ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

Updated : 26.09.2022

ಈ ನೆಲದ ಮೂಲನಿವಾಸಿಗಳ ದನಿಯಾಗಿ ಆರಂಭವಾದ ಸಂಘಟನೆಯೇ ಬಾಂಸೆಫ್. ಇದು ಹಲವಾರು ವರ್ಷಗಳಿಂದ ಈ ದೇಶಕ್ಕೆ ಶಾಪವಾಗಿರುವ ಬ್ರಾಹ್ಮಣ್ಯದ ವಿರುದ್ಧ ಪುರಾವೆಗಳ ಸಮೇತವಾಗಿ ಹೋರಾಟದಲ್ಲಿ ತೊಡಗಿದೆ. ಆರೆಸ್ಸೆಸ್ಗೆ ಇದು ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಬಂದಿದೆ. ಆರ್ಯರನ್ನು ಹೊರತುಪಡಿಸಿ ಈ ನೆಲದಲ್ಲಿರುವ ಉಳಿದೆಲ್ಲಾ ಜನರ ಡಿಎನ್ಎ ಒಂದೇ ಆಗಿದ್ದು, ಆರ್ಯರದ್ದು ಮಾತ್ರ ಬೇರೆ ಡಿಎನ್ಎ ಎಂದು ನಿರೂಪಿಸಿರುವ ಬಾಂಸೆಫ್, ಆರ್ಯರನ್ನು ಪರದೇಶಿಗಳು ಎಂದು ಸಾಬೀತುಪಡಿಸಿದೆ.

ಅಲ್ಲಿಂದಾಚೆಗೆ ನಿದ್ದೆಯಲ್ಲೂ ಬಾಂಸೆಫ್ ಹೆಸರು ಕೇಳಿದರೆ ಬೆಚ್ಚಿ ಬೀಳುವ ಸನ್ಮಾನ್ಯ ಮೋಹನ್ ಭಾಗವತ್ ಪಟಾಲಂ ಬಾಂಸೆಫ್ಗೆ ಏನಾದ್ರೂ ಗತಿಕಾಣಿಸಲು ಪ್ಲಾನ್ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಇದಕ್ಕೆ ಬಗ್ಗದ ಬಾಂಸೆಫ್ ಇದೇ ಅಕ್ಟೋಬರ್ 6 ಕ್ಕೆ, ನಾಗ್ಪುರದಲ್ಲಿರುವ ಆರೆಸ್ಸೆಸ್ ಹೆಡ್ ಕ್ವಾರ್ಟರ್ಗೆ, ಒಂದು ಲಕ್ಷ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕುವುದಾಗಿ ಘೋಷಣೆ ಹೊರಡಿಸಿದೆ. ಇದಕ್ಕೆ ಪತರುಗುಟ್ಟಿದ ಆರೆಸ್ಸೆಸ್, ಸೆಪ್ಟಂಬರ್ ಒಂದರಂದೇ ದ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ನ್ನು ತನ್ನ ಕಚೇರಿಗೆ ಕರೆಸಿಕೊಂಡು ಭದ್ರ ಮಾಡಿಕೊಂಡಿತ್ತು. ಇತ್ತ ಬಾಂಸೆಫ್ ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಹಾಕಲು ಬೇಕಿದ್ದ ತನ್ನ ಕೆಲಸ ಕಾರ್ಯಗಳಿಗೆ ಮತ್ತಷ್ಟು ಚುರುಕು ಕೊಟ್ಟಿತ್ತು. ಬಾಂಸೆಫ್ನ ಕಾರ್ಯಚಟುವಟಿಕೆಗಳು ಯಾವಾಗ ಸ್ಪೀಡಾಯ್ತೋ, ಅಕ್ಟೋಬರ್ 6 ಕ್ಕೆ ಬಾಂಸೆಫ್ ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಹಾಕೋದನ್ನ ತಡೆಯುವುದು ಅಸಾಧ್ಯ ಅನ್ನಿಸಿತೋ, ಆರೆಸ್ಸೆಸ್ ಜನರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಹೊಸ ಪ್ಲಾನ್ ರೆಡಿ ಮಾಡ್ತು ನೋಡಿ, ಅದೇ ಪಿಎಫ್ಐ ಕಚೇರಿ ಮೇಲೆ ಎನ್ಐಎ ದಾಳಿ ಅನ್ನೋ ಹೈವೋಲ್ಟೇಜ್ ಹೈಡ್ರಾಮಾ.

