ಅಯ್ಯೋ ಡಾ. ಶಿವ ಶಿವಾ..!: ಎಡಿಟರ್ ಸ್ಪೆಷಲ್

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಅಯ್ಯೋ ಡಾ. ಶಿವ ಶಿವಾ..!: ಎಡಿಟರ್ ಸ್ಪೆಷಲ್

Updated : 28.08.2022

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ

ಗೆಳೆಯರೇ.. ಖಾವಿಧಾರಿಗಳ ಕುರಿತು ಏನ್ ಹೇಳೋದು ಬಿಡಿ. ಹಾಗೂ ಇದ್ದಾರೆ ಹೀಗೂ ಇದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಕ್ಷಾಂತರ ಮಕ್ಕಳಿಗೆ, ಜಾತಿ ಮತ-ಧರ್ಮದ ಭೇದವಿಲ್ಲದೆ, ಅನ್ನ, ವಿದ್ಯೆ ದಾನ ಮಾಡಿದರೆ, ಕೂಡಲ ಸಂಗಮದ ಶ್ರೀ ಬಸವ ಮೃತ್ಯುಂಜಯ ಶ್ರೀಗಳು ಇವತ್ತಿಗೂ ನಾಡಿನಲ್ಲಿ ಸೌಹಾರ್ದತೆಗಾಗಿ ಶ್ರಮಿಸುತ್ತಿದ್ದಾರೆ. ಇನ್ನೂ ಬಿಜಾಪುರದ ಸಿದ್ದೇಶ್ವರ ಸ್ವಾಮಿ ನರಹಂತಕರ ಪರ ಮಾತನಾಡಿದರೆ, ರಿಷಿಕುಮಾರನಂತ ನಾಲಾಯಕ್ ಸ್ವಾಮಿಯೊಬ್ಬ ಸದಾ ಇನ್ನೊಂದು ಧರ್ಮದವರ ವಿರುದ್ಧ ಕೊಚ್ಚು ಕೊಲ್ಲು ಅಂತ ಹೊಯ್ಕೊಂಡಿದ್ದೆ ಹೊಯ್ಕೊಂಡಿದ್ದು. ಮತ್ತೊಂದೆಡೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮಿಯ ಕಾಮಪುರಾಣ. ಇದೀಗ ಅಂತಹದೇ ಕಾಮಾಂಧತೆ ತುಂಬಿಕೊಂಡಿದ್ದ ದಿ ಗ್ರೇಟ್ ಖಾವಿಧಾರಿಯೊಬ್ಬನ ಕಾಮಕಥೆ ಬೆಳಕಿಗೆ ಬಂದಿದೆ. ಅದು ಬೇರಾರು ಅಲ್ಲ –ಅದುವೇ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮಿ.ಹೌದು, ಮುರುಘಾ ಮಠದ ಶಿವಮೂರ್ತಿ ವ್ಯಾಘ್ರನಂತೆ ವರ್ತಿಸುತ್ತಾನೆ ಅಂತ ಸ್ವತಃ ನೊಂದ ಮಕ್ಕಳೇ ದೂರು ದಾಖಲಿಸಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಹೆಚ್ಚಾಗಿ ಬಡವರ, ಅನಾಥ, ನಿರ್ಗತಿಕ ಮಕ್ಕಳೇ ತುಂಬಿಕೊಂಡಿರುತ್ತಾರೆ. ಇಲ್ಲಿಯವರೆ ಅದೊಂದು ಅನಾಥರ ಪಾಲಿನ ಆಶ್ರಯ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಇದೀಗ ಆ ಮಠದಲ್ಲಿ ರಕ್ಷಣೆಯ ಹೆಸರಲ್ಲಿ ಹೆಣ್ಣುಮಕ್ಕಳ ಭಕ್ಷಣೆ ಆಗ್ತಿದೆ ಅನ್ನೋದು ಜಗಜ್ಜಾಹೀರಾಗಿದೆ. ಮುರುಘಾ ಮಠದ ಡಾ. ಶಿವಮೂರ್ತಿಗಳೇ, ನೀವೆ ಸಾಕಿದ ಮಕ್ಕಳನ್ನು ಕಾಮಾಂಧತೆಯ ಕಣ್ಣಿನಲ್ಲಿ ನೋಡಲು ನಿಮಗೆ ಅದು ಹೇಗಾದ್ರೂ ಮನಸ್ಸು ಬಂತು? ನಿಮ್ಮ ಆಶ್ರಯ ಬೇಡಿಕೊಂಡು ಆ ಮಕ್ಕಳು ಬಂದಿರ್ತಾರೆ ಅಂದ್ರೆ – ಅವರೂ ನೀವು ಹೆತ್ತ ಮಕ್ಕಳಂತೆಯೇ ಅಲ್ವೇ ಸ್ವಾಮಿ? ಮತ್ಯಾಕೆ ನೀವು ಅವರನ್ನ ಹುರಿದು ಮುಕ್ಕಲು ಮುಂದಾದ್ರಿ.

