ಅಂದು ಬಾಬರೀ.. ಇಂದು ಗ್ಯಾನವಾಪಿ!: ಎಡಿಟರ್ ಸ್ಪೆಷಲ್

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಅಂದು ಬಾಬರೀ.. ಇಂದು ಗ್ಯಾನವಾಪಿ!: ಎಡಿಟರ್ ಸ್ಪೆಷಲ್

Updated : 13.09.2022

 ಗೆಳೆಯರೆ, ಈಗಾಗಲೇ ಈ ಒಕ್ಕೂಟ ಭಾರತ ಸಾಕಷ್ಟು ರಕ್ತಪಾತ ಕಂಡಿದೆ. ಈ ನೆಲದಲ್ಲಿ ಬಡವರ, ಅಮಾಯಕರ, ಯುವಕರ ರಕ್ತ ಹರಿನಾಳಿಗೆಯ ನೀರಿನಂತೆ ಹರಿದಿದೆ. ಅದಕ್ಕೆ ಕಾರಣ ರಾಜಕಾರಣಿಗಳ ಅಧಿಕಾರದ ಹಿತಾಸಕ್ತಿ,, ಮತ್ತು ಅದಕ್ಕಾಗಿ ಅವರು ವಿಷ ಉಗುಳಿದ ಪ್ರಚೋದನಕಾರಿ ಭಾಷಣಗಳು. ಏಕಾಂತವಾಗಿ ಕುಳಿತು ಕಳೆದ 70 ವರ್ಷಗಳಲ್ಲಿ ನಾವು ಹಾದು ಬಂದಿರುವ ಹಲವಾರು ಘಟನೆಗಳನ್ನು ನೆನಪಿಸಿಕೊಂಡಾಗ ಹೃದಯ ಕುಸಿದು ಕಂಪಿಸುತ್ತದೆ.

ಹೃದಯ ಬಡಿತ ಹೆಚ್ಚುತ್ತದೆ. ಕರುಳು ಕಿವುಚಿದಂತಾಗುತ್ತದೆ. ಹೇಳಲಾಗದ ಸಂಕಟ ಒಳಗನ್ನೆಲ್ಲ ತೊಳೆಸತೊಡುಗುತ್ತದೆ. ಎದೆಯೊಳಗೆ ತಲ್ಲಣ, ಆತಂಕಗಳು ಹುಟ್ಟುತ್ತವೆ. ಸಂಭವಿಸಿದ ಅಮಾನುಷ ಕ್ರೌರ್ಯ, ಹಿಂಸೆಯಿಂದಾಗಿ ನಮ್ಮ ಮನಸ್ಸು ಹಾಗೂ ಹೆಜ್ಜೆ ಇಟ್ಟ ನೆಲವೆಲ್ಲಾ ರಕ್ತಸಿಕ್ತವಾದಂತೆ ಅನ್ನಿಸುತ್ತದೆ. ಸುಟ್ಟು ಹೋದ ಕಟ್ಟಡಗಳು, ಮುರಿದು ಬಿದ್ದ ಮನೆಗಳು, ಸ್ಮಶಾನದಂತಾದ ಊರುಗಳು, ಸುಟ್ಟು ಕರಕಲಾದ ಕಲ್ಲಿದ್ದಲಿನಂತಹ ದೇಹಗಳು, ರಾಶಿ ರಾಶಿ ಹೆಣಗಳು, ಬಾಳಿ ಬದುಕಿದ ಮನೆಗಳು, ದಿಕ್ಕಿಲ್ಲದವರ ಜೋಪಡಿಗಳು, ಮಸೀದಿಗಳು ಉರಿದು ಹೋಗಿವೆ. ಧ್ವಂಸಗೊಂಡು ಧೂಳಿಪಟವಾಗಿವೆ. ಬೆಂದ ಜೀವಗಳು, ನರಳುವ ಒಡಲುಗಳು ಈ ಮಣ್ಣಿನ ದುರಂತ ಚರಿತ್ರೆಯ ಸಂಕೇತವಾಗಿ ನಿಂತಿವೆ.

