ಬಡವರ ಮನೆ ಮಕ್ಳೂ ಬೆಳೀಬೇಕು ಕಣ್ರಯ್ಯಾ: ಎಡಿಟರ್ ಸ್ಪೆಷಲ್

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಬಡವರ ಮನೆ ಮಕ್ಳೂ ಬೆಳೀಬೇಕು ಕಣ್ರಯ್ಯಾ: ಎಡಿಟರ್ ಸ್ಪೆಷಲ್

Updated : 29.10.2022

ಕನ್ನಡ ಚಿತ್ರರಂಗ ಸದ್ಯ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸ್ತಿದೆ. ಇದು ಖುಷಿಯ ವಿಚಾರ, ಆದ್ರೆ ಬೌದ್ಧಿಕವಾಗಿ ಅಷ್ಟೇ ಕೆಳ ಮಟ್ಟಕ್ಕೆ ಕುಸಿಯುತ್ತಿದೆಯೇನೋ ಅನ್ನೋ ಸಂಶಯವೂ ಮೂಡ್ತಿದೆ. ಯಾಕಂದ್ರೆ ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಂದು ವಿವಾದ ಎದುರಾಗ್ತಿದೆ. ಜಾತಿಗ್ರಸ್ತ ಮನಸ್ಥಿತಿಗಳು ಸ್ಯಾಂಡಲ್ ವುಡ್ ಮೇಲೆ ಹಿಡಿತ ಸಾಧಿಸೋಕೆ ಮತ್ತೆ ಮುಂದಾಗಿವೆ. ಅಲ್ಲದೇ ಜಾತಿಯನ್ನು ಮುಂದು ಮಾಡಿಕೊಂಡು ಕಲೆಯನ್ನ ಕಲಾವಿದರನ್ನ ಅವಮಾನಿಸೋರು ಒಂದು ಕಡೆಯಾದ್ರೆ, ಕಲೆಯನ್ನ ಮುಂದುಮಾಡಿಕೊಂಡು ತಮ್ಮ ಧಾರ್ಮಿಕ ಮೂಲಭೂತವಾದವನ್ನ ನೋಡುಗರ ಮೇಲೆ ಏರುವವರು ಇನ್ನೊಂದು ಕಡೆ. ಯಾವ್ದೇ ಚಿತ್ರ ಬಿಡುಗಡೆಯಾದಾಗಲೂ ಅದು ಆ ಸಮುದಾಯದ ಭಾವನೆಗೆ ಧಕ್ಕೆ ಮಾಡಿದೆ, ಈ ಸಮುದಾಯದ ಭಾವನೆಗೆ ಧಕ್ಕೆ ಮಾಡಿದೆ ಅಂತಾ ಚಿತ್ರವನ್ನ ಬಹಿಷ್ಕರಿಸಲು ಕರೆನೀಡಲಾಗುತ್ತೆ. ಆದ್ರೆ ಈ ಪ್ರತಿಭಟನೆಯೂ ಜಾತೀ ಆಧಾರದಲ್ಲೇ ನಡೆಯುತ್ತೆ. ಮೊನ್ನೆ ‘ಕಾಂತಾರ’ ಚಿತ್ರವನ್ನು ಹಿಂದೂ ಸಂಸ್ಕೃತಿಯ ಪ್ರತೀಕ ಅಂತಾ ಬಿಂಬಿಸಲು ಹೊರಟು ವಿವಾದವನ್ನು ಸೃಷ್ಠಿಸಿದ ರಿಷಬ್ ಶೆಟ್ಟಿ ಒಂದು ಧಾರ್ಮಿಕ ಮೂಲಭೂತವಾದದ ಪರ ನಿಂತದ್ದು ತಿಳಿದೇ ಇದೆ.

ಆಗ ರಿಷಬ್ ಪರ ಹಿಂದೂ ಸಂಘಟನೆಗಳು ನಿಂತಿದ್ದರಿಂದ ಇದು ಶೂದ್ರ ಸಂಸ್ಕೃತಿಯ ಭಾಗ ಎನ್ನುತ್ತಾ, ಕರಾವಳಿಯ ಆಚರಣೆಗಳನ್ನು ವಿವರಿಸಿದ ನಟ ಚೇತನ್ ವಿಲನ್ ಆಗಬೇಕಾಯ್ತು. ಆದ್ರೇ ಕಾಂತಾರದಲ್ಲಿಯೇ ಗುಳಿಗ ದೇವರು ಆವಾಹನೆಯಾದ ನಾಯಕನಿಗೆ ಇದೇ ನಿರ್ದೇಶಕ ಕಾಲಿನಲ್ಲಿ ಒದೆಸುತ್ತಾನೆ, ಕುತ್ತಿಗೆ ಹಿಡಿದು ಮೇಲೆತ್ತಿ ನೆಲಕ್ಕೊಗೆಸ್ತಾನೆ ಆಗ ಸಮುದಾಯಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರುವುದಿಲ್ಲ, ಇನ್ನೂ ಕನ್ನಡ ಚಿತ್ರರಂಗದ ಅಭಿರುಚಿಯನ್ನೇ ಹಾಳು ಮಾಡಿದ ನಟ ಉಪೇಂದ್ರ ನಾನೇ ದೇವರು ಅಂತಾ ಗಣೇಶನ ಮೂರ್ತಿಯನ್ನು ನೀರಿಗೆಸೆದರೂ, ದೇವರು ಧರ್ಮಗಳನ್ನು ಹೀನಾಮಾನ ಬೈದಾಗಲೂ, ಧರ್ಮದ ದೇವತೆಗಳಿಗೆ ಬೂಟುಕಾಲಿನಲ್ಲಿ ಒದ್ದಾಗಲೂ ಆಗದ ಧಕ್ಕೆ ಪ್ರಜ್ಞಾಪೂರ್ವಕವಾಗಿ ಸುಳ್ಳು ವೀರಗಾಸೆ ವೇಶಧಾರಿಯೊಬ್ಬನಿಗೆ ನಾಯಕ ಹೊಡೆದಾಗ ಆಗುತ್ತದೆಯೇ…ಇಲ್ಲಿ ಏನಾಯಿತು ಅನ್ನೋದಕ್ಕಿಂತ ಯಾರಿಂದ ಆಯಿತು,  ಅವರ ಜಾತಿ ಹಿನ್ನೆಲೆ ಏನು ಅನ್ನೋದೆ ಮುಖ್ಯವಾಗುತ್ತೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ…ಇಷ್ಟೆಲ್ಲಾ ವಿವರ ಈಗ ಯಾಕೆ ಹೇಳ್ತಿದ್ದೀವಿ ಅಂದ್ರೆ ಡಾಲಿ ಧನಂಜಯ್ ನಿರ್ಮಿಸಿ, ನಟಿಸಿರುವ ಹೆಡ್ ಬುಷ್ ಚಿತ್ರದ ಮೇಲೆ ಧರ್ಮಾಂಧರ ಕಣ್ಣು ಬಿದ್ದಿದೆ. ವೀರಗಾಸೆಗೆ ಅವಮಾನಿಸಲಾಗಿದೆ ಅಂತಾ ಧನಂಜಯ್ ವಿರುದ್ಧ ಭಜರಂಗಿಗಳು ಬೆಂಕಿ ಕಾರುತ್ತಿದ್ದಾರೆ….ಅಷ್ಟಕ್ಕೂ ಧನಂಜಯ್ ಅವರ ಹೆಡ್ ಬುಷ್ ನಲ್ಲಿ ಅಂಥಾದ್ದೇನಿದೆ. ಯಾಕೆ ಯಾವಾಗಲೂ ಧನಂಜಯ್ ವಿರುದ್ಧ ಇಂಥ ಪಿತೂರಿಗಳು ನಡೆಯುತ್ತವೆ ಅನ್ನೋದನ್ನ ನೋಡೋಣ ಬನ್ನಿ…..  

