ಮುಂದಾಲೋಚನೆಗಳಿದ್ದ ಟಿಪ್ಪು ಲಾಲ್ ಬಾಗ್ ನಿರ್ಮಿಸಿದ್ದೇ ಕೃಷಿ ಕಾರ್ಯಗಾರವಾಗಿ. ಆ ಮೂಲಕ ವಿವಿಧ ದೇಶಗಳ ವಿನೂತನ ತಳಿಗಳನ್ನು ಇಲ್ಲಿ ಪರಿಚಯಿಸುವ ಮೂಲಕ ಕೃಷಿಗೆ ಹೊಸ ಭಾಷ್ಯ ಬರೆದರು.  ಅಲ್ಲದೇ ಗೋಮಾಳಗಳನ್ನು ನಿರ್ಮಿಸಿ ಪಶುಸಂಗೋಪನೆಗೆ ಸಹಾಯಮಾಡಿದ್ದಲ್ಲದೇ ಹೊಸ ತಳಿಗಳನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನರಿಗೆ ಸಲ್ಲಬೇಕು.
ಆದ್ದರಿಂದಲೇ ಟಿಪ್ಪು ಹೆಸರಿನಲ್ಲಿ ದೇವಸ್ಥಾನದಲ್ಲಿ ಸಲಾಂ ಆರತಿ ನಡೆಯುತ್ತದೆ. ಅನೇಕ ದೇವಸ್ಥಾನಗಳಲ್ಲಿ ಇಂದಿಗೂ ಟಿಪ್ಪು ಕೊಟ್ಟ ಕೊಡುಗೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಟಿಪ್ಪು ಸುಲ್ತಾನರ ಕೊಡುಗೆಯನ್ನು ಸ್ಮರಿಸುವ ಸಲುವಾಗಿಯೇ, ಖುದ್ದು ಬಾಬಾ ಸಾಹೇಬ್ ಅಂಬೇಡ್ಕರರೇ ಟಿಪ್ಪು ಫೋಟೋವನ್ನ ಖುದ್ದು ಸಂವಿಧಾನದಲ್ಲಿ ಅಚ್ಚು ಹಾಕಿದ್ದಾರೆ. ಅಂತಹ ಟಿಪ್ಪುವಿನ ಮಹಾನ್ ವ್ಯಕ್ತಿತ್ವವನ್ನು ನೂರಡಿಗೆ ಇಳಿಸುವುದರಿಂದ ನಿಮಗೆ ಸಿಗುವ ಲಾಭವಾದರೂ ಏನು? ಜಯಂತಿ, ಮೂರ್ತಿ ಅಂತ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು.. ಬದಲಾಗಿ ಟಿಪ್ಪುವಿನ ಕಾರ್ಯಗಳನ್ನು ಯುವ ತಲೆಮಾರಿಗೆ ಪ್ರಮಾಣಿಕವಾಗಿ ತಲುಪಿಸಬೇಕು.

ಇನ್ನು ಅಂದಿನ ಸಿದ್ದರಾಮಯ್ಯನವರ ಸರ್ಕಾರ ಅದ್ಯಾವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಆಚರಿಸಿತೋ ಗೊತ್ತಿಲ್ಲ? ಟಿಪ್ಪು ಜಯಂತಿಯಿಂದ ಮುಸ್ಲಿಮರಿಗೆ ಅದೇನು ಉಪಕಾರ ಮಾಡಿದರೋ ಗೊತ್ತಿಲ್ಲ. ಇದುವರೆಗೆ ರಾಜ್ಯದ ಮುಸ್ಲಿಮರು ಟಿಪ್ಪು ಜಯಂತಿ ಆಚರಿಸುವಂತೆ, ಟಿಪ್ಪುವಿನ ಪ್ರತಿಮೆ ಸ್ಥಾಪಿಸುವಂತೆ ಯಾರಲ್ಲಿಯೂ ಬೇಡಿಕೆ ಇಟ್ಟಿಲ್ಲ. ಇದರಿಂದ ಮುಸ್ಲಿಮರಿಗೆ ಲಾಭವಾಗಿದ್ದಕ್ಕಿಂತ. ನಷ್ಟವಾಗಿದ್ದೇ ಹೆಚ್ಚು. ಇದನ್ನೇ ದಾಳವಾಗಿ ಬಳಸಿಕೊಂಡ ಸಂಘಪರಿವಾರದ ನಿರುದ್ಯೋಗಿಗಳು ದಿನದಿಂದ ದಿನಕ್ಕೆ ಟಿಪ್ಪುವಿನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸಿದರು. ಸುಳ್ಳೇ ಸುಳ್ಳು ಆರೋಪ ಮಾಡಿದರು. ಟಿಪ್ಪುವನ್ನು ಕೇವಲ ಮುಸ್ಲಿಮರ ಪ್ರತಿನಿಧಿ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯೂ ಆದರು. ಆದ್ರೆ ದಶಕಗಳಿಂದ ಮುಸ್ಲಿಂ ಸಮುದಾಯ ಸರ್ಕಾರಗಳ ಮುಂದೆ ಇಟ್ಟದ್ದು ಒಂದೇ ಒಂದು ಬೇಡಿಕೆ – ಅದು ಟಿಪ್ಪು ಸುಲ್ತಾನ್ ಹೆಸರಲ್ಲಿ ಒಂದು ಯುನಿವರ್ಸಿಟಿ ಮಾತ್ರ. ಮುಸ್ಲಿಮರ ಇಂತಹ ಒಂದು ಬಹುಬೇಡಿಕೆಯ ಒತ್ತಾಸೆಗೆ ಕಾಂಗ್ರೆಸ್ ಸರ್ಕಾರವೇ ಎಳ್ಳು ನೀರು ಬಿಟ್ಟಿದೆ ಅನ್ನದೇ ಬೇರೆ ವಿಧಿ ಇಲ್ಲ. ಯಾಕಂದ್ರೆ ಅದೇ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಯಾರ ಜಪ್ತಿಗೂ ಸಿಗದ ಟಿಪ್ಪುವನ್ನು ನೂರಡಿಗೆ ಇಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರ ಮೂಲಕ ಟಿಪ್ಪು ಜಯಂತಿಯಂತೆ, ಇದನ್ನು ಕೂಡಾ ವಿವಾದದ ಕೇಂದ್ರ ಮಾಡಲು ಹೊರಟಿದ್ದಾರೆ.

