ಹೆಂಗ್ಪುಂಗ್ಲಿಯ ಚಿನ್ನದ ರಸ್ತೆಗಳು ಮತ್ತು ನಿರ್ದಯಿ ಸಂಸದ ತೇಜಸ್ವಿ ಸೂರ್ಯ!: ಎಡಿಟರ್ ಸ್ಪೆಶಲ್

ಹೆಂಗ್ಪುಂಗ್ಲಿಯ ಚಿನ್ನದ ರಸ್ತೆಗಳು ಮತ್ತು ನಿರ್ದಯಿ ಸಂಸದ ತೇಜಸ್ವಿ ಸೂರ್ಯ!: ಎಡಿಟರ್ ಸ್ಪೆಶಲ್

Updated : 07.09.2022

ಬೆಂಗಳೂರು ಅಕ್ಷರಶಃ ಮುಳುಗುತ್ತಿದೆ. ಎಲ್ಲೆಲ್ಲೂ ಮಳೆ, ಮಳೆ ಮತ್ತು ಮಳೆ ಅಷ್ಟೇ. ಇವೇನು ರಸ್ತೆಗಳೋ, ಕೆರೆಗಳೋ ಎಂಬಂಥ ದುಃಸ್ಥಿತಿಯಲ್ಲಿ ಬೆಂಗಳೂರು ನಲುಗುತ್ತಿದೆ. ಕೆಂಪೆಗೌಡರು ಬೆಂಗಳೂರನ್ನು ನಿರ್ಮಿಸಿದಾಗ ಇಲ್ಲಿ ಬರೋಬ್ಬರಿ  2,200 ಕೆರೆಗಳಿದ್ದವು. ಇಂದು 20 ಕೆರೆಗಳು ಇದ್ದಾವೋ ಇಲ್ಲವೋ... ಕೆರೆಗಳು ಇದ್ದ ಜಾಗಗಳಲ್ಲಿ ಲೇಔಟ್ಗಳು, ಶಾಪಿಂಗ್ ಮಾಲ್ಗಳು, ಬಸ್ ನಿಲ್ದಾಣಗಳು, ಕಾರ್ಖಾನೆಗಳು ತುಂಬಿಹೋಗಿವೆ. ಒಂದೆರಡಿಂಚು ಹೆಚ್ಚಿನ ಮಳೆ ಬಂದರೆ, ಅದು ಹರಿದುಹೋಗಲು ತಾವಿಲ್ಲದೆ, ಮನುಷ್ಯ ಕಟ್ಟಿದ ಐಭೋಗಳ ಮೇಲೆ ನಿಂತು, ಪ್ರಕೃತಿಯ ಮುಂದೆ ಮನುಷ್ಯನೆಷ್ಟು ಕುಬ್ಜನೆಂಬುದನ್ನು ತೋರಿಸುತ್ತಿದೆ.