ಖಾಲಿ ತಲೆಗಳೇ ತುಂಬಿರೋ ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿ ಸ್ವಂತ ಆಲೋಚನೆಯುಳ್ಳ ಕೆಲವೇ ಕೆಲವು ಪ್ರಬುದ್ಧ ನಟರಲ್ಲಿ ಡಾಲಿ ಧನಂಜಯ್ ಕೂಡಾ ಒಬ್ಬರು. ಇದನ್ನ ನಾವು ಬಿಡಿಸಿ ಹೇಳಬೇಕಿಲ್ಲ. ಇನ್ನು ಪ್ರತಿಭಾವಂತ ನಟನಾಗಿರುವ ಧನಂಜಯ್ ರಾತ್ರೋ ರಾತ್ರಿ ಸ್ಟಾರ್ ಆದವರಲ್ಲ, ಅದಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗಕ್ಕೆ ಬೇಕಾದ ಕೆಲವು ಸೋ ಕಾಲ್ಡ್ ‘ಸರ್ಟಿಫಿಕೆಟ್’ ಗಳನ್ನ ಕೂಡಾ ಹಿಡಿದು ಮೇಲೆ ಬಂದವರಲ್ಲ. ಯಾವ್ದೇ ಗಾಢ್ ಫಾದರ್ ಇಲ್ದೇ ಕಲೆಯನ್ನೇ ಬದುಕಾಗಿಸಿಕೊಳ್ಳಬೇಕು ಅಂತಾ ಇಂಡಸ್ಟ್ರಿಗೆ ಹೆಜ್ಜೆ ಇಟ್ಟ ಡಾಲಿ, ಪ್ರತೀ ಹಂತದಲ್ಲೂ ಎದುರಿಸಿದ ಸವಾಲು ಒಂದೆರಡಲ್ಲ. ನೋಡೋಕೆ ನೆಲಮೂಲದ ನಾಯಕನಂತೆ ಗಮನ ಸೆಳೆವ ಡಾಲಿ, ಇಂಜಿನಿಯರಿಂಗ್ ಓದಿಕೊಂಡವರು, ಅಲ್ದೇ ಪ್ರತಿಷ್ಟಿತ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡ್ತಾ, ಕಲೆ ಬಗ್ಗೆ ಅವರಿಗಿರುವ ಸೆಳೆತಕ್ಕೆ ರಂಗಭೂಮಿಯಿಂದ ತಮ್ಮ ಕಲಾಬದುಕು ಆರಂಭಿಸಿದವರು. 

ಅಂದ್ರೆ ಒಬ್ಬ ಫರ್ಫೆಕ್ಟ್ ಕಲಾವಿದನಿಗೆ ಬೇಕಾದ ಎಲ್ಲಾ ಲಕ್ಷಣಗಳೂ ಧನಂಜಯ್ ಅವರಲ್ಲಿ ಇತ್ತು. ಆದ್ರೆ ಸದಾ ಚಿತ್ರರಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂದುಕೊಳ್ಳೋ ಪಟ್ಟಭದ್ರರಿಗೆ ಡಾಲಿ ಬೆಳವಣಿಗೆಯನ್ನು ಸಹಿಸಿಕೊಳ್ಳೋದು ಸಾಧ್ಯವಾಗಲಿಲ್ಲ. ನಿಜ ಹೇಳಬೇಕಂದ್ರೆ ಧನಂಜಯ್ ಅವರ ಪ್ರಬುದ್ಧತೆಯೇ ಅವರಿಗೆ ಮುಳುವಾಯ್ತು ಅನ್ನಬೇಕು. ಬರೀ ಬಾಡೀ ಬಿಲ್ಡ್ ಮಾಡ್ಕೊಂಡು ಕಲೆ ಅನ್ನೋದನ್ನ ಜಸ್ಟ್ ಟೈಂ ಪಾಸಿಗೋ, ಶೋಕಿಗೋ ಬಳಸಿಕೊಳ್ದೇ ಸತ್ಯದ ಪರ ನಿಲ್ಲುತ್ತಾ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸ್ತಾ..ತಮ್ಮ ಕಲಾ ಬದುಕನ್ನ ಮುಂದುವರೆಸಿದ ಡಾಲಿ ಕೆಲವು ಮೂಲಭೂತವಾದಿಗಳಿಗೆ ಅನಿವಾರ್ಯವಾಗಿ ವಿರೋಧಿಯಾಗಬೇಕಾಯ್ತು. ಕೆಲವರು ಆರಂಭದಲ್ಲೇ ಧನಂಜಯ್ ಅವರನ್ನ ಮುಗಿಸೋಕೆ ನೋಡಿದ್ರು. ನೇರವಾಗಿ ಅವಮಾನ ಮಾಡ್ತಾ, ಇವನದ್ದು  ಐರನ್ ಲೆಗ್, ಎಲ್ಲೋದ್ರು ಉದ್ಧಾರ ಆಗಲ್ಲ ಅನ್ನೋತರದ ಮಾತುಗಳ ಮೂಲಕ ಧನಂಜಯ್ ನನ್ನು ಚಿತ್ರರಂಗದಿಂದ ಹೊರಗಟ್ಟಲು ಪ್ರಯತ್ನಿಸಿದ್ರು. ಆದ್ರೇ ಇದೆಲ್ಲವನ್ನು ಮೀರಿ ಬೆಳೆದ ಧನಂಜಯ್ ಈಗ ನಟ ಮಾತ್ರನಲ್ಲ, ಚಿತ್ರಕಥೆಗಾರ, ಸಾಹಿತಿ, ನಿರ್ಮಾಪಕ ಕೂಡಾ…ಈ ಸಕ್ಸಸ್ ಡಾಲಿಗೆ ಅಭಿಮಾನಿಗಳಷ್ಟೇ ವಿರೋಧಿಗಳನ್ನೂ ಹುಟ್ಟಿಹಾಕಿದೆ ಅನ್ನೋದಕ್ಕೆ ಸದ್ಯದ  ‘ಹೆಡ್ ಬುಷ್’ ವಿವಾದವೇ ಸಾಕ್ಷಿ….

