ಧರ್ಮರಕ್ಷಣೆ ಭಕ್ತರ ದಂಗೆ: ನಡುಗಿದ ಕೇಸರಿ ನಾಯಕರು: ಚಂದ್ರಪ್ರಭ ಕಠಾರಿ ಅವರ ಅಂಕಣ

ಧರ್ಮರಕ್ಷಣೆ ಭಕ್ತರ ದಂಗೆ: ನಡುಗಿದ ಕೇಸರಿ ನಾಯಕರು: ಚಂದ್ರಪ್ರಭ ಕಠಾರಿ ಅವರ ಅಂಕಣ

Updated : 02.08.2022

ಮಾಧವ ಕೃಪಾಕಾಟಕ್ಷ ಕುಟೀರದ ಪ್ರಧಾನ ಅರ್ಚಕ ವ್ಯಗ್ರನಾಗಿದ್ದ. ಕರುನಾಡಿನ ಮನೆಮುರುಕನೆಂದೇ ಕುಖ್ಯಾತನಾದ ಸಾಮಂತ ರಾಜ ತೊಮ್ಮಾಯಿಯನ್ನು ಸೇರಿ ಅರಮನೆಯ ಸಕಲ ಮಂತ್ರಿಗಳು, ಕೇಸರಿ ಮುಖ್ಯಸ್ಥ ಕುಟಿಲ ಕುಮಾರ, ಹರುಕು ಬಾಯಿ ಈಚಲಪ್ಪ, ಪಂಕ್ಚರ್ ಚೂರ್ಯ, ಸೀಟಿನರಿ, ಅಸ್ವಸ್ಥಾಯಣ – ಎಲ್ಲರೂ ಉಟ್ಟ ಚಡ್ಡಿಯಲ್ಲೇ ಬರತಕ್ಕದ್ದು ಎಂದು ಆಜ್ಞಾಪಿಸಿದ್ದ. “ ಇತ್ತೀಚಿಗೆ ಯಾಕೊ ನಮ್ ಗ್ರಹಗತಿಗಳೇ ಸರಿಯಿಲ್ಲ! ” ಎಂದು ಗೊಣಗುತ್ತ ಎಲ್ಲರೂ ಕುಟೀರದ ಬೈಠಕ್ ಗೆ ದೌಡಾಯಿಸಿದರು.

ಚಿಗುರು ಮೀಸೆಯ ಹುಡುಗರನ್ನು ಕರೆತಂದು ಕಬ್ಬಡ್ಡಿ, ಕೊಕೊ ಆಟದ ಜೊತೆಗೆ ಲಾಠಿ ವರಸೆಯ ಟ್ರೈನಿಂಗ್ ಕೊಟ್ಟು ಕೇಸರಿಶಾಲು ಹೊದಿಸಿ ಧರ್ಮರಕ್ಷಣೆ, ದೇಶರಕ್ಷಣೆಯ ದೀಕ್ಷೆ ಕೊಡುತ್ತ ಬಂದ ಕುಟೀರಕ್ಕೆ ಭಕ್ತಗಣಗಳಿಂದ ದೂರುಗಳು ಬರಲು ಶುರುವಾಗಿತ್ತು. ಸಿಟ್ಟಿನಿಂದ ಕುಟೀರಕ್ಕೆ ಬರುತ್ತಿದ್ದ ಭಕ್ತರು “ ನಮ್ಮನ್ನು ಕಾಪಾಡೊ ಯೋಗ್ಯತೆ ಇಲ್ಲದ ಸಾಮಂತ ರಾಜನಿಗೆ ಧಿಕ್ಕಾರ” ಎಂದು ಕೂಗಿ ತೊಟ್ಟ ಕೇಸರಿಶಾಲನ್ನು ಕುಟೀರದಲ್ಲಿ ಬಿಸಾಡಿ ಹೋಗುತ್ತಿದ್ದರು. ದಿನೇ ದಿನೇ ಕುಟೀರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿ, ಅವರು ಹಾಗೆ ಕೇಸರಿಶಾಲನ್ನು ಬಿಸಾಡಿ ಹೋಗುವಾಗ ಅರ್ಚಕನಿಗೆ ಮುಖಕ್ಕೆ ಹೊಡೆದಂತಾಗಿ ಅಪಮಾನವಾಗುತ್ತಿತ್ತು.