ಜನಾಂಗೀಯ ದ್ವೇ಼ಷಕ್ಕೆ ಕೆಲ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ದೈಹಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಧಾರ್ಮಿಕವಾಗಿ ನಾಶಗೊಳಿಸಲು ಮಾಡಿದ ಪ್ರಯತ್ನಗಳು ಅತ್ಯಂತ ಬರ್ಬರ ಮತ್ತು ಹೇಯವಾದವು. ಹಾಗೇ ನೆನೆಸಿಕೊಂಡಾಗ ಬತಾನಿ ತೋಲಾ ಹತ್ಯಾಕಾಂಡ, ಖೈರ್ಲಂಜಿ ಹತ್ಯಾಕಾಂಡ, ಕರಂಚೇಡು ಹತ್ಯಾಕಾಂಡ, ಅಷ್ಟೇ ಏಕೆ ಕರ್ನಾಟಕದ ಕಂಬಾಲಪಲ್ಲಿ ಹತ್ಯಾಕಾಂಡ, ಬೆಂಡಿಗೇರಿ ಪ್ರಕರಣ, ಗುಜರಾತ್ ನರಮೇಧ, ನೆಲ್ಲಿ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸದಿಂದಾದ ಅಮಾಯಕರ ಮಾರಣಹೋಮ, ಆಸೀಫಾ ಮೇಲೆ ಅತ್ಯಾಚಾರ, ಭೀಮಾ ಕೊರೆಗಾಂವ್ ಹಿಂಸಾಚಾರ – ಹೀಗೆ ಸ್ವತಂತ್ರ ಭಾರತ ಕಂಡಂತಹ ಸಾವಿರಾರು ಅಮಾನುಷ ಹಿಂಸೆ, ಕ್ರೌರ್ಯಗಳಿಂದಾಗಿ ಮನಸ್ಸನ್ನಾವರಿಸಿರುವ ಕಹಿ ನೆನಪು ಎಂದಿಗೂ ಮಾಸುವುದಿಲ್ಲ. ವಾಸ್ತವವಾಗಿ ಭಾರತ ದೇಶವೆಂಬುದು ಯೋಜಿತ ಹಿಂಸೆಯ ಕುಲುಮೆಯಾಗಿದೆ ಏನೋ ಅನ್ನಿಸುತ್ತದೆ.

ಇದೀಗ ಗ್ಯಾನವಾಪಿ ಮಸೀದಿ ಕುರಿತು ವಿವಾದ ಮತ್ತೆ ಗರಿಗೆದರಿದೆ. ಬಾಬ್ರಿ ಮಸೀದಿ ಧ್ವಂಸದಿಂದಾಗಿ ಈಗಷ್ಟೇ ಸಾವಕಾಶವಾಗಿ ಚೇತರಿಸಿಕೊಳ್ಳುತ್ತಿದ್ದ ದೇಶದ ಜನತೆ ಗ್ಯಾನವಾಪಿ ಮಸೀದಿ ವಿವಾದಿಂದ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಈ ಮಂದಿರ-ಮಸೀದಿ ಜಗಳದಿಂದ ದೇಶದ ಜನರಿಗಾದ ಲಾಭವಾದರೂ ಏನು? ನಷ್ಟದ ಪಟ್ಟಿಯನ್ನು ಬೇಕಾದ್ರೆ ಲೆಕ್ಕವಿಲ್ಲದಷ್ಟು ಕೊಡಬಹುದು. 1990ರಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಆರಂಭಿಸಿದ ಆ ರಕ್ತಯಾತ್ರೆಯಿಂದ ಸಾಲು ಸಾಲಾಗಿ ಅಮಾಯಕರ ಹೆಣಗಳು ಉರುಳಿವೆ. ಅದರ ಮುಂದುವರೆದ ಭಾಗವಾಗಿ ದೇಶಾದ್ಯಂತ ಸಾವಿರಾರು ಭೀಕರ ಹತ್ಯಾಕಾಂಡಗಳು ನಡೆದುಹೋಗಿವೆ. ಇಷ್ಟು ಹತ್ಯಾಕಾಂಡಗಳಲ್ಲಿಯೇ ಬರ್ಬರ ಹತ್ಯಾಕಾಂಡ ಅಂತ ಕುಖ್ಯಾತಿ ಪಡೆದ 2002ರ ಗುಜರಾತ್ ನರಮೇಧ ಕೂಡಾ ಇದೇ ಬಾಬ್ರಿ ಮಸೀದಿ ಭಾಗವಾಗಿಯೇ ನಡೆದಿದ್ದು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಾಗಲಂತೂ, ಕೆಡವಿ ಕುಕೃತ್ಯ ಮೆರೆದ ಕರ ಸೇವಕರು, ತಮ್ಮ ಊರುಗಳಿಗೆ ಮರಳುವ ಮುನ್ನವೇ ಇಡೀ ದೇಶವೇ ಬೆಂಕಿಯ ಕೆನ್ನಾಲಿಗೆ ಸಿಲುಕಿ ಹೊತ್ತಿ ಉರಿಯುತ್ತಿತ್ತು.

