ಹವಾಮಾನ ವೈಪರೀತ್ಯ: ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಹೆಚ್ಚಳ

ಹವಾಮಾನ ವೈಪರೀತ್ಯ: ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಹೆಚ್ಚಳ

Updated : 31.10.2022

ಬೆಂಗಳೂರು: ಹವಾಮಾನದಲ್ಲಿ ವೈಪರೀತ್ಯ ಹಾಗೂ ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಉಲ್ಬಣಗೊಂಡಿದ್ದು, ಈ ತಿಂಗಳು 591 ಪ್ರಕರಣಗಳು ದೃಢಪಟ್ಟಿವೆ. 

ಈ ವರ್ಷ 1.48 ಲಕ್ಷಕ್ಕೂ ಅಧಿಕ ಡೆಂಗಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 66 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 7,317ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ನಾಲ್ವರು ಮರಣ ಹೊಂದಿದ್ದಾರೆ. ಕಳೆದ ವರ್ಷ 7,189 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಜ್ವರ ಪೀಡಿತರಲ್ಲಿ ಐವರು
ಮೃತಪಟ್ಟಿದ್ದರು. 

ಈ ವರ್ಷ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 48,038 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 1,227 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 660, ಉಡುಪಿಯಲ್ಲಿ 477, ಚಿತ್ರದುರ್ಗದಲ್ಲಿ
341 ಹಾಗೂ ದಕ್ಷಿಣ ಕನ್ನಡದಲ್ಲಿ 325 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 300 ಕ್ಕಿಂತ ಕಡಿಮೆ ಇವೆ.

© Copyright 2022, All Rights Reserved Kannada One News