ಹೌದು, ಪ್ರಕೃತಿಯ ಮುಂದೆ ಮನುಷ್ಯ ತೀರಾ ಕುಬ್ಜ. ಅಗಾಧವಾದ ಈ ಜಗತ್ತಿನಲ್ಲಿ ಭೂಮಿಗಿಂತಲೂ ಸಾವಿರಾರು ಪಟ್ಟು ದೊಡ್ಡದಾದ ಕಾಯಗಳು ಬೇಕಾದಷ್ಟಿವೆ. ಆದರೂ ಆ ಕಾಯಗಳಿಗೆ ಭೂಮಿಯೇ ಸ್ಪೆಶಲ್. ಏಲ್ಲಾ ಕಾಯಗಳದ್ದು ಒಂದು ತೂಕವಾದರೆ, ಭೂಮಿಯದ್ದೇ ಮತ್ತೊಂದು ತೂಕ. ಯಾಕೆಂದರೆ, ಭೂಮಿಯಲ್ಲಿ ಜೀವಜಂತುಗಳಿವೆ, ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಮನುಷ್ಯನಿದ್ದಾನೆ. ಮನುಷ್ಯನಿದ್ದಾನೆ ಅಂದರೆ ಮುಗೀತಲ್ಲ... ಅದು ಸ್ಪೆಶಲ್ಲೇ ಆಗಬೇಕು ಅಲ್ವ? ಅವನು ಹೆಜ್ಜೆ ಇಟ್ಟಲ್ಲೆಲ್ಲಾ ಅಭಿವೃದ್ಧಿ, ಅವನು ಕೈ ಇಟ್ಟಲ್ಲೆಲ್ಲಾ ಅಭಿವೃದ್ಧಿ, ಅವನು ಕಣ್ಣಿಟ್ಟಲ್ಲೆಲ್ಲಾ ಅಭಿವೃದ್ಧಿ... ಅವನು ಮಾಡಿರುವ ಅಭಿವೃದ್ಧಿಯ ಮಹಾಪೂರದ ಫಲವನ್ನು ಇವತ್ತು ಜಗತ್ತೇ ಉಣ್ಣುತ್ತಿದೆ. ಎಂಥ ಅಭಿವೃದ್ಧಿ ಅಂತೀರ? ಕಳೆದ 10 ವರ್ಷಗಳಲ್ಲಿ ಶೇಕಡಾ 35ರಷ್ಟು ಕಾಡು ನಾಶ, ಶೇಕಡಾ 60ರಷ್ಟು ವ್ಯವಸಾಯ ಭೂಮಿ ನಾಶ, ಶೇಕಡಾ 60ರಷ್ಟು ಕುಡಿಯುವ ನೀರಿನ ಮೂಲಗಳ ನಾಶ ಅಂದರೆ, ನದಿ ಮೂಲಗಳ ಕಣ್ಮರೆ! ಶೇಕಡಾ 70ರಷ್ಟು ವನ್ಯಜೀವಿಗಳು ಕಣ್ಮರೆ, ಅಳಿವಿನಂಚಿನಲ್ಲಿ ಜೀವ ಉಳಿಸಿಕೊಂಡಿದ್ದ ದೊಡ್ಡ ಪಕ್ಷಿ ಸಂಕುಲಗಳಿಂದ ಹಿಡಿದು, ವಿವಿಧ ರೀತಿಯ ಜೇನು ನೊಣಗಳ ಕಣ್ಮರೆ. ನಿಮಗೆ ತಿಳಿದಿರಲಿ, ಮನುಷ್ಯ ಕಣ್ಮರೆಯಾದರೆ ಭೂಮಿಯ ರೋಮವೇನೂ ಅಲ್ಲಾಡದು, ಅರ್ಧ ಅಂಗುಲಕ್ಕೂ ಕಡಿಮೆ ಇರುವ ಜೇನು ನೊಣಗಳು ಈ ಭೂಮಿಯಿಂದ ಸಂಪೂರ್ಣವಾಗಿ ಕಣ್ಮರೆಯಾಗಿಬಿಟ್ಟರೆ, ಕೆಲವೇ ವರ್ಷಗಳಲ್ಲಿ ಭೂಮಿ ಅಕ್ಷರಶಃ ಮರುಭೂಮಿಯಾಗುವುದು ಖಚಿತ...

ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇನೆಂದರೆ, ಇಂದು ಜಗತ್ತಿನಾದ್ಯಂತ ಆಗುತ್ತಿರುವ ಅಗಾಧ ಮಳೆಗೆ ನೇರ ಕಾರಣ ಮನುಷ್ಯ. ಬೇಕಾಬಿಟ್ಟಿಯಾಗಿ ಕೈಗಾರಿಕೆ, ಕಾರ್ಖಾನೆಗಳನ್ನು ಸ್ಥಾಪಿಸಿ ವಾತಾವರಣವನ್ನು ಕೆಡಿಸಿಬಿಟ್ಟ. ಪೆಟ್ರೋಲ್ ವಾಹನಗಳು ಪ್ರತೀ ಲೀಟರ್ಗೆ 1.6 ಕೇಜಿ ಅತೀ ಸೂಕ್ಷ್ಮ ಟಾಕ್ಸಿಕ್ ಕಾರ್ಬನ್ ಅನ್ನು ವಾತಾವರಣಕ್ಕೆ ಉಗುಳುತ್ತವಂತೆ. ಇನ್ನು ವ್ಯವಸಾಯವನ್ನು ಆಧುನಿಕರಣಗೊಳಿಸುವ ಹುಚ್ಚಿನಲ್ಲಿ ಭೂಮಿಗೆ ವಿಷವನ್ನು ಹಾಕಿಬಿಟ್ಟ... ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿದ ಪರಿಣಾಮ ಎಲ್ಲದರಲ್ಲೂ ಪ್ಲಾಸ್ಟಿಕ್ನದ್ದೇ ಕಾರುಬಾರು. ಅವನು ಫ್ಯಾಕ್ಟರಿ ಸ್ಥಾಪಿಸಲು ನದಿ ಪಾತ್ರದ ಅಥವಾ ಒಳ್ಳೆಯ ಅಂತರ್ಜಲ ಸೂಸುವ ಭೂಮಿಯೇ ಆಗಬೇಕು. ಹಸಿವನ್ನು ನೀಗಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಹಸಿರು ಕ್ರಾಂತಿ ಮಾಡುತ್ತೇವೆಂದು ಮಾಡಿದ್ದೇನೆಂದು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.

ಒಂದು ಎಕರೆ ಭೂಮಿಯಲ್ಲಿ ಹತ್ತೋ, ಹನ್ನೆರಡು ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದ ಮನುಷ್ಯ, ಇಂದು 50 ಟನ್ ಬೆಳೆಯಲು ನಿಂತ. ಅದರಿಂದ ನಿಜಕ್ಕೂ ಹಸಿವು ನೀಗಿಬಿಡ್ತಾ? ನೀವು ಡಯಟ್ ಮಾಡುವವರಾಗಿದ್ದರೆ, ರಾಗಿ ಕೂಡಾ ನಿಮ್ಮ ಡಯಟ್ ಆಹಾರದಿಂದ ದೂರವಿರುವುದನ್ನು ಗಮನಿಸಿಯೇ ಇರುತ್ತೀರಿ... ಇದಕ್ಕೆಲ್ಲಾ ಕಾರಣವೇನೆಂದು ಹುಡುಕಿದರೆ, ಅದು ಹೋಗಿ ನಿಲ್ಲುವುದು ಮನುಷ್ಯನ ಅನಗತ್ಯ ಅನ್ವೇಷಣೆ ಅಥವಾ ಮನುಷ್ಯನ ಆಸೆಬುರುಕತನದ ಬುಡಕ್ಕೆ! ಹೌದು, 10 ಕ್ವಿಂಟಾಲ್ ರಾಗಿ ಬೆಳೆಯುವ ಭೂಮಿಯಲ್ಲಿ 50 ಕ್ವಿಂಟಾಲ್ ಬೆಳೆಯುತ್ತಾನೆಂದರೆ ಹಸಿವು ಇರಬಾರದು ಅಲ್ಲವ? ಆದರೂ ದಿನವೊಂದಕ್ಕೆ ಸರಾಸರಿ 30 ಸಾವಿರ ಜನರು ಹಸಿವಿನಿಂದ ಸಾಯುತ್ತಿದ್ದಾರಲ್ಲ ಯಾಕೆ? ದಿನವೂ ಅಪೌಷ್ಟಿಕತೆಯಿಂದ ಸರಾಸರಿ 1 ಲಕ್ಷ ಜನರು ಸಾಯುತ್ತಿರುವುದಾದರೂ ಯಾಕೆ ಸ್ವಾಮಿ? ಇವೆಲ್ಲಾ ಕಾರಣಗಳಿಂದ ಭೂಮಿ ಬರಡಾಗಿಬಿಟ್ಟಿದೆ. ಎಂಥ ಕಾಂಪೋಸ್ಟ್ ಗೊಬ್ಬರ ಹಾಕಿದರೂ ಒಂದೇ ಒಂದು ಹುಲ್ಲುಕಡ್ಡಿ ಬೆಳೆಯಲಾರದಷ್ಟು ನಿರ್ಜೀವವಾಗಿ ಬಿಟ್ಟಿದೆ ಈ ಭೂಮಿ...