ಅಂತಹ ಒಂದು ಕರಾಳ ಇತಿಹಾಸವನ್ನು ನಿರ್ಮಿಸಿದವರು ಬಿಜೆಪಿ ಮತ್ತು ಆರೆಸೆಸ್ನವರು. ಅದು ಕೇವಲ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ. ಅಲ್ಲಿಂದಲೇ ಬಿಜೆಪಿಯ ಜೈತ್ರಯಾತ್ರೆ ಆರಂಭವಾಯಿತು ಅನ್ನೋದು ಸರ್ವವಿಧಿತ. ಅಡ್ವಾಣಿಯವರು ರಥಯಾತ್ರೆಯ ಹೆಸರಿನಲ್ಲಿ ರಕ್ತಯಾತ್ರೆ ಹಮ್ಮಿಕೊಂಡಾಗ ಅವರಿಗೆ ರಕ್ತ ತುಂಬಿದ ಬಿಂದಿಗೆಯನ್ನು ಕೊಡಲಾಗಿತ್ತು. ಇದು ಬಿಜೆಪಿ ಮತ್ತು ಅಡ್ವಾಣಿಯವರ ರಕ್ತಪಿಪಾಸು ರಾಜಕಾರಣಕ್ಕೆ ಸಾಕ್ಷಿ. ಇವರು ಕಾಲಿಟ್ಟಲೆಲ್ಲ ಬೆಂಕಿ ಬೀಳಬೇಕು. ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲೂ ಬಿಜೆಪಿಯವರು ಮೈಕ್ ಹಿಡಿದ್ರೆ ಸಾಕು, ಆ ಊರುಗಳು ಧಗಧಗಧಗ ಅಂತ ಹೊತ್ತಿ ಉರಿಯಬೇಕು. ಇದೇ ಇವರ ರಾಜಕೀಯ ಸ್ಟ್ರ್ಯಾಟರ್ಜಿ. ಇದೇ ಇವರ ಅಧಿಕಾರದ ಹಿಂದಿರುವ ವೋಟ್ ಬ್ಯಾಂಕ್ ರಾಜನೀತಿ. ಇಂತಹ ಘಾತುಕ ಕೆಲಸದಿಂದಲೇ ಬಿಜೆಪಿ ಉಸಿರಾಡುತ್ತಿದೆ. ಬಾಬ್ರಿ ಮಸೀದಿ ಧ್ವಂಸವೂ ಆಯ್ತೂ. ಅದರಿಂದಾಗಿ ಲಕ್ಷಾಂತರ ಅಮಾಯಕರ ಹೆಣಗಳೂ ಬಿದ್ದವು. ಬಿಜೆಪಿ ಅಧಿಕಾರಕ್ಕೂ ಬಂತು. ಆದ್ರೆ ಆ ಅಧಿಕಾರವನ್ನು ಕಾಪಾಡಿಕೊಳ್ಳಬೇಕಲ್ಲ? ಅಭಿವೃದ್ಧಿ ಯೋಜನೆಗಳನ್ನು ಮಾಡಿದಿದ್ದರೆ, ಅದರ ಹೆಸರು ಹೇಳಿಕೊಂಡು ವೋಟ್ ಕೇಳಬಹುದಿತ್ತು. ಆದ್ರೆ ಇವರಿಗೆ ಅಭಿವೃದ್ಧಿ ಅಂದ್ರೆ ಅಲರ್ಜಿ, ಅದಕ್ಕೆ ಬಾಬ್ರಿ ಮಸೀದಿ ತರಹವೇ ಗ್ಯಾನವಾಪಿ ಮಸೀದಿಯ ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ.