ಭಕ್ತರ ಈ ವಿಚಿತ್ರ ನಡೆಗೆ ಕಾರಣವನ್ನು ತಿಳಿದು ಬರಲು ಅರ್ಚಕ, ಕುಟೀರದ ರಾಜಭಟನನ್ನು ಅಟ್ಟಿದ. ನಾಡಿನೆಲ್ಲೆಡೆ ಸಂಚರಿಸಿದ ರಾಜಭಟನಿಗೆ ಅಂತ ವ್ಯತ್ಯಾಸವೇನು ಕಾಣಲಿಲ್ಲ. ಎಲ್ಲೆಲ್ಲೂ ಭಕ್ತಗಣಗಳು ತರಬೇತಿ ಕೊಟ್ಟಂತೆ “ ಸನಾತನ ಧರ್ಮ ಅಪಾಯದಲ್ಲಿದೆ. ಎಲ್ಲೆಡೆ ಮತಾಂತರವಾಗಿ ಇಡೀ ದೇಶ ಅನ್ಯಧರ್ಮೀಯರ ಪಾಲಾಗುತ್ತದೆ ” ಎಂದು ಗಲ್ಲಿ ಬೀದಿಗಳಲ್ಲಿ ಬೊಬ್ಬೆ ಹಾಕುತ್ತ ಸಾಗುತ್ತಿದ್ದರು. ಆದರೆ, ಬಂದರು ನಾಡಿಗೆ ಬಂದಾಗ ಅವನಿಗೊಂದು ಹೃದಯವಿದ್ರಾವಕ ದೃಶ್ಯ ಕಂಡು ಬಂತು.

ಮನೆಯೊಂದರ ಮುಂದೆ ದುಷ್ಕೃತ್ಯದಲ್ಲಿ ಹತನಾದ, ಕೈ ಬಂದ ಮಗನನ್ನು ಕಳೆದುಕೊಂಡು ಮನೆಮಂದಿಯೆಲ್ಲ ರೋಧಿಸುತ್ತಿದ್ದರು. ಸುತ್ತಲೂ ದುಃಖತಪ್ತರಾಗಿದ್ದ ಭಕ್ತಗಣ ಆಕ್ರೋಶಗೊಂಡು ತಮಗೆ ಧರ್ಮರಕ್ಷಣೆಯ ಲೈಸೆನ್ಸ್ ಕೊಟ್ಟು ಬೀದಿಗೆ ತಳ್ಳಿ                                      “ ಅನ್ಯಧರ್ಮೀಯರು ನಮ್ಮ ಧರ್ಮರಕ್ಷಕರ ಮೈ ಮುಟ್ಟಲಿ….ಅವರ ಗ್ರಹಚಾರ ಬಿಡಿಸುತ್ತೇವೆ” ಎಂದು ಹೇಳುತ್ತಿದ್ದ ನಾಯಕರುಗಳಿಗೆ ಧಿಕ್ಕಾರ ಹಾಕುತ್ತಿದ್ದರು. “ ಅರಮನೆಯಲ್ಲಿ ಅಧಿಕಾರ ಅನುಭವಿಸುತ್ತ ಸುಖಲೊಲುಪ್ತರಾದ ನಾಯಕರು, ವೈರಿಗಳಿಂದ ನಮ್ಮನ್ನೇ ಕಾಪಾಡಲಾಗದಿದ್ದರೆ ಧರ್ಮವನ್ನು, ದೇಶವನ್ನು ಹೇಗೆ ರಕ್ಷಿಸುತ್ತಾರೆ? ” ಎಂದು ಕೂಗಾಡುತ್ತಿದ್ದರು. ಭಕ್ತರ ಒಡಲುರಿಗೆ ಮತ್ತಷ್ಟು ತುಪ್ಪ ಸುರಿದದ್ದು ಅವರ ನಾಯಕರು ತಳ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ ಹೇಳಿಕೆಗಳು.