ಇನ್ನು ಇಂದಿನ ವಿಷಯಕ್ಕೆ ಬರೋದಾದರೆ, ಸಾವಿರಾರು ಕೆರೆಗಳಿಂದ, ಹಚ್ಚ ಹಸರಡುವಂತೆ ಕಂಗೊಳಿಸುತ್ತಿದ್ದ ಬೆಂಗಳೂರಿಗೆ ಈ ದುಃಸ್ಥಿತಿ ಬಂದಿದ್ದಾದರೂ ಯಾರಿಂದ? ಬೀಳುವ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಅಥವಾ ಭೂಮಿಯಲ್ಲಿ ಇಂಗಿಹೋಗಲು ಬೆಂಗಳೂರಿನಲ್ಲಿ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆಯಲ್ಲ ಯಾಕೆ? ಮಳೆ ಬಂದಾಗ ಜನ ಜೀವ ಹಿಡಿದು ಬದುಕುವ ಧಾರುಣತೆಯನ್ನು ತಂದವರಾದರೂ ಯಾರು? ಬಿಜೆಪಿಯನ್ನು ಕೇಳಿದರೆ, ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತದೆ, ಕಾಂಗ್ರೆಸ್ ಬಿಜೆಪಿಯತ್ತ ಬೆರಳು ತೋರಿಸುತ್ತಿದೆ. ಅಸಲೀ ಕಾರಣ ಯಾರು? ನೇರವಾಗಿ ಹೇಳಬೇಕೆಂದರೆ ಇಲ್ಲಿನ ಜನರ ಮನಸ್ಥಿತಿ.

ಹೌದು... ಇಲ್ಲಿನ ಜನ ತಮಗಿದ್ದ ಅಲ್ಪಸ್ವಲ್ಪ ಜಮೀನನ್ನು ಉತ್ತರಭಾರತೀಯರಿಗೆ, ರಿಯಲ್ ಎಸ್ಟೇಟ್ ಉದ್ಯಮದವರಿಗೆ, ಬಿಲ್ಡರ್ಗಳಿಗೆ ಜುಜುಬಿ ಕಾಸಿಗೆ ಕೊಟ್ಟುಬಿಟ್ಟರು. ಹುಟ್ಟಿದ ಊರನ್ನೇ ನೆಟ್ಟಗೆ ಇಟ್ಟುಕೊಳ್ಳದ ಅವರಿಗೆ ಬೆಂಗಳೂರಿನ ಇನ್ಫ್ರಾಸ್ಟಕ್ಚರ್ ಕಟ್ಟಿಕೊಂಡು ಏನಾಗಬೇಕಿದೆ... ಅಡ್ಡಾದಿಡ್ಡಿ ಬಿಲ್ಡಿಂಗ್ಗಳನ್ನು, ಲೇಔಟ್ಗಳನ್ನು ಕಟ್ಟಿದರು, ಸಾಕಷ್ಟು ದುಡ್ಡು ಮಾಡಿಕೊಂಡು, ಜಾಗ ಖಾಲಿ ಮಾಡಿದರು. ತಿನ್ನುವುದರಲ್ಲಿ, ಉಡುವುದರಲ್ಲಿ ಉಳಿಸಿ ಸಣ್ಣದೊಂದು ನಿವೇಶನ ತೆಗೆದುಕೊಂಡು, ಮನೆ ಕಟ್ಟಿಕೊಂಡ ಜನ ಇಂದು ನೀರಿನಲ್ಲಿ ಅಕ್ಷರಶಃ ಬಂಧಿಯಾಗಿದ್ದಾರೆ. ಇವರ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಬೇಕಿದ್ದ ಸಂಸದ ಇನ್ಸ್ಟಾಗ್ರಾಂನಲ್ಲಿ ಮಸಾಲೆ ದೋಸೆ ನೋಡಿ, ಟೆಂಪ್ಟ್ ಆಗಿ ವಿಡಿಯೋ ಮಾಡುತ್ತಿರುವುದು ಈ ಜನಗಳ ದೌರ್ಭಾಗ್ಯವೋ, ಆ ಸಂಸದನ ನಿರ್ಲಜ್ಜತನವೋ?

