ಕಾವಿಯೊಳಗೊಬ್ಬ ಕಾಮಪಿಶಾಚಿ…!: ಎಡಿಟರ್‌ ಸ್ಪೆಷಲ್

Related Articles

ಟಿಪ್ಪು ಪ್ರತಿಮೆ ನೂರಡಿ ಸಾಕಾ...?: ಎಡಿಟರ್ ಸ್ಪೆಷಲ್

ತನ್ನ ಸಮಯ ಪ್ರಜ್ಞೆಯಿಂದ ತಂದೆಯ ಜೀವ ಉಳಿಸಿದ್ದ ಬಾಲಕಿಗೆ 'ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ'

ಇಂದು ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ ದಿನ

ಲಾಲು ಪ್ರಸಾದ್ ಯಾದವ್ ಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ಮಗಳು

ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಕಾವಿಯೊಳಗೊಬ್ಬ ಕಾಮಪಿಶಾಚಿ…!: ಎಡಿಟರ್‌ ಸ್ಪೆಷಲ್

Updated : 08.11.2022

ಮನುಷ್ಯರೆನಿಸಿಕೊಂಡವರಾರೂ ಮಾಡಲಾರದ  ಕೃತ್ಯವೊಂದನ್ನ ಮಠದ ಗುರು ಎನಿಸಿಕೊಂಡ ಕ್ರಿಮಿಯೊಬ್ಬ ಮಾಡಿದ್ದಾನೆ.  ದೇಶವೆಂದೂ ಕಂಡುಕೇಳರಿಯದ ಪೈಶಾಚಿಕ ಕೃತ್ಯವೆಸಗಿರುವ ಮುರುಘಾ ಮಠದ ಶಿವಮೂರ್ತಿಯನ್ನ ಮತ್ತೆ ಶ್ರೀಗಳು, ಸ್ವಾಮೀಜಿ ಅಂತಾ ಕರೆಯೋದು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿಯೇ ಆತನನ್ನ ಕ್ರಿಮಿ ಅಂತಲೇ ಕರೆಯುತ್ತೇವೆ.

ಈ ಹೊಲಸು ಕ್ರಿಮಿ ಮಾಡಿರುವ ಕೃತ್ಯದ ಇಂಚಿಂಚು ಕ್ರೌರ್ಯವನ್ನೂ ಪೊಲೀಸರ ಚಾರ್ಜ್ ಶೀಟ್ ಬಿಚ್ಚಿಟ್ಟಿದೆ. ಧರ್ಮ, ದೇವರು, ಮಠ, ಗುರುಪೀಠಗಳ ಮೇಲೆ ಜನರಿಗಿರುವ ಭಕ್ತಿ, ಭಯವೇ ಇಂಥಹವರ ಬಂಡವಾಳ. ಹಣ ಅಧಿಕಾರ ಎಲ್ಲವನ್ನೂ ತಮ್ಮ ಪೀಠದಡಿ ಭದ್ರಪಡಿಸಿಕೊಂಡ ನಂತರ ಅದ್ಯಾವ ಭಯವಿರುತ್ತೇ ಹೇಳಿ. ಹಾಗಾಗಿಯೇ ಇಂಥ ವಿಕೃತತೆಗಳು ನಡೆದು ಬಿಡುತ್ವೆ. ಇದಕ್ಕೆ ಹೆಂಗಸೊಬ್ಬಳ ಸಹಕಾರವಿರುತ್ತೇ ಅಂದ್ರೆ ನೀವೇ ಯೋಚಿಸಿ ಆಕೆ ನಿಜಕ್ಕೂ ಮನುಷ್ಯಳಾ.. ಏನೂ ಅರಿಯದ ಅಪ್ರಾಪ್ತ ಮಕ್ಕಳನ್ನ, ಬುದ್ಧಿ ಮಾಂಧ್ಯ ಮಕ್ಕಳನ್ನ ಆ ವಿಕೃತನ ಕಾಮಕ್ಕೆ ಬಲಿಕೊಡುತ್ತಿದ್ದ ಆಕೆ ಇನ್ನೂ ಬದುಕಿದ್ದಾಳೆ ಅನ್ನೋದೇ ಕುತೂಹಲಕರ ಸಂಗತಿ. ಮುರುಘಾ ಮಠದಲ್ಲಿ ನಡೆದಿರುವ ಈ ಕ್ರೌರ್ಯದ ಕುರಿತು ವಿವರಿಸುವಾಗಲೆಲ್ಲಾ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಮತ್ತು ಪರಶು ಯಾಕಷ್ಟು ಎಮೋಷನಲ್ ಆಗ್ತಿದ್ರು, ನಿದ್ದೆಗೆಟ್ಟು ಯಾಕಷ್ಟು ತಡವರಿಸುತ್ತಿದ್ರು ಅನ್ನೋದಕ್ಕೆ ಇಂದು ಪೊಲೀಸರು ಸಲ್ಲಿಸಿರುವ ಚಾರ್ಚ್ ಶೀಟ್ ಸಾಕ್ಷಿ ಒದಗಿಸಿದೆ. ಮನುಷ್ಯರಾದ ಯಾರಿಂದಲೂ ಈ ಕೃತ್ಯವನ್ನ ಅರಗಿಸಿಕೊಳ್ಳೋಕೆ ಸಾಧ್ಯವಿಲ್ಲ. ತಂದೆ ಸ್ಥಾನದಲ್ಲಿ ಕೂತ ವ್ಯಕ್ತಿಯೊಬ್ಬ ಅಪ್ರಾಪ್ತ ಮಕ್ಕಳ ಮೇಲೆ ನಡೆಸಿರುವ ಈ ಕ್ರೌರ್ಯವನ್ನ ಕೇಳಿದ್ರೆ ಎಂಥಹವರಿಗೂ ರಕ್ತ ಕುದಿಯದೇ ಇರದು….
 
