ಮಾರಕ ಮತಾಂತರ ಕಾಯ್ದೆಗೆ ಅಸ್ತು!: ಎಡಿಟರ್ ಸ್ಪೆಷಲ್

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಮಾರಕ ಮತಾಂತರ ಕಾಯ್ದೆಗೆ ಅಸ್ತು!: ಎಡಿಟರ್ ಸ್ಪೆಷಲ್

Updated : 18.09.2022

 ಮತಾಂತರ ನಿಷೇಧ ಕಾಯ್ದೆಯನ್ನು ಕರ್ನಾಟಕ ಸರ್ಕಾರ, ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ ಚಳಿಗಾಲದ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಇದೀಗ ವಿಧಾನ್ ಪರಿಷತ್ನಲ್ಲೂ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಂಗೀಕರಿಸಿ ಬಿಟ್ಟಿದೆ. ಇದು ಸಂವಿಧಾನ ವಿರೋಧಿ ಕಾಯ್ದೆ ಎನ್ನುವುದು ಈ ಕಾಯ್ದೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೂ ಗೊತ್ತಿದೆ. ಸಂವಿಧಾನದ ಎದುರು ಈ ಕಾಯ್ದೆ ಠುಸ್ ಪಟಾಕಿ ಅನ್ನೋದು ಈಗಾಗಲೇ ಎಲ್ಲರಿಗೂ ಗೊತ್ತಾಗಿ ಬಿಟ್ಟಿದೆ. ಆದರೂ ಮನುವಾದಿಗಳ ಕುತಂತ್ರದ ಮುಲಾಜಿಗೆ ಒಳಗಾದ ಬಿಜೆಪಿ ಸರ್ಕಾರ, ಜನರ ಅಭಿಪ್ರಾಯವನ್ನು ಕಲೆ ಹಾಕದೇ ವಿಧಾನಸಭೆಯಲ್ಲಿ ಬಿಲ್ಲನ್ನು ಪಾಸ್ ಮಾಡಿಬಿಟ್ಟಿದೆ.

ದೇಶಾದ್ಯಂತ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭದಿಂದಲೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಲೇ ಇದೆ. ಅಭಿವೃದ್ಧಿ ಕೆಲಸ ಮಾಡಲಾಗದ ಬಿಜೆಪಿ ಸರ್ಕಾರ, ಮುಂದಿನ ಚುನಾವಣೆಯ ತಯಾರಿಗಾಗಿ ಭಾವನಾತ್ಮಕ ವಿಷಯಗಳನ್ನು ಜನರ ನಡುವೆ ತೇಲಿ ಬಿಡುತ್ತಿದೆ. ಯಾಕಂದ್ರೆ ಇವರು ಮಾಡಿದ ಒಂದೇ ಒಂದು ಅಭಿವೃದ್ಧಿ ಕೆಲಸಗಳಿಲ್ಲ. ಹಾಗಾಗಿ ಜನರ ಮುಂದೆ ಹೋಗಿ ವೋಟ್ ಕೇಳಲು ಮುಖ ಇಲ್ಲ. ಅದಕ್ಕೆ ಗೋಹತ್ಯೆ ನಿಷೇಧ, ಮತಾಂತರ ನಿಷೇಧದಂತಹ ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂಥ, ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ, ಆ ಮೂಲಕವೇ ರಾಜ್ಯದಲ್ಲಿ ಧಾರ್ಮಿಕ ಧೃವೀಕರಣ ಮಾಡಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುತ್ತಿದೆ ಅನ್ನೋದು ಸದ್ಯ ದೇಶದ್ಯಾಂತ ಕೇಳಿ ಬರುತ್ತಿರುವ ಆರೋಪ. ಈಗ ಮತಾಂತರ ನಿಷೇಧ ಕಾಯ್ದೆ ನಡೆದು ಬಂದ ಹಾದಿಯ ಆಳ ಮತ್ತು ಅಗಲ. ಅದರ ಹಿಂದಿರುವ ಉದ್ದೇಶ ಮತ್ತು ದುರುದ್ದೇಶದ ಒಂದು ವಿಶ್ಲೇಷಣೆಯೇ ಇಂದಿನ ಎಡಿಟರ್ ಸ್ಪೆಷಲ್.

ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಮಠಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ನಿಯಂತ್ರಣ ವಿಧೇಯಕ ಜಾರಿಗೆ ತರಲು ಸರ್ಕಾರ ಸಿದ್ಧವಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನವೂ ಇತ್ತು. ಸರ್ಕಾರ ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆ, ಅದರ ವಿರುದ್ಧ ವಿರೋಧದ ಬಿರುಗಾಳಿ ಎಬ್ಬಿಸಿದ್ದು ದಿವಂಗತ ಪೇಜಾವರ ಸ್ವಾಮಿ. ಈ ಪೇಜಾವರ ಸ್ವಾಮಿಗೆ ಸಿದ್ದರಾಮಯ್ಯನವರ ಸರ್ಕಾರ ಹೆದರಿತೋ ಏನೋ? ಆ ಮಸೂದೆಯಿಂದ ಹಿಂದೆ ಸರಿದು ಬಿಟ್ಟಿತು. ʼಮಠ ಮಸೂದೆ ಬೇಡ, ಅದರ ಬದಲಾಗಿ ಮತಾಂತರ ನಿಷೇಧ ಕಾಯ್ದೆ ತನ್ನಿʼ ಅಂತ ಹೇಳಿದರು ನೋಡಿ ಪೇಜವಾರ ಸ್ವಾಮಿ, ಅವತ್ತಿನಿಂದಲೇ ಈ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ವ್ಯಾಪಕ ಚರ್ಚೆ ಶುರುವಾಯಿತು. 2008 ರ ಅಕ್ಟೋಬರ್ 4 ರಂದು ಬೆಂಗಳೂರಿನಲ್ಲಿ ಬೀದಿಗೀಳಿದಿದ್ದ ಪೇಜಾವರ ಸ್ವಾಮಿ, ಆಗ ಅಧಿಕಾರದಲ್ಲಿದ್ದ ಯಡಿಯೂರಪ್ಪನವರನ್ನೇ ನಡುಗಿಸಿ ಬಿಟ್ಟಿದ್ದರು. ಆಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಪೇಜಾವರ ಸ್ವಾಮಿ, ಮತಾಂತರ ತಡೆಗೆ ಕಠಿಣ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು. ಈ ವಿಷಯದಲ್ಲಿ ರಾಜ್ಯಾದ್ಯಂತ ಇತರೆ ಜನಾಂಗದ ಹಲವಾರು ಮಠಾಧೀಶರು ಕೂಡಾ ಈ ಕಾಯ್ದೆಯ ಪರವಾಗಿದ್ದರು.

ಪ್ರಸ್ತುತ ಸಮಾಜದಲ್ಲಿ ಮತಾಂತರ ನಿಷೇಧ ಕಾಯ್ದೆ ಬೇಕೋ? ಅಥವಾ ಬೇಡ್ವೋ? ಅನ್ನೋ ಚರ್ಚೆಗಾಗಲಿ, ಅಥವಾ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವ ಗೋಜಿಗಾಗಲೀ ನಮ್ಮ ಸರ್ಕಾರ ಹೋಗಲೇ ಇಲ್ಲ. ಅವರಿಗೆ ಅದರ ಅಗತ್ಯವೂ ಇಲ್ಲ ಅನ್ಸುತ್ತೆ. ಯಾಕಂದ್ರೆ ಅವರು ಪ್ರಜಾಪ್ರಭುತ್ವವನ್ನು ಕೊಂದು, ಸರ್ವಾಧಿಕಾರತ್ವಕ್ಕೆ ಮುನ್ನುಡಿ ಬರೆದಿದ್ದೇವೆ ಅನ್ನೋದನ್ನ ಕಳೆದ ಎಂಟು ವರ್ಷಗಳಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಆದ್ರೆ ಇಂತಹ ಧೋರಣೆ ಈ ದೇಶಕ್ಕೆ ಹೊಸದೇನು ಅಲ್ಲ. ಶೋಷಿತರನ್ನು ಸದಾ ತಮ್ಮ ಕಾಲಡಿಯಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುವ, ಶ್ರೇ಼ಷ್ಠತೆ ವ್ಯಸನವನ್ನು ಹೊಂದಿರುವ ಜನ ಮೊದಲಿನಿಂದಲೂ ಇಂತ ಕಾಯ್ದೆಗಳನ್ನು ಬಳಿಸಿಕೊಂಡು ಇಲ್ಲಿನ ದಲಿತ ಸಮುದಾಯಗಳನ್ನು ನಿರಂತರವಾಗಿ ತುಳಿದಿದ್ದಾರೆ. ಉದಾಹರಣೆಗೆ

