Flash News:
ದೇಶಪ್ರೇಮದ ನಾಲಿಗೆ..: ಚಂದ್ರಪ್ರಭ ಕಠಾರಿ ಅವರ ಕಥೆ

ದೇಶಪ್ರೇಮದ ನಾಲಿಗೆ..: ಚಂದ್ರಪ್ರಭ ಕಠಾರಿ ಅವರ ಕಥೆ

Updated : 05.06.2022

ಸತ್ಯೇಂದ್ರ ಚಕ್ರವರ್ತಿ ಆನಂದದಿಂದ ಗಾಳಿಯಲ್ಲಿ ತೇಲಾಡುತ್ತಿದ್ದ. ಕಳೆದೆರೆಡು ವಾರಗಳಿಂದ ಬೀದಿಬೀದಿ ಸುತ್ತಿ ಮನೆಮನೆಗಳಿಗೆ, ಅಂಗಡಿಗಳಿಗೆ ಭೇಟಿ ಕೊಟ್ಟರೂ ಒಬ್ಬ ಗಿರಾಕಿ ಸಿಕ್ಕಿರಲಿಲ್ಲ. ದೇಶಿ ಉತ್ಪನ್ನಗಳ ಮಹತ್ವದ ಬಗ್ಗೆ ಮಾಹಿತಿ ಕೊಟ್ಟು, ಅದರ ಸಕಲೆಂಟು ಪ್ರಯೋಜನಗಳ ಬಗ್ಗೆ ಮನಮುಟ್ಟುವಂತೆ ಪ್ರಚಾರ ಮಾಡಿದರೂ ಜನರು ನಿರಾಸಕ್ತಿ ತೋರಿದಾಗ, ವಿಸಿಟಿಂಗ್ ಕಾರ್ಡ್ ಕೊಟ್ಟು ಮುಂದೆ ಮನವರಿಕೆಯಾದಾಗ ಫೋನಾಯಿಸಿ ಎಂದು ಹೇಳಿ ಬರುತ್ತಿದ್ದದ್ದಷ್ಟೆ! ಯಾರೂ ಮೂಸಿರಲಿಲ್ಲ. ಆದರೆ, ಬೆಳಗೆದ್ದು ಹಸ್ತ ಹೊಸೆದು ಮುಖ ಒರೆಸಿ ದೇವರ ಪಟಕ್ಕೆ ವಂದಿಸಿ, ಮೊಬೈಲ್ ನೋಡಿದರೆ ಹತ್ತಾರು ಕರೆಗಳು ಬಂದಿದ್ದವು.

ಬಂದ ಕರೆಗಳಲ್ಲಿ ಅರ್ಧದಷ್ಟು ಗಿರಾಕಿ ಸಿಕ್ಕಿದರೂ ಲಾಟರಿ ಹೊಡೆದಂತೆ! ಕಂಪನಿಯ ನಿಯಮ ಮೊದಲಿಗೆ ಅದರ ಸಾದಾ ಸದಸ್ಯನಾಗುವುದು ಗ್ರಾಹಕನಾಗಿ. ಅಂದರೆ, ಕಂಪನಿಯ ದೇಶಿ ಉತ್ಪನ್ನಗಳನ್ನು ಹಣ ಕೊಟ್ಟು ಕೊಳ್ಳಬೇಕು. ನಂತರ, ಸ್ವಯಂ ಉದ್ಯೋಗಿಯಂತೆ ಅವನ್ನು ಹತ್ತು ಜನರಿಗೆ ಕಡ್ಡಾಯವಾಗಿ ಮಾರಬೇಕು. ಹಾಗೆ ಕೊಂಡ ಒಬ್ಬೊಬ್ಬರು ಮತ್ತೆ ಹತ್ತತ್ತು ಗಿರಾಕಿಗಳನ್ನು ಸೃಷ್ಟಿಸಬೇಕು. ಮಾರಾಟ ಸರಪಳಿ ಹೀಗೆ ಬೆಳೆಸಬೇಕು. ಹಾಗೆ ಬೆಳೆದಂತೆಲ್ಲ ಬರುವ ಕಮೀಷನ್ನು ದುಪ್ಪಟ್ಟಾಗಿ, ಮೂರ್ಪಟ್ಟಾಗಿ ಬೆಳೆಯುವುದು. ಕೆಲಸದಲ್ಲಿ ಬಡ್ತಿಯೂ ಸಿಗುವುದು. ಈಗ ಸತ್ಯೇಂದ್ರ ಚಕ್ರವರ್ತಿಗೆ ಐದು ಗಿರಾಕಿಗಳು ಸಿಕ್ಕರೆ ಅವನ ಖಾತೆಯಲ್ಲಿ ಒಟ್ಟು ನೂರು ಗಿರಾಕಿಗಳಾಗಿ ಸಾದಾ ಸದಸ್ಯತ್ವದಿಂದ ಆಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಗಿರಿಯ ಹುದ್ದೆಯ ಕನಸನ್ನು ಸುಖಿಸುತ್ತಿದ್ದಾನೆ. 