ಹಾ…ಬೇಟಿ ಬಚಾವೋ ಬೇಟಿ ಪಡಾವೋ…ಈ ಸ್ಲೋಗನ್ ನೆನಪಿದೆ ಅಲ್ವಾ…ಈ ಸ್ಲೋಗನ್ ಜೊತೆಗೆ ಪ್ರತಿ ದಿನದ ಪತ್ರಿಕೆಗಳನ್ನ ಓದಿ ನೋಡಿ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಶಾಲಾ ಬಾಲಕಿ ಮೇಲೆ ಅತ್ಯಾಚಾರ, ದಲಿತ ಬಾಲಕಿಯರ ಅತ್ಯಾಚಾರ, ಹತ್ಯೆ ಇಂಥಾ ಸುದ್ದಿಗಳಿರದ ದಿನಗಳಿದೆಯಾ ಯೋಚಿಸಿ. ಇದು ನಮ್ಮ ಸರ್ಕಾರಗಳು ನಮಗೆ ಕೊಟ್ಟಿರುವ ಭರವಸೆ. ಇನ್ನು ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಅನ್ನೋ ಶ್ಲೋಕವನ್ನ ಹೇಳಿಕೊಡುವ ಮಠಮಾನ್ಯಗಳಲ್ಲಿ ನಡೆವ ಅತ್ಯಾಚಾರ, ಹತ್ಯಾಕಾಂಡಗಳಿಗಂತೂ ಭರವಿಲ್ಲ. ಇಲ್ಲಿ ಮಹಾಸ್ವಾಮೀಜಿಯೊಬ್ಬ ಭಕ್ತಿಯಿಂದ ಕೈಮುಗಿದು ಬಂದ ಹೆಣ್ಣಿನ ಮೇಲೆ ದೇವರ ಹೆಸರೇಳಿ ನಿರಂತರ ಅತ್ಯಾಚಾರವೆಸಗುತ್ತಾನೆ. ದೇವಾಲಯದಲ್ಲೇ ಮಗುವಿನ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಲಾಗುತ್ತದೆ. ಇಂಥಾ ಘಟನೆಗಳನ್ನ  ಪ್ರಶ್ನಿಸುವವರು ಧರ್ಮದ್ರೋಹಿಗಳಾಗ್ತಾರೆ. ನ್ಯಾಯ ನೀಡಿ ಎಂದು ನ್ಯಾಯಾಲಯಗಳಿಗೆ ತೆರಳಿದ್ರೆ ಸ್ವತಃ ನ್ಯಾಯಾಧೀಶರೇ ಕೇಸ್ ನಿಂದ ಕಳಚಿಕೊಳ್ತಾರೆ. ಇನ್ನು ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದದ್ದೂ ಇದೆಲ್ಲವನ್ನೂ ಮೀರಿಸೋ ಕ್ರೌರ್ಯ. ಅನಾಥ ಮಕ್ಕಳಿಗೆ ಆಸರೆಯಾಗಬೇಕಿದ್ದ, ಅಸಹಾಯಕ ಮಕ್ಕಳಿಗೆ ಆಶ್ರಯವಾಗಬೇಕಿದ್ದ ಗುರುಮಠ ಅದೇ ಅಸಹಾಯಕ ಮಕ್ಕಳಿಗೆ ಅಕ್ಷರಶಃ ನರಕವಾಗಿತ್ತು. ತಂದೆ ಸ್ಥಾನದಲ್ಲಿದ್ದ ಗುರುವೇಶದ ಕ್ರಿಮಿಯಿಂದಾಗಿ ಆ ಮಕ್ಕಳು ಅನುಭವಿಸಿದ ಸಂಕಟವಿದೆಯಲ್ಲಾ ಅವುಗಳನ್ನ ವಿವರಿಸೋಕೆ ಮನುಷ್ಯರ ಭಾಷೆ ಇನ್ನೂ ಪಕ್ವವಾಗಿಲ್ಲಾ…