‘ಧನಂಜಯ್’ ಬಾಲ್ಯದಿಂದಲೇ ತಂದೆಯೊಂದಿಗೆ ಬಣ್ಣ ಹಚ್ಚುತ್ತಾ, ನಾಟಕಗಳಲ್ಲಿ ನಟಿಸುತ್ತಾ ಕಲಾವಿದನಾಗಬೇಕೆಂಬ ಕನಸ್ಸು ಕಟ್ಟಿಕೊಂಡು ಬಣ್ಣದ ಜಗತ್ತಿಗೆ ಬಂದ ಕನಸುಕಣ್ಗಳ ಕಲಾವಿದ. ಮಾವ ಹಾರ್ಮೋನಿಯಂ ಮಾಸ್ಟರ್. ಮಧ್ಯಮ ವರ್ಗದ ತುಂಬು ಕುಟುಂಬದಲ್ಲಿ ಬೆಳೆದ ಧನಂಜಯ್ ಗೆ ತಾನೂ ಏನನ್ನಾದ್ರೂ ಸಾಧಿಸ್ಲೇಬೇಕು ಅನ್ನೋ ತುಡಿತ…ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕಾಳೆನಹಳ್ಳಿ ಗ್ರಾಮದಲ್ಲಿ. ಅಲ್ಲಿನ ಸೇಂಟ್ ಮೇರಿಸ್ ಹೈಸ್ಕೂಲ್ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ಅವರು, ಮುಂದೆ ಮೈಸೂರಿನ ಶ್ರೀಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದ್ರು. ಜೊತೆಗೆ ಮೈಸೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗವನ್ನೂ ಪಡೆದ್ರು. ಆದ್ರೆ ಅವರ ಬಾಲ್ಯದ ಕನಸಾದ ಕಲಾಬದುಕು ಅವರನ್ನ ಮತ್ತೆ ರಂಗಭೂಮಿಯತ್ತ ಸೆಳೆದಿತ್ತು. ಶಾಲಾ ಕಾಲೇಜುಗಳಲ್ಲೂ ಟಾಪರ್ ಆಗಿದ್ದ ಡಾಲಿಗೆ ಜರ್ಮನಿಯ ನಟನಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸೋ ಅವಕಾಶವೂ ಸಿಗ್ತು. ರಕ್ತಗತವಾಗಿದ್ದ ಕಲೆಗೆ ಡಾಲಿ ತಮ್ಮನ್ನ ಸಂಪೂರ್ಣವಾಗಿ ಒಪ್ಪಿಸಿಕೊಳ್ಳಬೇಕು ಅಂದ್ಕೊಂಡ್ರು. ರಂಗಭೂಮಿಯೊಂದಿಗಿನ ಪಯಣದಲ್ಲಿ ತಮ್ಮ ಸಾಮರ್ಥ್ಯವನ್ನ ಅರಿತಿದ್ದ ಅವರಿಗೆ ಮುಂದೆ ನಿರ್ದೇಶಕ ಗುರುಪ್ರಸಾದ್ ತಮ್ಮ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದಲ್ಲಿ ಅವಕಾಶ ನೀಡಿದ್ರು.

ಪ್ರಥಮ ಚಿತ್ರದಲ್ಲೇ ತಮ್ಮ ನಟನಾ ಸಾಮರ್ಥ್ಯವನ್ನ ಫ್ರೂ ಮಾಡಿದ ಧನಂಜಯ್, ಸಿನಿಮಾ ತನ್ನ ಆಸಕ್ತಿ ಕ್ಷೇತ್ರ ಅನ್ನೋದನ್ನ ಅದಾಗಲೇ ಕಂಫರ್ಮ್ ಮಾಡಿಕೊಂಡಿದ್ರು. ಧನಂಜಯ್ ಹೆಚ್ಚು ಜನರನ್ನ ತಲುಪಿದ್ದು, ತಮ್ಮದೇ ಚಿತ್ರಕಥೆಯೊಂದಿಗೆ ನಟಿಸಿದ ಜಯನಗರ ಫೋರ್ತ್ ಬ್ಲಾಕ್ ಎಂಬ ಶಾರ್ಟ್ ಮೂವಿಯಿಂದ. ಅವರೊಳಗೊಬ್ಬ ಬರಹಗಾರ ಮತ್ತೆ ವರ್ಸಟೈಲ್ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸಿದ್ರು ಧನಂಜಯ್….