ಜಯಂತಿಯಾಗಲೀ, ಮೂರ್ತಿಯಾಗಲಿ ಮುಸ್ಲಿಮ್ ಸಮುದಾಯಕ್ಕೆ ತುರ್ತು ಅಗತ್ಯವಲ್ಲ. ಟಿಪ್ಪು ಸುಲ್ತಾನರ ಮಹಾನ್ ಸಮಾಜಿಕ ನೀತಿಗಳು ಜಗತ್ತಿನೆಲ್ಲಡೆ, ಸಾಂಕ್ರಾಮಿಕವಾಗಿ ಹರಡಬೇಕು. ಪ್ರತಿಯೊಬ್ಬರು ಟಿಪ್ಪುವಿನ ಶೋಷಿತರ ಪರ ನೀತಿಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ನಿಜವಾದ ಅಭಿಮಾನ ತೋರಿದಂತಾಗುತ್ತದೆ. ಜಯಂತಿ ಮಾಡುವುದಾಗಲೀ, ಪ್ರತಿಮೆ ನಿರ್ಮಿಸುವುದಾಗಲಿ–ಅದು ಬರೀ ತೋರಿಕೆಯ ಅಭಿಮಾನ ಎನ್ನುವುದು ಎಂತವರಿಗಾದ್ರೂ ಅರ್ಥವಾಗ್ತದೆ. ಸಾಮಾಜಿಕವಾಗಿ. ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮುಸ್ಲಿಂ ಸಮಾಜವನ್ನು ಮೇಲೆತ್ತಬೇಕೆಂಬ ಪ್ರಾಮಾಣಿಕ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಇದ್ದದ್ದೇ ಆದಲ್ಲಿ. ಅದೇ ಟಿಪ್ಪುವಿನ ಹೆಸರಿನಲ್ಲಿ ಶಾಲಾ ಕಾಲೇಜು, ಯುನಿವರ್ಸಿಟಿಗಳನ್ನು ಕಟ್ಟಲಿ. ಈ ಮೂಲಕವಾದರೂ ಟಿಪ್ಪುವನ್ನು ಸ್ಮರಿಸಲಿ. ಮುಸ್ಲಿಮರನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿ. 16 ನೇ ಶತಮಾನದಲ್ಲಿ ಹೈದರಲಿ ಮತ್ತು ಟಿಪ್ಪು ಸುಲ್ತಾನರು ಬಡವರು. ರೈತರು, ಮಹಿಳೆಯರು, ದಲಿತ ಸಮುದಾಯದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿಯ ನಯಾಪೈಸೆ ಕಾಳಜಿಯನ್ನು ಇಟ್ಟುಕೊಂಡಾದರೂ ರಾಜಕಾರಣಿಗಳು ಕಾರ್ಯ ನಿರ್ವಹಿಸಲಿ. ಎಲ್ಲಾ ಜಾತಿ ಧರ್ಮದವರಿಗೆ ಮಾದರಿಯಾಗುವಂತಹ ಆಡಳಿತವನ್ನು ನೀಡಿದ ಟಿಪ್ಪುವಿನ ದೂರದೃಷ್ಟಿ, ಪ್ರಜೆಗಳ ಬಗೆಗಿನ ಅಂತಃಕರಣ, ಸಮಾಜದ ಒಳಿತಿನ ಕುರಿತಾದ ತಾಯ್ಮನಸ್ಸು
ಇಂದಿನ ರಾಜಕಾರಣಿಗಳೂ ಅಳವಡಿಸಿಕೊಳ್ಳಲಿ. ಆ ಮೂಲಕ ದೇಶದ ಅಭಿವೃದ್ಧಿಗೆ, ಸಮಾನತೆಗೆ ಒತ್ತುನೀಡಲಿ ಎಂಬುದೇ ನಮ್ಮ ಆಶಯ.  -ಕನ್ನಡ ಒನ್ ನ್ಯೂಸ್ ಬಳಗ

© Copyright 2022, All Rights Reserved Kannada One News