ಇನ್ನು ಮುರುಘಾ ಮಠದ ಶಿವಮೂರ್ತಿ ಮೇಲೆ ಪೋಕ್ಸೋ ಪ್ರಕರಣ ದಾಖಲಾದಾಗ ಆತನ ಪರವಾಗಿ ನಿಂತ ‘ಭಕ್ತರು’ ಆ ಅಪ್ರಾಪ್ತ ಬಾಲಕಿಯರ ವಿರುದ್ಧ ಹೂಡಿದ ದಾಳಿ ಇದೆಯಲ್ಲಾ, ಸಾಲದ್ದಕ್ಕೆ ಮಕ್ಕಳ ನೋವು ಕೇಳಿ ಆದದ್ದಾಗಲಿ ಎಂದು ಹೋರಾಟಕ್ಕೆ ನಿಂತ ಒಡನಾಡಿ ಸಂಸ್ಥೆಯ ಪರುಶು, ಮತ್ತು ಸ್ಟಾನ್ಲೀ ಅವರ ಮೇಲೆ ಬಂದ ಆರೋಪಗಳಿವೆಯಲ್ಲಾ  ಅವು ನಾನು ಮನುಷ್ಯರಾಗಿ ಯಾವ ಹಂತಕ್ಕೆ ತಲುಪಿದ್ದೇವೆ ಅನ್ನೋದ್ದಕ್ಕೆ ಸಾಕ್ಷಿ ಅನ್ನಬೇಕು. ರಾಜಕಾರಣಿಗಳ, ಬಂಡವಾಳ ಶಾಹಿಗಳ ಸ್ವಿಸ್ ಬ್ಯಾಂಕ್ ಗಳಾದ ಇದೇ ಮಠಮಾನ್ಯಗಳಿಗೆ ಕೋಟಿ ಕೋಟಿ ಅನುದಾನ ಕೊಟ್ಟು ತಮ್ಮ ಬತ್ತಳಿಕೆಯ ಬಾಣಗಳಾಗಿಸಿಕೊಳ್ಳೋ ರಾಜಕಾರಣಿಗಳ ತೆರೆಮರೆಯ ಆಟ, ಅವರ ತೇಲಿಕೆಯ ಮಾತುಗಳು ಹೇಸಿಗೆ ತರಿಸಿದ್ದು ಇನ್ನೂ ಹಸಿಯಾಗಿರುವಾಗಲೇ ಮಠದಲ್ಲಿ ನಡೆದ ಕ್ರೂರ ಘಟನೆಗಳು ಒಂದೊಂದಾಗಿ ಬೆಳಕಿಗೆ ಬಂದಿವೆ. ಸ್ವಚ್ಛಂದವಾಗಿ ಬದುಕಬೇಕಿದ್ದ ಕನಸು ಕಂಗಳ ಕಂದಮ್ಮಗಳನ್ನು ಕಿತ್ತು ತಿನ್ನುತ್ತಿದ್ದ ಆ ಕಾಮಾಂಧನ ಕ್ರೌರ್ಯಕ್ಕೆ ಪುರಾವೆಗಳೂ ಧಕ್ಕಿವೆ. ಹಣದ ಆಸೆಗೋ ಅನ್ನದ ಆಸೆಗೋ ಹೆತ್ತ ಮಕ್ಕಳನ್ನು ಇಂಥಾ ಗುರು ಪಾದಕ್ಕೆ ಒಪ್ಪಿಸಿ ಸಮಾಧಾನ ಮಾಡಿಕೊಳ್ಳುವ ತಂದೆ ತಾಯಿಯರು ಆತಂಕದಲ್ಲಿದ್ದಾರೆ. ಹೆಣ್ಣು ಹೆತ್ತ ತಾಯಿ ತಂದೆಯರು ಇದನ್ನ ಹೇಗೆ ಸಹಿಸಿಕೊಳ್ಳಬೇಕು. ಈ ಕ್ರೂರ ಸತ್ಯವನ್ನ ಹೇಗೆ ಅರಗಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ತಮಗಾದ ಅನ್ಯಾಯವನ್ನ ಇನ್ನೂ ಸಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ ಅನ್ನಿಸಿದಾಗ ಸರಿ ದಾರಿ ಹುಡುಕಿ ಬಂದ ಆ ಹೆಣ್ಣುಮಕ್ಕಳ ಪರವಾಗಿ ನಿಂತ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಮತ್ತು ಪರಶು ಮಕ್ಕಳ ಮಾತುಗಳನ್ನು ಕೇಳಿ ಅಕ್ಷರಶಃ ಕುಗ್ಗಿ ಹೋಗಿದ್ದಾರೆ. ಆ ನೋವಿನಿಂದಲೇ ಇದು ಕೊನೆಯಲ್ಲಾ ಇದೇ ಮೊದಲೂ ಅಲ್ಲಾ ಸರಣಿಯಾಗಿ ನಡೆದಿರುವ ಈ ಕ್ರೌರ್ಯದ ಜಾಲವನ್ನ ಪೂರ್ಣವಾಗಿ ಕಿತ್ತೊಗೆಯಬೇಕು ಆಗಷ್ಟೇ ಈ ಹೋರಾಟಕ್ಕೆ ಜಯ ಅನ್ನುತ್ತಾರೆ ಸ್ಟಾನ್ಲಿ…
 