ನಿಮ್ಮ ಕಾಮದಾಸೆಗೆ ಬಡ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟ ನಿಮಗೆ ಬಸವಣ್ಣನವರ ಹೆಸರು ಹೇಳುವ ಕನಿಷ್ಠ ಯೋಗ್ಯತೆಯಾದರೂ ಇದೆಯಾ? ತನ್ನ ಆಶ್ರಮದಲ್ಲಿ ಓದುತ್ತಿರುವ ಮಕ್ಕಳಿಗೆ ಸ್ವಾಮಿಯಾದವನು ಹೇಗಿರಬೇಕು ಗೊತ್ತಾ ಶಿವಮೂರ್ತಿಯವರೇ.. – ನೀವು ಅವರ ಪ್ರತಿ ಕ್ಷಣಗಳಲ್ಲೂ ಜೊತೆಗಿರಬೇಕು. ಆದ್ರೆ ಕಾಮ ತುಂಬಿದ ಕಾಡು ಮೃಗವಾಗಿ ಅಲ್ಲ. ಅವರ ನಲಿವಲ್ಲಿ ನಗುವಾಗಿ, ಕಣ್ಣೀರಿಗೆ ಕಣ್ಣೋರೆಸುವ ಅಪ್ಪನಾಗಿ, ಅವರೊಳಗಿನ ಮಗುತನಕ್ಕೆ ಅಮ್ಮನಾಗಿ, ಅವರ ಸಹಜ ತುಂಟತನಕ್ಕೆ ಅಕ್ಕ-ತಂಗಿಯಾಗಿ, ದುಃಖಕ್ಕೆ ಅಣ್ಣ-ತಮ್ಮನಾಗಿ ನೀವಿರಬೇಕು ಶಿವಮೂರ್ತಿಗಳೇ...
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ ರಾಮನಾಥ. ಡಾ. ಶಿವಮೂರ್ತಿಗಳೇ ಜೇಡರ ದಾಸಿಮಯ್ಯನ ವಚನದಂತೆ ಆಯ್ತಲ್ಲ ನಿಮ್ಮ ಕಥೆ. ನೀವು ಆ ಮಕ್ಕಳೊಂದಿಗೆ ಮಾಡಿದ್ದೇನು? ನಿಮ್ಮಲ್ಲಿ ಅಷ್ಟೊಂದು ಕಾಮ ಪರಾಕಾಷ್ಠೆ ತಲುಪಿದ್ದರೆ, ಒಂದು ಹುಡುಗಿ ಜೊತೆ ಮದುವೆಯಾಗಿ ಆರಾಮಾಗಿ ಸಿಂಗಾಪುರದಲ್ಲೋ, ಮಲೇಷ್ಯಾದಲ್ಲೋ, ಬ್ಯಾಂಕಕ್ನಲ್ಲೋ ಸೆಟ್ಲ್ ಆಗಬಹುದಿತ್ತಲ್ಲ ಶಿವಮೂರ್ತಿಯವರೇ. ನಿಮ್ಮ ಕಾಮತೃಷೆ ತೀರಿಸಿಕೊಳ್ಳಲು ಆ ಪಾಪದ ಬಡವರ ಮಕ್ಕಳೇ ಆಗಬೇಕಿತ್ತಾ?

