ಎಪ್ಪತ್ತರ ದಶಕ: ದಲಿತ ಹೋರಾಟಗಳಿಗೆ ಕಾವು ಕೊಟ್ಟ ಕಾಲಘಟ್ಟ: ಡಾ. ರವಿಕುಮಾರ್ ನೀಹ ಅವರ ಅಂಕಣ

ಎಪ್ಪತ್ತರ ದಶಕ: ದಲಿತ ಹೋರಾಟಗಳಿಗೆ ಕಾವು ಕೊಟ್ಟ ಕಾಲಘಟ್ಟ: ಡಾ. ರವಿಕುಮಾರ್ ನೀಹ ಅವರ ಅಂಕಣ

Updated : 11.09.2022

ಕಳೆದ ಶತಮಾನದ ಎಪ್ಪತ್ತರ ದಶಕ ಅನೇಕ ಹುಟ್ಟುಗಳಿಗೆ ಕಾರಣವಾಗಿದೆ. ಪ್ರಗತಿಪರ ನಿಲುವುಗಳು, ಸಮಾಜಮುಖಿ ಕಾಳಜಿಗಳು ಬರಹ ಮತ್ತು ಬದುಕಿನಲ್ಲಿ ಮುಖ್ಯವಾಗಿ ಕಾಣಿಸಿಕೊಂಡವು. ಹೋರಾಟ, ಸಂಘಟನೆ ಮುಂತಾದವು ಮುನ್ನೆಲೆಗೆ ಬರತೊಡಗಿದವು. ಇದರ ಜೊತೆಗೆ ದಲಿತ ಚಳವಳಿ ಮತ್ತು ಸಾಹಿತ್ಯ ಹುಟ್ಟುವಿಕೆಗೂ ಈ ಕಾಲ ಕಾರಣವಾಯಿತು. ಹಾಗೆಯೇ ಇದು ವಿಭಿನ್ನವಾಗಿ ರೂಪುಗೊಳ್ಳುವಿಕೆಗೆ ಸಜ್ಜುಗೊಂಡ ಕಾಲ. ಆ ಕಾಲದ ರಾಜಕೀಯ ಸನ್ನಿವೇಶಗಳು, ಸಾಮಾಜಿಕ ಘಟನೆಗಳು, ಪಕ್ಕದ ರಾಜ್ಯದೊಳಗಿನ ಪ್ರಭಾವಗಳು, ಅರಿವಿನ ಪ್ರಜ್ಞೆ, ತಳಸಮುದಾಯದವರು ಶಿಕ್ಷಣಕ್ಕೆ ತೆತ್ತಿಕೊಂಡಿದ್ದು ಇವೆಲ್ಲ ಜಾಗೃತಿಗೆ ಕಾರಣವಾಗತೊಡಗಿದವು. ಬಾಬಾಸಾಹೇಬ ಅಂಬೇಡ್ಕರ್‍ರ ಕ್ರಾಂತಿಕಾರಿ ಹೋರಾಟಗಳು, ಬರಹಗಳು, ಬಿ.ಕೃಷ್ಣಪ್ಪನವರು ಭದ್ರಾವತಿಯಲ್ಲಿ ರೂಪಿಸಿದ ‘ದಸಂಸ’ ಆರಂಭಿಕ ಆಲೋಚನೆ, ಬಸವಲಿಂಗಪ್ಪನವರ ‘ಬೂಸಾ ಪ್ರಕರಣ’, ಮುಖ್ಯಮಂತ್ರಿ ದೇವರಾಜು ಅರಸರು ಜಾರಿಗೆ ತಂದ ಮಲಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿಯ ಒಡೆಯ.. ದಂತಹ ಅನೇಕ ಜನಪರ ಕಾನೂನುಗಳು, ಕುವೆಂಪು ಅವರ ಕ್ರಾಂತಿಕಾರಿ ಭಾಷಣಗಳು, ಎಚ್ಚೆತ್ತ ದಲಿತರ ಸಂಘಟನೆ.. ಇವೆಲ್ಲವೂ ದಲಿತರು  ಸಾಂಪ್ರದಾಯಿಕ ವ್ಯವಸ್ಥೆಯನ್ನು ಪ್ರತಿರೋಧಿಸಲು ಕಾರಣವಾದವು. ಇದರ ಪರಿಣಾಮವಾಗಿ ದಲಿತರ ನೂರಾರು ಧ್ವನಿಗಳು ಒಟ್ಟಿಗೆ ಬೀದಿಗೆ ಬಂದವು.