ಹೌದು ಮುರುಘಾ ಮಠದಲ್ಲಿ  ನಡೆದಿರೋದು ಮನುಷ್ಯರ ಭಾಷೆಗೆ ಧಕ್ಕದ ಕ್ರೂರತೆ. ಸದ್ಯ ಚಾರ್ಚ್ ಶೀಟ್ನಲ್ಲಿ 10 ಮಕ್ಕಳ ಮೇಲೆ ದೌರ್ಜನ್ಯ ಅನ್ನುವ ಮಾಹಿತಿ ಇದ್ದರೂ ಸಹ ಈ ಕ್ರೌರ್ಯ ನಡೆದದ್ದು ಇಂದು ನಿನ್ನೆಯಲ್ಲ, ಅಥವಾ ಇದು ನಾಲ್ಕು ಮಕ್ಕಳ ಕಥೆಯಲ್ಲ. ಬದಲಿಗೆ  ಸುಮಾರು ಎರಡೂವರೆ ದಶಕಗಳ ಕಾಲ ಈ ಪೈಶಾಚಿಕ ಕೃತ್ಯ ಮುಂದುವರೆದಿದೆ. ಮಕ್ಕಳ ಮೇಲೆ ನಿರಂತರವಾಗಿ ನಡೆದಿರುವ ಈ ಸರಣಿ ದೌರ್ಜನ್ಯ ಅಧಿಕೃತವಾಗಿ ಸಾಭೀತಾಗಿದೆ. ಏನೂ ಅರಿಯದ ಮಕ್ಕಳಿಗೆ ಹಣ್ಣುಗಳಲ್ಲಿ, ಪ್ರಸಾದಗಳಲ್ಲಿ ನಶೆ ಬರುವ ಮತ್ತು ನೀಡಿ ಶಿವಮೂರ್ತಿ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಪೊಲೀಸರು ಸಲ್ಲಿಸಿರುವ 694 ಪುಟಗಳ ಚಾರ್ಚ್ ಶೀಟ್ ನಲ್ಲಿರುವ ಇಂಥಹ ಮಾಹಿತಿಗಳು ಇವನೆಂಥ ರಾಕ್ಷಸ ಅನ್ನೋದನ್ನ ಸಾರಿ ಸಾರಿ ಹೇಳುತ್ವೆ. ಮಕ್ಕಳ ಮೇಲೆ ನಡೆದಿರುವ ಈ ರಾಕ್ಷಸೀಯ ಕೃತ್ಯಕ್ಕೆ ಜಿಲ್ಲಾ ಎರಡನೇ ಸತ್ರ ನ್ಯಾಯಾಲಯಕ್ಕೆ 347 ಪುಟಗಳ ಎರಡು ಸೆಟ್ ಇರುವ ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು ಶಿವಮೂರ್ತಿ ವಿರುದ್ಧ ಪೋಕ್ಸೋ, ಅಟ್ರಾಸಿಟಿ, ಧಾರ್ಮಿಕ ಸ್ಥಳ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಇಡೀ ಪ್ರಕರಣದಲ್ಲಿ ಮುರುಘಾಮಠದ ಶಿವಮೂರ್ತಿ 1ನೇ ಆರೋಪಿಯಾಗಿದ್ದು, ಹಾಸ್ಟೆಲ್ ವಾರ್ಡನ್ ರಶ್ಮಿ ಎರಡನೇ ಆರೋಪಿ, ಮಠದ ಕಾರ್ಯದರ್ಶಿ 3ನೇ ಆರೋಪಿಯಾಗಿದ್ದಾರೆ.