 ಸ್ನೇಹಿತರೇ.. ನಿಮಗೆಲ್ಲಾ ಗೊತ್ತೇ ಇದೆ. ಸಂವಿಧಾನದ ಆರ್ಟಿಕಲ್ 14, ಕಾನೂನಿನ ಮುಂದೆ ಎಲ್ಲರೂ ಸಮಾನರು ಅಂತ ಹೇಳಿದ್ರೆ, ಜಾತಿ, ಜನಾಂಗ, ಲಿಂಗ, ಧರ್ಮ, ಭಾಷೆಯ ಆಧಾರದ ಮೇಲೆ ಯಾರೊಂದಿಗೂ ತಾರತಮ್ಯ ಮಾಡ್ಬಾರ್ದು ಅಂತ ಆರ್ಟಿಕಲ್ 15 ಹೇಳ್ತದೆ. ಹೀಗಿರುವಾಗ ತಪ್ಪು ಯಾರೇ ಮಾಡಿದರೂ ತಪ್ಪೇ. ತಪ್ಪು ಮಾಡಿದವರನ್ನು ಕಾನೂನಿನಡಿಯಲ್ಲಿ ಕಡ್ಡಾಯವಾಗಿ ಶಿಕ್ಷೆಗೊಳಪಡಿಸಲೇಬೇಕು. ಅದು ಯಾರೇ ಆದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲೇಬಾರದು. ಆದ್ರೆ ಬಾಂಸೆಫ್ ಯಾವಾಗ ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿತೋ, ಆಗ ಕಂಪಿಸಿದ ಮೋಹನ್ ಭಾಗವತ್ ಆಂಡ್ ಆತನ ಕೇಸರಿ ಟೀಮ್, 22.09.2022 ರ ಗುರುವಾರ ನಸುಕಿನಲ್ಲಿ ದೇಶಾದ್ಯಂತ, ಪಿಎಫ್ಐ ಮುಖಂಡರ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೇ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ದಿಢೀರ್ ದಾಳಿ ಮಾಡಿಸಿ, ನೂರಕ್ಕು ಹೆಚ್ಚು ಜನರನ್ನ ವಿಚಾರಣೆಗಾಗಿ ವಶಕ್ಕೆ ಪಡೆಯುವಂತೆ ಮಾಡಿತು. ಇದೇ ವೇಳೆ ಕರ್ನಾಟಕದಲ್ಲಿ ಇಡೀ ಬಿಜೆಪಿಯನ್ನೆ ಕಂಗೆಡಿಸಿ ದಿವಾಳಿ ಮಾಡಿದ್ದ ಪೇಸಿಎಂ ಪೋಸ್ಟರ್ ದೇಶಾದ್ಯಂತ ಸುದ್ದಿ ಮಾಡಬೇಕಿತ್ತು. ಆದ್ರೆ ಆರೆಸ್ಸೆಸ್ನ ಚಡ್ಡಿಯೊಳಗೆ ಈಗಾಗಲೆ ತಮ್ಮ ಒಂದು ಕಾಲನ್ನು ತುರುಕಿರುವ ಮಾರಿಕೊಂಡ ಮಾಧ್ಯಮಗಳು ಬಿಜೆಪಿಯನ್ನು ರಕ್ಷಿಸುವುದಕ್ಕಾಗಿ ದಿನಪೂರ್ತಿ ಪಿಎಫ್ಐ ಎನ್ಐಎ ಅಂತ ಬಾಯಿ ಬಡಿದುಕೊಂಡವೇ ಹೊರತು, ಪೇಸಿಎಂ ವಿಚಾರದತ್ತ ತಲೆ ಹಾಕಲೇ ಇಲ್ಲ. ಸರ್ಕಾರದ ಭ್ರಷ್ಟಚಾರವನ್ನು ಪ್ರಶ್ನೆ ಮಾಡಲೇ ಇಲ್ಲ. ಇರ್ಲಿ ಅದೇನೆ ಇರ್ಲಿ. ದಾಳಿ ಮಾಡಲಿ, ಬಂಧಿಸಲಿ, ವಿಚಾರಣೆ ಮಾಡಲಿ – ಅದರಲ್ಲಿ ತಪ್ಪೇನೂ ಇಲ್ಲ. ಅದೇನೆ ದಾಳಿಗಳಿರ್ಲಿ, ವಿಚಾರಣೆ ಇರ್ಲಿ, ಯಾರಿಗೂ ತಾರತಮ್ಯ ಇಲ್ಲದೇ ನಡೆದಾಗ ಅದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಒಪ್ಪುತ್ತಾನೆ. ಆದ್ರೆ ಕಾನೂನನ್ನು ಮೀರಿ ಜನಾಂಗೀಯ ದ್ವೇಷದಿಂದ ಏನಾದ್ರೂ ನಡೆದ್ರೆ ಅದನ್ನ ಖಂಡಿಸಲೇಬೇಕಾಗ್ತದೆ.

ಪಿಎಫ್ಐ ಮೇಲೆ, ಎನ್ಐಎ ದಾಳಿ ಮಾಡಿದ್ದಕ್ಕೂ, ಕೆಲವರನ್ನು ಬಂಧಿಸಿ ವಿಚಾರಣೆ ಮಾಡಿದ್ದಕ್ಕೂ ನಮ್ಮ ಯಾವ ತಕರಾರೂ ಇಲ್ಲ.. ಆದ್ರೆ, ಬಂಧಿಸಿದ ಮಾತ್ರಕ್ಕೆ ಅವರೆಲ್ಲರೂ ಉಗ್ರರು ಆಗೋಗ್ತಾರಾ..? ಒಬ್ಬ ಮುಖಂಡನ ಮನೆಯಲ್ಲಿ ಐದೋ ಹತ್ತೋ ಲಕ್ಷ ಹಣ ಇಟ್ಟುಕೊಳ್ಳೋದು ತಪ್ಪಾ..? ಒಂದಷ್ಟು ಕಾಮಾಲೆ ಕಣ್ಣಿನ ಮಾಧ್ಯಮಗಳು, ಅವರ ಮನೆಯಲ್ಲಿ ಇಷ್ಟು ಲಕ್ಷ ಸಿಕ್ತು, ಇವರ ಮನೆಯಲ್ಲಿ ಅಷ್ಟು ಲಕ್ಷ ಸಿಕ್ತು ಅಂತ ವರದಿ ಮಾಡ್ತಾ ಇವೆ.. ಹಾಗಾದ್ರೆ, ಮನೆಯಲ್ಲಿ ಒಂದೋ ಎರಡೋ ಲಕ್ಷ ಇಟ್ಕೊಂಡವರೆಲ್ಲಾ ಉಗ್ರರಾಗೋಗ್ತಾರಾ..?