ದಲಿತ ಸಾಹಿತ್ಯ ಮೊದಲಬಾರಿಗೆ ಕೇರಿಯಿಂದ ಹೊರಬರತೊಡಗಿತು. ಕಾವ್ಯ, ಕಾದಂಬರಿ, ನಾಟಕ, ಇತ್ಯಾದಿ ಪ್ರಕಾರಗಳಲ್ಲಿ ಅನಾವರಣಗೊಳ್ಳತೊಡಗಿತು. ಸಾಹಿತ್ಯದ ಭಾಷೆ, ನೋಟ ಕ್ರಮ, ಲಯ, ಅಭಿವ್ಯಕ್ತಿ ಎಲ್ಲವೂ ಸಾಹಿತ್ಯಕ್ಕೆ ಹೊಸದಾಗಿ ಕಾಣತೊಡಗಿತು. ಇವೆಲ್ಲ ಸಾಂಪ್ರದಾಯಿಕ ದೃಷ್ಟಿಕೋನಗಳ ಹಿಡಿತಕ್ಕೆ ಸಿಗದೇ ತಮ್ಮದೇ ನೋಟಕ್ರಮವನ್ನು ಪಡೆಯುವಂತೆ ಒತ್ತಾಯಿಸಿದವು. ಕನ್ನಡ ಸಾಹಿತ್ಯಕ್ಕೆ ದಲಿತ ಸಾಹಿತ್ಯ ಕೊಟ್ಟ ‘ಸಾಂಸ್ಕೃತಿಕ ಕಣ್ಣು’ ಇಡೀ ವಲಯವನ್ನೇ ಭಿನ್ನವಾಗಿ ನೋಡುವಂತೆ ಪ್ರೇರೇಪಿಸಿತು. ಹೊರಗಿದ್ದವರು ದಲಿತ ಸಂಕಟಗಳನ್ನು ಕಟ್ಟಿಕೊಡಲು ಮುನ್ನೆಲೆಗೆ ಬಂದರು.

ದಲಿತ ಸಾಹಿತ್ಯ ಎಂಬ ಅಸ್ಮಿತೆ ಅನಾವರಣತೊಳ್ಳತೊಡಗಿದಂತೆ ಅದಕ್ಕೆ ಅನೇಕ ಟೀಕೆಗಳು ಬರತೊಡಗಿದವು. ಹಾಗೆಯೇ ಅದನ್ನು ನೋಡುವ ಬಗೆ ಹೇಗೆ ಎಂಬ ಪ್ರಶ್ನೆಗಳು ಹುಟ್ಟತೊಡಗಿದವು. ಬಹುಪಾಲು ಇಂಗ್ಲೀಷ್ ಅಧ್ಯಾಪಕರಾಗಿದ್ದ ನವ್ಯದ ವಿಮರ್ಶಕರಿಗೆ ಈ ಸಾಹಿತ್ಯ ಹಿಡಿತಕ್ಕೆ ಸಿಗದೇ ಹೋಯಿತು. ಒಂದು ಕಡೆ ಟೀಕೆಗಳ ಸುರಿಮಳೆ ಮತ್ತೊಂದು ಕಡೆ ದಲಿತ ಸಾಹಿತ್ಯವನ್ನು ನೋಡುವ ದೃಷ್ಟಿಕೋನದ ಸಮಸ್ಯೆ ಎದುರಾಯಿತು. ಒಂದಷ್ಟು ರಿಯಾಯಿತಿ ಎಂಬಂತೆ ಬರಹಗಳು ಬಂದವು. ಆದರೆ ಅವುಗಳು ದಲಿತ ಸಾಹಿತ್ಯವನ್ನು ವಿಶ್ಲೇಷಿಸುವಲ್ಲಿ ಏದುಸಿರುಬಿಡುತ್ತಿದ್ದವು. ತಮ್ಮದಲ್ಲದ ಜಗತ್ತನ್ನು ಪ್ರವೇಶಿಸುವ ಬಗೆಯನ್ನು ಕಂಡುಕೊಳ್ಳುವಲ್ಲಿಯೇ ಇಡೀ ಕಾಲವನ್ನು ಕಳೆದರು. ದಲಿತ ಸಾಹಿತ್ಯವನ್ನು ಓದುವ ನೊಡುವ ಬಗೆಯನ್ನು ಎಲ್ಲಿಂದ ದಕ್ಕಿಸಿಕೊಳ್ಳಬೇಕು ಎಂಬ ಅರಿವು ಅವರಿಗೆ ಹೊಳೆಯುವಷ್ಟರಲ್ಲಿ ತಡವೂ ಆಗಿತ್ತು.
ದಲಿತ ಸಾಹಿತ್ಯವನ್ನು ಓದುವ, ಪರಿಭಾವಿಸುವ ವಿಶ್ಲೆಷಿಸುವ ಬಗೆಯಾದರೂ ಯಾವುದು? ಅವುಗಳನ್ನು ಎಲ್ಲಿಂದ ದಕ್ಕಿಸಿಕೊಳ್ಳಬೇಕು. ಅದಕ್ಕಾಗಿ ಹೊಸ ನುಡಿಗಟ್ಟುಗಳನ್ನು ಕಟ್ಟಿಕೊಳ್ಳುವ ಅಗತ್ಯವಿತ್ತು. ಆದರೆ ಅಂಥ ಸಾಂಸ್ಕೃತಿಕ ನೋಟಕ್ರಮಗಳನ್ನು ಆಯ್ದು ತರಬೇಕಾದ ವ್ಯವಧಾನ ಮತ್ತು ಕಣ್ಣುಗಳು ಆ ಕಾಲದ ವಿಮರ್ಶಕರಿಗೆ ದಕ್ಕಲಿಲ್ಲ. ಪರಿಣಾಮವಾಗಿ ಸಿದ್ದರೂಪಿಯಾದ ದೃಷ್ಟಿಕೋನಗಳಿಂದ ದಲಿತ ಸಾಹಿತ್ಯವನ್ನು ನೋಡತೊಡಗಿದರು. ಹೀಗಾಗಿ ಇಡೀ ದಲಿತ ಸಾಹಿತ್ಯ ಸಾಹಿತ್ಯದ ಚರ್ಚೆಯ ಭಾಗವಾಗಲಿಲ್ಲ. ಆದರೆ ಗುಪ್ತವಾಗಿ ಓದು-ಬರಹದ ರಾಜಕಾರಣ ನಡೆಯುತ್ತಿತ್ತು. 