ರಾಯಗಢ ರಾಜ್ಯ ಮತಾಂತರ ಕಾಯ್ದೆ 1936, ಪಾಟ್ನಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1942, ಸರ್ಗುಜಾ ಸ್ಟೇಟ್ ಅಪೋಸ್ಟಸಿ ಆ್ಯಕ್ಟ್ 1945 ಮತ್ತು ಉದಯಪುರ ಸ್ಟೇಟ್ ಆ್ಯಂಡ್ ಕನ್ವರ್ಶನ್ ಆ್ಯಕ್ಟ್ 1946.

ಮತಾಂತರವನ್ನು ತಡೆಗಟ್ಟುವ ಇಂತಹ ಕಾಯ್ದೆಗಳು ಬಿಕಾನೇರ್, ಜೋದ್ಪುರ್, ಕಾಲಾಹುಂಡಿ ಮತ್ತು ಕೋಟಾ ಸಂಸ್ಥಾನಗಳಲ್ಲಿ ಸ್ವಾತಂತ್ರ್ಯ ಸಿಗುವ ಮೊದಲೇ ಇದ್ದವು. ಆದ್ರೆ ಇವರ ಕಾಯ್ದೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದಕ್ಕೆ ಮಾತ್ರ ನೇರ ವಿರೋಧವಿತ್ತು. ಅಂದ್ರೆ ಇವರ ಉದ್ದೇಶ ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಇಟ್ಟುಕೊಂಡು, ದಲಿತರು ಸಾಯೋವರೆಗೂ ತಮ್ಮ ಅಧೀನದಲ್ಲೇ ಜೀತ ಮಾಡಿಕೊಂಡು ಇರಬೇಕು ಅನ್ನೋದಷ್ಟೇ ಆಗಿತ್ತು.

ಇನ್ನೂ ಸ್ವಾತಂತ್ರ್ಯ ನಂತರ ಮತಾಂತರದ ಕುರಿತು ಹೆಚ್ಚು ಚರ್ಚೆಯಾಗಿದ್ದು ತಮಿಳುನಾಡಿನಲ್ಲಿ. 1981 ರಲ್ಲಿ ತಮಿಳುನಾಡಿನ ತಿರುವನೇಲ್ವೇಲಿ ಜಿಲ್ಲೆಯ ಮೀನಾಕ್ಷಿಪುರಂನಲ್ಲಿ ಸಾಮೂಹಿಕ ಮತಾಂತರ ನಡೆಯಿತು. ನೂರಾರು ದಲಿತ ಕುಟುಂಬಗಳು ಏಕಕಾಲಕ್ಕೆ ಇಸ್ಲಾಂ ಧರ್ಮವನ್ನು ಸೇರಿದ್ದರು. ಇದರಿಂದ ಹಿಂದೂಗಳೆಂದು ಕರೆದುಕೊಳ್ಳುವ ಮನುವಾದಿಗಳಿಗೆ ಬರಸಿಡಿಲು ಬಡಿದಂತಾಗಿತ್ತು. ಹಿಂದೂ ಧರ್ಮ ಸತ್ತೇ ಹೋಯಿತೇನೋ ಅನ್ನುವಷ್ಟರ ಮಟ್ಟಿಗೆ ವಿವಾದದ ಬಿರುಗಾಳಿಯನ್ನು ದೇಶಾದ್ಯಂತ ಎಬ್ಬಿಸಿ ಬಿಟ್ಟರು. ಆದ್ರೆ ಮೀನಾಕ್ಷಿಪುರಂನ ದಲಿತರು ಯಾಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು? ಅವರಿಗೆ ಹಿಂದೂ ಧರ್ಮದಲ್ಲಿ ಆದ ಸಮಸ್ಯೆಯಾದರೂ ಏನು? ಅನ್ನೋದನ್ನ ತಿಳಿದುಕೊಳ್ಳುವ ಗೋಜಿಗೆ ಅವರು ಹೋಗಲೇ ಇಲ್ಲ. ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಯಾಕಂದ್ರೆ ಅವರು ದಲಿತರನ್ನು ತಮ್ಮ ಧರ್ಮದಲ್ಲಿ ಅಸ್ಪೃಶ್ಯರಾಗಿಯೇ ಇಟ್ಟುಕೊಳ್ಳಲು ಬಯಸುತ್ತಾರೆ.

