Flash News:
ಕಾಂಗ್ರೆಸ್‌ ನಾಯಕಿ ಮೋಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ

ಕಾಂಗ್ರೆಸ್‌ ನಾಯಕಿ ಮೋಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ

Updated : 12.06.2022

ಬೆಂಗಳೂರು: ‘ಮೋಟಮ್ಮ ಇಷ್ಟು ಬೇಗ ಯಾಕೆ ಆತ್ಮಕಥನ ಬರೆದರೊ ಗೊತ್ತಿಲ್ಲ. ಅವರಿನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ’ ಎಂದು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ನಾಯಕಿ ಮೋಟಮ್ಮ ಅವರ, ‘ಬಿದಿರು ನೀನ್ಯಾರಿಗಲ್ಲದವಳು‘ ಆತ್ಮಕಥನವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ನನ್ನ ಮಂತ್ರಿಮಂಡಲದಲ್ಲಿ ಸಚಿವೆಯಾಗಿದ್ದ ಮೋಟಮ್ಮ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಬದುಕಿಗೆ ಭದ್ರಬುನಾದಿ ದೊರೆಯುವಂತೆ ನೋಡಿಕೊಂಡರು. ಇವತ್ತು ಅವರು ತಮ್ಮ ಆತ್ಮಕಥನದ ಮೂಲಕ ರಾಜ್ಯ ರಾಜಕಾರಣದ ಭೂತ ಮತ್ತು ವರ್ತಮಾನಗಳ ಕೈಪಿಡಿಯನ್ನು ನಮ್ಮ ಮುಂದಿರಿಸಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಉತ್ತಮ ಅಥ್ಲೀಟ್‌ ಕೂಡಾ ಆದ ಮೋಟಮ್ಮ ರಾಜಕಾರಣಿಯಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೋಟಮ್ಮನವರ ಸಾಮಾಜಿಕ ಮತ್ತು ರಾಜಕೀಯ ಬದುಕು ಇನ್ನಷ್ಟು ಉತ್ತಮವಾಗಲಿ’ ಎಂದು ಹಾರೈಸಿದರು.

ಕೃತಿ ಕುರಿತಂತೆ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, 'ಪುಸ್ತಕದಲ್ಲಿ ಸುಳ್ಳುಗಳಿಲ್ಲ. ನಮ್ಮಲ್ಲಿ ಮಹಿಳೆಯರು ಆತ್ಮಕಥನ ಬರೆಯುವುದೇ ಕಡಿಮೆ. ಆದರೆ, ಮೋಟಮ್ಮ ಅನೇಕ ಸತ್ಯಗಳನ್ನು ಹೇಳದೇ ಉಳಿಸಿಕೊಂಡಿದ್ದಾರೆ. ಈ ಮೂಲಕ ಪುರುಷರ ಮಾನ‌ ಕಾಪಾಡಿದ್ದಾರೆ. ಮಹಿಳೆಯರು ತಮ್ಮ ಆತ್ಮಕಥನಗಳಲ್ಲಿ ಎಲ್ಲವನ್ನೂ ಹೇಳಿದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಬಹುದು' ಎಂದರು.


ನಿವೃತ್ತ ಪ್ರಾಧ್ಯಾಪಕ ಹಿ.ಶಿ.ರಾಮಚಂದ್ರೇಗೌಡ, ಕಾಂಗ್ರೆಸ್ ಮುಖಂಡರಾದ ವಿ.ಆರ್.ಸುದರ್ಶನ್, ಮಾರ್ಗರೇಟ್‌ ಆಳ್ವ, ಬಿ.ಎಲ್.ಶಂಕರ್, ವಿಕಾಸ ಪ್ರಕಾಶನದ ಆರ್.ಪೂರ್ಣಿಮಾ, ಆತ್ಮಕಥನದ ನಿರೂಪಕ ವೀರಣ್ಣ ಕಮ್ಮಾರ ಇದ್ದರು.

© Copyright 2022, All Rights Reserved Kannada One News