ಓದು-ಬರಹ ರಾಜಕಾರಣ ಎಂದು ಯಾಕೆ ಕರೆಯಲಾಗುತ್ತಿದೆ? ಇಂಥದ್ದೊಂದು ಪರಿಭಾಷೆಯ ಮೂಲಕ ಸಾಹಿತ್ಯದ ಓದ-ಬರಹವನ್ನು ನೋಡಬೇಕೆ? ಎನಿಸಬಹುದು. ಆದರೆ ಕನ್ನಡ ಸಾಹಿತ್ಯದ ವಲಯದೊಳಗೆ ನಡೆದಿರಬಹುದಾದ ಈ ತರತಮವನ್ನು ಈಗ ಹಿಂದಿರುಗಿ ನೋಡಬೇಕಾಗಿದೆ. ಈ ಬಗೆಗಿನ ಚರಿತ್ರೆ ದೀರ್ಘವಾಗಿಯೇ ಇದೆ. ಓದುಗ ವರ್ಗ, ವಿಮರ್ಶಾ ವರ್ಗವನ್ನು ಒಳಗು ಮಾಡಿಕೊಂಡು ನೋಡಿದರೆ ‘ಯಾವ ಕೃತಿಯನ್ನೂ ಬೇಕಾದರೂ ಮೇಲೆಕ್ಕೆತ್ತುವ ಮತ್ತು ತುಳಿಯುವ ಹುನ್ನಾರ’ ನಿರಂತರವಾಗಿ ನಡೆಯುತ್ತಲೇ ಇದೆ. ತಮ್ಮ ತಮ್ಮ ಆಪ್ತರ ಕೃತಿಗಳನ್ನು ಕುರಿತು ಬಂದಿರುವ ವಿಮರ್ಶೆಗಳು ಒಂದು ಬಗೆಯದಾದರೆ; ವರ್ಗ, ಘಟ್ಟ, ನಿಲುವು, ಎಡ-ಬಲ, ಜಾತಿ ಮುಂತಾದವೆಲ್ಲ ಓದುವ ಕ್ರಿಯೆಯಲ್ಲಿ ಕೆಲಸ ಮಾಡುತ್ತಿರುತ್ತವೆ. ಸಾಹಿತ್ಯದ ಈ ನಿಲುವು ಅನೇಕ ಕೃತಿಗಳನ್ನು ಚರ್ಚಿಸದೇ ಬದಿಗೆ ಸರಿಸಿವೆ. ಇಂಥ ನೆಲೆಯಿಂದ ಅನೇಕ ಮುಖ್ಯ ಕೃತಿಗಳು ಚರ್ಚೆಯಾಗದೆ ಕಳೆದುಹೋಗಿವೆ. ಇದು ಕೇವಲ ಮೇಲಿನ ಕಾರಣಗಳಷ್ಟೇ ಆಗಿರದೆ, ಆದ್ಯತೆಯೂ ಜತೆಗೆ ಸಮಯದ, ಓದುವ ತಾಳ್ಮೆಯೂ ಕಾರಣವಿರಬಹುದು.

ಇದಕ್ಕೆ ಸಂಬಂಧಿಸಿದಂತೆ ಕೆಲವು ಉದಾಹರಣೆಗಳನ್ನು ಇಟ್ಟುಕೊಂಡು ನೋಡಬಹುದು. ಅನಂತಮೂರ್ತಿಯವರು ಗಿರಿಯವರ ‘ಗತಿಸ್ಥಿತಿ’ ಕೃತಿ ಬಿಡುಗಡೆಯಾಗುವುದಕ್ಕೆ ಮುಂಚೆಯೇ ‘ಸಾಕ್ಷಿ’ಯಲ್ಲಿ ‘ಈಚಿನ ಕನ್ನಡ ಕಾವ್ಯ’ ಶೀರ್ಷಿಕೆಯಲ್ಲಿ ‘ಕನ್ನಡ ಭಾಷೆಗೆ ನಡೆಸಿದ ಚಿಕಿತ್ಸೆ’ ಎಂದು ಬರೆದಿದ್ದರು. ಇದು ಮುಂದುವರೆದು ಇದೇ ‘ಗತಿಸ್ಥಿತಿ’ ಬಗ್ಗೆ ದೀರ್ಘವಾದ ವಿಚಾರ ಚಿಂತನೆಗಳು ಲೇಖನದ ರೂಪದಲ್ಲಿ ಆ ಸಂದರ್ಭದಲ್ಲಿ ಅಭಿವ್ಯಕ್ತವಾದವು. ಅಷ್ಟೇ ಅಲ್ಲ. ಇದು ಈ ಸಂದರ್ಭದ ಪ್ರಾತಿನಿಧಿಕ ಕೃತಿ ಎಂಬಂತೆ ವಿಮರ್ಶಕರು ಗುರುತಿಸಿದ್ದರು. ಆ ಕಾದಂಬರಿ ಪ್ರಕಟವೂ ಆಯಿತು. ನಿರೀಕ್ಷಿಸಿದ ಮಟ್ಟಕ್ಕೆ ಆ ಕೃತಿ ಏರಲಿಲ್ಲ. ಆದರೆ ಅನಂತಮೂರ್ತಿಯವರು ಮತ್ತು ಇತರರ ವಿಮರ್ಶೆ ಹಾಗೆ ಉಳಿದಿವೆ.

