ಎನ್‌ ಡಿಟಿವಿಗೂ ಬಾಯಾಕಿದ ಅದಾನಿ!: ಎಡಿಟರ್‌ ಸ್ಪೆಶಲ್

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಎನ್‌ ಡಿಟಿವಿಗೂ ಬಾಯಾಕಿದ ಅದಾನಿ!: ಎಡಿಟರ್‌ ಸ್ಪೆಶಲ್

Updated : 25.08.2022

 ಒಂದು ಮಾಧ್ಯಮದ ಪ್ರಧಾನ ಸಂಪಾದಕನಾಗಿ, ಅಪಾಯದಲ್ಲಿರುವ ಮತ್ತೊಂದು ಜನಪರ ಮಾಧ್ಯಮದ ಅಳಿವು-ಉಳಿವಿನ ಕುರಿತು ಮಾತನಾಡಲೇಬೇಕಾದ ತುರ್ತಿನ ಸ್ಥಿತಿಯಿದೆ. ಈಗ ಅಂಥಹುದೊಂದು ವಾತಾವರಣ ಸೃಷ್ಟಿಯಾಗಿದೆ. ಈ ದೇಶದ ಪೊಲೀಸ್ ವ್ಯವಸ್ಥೆ, ಸರ್ಕಾರದ ಇಲಾಖೆಗಳು ಅಷ್ಟೇ ಅಲ್ಲ, ಇಡೀ ಸರ್ಕಾರವೇ ಬಂಡವಾಳಶಾಹಿಗಳಾದ ಅದಾನಿ, ಅಂಬಾನಿಗಳ ಪಾಲಾಗಿದೆ ಅನ್ನೋದು ಈ ದೇಶದ ಪ್ರಜ್ಞಾವಂತರು ಹಲವು ವರ್ಷಗಳಿಂದ ಮಾಡುತ್ತಿರುವ ಆರೋಪ. ಅದು ನಿಜವೂ ಆಗಿರಬಹುದು. ‌

ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುಪಾಲು ಆಸ್ತಿಗಳು, ಇಲಾಖೆಗಳು, ಸಂಸ್ಥೆಗಳು ಖಾಸಗೀಕರಣಗೊಂಡಿವೆ. ಮತ್ತು ಅದರಲ್ಲಿ ಹೆಚ್ಚಿನದ್ದನ್ನು ಖರೀದಿಸಿದ್ದು, ಖರೀದಿಸುತ್ತಲೇ ಇರುವುದು ಇದೇ ಅಂಬಾನಿ, ಅದಾನಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದಕ್ಕೆ ಅಲ್ವಾ ಅದಾನಿಯವರ ಆಸ್ತಿಯಲ್ಲಿ ದಿಢೀರ್ ಏರಿಕೆ ಕಂಡು ಬಂದು, ಎಲ್ಲರ ಹುಬ್ಬು ಏರುವಂತೆ ಆದದ್ದು?

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತೆ ಪೇಚಾಡುತ್ತಿದ್ದಾರೆ. ಯಾಕಂದ್ರೆ ಒಂದು ಕಡೆ ಅದಾನಿ, ಅಂಬಾನಿಯಂಥ ಬಂಡವಾಳಶಾಹಿಗಳು ಮೋದಿಯವರ ಮೂಗುದಾರ ಹಿಡಿದು ಕೂತಿದ್ದರೆ, ಇನ್ನೊಂದು ಕಡೆ ಆರೆಸ್ಸೆಸ್ ತನ್ನ ಅಂಕುಶದಲ್ಲಿಟ್ಟುಕೊಂಡು, ಅವರ ಮುಖಾಂತರವೇ ತನ್ನ ಮಾರಣಾಂತಿಕ ಸಿದ್ದಾಂತವನ್ನು, ಕಾಯ್ದೆ, ಕಾನೂನುಗಳನ್ನು ಜನರ ಮೇಲೆ ಹೇರುತ್ತಿದೆ. ಬಹುಷಃ ಮೋದಿಯವರಿಗೂ ಇದೇ ಬೇಕಾಗಿರಬಹುದು.