ಹೌದು, ಮೀನಾಕ್ಷಿಪುರಂನ ದಲಿತರು ಮತಾಂತರವಾಗಲು ಮುಖ್ಯ ಕಾರಣವೇ ಅವರಿಗೆ ಹಿಂದೂ ಧರ್ಮದಲ್ಲಿ ಯಾವುದೇ ಸ್ಥಾನಮಾನ ಇಲ್ಲದಿರುವುದು ಮತ್ತು ಅಲ್ಲಾಗುತ್ತಿದ್ದ ಶೋಷಣೆ. ಪಾಪ ಎಷ್ಟು ವರ್ಷ ಅಂತ ಆ ಭೀಕರ ಶೋ಼ಷಣೆಯನ್ನು ಸಹಿಸಿಕೊಳ್ಳೋದು? ಅದಕ್ಕೆ 180 ದಲಿತ ಕುಟುಂಬಗಳು ಇಸ್ಲಾಂ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರವಾಗಿ ಬಿಟ್ಟರು. ಈ ಪ್ರಕರಣ ತಮಿಳುನಾಡಿನ ವಿಧಾನಸಭೆ ಮತ್ತು ಕೇಂದ್ರದ ಸಂಸತ್ತಿನಲ್ಲೂ ವ್ಯಾಪಕ ಚರ್ಚೆಯಾಯಿತು. ರಾಜಕೀಯ ಮುಖಂಡರು, ಪತ್ರಕರ್ತರು, ಸ್ವಯಂ ಸೇವಕರು, ಸಮಾಜ ಸೇವಕರು, ಸತ್ಯ ಶೋಧನಾ ಸಮಿತಿಗಳ ಸದಸ್ಯರು ತಂಡೋಪತಂಡವಾಗಿ ಬಂದು ಮೀನಾಕ್ಷಿಪುರಂಗೆ ಭೇಟಿ ನೀಡಿದರು. ದಲಿತರು ಇಸ್ಲಾಂಗೆ ಮತಾಂತರವಾಗಿದ್ದಾರೆ ಅನ್ನೋ ವಿಚಾರ ಯಾವಾಗ ವಿಹೆಚ್ಪಿಯವರ ಕಿವಿಗೆ ಬಿತ್ತೋ, ಅವರ ಕಿವಿಯಲ್ಲಿ ಕಾದ ಸೀಸ ಹುಯ್ದಿದಂತೆ ಆಯ್ತೇನೋ? ಮರು ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟರು. ಆದರೆ ಯಾವೊಬ್ಬ ದಲಿತನೂ ಮರು ಮತಾಂತರ ಆಗಲಿಲ್ಲ. ಯಾಕೆ ಆಗ್ತಾರೆ ಸ್ವಾಮಿ? ಒಂದು ವರ್ಷವಲ್ಲ, ನೂರು ವರ್ಷವಲ್ಲ, ಸಾವಿರಾರು ವರ್ಷಗಳಿಂದ ಅಸಮಾನತೆಯ ಬೆಂಕಿಯಲ್ಲಿ ಬೆಂದವರು, ಮತ್ತದೇ ಶೋ಼ಷಣೆಯ ಕೂಪಕ್ಕೆ ಹೋಗಲು ಅವರಿಗೇನು ಹುಚ್ಚಾ?