ಹೌದು, ಗ್ಯಾನವಾಪಿ ಮಸೀದಿ ವಿವಾದ ಕೂಡಾ ಸೇಮ್ ಟು ಸೇಮ್ ಬಾಬ್ರಿ ಮಸೀದಿ ವಿವಾದ ನಡೆ ಹಾದಿಯಲ್ಲಿ ನಡೆಯುತ್ತಿದೆ. ಬಾಬ್ರಿ ಮಸೀದಿಗೆ ಆದ ಅನ್ಯಾಯ ಗ್ಯಾನವಾಪಿ ಮಸೀದಿಗೆ ಆದೀತೆ ಅನ್ನುವ ಭಯ, ಆತಂಕ ದೇಶದ ಜನರಲ್ಲಿ ಮನೆ ಮಾಡಿದೆ. ಅಧಿಕಾರ ಇಲ್ಲದಾಗಲೇ ದೇಶವನ್ನು ಅಲ್ಲೋಲಕಲ್ಲೋಲ ಮಾಡಿದವರು, ಅಧಿಕಾರದಲ್ಲಿದ್ದಾಗ ಇನ್ನೆಷ್ಟು ದಿವಾಳಿ ಎಬ್ಬಿಸಬಹುದು ಅಂತ ಜನ ಚಿಂತಿತರಾಗಿದ್ದಾರೆ. 1949ರಲ್ಲಿ ಬಾಬ್ರಿ ಮಸೀದಿಯಲ್ಲಿ ರಾತ್ರೋ ರಾತ್ರಿ ಅಕ್ರಮವಾಗಿ ರಾಮನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ಮಸೀದಿಗೆ ಬೀಗ ಜಡಿಸಿದರು. ಮಸೀದಿಯ ಒಳಾಂಗಣ ಮುಸ್ಲಿಮರಿಗೆ ಮತ್ತು ಹೊರಭಾಗ ಹಿಂದೂಗಳ ಪಾಲಾಗುವಂತೆ ನೋಡಿಕೊಂಡರು. ಈ ಸಂದರ್ಭದಲ್ಲಿ ಅರಬ್ ದೇಶದ ಒಂದು ಕಥೆ ನೆನಪಾಗುತ್ತದೆ. ಒಬ್ಬ ಯಾತ್ರಿಕ ತನ್ನ ಒಂಟೆಯೊಂದಿಗೆ ಪ್ರವಾಸಕ್ಕೆ ಹೊರಟಿದ್ದನಂತೆ. ರಾತ್ರಿಯಾದಾಗ ಮಲಗಲು ಬಿಡಾರ ಹೂಡಿ, ತಾನು ಒಳಗೆ ಮಲಗಿಕೊಂಡು, ಬಿಡಾರದ ಹೊರಗೆ ಒಂಟೆಯನ್ನು ಕಟ್ಟಿ ಹಾಕಿದ್ದ. ಆದ್ರೆ ಚುಮುಚುಮು ಚಳಿ ಶುರುವಾಯ್ತು.

ಬಿಡಾರದ ಒಳಗೇ ಮಲಗಿಕೊಂಡಿದ್ದ ಯಾತ್ರಿಕನಿಗೆ ಮಧ್ಯರಾತ್ರಿ ಕಳೆಯುತ್ತಿದ್ದಂತೆ ಚಳಿ ಏರೋದಿಕ್ಕೆ ಶುರುವಾಯ್ತು. ಮುನುಷ್ಯತ್ವ ಹೊಂದಿದ್ದ ಅವನು ಒಂಟೆಯ ಬಗ್ಗೆ ಚಿಂತಿಸತೊಡಗಿದ. ಒಳಗಿರುವ ತನಗೇ ಇಷ್ಟು ಚಳಿಯಾಗುವಾಗ, ಪಾಪ ಹೊರಗಡೆ ಇರುವ ನನ್ನ ಒಂಟೆಗೆ ಇನ್ನೆಷ್ಟು ಚಳಿಯಾಗ್ತಿರಬೇಡ ಅಂತ ಒಂಟೆಗೆ ಅದರ ಮುಖವನ್ನು ಬಿಡಾರದ ಒಳಗೆ ಇಟ್ಟುಕೊಂಡು ಮಲಗುವಂತೆ ಹೇಳಿದ. ಬಿಡಾರದ ಒಳಗೆ ಮುಖ ತೂರಿಸಿದ ಒಂಟೆ ಬೆಳಗಾಗುವಷ್ಟರಲ್ಲಿ ತನ್ನ ಯಜಮಾನನನ್ನೇ ಒದ್ದು ಹೊರಗೆ ಹಾಕಿ, ಇಡೀ ಬಿಡಾರವನ್ನೇ ಆಕ್ರಮಿಸಿಕೊಂಡು ಬಿಟ್ಟಿತ್ತು. ಒಂಟೆಗೆ ಚಳಿ ಆಗಬಾರದೆಂದು ಅನುಕಂಪ ವ್ಯಕ್ತಪಡಿಸಿದ ಯಜಮಾನ ಹೊರಗೆ ಬಿದ್ದಿದ್ದ. ಹ್ಮ್… ಅರ್ಥ ಆಯ್ತಲ್ಲ. ಇದೇ ಕಥೆ ಬಾಬ್ರಿ ಮಸೀದಿ ವಿಷಯದಲ್ಲೂ ಆಗಿದೆ ಅಂತ ಹೇಳಬಹುದು. ಮುಂದೆ ಗ್ಯಾನವಾಪಿ ಮಸೀದಿ ವಿಚಾರದಲ್ಲೂ ಈ ಕಥೆ ಮರುಕಳಿಸಬಹುದು. ಇಲ್ಲ ಆ ರೀತಿ ಆಗ್ಲಿಕ್ಕಿಲ್ಲ ಅಂತ ಹೇಳೋದಿಕ್ಕೆ ಯಾವ ಕಾರಣಗಳು ಉಳಿದಿವೆ ಹೇಳಿ?