ಎಂತ ನೀಚ ವ್ಯಕ್ತಿತ್ವ ನೋಡಿ. ಆಶ್ರಯ ಪಡೆದ ಮಕ್ಕಳ ಮೇಲೆಯೇ ಮುಗಿಬೀಳೊದಂದ್ರೆ ಏನರ್ಥ. ಬಸವಣ್ಣವರು ʼಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ. ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲ ಸಂಗಮದೇವʼ ಅಂತ ಸುಮ್ಮನೆ ಹೇಳಿಲ್ಲ. ಅದು ನಿಮ್ಮಂತವರಿಗೆಯೇ ಡಾ. ಶಿವಮೂರ್ತಿಯವರೇ. ಯಾಕಂದ್ರೆ ನಿಮ್ಮ ಸೇವೆಯಲ್ಲಿ ಬಡವರ ಮಕ್ಕಳನ್ನು ಬೆಳೆಸಬೇಕೆಂಬ ನಿಸ್ವಾರ್ಥ ಮನೋಭಾವ ಇಲ್ಲದೇ, ಅವರನ್ನ ಭೋಗಿಸಬೇಕೆಂಬ ಸ್ವಾರ್ಥ ಇತ್ತು., ಅದಕ್ಕೆ ಇವತ್ತು ಹೀನಾಮಾನ ಅವಮಾನಕ್ಕೆ ಒಳಗಾಗಿದ್ದೀರಿ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೂ, ನಿಮ್ಮ ಪ್ರಭಾವವನ್ನು ಬಳಸಿ ನಿಮ್ಮ ಸುತ್ತಮುತ್ತಲಿನ ಪೊಲೀಸ್ ಸ್ಟೇಷನ್ಗಳಲ್ಲಿ ದೂರು ದಾಖಲಾಗದಂತೆ ನೋಡಿಕೊಂಡು, ಆ ಮಕ್ಕಳು ಭೀತಿಯಿಂದ ಮೈಸೂರಿನವರೆಗೂ ಓಡಿಕೊಂಡು ಬರುವಂತೆ ಮಾಡಿದ್ರಲ್ಲ – ನಿಮ್ಮ ಭಂಡತನವನ್ನು ಮೆಚ್ಚಲೇ ಬೇಕು ಶಿವಮೂರ್ತಿಯವರೇ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಸಾಹೇಬ್ರೆ? ಬಸವಣ್ಣನವರು ಹೇಳಿದಂತೆ ತಾಯ ಮೊಲೆವಾಲೇ ನಂಜಾಗಿಬಿಟ್ಟರೆ ಹೇಗೆ?

ಹೌದು, ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿಯವರು ತಮ್ಮ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಹಲವು ದಿನಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಅಂತ ದೂರು ದಾಖಲಾಗಿದೆ. ಸ್ವಾಮಿಗಳ ಭಯದಿಂದ ವಿದ್ಯಾರ್ಥಿನಿಯರು ಇದುವರೆಗೆ ದೂರು ನೀಡಲು ಹಿಂಜರಿದಿದ್ದರು. ಇದೀಗ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ವಿದ್ಯಾರ್ಥಿನಿಯರು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದೆ. ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ಸಮಿತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದೆ.

ಶಿವಮೂರ್ತಿ ಸ್ವಾಮಿ ಲೈಂಗಿಕ ದೌರ್ಜನ್ಯ ನಡೆಸಲು ಸಹಾಯ ಮಾಡಿದ ಉಳಿದ ನಾಲ್ವರ ಮೇಲೂ ದೂರು ದಾಖಲಾಗಿದೆ. ದೂರು ಬರುತ್ತಿದ್ದಂತೆ ಒಡನಾಡಿ ಸಂಸ್ಥೆಗೆ ಬಹಳಷ್ಟು ಒತ್ತಡಗಳು ಬಂದರೂ, ಅದಾವುದನ್ನು ಲೆಕ್ಕಿಸದೆ ಮಕ್ಕಳಿಗೆ ನ್ಯಾಯ ಒದಗಿಸಲಷ್ಟೇ ಹೆಜ್ಜೆ ಇಟ್ಟಿರುವ ಸಂಸ್ಥೆಯವರು, ಡಾ. ಶಿವಮೂರ್ತಿಯವರನ್ನ ವಿಚಾರವಂತರು, ಪ್ರಜ್ಞಾವಂತರು, ಪ್ರಗತಿಪರರು ಅಂತಲೇ ಅಂದುಕೊಂಡಿದ್ದರು. ಮಕ್ಕಳ ಹೇಳಿಕೆ ಬಳಿಕ ಇವರ ಬಗ್ಗೆ ಅಸಹ್ಯ ಹುಟ್ಟಿಸಿದೆಯಂತೆ. ಸಂಸ್ಥೆಯವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣದಿಂದ ನ್ಯಾಯಾಧೀಶರ ಮೂಲಕವೇ ತನಿಖೆ ಆಗಬೇಕು. ಮಕ್ಕಳು ಅಷ್ಟು ದೂರದಿಂದ ಇಲ್ಲಿಗೆ ಬಂದಿರೋದೆ ನ್ಯಾಯ ಸಿಗುತ್ತೆ ಎಂಬ ಭರವಸೆಯಿಂದ. ಈ ಕಾರಣಕ್ಕಾಗಿ ಮಕ್ಕಳ ಜೊತೆ ನಾವಿದ್ದೇವೆ ಅಂತ ಒಡನಾಡಿ ಸ್ಟ್ಯಾನ್ಲಿ ಹೇಳುತ್ತಾರೆ.