ಇನ್ನು ನಟಿಸಿದ ಮೊದಲ ಚಿತ್ರಕ್ಕೆ ಉದಯೊನ್ಮಕ ಕಲಾವಿದ ಪ್ರಶಸ್ತಿ ಪಡೆದ ಧನಂಜಯ್ ತಾವು ನಟಿಸಿದ ಪ್ರತೀ ಪಾತ್ರವನ್ನು ಜೀವಿಸಿದ್ರು. ಆದ್ರೆ ಚಿತ್ರರಂಗದಲ್ಲಿ ಅವರು ಎದುರಿಸಿದ ಸವಾಲುಗಳು ಅವರನ್ನ ಕಂಗೆಡಿಸಿದ್ವು, ಸಣ್ಣ ಸಣ್ಣ ನಿರ್ದೇಶಕರೂ ಅವರನ್ನ ನಡೆಸಿಕೊಂಡ ರೀತಿಗೆ  ಅದೆಷ್ಟೋ ಸಲ ಸ್ನೇಹಿತರ ಎದಿರು ಕಣ್ಣೀರಿಟ್ಟಿದ್ರು. ಇದು ನಮ್ಮಿಂದ ಸಾಧ್ಯವಿಲ್ಲದ್ದು ಅಂತಾ ಚಿತ್ರರಂಗದಿಂದ ದೂರ ಉಳಿಯೋ ಮಾತುಗಳನ್ನೂ ಆಡ್ತಿದ್ರು. ಧನಂಜಯ್ ಅವರ ಬೆಳವಣಿಗೆ ಸಹಿಸದ ಹಲವರು ಅವನು ಐರನ್ ಲೆಗ್, ಅವನು ನಟಿಸಿದ್ರೆ ಚಿತ್ರ ತೋಪಾಗುತ್ತೆ ಅಂತಾ ತಮ್ಮ ಮಟ್ಟಕ್ಕೇ ಅಪಪ್ರಚಾರದಲ್ಲಿ ತೊಡಗಿದ್ರು. ತಾನು ಏನೆಂದು ತೋರಿಸೋಕೆ ಒಂದೇ ಒಂದು ಚಾನ್ಸ್ ಬೇಕು ಅಂತಾ ಕಾಯ್ತಿದ್ದ ಧನಂಜಯ್ ಇನ್ನೂ ಒಂದೇ ಒಂದು ಚಿತ್ರದಲ್ಲಿ ನನ್ನ ಅಧೃಷ್ಟ ಪರೀಕ್ಷಿಸಿಕೊಳ್ತೀನಿ ಅದು ಫ್ಲಾಪ್ ಆದ್ರೆ ಮತ್ತೆ ಚಿತ್ರರಂಗದತ್ತ ತಲೆಹಾಕಲ್ಲ ಅಂತಾ ನಿರ್ಧರಿಸಿದ್ರು.

ಆಗ ಅವರ ಕೈ ಹಿಡಿದದ್ದು, ನಿರ್ದೇಶಕ ಸೂರಿ, ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್. ಹೌದು ಕಲಾವಿದನಾಗಿ ಧನಂಜಯ್ ಗೆ ಮರುಜನ್ಮ ಸಿಕ್ಕಿದ್ದೇ ‘ಟಗರು’ ಚಿತ್ರದಿಂದ. ಆ ಚಿತ್ರದ ಪಾತ್ರವೇ ಧನಂಜಯ್ ಅವರ ಐಡೆಂಟಿಟಿಯೂ ಆಗೋಯ್ತು. ಜನ ಅವರನ್ನ ಡಾಲಿ ಧನಂಜಯ್ ಅಂತಾ ಗುರುತಿಸೋಕೆ ಶುರುಮಾಡಿದ್ರು. ಕೊನೆಯದಾಗಿ ತಮ್ಮ ಕಲಾಬದುಕನ್ನ ಪರೀಕ್ಷೆಗಿಟ್ಟ ಡಾಲಿ ಶಾಲಾ ಕಾಲೇಜಿನಂತೆಯೇ ನಟನೆಯಲ್ಲಿಯೂ ಟಾಪರ್ ಆಗಿ ಹಿಟ್ ಆದ್ರು. ಸೋಲುಗಳಿಂದ ಚಿತ್ರರಂಗವನ್ನೇ ತೊರೆಯಬೇಕೆಂದುಕೊಳ್ಳುತ್ತಿದ್ದ ಧನಂಜಯ್ ಅವರನ್ನ ಕನ್ನಡ ಪ್ರೇಕ್ಷಕರು ಎದೆಗಪ್ಪಿಕೊಂಡ್ರು. ಎಲ್ಲೋದ್ರು ಡಾಲಿ ಡಾಲಿ ಅನ್ನೋ ಜೈಕಾರ ಅವರು ತಮ್ಮ ಕನಸಿನೊಟ್ಟಿಗೆ ಗಟ್ಟಿಯಾಗಿ ನಿಲ್ಲೋ ಭರವಸೆಯನ್ನು ತಂದುಕೊಡ್ತು….ಹೀಗೆ ಎಲ್ಲಿಯೂ ಎಳಸು ಮಾತುಗಳನ್ನಾಡದ ಧನಂಜಯ್ ತಾವು ಅನುಭವಿಸಿದ ನೋವುಗಳಿಂದ ಕಲಿತ ಪಾಠವನ್ನ ಮರೀಲಿಲ್ಲ….ಆಗ್ಲೆ ಧನಂಜಯ್ ಒಂದು ಮಾತೇಳಿದ್ರು ಬಡವರ ಮನೆ ಮಕ್ಳೂ ಬೆಳೀಬೇಕು ಕಂಡ್ರಯ್ಯಾ….ಈ ಮಾತಿನ ಮೇಲೆ ನಿಂತ ಧನಂಜಯ್ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡೋದಕ್ಕೆ ಮುಂದಾದ್ರು. ಇದರೊಂದಿಗೆ ಅವರ ನಟನೆ ಅವರನ್ನ ತೆಲುಗು ಚಿತ್ರರಂಗದವರೆಗೂ ಕೊಂಡೋಯ್ತು.  ಟಾಲಿವುಡ್ ನ ಬಹುದೊಡ್ಡ ಹಿಟ್ ಚಿತ್ರ ಪುಷ್ಪದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಜಾಲಿರೆಡ್ಡಿಯಾಗಿ ತಮ್ಮ ಖದರ್ ತೋರಿಸಿದ್ರು. ಕಲಾವಿದನಿಗೆ ಸವಾಲೆಸೆಯುವ ಪಾತ್ರಗಳು ಸಿಗಬೇಕು ಅಂದ್ಕೊಳ್ಳೋ ಧನಂಜಯ್ ಅತ್ಯುತ್ತಮ ನಟನಾಗಿಯೂ, ಅತ್ಯುತ್ತಮ ವಿಲನ್ ಆಗಿಯೂ ಪ್ರಶಸ್ತಿ ಪಡೆದ ವರ್ಸಟೈಲ್ ನಟ….