ನಿಜ, ಒಂಟೆಯ ಪರಿಸ್ಥಿತಿ ಮುಸ್ಲಿಮರಿಗೆ ಮರುಕಳಿಸುವುದಿಲ್ಲ ಅನ್ನೋದಿಕ್ಕೆ ಏನು ಗ್ಯಾರಂಟಿ ಇದೆ ಹೇಳಿ?  1950ರಲ್ಲಿ ರಾಮಲಲ್ಲಾ ಪೂಜೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ರು, 1984ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು, 1986ರಲ್ಲಿ ಮಸೀದಿ ಬಾಗಿಲು ತೆರವುಗೊಳಿಸಿ, ಹಿಂದೂಗಳಿಗೆ ಪೂಜೆ ಸಲ್ಲಿಸಲು ಕೋರ್ಟ್ ಅವಕಾಶ ಮಾಡಿಕೊಡ್ತು, 1989ರಲ್ಲಿ ವಿಶ್ವ ಹಿಂದೂ ಪರಿಷತ್ನ ಆಂದೋಲನ ಆರಂಭವಾಯಿತು, ಬಾಬ್ರಿ ಮಸೀದಿ ಪಕ್ಕದಲ್ಲಿ ರಾಮಮಂದಿರಕ್ಕೆ ಅಡಿಗಲ್ಲು ಹಾಕಲಾಯಿತು. 1990ರಲ್ಲಿ ವಿಹೆಚ್ಪಿ ಕಾರ್ಯಕರ್ತರು ಮಸೀದಿಯ ಪಾರ್ಶ್ವ ಭಾಗವನ್ನು ಧ್ವಂಸಗೊಳಿಸಿದರು. 1991ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.

1992ರಲ್ಲಿ ವಿಹೆಚ್ಪಿ ಮತ್ತು ಬಿಜೆಪಿ ಕಾರ್ಯಕರ್ತರು ಕಾನೂನಿನ ವ್ಯಾಪ್ತಿಯನ್ನೂ ಮೀರಿ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ದೇಶಾದ್ಯಂತ ಗಲಭೆಗಳು ಭುಗಿಲೆದ್ದವು, ಸಾವಿರಾರು ಮುಸ್ಲಿಮರ ಮಾರಣಹೋಮವೇ ನಡೆಯಿತು. ಅಂತಿಮವಾಗಿ ಬಾಬ್ರಿ ಮಸೀದಿಗೆ ಬೇರೆ 5 ಎಕರೆ ಜಾಗ ಕೊಟ್ಟು, ಆ ಎರಡುವರೆ ಎಕ್ರೆ ಜಾಗದಲ್ಲಿ ರಾಮ ಮಂದಿರ ನಿರ್ಮಿಸುವಂತೆ ಸುಪ್ರೀಂ ಕೋರ್ಟ್ನಿಂದ ತೀರ್ಪು ಕೂಡ ಬಂತು. ಅವತ್ತು ರಾಮನ ಮೂರ್ತಿಗಳನ್ನು ಅಕ್ರಮವಾಗಿ ಪ್ರತಿಷ್ಠಾಪನೆ ಮಾಡಿದ್ದ ಕಿಡಿಗೇಡಿ ಕೃತ್ಯವನ್ನ ಸಹಿಸಿಕೊಂಡಿದ್ದ ಮುಸ್ಲಿಮರಿಗೆ, ಕೊನೆಗೆ ಸಿಕ್ಕಿದ್ದು 5 ಎಕ್ರೆ ಜಾಗ. ಅದೂ ಭಿಕ್ಷೆಯ ರೂಪದಲ್ಲಿ ಎನ್ನಬಹುದು.