ಈ ಘಟನೆ ನಮ್ಮ ಮುಂದೆ ಮತ್ತೆ ಮತ್ತೆ ಓದು-ಬರಹ ರಾಜಕಾರಣವನ್ನು ಮುಂದಿಡುತ್ತಿದೆ. ಓದುವಿಕೆಯಾಗಲೀ ಬರಹವಾಗಲೀ ಪಕ್ಷಪಾತದಿಂದ ಕೂಡಿರಬಾರದು ಎಂಬ ನೆಲೆಯನ್ನು ಪದೇ ಪದೇ ಇದು ಸೂಚಿಸುತ್ತಿದೆ. ಆದರೆ ಅದೇ ಅನಂತಮೂರ್ತಿಯವರು ‘ವಿಮರ್ಶೆಯಲ್ಲಿ ಪಕ್ಷಪಾತ ಯಾಕೆ ತಪ್ಪು?’ ಎಂಬ ನಿಲುವನ್ನು ತಾಳಿದ್ದರು. ಅವರು ಕೊಟ್ಟ ಸಮರ್ಥನೆ ‘ಎಲ್ಲ ಬಗೆಯ ಸಾಹಿತ್ಯದಲ್ಲಿ ಒಂದಲ್ಲ ಒಂದು ಗುಣವಿದೆ ಅದನ್ನು ಗ್ರಹಿಸುವುದನ್ನು ಕಲಿಯಬೇಕು ಎನ್ನುವ ಅಕಡೆಮಿಕ್ ವಿಮರ್ಶಕರು ನಿಜವಾಗಿ ಏನನ್ನೂ ಮೆಚ್ಚಲಾರರು. ಪಕ್ಷಪಾತ ಯಾಕೆ ತಪ್ಪು? ನಮ್ಮ ಅತ್ಯುತ್ತಮ ವಿಮರ್ಶೆ ಬರುವುದು ನಾವು ತುಂಬ ಮೆಚ್ಚುವ ಸಾಹಿತ್ಯವನ್ನು ತೀವ್ರವಾಗಿ ಅನುಭವಿಸಿದಾಗ ಎಷ್ಟು ವಿಮರ್ಶಕ ಧೋರಣೆಯಿದ್ದರೂ ಕೃತಿಯ ಬಗ್ಗೆ ಪಕ್ಷಪಾತಿಯಾಗಬೇಕೆಂದೂ ಉತ್ಸಾಹ ಹುಟ್ಟಿದಾಗ, ಎಲಿಯಟ್, ಪೌಂಡ್, ಲೀವಿಸ್ ಇದರ ಅತ್ಯುತ್ತಮ ವಿಮರ್ಶೆಯಲ್ಲಿ ಈ ಪಕ್ಷಪಾತ. ತುಂಬ ವಿಮರ್ಶಕ ಪ್ರಜ್ಞೆಯಿದ್ದವರ ಪಕ್ಷಪಾತ ಕಾಣಿಸುತ್ತದೆಯಲ್ಲವೆ? ನಮ್ಮ ಸಾಹಿತ್ಯದ ಜೀವಂತಿಕೆ ಸಣ್ಣಗೆ ಉರಿಯುತ್ತಿರುವಾಗ ‘ಸಂಕ್ರಾಂತಿ’ ‘ಗತಿಸ್ಥಿತಿ’ ‘ಮಹಾಪ್ರಸ್ಥಾನ’ಗಳಿಂದ ಕನ್ನಡದ ಬಗ್ಗೆ ಭರವಸೆ ಹುಟ್ಟುವುದಲ್ಲವೆ? ಇವುಗಳ ಬಗ್ಗೆ ವಿವೇಕದ ವಿಮರ್ಶೆಯ ಜೊತೆಗೇ ಉತ್ಸಾಹದಿಂದಲೂ ಮಾತಾಡುವುದು ಸರಿಯಲ್ಲವೇ? ಅವಶ್ಯವಲ್ಲವೆ? (ಸಾಕ್ಷಿ ಶರತ್ ಸಂಚಿಕೆ ಪು.112)’ಎಂದಿದ್ದರು.