ಕೇವಲ ಒಂದೇ ಒಂದು ದಶಕದಲ್ಲಿ ಪಿಎಫ್ಐ ಬೆಳೆದು ಬಂದ ಹಾದಿ ಇದೆಯಲ್ಲ – ಅದು ಎಂತವರಿಗೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡ್ತದೆ. ಅದಕ್ಕೆ ಮೆಚ್ಚುಗೆ ಮತ್ತು ಅಷ್ಟೇ ವಿರೋಧವನ್ನು ಕಟ್ಟಿಕೊಂಡ ಸಂಘಟನೆ ಇದು. ಫ್ಯಾಸಿಸಂನೊಂದಿಗೆ ಸಂಧಾನವಿಲ್ಲದ ಸಮರ ಎಂದು ಹೊರಟ ಇವರ ವಿರುದ್ಧ ಮುಸ್ಲಿಂ ಸಮುದಾಯದಲ್ಲೇ ದೊಡ್ಡ ಮಟ್ಟದ ವಿರೋಧ ಇದೆಯಾದರೂ, ಅಷ್ಟೇ ದೊಡ್ಡ ಮಟ್ಟದ ಬೆಂಬಲವೂ ಇವರಿಗಿದೆ. ಹಾಗೇ ನೋಡಿದರೆ, ಪಿಎಫ್ಐ ಮುಸ್ಲಿಂ ಸಮುದಾಯದಲ್ಲಿ ಅಷ್ಟೇನೂ ದೊಡ್ಡ ಸಂಘಟನೆಯಲ್ಲ. ಇದಕ್ಕಿಂತಲೂ ಹೆಚ್ಚಿಗೆ ಜನ ಸಮೂಹವನ್ನು ತಲುಪಿದ ಹಲವು ಮುಸ್ಲಿಂ ಸಂಘಟನೆಗಳಿವೆ. ಆದ್ರೆ ಜನಮಾನಸದಲ್ಲಿ ಪಿಎಫ್ಐ ಅತೀ ಮುಖ್ಯ ಸ್ಥಾನ ಪಡೆಯಲು ಕಾರಣ ಮುಸ್ಲಿಮರಿಗೆ ಇದು ಒಂದು ರಾಜಕೀಯ ಗುರುತನ್ನು ಸೃಷ್ಟಿಸಿದ್ದೇ ಆಗಿದೆ. ಯಾವಾಗ ಭಾರತದ ರಾಜಕಾರಣದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಪ್ರಭಾವ ಹೆಚ್ಚುತ್ತಾ ಬಂತೋ, ಆಗಲೇ ಪಿಎಫ್ಐ ಕೂಡಾ ಅದಕ್ಕೆ ಪರ್ಯಾಯವಾಗಿ ತನ್ನ ಶಕ್ತಿಯನ್ನೂ ಹೆಚ್ಚಿಸಿಕೊಳ್ಳತೊಡಗಿತು. ಈ ಕಾರಣಕ್ಕೇನೆ ಪಿಎಫ್ಐ ಕೆಲವರಿಗೆ ಅನುಮಾನವಾಗಿ ಕಂಡರೆ, ಇನ್ನೂ ಕೆಲವರಿಗೆ ಅಭಿಮಾನವಾಗಿ ಕಾಣುತ್ತದೆ.

ಎನ್ಐಎ ಬಳಿ ಅದೇನ್ ಮಾಹಿತಿ ಇದೆಯೋ, ದಾಖಲೆಗಳಿದ್ದಾವೋ ಯಾರಿಗೂ ಗೊತ್ತಿಲ್ಲ. ಅಫ್ಕೋರ್ಸ್ ಯಾವುದೇ ತನಿಖಾ ಸಂಸ್ಥೆಗಳು ತಮ್ಮ ಗುಟ್ಟುಗಳನ್ನು ಬಿಟ್ಟು ಕೊಡುವುದೂ ಇಲ್ಲ. ಆದ್ರೆ ಎನ್ಐಎ ಆರೆಸ್ಸೆಸ್ನ ಕೈಗೊಂಬೆಯಾಗಿದೆ ಅನ್ನೋದು ಹಲವರ ಆರೋಪ. ಹಾಗಾಗಿಯೇ ಮುನ್ನೆಲೆಗೆ ಬರಬೇಕಿದ್ದ ಬಾಂಸೆಫ್ ಆರೆಸ್ಸೆಸ್ನ ನಾಗ್ಪುರದ ಹೆಡ್ ಕ್ವಾರ್ಟರ್ಗೆ ಮುತ್ತಿಗೆ ವಿಷಯವನ್ನ ಮರೆಮಾಚುವುದಕ್ಕೆ ಪಿಎಫ್ಐ ಮೇಲೆ ದಾಳಿ ನಡೆದಿದೆ ಅನ್ನೋ ಅಭಿಪ್ರಾಯ ಕೂಡಾ ಜನರ ನಡುವೆ ಇದೆ. ಇರಲಿ, ಎನ್ಐಎ ತನಿಖೆ ಮಾಡ್ತಾ ಇದೆ, ತನ್ನಷ್ಟಕ್ಕೆ ತಾನು ಮಾಡ್ಲಿ. ತನಿಖೆಯಲ್ಲಿ ಯಾರಾದರೂ ಒಂದು ವೇಳೆ ತಪ್ಪು ಮಾಡಿದ್ದಾರೆ ಅನ್ನೋದು