ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

Updated : 02.11.2022

ಸತ್ಯದ ಪರ ನಿಂತು, ಪತ್ರಿಕೋದ್ಯಮದಲ್ಲಿನ ಬಹುದೊಡ್ಡ ಅಜೆಂಡಾವನ್ನ ವಿರೋಧಿಸುತ್ತಾ ವೃತ್ತಿಬದ್ಧತೆಯೊಂದಿಗೆ ಸಾಗಿ ಬಂದ ನಿಮ್ಮೆಲ್ಲರ ಪ್ರೀತಿಯ ಕನ್ನಡ ಒನ್ ನ್ಯೂಸ್ ಗೆ ಒಂದು ವರ್ಷ ತುಂಬಿದೆ. ಈ ಪಯಣದಲ್ಲಿ ನಾವು ದೀನ ದಲಿತರ ಪರ, ಅನ್ಯಾಯಕ್ಕೊಳಗಾದವರ ಪರ ನಿಂತು ಎದುರಿಸಿದ ಸವಾಲುಗಳು ಅನೇಕ. ಆದ್ರೆ ವರ್ಷದ ಸಂಭ್ರಮದಲ್ಲಿರುವಾಗಲೇ ರಾಜ್ಯದಲ್ಲಿ ಸರ್ಕಾರದಿಂದಲೇ ಆದ ಅನ್ಯಾಯವೊಂದು ನಮ್ಮ ಸಂಭ್ರಮವನ್ನ ತಡೆದು, ನಾವು ಸಾಗಬೇಕಾದ ದಾರಿಯನ್ನು ಮತ್ತೆ ನೆನಪಿಸಿದೆ. ನಾವು ಯಾರ ಪರ ನಿಲ್ಲಬೇಕು, ಯಾರ ಪರ ನಿಲ್ಲಬಾರದು ಅನ್ನೋ ಸ್ಪಷ್ಟತೆಯನ್ನ ಮತ್ತೆ ನೀಡಿದೆ. 

ಜೀವಜಗತ್ತಿಗೆ ಆಧಾರವಾದ ಅನ್ನವನ್ನ, ಬಡಬಗ್ಗರ ಅನ್ನದ ಹಕ್ಕನ್ನ ವ್ಯವಸ್ಥಿತವಾಗಿ ಕಸಿಯುತ್ತಿರುವ ಬಿಜೆಪಿ ಸರ್ಕಾರ ಮತ್ತೆ ತನ್ನ ಜೀವವಿರೋಧಿ ನಿಲುವನ್ನ ಮುಂದುವರೆಸಿದೆ. ಬಡ ಜನರಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುವ ಮೂಲಕ ಬಿಜೆಪಿ ತನ್ನ ಕ್ರೌರ್ಯವನ್ನ ಸಾಕ್ಷೀಕರಿಸಿದೆ…ಈ ವಿಕೃತತೆಯ ವಿರುದ್ಧ ಧ್ವನಿ ಎತ್ತದಿದ್ದರೆ ಕನ್ನಡ ಒನ್ ನ್ಯೂಸ್ ನ ಬದ್ಧತೆಗೆ ನಾವೇ ಮಾಡಿಕೊಂಡ ಅವಮಾನ ಆಗುತ್ತೆ. ಅದೇ ಕಾರಣಕ್ಕೆ ಇಂದು ನಾನು ನಿಮ್ಮ ಮುಂದೆ ನಿಂತಿದ್ದೇನೆ… ಬಡವರ ಅನ್ನಕ್ಕೂ ಕನ್ನ…ಇದು ಎಡಿಟರ್ ಸ್ಪೆಷಲ್…
    