ಅದೇ ಖುಷಿಯಲ್ಲಿ ಉತ್ಸಾಹದಿಂದ ಹೆಂಡತಿ ಭಾರತಿಗೆ ಸಂತೋಷದ ಸಮಾಚಾರ ತಿಳಿಸಿದರೆ, ಅವಳು ಅದರ ಬಗ್ಗೆ ಯಾವ ವಿಶೇಷ ಭಾವನೆ ಪ್ರಕಟಿಸದಿದ್ದದ್ದು ಅವನಲ್ಲಿ ನಿರಾಶೆ ತರಲಿಲ್ಲ. ಅವನಿಗೆ ಗೊತ್ತು. ವಾಣಿಜ್ಯ ಪದವೀಧರನಾಗಿ ಸ್ವಯಂ ಉದ್ಯೋಗಿಯಾಗುತ್ತೇನೆಂದು ತಕ್ಕಮಟ್ಟಿಗೆ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟದ್ದು ಅವಳಿಗೆ ಸುತರಾಂ ಇಷ್ಟವಿಲ್ಲವೆಂದು.

ಭಾರತಿಗಿರುವ ಬೇಸರ ಆ ವಿಷಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಮದುವೆಯಾದಾಗಿಂದ ಯಾವ ಕೆಲಸಕ್ಕೆ ಸೇರಿದರೂ ಮೂರು ತಿಂಗಳು ಹೆಚ್ಚೆಂದರೆ ಆರು ತಿಂಗಳಿದ್ದು, ತನಗೆ ಹೊಂದಿಕೆಯಾಗದೆಂದು ಕಂಪನಿ ಬದಲಿಸುವ ತಟವಟ ಆಸಾಮಿಯ ಸ್ವಭಾವ. ಅದು ಮೊದಲೇ ತಿಳಿದಿದ್ದರೆ ಈತನಿಂದ ಕುತ್ತಿಗೆಗೆ ತಾಳಿ ಬಿಗಿಸಿಕೊಳ್ಳುತ್ತಿರಲಿಲ್ಲವೇನೊ? ಹೀಗೆಂದು ಅವಳು ಅದೆಷ್ಟು ಬಾರಿ ಯೋಚಿಸಿದ್ದಳೊ ಲೆಕ್ಕವಿಲ್ಲ.