ಸಾಬೀತಾದ್ರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ದೇಶದ ಸಂವಿಧಾನದಡಿಯಲ್ಲಿ ಸ್ಥಾಪಿತವಾದ ಸಂಘಟನೆಯನ್ನು ವಿಚಾರಣೆ ಹಂತದಲ್ಲಿರುವಾಗಲೇ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸೋದು ಎಷ್ಟರ ಮಟ್ಟಿಗೆ ಸರಿ? ಪಿಎಫ್ಐ ಯನ್ನು ಉಗ್ರ ಸಂಘಟನೆಯಂತ ಬಿಂಬಿಸುತ್ತಿರುವವರ ಬಳಿ, ಅದಕ್ಕೆ ಪೂರಕ ದಾಖಲೆ ಏನಿದೆ? ತನಿಖೆ ನಡೆಸುತ್ತಿರುವ ಸಂಸ್ಥೆಗಳೇನಾದ್ರೂ ಹೇಳಿವೆಯಾ? ಇಂತವರೆಲ್ಲಾ ಉಗ್ರರೆಂದು ಬೊಟ್ಟು ಮಾಡಿ ತೋರಿಸಿದ್ದಾವಾ? ಆದ್ರೆ ಕಾಮಾಲೆ ಕಣ್ಣಿನ ಬಲಪಂಥೀಯ ರಾಜಕಾರಣಿಗಳು ಮತ್ತು ಕೆಲ ಮಾರಿಕೊಂಡ ಮಾಧ್ಯಮಗಳು, ಏನೇನೋ ಕಪೋಲಕಲ್ಪಿತ ಸುಳ್ಳುಗಳನ್ನೆಲ್ಲಾ ಬೊಗಳಿ ಇಡೀ ಸಂಘಟನೆಯನ್ನು ಉಗ್ರ ಸಂಘಟನೆ ಅನ್ನುವ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಿವೆ.

ಇದು ಅಕ್ಷಮ್ಯ ಅಪರಾಧವಲ್ಲದೇ ಮತ್ತಿನ್ನೇನೂ ಅಲ್ಲ. ಯಾಕಂದ್ರೆ ನಮ್ಮ ಸಂವಿಧಾನದ ಆರ್ಟಿಕಲ್ 20 ರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಯಾವ ಅಪರಾಧ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆಯೋ, ಆ ಅಪರಾಧದ ಅಪರಾಧಿ ಎಂದು ಮಾತ್ರವೇ ಗುರುತಿಸಬೇಕೇ ಹೊರತು ಇನ್ಯಾವುದೇ ಅಪರಾಧದ ಆರೋಪ ಹೊರಿಸುವುದು ಮಹಾಪರಾಧವಾಗುತ್ತದೆ. ಆದ್ರೆ ಪಿಎಫ್ಐಯ ವಿಚಾರದಲ್ಲಿ ಆಗ್ತಿರೋದೇನು? ವಿಚಾರಣೆ ಹಂತದಲ್ಲಿರುವಾಗಲೇ ಕೆಲ ರಾಜಕಾರಣಿಗಳು ಮತ್ತು ಮಾನಗೆಟ್ಟ ಗೋದಿ ಮೀಡಿಯಾಗಳು, ಆ ಸಂಘಟನೆಯನ್ನು ಉಗ್ರ ಸಂಘಟನೆ ಎಂಬಂತಹ ಷರಾ ಬರೆದು ಬಿಟ್ಟಿವೆ. ಕೆಲ ತಿಂಗಳ ಹಿಂದೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್, ಪಿಎಫ್ಐಯನ್ನು ಹೀಗೆ ಬಿಟ್ಟರೆ ಮುಂದೆ ಆರೆಸ್ಸೆಸ್ಗೆ ಮಾರಕವಾಗಬಹುದು. ಆದ್ದರಿಂದ ಬೇರೆ ಮುಸ್ಲಿಂ ಸಂಘಟನೆಗಳನ್ನು ಬಳಸಿಯೇ ಪಿಎಫ್ಐಯನ್ನು ಬಗ್ಗು ಬಡಿಯುತ್ತೇವೆ ಎಂದಿದ್ದನ್ನು ಗಮನಿಸಿದಾಗ ಈ ಎನ್ಐಎ ಅಟ್ಯಾಕ್ ಹಿಂದೆ ಕಾಣದ ಕೈಗಳ ಸಂಚು ಅಡಗಿರೋದು ಸ್ಪಷ್ಟವಾಗುತ್ತದೆ.