ಅನ್ನದಾನಗಳಿಂದ
ಮುನ್ನದಾನಗಳಿಲ್ಲ
ಅನ್ನಕ್ಕೆ ಮಿಗಿಲು ಇನ್ನಿಲ್ಲ
ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ…
ಸರ್ವಜ್ಞ ಹೇಳಿದ ಈ ಮಾತಿನ ಸಾರವನ್ನ ಬಿಡಿಸಿ ಹೇಳಬೇಕಿಲ್ಲ. ಅನ್ನದೇವರ ಮುಂದೆ ಇನ್ನೂ ದೇವರೇ ಇಲ್ಲ ಅಂತಾ ಸಾವಿರಾರು ದಾಸೋಹಿಗಳು ಬಡವರ ಹಸಿವು ನೀಗಿಸುತ್ತಾ, ಅನ್ನದಾಸೋಹದಲ್ಲಿ ತೊಡಗಿದ ಈ ನೆಲ, ಇಂದು ತಿನ್ನುವ ಅನ್ನದ ಮೇಲೂ ಜಿಎಸ್ಟಿ ಹೇರಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಲೇ, ಬಡವರ ಅನ್ನಕ್ಕೂ ಕನ್ನ ಹಾಕುವ ದುರುಳರ ಕೈಗೆ ಸಿಲುಕಿದೆ. ವಿಶ್ವದಲ್ಲಿ ಹಸಿವು ನೋವಿನಿಂದ ನರಳುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಮುನ್ನೆಲೆಗೆ ಬರಲು ಸಹಕರಿಸುತ್ತಿರುವ ಬಿಜೆಪಿಯ ಆಡಳಿತ ಈಗ ರಾಜ್ಯಕ್ಕೂ ತನ್ನ ಕರಾಳ ಹಸ್ತ ಚಾಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅನ್ನಭಾಗ್ಯದ ಯೋಜನೆಯಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನ ಮುಚ್ಚಿಸೋಕೆ ಮೊದಲಿನಿಂದಲೂ ಕೀಳು ಮಟ್ಟದ ರಾಜಕೀಯ ಮಾಡುತ್ತಲೇ ಬಂದ ಬಿಜೆಪಿ ಇದೀಗ ಅಧಿಕೃತವಾಗಿ 40 ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿಸೋ ಮೂಲಕ ತನ್ನ ಜೀವವಿರೋಧಿ ನಿಲುವನ್ನ ಸ್ಪಷ್ಟ ಪಡಿಸಿದೆ. ಐದತ್ತು ರೂಪಾಯಿಗೆ ರುಚಿಕಟ್ಟಾದ ಊಟ ನೀಡುತ್ತಾ, ಬಡವರ ಪಾಲಿನ ಅನ್ನದ ಮನೆಯಾಗಿದ್ದ ಇಂದಿರಾ ಕ್ಯಾಂಟೀನ್ ನಿಂದಾಗಿ ದಿನ ಕೂಲಿ ಕಾರ್ಮಿಕರು, ಬಡಬಗ್ಗರು ನೆಮ್ಮದಿಯಾಗಿ ಎರಡೊತ್ತಿನ ಅನ್ನದ ಮುಖ ನೋಡ್ತಿದ್ರು.

ಬಡವರಿಗೆ ಅಕ್ಕಿ ಕೊಟ್ರೆ ನಮಗೆ ಕೂಲಿ ಹಾಳುಗಳು ಸಿಗಲ್ಲ ಅನ್ನೋ ವಿಕೃತ ಮನಸ್ಥಿತಿಯವರ ನಡುವೆ, ಬಡ ತಾಯಿಯೊಬ್ಬಳು ತನ್ನ ಮಗನಿಗಾಗಿ ಒಂದಿನ ಕೆಲಸ ಬಿಟ್ಟು ನೆಮ್ಮದಿಯಾಗಿರಲಿ, ಸೊಸೈಟಿಯಲ್ಲಿ ಸಿಗುವ ಅಕ್ಕಿ ಅವರ ಆ ದಿನದ ನೆಮ್ಮದಿಯಾಗಲಿ ಅಂತಾ ಹೇಳೋ ಸಿದ್ದರಾಮಯ್ಯನವರನ್ನ ಬಿಟ್ಟಿ ಭಾಗ್ಯಗಳ ಜನಕ ಅಂತಾ ಅಂಗಿಸೋತರ ಮಾಡಿತ್ತು. ಬಡವರು ಘನತೆಯಿಂದ ಬದುಕೋದೇ ತಪ್ಪು ಅಂದುಕೊಳ್ಳೋ ಆ ಮೂಲಭೂತವಾದಿ ಮನಸ್ಸುಗಳು, ಇಂಥ ವಿಕೃತತೆಯನ್ನೇ ಉಸಿರಾಡುತ್ತಾ ಅಧಿಕಾರಕ್ಕೇರಿದ ಬಿಜೆಪಿಯ ದುರುಳರು ಆ ಬಡವರ ಅನ್ನಕ್ಕೂ ಕನ್ನ ಹಾಕಿದ್ದಾರೆ. ಅನ್ನದಲ್ಲೂ ಹೊಲಸು ರಾಜಕೀಯ ಮಾಡ್ತಾ ತಮ್ಮ ಯೋಗ್ಯತೆ ಅನ್ನವಿಡೋದಲ್ಲ, ಧರ್ಮ, ಧರ್ಮಗಳ ನಡುವೆ ಜಾತಿ, ಜಾತಿಗಳ ನಡುವೆ ಮನುಷ್ಯ ಮನುಷ್ಯರ ನಡುವೆ ವಿಷವಿಡೋದು ಅನ್ನೋದನ್ನ ಮತ್ತೆ ಫ್ರೂ ಮಾಡಿದ್ದಾರೆ.
 