“ ಸರಿಬರಲಿಲ್ಲವೆಂದರೆ ಕಂಪನಿ ಬದಲಿಸಲಿ ಯಾರು ಬೇಡ ಅಂದದ್ದು?ಆದರೆ, ಬಾಸು ಸುಮ್ಸುಮ್ನೆ             ರೇಗಾಡುತ್ತಾನೆಂದೊ, ಹೆಚ್ಚು ತಾಸು ಕೆಲಸ ಮಾಡಿಸುತ್ತಾರೆಂದೊ, ಕೆಲಸದ ಜಾಗಕ್ಕೆ ಹೋಗಲು ಬಸ್ ವ್ಯವಸ್ಥೆ ಸರಿಯಿಲ್ಲವೆಂದೊ…..ಏನೋ ಒಂದು.  ಸಕಾರಣಗಳೇ ಇಲ್ಲದ ಕುಂಟುನೆಪಗಳು. ಹೋಗಲಿ, ಒಂದು ಕಡೆ ಬಿಟ್ಟರೆ ಈ ಮಹಾರಾಜ ಬಂದ ಅಂತ ಇನ್ನೊಂದೆಡೆ ಕೆಲಸ ಕೊಡಲು ಯಾರು ಸಿದ್ಧವಿರುತ್ತಾರೆ. ದಿನವೆಲ್ಲ ಅಲೆದಾಡಿ ಸಿಕ್ಕರೆ ಒಂದು ವಾರದಲ್ಲಿ, ಇಲ್ಲವೆಂದರೆ ತಿಂಗಳಾದರೂ ಕೆಲಸ ಹುಡುಕುವುದೇ ಒಂದು ಉದ್ಯೋಗವಾಗುತ್ತದೆ. ಹಾಗೆ ನಾಯಿಯಂತೆ ಅಲೆದು ಕೆಲಸ ಹುಡುಕುವಾಗ ಬೇಸರಗೊಳ್ಳುತ್ತನಾದರೂ, ಪುಣ್ಯಕ್ಕೆ ಕೆಲಸ ಸಿಕ್ಕರೆ ಅಲ್ಲಿಯೇ ಇರಬೇಕೆಂಬ ಹಠವಿಲ್ಲ. ಮತ್ತೆ ಯಾವಾಗ ಮೂಡ್ ಹಾಳಾಗುತ್ತೊ ಆವತ್ತಿಗೆ ಆ ಕೆಲಸಕ್ಕೆ ರಾಜೀನಾಮೆ! ಮನೆ ನಡೆಯುವುದಾದರೂ ಹೇಗೆ? ”

ನೋಡಿ, ನೋಡಿ ಸಾಕಾಗಿ ಮನೆಯಲ್ಲಿ ಒಂದಷ್ಟು ಪುಟ್ಟ ಮಕ್ಕಳಿಗೆ ಪಾಠ ಆರಂಭಿಸಿದ್ದರಿಂದ ಈ ಮನುಷ್ಯನನ್ನು ನೆಚ್ಚಿಕೊಳ್ಳದೆ ಬಾಳು ಸಾಗಿಸಬಹುದೆಂಬ ಸ್ವಲ್ಪ ಧೈರ್ಯ ಭಾರತಿಗೆ ಬಂದಿದೆ. ಇದರೊಟ್ಟಿಗೆ ಬಾಯಿ ಬಿಟ್ಟರೆ ಸಾಕು ಕಂತೆ ಕಂತೆ ಬೊಗಳೆ ಬಿಡುವ, ಎಷ್ಟೇ ಎಚ್ಚರವಹಿಸಿದರೂ ಕೆಲಮೊಮ್ಮೆ ಅವನ ಮೋಡಿಯ ಮಾತಿಗೆ ತಾನೇ ಬೇಸ್ತುಬೀಳುವ ಭಾರತಿ “ ನಿಮ್ಮಪ್ಪ ಏನೆಂದು ನಿಮ್ಗೆ ಸತ್ಯೇಂದ್ರ ಚಕ್ರವರ್ತಿ ಅಂತ ಹೆಸರಿಸಿಟ್ಟರೊ! ಆಹಾ… ಸುಳ್ಳಿನ ಸಾಮ್ರಾಟ…” ಎಂದು ಮೂದಲಿಸುವಾಗ ಒಮ್ಮೆ ಮಗಳು ಪುಟ್ಟಿ “ ಸುಳ್ಳೆಂದರೇನು?” ಅಂದದ್ದೇ ತಡ, ಅಂಥದ್ದೇ ಪ್ರಶ್ನೆಗಾಗಿ ಕಾಯುತ್ತಿದ್ದಂತೆ ಸತ್ಯೇಂದ್ರ ಚಕ್ರವರ್ತಿ “ ನೋಡು ಪುಟ್ಟಿ….ಸತ್ಯ ಅಂದರೆ ಇರೋದು. ಸುಳ್ಳು ಅನ್ನೋದು ಇರೋದೇ! ಆದರೆ ಕಾಣದಿರೋದು. ಅವು ಒಂದೇ ನಾಣ್ಯದ ಎರಡು ಮುಖಗಳು. ಎಲ್ಲರೂ ಸೂರ್ಯ ಹುಟ್ದ ಅಂತಾರೆ. ನಿಜಕ್ಕು ಸೂರ್ಯ ಹುಟ್ತಾನ? ಭೂಮಿ ಒಂದು ಸುತ್ತು ಬಂದದ್ದಕ್ಕೆ ಸೂರ್ಯ ಕಾಣ್ತಾನೆ. ಹಾಗೆ ನೋಡಿದರೆ ಎಲ್ಲರೂ ಒಂದು ಲೆಕ್ಕದಲ್ಲಿ ಸುಳ್ಳರೇ!” ಎಂದು ಬುರುಡೆ ಬಿಡುತ್ತಿದ್ದವನಿಗೆ “ ಮಗು ಹತ್ರ ಕೂಡ ಏನ್ರೀ ನಿಮ್ಮ ತಲೆಹರಟೆ “ ಎಂದು ತರಾಟೆ ತೆಗೆದುಕೊಂಡಿದ್ದವಳಿಗೆ, ಸದಾ ವಾಸ್ತವ ಜಗತ್ತನ್ನು ಮರೆತು ಭ್ರಮಾಲೋಕದಲ್ಲಿ ತೇಲಾಡುವ ಸ್ವಭಾವದಿಂದ ಅವನ ವ್ಯಕ್ತಿತ್ವದ ಬಗ್ಗೆ ಜಿಗುಪ್ಸೆ ತರಿಸಿದೆ.

