Flash News:
ಚಿಮ್ಮಿದ ರಕ್ತ: ಕರಾಳ ಚರಿತ್ರೆಯ ಅನಾವರಣ

ಚಿಮ್ಮಿದ ರಕ್ತ: ಕರಾಳ ಚರಿತ್ರೆಯ ಅನಾವರಣ

Updated : 18.04.2022

ಜಾತಿ- ಭೇಧ, ಅಸಮಾನತೆ ಇವುಗಳು ತಲೆತಲಾಂತರದಿಂದ ಬಂದಂತಹ ಸಂಪ್ರದಾಯಗಳು. ಇಂದಿಗೂ ನಾವು ನೋಡುತ್ತಿರುವುದಾಗಿದೆ. ಆದರೆ, ಅದರ ಕುರಿತಾದ ಆಳವಾದ ಮಾಹಿತಿ ಎಲ್ಲರಿಗೂ ಸರಿಯಾಗಿ ತಿಳಿದಿಲ್ಲ. ಜಾತಿ-ಧರ್ಮ, ಮೇಲ್ವರ್ಗ-ಕೆಳವರ್ಗ ಎನ್ನುವಂತಹ ಪದಗಳು ಎಷ್ಟೊಂದು ಭೀಕರವಾಗಿದ್ದವು, ಅದೆಷ್ಟು ನಿಕೃಷ್ಟವಾಗಿದ್ದವು ಎಂಬುದು ಊಹೆಗೂ ಮೀರಿದ್ದು.

ದಲಿತನೆಂದರೆ ಕಾಲ ಬಳಿ ಮೊರೆಯಿಟ್ಟು ಜೀವಿಸಬೇಕಾದವನು, ತುತ್ತು ಊಟಕ್ಕೂ, ಹನಿನೀರಿಗೂ ಮೇಲ್ವರ್ಗದ ಅನುಕಂಪದ ನೋಟಕ್ಕೆ ಕಾಯಬೇಕಾದವನು ಎಂಬಂತಹ ದುರಾಲೋಚನೆಯುಳ್ಳ ದುಷ್ಟರನ್ನೊಳಗೊಂಡ ಸಮಾಜ.(ಅನುಕಂಪ ಎನ್ನುವುದು ಮರೀಚಿಕೆಯಾಗಿತ್ತು) ಇನ್ನು ಹಿಂದೂ - ಮುಸ್ಲಿಂ ಸೌಹಾರ್ದತೆಗೆ ಕೊಳ್ಳಿಯಿಡಬೇಕೆಂದೇ ನಡೆದ ಮಾರಣಹೋಮ ಹಾಗೂ ರಣಹದ್ದುಗಳ ಅಟ್ಟಹಾಸದ ಕೇಕೆ, ನೀಚತನದ ಪರಮಾವಧಿಯನ್ನೂ ಮೀರಿದ್ದು. ಇವೆಲ್ಲವುಗಳನ್ನು ಪುಸ್ತಕ ರೂಪದಲ್ಲಿ  ಹೊರತಂದಿದ್ದಾರೆ ಉಮರ್ ಫಾರೂಕ್. ಮಕ್ಕಳು ಮರಿಯೆನ್ನದೇ ಅಮಾಯಕ ದಲಿತ - ಮುಸ್ಲಿಮರ ರಕ್ತದೋಕುಳಿಯಲ್ಲಾಡಿದ ನರಹಂತಕರ ಹೆಜ್ಜೆ - ಹೆಜ್ಜೆಯಲ್ಲಿನ ರೌದ್ರಾವತಾರವನ್ನು, ರಾಕ್ಷಸೀಯತೆಯನ್ನೂ ಎಳೆ - ಎಳೆಯಾಗಿ ವಿವರಿಸಿದ್ದಾರೆ.

ಚಿಮ್ಮಿದ ಪುಸ್ತಕವನ್ನೋದಿ ಮುಗಿಸಿದಾಗ ಮನಸ್ಸೊಮ್ಮೆ ನಲುಗಿದ್ದಂತೂ ನಿಜ. ಕ್ರೂರತೆಯನ್ನೂ ಮೀರಿಸಿದ ಪೈಶಾಚಿಕತೆ ಒಂದರ ಮೇಲೊಂದರಂತೆ ಪ್ರತಿಯೊಂದು ಹತ್ಯಾಕಾಂಡದಲ್ಲೂ ಕಾಣಬಹುದು. ನ್ಯಾಯವನ್ನು ಪಾಲಿಸುವವರ ದಿಟ್ಟತೆಯನ್ನು ಅರಗಿಸಿಕೊಳ್ಳಲಾಗದೆ, ಅವರುಗಳ ಮೇಲಿನ ದೌರ್ಜನ್ಯಗಳು-ಮಾರಣಹೋಮಗಳು ಊಹೆಗೂ ನಿಲುಕದ್ದು. ಪುಸ್ತಕದ ಶೀರ್ಷಿಕೆಯೇ ಅದರೊಳಗಿನ ಗಂಭೀರತೆಯನ್ನು ತೋರಿಸಿಕೊಡುತ್ತದೆ.