ನಾನು ಎರಡೊತ್ತಿನ ಅನ್ನಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟೋ ರಾತ್ರಿ ಅನ್ನವಿಲ್ಲದೇ ಮಲಗಿದ್ದೇನೆ.  ನನ್ನ ರಾಜ್ಯದ ಜನತೆ ಹಾಗೇ ಎಂದೂ ಹಸಿವಿನಿಂದ ಮಲಗಬಾರದು, ರಾಜ್ಯದಲ್ಲಿ ಅನ್ನವಿಲ್ಲದೇ ಯಾರೂ ಕಷ್ಟಪಡಬಾರದು ಅಂತಾ ಹೇಳ್ತಿದ್ದ ಸಿದ್ದರಾಮಯ್ಯ
2017 ಆಗಸ್ಟ್‌ 16 ರಂದು ತಮ್ಮ ಕನಸಿನ ಯೋಜನೆಯಾದ ‘ಇಂದಿರಾ ಕ್ಯಾಂಟೀನ್‌’ ನನ್ನು ಲೋಕಾರ್ಪಣೆಗೊಳಿಸಿದ್ದರು. ಬಡವರ ಹಸಿದ ಹೊಟ್ಟೆಯನ್ನು ತಣಿಸುವ ಉದ್ದೇಶ ಹೊಂದಿದ್ದ ಈ ಮಹತ್ವಾಕಾಂಕ್ಷಿ ಯೋಜನೆ ಮೇಲೆ ಸಹಜವಾಗಿ ಬಿಜೆಪಿಗರ ಹದ್ದಿನ ಕಣ್ಣು ಇದ್ದೇ ಇತ್ತು. ಅದಕ್ಕೇ ಇಂದಿರಾ ಕ್ಯಾಂಟೀನ್‌ನ ಊಟದಲ್ಲಿ ಜಿರಲೆ ಸಿಕ್ತು, ಇರುವೆ ಸಿಕ್ತು, ಕೂದಲು ಸಿಕ್ತು ಅನ್ನೋ ಸಿಲ್ಲಿ ಸಿಲ್ಲಿ ಕ್ಯಾತೆಯನ್ನ ಆಗಾಗ ತೆಗಿತಿದ್ರು. ತಮ್ಮ ಉರಿನಾಲಿಗೆಯನ್ನು ಹೊರಚಾಚಿ ಸಿದ್ದರಾಮಯ್ಯನವರ ವಿರುದ್ಧ ಕೆಂಡ ಕಾರುತ್ತಲೇ ಇದ್ದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಲು, ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ ಆಯ್ತು, ಅಲ್ಲಿ ಭ್ರಷ್ಟಾಚಾರ ನಡೀತಿದೆ. ಅದರೊಳಗೆ ಊಟ ಮಾಡಬೇಕೆಂದ್ರೆ ನಲ್ವತ್ತೋ, ಐವತ್ತೋ ಪರ್ಸೆಂಟ್‌ನಷ್ಟು ಕಮಿಷನ್‌ ಕೊಡಬೇಕು ಅನ್ನುವಂತಹ ಒಂದೇ ಒಂದು ನ್ಯೂನತೆ ಆ ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಸಿಕ್ಕಿರಲಿಲ್ಲ.

ಅಷ್ಟರ ಮಟ್ಟಿಗೆ ಬಡವರ, ವಿದ್ಯಾರ್ಥಿಗಳ, ಉದ್ಯೋಗಿಗಳ ಹೊಟ್ಟೆ ತಣಿಸಿದ ಪಾರದರ್ಶಕ ಯೋಜನೆಯಾಗಿತ್ತದು. ಅಂತಹ ಯೋಜನೆಗೆ ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಇದೀಗ ಎಳ್ಳು ನೀರು ಬಿಟ್ಟಿದೆ. ಬಿಬಿಎಂಪಿಯಿಂದ ಸಬ್ಸಿಡಿ ಹಣ ಬಿಡುಗಡೆಯಲ್ಲಿ ತಡವಾಗ್ತಿದೆ ಅನ್ನೋ ಕಾರಣ ನೀಡಿ  ಸರ್ಕಾರ ಬರೋಬ್ಬರಿ 40 ಇಂದಿರಾ ಕ್ಯಾಂಟೀನ್‌ಗಳ ಬಾಗಿಲುಗಳಿಗೆ ಬೀಗ ಹಾಕಿಸಿದೆ. ಹಸಿದುಕೊಂಡು ಕ್ಯಾಂಟೀನ್‌ನತ್ತ ಬರುತ್ತಿದ್ದ ಬಡವರ ಹೊಟ್ಟೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಛೀ... ಎಂತಹ ದರಿದ್ರ ಸರ್ಕಾರ ಇದು. ಹಸಿವು ಅಂದ್ರೇನು ಅಂತ ಮುಖ್ಯಮಂತ್ರಿಯ ಮಗನಾಗಿ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿಯವರಿಗೆ ಹೇಗೆ ಗೊತ್ತಾಗಬೇಕು. ಕೋಮು ನಂಜನ್ನೇ ಮೈತುಂಬಾ ತುಂಬಿಕೊಂಡು, ಹಾದಿಬೀದಿಗಳಲ್ಲಿ ಪುಡಿ ರೌಡಿಗಳಂತೆ ಹೊಡೆದಾಡಿಕೊಂಡು ಬೀದಿ ಹೆಣವಾಗುವ ಪುಡಾರಿಗಳಿಗೆ ಧರ್ಮ ರಕ್ಷಕರು ಅನ್ನೋ ಬಿರುದು ಕೊಟ್ಟು, ಸರ್ಕಾರದ ನಿಧಿಯ ಹಣದಲ್ಲಿ ಲಕ್ಷ ಲಕ್ಷ ಪರಿಹಾರ ಕೊಡುವ ಬೊಮ್ಮಾಯಿಯವರು ಬಡವರ ಹಸಿದ ಹೊಟ್ಟೆಗೆ ಅನ್ನನೀಡುವ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕೊಡೋದಕ್ಕೆ  ಸರ್ಕಾರದಲ್ಲಿ ಹಣ ಇಲ್ಲ ಅಂತಿದ್ದಾರೆ.. ಒಬ್ಬ ಮುಖ್ಯಮಂತ್ರಿಯಾಗಿ ಅಲ್ಲಾ, ಒಬ್ಬ ಮನುಷ್ಯನಾಗಿ ಒಂದಿಷ್ಟು ಮನುಷ್ಯತ್ವದ ಲವಲೇಶವೂ ಇವರಲ್ಲಿ ಉಳಿದಿಲ್ಲ ಅನ್ನೋದು ರಾಜ್ಯದ ಜನತೆಯ ದೌರ್ಭಾಗ್ಯ ಅನ್ನಲೇಬೇಕು.   