ಈ ಕಾಮಪಿಶಾಚಿ ಶಿವಮೂರ್ತಿಯನ್ನ ಮೃಗ ಅಂತಾ ಕರೀಬೇಕು ಅನ್ಸುತ್ತೆ, ಆದ್ರೆ ಯಾವುದೇ ಮೃಗದಿಂದಲೂ ಇಂಥ ವ್ಯವಸ್ಥಿತ ಕೃತ್ಯವನ್ನ ಮಾಡೋದಕ್ಕೆ ಸಾಧ್ಯವಿಲ್ಲ. ಇದು ಮನುಷ್ಯ ರೂಪದಲ್ಲಿರುವ ಈ ರಾಕ್ಷಸರಿಂದಲೇ ನಡೆಯುವಂತದ್ದು. ಇಂತಹ ಕೃತ್ಯಕ್ಕೂ ಹೆಣ್ಣೊಬ್ಬಳ ಸಹಕಾರವಿತ್ತು ಅನ್ನೋದನ್ನ ಹೇಗೆ ಅರ್ಥೈಸಿಕೊಳ್ಳಬೇಕು ಅನ್ನೋದೇ ನಮ್ಮ ಮುಂದಿರೋ ದೊಡ್ಡ ಪ್ರಶ್ನೆ. ಈ ಪ್ರಕರಣದ ಎರಡನೇ ಆರೋಪಿಯಾಗಿರುವ ಹಾಸ್ಟೆಲ್ ವಾರ್ಡನ್ ರಶ್ಮಿ ಮಾಡಿರುವ ಕೃತ್ಯವೂ ಚಿಕ್ಕದಲ್ಲ. ಏನು ಅರಿಯದ ಮಕ್ಕಳನ್ನ ಬೆದರಿಸಿ, ಯಾಮಾರಿಸಿ ಶಿವಮೂರ್ತಿಯ ಕೊಟ್ಟಡಿಗೆ ಕಳಿಸುತ್ತಿದ್ದಳಂತೆ. ಈ ವೇಳೆ ಶಿವಮೂರ್ತಿ ಮಕ್ಕಳಿಗೆ ತಿನ್ನೋಕೆ ಸೇಬು ನೀಡುತ್ತಿದ್ನಂತೆ. ಆ ಸೇಬಿಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿದ್ದು, ಆ ಕಾರಣಕ್ಕೆ ಅದನ್ನು ತಿಂದ ಮಕ್ಕಳು ಪ್ರಜ್ಞೆ ತಪ್ಪುತ್ತಿದ್ದವಂತೆ ಆ ವೇಳೆ  ಕಚೇರಿ, ಬೆಡ್ ರೂಂ, ಬಾತ್ ರೂಂ ಗಳಲ್ಲಿ ಆ ಅಪ್ರಾಪ್ತ ಮಕ್ಕಳ ಮೇಲೆ ಬಲಾತ್ಕಾರ ಮಾಡಿರುವ ಅಮಾನವೀಯ ಸಂಗತಿಗಳು ಚಾರ್ಚ್ ಶೀಟ್ ನಲ್ಲಿ ಉಲ್ಲೇಖವಾಗಿವೆ.