ಆದರೆ, ಸತ್ಯೇಂದ್ರ ಚಕ್ರವರ್ತಿಯ ಭೋಳೆ, ರಂಜನೆಗಾಗಿಯೇ ಸುಳ್ಳು ಸೃಷ್ಟಿಸುವ ಸ್ವಭಾವದಿಂದಲೇ ಅವನಿಗೆ ಆರ್ಯ ಸ್ವದೇಶಿ ವಸ್ತು ಪ್ರಚಾರ ಮತ್ತು ಮಾರಾಟ ಸಂಸ್ಥೆಯ ಮಾರ್ಕೆಟಿಂಗಲ್ಲಿ ಉದ್ಯೋಗ ದಕ್ಕಿರುವುದೆಂದು ಬಹುಶಃ ಭಾರತಿ ಊಹಿಸಿರಬಹುದು. ಬುರುಡೆ ಬಿಡುವ ಮಾರ್ಕೆಟಿಂಗ್ ಕೆಲಸ ಅವನ ಉಡಾಫೆತನಕ್ಕೆ ತಕ್ಕನಾಗಿದ್ದರಿಂದ ಒಂದು ವರ್ಷವಾಗುತ್ತ ಬಂದರೂ ತನ್ನ ಕೆಲಸ ಬಿಡುವ ಹಳೇ ಚಾಳಿ ತೋರದೆ ಹಲ್ಲು ಕಚ್ಚಿ ಅಲ್ಲೇ ಉಳಿದಿದ್ದಾನೆ.  