ಇನ್ನೂ 2014 ರಿಂದ ನಮ್ಮ ದೇಶಕ್ಕೆ ಶನಿ ವಕ್ಕರಿಸಿ ಬಿಟ್ಟಿದೆ. ಅರಾಜಕತೆ ತಾಂಡವವಾಡುತ್ತಿದೆ. ನೈತಿಕ ಮೌಲ್ಯಗಳು ಕುಸಿದು, ಅನೈತಿಕ ಪೊಲೀಸ್‌ಗಿರಿಗಳು ಮೆರೆದಾಡುತ್ತಿವೆ. ಈಗೀಗ, ಬಡತನ, ಹಸಿವು, ಅಭಿವೃದ್ಧಿ, ಶಿಕ್ಷಣ, ಭದ್ರತೆ ಅನ್ನೋ ಜೀವ ಪರ ಯೋಜನೆಗಳಿಗಿಂತ, ಜಾತಿ, ಧರ್ಮ, ಮಂದಿರ ಮಸೀದಿ, ದ್ವೇಷ ಅಸೂಯೆಯ ಯೋಜನೆಗಳೇ ಭರ್ಜರಿಯಾಗಿ ಬೆಲೆ ಪಡೆದುಕೊಳ್ಳುತ್ತಿವೆ. ಅವೇ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸಿ ವೋಟು ತಂದು ಕೊಡುತ್ತವೆ ಅನ್ನೋದು ಆಳುವ ಪ್ರಭುತ್ವಕ್ಕೆ ಮನದಟ್ಟಾಗಿ ಬಿಟ್ಟಿದೆ. ಅದಕ್ಕೆ ಜೀವ ಪರ ಯೋಜನೆಗಳಿಗೆ ಸುರಿಯಬೇಕಿದ್ದ ಅನುದಾನವನ್ನ, ಕೋಮು ದ್ವೇಷಕ್ಕೆ ಸುರಿಯಲಾಗುತ್ತಿದೆ. ಅದಕ್ಕೆ ಇತ್ತೀಚಿಗಷ್ಟೇ ಗುಜರಾತ್‌ ನಲ್ಲಿ ಕಳಪೆ ಕಾಮಗಾರಿಯಿಂದಾಗಿ, ಪುನಾರಾರಂಭವಾಗಿ ಕೇವಲ ಆರೇ ದಿನಕ್ಕೆ ಸೇತುವೆ ಕುಸಿದು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು ನೀವೆ ನಿಮ್ಮ ಕಣ್ಣಾರೆ ನೋಡಿದ್ದೀರಲ್ಲ.