ಇದೀಗ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಿಂದ ಕ್ರೈಸ್ತರು, ಮುಸಲ್ಮಾನರು ಮತ್ತು ದಲಿತರು ಒಬ್ಬರನ್ನೊಬ್ಬರು ಬೆಸೆಯದಂತೆ ಮಾಡಿ, ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಉಳಿಸಿಕೊಳ್ಳುವ ಷಡ್ಯಂತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ಬೌದ್ಧರು ಕೂಡ ಹೊರತಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಜಾ ತಾಂತ್ರಿಕ ವ್ಯವಸ್ಥೆಯಲ್ಲಿ ಅವರವರ ಧಾರ್ಮಿಕ ಸ್ವಾತಂತ್ರ್ಯ, ಅವರವರಿಗೆ ಬಿಟ್ಟಿದ್ದು. ಯಾರಿಗೆ ಯಾವ ಧರ್ಮ ಇಷ್ಟವಾಗುತ್ತೋ ಅದನ್ನ ಅವರು ಅನುಸರಿಸಬಹುದು. ಆದ್ರೆ ಆರೆಸ್ಸೆಸ್ ಮತ್ತು ಬಿಜೆಪಿಯವರ ವರಸೆಯೇ ಬೇರೆ. ಅವರ ಪ್ರಕಾರ ಬೇರೆ ಧರ್ಮದಿಂದ ಹಿಂದೂ ಧರ್ಮಕ್ಕೆ ಬರುವವರಿಗೆ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ.

ಆದರೆ ಹಿಂದೂ ಧರ್ಮದಿಂದ ಹೊರ ಹೋಗುವವರಿಗೆ ಇಲ್ಲಿ ಆಡಚಣೆಗಳು ಉಂಟಾಗಿ ಬಿಡುತ್ತವೆ. ಸತ್ಯ ನಾರಾಯಣ ತ್ಯಾಗಿ ಎಂಬಾತ ವಸೀಂ ರಿಜ್ವಿಯಾಗಿದ್ದಾಗ ಅವನ ಸಮಸ್ಯೆಗಳಿಗೆ ಮತಾಂತರವೊಂದೇ ಪರಿಹಾರವಾಗಿತ್ತು. ವಸೀಂ ರಿಜ್ವಿ ಮತಾಂತರವನ್ನು ಖುದ್ದು ಬಿಜೆಪಿ ನಾಯಕರೇ ನೇರವಾಗಿ ಬೆಂಬಲಿಸಿದ್ದರು. ಇದೇ ಮನುವಾದಿಗಳ ರಾಜಕಾರಣ. ಕರ್ನಾಟಕದ ಮಟ್ಟಿಗೆ ಬಿಲ್ ಹೇಗಿದೆ ಎಂದರೆ ಬೇರೆ ಧರ್ಮದ ವ್ಯಕ್ತಿಯ ಬಳಿ ಸ್ನೇಹಿತನೊಬ್ಬ ಗಿಫ್ಟ್ ತೆಗೆದುಕೊಳ್ಳುವುದಕ್ಕೂ ಇಲ್ಲಿ ಸಾವಿರ ಬಾರಿ ಯೋಚಿಸಬೇಕು. ಇದು ದಲಿತರಿಗೆ ನೇರವಾಗಿ ತೊಂದರೆ ಉಂಟು ಮಾಡಬಲ್ಲುದು ಹಾಗೂ ಸಮಾಜದಲ್ಲಿ ಕೋಮುಗಲಭೆಗಳಿಗೂ ಕಾರಣವಾಗಬಹುದು ಅಂತಹ ಡೇಂಜರಸ್ ಕಾನೂನು ಇದು. ಯಾಕಂದರೆ 1999 ರಲ್ಲಿ ಜರ್ಮನ್ನಿಂದ ಬಂದು ಒರಿಸ್ಸಾದಲ್ಲಿ ಬಡವರ ಸೇವೆಯನ್ನು ಮಾಡುತ್ತಿದ್ದ ಗ್ರಹಾಂ ಸ್ಟೇನ್ ಮತ್ತವನ ಇಬ್ಬರು ಮಕ್ಕಳನ್ನ ಜೀಪಿನಲ್ಲಿ ಕೂಡಿಹಾಕಿದ್ದ ಮನುವಾದಿಗಳು ಅವರನ್ನು ಹಾಡಹಗಲೇ ಜೀವಂತ ಸುಟ್ಟು ಹಾಕಿದ್ದರು. ಇಂತಹ ಕೃತ್ಯಕ್ಕೆ ಕಾರಣ ಏನಂದ್ರೆ, ಬಡವರ ಸೇವೆಯನ್ನೇ ಕ್ರೈಸ್ತ ಧರ್ಮಕ್ಕೆ ಮತಾಂತರ ಅಂತ ತಿಳಿದುಕೊಂಡಿದ್ದು.  ಇದೇ ಕಾರಣಕ್ಕೆ 2008 ರಲ್ಲಿ ಇದೇ ಮನುವಾದಿಗಳು ಕ್ರೈಸ್ತ ಸನ್ಯಾಸಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಬಿಟ್ಟರು. ಇಂತಹದೇ ಅದೆಷ್ಟು ಅನಾಹುತಗಳು ಈ ಕಾಯ್ದೆಯಿಂದ ನಮ್ಮ ರಾಜ್ಯದಲ್ಲಿ ಸಂಭವಿಸಬಹುದೋ? ಯಾಕಂದರೆ ಇಲ್ಲಿ ಅಧಿಕೃತ ಸರ್ಕಾರ ಸತ್ತು ಹೋಗಿ, ಅನಧಿಕೃತ ಸಂಘಿ ಸರ್ಕಾರ ರಾಜ್ಯವಾಳುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.  