ಇದು ಎಲ್ಲ ಕಾಲಕ್ಕೂ ಒಂದು ರೀತಿಯ ಎಚ್ಚರವನ್ನೂ, ಆಂತರ್ಯದಲ್ಲಿ ಓದುವ ಕ್ರಿಯೆ ಮಾಡಬಹುದಾದ ಸಾಂಸ್ಕೃತಿಕ ರಾಜಕಾರಣವನ್ನೂ ಹೇಳುತ್ತಿದೆ. ಅದಷ್ಟೇ ಅಲ್ಲದೆ, ಗುಪ್ತವಾಗಿ ಸಾಹಿತ್ಯವಿಮರ್ಶೆ, ಓದುವ ಕ್ರಿಯೆ ನಡೆದು ಬಂದಿರುವ ಚರಿತ್ರೆಯನ್ನು ತಿಳಿಸುತ್ತಿದೆ. ‘ಗತಿಸ್ಥಿತಿ’ಯಂಥ ಪ್ರಸಂಗಗಳನ್ನು ನಮ್ಮ ಪರಂಪರೆಯಿಂದ ಸಾಕಷ್ಟು ಆಯ್ದು ತೋರಿಸಬಹುದು. ಕುವೆಂಪುರವರ ಕಾದಂಬರಿಗಳು ಬಂದಾಗ ‘ಕಾದಂಬರಿಗಳಿಗೆ ಕೇಂದ್ರವಿಲ್ಲ, ಅವು ಕಾದಂಬರಿಗಳೇ ಅಲ್ಲ’ ಎಂಬಂಥ ಮಾತುಗಳು, ತಿರುಮಲಾಂಭರ ಕೃತಿಗಳಿಗೆ ಮಾಸ್ತಿಯವರು ಬರೆದಂಥ ವಿಮರ್ಶೆ, ಮಹಿಳೆಯರ ಕೃತಿಗಳಿಗೆ ಪುರುಷ ವಿಮರ್ಶಕರು ಬರೆದಂಥ ಬರಹಗಳು... ಮುಂತಾದ ಅನೇಕ ಬರಹಗಳನ್ನು ನಮ್ಮ ಮುಂದೆ ಒಡ್ಡಿಕೊಳ್ಳಬಹುದು. ಈ ತರದ ಓದು-ಬರಹ ರಾಜಕಾರಣದ ಪಾದದಡಿಗೆ ಸಿಕ್ಕಿ ನುಜ್ಜುಗುಜ್ಜಾಗಿರುವ ಅನೇಕ ಕೃತಿಗಳು ನಮ್ಮ ಮುಂದೆ ಇವೆ.  

ಯಾಕೆ ಇಂಥದ್ದೊಂದು ಸ್ಥಿತಿ ನಮ್ಮ ಓದುಗ/ವಿಮರ್ಶೆಗೆ ಬಂದೊದಗಿದೆ? ಇದು ಮುಖ್ಯವಾಗಿ ಓದುವ ಗುಣವೂ ತನ್ನ ಕಾಲದ ಮತ್ತು ತನ್ನ ಸುತ್ತಲಿನ ಜಗತ್ತಿನ ಜತೆಗಿನ ಸಂಬಂಧವನ್ನೂ ಸೂಚಿಸುತ್ತಿದೆ. ನಿಜ, ತಮ್ಮ ಆಪ್ತರ ಕೃತಿಗಳನ್ನು ತೀವ್ರವಾಗಿ ನಾವು ಓದುವ ಕಾರಣದಿಂದ ನಮ್ಮ ಸಾಹಿತ್ಯವಿಮರ್ಶೆ ಶ್ರೀಮಂತವಾಗಿರುವುದು. ಆದರೆ ಅದಷ್ಟೇ ಆಗಿಲ್ಲ.  ಸಾಕಷ್ಟು ಕೃತಿಗಳು ಚರ್ಚೆಯಾಗದೇ ಬದಿಗೆ ಸರಿದಿವೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿ ಬಂದಾಗ ನವ್ಯ ವಿಮರ್ಶಕರು ರೂಪ, ತಂತ್ರ ಮತ್ತೇ ಏನೇನೋ ಹೇಳಿ ಅದರ ಮಹತ್ವವನ್ನು ಚರ್ಚಿಸದೆ ಕೈಬಿಟ್ಟಿದ್ದರು. ದಲಿತ-ಬಂಡಾಯದ ಬರಹಗಾರರು ಬರುವ ತನಕ ಈ ಕೃತಿಯು ಮುಖ್ಯನೆಲೆಗೆ ಬರಲೇ ಇಲ್ಲ. ದಲಿತ-ಬಂಡಾಯ ವಿಮರ್ಶಕರು ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಸಾಂಸ್ಕೃತಿಕ ಆಯಾಮದಡಿಯಲ್ಲಿ ಮುನ್ನೆಲೆಗೆ ತಂದರು. ಇದಕ್ಕೆ ಅನೇಕ ಕಾರಣಗಳಿದ್ದರೂ ಮುಖ್ಯವಾಗಿ ಕೃತಿಯೊಂದನ್ನು ಚರ್ಚೆಯ ಮುನ್ನೆಲೆಗೆ ತರುವ; ಇಲ್ಲವೇ ದಮನ ಮಾಡುವ ಎರಡೂ ಅಂಶಗಳು ಕೃತಿಯೊಳಗೆ ಇರುವುದಿಲ್ಲ. ಅವು ಎಷ್ಟೋ ಸಂದರ್ಭದಲ್ಲಿ ಹೊರಗಿನದವಾಗಿರುತ್ತವೆ.  