ಹರುಕುಬಾಯಿ ಈಚಲಪ್ಪ “ ಏನೋ…ತಳಜಾತಿಯ ಬಡಮಕ್ಕಳು ದೇಶ, ಧರ್ಮ ರಕ್ಷಣೆ ಮಾಡ್ಕೊಂಡು ಅವರವರ ಮನೆ ಉದ್ಧಾರ ಮಾಡ್ಲಿ ಅಂತ ದೀಕ್ಷೆ ಕೊಟ್ರೆ…ತಲೆಹರಟೆಗಳು….ಕೇಸರಿಶಾಲುಗಳನ್ನ ಎಸೆದು ಹೋಗ್ತಿದ್ದಾರೆ. ಹೋದ್ರೆ…ಹೋಗ್ಲಿ….ನಾವು ಕೊಡೊ ಕೇಸರಿ ನಶ್ಯದ ಅಮಲಿಗೆ ಬೇಕಾದಷ್ಟು ಹುಡುಗ್ರು ಸಿಗ್ತಾರೆ” ಎಂದು, ಮನೆ ಬಿಟ್ಟು ಊರೂರು ತಿರುಗೊ ಭಕ್ತರ ತ್ಯಾಗದ ಬಗ್ಗೆ ಕೇವಲವಾಗಿ ಮಾತಾಡಿದ್ದ. ಇನ್ನು ಹೆಜ್ಜೆ ಮುಂದೆ ಹೋಗಿದ್ದ ಪಂಕ್ಚರ್ ಚೂರ್ಯ “ ಅಯ್ಯೋ…ನಮ್ಮತ್ರ ಸಾವಿರಾರು ಭಕ್ತರು ಇದ್ದಾರೆ. ಅವರ ರಕ್ಷಣೆಗೆಂದು ಒಬ್ಬೊಬ್ಬರಿಗೆ ಒಬ್ಬ ರಾಜಭಟನನ್ನು ನೇಮಿಸೊಕೆ ಸಾಧ್ಯನಾ? “ ಅಂದಿದ್ದ. ಅಲ್ಲದೆ ಧರ್ಮರಕ್ಷಕನನ್ನು ಕೊಂದವನ ರುಂಡ ಚೆಂಡಾಡುತ್ತೇನೆಂದಿದ್ದ ಅಸ್ವಸ್ಥಾಯಣನನ್ನು “ ಇನ್ನು ಏಕೆ ವಿಳಂಬ ಮಾಡುತ್ತಿದ್ದೀಯ? ” ಎಂದು ಭಕ್ತಗಣಗಳು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಧಾನ ಅರ್ಚಕ ಶತಪಥ ಹಾಕುತ್ತ, ಚಕ್ಕಳಬಕ್ಕಳ ಹಾಕಿ ಶಿಸ್ತಾಗಿ ಕೂತ ಶಾಖೆಯ ಪೂರ್ವಾಶ್ರಮ ನಿವಾಸಿಗಳ ಒಬ್ಬೊಬ್ಬರ ಮುಖವನ್ನು ದುರುಗುಟ್ಟಿ ನೋಡುತ್ತಿದ್ದ. ಹಲ್ಲು ಕಡಿದು “ ಇಲ್ಲಿ ಇದ್ದಾಗ ಪಾತ್ರೆ ತೊಳೆದು, ಬಚ್ಚಲು ತಿಕ್ಕಿ ಶಿಸ್ತಿನಿಂದ ಇದ್ದ ನೀವುಗಳು….ಈಗ ಅರಮನೆ ಸೇರಿ, ಸುಖಸಂಪತ್ತು ಸಿಕ್ಕು, ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡಿದ್ದೀರಾ!” ಎಂದು ಹಲ್ಲು ಕಡಿದ ಶಬ್ಧಕ್ಕೆ ನಾಯಕರುಗಳ ಚಡ್ಡಿ ಮತ್ತೆ ಒದ್ದೆಯಾದಂತಾಯಿತು. ಮೊನ್ನೆಯಷ್ಟೆ ಭಕ್ತಗಣಗಳು ಅಟ್ಟಾಡಿಸಿಕೊಂಡು ಬಂದಾಗ ಒದ್ದೆಯಾಗಿದ್ದ ಚಡ್ಡಿ ಸುಮಾರಾಗಿ ಆರಿಕೊಂಡಿತ್ತು.