ರಾಮ ಮಂದಿರ ಇದ್ದ ಜಾಗದಲ್ಲಿ ಬಾಬರ್ ಬಂದು ಮಸೀದಿ ಕಟ್ಟಿದ ಅನ್ನೋ ಕಥೆ ಕಟ್ಟಿದ ಹಾಗೆಯೇ ಗ್ಯಾನವಾಪಿ ಮಸೀದಿ ಬಗ್ಗೆ ಕೂಡಾ ಕಟ್ಟಿದ್ದಾರೆ. ಬನಾರಸ್ರಲ್ಲಿದ್ದ ಶಿವನ ದೇವಾಲಯವನ್ನು 1669ರಲ್ಲಿ ಮೊಘಲ ದೊರೆ ಔರಂಗಜೇಬ್ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಿಸಿದ ಅನ್ನೋದು ಈಗ ಸಕತ್ ಟ್ರೆಂಡ್ನಲ್ಲಿರುವ ಕಥೆ. ಔರಂಗಜೇಬ್ ಮಸೀದಿ ನಿರ್ಮಿಸಿದ ಅನ್ನೋದಂತೂ ಸತ್ಯವೇ. ಆದ್ರೆ ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ ಅನ್ನೋದಿಕ್ಕೆ ಸಾಕ್ಷಿ ಏನಿದೆ ಅಂತ ಕಂಡ ಕಂಡಲ್ಲಿ ಲಿಂಗ ಹುಡುಕಲು ಟೆಂಡರ್ ತೆಗೆದುಕೊಂಡಿರುವವರೇ ಹೇಳಬೇಕು. ಬಾಬ್ರಿ ಮಸೀದಿಯಂತೆ 1991ರಲ್ಲಿ ಸ್ಥಳೀಯ ಬ್ರಾಹ್ಮಣ ಅರ್ಚಕನೊಬ್ಬ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಡುವಂತೆ ಕೇಳಿ ಅಲಹಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆಗ ಆ ಅರ್ಚಕನಿಗೆ ಛೀಮಾರಿ ಹಾಕಿದ ನ್ಯಾಯಾಲಯ. 1936ರಲ್ಲಿ ಇದೇ ವಿವಾದದ ಕುರಿತು ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಈ ಜಾಗ ಮೂವರು ಮುಸ್ಲಿಮರಿಗೆ ಮಾತ್ರ ಸೇರಿದ್ದು ಅಂತ ಮತ್ತೊಮ್ಮೆ ಹೇಳಿತ್ತು.