ಸಾಹಿತ್ಯ ಕೃತಿಯೊಂದು ಚರ್ಚೆಯಿಂದ ದೂರ ಉಳಿಯುವುದಕ್ಕೆ ಕೃತಿಯೊಳಗಿನ ಅಂಶವಷ್ಟೇ ಕಾರಣವಾಗದೆ ಅನೇಕ ಸಾಹಿತ್ಯೇತರ ನೆಲೆಗಳು ಮತ್ತು ಅಸಾಹಿತ್ಯಕ ಅಂಶಗಳು ಕಾರಣವಾಗಿವೆ. ಅದು ಲಿಂಗ, ಜಾತಿ, ಧರ್ಮ, ಘಟ್ಟ, ಎಡ-ಬಲ ಎಲ್ಲವೂಗಳು ಕೃತಿಯೊಂದರ ಚರ್ಚೆಯಲ್ಲಿ ಮುಖ್ಯವಾಗಿ ಕೆಲಸಮಾಡುತ್ತಿವೆ. ವಿಮರ್ಶೆ/ಓದುವ ಕ್ರಿಯೆಗಳು ಸಾಹಿತ್ಯಕವಷ್ಟೇ ಅಲ್ಲ. ಅದು ಸಾಮಾಜಿಕ ಕ್ರಿಯೆಯೂ ಕೂಡ ಹೌದು. ಭಾರತೀಯ ಸಾಮಾಜಿಕ ಸಂಗತಿಗಳು ಕೃತಿಯೊಂದರ ಓದುವಿಕೆಗೆ ಮತ್ತು ವಿಮರ್ಶೆಗೆ ಕಾರಣವಾಗುತ್ತಿವೆ. ಹೀಗಾಗಿ ಕೃತಿಯೊಂದು ಸಾಂಸ್ಕೃತಿಕ ಆಯಾಮವನ್ನು ಪಡೆಯಲು ಇಂಥ ಅಂಶಗಳು ಮುಖ್ಯವಾಗಿ ಇಂದಿನ ಸಂದರ್ಭದಲ್ಲಿ ಇಣುಕುತ್ತಿವೆ. ಇಂಥವುಗಳನ್ನು ದಾಟುವ ಸವಾಲು ಓದುವ/ವಿಮರ್ಶಕ ವರ್ಗಕ್ಕೆ ಯಾವಾಗಲೂ ಇದ್ದೇ ಇದೆ. ಆದರೆ ದಾಟಿರುವ ಸಾಧ್ಯತೆಗಳು ಮಾತ್ರ ತುಂಬಾ ಕಡಿಮೆಯೇ.

ಈ ಓದು-ಬರಹ ರಾಜಕಾರಣವನ್ನು ಇಲ್ಲಿ ಚರ್ಚಿಸುವ ಅಗತ್ಯವಾದರೂ ಯಾಕೆ? ಎಂಬ ಪ್ರಶ್ನೆ ಏಳಬಹುದು. ಕನ್ನಡದ ಪರಂಪರೆಯೊಳಗೆ ಈ ತರ ಓದು-ಬರಹ ರಾಜಕಾರಣಕ್ಕೆ ಒಳಗಾಗಿ ಅನೇಕ ಕೃತಿಗಳು ಮುಂಚೂಣಿಗೆ ಬರದೇ ಕಾಣೆಯಾಗಿವೆ. ಯಾಕೆ ಕೆಲವು ಕೃತಿಗಳು ಅರ್ಥವಾಗಲ್ಲ. ಅರ್ಥವಾಗದಿರಲು ಕೃತಿಗಳಲ್ಲೇನೇದಾರೂ ತೊಡಕುಗಳಿವೆಯೇ? ಇದ್ದರೆ ಆ ತೊಡಕುಗಳನ್ನು ನಿವಾರಿಸಿಕೊಳ್ಳಲು ನಾವು ಪ್ರಯತ್ನಿಸಿಲ್ಲವೇಕೆ? ಅವು ಕೇವಲ ತಾಂತ್ರಿಕ ಕಾರಣಗಳೋ? ಅಥವಾ ತಿಳುವಳಿಕೆಯಲ್ಲಿನ ಕಾರಣಗಳೋ? ಮುಂದುವರೆದು ಸಿದ್ಧತೆಗಳ ಕೊರತೆಯೋ? ಅಥವಾ ಇವುಗಳೆಲ್ಲವನ್ನು ಮೀರಿ ಮುಖ್ಯವಾಗಿ ನಮ್ಮ ಓದುಗ/ವಿಮರ್ಶಕ ವಲಯದಲ್ಲಿನ ನಿಲುವುಗಳೋ? ಚರ್ಚಿಸಬೇಕಾಗಿದೆ.