ಸ್ನೇಹಿತರೇ ಮತ್ತೊಂದು ಮಾತು ಇಲ್ಲಿ ಹೇಳಲೇ ಬೇಕು ಇಂಥಾ ಕಾಲೆಳೆಯೋ ಕೆಲಸಗಳು ಕನ್ನಡ ಚಿತ್ರರಂಗದಲ್ಲಿ ಇಂದು ನಿನ್ನೆ ಶುರುವಾದದ್ದಲ್ಲಾ …ಜಗತ್ತೇ ಕೊಂಡಾಡೋ ನಟ ಸಾಮ್ರಾಟ ಡಾ. ರಾಜ್ ಕುಮಾರ್ ಅವರನ್ನು ಸಹ ಇದೇ ಜಾತಿಗ್ರಸ್ತ ಮನಸ್ಥಿತಿಗಳು ಕಾಡಿದ್ವು. ಒಬ್ಬ ಈಡಿಗ ಸಮುದಾಯದ ವ್ಯಕ್ತಿ ನಾಯಕನಾಗಿ ಬೆಳೆದದ್ದು ಸಹಿಸಲಾಗದ ಪಟ್ಟಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಇಲ್ಲದ ಕಥೆಗಳನ್ನ ಕಟ್ಟಿದ್ರು. ಸಾಲದ್ದಕ್ಕೆ ಕಲೆಯನ್ನೇ ಉಸಿರಾಡಿದ ಅಣ್ಣಾವ್ರನ್ನ ಸೋ ಕಾಲ್ಡ್ ‘ದೊಡ್ಡ’ ಸಾಹಿತಿಯೊಬ್ಬ ಅವನೊಬ್ಬ ಕಲಾವಿದನೇನ್ರಿ ಅಂತಾ ಪ್ರಶ್ನಿಸೋ ಮೂಲಕ ತನ್ನ ಕೋಮುವಾದಿ ಮುಖದ ಕ್ರೂರ ತನವನ್ನ ತೋರಿಸಿದ್ದ. ಅಲ್ಲದೇ ಅವರ ಇಡೀ ಕುಟುಂಬದ ವಿರುದ್ಧ ನಡೆದ ಷಢ್ಯಂತ್ರಗಳು, ಚಿತ್ರರಂಗದಿಂದ ಅವರ ಮಕ್ಕಳನ್ನು ದೂರವಿಡಲು ನಡೆಸಿದ ಆಟಾಟೋಪಗಳು ಒಂದೆರಡಲ್ಲ. ಆದ್ರೆ ಕಲಾದೇವರಾಗಿ ಬೆಳೆದು ನಿಂತ ಅಣ್ಣಾವ್ರನ್ನ ಯಾರಿಂದ್ಲೂ ಮುಗಿಸೋಕೆ ಸಾಧ್ಯವಾಗಲಿಲ್ಲ, ತಮ್ಮ ಸಾಮಾರ್ಥ್ಯವನ್ನ ಅವರು ಅಸ್ತ್ರಗಳಿಂದ ತೋರಿಸಲಿಲ್ಲ ಬದಲಾಗಿ ತಾವು ನಟಿಸಿದ ಪಾತ್ರಗಳಿಂದ ನಿರೂಪಿಸಿದ್ರು. ಅಭಿಮಾನಿ ದೇವರೆಂದು ಕರೆದ ಜನರೇ ಅಣ್ಣಾವ್ರಿಗೆ ಕೋಟೆಯಾಗಿ ನಿಂತ್ರು. ಅವರ ವಿರುದ್ಧದ ಎಲ್ಲಾ ಷಡ್ಯಂತ್ರಗಳನ್ನೂ ಪುಡಿಗಟ್ಟಿದ್ರು.