ಚಾರ್ಟೆಡ್ ಅಕೌಂಟೆಂಟ್ ಬಳಿ ದಿನಕ್ಕೆ ಹನ್ನೆರಡು ಗಂಟೆ, ಕಂಪನಿಗಳ ವರಮಾನ ಖರ್ಚುಗಳ ಲೆಕ್ಕಾಚಾರ ಹಾಕುತ್ತ ಬಸವಳಿದಿದ್ದ ಸತ್ಯೇಂದ್ರನಿಗೆ ದಿನಪತ್ರಿಕೆಯಲ್ಲಿ ಕಂಡ ಹೊಸ ಮಾರ್ಕೆಟಿಂಗ್ ಕಂಪನಿಯೊಂದರ ವಿವಿಧ ಹುದ್ದೆಗಳಿಗಾಗಿ ಕರೆದ ಜಾಹೀರಾತನ್ನು ಹಿಡಿದು, ಆರ್ಯ ಸ್ವದೇಶಿ ಕಂಪನಿಯ ಆಫೀಸಿಗೆ ಸಂದರ್ಶನಕ್ಕೆ ಬಂದಿದ್ದ. ಕೆಲಸ ಅರಸಿ ಬಂದ ಯುವಕರ ಹನುಮಂತನ ಬಾಲದುದ್ದದ ಸಾಲನ್ನು ನೋಡಿ ಸತ್ಯೇಂದ್ರ ತನಗೆ ಕೆಲಸ ಗಿಟ್ಟುವುದಿಲ್ಲವೆಂದ ಅನುಮಾನದಲ್ಲಿದ್ದ. ಆದರೆ, ತ್ವರಿತಗತಿಯಲ್ಲಿ ಯುವಕರು ಸಂದರ್ಶನ ಮುಗಿಸಿ, ತಮ್ಮ ಮಾರ್ಕೆಟಿಂಗ್ ವೃತ್ತಿಪರತೆ, ಅನುಭವದ ಬಗ್ಗೆ ಏನೂ ಕೇಳದೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳುತ್ತಾರೆಂದು ಗೊಣಗುತ್ತ ಸಂದರ್ಶನ ಮುಗಿಸಿ ಹೊರಟಾಗ, ಸರತಿ ಸಾಲು ಬೇಗ ಕರಗಿ ಅವನಿಗೆ ಸಮಾಧಾನ ತಂದಿತು. 