ಅಲ್ದೇ  ಕೆಲ ವರ್ಷಗಳ ಹಿಂದೆಯಷ್ಟೇ  ಓರ್ವ ಬಾಲಕಿಯ ರೇಪ್ ಮಾಡಿ ಆಕೆಯನ್ನು ಹತ್ಯೆ ಮಾಡಿರುವ ಭಯಾನಕ ಕೃತ್ಯವೂ ದಾಖಲಾಗಿದೆ.  ಇನ್ನೂ ಪಕ್ಕಾ ತನಿಖೆ ನಡೆಸಿ ವಿಷಯಗಳನ್ನು ಸಂಗ್ರಹಿಸಿ ಮಾಹಿತಿ ನೀಡೋ ಸ್ಟಾನ್ಲೀ ಅವರು ಹೇಳೋ ಪ್ರಕಾರ ಈ ಮಠದಲ್ಲಿ ಅಷ್ಟಿಷ್ಟು ಅಕ್ರಮಗಳು ನಡೆದಿಲ್ಲ. ಶಿವಮೂರ್ತಿಯ. ಕೊಟ್ಟಡಿಯಲ್ಲಿ ಸಾಕಷ್ಟು ಸಿರಿಂಜ್ ಗಳು, ಮದ್ಯದ ಬಾಟಲಿಗಳನ್ನ ಸಂತ್ರಸ್ತ ಬಾಲಕಿಯ ತಾಯಿ ಗಮನಿಸಿದ್ದಾರೆ. ಅದೇ ಮಠದಲ್ಲಿ ಕೆಲಸ ಮಾಡ್ತಾ. ಮಕ್ಕಳನ್ನ ಓದಿಸ್ತಿದ್ದ ತಾಯಿಯೊಬ್ಬರು ತಮ್ಮ ಮಕ್ಕಳ ಮೇಲಾದ ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ. ಕೊಟ್ಟಡಿಗಳನ್ನು ಸ್ವಚ್ಛ ಮಾಡುವ ವೇಳೆ ಸ್ವತಃ ಮದ್ಯದ ಬಾಟಲಿಗಳು, ಸಿರಿಂಜ್ ಗಳು ದೊರೆತಿರುವುದನ್ನ ತಿಳಿಸಿದ್ದಾರೆ. ಅಲ್ದೇ ಶಿವಮೂರ್ತಿ ಕುಡಿಯುತ್ತಿದ್ದನು ಎಂಬುದನ್ನ ಮಠದಲ್ಲಿದ್ದ ಹಲವು ಮಹಿಳೆಯರು ಕಂಡಿದ್ದು, ತನಿಖೆ ವೇಳೆ ಎಲ್ಲವನ್ನು ದಾಖಲಿಸಿದ್ದಾರೆ. ಆದ್ರೆ ಇಲ್ಲಿದ್ದ ಆ ಎಲ್ಲಾ ಸಿರಿಂಜ್ ಗಳನ್ನ ಎತ್ತ ಸಾಗಿಸುತ್ತಿದ್ರು. ಆ ಸಂತ್ರಸ್ತ ಮಕ್ಕಳನ್ನ ಪೊಲೀಸರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾ, ತನಿಖೆ ಸರಿಯಾದ ರೀತಿ ನಡೆದಿದೆಯಾ ಅನ್ನೋದ್ರ ಬಗ್ಗೆ ಸ್ಟಾನ್ಲೀ ಇನ್ನೂ ಆತಂಕದಲ್ಲೇ ಇದ್ದಾರೆ.