ನೋಡಿದ್ರಲ್ಲ... ಜನಾ ಆ ಕಡೆಗೆ ಮಳೆಯಿಂದ ತತ್ತರಿಸುತ್ತಿದ್ದರೆ, ಈ ನಿರ್ದಯೀ ಸಂಸದ ಮಸಾಲೆ ದೋಸೆಯನ್ನು ಮೆಲ್ಲುತ್ತಿರುವ ಚೆಂದವ... ಅಜ್ಜಿಗೆ ಹರಿವೆ ಚಿಂತೆಯಾದರೆ ಮಗಳಿಗೆ ಮಿಂಡಗಾರನ ಚಿಂತೆಯಂತೆ! ಅಂತ ನಮ್ಮ ಹಳ್ಳಿಯ ಜನಾ ಅಂತಾರಲ್ಲ... ಹಂಗಾಯ್ತು ಈತನ ಮನಸ್ಥಿತಿ... ಯಾರು ಹೇಗಾದರೂ ಹಾಳು ಬಿದ್ದೋಗಲಿ, ಈತ ಮಾತ್ರ ಮಸಾಲೆ ದೋಸೆ ತಿನ್ನಬೇಕು, ಸೈಕಲ್ ಮೇಲೆ ಸಿಟಿ ರೌಂಡ್ ಶೋಅಪ್ ಹೊಡೆಯಬೇಕು! ಏನ್ರೀ ಇವರ ಶೋಕಿ ಜೀವನ! ಯಥಾ ಗುರು, ತಥಾ ಶಿಷ್ಯ! ಅಲ್ವ..? ಮೊನ್ನೆತಾನೇ ಛತ್ತೀಸ್ಘಡ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಅತಿ ಹೆಚ್ಚಾಗಿದೆ ಎಂದು ಗಲಾಟೆ ಮಾಡಲು ಹೋಗಿ ಉಗಿಸಿಕೊಂಡಿದ್ದಲ್ಲದೆ, ಅದಕ್ಕೂ ಹಿಂದೆ, ದೆಹಲಿ ಮುಖ್ಯಮಂತ್ರಿಯ ಮನೆಯ ಮೇಲೆ ಥೇಟ್ ಗೂಂಡಾ ರೀತಿ ಅಟ್ಯಾಕ್ ಮಾಡಲು ಹೋಗಿ ಕೇಸು ಜಡಿಸಿಕೊಂಡಿರುವ ಈ ತೇಜಸ್ವಿ ಸೂರ್ಯ ಎಂಬ ಸಂಸದನಿಗೆ ಕರ್ನಾಟಕದ ಸಮಸ್ಯೆಗಳನ್ನು ಕುರಿತು ಮಾತನಾಡಲು ಬಾಯಿ ಬರುವುದೇ ಇಲ್ಲ... ಕರ್ನಾಟಕದಲ್ಲೇ ನಾಲ್ಕು ಪರ್ಸೆಂಟ್ ನಿರುದ್ಯೋಗ ಪ್ರಮಾಣವಿದ್ದರೂ, ಛತ್ತೀಸ್ಘಡದ 0.3 ಪರ್ಸೆಂಟ್ ನಿರುದ್ಯೋಗದ ಬಗ್ಗೆ ಎಲ್ಲಿಲ್ಲದ ಕಾಳಜಿ.