ಪ್ರೌಢಶಾಲೆಯ ಕೆಲವು ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ವಾರ್ಡ್ನ್ ಖುದ್ದು ಸ್ವಾಮಿಗೆ ಹೋಗಿ ಹಾಲು ಕೊಟ್ಟು ಬಾ ಅಂತ ಹೇಳುತ್ತಿದ್ದರಂತೆ. ಒಂದು ವೇಳೆ ಒಪ್ಪದೇ ಹೋದ್ರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದರಂತೆ. ಹಾಸ್ಟೆಲ್ ವಾರ್ಡನ್ ಕಾಟಕ್ಕೆ ತಾಳಲಾರದೇ ಅನೇಕ ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಕಡೆ ಹೋಗಿರುವ ಸಾಕಷ್ಟು ಉದಾಹರಣೆಗಳಿವೆ ಸಹ ಅಲ್ಲಿ ನಡೆದಿದ್ದಾವಂತೆ. ಇನ್ನು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಡಾ. ಶಿವಮೂರ್ತಿ ಸ್ವಾಮಿಗೆ ಬಂಧನದ ಭೀತಿ ಎದುರಾಗಿದೆ. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿರುವುದರಿಂದ ಜಾಮೀನು ಸಿಗುವುದು ಕೂಡ ಕಷ್ಟ. ಎಫ್ಐಆರ್ನಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿಯವರನ್ನು ಂ1, ಹಾಸ್ಟೆಲ್ ವಾರ್ಡನ್ ರಶ್ಮಿ ಂ2, ಮಠದ ಮರಿಸ್ವಾಮಿಯಾದ ಬಸವಾದಿತ್ಯ ಂ3, ಲಾಯರ್ ಗಂಗಾಧರಯ್ಯ ಂ̧4 ಲೀಡರ್ ಪರಮಶಿವಯ್ಯ ಂ5 ಯಾಗಿ ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ರದುರ್ಗದಲ್ಲಿ ಸ್ವಾಮಿಯ ಪ್ರಭಾವ ಹೆಚ್ಚಿರುವುದರಿಂದ ಅಲ್ಲಿ ದೂರು ದಾಖಲಿಸಿದರೆ ತಮ್ಮ  ಪ್ರಾಣಕ್ಕೆ ಕುತ್ತು ಅಂತ ಅಂದುಕೊಂಡಿದ್ದರೇನೋ ಆ ಮಕ್ಕಳು – ಅದಕ್ಕೆ ಯಾರಿಗೂ ಹೇಳದೆ ಕೇಳದೇ ಬೆಂಗಳೂರಿಗೆ ಓಡಿ ಬಂದಿದ್ದಾರೆ.

ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದ ಮಕ್ಕಳನ್ನು ಪೋಲಿಸರು ರಾಜಿ ಪಂಚಾಯ್ತಿಯನ್ನು ಮಾಡಿ ಮನೆಗೆ ಕಳಿಸಿ ಬಿಡ್ತಾರೆ. ಇದರಿಂದ ಜಿಗುಪ್ಸೆಗೊಂಡ ಮಕ್ಕಳು, ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೂ ಮುಂದಾಗಿದ್ದರಂತೆ. ಆಗ ಯಾರೋ ಒಬ್ಬ ಆಟೋ ಚಾಲಕ, ಮೈಸೂರಿನ ಒಡನಾಡಿ ಸಂಸ್ಥೆಯ ನಂಬರ್ ಕೊಟ್ಟು ಕಳಿಸಿದನಂತೆ. ಅಲ್ಲಿಂದ ಮಕ್ಕಳು ಒಡನಾಡಿ ಸೇರಿಕೊಂಡು, ಆಪ್ತ ಸಮಾಲೋಚನೆ ಸಭೆಯಲ್ಲಿ ಡಾ. ಶಿವಮೂರ್ತಿ ನಡೆಸಿದ ಲೈಂಗಿಕ ದೌರ್ಜನ್ಯಗಳನ್ನೆಲ್ಲಾ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಇದು ನನಗೆ ಆಶ್ಚರ್ಯ ತರಿಸಿದ ಘಟನೆಯೇ ಅಲ್ಲ ಅಂತ ಹೇಳ್ತಾರೆ ಅಂದ್ರೆ – ಡಾ. ಶಿವಮೂರ್ತಿಯ ಪುರಾಣ ಇನ್ನೆಷ್ಟಿರಬಹುದು?