ಆದ್ರು ಆ ಕುಟುಂಬದ ಕಲಾ ಕುಡಿಗಳು ಅನುಭವಿಸಿದ ಅವಮಾನಗಳು ಒಂದೆರಡಲ್ಲ…ಸದಾ ನಗುತ್ತಾ ಮಗುತನದಿಂದಲೇ ಎಲ್ಲರ ಕಣ್ಣೆದುರೇ ಬೆಳೆದ ಪುನೀತ್ ರಾಜ್ ಕುಮಾರ್ ವಿರುದ್ಧ ಇಲ್ಲದ ಕಥೆ ಕಟ್ಟಿದ್ರು. ಶಿವರಾಜ್ ಕುಮಾರ್ ಅವರನ್ನ ಬಣ್ಣದ ಕಾರಣಕ್ಕೆ ಅವಮಾನಿಸಿದ್ರು. ಸಾಲದ್ದಕ್ಕೆ ತಮ್ಮ ವಜ್ರೇಶ್ವರಿ ಸಂಸ್ಥೆ ಮೂಲಕ ನೂರಾರು ಕಲಾವಿದರಿಗೆ ಬದುಕು ಕಲ್ಪಿಸಿದ ಪಾರ್ವತಮ್ಮ ಅವರನ್ನು ನೆಪೋಟಿಸಂ ಮಾಡ್ತಿದ್ದಾರೆ ಅಂತಾ ಅವಮಾನಿಸಿದ್ರು. ಅಣ್ಣಾವ್ರ ಇಡೀ ಬದುಕು ಜನರ ಮುಂದಿತ್ತಲ್ಲ. ಈ ಯಾವ ಪಿತೂರಿಗಳು ಅವರನ್ನ ಕೆಳಗಿಳಿಸ್ಲಿಲ್ಲ. ಬದಲಾಗಿ ಅವರ ವಿರುದ್ಧ ಪಿತೂರಿ ನಡೆಸಿದವರೇ ತಮ್ಮ ತಲೆಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತೆ ಮೂಲೆಗೆ ಸರಿದ್ರು. ಇದೇ ಕಾರಣಕ್ಕೆ ಅನ್ನಿಸುತ್ತೆ ಶಿವಣ್ಣ ಡಾಲಿಯನ್ನ ತನ್ನ ತಮ್ಮ ಅಂದದ್ದು, ಎದೆಗಪ್ಪಿಕೊಂಡು ಅಭಿಮಾನಿಗಳ ಮುಂದೆ ಇವನು ನಮ್ಮ ಮನೆ ಮಗ ಇವನನ್ನ ಉಳಿಸಿಕೊಳ್ಳೋ ಜವಾಬ್ದಾರಿ ನಿಮ್ಮದೇ ಅಂತಾ ಹೇಳಿದ್ದು..ಇನ್ನೂ ಅಣ್ಣಾವ್ರ ಸಿನಿಮಾ ನೋಡ್ತಲೇ ಬೆಳೆದೆ ಅಂತಾ ಕಣ್ತುಂಬಿಕೊಳ್ಳೋ ಧನಂಜಯ್ ಕೂಡಾ ದೊಡ್ಮನೆಯ ಬಗ್ಗೆ  ಇಂದಿಗೂ ಅತ್ಯಂತ ಗೌರವವಿಟ್ಟುಕೊಂಡಿದ್ದಾರೆ. ಇನ್ನೂ ಕಲಾಚಕ್ರವರ್ತಿ ಸುಧೀಪ್ ಅವರನ್ನ ಅವರ ಜಾತಿಕಾರಣಕ್ಕೆ ತುಳಿಯೋಕೆ ನೋಡಿದ್ದು, ಒಬ್ಬ ಇಬ್ಬರಲ್ಲ, ಬಾಡಿಶೇಮಿಂಗ್ ಮೂಲಕ ಅವರನ್ನ ನಾಯಕನಾಗಿ ಒಪ್ಪೋಕೆ ಸಾಧ್ಯವೇ ಇಲ್ಲ ಅಂದವರೂ ದೊಡ್ಡ ಜಾತಿಯ ನಟರನ್ನಷ್ಟೇ ಕಲಾಸರಸ್ಪತಿಯ ಪುತ್ರರು ಅಂತಾ ಕೊಂಡಾಡಿದ್ರು, ಇನ್ನೂ ತಂದೆ ದೊಡ್ಡ ಕಲಾವಿದರಾಗಿದ್ರೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಟ್ಟ ಪಾಡು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇಂದಿಗೂ ಅವರ ವಿರುದ್ಧ ಷಡ್ಯಂತ್ರಗಳು ನಡೀತಲೇ ಇವೆ ಇವೆಲ್ಲದರ ಭಾಗವಾಗಿ ಒಬ್ಬ ಸೂಪರ್ ಸ್ಟಾರ್ ಆಗಿ ಬೆಳೆದ ನಾಯಕನ್ನು ಮಾಧ್ಯಮಗಳು ಬಹಿಷ್ಕರಿಸುವ ಸೊಕ್ಕು ತೋರಿಸುತ್ತವೆ. ಇದು ಚಿತ್ರರಂಗದ ಜಾತಿ ಇತಿಹಾಸ ಇವರು ಕಲೆಯ ವಿರುದ್ಧ ಗೆದ್ದದ್ದು ಅಷ್ಟರಲ್ಲೇ ಇದೆ.
 
ಅಷ್ಟಕ್ಕೂ ಡಾಲಿ ವಿರುದ್ಧ ಇಂತಾ ಕುತಂತ್ರ ನಡೆಸೋಕೆ ಕಾರಣವಾದ್ರು ಏನು, ಯಾಕೆ ಪದೇ ಪದೇ ಅವರನ್ನ ವಿವಾದಗಳಲ್ಲಿ ಸಿಲುಕಿಸೋ ಕ್ರಿಯೆಗಳು ನಡೆಯುತ್ವೆ ಅನ್ನೋದಕ್ಕೆ ಕಾರಣವನ್ನ ನೀವು ಕೇಳಲೇ ಬೇಕು. ಯಾಕಂದ್ರೆ ಡಾಲಿ ವ್ಯರ್ಥ ವಿಚಾರಗಳಿಗೆ ಪ್ರಚಾರ ಕೊಟ್ಟೋರಲ್ಲ. ಇತರೆ ನಟರಂತೆ ಯಾವುದೇ ವಿಚಾರಕ್ಕೂ ನೋ ಕಮೆಂಟ್ಸ್ ಅಂತಾ ಸೇಫ್ ಜೋನಲ್ಲಿ ಕೂತೋರಲ್ಲ. ಅಥ್ವಾ ಕೆಟ್ಟ ಭಾಷೆಯಿಂದಲೋ ಟ್ರೋಲ್ ಗಳಿಂದಲೋ ಸುದ್ದಿಯಾದವರಲ್ಲ. ಸುತ್ತಮುತ್ತ  ಕೆಟ್ಟ ಘಟನೆಗಳು ನಡೆದಾಗ ತಾವಾಯ್ತು ತಮ್ಮ ಪಾಡಾಯ್ತು ಅಂತಾ ಸುಮ್ಮನೆ ಉಳಿದೋರಲ್ಲ. ತಮ್ಮ ವೈಚಾರಿಕ ನಡೆಯಿಂದ ಪ್ರತಿಯೊಂದನ್ನೂ ಪ್ರಶ್ನಿಸಿದವರು. ಪ್ರತೀ ಮಾತಲ್ಲೂ ಬಸವಣ್ಣ, ಅಲ್ಲಮ, ಅಂಬೇಡ್ಕರ್ ಅಂತಾ ಸಾಮಾಜಿಕ ನಾಯಕರ ಮಾತುಗಳನ್ನ ಹೇಳುತ್ತಾ ಯುವ ಜನರನ್ನ ಎಚ್ಚರಿಸುತ್ತಾ ಮುಂದಡಿ ಇಟ್ಟ ರಿಯಲ್ ನಾಯಕ. ಸಾಲದಕ್ಕೆ ಮೊನ್ನೆ ಮೈಸೂರು ಯುವ ದಸರಾದಲ್ಲಿ ಭಾಗಿಯಾಗಿದ್ದ ಧನಂಜಯ್ ಸ್ಟೇಜ್ ಮೇಲೆ ನಿಂತು ಮಾತಾಡಿದ್ದಿದೆಯಲ್ಲಾ..ಅದಷ್ಟು ಸಾಕು ಮೂಲಭೂತವಾದಿಗಳ ನಿದ್ದೆ ಹಾರಿಹೋಗೋಕೆ.