ಯಾಕಂದ್ರೆ ಅವರಿಗೆ ಅಧಿಕಾರ ಮಾತ್ರವೇ ಮುಖ್ಯ. ಜನರಿಗೆ ಊಟ, ಉದ್ಯೋಗ ಕೊಡುವ ಇಚ್ಛಾಶಕ್ತಿ ಇಲ್ಲದಿದ್ದರೂ, ತಾನು ಮಾತ್ರ ನವಿಲಿಗೆ ಕಾಳು ಹಾಕಿಕೊಂಡು, ಭೂಮಂಡಲದಲ್ಲಿರುವ ಎಲ್ಲಾ ದೇಶಗಳ ಟೂರ್ ಹೊಡೆದು, ದಿನಕ್ಕೆ ಲಕ್ಷಾಂತರ ರೂಪಾಯಿಯ ಸೂಟ್ ಬದಲಿಸಿಕೊಂಡು, ಸಾವಿರಾರು ರೂಪಾಯಿಯ ಅಣಬೆ ತಿಂದು, ಕೋಟ್ಯಂತರ ರೂಪಾಯಿಯ ಕಾರಿನಲ್ಲಿ ಝಮ್ಮೆಂದು ತಿರುಗುತ್ತಾ, ಖಾಲಿ ಮೈದಾನಕ್ಕೆ, ಖಾಲಿ ರಸ್ತೆಗಳಿಗೆ ಕೈ ಬೀಸಿಕೊಂಡು, ಆ ಸುಂದರ, ಸುಮದುರ ಕ್ಷಣಗಳನ್ನು ಫೋಟೋಗ್ರಾಫರ್ ತಂಡದೊಂದಿಗೆ ಕ್ಯಾಪ್ಚರ್ ಮಾಡಿಸಿಕೊಳ್ಳುತ್ತಾ ಆರಾಮವಾಗಿ ಬದುಕುತ್ತಿದ್ದಾರೆ... ಇಂಥ ಭಾಗ್ಯ ಯಾರಿಗುಂಟು, ಯಾರಿಗಿಲ್ಲ.. ಅಲ್ಲವ?

ತನ್ನ ಅಧಿಕಾರಕ್ಕಾಗಿ ದೇಶವನ್ನೇ ಅಧೋಗತಿಗೆ ತಳ್ಳಿದ ಯಾರಾದರೂ ಒಬ್ಬ ಪ್ರಧಾನಿ ಇದ್ದರೆ ಅದು ಮೋದಿ ಮಾತ್ರ ಅಂತ ಬಡವರು, ನೊಂದವರು ಹಿಡಿ ಶಾಪ ಹಾಕುತ್ತಿದ್ದಾರೆ. ಎಲ್ಲೆಡೆಯೂ ಬೆಲೆಯೇರಿಕೆ, ತಿನ್ನಲು ಅನ್ನವಿಲ್ಲದ ಸ್ಥಿತಿಗೆ ದೇಶ ತಲುಪಬಹುದೆಂದು, ಊದ್ಯೋಗವಿಲ್ಲದ ಜನ ಬೀದಿಗಿಳಿದರೆ ರಕ್ತಪಾತ, ದೊಂಬಿ, ದರೋಡೆ ಜರುಗಬಹುದೆಂದು ಹಲವಾರು ಜನಪರ ಚಿಂತಕರು, ಸಂಸ್ಥೆಗಳು ಹೇಳುತ್ತಿರುವಾಗ್ಯೂ ಮೋದಿ ಸಾಹೇಬರು, ನಾಳೆ ಯಾವ ಡ್ರೆಸ್ ಹಾಕಿಕೊಳ್ಳಲಿ ಎಂಬುದರ ಚಿಂತೆಯಲ್ಲಿದ್ದಾರೆ. ಆ ಚಿಂತೆಯಿಂದ ಬಿಡುವು ಸಿಕ್ಕಾಗ ಆರೆಸ್ಸೆಸ್ ಅಥವಾ ಅಂಬಾನಿ-ಅದಾನಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಶ್ರೀಮಂತ ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನ ಮಾಡುವುದು, ಜನವಿರೋಧಿ ಕಾಯ್ದೆಗಳಿಗೆ ಸಿಗ್ನೇಚರ್ ಗೀಚುವುದು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.