ಈ ಪಾಪಿ ಶಿವಮೂರ್ತಿ ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಎಷ್ಟೋ ಹೆಣ್ಣು ಮಕ್ಕಳ ಗರ್ಭವನ್ನೇ ಕಿತ್ತು ಹಾಕಿಸಿದ್ದಾನೆ. ಸಾಲದ್ದಕ್ಕೆ ಮಠದಲ್ಲಿ ಮಕ್ಕಳ ಜನನವಾಗಿರೋದು, ಅಲ್ಲಿ ಹುಟ್ಟಿದ ಮಕ್ಕಳನ್ನು ದಾನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮಗಳು ಸಕ್ರಮವಾದದ್ದು ಹೇಗೆ ಯಾರಿಂದ ಅನ್ನೋದು ಎಲ್ಲರ ಮುಂದಿರುವ ಪ್ರಶ್ನೆ. ಯಾಕಂದ್ರೆ ಸದ್ಯ ಶಿವಮೂರ್ತಿ ಪರ ವಾದ ಮಂಡಿಸುತ್ತಿರುವ ಇದೇ ವಕೀಲ ಗಂಗಾಧರಯ್ಯನೇ ಈ ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸುತ್ತಿದ್ದ ಅನ್ನೋ ಮಾಹಿತಿ ಸಿಕ್ಕಿದೆ ಅಂತಾರೇ ಇದೇ ಸ್ಟಾನ್ಲೀ. ಆದ್ರೆ ಪೊಲೀಸರು ಸಲ್ಲಿಸಿರುವ  ಚಾರ್ಚ್ ಶೀಟಲ್ಲಿ ವಕೀಲ ಗಂಗಾಧರಯ್ಯನವರು ಈ ಪ್ರಕರಣದಲ್ಲಿ ಭಾಗಿ ಆಗಿರುವ ಬಗ್ಗೆ ಮಾಹಿತಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ಹಾಗಾದ್ರೇ ಮಠದಲ್ಲಿ ಹುಟ್ಟಿದ ಮಕ್ಕಳು ಮಾರಾಟವಾಗಿದ್ದು ಹೇಗೆ, ಸಾಲದ್ದಕ್ಕೆ ಸಂತ್ರಸ್ತ ಮಕ್ಕಳ ತಾಯಿಯಂದಿರಿಗೆ ಒಂದಿಷ್ಟು ಹಣಕಾಸಿನ ನೆರವು ನೀಡಿರೋದು, ಒಪ್ಪದಿದ್ದಾಗ ಕೇಸ್ ಗಳನ್ನ ಹಾಕೋದಾಗಿ ಬೆದರಿಸಿರೋದು ಕೂಡಾ ಬೆಳಕಿಗೆ ಬಂದಿದ್ದು ಇದೆಲ್ಲದರ ಹಿಂದೆ ಇರೋದು ಇನ್ಯಾರು ಅನ್ನೋದೆ ಪ್ರಶ್ನೆ ಕಾಡ್ತಿದೆ
 