ಅಲ್ಲಿಗೆ ಮನುವಾದಿ ಸಂಘಟನೆಗಳು ಬಾಲ ಮುದುರಿಕೊಂಡು ಬಿದ್ದಿದ್ದವು. ಆದ್ರೆ 2019ರಲ್ಲಿ ಬಾಬ್ರಿ ಮಸೀದಿಗೆ ವಿರೋಧವಾಗಿ ತೀರ್ಪು ಬಂತು ನೋಡಿ, ಬಾಲ ಮುದುರಿಕೊಂಡು ಬಿದ್ದಿದ್ದವರು ಮತ್ತೆ ಚಿಗುರಿಕೊಂಡು, ಮಥುರಾದಲ್ಲಿರುವ ಈದ್ಗಾ, ಮತ್ತು ಬನಾರಸ್ನಲ್ಲಿರುವ ಗ್ಯಾನವಾಪಿ ಮಸೀದಿ ಕೂಡಾ ಹಿಂದೂಗಳ ದೇವಸ್ಥಾನ ಕೆಡವಿ ಕಟ್ಟಿದ ಮಸೀದಿಗಳು ಅಂತ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಬಿಟ್ಟರು ನೋಡಿ. ಅಲ್ಲಿಂದ ಸರ್ವೇ ಅಂತೆ, ಪೂಜೆಗೆ ಅವಕಾಶ ಅಂತೆ, ಕಂಡ ಕಂಡಲ್ಲಿ ಲಿಂಗ ಹುಡುಕೋದಂತೆ, ಹಿಂದೂ ಭೂಮಿ ಅಂತ ಘೋಷಿಸಬೇಕಂತೆ. ಹಾಲಿವುಡ್ನ ಹಾರರ್ ಮೂವಿಗಳನ್ನೂ ಮೀರಿಸುವಂತ ಖತರ್ನಾಕ್ ಡ್ರಾಮಗಳನ್ನು ಶುರು ಮಾಡಿ ಬಿಟ್ಟರು. ಅದರ ಪರಿಣಾಮ ಪೂಜೆ ಸಲ್ಲಿಸಲು ಕೋರಿ ಸಲ್ಲಿಸಿದ ಅರ್ಜಿ ಇವತ್ತು ಮಾನ್ಯವಾಗಿ ಬಿಟ್ಟಿದೆ. ಇದರಿಂದ ದೇಶದಲ್ಲಿ ಮುಂದೆ ಅದೆಷ್ಟು ಅವಘಡಗಳು ಸಂಭವಿಸಬಹುದೋ ಅಂತ ನೆನೆಸಿಕೊಂಡರೇ ಎದೆ ನಡುಗುತ್ತದೆ.

ಸ್ವಾಮಿ, ಈ ದೇಶದ ಜನರಿಗೆ ಬೇಕಾಗಿರೋದು ಮಂದಿರವಲ್ಲ, ಮಸೀದಿಯಲ್ಲ, ನೆಮ್ಮದಿ ಬೇಕು, ಶಾಂತಿ ಬೇಕು. ಉಳ್ಳವರು ಶಿವಾಲಯವ ಮಾಡುವರು/ನಾನೇನು ಮಾಡಲಿ ಬಡವನಯ್ಯ/ ಎನ್ನ ಕಾಲೇ ಕಂಬ/ ದೇಹವೇ ದೇಗುಲ? ಶಿರವೇ ಹೊನ್ನ ಕಳಸವಯ್ಯ ಕೂಡಲಸಂಗಮದೇವ ಅನ್ನೋ ಬಸವಣ್ಣನವರ ವಚನದ ಅನುಸಾರ ಎಲ್ಲರೂ ಬದುಕಿದರೂ ಸಾಕು. ಯಾವ ಮತಧರ್ಮಗಳ ಜಗಳಗಳು ಇಲ್ಲಿ ನಡೆಯುವುದಿಲ್ಲ. ನಮ್ಮ ಯುವಕರಿಗೆ ಬೇಕಿರುವುದು ಉದ್ಯೋಗ, ನೌಕರಿ, ಸಂಬಳ ಮನೆ, ಆಸ್ತಿ ಪಾಸ್ತಿಯೇ ಹೊರತು, ಪಕೋಡಾ ಮಾರಿ ಧರ್ಮ ರಕ್ಷಣೆಗಾಗಿ ಪುಡಾರಿಗಳಂತೆ ಕಾಂಪೌಂಡ್ ಹಾರಿ ಮಸೀದಿ ಕೆಡುವುವ ಗೂಂಡಾಗಿರಿ ಅಲ್ಲ. ಆದ್ರೆ ರಾಜಕಾರಣಿಗಳಿಗೆ ಬೇಕಿರುವುದು ವೋಟ್ ಮಾತ್ರ. ಆ ವೋಟುಗಳನ್ನು ಧರ್ಮ ರಾಜಕಾರಣ ತಂದುಕೊಡಬಲ್ಲುದು ಅನ್ನೋದು ರಾಜಕಾರಣಿಗಳ ಬಲವಾದ ನಂಬಿಕೆ. ಈ ನಂಬಿಕೆ ದೇಶಕ್ಕೆ ಅದೆಷ್ಟು ಮಾರಕ ಅನ್ನೋದನ್ನ ಭಾರತದ ಪ್ರಜೆಗಳು ಅರ್ಥ ಮಾಡಿಕೊಂಡರೆ ಸಾಕು.

-ಕನ್ನಡ ಒನ್‌ ನ್ಯೂಸ್‌ ಬಳಗ© Copyright 2022, All Rights Reserved Kannada One News