ಧರ್ಮ-ಜಾತಿ, ಮೇಲು-ಕೀಳು ಅನ್ನೋ ನೆಪದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದಬ್ಬಾಳಿಕೆ ಅಸಹನೀಯ. ಹೆಂಗಸರು, ಮಕ್ಕಳ ಮೇಲೆ ನಡೆದ ಅಮಾನುಷವಾದ ಕೃತ್ಯಗಳು ಕ್ಷಮೆಗರ್ಹವಾದುದಲ್ಲ. ಹೆಣ್ಣನ್ನು ಪೂಜಿಸೋ ಈ ನೆಲದಲ್ಲೇ ಆಕೆಯನ್ನು ಹೀನವಾಗಿ ಅತ್ಯಾಚಾರ ಮಾಡುವ ದೃಶ್ಯಗಳನ್ನು ನೆನೆಯುವಾಗ, ಮುಗ್ಧ ಮಕ್ಕಳನ್ನು ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದುದನ್ನು ಓದುವಾಗ ಕರುಳು ಕಿತ್ತು ಬರುತ್ತದೆ. ರೋಷ ಉಕ್ಕೇರುತ್ತದೆ.

ಕೇವಲ ಗಲಭೆ ನಡೆಸಲೆಂದೇ ಹುಟ್ಟಿ ಬಂದಂತಿರುವ ಈ ಕಟುಕರನ್ನು ಆ ದೇವನೂ ಕ್ಷಮಿಸಲಾರ. ಕ್ಷಮಿಸುವಂತಹ ಕಾರ್ಯವೂ ಅಲ್ಲ. ಜೀವಂತ ದಹನಗಳು, ಸುಟ್ಟು ಬೂದಿಯಾದ ದೇಹಗಳು,   ಅಂಬೇಡ್ಕರ್ ರವರ ನಡೆಯಲ್ಲಿದ್ದವರುಗಳ ಮೇಲಾದ ದುಷ್ಕೃತ್ಯಗಳು ಒಂದಲ್ಲ, ಎರಡಲ್ಲ.

ದೇಶರಕ್ಷಣೆ-ಧರ್ಮ ರಕ್ಷಣೆಯ ಹೆಸರಲ್ಲಿ ಘೋರ ಕೃತ್ಯಗಳನ್ನು ನಡೆಸಿದರೂನೂ  ಇವರುಗಳಿಗೆ ಭಯವಿಲ್ಲ. ಕಾರಣ  ಶಿಕ್ಷೆ ಅನ್ನೋದೇ ಇವರಿಗಿಲ್ಲ. ಇಲ್ಲಿ ಸುಳ್ಳಿಗೆ, ಕ್ರೌರ್ಯಕ್ಕೆ ರಕ್ಷಣೆಯೇ ಹೊರತು ಸತ್ಯಕ್ಕಲ್ಲ. ಸಾಕ್ಷ್ಯಾಧಾರಗಳು ಕಣ್ಣೆದುರಿದ್ದರೂ , ಕೆಟ್ಟಹುಳಗಳಿಗೇ ತಥಾಸ್ತು ಎಂದು ಕೈತೊಳೆದುಕೊಂಡ ಮೇಲಾಧಿಕಾರಿಗಳ ದುರ್ನಡತೆ-ಸರಕಾರದ ಧೋರಣೆ, ಸಂವಿಧಾನ ವಿರೋಧೀ ನಡವಳಿಕೆ ದೇಶದ ದುರಂತವೆನ್ನಬಹುದು.

ಉಮರ್ ಫಾರೂಕ್ ನನ್ನ ಸಹೋದರ, ಸ್ನೇಹಿತ. ಈ ಪುಸ್ತಕದ ಸಾಫ್ಟ್ ಕಾಪಿ ಕಳಿಸಿ 'ನನಗೊಂದು ಅನಿಸಿಕೆ ಬರೆದುಕೊಡಿ ಸರ್' ಅಂದಾಗ, ಅವರ ಈ ಸತ್ಯ ಶೋಧಿಸುವ ಗುಣವನ್ನು ಕಂಡು ಆಶ್ಚರ್ಯ ಪಟ್ಟೆ. ಕಿರಿಯ ವಯಸ್ಸಿನಲ್ಲಿಯೇ ತನ್ನೊಳಗೆ ಧರ್ಮ ಮೀರಿ ಸತ್ಯ ಶೋಧಿಸುವ ಮಾರ್ಗಕ್ಕೆ ಕೊಂಡೊಯ್ದಿದ್ದಾರೆ ಉಮರ್ ಫಾರೂಕ್. ಇದು ನಿಜಕ್ಕೂ ಮೆಚ್ಚುಗೆಯ ಕಾರ್ಯ. ಅವರ ಈ ಬಿಡಿ ಬಿಡಿ ಲೇಖನಗಳು ಭಯೋತ್ಪಾದನೆಯ ಅಸ್ತಿತ್ವವನ್ನು ಮುಟ್ಟಿ, ಎಲ್ಲಿಯೂ ಯಾವ ಅಂಶಗಳಿಗೂ ಕೇಡಾಗದಂತೆ, ವಾಸ್ತವಗಳು ಎಲ್ಲಿಯೂ ಚದುರದಂತೆ ಹಿಡಿದಿಟ್ಟಿದ್ದಾರೆ.