ಇದಿಷ್ಟೇ ಅಲ್ಲ, ಇತ್ತೀಚಿಗೆ 2022ರ ಜಾಗತಿಕ ಹಸಿವಿನ ಸೂಚ್ಯಂಕದ ಕುರಿತು, ಯುನಿಸೆಫ್‌, ವಿಶ್ವಬ್ಯಾಂಕ್, ಆಹಾರ, ಮತ್ತು ಕೃಷಿ ಸಂಸ್ಥೆ ಸೇರಿದಂತೆ ವಿವಿಧ ಯುಎನ್‌ ಮತ್ತು ಬಹುಪಕ್ಷೀಯ ಏಜೆನ್ಸಿಗಳಿಂದ ಪಡೆಯಲಾದ ಡೇಟಾ ಪ್ರಕಾರ ಭಾರತ ಹೀನಾತಿ ಹೀನ ಅನ್ನುವಷ್ಟು ಕೆಳಮಟ್ಟಕ್ಕೆ ಕುಸಿದಿದೆ. ಅದು ಯಾವ ಮಟ್ಟಕ್ಕೆ ಅಂದ್ರೆ, ನಮ್ಮ ಭಾರತವು ಪಾಕಿಸ್ತಾನ, ಬಾಂಗ್ಲಾ, ಮತ್ತು ಶ್ರೀಲಂಕಾಕ್ಕಿಂತಲೂ ಹೀನಾಯ ಸ್ಥಿತಿ ತಲುಪಿದೆ. ಸ್ವಲ್ಪ ಸಮಾಧಾನದ ವಿಷಯ ಏನಂದ್ರೆ ಅಪಘಾನಿಸ್ತಾನ, ಯೆಮೆನ್‌, ಉಗಾಂಡಾ, ಜಿಂಬಾಬ್ವೆಯಂತಹ ಅತ್ಯಂತ ಕಡುಬಡ ರಾಷ್ಟ್ರಗಳಿಗಿಂತಲೂ ಒಂದೆರಡು ನಂಬರ್‌ ಮೇಲೆ ಇದ್ದೀವಿ ಅನ್ನೋದಷ್ಟೇ. ಅಮೇರಿಕಾ, ಸ್ವಿಜರ್‌ಲ್ಯಾಂಡ್‌ ಸೇರಿದಂತೆ, ಗಲ್ಫ್‌ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಕಂಪೇರ್‌ ಮಾಡಿಕೊಳ್ಳಬೇಕಿದ್ದ ನಮ್ಮನ್ನು, ಪಾಕಿಸ್ತಾನಕ್ಕಿಂತಲೂ ಕೆಳಮಟ್ಟಕ್ಕೆ ಇಳಿಸಿದ, ಜಿಂಬಾಬ್ವೆ, ಉಗಾಂಡದಂತಹ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ ನಮ್ಮ ಮೋದಿಯವರನ್ನು ಪ್ರಧಾನಿಯಾಗಿ ಪಡೆದ ನಾವು ಧನ್ಯರೋ ಧನ್ಯ.