ಕರ್ನಾಟಕದ್ದೇ 50 ಪರ್ಸೆಂಟ್ಗೂ ಮೀರಿದ ರಣಭ್ರಷ್ಟಾಚಾರವಿದ್ದರೂ ಬಿಜೆಪಿಯೇತರ ರಾಜ್ಯಗಳ ಸಾಸಿವೆ ಕಾಳಿನ ಭ್ರಷ್ಟಾಚಾರದ ಮೇಲೆ ಕಡುಕೋಪ... ಬಹುಶಃ ಬಿಜೆಪಿ ಮಾತ್ರ ಭ್ರಷ್ಟಾಚಾರ ಮಾಡಿಕೊಂಡಿರಬೇಕು, ಬೇರೆ ರಾಜ್ಯಗಳು ಅಭಿವೃದ್ಧಿ ಮಾತ್ರ ಮಾಡಿಕೊಂಡಿರಲಿ ಎಂಬ ಅನನ್ಯವಾದ ಸಹೃದಯತೆ ಈತನಿಗೆ ಒಲಿದಿರಬೇಕು. ಅಲ್ರೀ ತೇಜಸ್ವೀ ಸೂರ್ಯ... ನೀವೇನು ಸಂಸದನೋ, ಗೂಂಡಾನೋ? ಡಬಲ್ ಎಂಜಿನ್ ಸರ್ಕಾರ ಮಾಡುತ್ತಿರುವ ಎಡವಟ್ಟುಗಳನ್ನು ಪ್ರಶ್ನಿಸಿ, ನಲುಗುತ್ತಿರುವ ಜನಕ್ಕೆ ನ್ಯಾಯ ಒದಗಿಸಬೇಕಾದ ನೀವು, ಬೀದಿ ದನದಂತೆ ಬೇರೆ ರಾಜ್ಯಗಳಲ್ಲಿ ಗಲಭೆ ಎಬ್ಬಿಸುತ್ತೀರಲ್ಲ... ಯಾಕೆ, ಇಲ್ಲಿನ ನಿಮ್ಮದೇ ಪಕ್ಷದ ಮುಖ್ಯಮಂತ್ರಿಯಾದಿಯಾಗಿ, ಎಲ್ಲ ಮಂತ್ರಿಗಳು ಮಾಡುತ್ತಿರುವ ಅವಾಂತರಗಳನ್ನು ಕೇಳವ ಗುಂಡಿಗೆ ಇಲ್ಲವ? ಅದನ್ನು ಎಷ್ಟಕ್ಕೆ ಅಡವಿಟ್ಟಿದ್ದೀರಿ ಹೇಳ್ರೀ? ಜನಾ ಸಾಯ್ತಿದ್ದಾರೆ, ಬೆಂಗಳೂರಿನ ಸಹವಾಸವೇ ಬೇಡ ಅಂತ ಅನೇಕ ಉದ್ಯಮಗಳು ಕಾಲು ಕೀಳಲು ರೆಡಿಯಾಗಿ ನಿಂತಿದ್ದಾರೆ. ನಿಮ್ಮ, ನಿಮ್ಮ ಪಕ್ಷದ ರಕ್ತಪಿಪಾಸುತನದ ವ್ಯಸನವನ್ನು ಸೈಡಿಗಿಟ್ಟು ಜನರ ಕಷ್ಟಕ್ಕೆ ನಿಂತು, ಓಟು ಹಾಕಿದ ಅವರ ಋಣವನ್ನು ಸ್ವಲ್ಪವಾದರೂ ತೀರಿಸಿ... ನೀವು ತಿನ್ನುವ ಮಸಾಲೆ ದೋಸೆಗೆ ಜನರ ಕಣ್ಣೀರನ್ನೂ ಸೇರಿಸಿ ಚಪ್ಪರಿಸುವ ನೀಚತನ, ನಿರ್ದಯಿತನ ತೋರಿಸಬೇಡಿ... ಇದು ಸಾಲದೆಂಬಂತೆ ಆರ್ ಅಶೋಕ್ ಎಂಬ ಕಂದಾಯ ಸಚಿವ, ನಿನ್ನೆ ರಾತ್ರಿ ಮುಖ್ಯಮಂತ್ರಿಗಳ ಎಮೆರ್ಜೆನ್ಸಿ ಮೀಟಿಂಗ್ನಲ್ಲಿ ಹೇಗ್ ನಿದ್ದೆ ಹೊಡೀತಿದ್ದಾರೆ ನೋಡ್ರೀ...