ದೇಶದಲ್ಲಿ ನಡೆದ ಹಲವಾರು ಘಟನೆ ಸಂಬಂಧ ಎಸ್ಡಿಪಿಐ, ಪಿಎಫ್ಐ ಮೇಲೆ ಎನ್ಐಎ ದಾಳಿ ನಡೆಸಿದೆ. ಆದ್ರೆ ಎನ್ಐಎ ದಾಳಿ ನಡೆಸುವಂತಹ ಬಾಂಬ್ ಅಟ್ಯಾಕ್ ಆಗಲೀ, ಭಯೋತ್ಪಾದಕರ ದಾಳಿಯಾಗಲೀ, ಗಣ್ಯರ ಹತ್ಯೆಯಾಗಲೀ ಇತ್ತಿಚೆಗೆ ನಮ್ಮ ದೇಶದಲ್ಲಿ ನಡೆದಿಲ್ಲ. ವಿಚಿತ್ರ ಅಂದ್ರೆ ಪಿಎಫ್ಐ ಕಚೇರಿಯ ಮೇಲೆ ಎನ್ಐಎ ದಾಳಿ ನಡೆಸಿರುವುದು ಸಣ್ಣಪುಟ್ಟ ಘಟನೆಗಳ ಹಿನ್ನೆಲೆಯಲ್ಲಿ! ಠಾಣೆಯ ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಒಬ್ಬರು ತನಿಖೆ ಮಾಡಬಹುದಾದ ಪ್ರಕರಣಗಳನ್ನು ಎನ್ಐಎಯಿಂದ ತನಿಖೆ ನಡೆಸಿ ಎಸ್ ಡಿಪಿಐ, ಪಿಎಫ್ಐ ಕಾರ್ಯಕರ್ತರ ಮೇಲೆ ಯುಎಪಿಎ ಕೇಸ್ ದಾಖಲು ಮಾಡಲಾಗುತ್ತಿದೆ.