ಡಬಲ್ ಇಂಜಿನ್ ಸರ್ಕಾರ ಬಂದ್ರೆ ಭೂಮಿಗೆ ಸ್ವರ್ಗವನ್ನೇ ಇಳಿಸ್ತೇವೆ ಅಂತಿದ್ದ ಬಿಜೆಪಿಯವರು ಇದೀಗ ಎಲ್ಲಾ ಕಡೆ ಜನರಿಗೆ ಸ್ವರ್ಗ ತೋರಿಸ್ತಿದ್ದಾರೆ. ದೀನ ದಲಿತರ ಚರ್ಮ ಸುಲಿದು, ಅಲ್ಪಸಂಖ್ಯಾತರು ಸದಾ ಆತಂಕದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿರೋಧಿಸುವವರ ಮನೆಗೆ ಜೆಸಿಬಿ ನುಗ್ಗಿಸುವ ಸನ್ಯಾಸಿಯೊಬ್ಬ ಆದರ್ಶವಾಗುವ ದೇಶದಲ್ಲಿ ಅತ್ಯಾಚಾರಗಳು ಸಹಜವಾಗಿವೆ..ಇಂತಾ ಸುವರ್ಣ ಆಡಳಿತವನ್ನು ಕಣ್ಣಾರೆ ನೋಡೋಕೆ ಜನ ಹಿಂದೂ ಸಾರ್ಮಾಟ ಮೋದಿಯವರನ್ನು ತಮ್ಮ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಜನರು ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲಿ ನರಳಾಡಬೇಕು, ಯುವಕರು ಉದ್ಯೋಗವಿಲ್ಲದೇ ಅಲೆದಾಡಬೇಕು, ಅಮಾಯಕರು ತಿನ್ನೋಕೆ ಅನ್ನ ಇಲ್ದೇ ಹೊಟ್ಟೆ ಹಸಿವಿನಿಂದ ಸಾಯ್ಬೇಕು. ಅದಕ್ಕಾಗಿ ನೀವು ಮತ್ತೆ ಮತ್ತೆ ಚುನಾವಣೆಯಲ್ಲಿ ಗೆಲ್ತಾನೆ ಇರ್ಬೇಕು ಅಂತಾ ಪ್ರದಾನಿಯವರಿಗೆ ಹೇಳ್ತಿದ್ದಾರೆ. ಅವರು ತಾವೇ ಅಡವಿಟ್ಟ ಕೆಂಪು ಕೋಟೆ ಮೇಲೆ ನಿಂತುಕೊಂಡು ಬಡಾಯಿ ಕೊಚ್ಚಿ ಕೊಳ್ತಾನೆ ಇರ್ಬೇಕು ಅನ್ನೋದು ಅವರ ಭಕ್ತರ ಆಸೆ. ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ಕ್ಷೀಣತೆ, ಮತ್ತು ಮಕ್ಕಳ ಮರಣ. ಈ ನಾಲ್ಕು ಘಟಕಗಳ ಮೌಲ್ಯವನ್ನು ಆಧರಿಸಿ ಜಾಗತಿಕ ಹಸಿವಿನ ಸೂಚ್ಯಂಕವನ್ನ ನಿರ್ಧರಿಸಲಾಗುತ್ತದೆ. ಈ ಸೂಚ್ಯಂಕದಲ್ಲಿ ನಮ್ಮ ಭಾರತ 121 ದೇಶಗಳ ಪೈಕಿ 107 ನೇ ಸ್ಥಾನದಲ್ಲಿದೆ. ಇದು ಮೋದಿಯವರ ಅಚ್ಚೇದಿನ್ ಗಳ ಫಲ..ಇದಕ್ಕಿಂತ ಮೊದಲು ಅಂದ್ರೆ ಮನಮೋಹನಸಿಂಗ್‌ ಅವರ ಕೊಚ್ಚೆ ದಿನಗಳ ಅವಧಿಯಲ್ಲಿ ಭಾರತ ಎಷ್ಟೋ ಮೇಲಿತ್ತಲ್ಲ..ಓಹ್‌ ಮೋದಿ ಅವರ ಅಚ್ಚೆ ದಿನ್‌ ಕೂಡಾ ತಾಲಿಬಾನಿಗಳ ಅಫಘಾನಿಸ್ತಾನಕ್ಕಿಂತ ಒಂದು ನಂಬರ್‌ ಮೇಲೆ ಇದೆಯಲ್ವಾ- ಅವರ ಸಾಮರ್ಥ್ಯಕ್ಕೆ ಹೋಲಿಸಿದರೆ, ಈ ಸಾಧನೆ ಅಸಾಧಾರಣ ಬಿಡಿ. ಜಗತ್ತು ಮೆಚ್ಚಿ ತಲೆಬಾಗಿದ ಆ ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್‌ ಎಲ್ಲಿ? ಇವರೆಲ್ಲಿ ? ಇನ್ನು ಮೋದಿಯವರನ್ನೇ ಹೊಲುವ ಅಸಮಾನ್ಯ ನಾಯಕ ನಮ್ಮ ಕರ್ನಾಟಕದಲ್ಲಿಯೂ ಇದ್ದಾರೆ.

ಮೋದಿ ಪ್ರಧಾನಿಯಾದಂತೆ, ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆಯನ್ನು ಲಗಾಡಿ ತೆಗೆದಂತೆ, ಇಲ್ಲಿ ಬಡವರ ಅನ್ನವನ್ನ ಕಿತ್ತುಕೊಂಡು ರಾಷ್ಟ್ರ ಮಟ್ಟದಲ್ಲಿ ನಮ್ಮ ರಾಜ್ಯದ ಮರ್ಯಾದೆಯನ್ನ ತೆಗೆಯುವ ಕೆಲಸ ಮಾಡ್ತಿದ್ದಾರೆ. ಅದೂ ನಮ್ಮ ಕರುನಾಡು ರಾಜ್ಯೋತ್ಸವದ ಹೊಸ್ತಿಲಲ್ಲಿ ಇರುವಾಗಲೇ, ಕನ್ನಡಿಗರ ಕತ್ತು ಹಿಸುಕುವ ಘಾತುಕ ಕೆಲಸವನ್ನ ಮಾಡಿದ್ದಾರೆ. ಮುಖ್ಯಮಂತ್ರಿಯೊಬ್ಬ ತನ್ನ ರಾಜ್ಯದ ಜನದ ಅನ್ನವನ್ನ ಕಸಿಯುವ ಕ್ರೌರ್ಯ ಬಹುಶಃ ಬೇರೆಲ್ಲೂ ನಡೆದಿರುವುದಿಲ್ಲ…

