ಬೆಳೆ ವಿಮೆ ಪರಿಹಾರ: ಶೀಘ್ರ ಇತ್ಯರ್ಥಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ

ಬೆಳೆ ವಿಮೆ ಪರಿಹಾರ: ಶೀಘ್ರ ಇತ್ಯರ್ಥಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ

Updated : 11.11.2022

ಬೆಂಗಳೂರು: 2022– 23 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರ ಪಾವತಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಇತ್ಯರ್ಥಪಡಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸಸೌಧದಲ್ಲಿ ಗುರುವಾರ ಬೆಳೆವಿಮೆ ಪರಿಹಾರ ಪಾವತಿ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ಪಾವತಿ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಕೃಷಿ ಅಧಿಕಾರಿಗಳು ವಿಮಾ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ಹೇಳಿದರು.

ಆಧಾರ್‌ ಕಾರ್ಡ್‌ ಜೋಡಣೆ ಆಗದೇ ಇರುವ ರೈತರ ಸಂಖ್ಯೆ ಸಾಕಷ್ಟು ಇರುವುದನ್ನು ಗಮನಿಸಿದ ಅವರು, ‘ಬೆಳೆ ವಿಮೆಗೆ ಆಧಾರ್‌ ಕಾರ್ಡ್‌ ಜೋಡಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ವಿಮಾ ಕಂಪನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ನನ್ನ ಗಮನಕ್ಕೆ ತರಬೇಕು. ರೈತರೂ ಇದನ್ನು ಗಮನಿಸಬೇಕು’ ಎಂದೂ ಸಲಹೆ ನೀಡಿದರು.

ಮುಂಗಾರು ಹಂಗಾಮಿನ ಬೆಳೆಗಳಿಗೆ ಜನವರಿಯಲ್ಲಿ ವಿಮೆ ಪರಿಹಾರ ಪಾವತಿಯನ್ನು ಇತ್ಯರ್ಥಪಡಿಸಲು ಪ್ರಕ್ರಿಯೆ ಆರಂಭಿಸುವಂತೆಯೂ ಪಾಟೀಲ ಸೂಚಿಸಿದರು. ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತ ಪಿ.ಶರತ್‌ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

© Copyright 2022, All Rights Reserved Kannada One News