ಜಾತಿವಾದಿಗಳು ಎದೆಗೆ ಬೆಂಕಿ ಹಚ್ಚಿಕೊಳ್ಳೋಕೆ…ರಾಜಕಾರಣಿಗಳಿಂದ ತುಂಬಿದ ಸ್ಟೇಜ್ ಮೇಲೆ ನಿಂತು ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳನ್ನ ಹೇಳಿದ್ದ ಡಾಲಿ ಇದು ಸರ್ವಜನಾಂಗದ ಶಾಂತಿಯ ತೋಟ ನಾವೆಲ್ಲರೂ ಒಟ್ಟಿಗೆ ಬದುಕಬೇಕು ಬೆಳೆಯಬೇಕು ಅಂತಾ ಕರೆನೀಡಿದ್ರು. ಅಲ್ಲದೇ ಯುವ ಜನತೆಗೆ ನಿರಂಕುಶ ಮತಿಗಳಾಗಿ ಅಂತಾ ಹೇಳಿದ್ರು. ಇಷ್ಟು ಸಾಕಲ್ವಾ ಧರ್ಮ ಧರ್ಮಗಳನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳೋ ಮನುವಾದಿಗಳು ಉರಿದು ಬೀಳೋದಕ್ಕೆ. ಅಲ್ದೇ ಸದಾ ಇಂತಾ ವಿಷ ಜಂತುಗಳಿಗೆ ಸೌಜನ್ಯದಿಂದಲೇ ಪಾಠ ಹೇಳೋ ಡಾಲಿ ಮೇಲೆ ಎಲ್ಲಿಲ್ಲದ ಆಕ್ರೋಶ ಇದ್ದೇ ಇದೆ. ಈ ಕಾರಣಕ್ಕೆ ಈಗ ಹೆಡ್ ಬುಷ್ ನಲ್ಲಿ ಸಮುದಾಯದ ಭಾವನೆಗೆ ಧಕ್ಕೆಯಾಗೋ ವಿಚಾರಗಳಿವೆ ಅಂತಾ ಗುಲ್ಲೆಬ್ಬಿಸಿ ಬೆಂಕಿ ಹಚ್ಚುತ್ತಿರೋದು. ವೀರಶೈವ ದೇವರಿಗೆ ಅವಮಾನಿಸಿದ್ದಾರೆಂದು ಚಿತ್ರವನ್ನ ಬಹಿಷ್ಕರಿಸೋಕೆ ಕರೆ ನೀಡ್ತಿರೋದು.

ಇನ್ನು ದಕ್ಷಿಣ ಕನ್ನಡದ ನಂತ್ರ ತುಮಕೂರನ್ನ ತಮ್ಮ ಹಿಂದುತ್ವದ ಪ್ರಯೋಗ ಶಾಲೆಯಾಗಿ ಮಾರ್ಪಡಿಸುತ್ತಿರೋ ಮನುವಾದಿಗಳ ಆಟಾಟೋಪ ಮಿತಿ ಮೀರುತ್ತಿದೆ. ಇದೇ ತುಮಕೂರಿನಲ್ಲಿ ಧನಂಜಯ್  ಕಟೌಟ್ಗೆ ಚಪ್ಪಲಿ ಹಾರ ಹಾಕಿ, ಮಸಿ ಬಳಿದು ಸಂಘಿಗಳು ಪ್ರತಿಭಟಿಸ್ತಿದ್ದಾರೆ. ತಲೆ ಇರೋ ಯಾರಿಗಾದ್ರು ಅಷ್ಟಕ್ಕೂ ಇವರು ಯಾವ ಕಾರಣಕ್ಕೆ ಡಾಲಿಯನ್ನ ವಿರೋಧಿಸಬೇಕು, ಚಿತ್ರದಲ್ಲಿ ಅಂತದ್ದೇನಿದೆ, ಅಲ್ದೇ ಈ ಮನುವಾದಿಗಳಿಗೂ ವೀರಶೈವ ಲಿಂಗಾಯತ ಧರ್ಮಕ್ಕೂ ಯಾವ ಸಂಬಂಧ ಅಂತೆಲ್ಲಾ ಪ್ರಶ್ನೆ ಮೂಡಬಹುದು. ಹಿಂದೂ ಧರ್ಮದ ಅಸಮಾನತೆಯನ್ನು ವಿರೋಧಿಸಿ ಹುಟ್ಟಿದ ಲಿಂಗಾಯತ ಧರ್ಮ ಪ್ರತ್ಯೇಕವಾಗಿ ನಿಲ್ಲೋದೆ ಇವರ ಈ ಮೂಲಭೂತವಾದದ ವಿರುದ್ಧ..ಧನಂಜಯ್ ವೀರಗಾಸೆಗೆ ಆ ಸಮುದಾಯಕ್ಕೆ ಅವಮಾನಿಸಿದ್ದಾರೆ ಅಂದೋರಿಗೆ ಮತ್ತೊಂದು ವಿಚಾರ ತಿಳಿಸಬೇಕು ಸ್ವತಃ ಧನಂಜಯ್ ಲಿಂಗಾಯುತ ಸಮುದಾಯವರು. ಅಲ್ಲದೇ ಅಲ್ಲಮನಾಗಿ ಇಡೀ ವಚನ ಚಳುವಳಿಯ ಸಾರವನ್ನು ಕನ್ನಡ ಚಿತ್ರರಂಗಕ್ಕೆ ಅರ್ಥೈಸಿದವರು. ಈ ವಿವಾದದ ಸುಳಿಯಲ್ಲಿ ಎಲ್ಲಿಯೂ ಧನಂಜಯ್ ಸಂಘಿಗಳಂತೆ ತಮ್ಮ ಜಾತಿಯ ವಿಕ್ಟಿಮ್ ಕಾರ್ಡ್ ಚಲಾಯಿಸಲಿಲ್ಲ, ಅಥವಾ ಬಾಯಿಮುಚ್ಚಿಕೊಂಡು ಸುಮ್ಮನೇ ಕೂರಲೂ ಇಲ್ಲ…ಬದಲಾಗಿ ಪ್ರೆಸ್ ಮೀಟ್ ಕರೆದು ಚಿತ್ರದಲ್ಲಿ ಎಲ್ಲಿಯೂ ವೀರಗಾಸೆಯನ್ನ ಅವಮಾನಿಸಲಾಗಿಲ್ಲ, ವೀರಗಾಸೆ ವೇಶ ತೊಟ್ಟ, ಲಿಂಗವನ್ನು ಧರಿಸದ ಖಳನಾಯಕರನ್ನು ಥಳಿಸಲಾಗಿದೆ. ಪ್ರಜ್ಞಾಪೂರಕವಾಗಿಯೇ ಎಲ್ಲಿಯೂ ವೀರಗಾಸೆಗೆ, ಅಥವಾ ಆ  ಸಮುದಾಯಕ್ಕೆ ಅವಮಾನವಾಗದಂತೆ ಚಿತ್ರ ನಿರ್ಮಿಸಿದ್ದೇವೆ ಎಂಬ ಸ್ಪಷ್ಟನೆ ನೀಡಿದ್ದಾರೆ. ಇದರಾಚೆಗೂ ಎಲ್ಲಿಯಾದರೂ ಇದರಿಂದ ಸಮುದಾಯದ ಭಾವನೆಗೆ ಧಕ್ಕೆಯಾಗಿದ್ದರೇ ಕ್ಷಮೆಯನ್ನೂ ಕೇಳುತ್ತೇನೆ ಅಂತಾ ಹೇಳಿ ದೊಡ್ಡತನ ಮೆರೆದಿದ್ದಾರೆ.   