ಜತೆಗೆ, ವಿದೇಶಗಳಲ್ಲಿ ಯಾವುದಾದರೂ ಯೋಜನೆಗಳಿದ್ದರೆ ಅದನ್ನು ಅಂಬಾನಿಗೋ, ಅದಾನಿಗೋ ಕೊಡಿಸುವಲ್ಲಿ ಆರಾಮವಾಗಿದ್ದಾರೆ. ಇಲ್ಲಿನ ಜನ ರೇಷನ್ ಕಾರ್ಡ್ ಹಿಡಿದು, ಒಂದೊತ್ತಿನ ಅಕ್ಕಿಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರೆ, ಮೋದಿಯವರು ದುಬಾರಿ ದಾಲ್ ಕಿಚಡಿಯ ಘಮ ನೋಡುತ್ತಾ, ಬಾಲಿವುಡ್ ನಟರೊಂದಿಗೆ ಸೆಲ್ಫೀ ತೆಗೆಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಅವರು ಕೈಯಿಟ್ಟ ಕಡೆ ಎಲ್ಲಾ ನಾಶವಾಗಿ ಹೋಗುತ್ತಿರುವುದರ ಅರಿವು ಮೋದಿಯವರಿಗೆ ಇದ್ದಂತಿಲ್ಲ. ಇವರು ಬಾಲಿವುಡ್ ನಟರ ಜತೆಗೆ ಸೆಲ್ಫೀ ತೆಗೆದದ್ದೇ ಆ ನಟರ ಉತ್ತಮ ಚಿತ್ರಗಳೇ ಸಾಲು ಸಾಲಾಗಿ ತೋಪೆದ್ದು ಮಕಾಡೆ ಮಲಗುತ್ತಿವೆ.

ಸಣ್ಣಪುಟ್ಟ ಉದ್ಯಮಗಳು ಬಾಗಿಲೆಳೆದುಕೊಂಡು ಹೋಗಿವೆ. ಹಲವಾರು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಮಾರಾಟವಾಗಿವೆ. ಉಳಿದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಚೂರುಪಾರು ಉಸಿರಾಡಿಕೊಂಡಿರುವುದು ಮಾತ್ರ ಮಾಧ್ಯಮ ಕ್ಷೇತ್ರ! ಅದರಲ್ಲಿ 95 ಪರ್ಸೆಂಟ್ ಮಾಧ್ಯಮಗಳನ್ನು ಮಾನ್ಯ ಮೋದಿಯವರ ಪಟಾಲಂ ಕೊಂಡುಕೊಂಡಿತ್ತು. ಉಳಿದ ಐದೇ ಐದು ಪರ್ಸೆಂಟ್ನಲ್ಲಿ ಕೆಲವೇ ಕೆಲವು ಮಾಧ್ಯಮಗಳು ಆಡಳಿತದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಕೆದಕಿ, ಅದರೊಳಗಿನ ಸತ್ಯಾಸತ್ಯತೆಗಳನ್ನು ಜನತೆಯ ಮುಂದೆ ಇಡುತ್ತಿದ್ದವು. ಈಗ ಆ ಮಾಧ್ಯಮಗಳಿಗೂ ಕಂಟಕ ಎದುರಾಗಿಬಿಟ್ಟಿದೆ. ಅಂತದ್ದೊಂದು ಮಹಾಪ್ರಮಾದಕ್ಕೆ ಮೋದಿಜಿಯವರು ಪ್ರತ್ಯಕ್ಷ ಕಾರಣರೋ, ಪರೋಕ್ಷ ಕಾರಣರೋ ಅಥವಾ ಅಲ್ಲವೋ ಅಂತ ಅವರೇ ತಮ್ಮ ಎದೆ ಮುಟ್ಟಿಕೊಂಡು, ಪ್ರಾಮಾಣಿಕವಾಗಿ ಹೇಳ್ಬೇಕು. ಅಂಥದ್ದೊಂದು ಮಾಧ್ಯಮ ಯಾವುದು ಅಂತೀರ? ಅದೇ ಎನ್ಡಿಟಿವಿ!

