ಮಳೆ: ರಾಜ್ಯದಲ್ಲಿ ಡೆಂಗಿ ಉಲ್ಬಣ

ಮಳೆ: ರಾಜ್ಯದಲ್ಲಿ ಡೆಂಗಿ ಉಲ್ಬಣ

Updated : 08.09.2022

ಬೆಂಗಳೂರು: ಹವಾಮಾನದಲ್ಲಿ ವೈಪರೀತ್ಯ ಹಾಗೂ ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಉಲ್ಬಣಗೊಂಡಿದ್ದು, ವಾರದಲ್ಲಿ 264 ಪ್ರಕರಣಗಳು ದೃಢಪಟ್ಟಿವೆ.

ಈ ವರ್ಷ 1.10 ಲಕ್ಷಕ್ಕೂ ಅಧಿಕ ಡೆಂಗಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 47 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 5,656ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ನಾಲ್ವರು ಮರಣ ಹೊಂದಿ ದ್ದಾರೆ. ಕಳೆದ ವರ್ಷ 7,189 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿದ್ದರು.

ಈ ವರ್ಷ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 39,696 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 1,058 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 536, ಉಡುಪಿಯಲ್ಲಿ 444, ದಕ್ಷಿಣ ಕನ್ನಡ ಹಾಗೂ ಚಿತ್ರದುರ್ಗದಲ್ಲಿ ತಲಾ 243, ಶಿವಮೊಗ್ಗದಲ್ಲಿ 220 ಹಾಗೂ ಚಿಕ್ಕಬಳ್ಳಾ ಪುರದಲ್ಲಿ 204 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 200ಕ್ಕಿಂತ ಕಡಿಮೆ ಇವೆ.

28 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 40 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 21 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,354 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

‘ಹವಾಮಾನ ಬದಲಾವಣೆ ಹಾಗೂ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನವರು ವಿವಿಧ ಜ್ವರಗಳಿಗೆ ಒಳಪಡುತ್ತಿದ್ದಾರೆ. ಸೊಳ್ಳೆ ಕಡಿತದಿಂದ ಕಾಣಿಸಿಕೊಳ್ಳುವ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮನೆಯ ಸುತ್ತ ಮುತ್ತಲಿನ ಹೊರಾಂಗಣ ಪ್ರದೇಶಗಳು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಖಾಲಿ ನಿವೇಶನ ಸೇರಿ ವಿವಿಧೆಡೆ ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸ್ವಚ್ಛತೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

© Copyright 2022, All Rights Reserved Kannada One News