ಎಂತಂತಾ ವ್ಯಾಘ್ರಗಳು ನಮ್ಮ ಜೊತೆಗೆ ಇದ್ದಾವೆ ಅಂತ. ಖಾವಿಧಾರಿಗಳು ಅಂದ್ರೆ ಕುರಿ ಚರ್ಮ ಹೊದ್ದ ತೋಳಗಳು ಅಂತ ಹೊರಗಡೆ ಜನ ಮಾತಾಡಿಕೊಳ್ತಿದ್ದಾರೆ. ಆಶ್ರಯ ಪಡೆದುಕೊಂಡು ಬಂದ ಅಪ್ರಾಪ್ತ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಮಾಡ್ತೀರಿ ಅಂದ್ರೆ ಏನ್ರೀ ಹೇಳ್ಬೇಕು ನಿಮ್ಮಂತವರಿಗೆ. ನಮಗೂ ಗೊತ್ತಾಗುತ್ತೆ. ನಿಮಗೂ ಮನಸ್ಸಿದೆ, ಕಾಮ ಇದೆ, ಮೋಹ ಇದೆ, ಮತ್ಸರ ಇದೆ ಅಂತ. ಅದನ್ನೆಲ್ಲಾ ಅಪ್ರಾಪ್ತ ಮಕ್ಕಳ ಮೇಲೆ ತೀರಿಸಿಕೊಳ್ಳಲು ಹೊರಟ ನಿಮಗೆ ಧಿಕ್ಕಾರವಿರಲಿ. ನಿಮ್ಮ ಮಠಕ್ಕೆ ಎಂತೆಂತದೋ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಘಟಾನುಘಟಿ ನಾಯಕರುಗಳು ಬಂದು ನಿಮ್ಮ ಆಶೀರ್ವಾದ ಪಡೆದರೂ, ನೀವು ಆ ಮಕ್ಕಳ ಕಣ್ಣಲ್ಲಿ ಕಾಮ ತುಂಬಿದ ವಿಕೃತ ರಾಕ್ಷಸನಾಗಿಯೇ ಕಾಣುತ್ತೀರಿ. ಎಂತಹ ಬಾಳು ಶಿವಮೂರ್ತಿಯವರೇ ನಿಮ್ಮದು? ಮುರುಘಾ ಮಠದ ಪೀಠಾಧಿಪತಿಯಾಗಿ ಮುಂದುವರೆಯುವ ಯಾವ ನೈತಿಕತೆ ಇದೆ ನಿಮಗೆ?  ರಕ್ಷಣೆಗೆಂದು ಹಾಕಿರುವ ಬೇಲಿಯೇ ಎದ್ದು ಹೊಲವನ್ನು ಮೇಯುತ್ತೆ ಅಂದ್ರೆ ಇನ್ಯಾರು ರಕ್ಷಣೆ ಕೊಟ್ಟಾರು? ಅಪ್ಪ ಎಂದು ಮಡಿಲಲ್ಲಿ ಮಲಗಿದ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಆ ಕಂದಮ್ಮಗಳ ಬದುಕು ಏನಾಗಬೇಕು? ಈ ಭೂಮಿಯ ಇನ್ನೆಲ್ಲೂ, ಮತ್ತೆಂದೂ ಈ ರೀತಿಯಾಗದಿರಲಿ. ಪುಟ್ಟ ಕಂದಮ್ಮಗಳು ನೆಮ್ಮದಿಯಿಂದ ನಿದ್ರಿಸುವಂತಾಗಲಿ ಎಂಬುವುದೇ ನಮ್ಮ ಆಶಯ.  
ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಬರಿ ಶಬ್ದವ ಕೇಳನಾ ಶರಣನು.
ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಅನ್ಯವ ಮುಟ್ಟನಾ ಶರಣನು
ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಅನ್ಯವ ನೋಡನಾ ಶರಣನು
ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಆಹಾರ ವ್ಯವಹಾರವನರಿಯನಾ ಶರಣನು
ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಜಂಗಮಮುಖದಲ್ಲಿ ಕುಂದೆಯವು ಬಂದರೆ
ಪೂರ್ವದ ಕೊಂಡ ಮಾರಿಗೆ ಹೋಗುವರೆಂದ
ಕೂಡಲ ಚೆನ್ನಸಂಗಮದೇವ..


 -ಕನ್ನಡ ಒನ್ ನ್ಯೂಸ್ ಬಳಗ

© Copyright 2022, All Rights Reserved Kannada One News