750 – 800 ವರ್ಷಗಳಿಂದ ಸಮಾಜಸೇವೆಯಲ್ಲಿತೊಡಗಿರುವ ಮುರುಘಾ ಮಠದ ಬಗ್ಗೆ ಯಾರಿಗೂ ತಕರಾರಿಲ್ಲ. ಇಲ್ಲಿನ ಕಾವಿಯಾಕಿರುವ ಈ ಒಂದು ಕ್ರಿಮಿಯ ಕ್ರೌರ್ಯದ ವಿರುದ್ಧ ಮಾತ್ರ ನಮ್ಮ ತಕರಾರಿದೆ. ಯಾಕಂದ್ರೆ ಹಣ- ಅಧಿಕಾರ ಎಲ್ಲವುಗಳಿಂದ ಮುರುಘಾ ಮಠದಲ್ಲಿ ದಶಕಗಳ ಕಾಲ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದ ಶಿವಮೂರ್ತಿ ವಿರುದ್ಧ ಅವನಿಂದ ಅತ್ಯಾಚಾರಕ್ಕೊಳಗಾದ ಮಕ್ಕಳೇ ಕೇಸ್ ದಾಖಲಿಸಿದ್ರು. ಹೀಗೆ ಪ್ರತಿಷ್ಠಿತ ಮಠವೊಂದರ ಮಹಾನ್ ಗುರುವಿನ ವಿರುದ್ಧ ಕೇಸ್ ದಾಖಲಿಸೋದು ಆ ಸಂತ್ರಸ್ತ ಮಕ್ಕಳಿಗೆ ಸಣ್ಣ ವಿಚಾರವಾಗಿರಲಿಲ್ಲ, ಅವರ ಬೆನ್ನಿಗೆ ನಿಂತದ್ದು ಇದೇ ಮೈಸೂರಿನ ಒಡನಾಡಿ ಸಂಸ್ಥೆ. ನೋವು ಹೇಳಿಕೊಳ್ಳೋಕೆ ಬಂದ ಆ ಮಕ್ಕಳ ಕಥೆ ಕೇಳಿ ದಿಗ್ಭ್ರಾಂತರಾದ ಒಡನಾಡಿ ಸಂಸ್ಥೆಯವರು ಆ ವಿಚಾರದ ಬೆನ್ನುಬಿದ್ದು ಪರಿಶೀಲಿಸಿ, ಕೊನೆಗೆ ಅಲ್ಲಿ ನಡೆದಿರುವ ಕ್ರೌರ್ಯವನ್ನ ಕಂಡು ಬೆಚ್ಚಿ ಬಿದ್ದಿದ್ರು. ಹಗಲು ರಾತ್ರಿ ನಿದ್ದೆಗೆಟ್ಟು ಆ ಕ್ರಿಮಿಯ ವಿರುದ್ಧ ದಾಖಲೆಗಳನ್ನ ಸಂಗ್ರಹಿಸಿದ್ರು. ಎಲ್ಲವೂ ಸತ್ಯವೆಂಬುದು ಖಾತ್ರಿಯಾದ ನಂತರವೇ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಹೀಗೆ ಮುರುಘಾ ಮಠದ ಪೀಠದಲ್ಲಿದ್ದ ಶಿವಮೂರ್ತಿ ವಿರುದ್ಧ ನಿಲ್ಲೋದು ಅಷ್ಟು ಸುಲಭವಾಗಿರಲಿಲ್ಲ. ಸುನಾಮಿ ವಿರುದ್ಧ ಈಜೋಕೆ ಸಿದ್ಧವಾಗಿದ್ದ ಒಡನಾಡಿ ಸಂಸ್ಥೆಯ ಜೊತೆ ಇದ್ದದ್ದು ನೊಂದ ಮಕ್ಕಳ ಕಣ್ಣೀರು, ಅಸಹಾಯಕತೆ ಮತ್ತೇ ಜಗತ್ತೇ ಕಾಣಬೇಕಿದ್ದ ಸತ್ಯ..ಇಂದು ಒಂದು ಹಂತದಲ್ಲಿ ಈ ಸತ್ಯಕ್ಕೆ ಜಯ ಸಿಕ್ಕಿದೆ. ಅಧಿಕೃತವಾಗಿ ಶಿವಮೂರ್ತಿ ಎಂಬ ಕೊಳಕು ಕ್ರಿಮಿಯ ಕ್ರೌರ್ಯಗಳು  ಚಾರ್ಜ್ ಶೀಟ್ ಮೂಲಕ ಜಗತ್ತಿನ ಎದಿರು ಬಹಿರಂಗಗೊಂಡಿವೆ. ಸಾಲದ್ದಕ್ಕೆ ಈ ಕೇಸ್ ಕುರಿತು ಪೊಲೀಸರು ಮತ್ತಷ್ಟು ಸಾಕ್ಷಿ ಕಲೆಹಾಕುತ್ತಿದ್ದಾರೆ. ಸ್ಟಾನ್ಲೀ ಹೇಳುವಂತೆ ಈ ಪ್ರಕರಣದಲ್ಲಿ ಆ ಮಕ್ಕಳಿಗೆ ನ್ಯಾಯ ಸಿಕ್ಕಿದ್ರೆ ಮಾತ್ರ ನ್ಯಾಯ ಉಸಿರಾಡುತ್ತಿದೆ ಎಂದರ್ಥ. ಇಲ್ಲದೇ ಹೊದ್ರೆ ಇಲ್ಲಿ ನ್ಯಾಯವೇ ಸತ್ತಿದೇ ಅಂತಾ ನಾವೂ ಹೇಳಬೇಕಾಗುತ್ತೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು ಸಂತ್ರಸ್ತ ಮಕ್ಕಳಿಗೆ ಮತ್ತು ಅವನಿಂದ ಬದುಕು ಕಳೆದುಕೊಂಡ ಅಸಹಾಯಕರಿಗೆ ನ್ಯಾಯ ಸಿಗಲಿ. ಶಿವಮೂರ್ತಿಗೆ ಸಿಗುವ ಶಿಕ್ಷೆ ಸಮಾಜಕ್ಕೆ ಒಂದು ತಕ್ಕ ಪಾಠವಾಗಲಿ ಅನ್ನೋದೆ ನಮ್ಮ ಆಶಯ.
© Copyright 2022, All Rights Reserved Kannada One News