Flash News:
ಶೇ.40 ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆಂದು ಸಿದ್ದರಾಮಯ್ಯ ಹೇಳಲಿ: ಸಿಎಂ ಬೊಮ್ಮಾಯಿ

ಶೇ.40 ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆಂದು ಸಿದ್ದರಾಮಯ್ಯ ಹೇಳಲಿ: ಸಿಎಂ ಬೊಮ್ಮಾಯಿ

Updated : 24.09.2022

ಬೆಂಗಳೂರು: ‘ಭ್ರಷ್ಟರೇ ಈಗ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮಾಡುತ್ತಾರಂತೆ ಮಾಡಲಿ, ಕೊನೆಗೆ ಸತ್ಯಕ್ಕೇ ಜಯ ಸಿಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಲಾಪ ಮುಂದೂಡಿಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರವೊಂದನ್ನು ಇಟ್ಟುಕೊಂಡು ಒಂದು ವರ್ಷದಿಂದ ತುತ್ತೂರಿ ಊದುತ್ತಿದ್ದಾರೆ. ಈವರೆಗೆ ಒಂದು ಸಣ್ಣ ದೂರನ್ನಾದರೂ ದಾಖಲಿಸಿ ಸೂಕ್ತ ದಾಖಲೆ ನೀಡಬೇಕಿತ್ತಲ್ಲ. ಇಲ್ಲಿಯವರೆಗೆ ಯಾಕೆ ದಾಖಲೆಗಳನ್ನು ಕೊಟ್ಟಿಲ್ಲ? ಲಂಚ ಕೊಡಲು ಎಲ್ಲಿಂದ, ಯಾರಿಂದ ಒತ್ತಡ ಬಂದಿತ್ತು ಎಂಬ ಬಗ್ಗೆ  ಸಣ್ಣ ಚೀಟಿಯಲ್ಲಿ ದೂರು ಕೊಡಲಿ ತನಿಖೆ ಮಾಡಿಸುತ್ತೇನೆ. ಇಲ್ಲವೇ ಲೋಕಾಯುಕ್ತಕ್ಕಾದರೂ ದೂರು ಕೊಡಲಿ’ ಎಂದು ಬೊಮ್ಮಾಯಿ ಸವಾಲು ಹಾಕಿದರು.

‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದ ಹಲವು ಹಗರಣಗಳ ಬಗ್ಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸೇರಿದಂತೆ ಅವರದ್ದೇ ಪಕ್ಷದ ಹಲವರು ಮಾತನಾಡಿದ್ದಾರೆ. ಅವರ ಪಕ್ಷದ ಕಚೇರಿಯಲ್ಲಿ ಇಬ್ಬರು ಪದಾಧಿಕಾರಿಗಳು ಮಾತನಾಡಿದ್ದು, ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದೇವೆ, ಗಾಂಧಿ ಕುಟುಂಬದ ಋಣದಲ್ಲಿದ್ದೇವೆ ಎಂದು ರಮೇಶ್‌ಕುಮಾರ್‌ ಬಹಿರಂಗವಾಗಿಯೇ ಹೇಳಿದ್ದರು’ ಎಂದು ಬೊಮ್ಮಾಯಿ ವಂಗ್ಯವಾಡಿದರು.

‘ಶೇ 40 ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು. ವಿಧಾನಸಭೆಯಲ್ಲಿ ಈ ವಿಷಯವನ್ನು ಮೊದಲೇ ಪ್ರಸ್ತಾಪಿಸಬಹುದಿತ್ತು. ಕೊನೆಯಲ್ಲಿ ತಂದಿದ್ದು ಏಕೆ?’ ಎಂದು ಪ್ರಶ್ನಿಸಿದರು.

© Copyright 2022, All Rights Reserved Kannada One News