ಹೌದು, ರಾಜ್ಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಅನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ ಅನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರಲಾಗಿತ್ತು. ಬೆಂಗಳೂರು ಒಂದರಲ್ಲೇ 198 ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು, ಇದೇ ನಗರದಲ್ಲಿ ದಿನವೊಂದಕ್ಕೆ ಬರೋಬ್ಬರಿ 3.5 ಲಕ್ಷ ಜನ ಊಟ ಮಾಡ್ತಿದ್ರು. ಅದೂ 5 ರೂಪಾಯಿಗೆ ಬ್ರೇಕ್‌ ಫಾಸ್ಟ್‌, 10 ರೂಪಾಯಿಗೆ ಹೊಟ್ಟೆ ತುಂಬಾ ಊಟ. ಆಟೋ ಡ್ರೈವರ್‌ಗಳು, ಕೂಲಿ ಕಾರ್ಮಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು,- ಅವರಲ್ಲಿ ಒಮ್ಮೆ ಕೇಳಿ ನೋಡಿ. ಇಂದಿರಾ ಕ್ಯಾಂಟೀನ್‌ ಯೋಜನೆಯ ಸಾರ್ಥಕತೆ ಏನು ಅನ್ನೋದು ಅರ್ಥ ಆಗುತ್ತೆ.  ಇವತ್ತು ಬೆಂಗಳೂರಿನಲ್ಲಿ ಒಂದು ಮಸಾಲೆ ದೋಸೆ ತಿಂದು, ಒಂದು ಟೀ ಕುಡುದ್ರೆ ಸಾಕು, 70 ರಿಂದ 80 ರೂಪಾಯಿ ಹಾರ್ಕೊಂಡು ಹೋಗ್ಬುಡುತ್ತೆ. ಅಂತದ್ರಲ್ಲಿ ಕೇವಲ 5 ರೂಪಾಯಿಗೆ ಬ್ರೆಕ್‌ ಫಾಸ್ಟ್‌, 10 ರೂಪಾಯಿಗೆ ಕಾರ್ಮಿಕರ, ವಿದ್ಯಾರ್ಥಿಗಳ ಎಲ್ಲೆಲ್ಲಿಂದಲೂ ಉದ್ಯೋಗ ಅರಸಿ ಬಂದವರ ಹೊಟ್ಟೆ ತುಂಬಿ ಹಣ ಉಳಿತಾಯವಾಗ್ತಿತ್ತು ಅಂದ್ರೆ ಸುಮ್ನೇನಾ? ಇಂತಹದೊಂದು ಜನಪರ ಯೋಜನೆಯನ್ನು ಬೇರೆ ರಾಜ್ಯದವರು ಕನಸಿನಲ್ಲಿಯೂ ಊಹಿಸಿಕೊಂಡಿರಲಿಕ್ಕಿಲ್ಲ. ನಾವೂ ಕರ್ನಾಟಕದಲ್ಲಿ ಹುಟ್ಟಬೇಕಿತ್ತು ಅಂತ ಬೇರೆ ರಾಜ್ಯದವರೂ ಅಂದುಕೊಂಡಿರಬಹುದು. ಆದ್ರೆ ಈಗ ಬೊಮ್ಮಾಯಿಯವರ ಆಡಳಿತದಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಕನ್ನಡಿಗರ ಬದುಕೇ ದುಸ್ಥರವಾಗಿ ಬಿಟ್ಟಿದೆ. ಬಡವರು ಹಸಿವಿನಿಂದ ಸಾಯುವಂತೆ ಆಗಿದೆ. ಹೌದು, ಬೆಂಗಳೂರಿನ ಪಾರ್ವತಿಪುರ, ಸಂಪಿಗೆ ರಾಮನಗರ, ಬಿಸ್ಮಿಲ್ಲಾ ನಗರದ ಟ್ಯಾಂಕ್‌ ಬಂಡ್‌ ರಸ್ತೆ, ಹೊಸಹಳ್ಳಿ, ಪುಲಿಕೇಶಿ ನಗರ, ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದರ ಪಾಳ್ಯ, ಸುಬ್ರಮಣ್ಯಪುರಂನ ವಸಂತನಗರ, ಮಹದೇವಪುರದ ಎ. ನಾರಾಯಣಪುರ, ಕೋಗಿಲು, ಪ್ರಕೃತಿ ನಗರ ಸೇರಿದಂತೆ ಬರೋಬ್ಬರಿ 40 ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚಲಾಗಿದೆ. 2017 – 2018 ರ ಸಾಲಿನಲ್ಲಿ ಅಂದಿನ ಸಿದ್ದರಾಮಯ್ಯನವರ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗಾಗಿಯೇ ಸುಮಾರು 145 ಕೋಟಿ ರೂಪಾಯಿಗಳನ್ನು ಕೊಟ್ಟಿತ್ತು. ಅವರು ಅಧಿಕಾರದಲ್ಲಿರುವಾಗ ಪ್ರತಿವರ್ಷ ಕೋಟಿ ಕೋಟಿ ಹಣವನ್ನು ಕೊಡುತ್ತಿದ್ದರು.