ಗೋಪಾಲಕೃಷ್ಣ ಅಡಿಗರ ಕಾವ್ಯಗಳು ಬಂದಾಗ ನಮ್ಮ ಓದುಗ/ವಿಮರ್ಶ ವಲಯಕ್ಕೆ ಅರ್ಥವಾಗುತ್ತವೆ. ಬಿ.ಸಿ.ರಾಮಚಂದ್ರಶರ್ಮರ ಕಾವ್ಯಗಳು ಬಂದಾಗ ಅರ್ಥವಾಗುತ್ತವೆ. ದಮನಿತರ ಕೃತಿಗಳು ಬಂದಾಗ ಮಾತ್ರ ಅರ್ಥವಾಗುವುದಿಲ್ಲ. ಚೆನ್ನಣ ವಾಲೀಕಾರರ ‘ಬೆಳ್ಯ’ ಬಂದಾಗ ಕೂಡ ಅರ್ಥವಾಗುತ್ತಿಲ್ಲ ಎಂಬ ಕೂಗು ಎದ್ದಿತ್ತು. ದೇವನೂರು ಮಹಾದೇವರ ‘ಕುಸುಮಬಾಲೆ’ ಬಂದಾಗಲೂ ಇದು ಮುಂದುವರೆದಿತ್ತು. ‘ಕುಸುಮಬಾಲೆಯನ್ನು ಕನ್ನಡಕ್ಕೆ ಅನುವಾದಿಸಿ’ ಎಂಬ ಮಾತುಗಳು ಕೇಳಿ ಬಂದಿದ್ದವು. ಸ್ಥಳೀಯ ಜಗತ್ತಿನ ನೆಲೆಗಳು ಕಾವ್ಯವೋ ಕಥೆಯೋ ಇನ್ಯಾವುದೋ ಪ್ರಕಾರದಲ್ಲಿ ಬಂದಾಗ ಮಾತ್ರ ಅರ್ಥವಾಗುವುದಿಲ್ಲ. ‘ಬೆಳ್ಯ’, ‘ಕುಸುಮಬಾಲೆ’, ‘ಮರಣಮಂಡಲ ಮಧ್ಯದೊಳಗೆ’, ಜಂಬಣ್ಣ ಅಮರಚಿಂತರ ‘ಕುರಿಮಯ್ಯ ಮತ್ತು ಅಂಕುಶದೊಡ್ಡಿ’ ಮನಜರ ‘ಮಾಗಿ’, ಅರವಿಂದ ಮಾಲಗತ್ತಿಯವರ ‘ಕಾರ್ಯ’... ಇಂಥವುಗಳಲ್ಲಿ ಕೇವಲ ಸಂವಹನದ ಕೊರತೆಯಿದೆಯೋ ಅಥವಾ ಬೇರೆನಾದರೂ ಇದೆಯಾ? ಬೆಳ್ಯವನ್ನು ಪೂರ್ಣವಾಗಿ ಅರ್ಥವಾಗುತ್ತಿಲ್ಲ ಎಂಬ ನೆಪವೊಡ್ಡಿ ಚರ್ಚೆಯ ಆಚೆಗಿಡಲಾಯಿತು; ಮುಳ್ಳೂರು ನಾಗರಾಜರ ‘ಮರಣಮಂಡಲ ಮಧ್ಯದೊಳಗೆ’ಗೂ ಇದೇ ಸ್ಥಿತಿ ಬಂದೊದಗಿತು. ಕುಸುಮಬಾಲೆಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಂದ ಮೇಲೆ ಅಗತ್ಯಕ್ಕಿಂತ ಹೆಚ್ಚೇ ಚರ್ಚೆಗಳೂ ಆದವು. ಈಗಲೂ ಆಗುತ್ತಲೇ ಇವೆ. ಹಾಗಾದರೆ ಕುಸುಮಬಾಲೆ ಈಗ ಅರ್ಥವಾಗಿಬಿಟ್ಟಿದೆಯಾ? ಅಥವಾ ಅರ್ಥವಾಗಿರುವಂತೆ ನಟಿಸುತ್ತಿದೆಯಾ ನಮ್ಮ ಸಾಹಿತ್ಯ ವಲಯ. ಮೊದಲೇಕೆ ಅರ್ಥವಾಗಿರಲಿಲ್ಲ. ಹಾಗಾದರೆ ಅರ್ಥವೆಂಬುದು ಏನು? ಅರ್ಥಕ್ಕಿರಬಹುದಾದ ಸಂಕುಚಿತ ಮತ್ತು ವಿಶಾಲ ಅರ್ಥ ಏನು? ಇದನ್ನೇ ಕುವೆಂಪುರವರ ‘ರಾಮಾಯಣ ದರ್ಶನಂ’ಗೂ ಅನ್ವಯಿಸಬಹುದು. ಪ್ರಶಸ್ತಿ ಬರುವವರೆಗೂ ‘ರಾಮಾಯಣ ದರ್ಶನಂ’ ಅರ್ಥವಾಗದ್ದಿದುದು ಪ್ರಶಸ್ತಿ ಬಂದೊಡನೆ ಅರ್ಥವಾಗಿಬಿಟ್ಟಿತು. ಅಂದರೆ ಕೃತಿಯೊಂದು ಅರ್ಥವಾಗುವುದು ಅದಕ್ಕೆ ಪ್ರಶಸ್ತಿ ಮತ್ತಿತ್ತರ ಲೌಕಿಕ ಅಂಶಗಳಲ್ಲಿ ಅಡಗಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಈ ಅರ್ಥ ಎಂಬುದಕ್ಕೆ ಲೌಕಿಕದ ಆಚೆ ಇರಬಹುದಾದ ಸಾಧ್ಯತೆಗಳಿಲ್ಲವೆ. ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ’ ಆಗುವುದು ಹೇಗೆ? ಅರ್ಥದ ಲೌಕಿಕ ನೆಲೆಯನ್ನು ಬಿಡಿಸಿಕೊಂಡು ಕೃತಿಯೊಂದನ್ನು ಆಪ್ತವಾಗಿ ಓದುವ ದಾರಿಯಾದರೂ ನಿರ್ಮಾಣವಾಗುವುದು ಹೇಗೆ?