ಇದನ್ನು ಎಲ್ಲರೂ ವಿರೋಧಿಸಲೇಬೇಕು ಅಲ್ಲವೇ..? ಪ್ರವೀಣ್ ನೆಟ್ಟಾರು ಕೊಲೆ ದೇಶದ್ರೋಹ ಹೇಗಾಗುತ್ತೆ? ಅದು ದೇಶದ್ರೋಹವಾದರೆ ಫಾಸಿಲ್, ಮಸೂದ್ ಕೊಲೆ ಯಾಕೆ ದೇಶದ್ರೋಹ ಆಗಲ್ಲ..? ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ್ದು ದೇಶದ್ರೋಹವಾದರೆ, ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಮನೆಗೆ ನುಗ್ಗಿ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದು ಯಾಕೆ ದೇಶದ್ರೋಹವಾಗೋದಿಲ್ಲ? ಡಿಜೆ ಹಳ್ಳಿಯಲ್ಲಿ ನಡೆದ ಕಲ್ಲು ತೂರಾಟ ದೇಶದ್ರೋಹವಾದರೆ, ಬಿಜೆಪಿಗರು ಸುಳ್ಯ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು ಯಾಕೆ ದೇಶದ್ರೋಹ ಆಗಲ್ಲ? ಹೀಗೆ ಸಣ್ಣಪುಟ್ಟ ಪ್ರಕರಣಗಳಿಗೆ ದೇಶದ್ರೋಹ ಪ್ರಕರಣ ದಾಖಲಿಸಿದರೆ ನಾಳೆ ಸರ್ಕಾರದ ಪರ ಇಲ್ಲದವರ ಮೇಲೆಲ್ಲಾ ದೇಶದ್ರೋಹ ಕಾಯ್ದೆ ದಾಖಲಿಸುವುದು ಸಹಜವಾಗಿ ಬಿಡುತ್ತದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಹಾಗಾಗಿ ರಾಜ್ಯಗಳ ಕಾನೂನು ಸುವ್ಯವಸ್ಥೆ ವಿಷಯಕ್ಕೆ ಎನ್ಐಎ, ಸಿಬಿಐಯನ್ನು ಬಳಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಬೇಕಿದೆ. ರಾಜ್ಯಗಳ ಪೊಲೀಸರೆಂದರೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸೆಕ್ಯೂರಿಟಿ ಕೊಡುವವರಲ್ಲ ಎಂದು ರಾಜ್ಯಗಳು ಹೇಳಬೇಕಿದೆ.

ಕಳೆದ 70 ವರ್ಷಗಳಿಂದಲೂ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳು ಅಲ್ಪ ಸಂಖ್ಯಾತ ಮತ್ತು ದಲಿತರನ್ನು ಅಭಿವೃದ್ಧಿಯ ವಿಚಾರದಲ್ಲಿ ಕಡೆಗಣಿಸುತ್ತಾ ಬಂದಿವೆ. ಸಂಘಪರಿವಾರದಿಂದ ದಾಳಿಗಳಾದರೂ, ಅದನ್ನು ಮೂಕಪ್ರೇಕ್ಷಕರಾಗಿ ನೋಡಿದ್ದಾವೆ. ಜಾತ್ಯಾತೀತರೆನಿಸಿಕೊಂಡ ಪಕ್ಷದವರು ದಲಿತ ಮತ್ತು ಅಲ್ಪ ಸಂಖ್ಯಾತರ ಪರ ಗಟ್ಟಿಯಾಗಿ ನಿಂತು ನೈತಿಕ ಬೆಂಬಲವನ್ನು ಕೊಟ್ಟಿದ್ದನ್ನು ನಾವು ಇದುವರೆಗೂ ಕಂಡಿಲ್ಲ. ಈ ಒಂದು ಕಾರಣಕ್ಕಾಗಿಯೇ ಪಿಎಫ್ಐಯಂತಹ ಸಂಘಟನೆ ಮತ್ತು ಎಸ್ಡಿಪಿಐ ಪಕ್ಷ ಹುಟ್ಟಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಸಶಕ್ತವಾಗಿರುವ ಪಿಎಫ್ಐ ಮೇಲೆ ಸಾಕಷ್ಟು ಆರೋಪಗಳಿದ್ದರೂ, ಅದ್ಯಾವುದು ಇನ್ನೂ ಸಾಬೀತಾಗಿಲ್ಲ.