ಹೌದು, ಎನ್ಡಿಟಿವಿ ಅಂದ್ರೆ ಅದು ಕೇವಲ ಮಾಧ್ಯಮವಾಗಿರಲಿಲ್ಲ. ಟಿರ್ಆಪಿಗಾಗಿ ಸುದ್ದಿ ಪ್ರಸಾರ ಮಾಡುತ್ತಿರಲಿಲ್ಲ, ಯಾವುದೇ ಪಕ್ಷಕ್ಕೋ, ವ್ಯಕ್ತಿಗೋ ಮಾರಿಕೊಂಡಿರಲ್ಲಿಲ್ಲ. ಒಂದು ಮಾಧ್ಯಮ ಹೇಗಿರಬೇಕು ಅನ್ನೋದಕ್ಕೆ ಎನ್ಡಿಟಿವಿ ಸ್ಪಷ್ಟ ಮಾದರಿಯಾಗಿತ್ತು. ಜನರ ನೋವಿನ ದನಿಯನ್ನು ಎತ್ತಿ ಹಿಡಿಯುತ್ತಿತ್ತು. ಶೋಷಿತರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿತ್ತು. ಅಂತಹ ಒಂದು ಎನ್ಡಿಟಿವಿಯೇ ಇಂದು ಅದಾನಿಯವರ ಒಡೆತನದ ಪಾಲಾಗುವ ದುರಂತಕ್ಕೆ ಬಂದು ನಿಂತಿದೆ ಅಂದ್ರೆ ನಿಜಕ್ಕೂ ನಂಬಲಾಗುತ್ತಿಲ್ಲ. ಅದ್ರೂ ನಂಬಲೇಬೇಕು. ಯಾಕಂದ್ರೆ ದುಡ್ಡಿರುವವರ ಮುಂದೆ ಎಲ್ಲವೂ ಶೂನ್ಯವಾಗುತ್ತದೆ ಎನ್ನುವ ಮಾತೂ ಕೂಡಾ ಸುಳ್ಳಲ್ಲ.

ನಿಮಗೆ ಗೊತ್ತಿರಲಿ ಈ ದೇಶದಲ್ಲಿ ಒಟ್ಟು 17 ಟಿವಿ ಚಾನೆಲ್ಗಳು ಅಂಬಾನಿಯವರ ಕೈಯಲ್ಲಿದ್ದರೆ, 9 ಚಾನೆಲ್ಗಳು ಅದಾನಿಯವರ ಕೈಯಲ್ಲಿವೆ. ಈಗ 10ನೇಯದಾಗಿ ಎನ್‌ಡಿಟಿವಿಯ ಶೇ.29ರಷ್ಟು ಶೇರುಗಳು 493 ಕೋಟಿಗೆ ಖರೀದಿಯಾಗುವುದರ ಮೂಲಕ ಅದಾನಿಯ ತೆಕ್ಕೆಗೆ ಸೇರ್ಪಡೆಯಾಗುವ ಅಪಾಯದಲ್ಲಿದೆ. ಈಗ ಹೇಳಿ ಮೋದಿಯವರೇ ನಿಮಗೆ ಗೊತ್ತಿದ್ದೇ ಅದಾನಿಯವರು ಎನ್ಡಿಟಿವಿಯನ್ನು ಖರೀದಿಸ್ತಿದ್ದಾರ ಅಥವಾ ನಿಮ್ಮ ಅರಿವಿಗೆ ಬಾರದೆಯೇ ಅದಾನಿಯತ್ತ ಹರಿದು ಹೋಗ್ತಿದೆಯಾ?