ಒಂದು ಹಂತದವರೆಗೆ ಕುಸುಮಬಾಲೆ ಅರ್ಥವಾಗುವುದಿಲ್ಲ ಎಂಬುದನ್ನು ದಾಟಿತು. ಆದರೆ ಕೇಬಿ ಸಿದ್ದಯ್ಯನವರ ಕಾವ್ಯ, ವಾಲೀಕಾರರ ‘ಬೆಳ್ಯ’, ಮುಂತಾದ ದಲಿತ ಸಾಹಿತ್ಯಕ್ಕೆ ಆರಂಭದಿಂದಲೂ ಅಂಟಿಕೊಂಡು ಬಂದ ‘ಅರ್ಥವಾಗಲ್ಲ’ ಎಂಬುದರಿಂದ ಬಿಡುಗಡೆಯಾಗಿಲ್ಲ. ಅಡಿಗರು, ರಾಮಚಂದ್ರ ಶರ್ಮರ ಕಾವ್ಯಗಳು ಈ ನೆಲದವಾಗಿರಲಿಲ್ಲ. ಅವು ವೈದಿಕ ಪುರಾಣಗಳಿಂದ ಹೆಕ್ಕಿ ತಂದಂಥವು. ನಮ್ಮದಲ್ಲದ ವೈದಿಕ ಪುರಾಣಗಳನ್ನು ಹುಡುಕಿ ಓದಿ ಆ ಪ್ರತಿಮೆ, ರೂಪಕಗಳನ್ನು ಅರ್ಥೈಸಿಕೊಂಡು ಅಡಿಗ ಮತ್ತಿತ್ತರ ಕಾವ್ಯ ಅರ್ಥವಾಗುತ್ತಿವೆ ಎಂದು ಬೀಗುವ ಓದುವ ವರ್ಗ ಮತ್ತು ವಿಮರ್ಶವರ್ಗ; ದಮನಿತ ಸಮುದಾಯದಿಂದ ಬಂದ, ಅದರಲ್ಲೂ ಈ ನೆಲದ ನುಡಿಗಟ್ಟಿನ ಮೂಲಕ ಕಟ್ಟಿಕೊಂಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಮಾತ್ರ ಹೆಣಗಾಡುತ್ತಿದೆ. ಇದು ಅರ್ಥೈಸಿಕೊಳ್ಳುವಲ್ಲಿನ ಸಮಸ್ಯೆಯಲ್ಲ. ಅದು ಓದು-ಬರಹ ರಾಜಕಾರಣದ ಹುನ್ನಾರ; ವ್ಯವಸ್ಥಿತವಾಗಿ ಬದಿಗೆ ಸರಿಸುವ ರಾಜಕಾರಣ. 

ಹಾಗಾದರೆ ಕೃತಿಯೊಂದು ಅರ್ಥವಾಗದಿರುವುದಕ್ಕೆ ಕಾರಣ ಏನಿರಬಹುದು? ಅದು ಕೇವಲ ಕೃತಿಯ ಸಮಸ್ಯೆಯೇ? ಸಂವಹನದ ಸಮಸ್ಯೆಯೇ? ಅಥವಾ ಸಾಂಸ್ಕೃತಿಕ ಹುನ್ನಾರವೋ? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಈ ಅರ್ಥವಾಗದೇ ಇರುವುದಕ್ಕೆ ಹುಡುಕಿದರೆ ಅನೇಕ ಕಾರಣಗಳಿವೆ. ಮೊದಲನೆಯದು ಅರ್ಥವಾಗದೇ ಇರುವುದು - ಅದು ಓದುಗನಲ್ಲೇ ಇರಬಹುದಾದ ಸಮಸ್ಯೆ. ಅಡಿಗರಂಥವರು ಬಳಸುತ್ತಿದ್ದ ರೂಪಕ, ಪ್ರತೀಕಗಳು ಆರ್ಷೇಯ, ವೈದಿಕ ಪುರಾಣಗಳಿಂದ ಆಯ್ದಂಥವಾದರೂ ಓದುಗ ಮತ್ತು ವಿಮರ್ಶಕ ವರ್ಗ ಅರ್ಥಮಾಡಿಕೊಂಡಿತು. ಆದರೆ ದಲಿತ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಾಗ ಮಾತ್ರ ತಕರಾರನ್ನು ತೆಗೆಯುತ್ತವೆ. ವೈದಿಕ ಪುರಾಣಗಳ ರೂಪಕಗಳನ್ನು ಅರ್ಥಮಾಡಿಕೊಳ್ಳುವ ನಾವು ಈ ನೆಲದ ಕುಲ ಪುರಾಣಗಳಿಂದ ಹೆಕ್ಕಿ ತಂದ ರೂಪಕಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಇದು ಸೋಲೋ ಅಥವಾ ಹುನ್ನಾರವೋ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ನಮ್ಮ ಪರಂಪರೆಯಿಂದ ಆಯ್ದು ತಂದಿರುವ ರೂಪಕಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವ ನಾವು ಪರಂಪರೆಯನ್ನು ಗ್ರಹಿಸುವಲ್ಲಿ, ಪರಂಪರೆಯ ಆಧ್ಯಾತ್ಮವನ್ನು ಅರಗಿಸಿಕೊಳ್ಳುವಲ್ಲಿ ಸೋತಿದ್ದೇವೆ. ಹಾಗೇ ನೋಡಿದರೆ ದಲಿತ ಸಾಹಿತ್ಯ ಬೇರಯದೇ ಓದನ್ನು ಬೇಡುತ್ತದೆ. ದಲಿತ ಸಾಹಿತ್ಯದೊಳಗೆ ಪರಂಪರೆಯಿದೆ. ಸುಡುವಾಸ್ತವವಿದೆ. ಸಾಮಾಜಿಕ ಸಂಕಟವಿದೆ. ಆಧ್ಯಾತ್ಮವಿದೆ. ಈ ದಲಿತ ಸಾಹಿತ್ಯವನ್ನು ಓದುವುದು ಅರ್ಥಕ್ಕಾಗಿ ಅಲ್ಲ, ಅನುಭವಕ್ಕಾಗಿ; ಅನುಭಾವಕ್ಕಾಗಿ.


© Copyright 2022, All Rights Reserved Kannada One News