ಅಲ್ಪಸಂಖ್ಯಾತರು ಇಲ್ಲಿ ಹಿಂಸೆಗೆ ತುತ್ತಾಗಬಹುದಾದರೂ ಈ ಕಾಯ್ದೆಯ ಮೊದಲ ಬಲಿಪಶುಗಳು ದಲಿತರು. ಇವರು ಅಸ್ಪೃಶ್ಯರಾಗಿಯೇ, ಗುಲಾಮರಂತೆಯೇ ಒಂದು ಹೊಂಡದಲ್ಲಿ ಕೊಳೆತು ನಾರುವ ಜನಾಂಗವಾಗಿ ಉಳಿಯುವಂತೆ ಮಾಡಬೇಕೆಂಬ ಕಾರಣಕ್ಕೆ ಇದನ್ನು ತರಲಾಗಿದೆ ಅಷ್ಟೇ. ಇದರಿಂದಾಚೆಗೆ ನೋಡುವುದಾದರೆ ಇದೊಂದು ವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯೂ ಹೌದು. ಒಬ್ಬ ವ್ಯಕ್ತಿ ತನ್ನ ಶಿಕ್ಷಣ, ಉದ್ಯೋಗ, ಆಹಾರ, ಬಾಳ ಸಂಗಾತಿಯನ್ನು ತನ್ನ ಇಚ್ಚೆಯಂತೆ ಪಡೆಯಲು ಎಷ್ಟು ಅಧಿಕಾರ ಇದೆಯೋ ಅದೇ ರೀತಿ ಈ ದೇಶದ ಯಾವುದೇ ನಾಗರಿಕ 18 ವರ್ಷಗಳ ನಂತರ ತನ್ನ ಇಚ್ಚೆಯಂತೆ ತನ್ನ ಮೆಚ್ಚಿನ ಧರ್ಮವನ್ನು ಆಯ್ದುಕೊಳ್ಳುವ ಮತ್ತು ಅನುಸರಿಸುವ, ಅಥವಾ ನಿರಾಕರಿಸುವ ಹಕ್ಕು ಮತ್ತು ಅಧಿಕಾರ ಹೊಂದಿರುತ್ತಾರೆ. ಒಂದು ಕುಟುಂಬದ ಒಬ್ಬೊಬ್ಬ ಸದಸ್ಯನೂ ಒಂದೊಂದು ಧರ್ಮದವರಾಗಿರಬಹುದಾದಷ್ಟು ವ್ಯಕ್ತಿಗತ ಸ್ವಾತಂತ್ರ ನಮ್ಮ ಸಂವಿಧಾನದಲ್ಲಿದೆ. ಈ ಮತಾಂತರ ಕಾಯ್ದೆ ಬಗ್ಗೆ ಒದ್ದಾಡುವವರು ಬೌದ್ಧ, ಇಸ್ಲಾಂ, ಕ್ರೈಸ್ತರ ಬಗ್ಗೆ ಅಸಹನೆಯುಳ್ಳವರು.

ಅದನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ. ಯಾರು ಯಾವುದೇ ಧರ್ಮ ಸ್ವೀಕರಿಸಲಿ ಇತರರು ಮೂಗು ತೂರಿಸದೇ ಅಗತ್ಯ ಕೆಲಸದ ಕಡೆ ನೋಡಬೇಕಿದೆ. ಆಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂದು ಬೊಬ್ಬೆ ಹಾಕುವವರು, ಅವರ ಪರಿಸ್ಥಿತಿ ಮತ್ತು ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲಿ. ತಾವಿರುವ ಧರ್ಮದಲ್ಲಿ ಅವರಿಗೆ ಯಾವ ಯಾವ ಅಗತ್ಯಗಳು ಪೂರೈಕೆ ಆಗ್ತಿಲ್ಲ ಅನ್ನೋದನ್ನ ತಿಳಿದುಕೊಳ್ಳಲಿ. ಆ ದಿಕ್ಕಿನಲ್ಲಿ ಕೆಲಸ ಮಾಡಲಿ. ಆರ್ಥಿಕತೆಯ ಆಕರ್ಷಣೆಯೋ, ಆಧ್ಯಾತ್ಮಿಕ ಸೆಳೆತವೋ, ಒಟ್ಟಾರೆ ಯಾವುದೋ ಅಗತ್ಯ ಅವರಿಗಿದೆ. ಯಾವುದೋ ಭರವಸೆ ಅವರಿಗೆ ಬೇಕಾಗಿದೆ. ಇಷ್ಟವಾದರೆ ಚೆನ್ನಾಗಿ ಬಾಳಿ ಬದುಕಲಿ. ಕಷ್ಟ ಆಯಿತಾ ಮತ್ತೊಂದು ದಾರಿ ಹುಡುಕಿಕೊಳ್ಳಲಿ. ಹೇಗಿದ್ದರೂ ಧರ್ಮ ಎಂಬುದು ದಾರಿಯೇ ತಾನೇ? ಊಟದ, ಹಣದ ಆಮಿಷಕ್ಕೆ ಮತಾಂತರವಾಗುವಷ್ಟು ನಮ್ಮ ಜನರೇನೂ ದುರ್ಬಲರಾಗಿಲ್ಲ. ಇಂದು ಮತಾಂತರವಾಗುತ್ತಿರುವುದು ಜಾತಿ ಅಸಮಾನತೆಯಿಂದ. ನಿಜಕ್ಕೂ ಸರಕಾರ ಜಾರಿಗೊಳಿಸಬೇಕಾಗಿರುವುದು ಜಾತಿ ನಿಷೇಧ ಕಾಯ್ದೆಯನ್ನೆ ಹೊರತು, ಮತಾಂತರ ನಿಷೇದ ಕಾಯ್ದೆಯನ್ನಲ್ಲ.

ʼನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದ್ರೆ ಹಿಂದೂವಾಗಿ ಸಾಯಲಾರೆʼ ಅಂತ ಅಂಬೇಡ್ಕರರು ಯಾಕೆ ಹೇಳಿದರು ಅನ್ನೋದನ್ನ ಅರ್ಥ ಮಾಡಿಕೊಂಡವರಿಗೆ ಮತಾಂತರ ನಿಷೇಧ ಕಾಯ್ದೆ, ಯಾವುದೇ ಕಾರಣಕ್ಕೂ ಮತಾಂತರವನ್ನು ತಡೆಗಟ್ಟಲಿಕ್ಕೆ ಆಗುವುದಿಲ್ಲ ಅನ್ನೋದು ಕೂಡಾ ಅರ್ಥವಾಗುತ್ತದೆ. ಆದ್ದರಿಂದ ಮೊದಲು ಅಸೃಶ್ಯತೆಯನ್ನು ಹೋಗಲಾಡಿಸುವುದಕ್ಕೆ ಪ್ರಯತ್ನ ಮಾಡಿ. ಅಸ್ಪೃಶ್ಯತೆ ನಿಂತರೆ ಮತಾಂತರವೂ ತಂತಾನೇ ನಿಂತು ಹೋಗುತ್ತದೆ.

-ಕನ್ನಡ ಒನ್ ನ್ಯೂಸ್ ಬಳಗ

 


© Copyright 2022, All Rights Reserved Kannada One News