ದಲಿತ & ಮುಸ್ಲಿಂ ಸಮುದಾಯಗಳು ಸ್ವಾತಂತ್ರೋತ್ತರ ಭಾರತದಲ್ಲಿ ನಿರಂತರವಾಗಿ ತಾರತಮ್ಯ ಮತ್ತು ಹಿಂಸಾಚಾರವನ್ನು ಎದುರಿಸುತ್ತಲೇ ಬಂದಿದ್ದಾರೆ. ದೇಶದಲ್ಲಿರುವ ಜಾತೀಯತೆ ಎಂಬ ಭಯಾನಕ ಭಯೋತ್ಪಾದನೆಯನ್ನು ವಿಶ್ವದ ಇನ್ನ್ಯಾವುದೇ ಮೂಲೆಯಲ್ಲೂ ಕಾಣಲು ಸಿಗುವುದಿಲ್ಲ. ಇಂದು ಭಾರತದಲ್ಲಿ ಹತ್ತಾರು ವೇಷಗಳಲ್ಲಿ ಬಹುಜನರನ್ನು ನಿಯಂತ್ರಿಸಲು ಈ ಹಿಂದುತ್ವವಾದಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇಂದು ನೇರವಾಗಿಯೇ ದಲಿತ - ಮುಸ್ಲಿಮರ ವಿರುದ್ಧ ಹರಿತವಾದ ಆಯುಧಗಳನ್ನು ಬಳಸಿ ದೇಶವನ್ನು ಅಸ್ತವ್ಯಸ್ತಗೊಳಿಸುತ್ತಿದ್ದಾರೆ. ಇದಕ್ಕೆ ದಲಿತ ಮತ್ತು ಮುಸ್ಲಿಮರು ಆಸ್ಪದ ಕೊಡಬಾರದು. ದೇಶವನ್ನು ಸಂಕಷ್ಟದಿಂದ ಪಾರು ಮಾಡುವ ಮಹತ್ತರ ಜವಾಬ್ದಾರಿ ಈ ಎರಡೂ ಸಮುದಾಯಗಳ ಮೇಲಿದೆ. ರಾಜಕೀಯವಾಗಿ ಐಕ್ಯತೆ ಸಾಧಿಸಿ, ಆಳುವ ವರ್ಗಗಳಾಗಿ ಬದಲಾಗಬೇಕು. ತನ್ಮೂಲಕ ಎರಡೂ ಸಮುದಾಯಗಳು ಸಾಮಾಜಿಕವಾಗಿ ಬಲಿಷ್ಠರಾಗಬೇಕು.

ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ದಲಿತ ಮುಸ್ಲಿಮರನುಭವಿಸಿದ ಯಾತನೆಗಳನ್ನು 'ಚಿಮ್ಮಿದ ರಕ್ತ' ಕೃತಿಯಲ್ಲಿ ನೋವಿನ ನುಡಿಗಳಾಗಿ ದಾಖಲಿಸಿದ ಉಮರ್ ಫಾರೂಕ್ ಅಭಿನಂದನಾರ್ಹರು. ಈ ಪುಸ್ತಕವನ್ನು ಬರೆದು ಸಮಾಜಕ್ಕೆ ಸತ್ಯವನ್ನು ಮನದಟ್ಟು ಮಾಡುವಲ್ಲಿನ ಯುವಲೇಖಕ ಉಮರ್ ಫಾರೂಕರ ಪ್ರಯತ್ನಕ್ಕೆ ಅಭಿನಂದನೆಗಳು. ಭಾರತವು ಜಾತ್ಯಾತೀತ , ಪ್ರಜಾಸತ್ತಾತ್ಮಕ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬದಲಾಗಲಿದೆ ಮತ್ತು ಜಾತಿ-ಜಾಢ್ಯದ ಬೇರುಗಳು ಬೇರು ಸಮೇತ ತೊಲಗಲಿದೆ ಎನ್ನುವ ಆಶಾವಾದದೊಂದಿಗೆ, ಈ ಪುಸ್ತಕವನ್ನು ಕ್ರಾಂತಿವೀರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರವರಿಗೆ  ಅರ್ಪಿಸಿರುವ ಉಮರ್ ಫಾರೂಕರ ಚಿಂತನಾತ್ಮಕ ಆಲೋಚನೆಯು ನ್ಯಾಯಯುತವಾದುದು.

-ಫರ್ಝಾನ್ ಸಿದ್ಧಕಟ್ಟೆ

© Copyright 2022, All Rights Reserved Kannada One News