ಈ ದೇಶದ ಜನರಿಗೆ ಎನ್ಡಿಟಿವಿಯ ಮೇಲೆ ಮತ್ತು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಒಂದು ಭರವಸೆ ಇದ್ದೇ ಇದೆ. ಇಲ್ಲಿಯವರೆಗೆ ಅವರು ಆ ಜನರ ನಂಬಿಕೆಯನ್ನು ಉಳಿಸಿಕೊಂಡೇ ಬಂದಿದ್ದಾರೆ. ಅವರು ಯಾವತ್ತೂ ಸರ್ಕಾರಕ್ಕೆ ಹೆದರಿ ನಡು ಬಗ್ಗಿಸಿದವರಲ್ಲ. ಎಂಜಲುಕಾಸಿನಾಸೆಗೆ ಬಂಡವಾಳಶಾಹಿಗಳಿಗೆ ಬಕೆಟ್ ಹಿಡಿದಿಲ್ಲ. ರಿಪಬ್ಲಿಕ್ ಟಿವಿಯಂತೆ ಅರಚಿ –ಕಿರುಚಿ ಬಾಯಿ ಬಡಿದುಕೊಂಡಿಲ್ಲ, ಟೈಮ್ಸ್ ನೌನಂತೆ ಸುಳ್ಳು ಸುದ್ದಿ ಹರಡಲಿಲ್ಲ, ಆಜ್ತಕ್ ನಂತೆ ರಾಜಕಾರಣಿಗಳಿಗೆ ಸಲಾಂ ಹೊಡೆದು ಕಾಸು ಮಾಡಲಿಲ್ಲ. ಝೀ ನ್ಯೂಸ್ನಂತೆ ಧರ್ಮನಿಂದನೆ, ಜನಾಂಗೀಯ ದ್ವೇಷ ಮಾಡಲಿಲ್ಲ. ಯಾವುದೇ ರೀತಿಯ ಅರಚಾಟ-ಕಿರುಚಾಟ ಇಲ್ಲದೇ, ವಸ್ತುನಿಷ್ಠವಾಗಿ, ಸಿಕ್ಕ ಸುದ್ದಿಯ ನಿಖರತೆಯನ್ನು, ಸತ್ಯಾಸತ್ಯತೆಯನ್ನು ಸ್ಪಷ್ಟವಾಗಿ, ನಿರ್ಭೀತಿಯಿಂದ ಜನರ ಮುಂದಿಡುತ್ತಿದ್ದರು. ಎನ್ಡಿಟಿವಿಯ ಪ್ರಧಾನ ಸಂಪಾದಕರಾದ ರವೀಶ್ ಕುಮಾರ ಅವರ ಪ್ರೈಮ್ ಟೈಮ್ ಕಾರ್ಯಕ್ರಮವನ್ನು ನೋಡಲೆಂದೇ ಜನ ಕಾದು ಕುಳಿತಿರುತ್ತಿದ್ದರು. ಅದಕ್ಕಾಗಿಯೇ ಕೆಲಸಗಳಿಂದ ಬೇಗ ಮನೆಗೆ ಸೇರಿಕೊಳ್ಳುತ್ತಿದ್ದರು.