ಇನ್ನೂ ಧನಂಜಯ್ ಅವರ ನಟನೆಗೆ ಮತ್ತು ಅವರ ನಡೆಗೆ ಅವರನ್ನು ಮೆಚ್ಚೋ ಸಾವಿರಾರು ಅಭಿಮಾನಿಗಳು ಈ ಸಂದಿಗ್ಧ ಸ್ಥಿತಿಯಲ್ಲಿ ಧನಂಜಯ್ ಪರ ನಿಂತಿದ್ದಾರೆ. ನಾಡಿನ ಪ್ರಜ್ಞಾವಂತರು ಈ ಮನುವಾದಿಗಳ ವಿಕೃತತೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧಿಸುತ್ತಿದ್ದಾರೆ. ಸ್ಟಾಂಡ್ ವಿತ್ ಧನಂಜಯ್ ಈಗ ಎಲ್ಲಾ ಕಡೆ ಟ್ರೆಂಡ್ ಆಗ್ತಿದೆ. ಇದು ಒಬ್ಬ ಕಲಾವಿದನಿಗೆ ಸಿಕ್ಕ ನಿಜವಾದ ಗೌರವ ಎನ್ನಬಹುದು.
ಒಟ್ನಲ್ಲಿ ಬಡವರ ಮನೆ ಮಕ್ಳು ಬೆಳೆಯೋದನ್ನ ಇಂಥಾ ಜಾತಿವಾದಿಗಳು ಸಹಿಸೋದಿಲ್ಲ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿಬೇಕಿಲ್ಲ. ಮತ್ತೆ ಮತ್ತೆ ತಮ್ಮ ಮೇಲಾಗುತ್ತಿರುವ ಈ ದಾಳಿಗಳಿಂದ ಧನಂಜಯ್ ಕನ್ನಡ ಚಿತ್ರರಂಗದಿಂದ ದೂರ ಉಳಿಯೋ ನಿರ್ಧಾರಕ್ಕೂ ಬರಬಹುದು, ಆಗ ನಷ್ಟವಾಗೋದು ಖಂಡಿತ ಧನಂಜಯ್ ಗಲ್ಲ. ಬದಲಾಗಿ ಕನ್ನಡ ಚಿತ್ರರಂಗಕ್ಕೆ. ಜಾತಿವಾದಿಗಳಿಂದ, ರಿಯಲ್ ಎಸ್ಟೇಲ್ ಉದ್ಯಮಿಗಳಿಂದ, ರಾಜಕಾರಣಿಗಳ ಅಕ್ರಮ ಹಣದಿಂದ ತುಂಬಿಹೊಗುತ್ತಿರುವ ಚಿತ್ರರಂಗ ಒಬ್ಬ ನಿಜವಾದ ಕಲಾವಿದನನ್ನು ಕಳೆದುಕೊಳ್ಳುತ್ತೆ. ಒಬ್ಬ ಸೃಜನಶೀಲ ನಾಯಕನನ್ನು ಕಳೆದುಕೊಳ್ಳುತ್ತೆ ಅನ್ನೋದ್ರಲ್ಲಿ ಯಾವ ಅನುಮಾನವೂ ಬೇಡ..ಈಗ ಈ ನಾಡಿನ ಪ್ರಜ್ಞಾವಂತರು ಮತ್ತು ಚಿತ್ರೋಧ್ಯಮದ ಹಿತೈಷಿಗಳು ಡಾಲಿ ಧನಂಜಯ್ ಜೊತೆ ನಿಲ್ಲಬೇಕಿದೆ. ಅವರನ್ನು ಬೆಂಬಲಿಸುವ ಮೂಲಕ ಚಿತ್ರರಂಗಕ್ಕೆ ಅಂಟಿಕೊಳ್ಳುತ್ತಿರುವ ಮನುವಾದಿರೋಗದಿಂದ ಇಡೀ ಚಿತ್ರರಂಗವನ್ನು ಹೊರ ತರಬೇಕಿದೆ. ಧನಂಜಯ್ ಇನ್ನಷ್ಟು ಚಿತ್ರಗಳನ್ನು ನಿರ್ಮಿಸಲಿ, ನಟ ರಾಕ್ಷಸನಾಗಿ ರಂಜಿಸಲಿ ಮತ್ತೊಬ್ಬ ಕನ್ನಡದ ಡಾ.ರಾಜ್ ಕುಮಾರ್ ಆಗಿ ಬೆಳೆಯಲಿ ಅನ್ನೋದೆ ನಮ್ಮ ಆಶಯ….© Copyright 2022, All Rights Reserved Kannada One News