ಕೋವಿಡ್: ಆಸ್ಪತ್ರೆ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

ಕೋವಿಡ್: ಆಸ್ಪತ್ರೆ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

Updated : 28.08.2022

ಬೆಂಗಳೂರು: ನಗರದಲ್ಲಿ ಕೋವಿಡ್ ಪೀಡಿತರ ಆಸ್ಪತ್ರೆ ದಾಖಲಾತಿ ಇಳಿಕೆ ಯಾಗಿದ್ದು, ಸೋಂಕಿತರಲ್ಲಿ 12 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಸದ್ಯ ನಗರದಲ್ಲಿ 5 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 48 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ತಲಾ ಒಬ್ಬರು ಎಚ್‌ಡಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 34 ಮಂದಿಗೆ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. 

ಈ ತಿಂಗಳ ಮೊದಲ ವಾರ ಆಸ್ಪತ್ರೆಗಳಿಗೆ ದಾಖಲಾದವರ ಸಂಖ್ಯೆ 70ಕ್ಕೆ ತಲುಪಿತ್ತು. ಆಗ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಸಾವಿರದಷ್ಟಿತ್ತು. ವಾರದಿಂದ ಹೊಸ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಸಕ್ರಿಯ ಪ್ರಕರಣ ಇಳಿಕೆಯಾಗಿದೆ. ಸೋಂಕಿತರಲ್ಲಿ ಬಹುತೇಕರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. 

ನಿತ್ಯ ಸರಾಸರಿ 15 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸೋಂಕು ದೃಢ ಪ್ರಮಾಣ ಶೇ 5ರ ಗಡಿಯ ಆಸುಪಾಸಿನಲ್ಲಿದೆ. ವಾರದ ಅವಧಿಯಲ್ಲಿ ದೃಢಪಟ್ಟ ಪ್ರಕರಣಗಳನ್ನು ಬಿಬಿಎಂಪಿ ವಾರ್‌ ರೂಮ್ ವಿಶ್ಲೇಷಿಸಿದೆ. ಏಳು ದಿನಗಳಲ್ಲಿ 1.03 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 5,367 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 7,169 ಮಂದಿ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.

© Copyright 2022, All Rights Reserved Kannada One News