ಒಬ್ಬ ಪತ್ರಕರ್ತ, ನಿರೂಪಕ ಹೇಗಿರಬೇಕು ಅಂದ್ರೆ –ಅದಕ್ಕೆ ಮಾದರಿಯಾಗಿ ರವೀಶ್ ಕುಮಾರ್ ಮೂರ್ತಿ ಕಟೆದು ನಿಲ್ಲಿಸಬಹುದು. ಅಷ್ಟರ ಮಟ್ಟಿಗೆ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ನಿಮಗೆ ನೆನಪಿರಬಹುದು ಹಿಂದೊಮ್ಮೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ನನ್ನು ನಡುರೋಡಿನಲ್ಲಿ ನಿಲ್ಲಿಸಿಯೇ ಬೆವರಿಳಿಸಿದ್ದರು. ಅಷ್ಟೇ ಅಲ್ಲ, ದೆಹಲಿ ದಂಗೆಯ ಪಾತ್ರದಾರಿಗಳೆಂದು ಪೊಲೀಸರು ಮೂವರು ಅಮಾಯಕ ಮುಸ್ಲಿಂ ಯುವಕರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ದೆಹಲಿ ಹೈಕೋರ್ಟ್ನಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆದಾಗ ನ್ಯಾಯಾಧೀಶರು ರವೀಶ್ ಕುಮಾರ್ ಅವರ ಪ್ರೈಮ್ ಟೈಮ್ ಕಾರ್ಯಕ್ರಮವನ್ನು ಆಧಾರವಾಗಿಟ್ಟುಕೊಂಡೇ ಆ ಮೂವರು ಮುಸ್ಲಿಂ ಯುವಕರನ್ನು ನಿರ್ದೋಷಿಗಳೆಂದು ಘೋಷಿಸಿ ತೀರ್ಪು ಕೊಟ್ಟಿದ್ದರು. ಯಾಕಂದ್ರೆ ಪೊಲೀಸರು ಆ ಮೂವರು ಯುವಕರನ್ನು ಬಂಧಿಸಿದ ದಿನವೇ ರವೀಶ್ ಕುಮಾರ್ ಅವರು ತಮ್ಮ ಪ್ರೈಮ್ ಟೈಂ ಕಾರ್ಯಕ್ರಮದಲ್ಲಿ, “ದೆಹಲಿ ದಂಗೆಯಲ್ಲಿ ಆ ಮೂವರು ಯುವಕರದ್ದು ಯಾವುದೇ ಪಾತ್ರವಿಲ್ಲ ಅಂತ ಸಾಕ್ಷ್ಯಧಾರಗಳ ಸಮೇತ ನಿರೂಪಿಸಿದ್ದರು. ಇದು ರವೀಶ್ ಕುಮಾರ್ ಅವರ ಪತ್ರಿಕಾ ನಿಷ್ಟೆಯಲ್ಲಿ ಉಳಿಸಿಕೊಂಡಿದ್ದ ತಾಕತ್ತು. ತುಳಿತಕ್ಕೊಳಗಾದವರನ್ನು ಅವರು ಯಾವತ್ತೂ ಬಿಟ್ಟು ಕೊಟ್ಟವರಲ್ಲ. ಅವರು ಈಗಲೂ ನರೇಂದ್ರ ಮೋದಿಯವರಿಗೆ ತಮ್ಮ ಜೊತೆಗೆ ಇಂಟರ್ವ್ಯೂ ಕೊಡುವಂತೆ ಆಹ್ವಾನಿಸುತ್ತಲೇ ಇದ್ದಾರೆ. ಆದ್ರೆ 56 ಇಂಚಿನ ಎದೆಯವರಿಗೆ ರವೀಶ್ ಕುಮಾರ್ರಂಥ ದಿಟ್ಟ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಇದೆಯೇ ಎಂಬುದು ಮಿಲಿಯನ್ ಡಾಲರ್