ಸದಾಕಾಲ ಮುಸ್ಲಿಂ ಮತ್ತು ದಲಿತರ ದ್ವೇಷವನ್ನು ತಲೆಗೆ ತುಂಬಿಕೊಂಡು, ತ್ರಿಶೂಲ ಕೊಟ್ಟು, ಶೂದ್ರ ದಲಿತ ಹುಡುಗರು ಜೈಲು ಸೇರುವಂತೆ ಮಾಡಿದ ಕುಕೃತ್ಯಗಳು ಒಂದೆಡೆಯಾದರೆ ಚಕ್ರವರ್ತಿ ಸೂಲಿಬೆಲೆ ಎಂಬ ಸುಳ್ಳಿನ ಏಜೆಂಟ್ ಪುಂಗಿದ ಕತೆಗಳಿಗೆ ಕೊನೆಯೇ ಇಲ್ಲ...

ಇಂಥ ಅದ್ವಾನ ರಸ್ತೆಗಳನ್ನು ಚಿನ್ನದ ರಸ್ತೆಗಳು ಎಂದು ಪುಂಗುವ ಈತನಿಗೆ ಬಡಿದಿರುವ ರೋಗವಾದರೂ ಏನು ಸ್ವಾಮಿ? ಆಡಳಿತ ಪಕ್ಷಗಳ ಎಂಜಲು ತಿನ್ನಬೇಕು... ಆದರೆ, ಈ ಮಟ್ಟಿಗೆ ಅಮೇಧ್ಯವನ್ನೇ ತಿನ್ನುವ ಕೆಲಸಕ್ಕೆ ಕೈ ಹಾಕಲೇಬಾರದು... ಚಕ್ರವರ್ತಿ ಸೂಲಿಬೆಲೆ ಮಾಡಿರುವುದು ಅಂತಹುದೇ ಕೆಲಸವನ್ನು. ಮೋದಿಯವರು ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದರೆ, ಅದು ಇದ್ದಂತೆಯೇ ತೋರಿಸಿ ಹೇಳಲಿ... ಅದನ್ನು ಬಿಟ್ಟು ಹೀಗೆಲ್ಲಾ ಪುಂಗುವುದರಿಂದ ಚಕ್ರವರ್ತಿಗೆ ಇನ್ನೋವಾ ಕ್ರಿಸ್ಟಾ ಕಾರು ಸಿಗಬಹುದು, ಅದನ್ನು ಮೇಂಟೇನ್ ಮಾಡಲು ಕಾಸು ಸಿಗಬಹುದು, ಟೂರ್ ಹೊಡೆಯಲು ಏರ್ ಟಿಕೆಟ್ ಸಿಗಬಹುದು... ಅದರಿಂದ ಬಡವರಿಗೆ ಬಂದ ಭಾಗ್ಯವೇನು? ಅವರೇ ಹೇಳುವ ಅಖಂಡ ಭಾರತಕ್ಕೆ ಸಿಗುವ ಲಾಭವೇನು? ಯಾಕಾಗಿ ಇಷ್ಟೊಂದು ಪುಂಗಬೇಕು ಸುಳ್ಳಿನ ಚಕ್ರವರ್ತಿಗಳೇ...? ನಿಮ್ಮ ಸುಳ್ಳು-ಪುರುಕು ಹೇಳಿಕೆಗಳನ್ನು ವಾಟ್ಸಾಪಿನಲ್ಲಿ ಹಂಚುವ ಜನಗಳೇ ಒಂದಲ್ಲಾ ಒಂದು ದಿನ ನಿಮ್ಮನ್ನು ಅಟ್ಟಾಡಿಸಿ ಹೊಡೆಯುತ್ತಾರೆ... ಎಚ್ಚರವಿರಲಿ... ಯಾಕೆಂದರೆ ಚಪ್ಪಾಳೆಗಳಿಂದ ಹುಟ್ಟಿದವನು, ಚಪ್ಪಾಳೆ ತಟ್ಟಿದ ಕೈಗಳಿಂದಲೇ ಇಲ್ಲವಾಗುತ್ತಾನೆಂಬುದು ವಿಧಿಲಿಖಿತ ನಿಯಮ... ನೋಡ್ತಾಇರಿ ಸಮಸಮಾಜಕ್ಕಾಗಿ ಕನ್ನಡ ಒನ್ ನ್ಯೂಸ್...

© Copyright 2022, All Rights Reserved Kannada One News