“ ನಿಮ್ಮ ತಲೆಯಲ್ಲೇನು ಸಗಣಿ ತುಂಬಿದ್ಯಾ? ಭಕ್ತರ ನೋವು, ಆವೇಶವನ್ನು ಅರ್ಥಮಾಡಿಕೊಳ್ಳದೆ ಬಾಯಿ ಬಂದಂತೆ ಮಾತಾಡುತ್ತಿದ್ದೀರ! ನೀವು ಆಡುತ್ತಿರುವ ಮಾತಿಗೆ ಸಿಟ್ಟಿನಿಂದ ಕೇಸರಿಶಾಲನ್ನು ಮುಖಕ್ಕೆ ಎಸೆದು ಹೋಗುತ್ತಿರುವ ಭಕ್ತರನ್ನು ಸಮಾಧಾನ ಮಾಡಬೇಕಿತ್ತು. ತಳಜಾತಿಯ, ಕೆಳವರ್ಗದ ಮಕ್ಕಳು ಹೀಗೆ ಏಕ್ ಧಮ್ ಹೊರಟು ಹೋದರೆ…ಧರ್ಮ, ದೇಶವನ್ನು ಯಾರು ಕಾಪಾಡುತ್ತಾರೆ? ಬೀದಿಯಲ್ಲಿ ಬಡಿದಾಟ ಹೊಡೆದಾಟವನ್ನು ನಿಮ್ಮ ಮಕ್ಕಳು ಬಂದು ಮಾಡುತ್ತಾರ? ಒದೆ ತಿಂದು ಸೆರೆಮನೆ ಸೇರಲು ನೀವು ಒಪ್ಪುತ್ತೀರ? ಬಾಯಿ ಮುಚ್ಚಿಕೊಂಡು ಸಿಟ್ಟಾಗಿರುವ ಅವರನ್ನು ತೇಲ್ ಮಾಲೀಷು ಮಾಡಿ ಶಾಖೆಗೆ ವಾಪಸ್ಸು ಕರೆತರುವ ಜವಾಬ್ದಾರಿ ನಿಮ್ಮದು…ಇಲ್ಲಾಂದ್ರೆ ಒಬ್ಬೊಬ್ಬರನ್ನು ಅರಮನೆಯಿಂದ ಹೊರಹಾಕಿ….ಕುಟೀರದಲ್ಲಿ ಅಡುಗೆ ಕೆಲಸಕ್ಕೆ ಹಾಕಬೇಕಾಗುತ್ತೆ” ಎಂಬ ಎಚ್ಚರಿಕೆಯ ಮಾತಿಗೆ, ಪೂರ್ವಾಶ್ರಮದ ತಮ್ಮ ಜೈಲುವಾಸದಂಥ ಬದುಕನ್ನು ನೆನೆದು ನಾಯಕರುಗಳು ನಡುಗಿ ಹೋದರು.

ಅಸಲಿಗೆ ಬಡ ಯುವಕರ ಮೆದುಳು ತೊಳೆದು ಅದರಲ್ಲಿ ಹುಸಿ ದೇಶಭಕ್ತಿ, ಧರ್ಮದ ಮೇಲೆ ಕಲ್ಪಿತ ದಾಳಿಯನ್ನು ತುಂಬಿದ ನಾಯಕರುಗಳಿಗೆ ಬೇವು ಬಿತ್ತಿ ಮಾವು ಬೆಳೆಯಲಾಗದ ಸತ್ಯ ಅರಿಯದೆ ಹೋಯಿತು.

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News