ಅದೇನೆ ಇರಲಿ, ದೇಶದಲ್ಲಿ ಪ್ರಜಾಪ್ರಭುತ್ವ ಮಣ್ಣು ಪಾಲಾಗಿ, ಸರ್ವಾಧಿಕಾರ ಆಕ್ರಮಿಸಿಕೊಳ್ಳುತ್ತಿದೆ ಅನ್ನೋದಕ್ಕೆ ಎನ್ಡಿಟಿಯ 29 ಪರ್ಸೆಂಟ್‌ ಶೇರನ್ನು ಅದಾನಿ ಖರೀದಿಸಿದ್ದು ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ. ದೇಶದ 95% ಮಾಧ್ಯಮಗಳು ಮೋದಿಯಂತ ಅಘೋಷಿತ ಸರ್ವಾಧಿಕಾರಿಗೆ, ಅದಾನಿ ಅಂಬಾನಿಯಂಥ ಬಂಡವಾಳ ಶಾಹಿಗಳಿಗೆ ತೆರೆಮರೆಯಲ್ಲಿ ಚಮಚಾಗಿರಿ ಮಾಡುತ್ತಿದ್ದರೆ, ನೈತಿಕತೆ ಉಳಿಸಿಕೊಂಡಿದ್ದ ಕೆಲವೇ ಕೆಲವು ಮಾಧ್ಯಮಗಳು ಸರ್ಕಾರದ ಆಕ್ರಮಣಕಾರಿ ನಡೆಯನ್ನು ಮುಲಾಜಿಲ್ಲದೇ ಪ್ರಶ್ನಿಸುತ್ತಿದ್ದವು. ಅಂತ ಮಾಧ್ಯಮಗಳ ಸಾಲಿನಲ್ಲಿ ಎನ್ಡಿಟಿವಿ ಅಗ್ರಸ್ಥಾನದಲ್ಲಿತ್ತು. ಈಗ ಅದೇ ಮಾಧ್ಯಮ ಅದಾನಿ ಪಾಲಾಗಿ ಬಿಟ್ಟರೆ- ಆಡಳಿತದ ವೈಫಲ್ಯವನ್ನು ಪ್ರಶ್ನಿಸೋದು ಯಾರು? ಜನರ ನೋವಿನ ಕೂಗನ್ನು ಎತ್ತಿ ಹಿಡಿಯೋದು ಯಾರು? ಎನ್‌ಡಿಟಿವಿಯ ಶೇ.29ರಷ್ಟು ಶೇರುಗಳನ್ನು, ಒಟ್ಟು 493 ಕೋಟಿಗೆ ಪರೋಕ್ಷವಾಗಿ ಖರೀದಿಸಿರುವುದಾಗಿ ಅದಾನಿ ಸಮೂಹವು ಘೋಷಿಸಿದ ಕೆಲವೇ ತಾಸುಗಳ ಬಳಿಕ ಎನ್‌ಡಿಟಿವಿ ಹೇಳಿಕೆಯೊಂದನ್ನು ನೀಡಿ, ಎನ್‌ಡಿಟಿವಿ ಸಂಸ್ಥಾಪಕ ಮಂಡಳಿಯ ಒಪ್ಪಿಗೆಯನ್ನು ಪಡೆಯದೆ, ಅವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಸಮಾಲೋಚನೆಯನ್ನು ನಡೆಸದೆ ಈ ತೀರ್ಮಾನ ಕೈಗೊಳ್ಳಲಾಗಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದೆ.