ಅಮೇರಿಕಾದ ಮೂರನೇ ಅಧ್ಯಕ್ಷರಾದ ಥಾಮಸ್ ಜಾಫರ್ ಸನ್ ಹೇಳಿದ ಜಗತ್ ಪ್ರಸಿದ್ಧ ಮಾತೊಂದಿದೆ. ಅನ್ಯಾಯ ಕಾನೂನಾದಾಗ ಪ್ರತಿರೋಧ ಕರ್ತವ್ಯವಾಗಬೇಕು ಅಂತ. ಅದೇ ರೀತಿ ಇಲ್ಲಿನ ಫ್ಯಾಸಿಸಂನಿಂದ ಮುಸ್ಲಿಮರ ಮೇಲಾಗುತ್ತಿರುವ ಮಾನಸಿಕ ಮತ್ತು ದೈಹಿಕ ದಾಳಿಯನ್ನು ಎದುರಿಸಲಿಕ್ಕೆ ಪಿಎಫ್ಐ ಅಖಾಡಕ್ಕೆ ಬಂದಿದೆ ಅಂದರೂ ತಪ್ಪಾಗಲಾರದು. ಇನ್ನೂ ಮುಸ್ಲಿಮರ ವೋಟು ಪಡೆದು, ಅಧಿಕಾರ ಅನುಭವಿಸಿದ ಮುಸ್ಲಿಂ ನಾಯಕರು ಸಹ ಇಂತಹ ವಿಷಮ ಘಳಿಗೆಯಲ್ಲಿ ಸಮುದಾಯದ ಉನ್ನತಿ ಬಯಸುವ ಸಂಘಟನೆ ಮತ್ತು ಮುಖಂಡರ ಬೆನ್ನಿಗೆ ನಿಲ್ಲುತ್ತಿಲ್ಲ ಅಂದ್ರೆ, ಮುಸ್ಲಿಂ ಸಮಾಜಕ್ಕೆ ಇದಕ್ಕಿಂತ ದುರ್ದೈವದ ಸಂಗತಿ ಏನಿದೆ? ಕರ್ನಾಟಕದಲ್ಲಿ ರಿಜ್ವಾನ್ ಅರ್ಷದ್, ಯು ಟಿ ಖಾದರ್, ಸಲೀಂ ಅಹ್ಮದ್, ತನ್ವೀರ್ ಸೇಟ್ ಸೇರಿದಂತೆ ಬಹುತೇಕ ಮುಸ್ಲಿಂ ರಾಜಕಾರಣಿಗಳು ಬರೀ ಅಧಿಕಾರ ಪಿಪಾಸುಗಳು ಮಾತ್ರ, ಇವರಿಗೆ ನಿಜವಾಗಿಯೂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಖಂಡಿತವಾಗಿತೂ ಇವತ್ತು ಎನ್ಐಎ ದಾಳಿ ವಿರುದ್ಧ ನಿಲ್ಲುತ್ತಿದ್ದರು. ಆರೆಸ್ಸೆಸ್, ಬಜರಂಗದಳದ ಬಗ್ಗೆ ತುಟಿ ಪಿಟಕ್ಕೆನ್ನದೇ, ಪಿಎಫ್ಐ ನಿಷೇಧಿಸುವಂತೆ ಮೊದಲಿಗರಾಗಿ ಹೇಳುವ ಸ್ವಾಭಿಮಾನ ಕಳೆದುಕೊಂಡ ಇಂತಹ ಮುಖಂಡರಿಂದ ಮುಸ್ಲಿಂ ಸಮುದಾಯ ಉದ್ದಾರ ಆಗುತ್ತೆ ಅಂದ್ರೆ ಯಾರ್ ನಂಬ್ತಾರೆ ಸ್ವಾಮಿ? ಆರೆಸೆಸ್ ಕಚೇರಿಗೆ ಬಾಂಸೆಪ್ ಒಂದು ಲಕ್ಷ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಿದೆ ಅನ್ನೋದು ಬಿರುಗಾಳಿ ಎಬ್ಬಿಸಬೇಕಿದ್ದ ಸುದ್ದಿಯಾಗಿರುವಾಗ ಅದನ್ನು ಮರೆ ಮಾಚಲೆಂದೆ ಆರೆಸ್ಸೆಸ್ನ ಅಣತಿಯಂತೆ ಎನ್ಐಎ ಪಿಎಫ್ಐ ಮೇಲೆ ದಾಳಿ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ ಅನ್ನೋದು ಈ ನೆಲಮೂಲದ ಪ್ರಜ್ಞಾವಂತರ ಅಭಿಪ್ರಾಯ. 

-ಕನ್ನಡ ಒನ್ ನ್ಯೂಸ್ ಬಳಗ© Copyright 2022, All Rights Reserved Kannada One News