ಆದ್ರೆ ಆಪರೇಷನ್‌ ಕಮಲ ಅನ್ನೋ ಕುದುರೆ ವ್ಯಾಪಾರದ ಮೂಲಕ ಜನಾದೇಶವನ್ನು ಧಿಕ್ಕರಿಸಿ ಅಧಿಕಾರಕ್ಕೆ ಬಂದ ಬಿಜೆಪಿ. ಸಿಲ್ಲಿ ಕಾರಣಗಳನ್ನು ಮುಂದಿಟ್ಟುಕೊಂಡು ಅನುದಾನ ಪೂರೈಕೆಯನ್ನು ತಡೆಹಿಡಿಯುತ್ತಲೇ ಬಂದಿದೆ. ಇದೀಗ ಪರ್ಮನೆಂಟ್‌ ಆಗಿ ಮುಚ್ಚಿ ಬಿಟ್ಟಿದೆ. ಇಂದಿರಾ ಕ್ಯಾಂಟೀನ್‌ ನಡೆಸೋದಕ್ಕೆ ಯಾರ್‌ ಯಾರಿಗೋ ಟೆಂಡರ್‌ ಕೊಡ್ಬೇಕಂತೆ? ಕರೆಂಟ್‌ ಬಿಲ್‌, ವಾಟರ್‌ ಬಿಲ್‌ ಕೊಡ್ಬೇಕಂತೆ, ಜಲ ಮಂಡಳಿ ಕ್ಯಾತೆ ತೆಗಿತಂತೆ, ಕೊನೆಗೆ ಬಿಲ್‌ಗಳು ಬಾಕಿಯಂತೆ. ಇದು ಬಿಜೆಪಿ ಸರ್ಕಾರ ತಮಗೆ ವೋಟು ಹಾಕಿದ ಜನತೆಗೆ ಕೊಟ್ಟ ಮಹಾ ಕೊಡುಗೆ….

ಒಟ್ನಲ್ಲಿ ಬಡವರ ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್‌ ಗಳಿಗೆ ಬೀಗ ಬಿದ್ದಿದೆ. ತನ್ನ ರಾಜಕೀಯ ತೆವಲಿಗೆ ಬಿಜೆಪಿ ಪಕ್ಷ ಬಡವರ ರಕ್ತ ಹೀರುವ ಘಾತಕ ಕೆಲಸ ಮಾಡಿದೆ. ಕೋವಿಡ್‌ ಸಮಯದಲ್ಲೂ ಜನರಿಗೆ ಅನ್ನ ಕೊಟ್ಟಿದ್ದ ಈ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡಿದ ಜನರು, ಧನ್ಯತಾ ಭಾವದಿಂದ ಕೈ ಮುಗಿದು ಹೋಗುತ್ತಿದ್ದರು. ಅಂತಹದೊಂದು ಯೋಜನೆಗೆ ಎಳ್ಳು ನೀರು ಬಿಟ್ರಲ್ಲ – ಮಿಸ್ಟರ್‌ ಬೊಮ್ಮಾಯಿಯವರೇ... ನಿಮ್ಮ ಈ ಘನಂಧಾರಿ ಕೆಲಸವನ್ನು ರಾಜ್ಯದ ಜನ ಯಾವತ್ತೂ ಮರೆಯಲ್ಲ. ಮುಂದಿನ ಚುನಾವಣೆಗೆ ವೋಟು ಕೇಳಲಿಕ್ಕಾದರೂ ಮನೆಮನೆಗೆ ಹೋಗ್ತೀರಲ್ಲ – ಆಗ ಜನ ನಿಮ್ಮನ್ನು ನಿಲ್ಲಿಸ್ತಾರೆ. ನಿಮ್ಮ ಯೋಜನೆಗಳ, ನಿಮ್ಮ 40 % ಭ್ರಷ್ಟಾಚಾರಗಳ, ನಿಮ್ಮ ಅರಾಜಕತೆಯ ಆಡಳಿತದ ಕುರಿತು ಪ್ರಶ್ನಿಸಿಯೇ ಪ್ರಶ್ನಿಸ್ತಾರೆ. ಯಾಕಂದ್ರೆ ಹಸಿವಾದಾಗ ನೆನಪಾಗೋದು ಅನ್ನ ಕೊಟ್ಟವರೇ ಹೊರತು, ಅರೆಬೆಂದವರಲ್ಲ…ಇಂಥ ವಿಕೃತತೆಯ ವಿರುದ್ಧ ನಾವು ಕಾರ್ಯಕ್ರಮಗಳನ್ನ ರೂಪಿಸುತ್ತಲೇ ಇರ್ತೇವೆ..ಜನರಿಗೆ ತಲುಪಬೇಕಾದ ಸತ್ಯವನ್ನ ತಲುಪಿಸ್ತಲೇ ಇರ್ತೇವೆ. ಇನ್ನಾದರೂ ನಿಮ್ಮ ಹೊಲಸು ರಾಜಕೀಯವನ್ನು ಸರಿ ಪಡಿಸಿಕೊಳ್ಳುವ ಸಾಧ್ಯತೆಗಳಿದ್ದರೇ ಜನಪರವಾಗಿ ನಿಮ್ಮನ್ನ ತಿದ್ದಿಕೊಳ್ಳಿ ಅಂತಾ ಹೇಳ್ತೇವೆ.
    

© Copyright 2022, All Rights Reserved Kannada One News