ಇದೆಲ್ಲದರ ನಡುವೆ, ಎನ್ಡಿಟಿವಿಯ ಮುಂದಿನ ನಡೆ ಹೇಗಿರುತ್ತದೆ ಮತ್ತು ರವೀಶ್ ಕುಮಾರ ಅವರ ಮುಂದಿನ ನಡೆ ಏನಾಗಿರುತ್ತದೆ ಅಂತ ಇನ್ನು ಕಾದು ನೋಡಬೇಕಿದೆ. ಯಾಕಂದ್ರೆ ರವೀಶ್ ಕುಮಾರ್ ಅವರಾಗಲೀ, ಎನ್ಡಿಟಿವಿಯ ಉದ್ಯೋಗಿಗಳಾಗಲಿ, ಈವರೆಗೆ ಹಣದಾಸೆಗೋ ಅಥವಾ ಪ್ರಭುತ್ವದ ಬೆದರಿಕೆಗೋ ತಮ್ಮನ್ನು ತಾವು ಮಾರಿಕೊಂಡವರಲ್ಲ. ಅರ್ನಾಬ್ ಗೋಸ್ವಾಮಿಯಂತೆ ಫೇಕ್ ಟಿಆರ್ಪಿಗಾಗಿ ರಿಗ್ಗಿಂಗ್ ಮಾಡಿ ಸಿಕ್ಕಿಹಾಕಿಕೊಂಡವರಲ್ಲ... ಇಂಥ ಬೆಳವಣಿಗೆಗಳ ನಡುವೆಯೂ ದೇಶದ ದಿಟ್ಟ ಪತ್ರಕರ್ತ ರವೀಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ "ಪ್ರಧಾನಿ ನರೇಂದ್ರ ಮೋದಿ ನನ್ನೊಂದಿಗೆ ಸಂದರ್ಶನಕ್ಕೆ ತಯಾರಾದಂತೆ, ಅಕ್ಷಯ್ ಕುಮಾರ್ ಗೇಟಿನ ಬಳಿ ಮಾವಿನ ಹಣ್ಣುಗಳನ್ನು ಹಿಡಿದುಕೊಂಡು ನಿಂತಂತೆ, ನನ್ನ ರಾಜೀನಾಮೆ ವಿಚಾರ ಕೂಡಾ ಒಂದು ವದಂತಿ ಮಾತ್ರವಾಗಿದೆ" ಎಂದು ಸಾರ್ವಜನಿಕರನ್ನು ಉಲ್ಲೇಖಿಸಿ ಹೇಳಿದ್ದಾರೆ.

ಕೊನೆಯಲ್ಲಿ ವಿಶ್ವದ ಪ್ರಥಮ ಅತೀ ದುಬಾರಿ ಝೀರೋ ಟಿಆರ್ಪಿ ನಿರೂಪಕ ಎಂದು ತಮ್ಮನ್ನು ತಾವೇ ವ್ಯಂಗ್ಯವಾಡಿಕೊಂಡಿದ್ದಾರೆ. ಸೌಮ್ಯವಾಗಿಯೇ ಪ್ರಭುತ್ವದ ದುರ್ನಡತೆಯನ್ನು ಪ್ರಶ್ನಿಸಿ, ನೊಂದವರ ದನಿಯಾಗಿದ್ದ ರವೀಶ್ ಅವರ ಫೇಸ್ಬುಕ್ ಪೋಸ್ಟ್ ಏನೋ ನಿಗೂಢವಾದ ಸತ್ಯವೊಂದನ್ನು ಹೇಳುವಂತಿದೆ. ಅದನ್ನು ಅವರೇ ಮುಂದಿನ ದಿನಗಳಲ್ಲಿ ಬಿಚ್ಚಿಡಬೇಕಿದೆ. ಅಲ್ಲಿಯವರೆಗೂ ಏನಾಗುತ್ತೋ ಕಾದು ನೋಡೋಣ. ಅಲ್ವ... ಎನ್ನುತ್ತಾ... ಎನ್ಡಿಟಿವಿಯು ಯಾರ ಜಪ್ತಿಗೂ ಸಿಗದ ನವಿಲಿನಂತೆ, ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಿ ಉಳಿದುಕೊಳ್ಳಲಿ.

-ಸಮಸಮಾಜಕ್ಕಾಗಿ ಕನ್ನಡ ಒನ್ ನ್ಯೂಸ್ ಬಳಗ

© Copyright 2022, All Rights Reserved Kannada One News