ಸಂದರ್ಶನಕ್ಕಾಗಿ ಅಚ್ಚುಕಟ್ಟಾಗಿ ಇಸ್ತ್ರಿ ಮಾಡಿದ ಸೂಟು ತೊಟ್ಟ ಕೂತ ನಾಲ್ವರು ಟೈ ಕಟ್ಟಿದ್ದರು. ಎಲ್ಲರ ಹಣೆ ಮೇಲೆ ಎಂಟಾಣೆ ಗಾತ್ರದ ಕುಂಕುಮ ಬೊಟ್ಟು ಇದ್ದದ್ದು, ಅವರ ಮುಖಾರವಿಂದಕ್ಕೂ ಹಾಕಿದ ಪೋಷಕಿಗೂ ತಾಳಮೇಳವಿರಲಿಲ್ಲ. ಸಂದರ್ಶಕನೊಬ್ಬ ಟೇಬಲ್ಲಿನ ಮೇಲೆ ಹರಡಿಕೊಂಡಿದ್ದ ಕಂಪನಿಯ ಉತ್ಪನ್ನಗಳ ಬಗ್ಗೆ ತಿಳಿದಿರಬಹುದಾದ ಮಾಹಿತಿ ಕೇಳಿದಾಗ –  ತಲೆಗೆ ಹಾಕುವ ಶ್ಯಾಂಪಿನಿಂದಿಡಿದು, ಮೈಸೋಪು, ಫೇಸ್ ವಾಶ್, ಹಲ್ಲಿನ ಪೇಸ್ಟ್, ಹಪ್ಪಳ, ವಿಧವಿಧ ಉಪ್ಪಿನಕಾಯಿ, ಚವನಪ್ರಾಶ, ನೆಗಡಿ ಕೆಮ್ಮು ಮಲಬದ್ಧತೆಗೆ, ಮಕ್ಕಳಾಗಲು – ಆಗದಿರಲು ಬೇಕಾದ ಮಾತ್ರೆಗಳು…ಹೀಗೆ ಎಲ್ಲಾ ಉತ್ಪನ್ನಗಳ ಕಂಟೆಟ್ ಬಗ್ಗೆ ಅಪಾರ ಜ್ಞಾನವಿದ್ದಂತೆ ಅದರ ಉಪಯೋಗವನ್ನು ಮತ್ತು ಪಾಶ್ಚಾತ್ಯ ವಸ್ತುಗಳ ಮೇಲೆ ಅಪಾರ ಮೋಹ ಬೆಳೆಸಿಕೊಂಡ ಜನರಿಗೆ ಸ್ವದೇಶಿ ಉತ್ಪನ್ನಗಳ ಅಗತ್ಯತೆ, ಪ್ರಸ್ತುತತೆ ಬಗ್ಗೆ ಸತ್ಯೇಂದ್ರ ಚಕ್ರವರ್ತಿ ಕೊಟ್ಟ ಪುಂಖಾನುಪುಂಖ ವ್ಯಾಖ್ಯಾನಕ್ಕೆ ಸಂದರ್ಶಕರು ದಂಗಾಗಿ ಹೋದರು. ಅದಕ್ಕಿಂತ ಹೆಚ್ಚಾಗಿ ಅವರು ಸತ್ಯೇಂದ್ರ ಚಕ್ರವರ್ತಿಯ ಬಗ್ಗೆ ಒಲವು ತೋರಲು ಕಾರಣ, ಸ್ವದೇಶಿ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಬಾ ನಾಮದೇವ ಸ್ವಾಮೀಜಿಯವರ ಅಪಾರ ನೈಸರ್ಗಿಕ ಜ್ಞಾನ, ಸಾತ್ವಿಕ ಬದುಕು, ಜನಪರ ಚಿಂತನೆಗಳು, ಯೋಗ ಕಲಿಕೆ ಮತ್ತು ನೀತಿಬೋಧನೆಯಿಂದ ಸ್ವಸ್ಥ ಸಮಾಜವನ್ನು ನಿರ್ಮಿಸಲು ಅವರು ತೋರುವ ಕಾಳಜಿಯ ಬಗ್ಗೆ ಸತ್ಯೇಂದ್ರ ಚಕ್ರವರ್ತಿ ಕೊರೆದ ಅರೆಭಾಷಣ. ಸಂದರ್ಶಕರೆಲ್ಲರೂ ಎದ್ದು ಚಪ್ಪಾಳೆ ತಟ್ಟಿ, ನಿಮ್ಮಂಥ ಪ್ರತಿಭಾವಂತರ ಅಗತ್ಯತೆ ನಮ್ಮ ಕಂಪನಿಗೆ ತುಂಬಾ ಇದೆಯೆಂದು ಮೆಚ್ಚಿ ಅವನಿಗೆ ಕೆಲಸ ಕೊಟ್ಟಿದ್ದರು.  

ಗಿರಾಕಿಗಳು ಹೆಚ್ಚು ಸಿಕ್ಕು, ಕಮೀಷನ್ ಹಣ ಜಾಸ್ತಿ ಬರತೊಡಗಿದಾಗ ಭಾರತಿಯ ಗೊಣಗಾಟ ಕಮ್ಮಿಯಾಗಿ ಗಂಡನ ಬಗ್ಗೆ ವಿಶ್ವಾಸ ಮೂಡತೊಡಗಿತ್ತು. ಮನೆಯ ಒಂದು ರೂಮು ಮಾರಾಟಕ್ಕೆಂದು ತಂದ ಮೂವತ್ತಾರು ಉತ್ಪನ್ನಗಳಿಂದ ತುಂಬಿ ಹೋಗಿದ್ದರೆ, ಆಗಾಗ ಅಚ್ಚರಿಯಂತೆ ಕಂಪನಿ ಕೊಡುತ್ತಿದ್ದ ಉಡುಗೊರೆ – ಫ್ರಿಜ್, ಮಿಕ್ಸರ್, ಎಲ್ಇಡಿ ಟಿವಿ, ಸೋಫಾ ಸೆಟ್ ಗಳಿಂದ ಅಲಂಕಾರಗೊಂಡು ಇಡೀ ಮನೆಯ ಚಿತ್ರಣವೇ ಬದಲಾಗಿ ಹೋಗಿತ್ತು. ಈಗ ಸತ್ಯೇಂದ್ರ ಚಕ್ರವರ್ತಿಗೆ ಸೀನಿಯರ್ ಮಾರ್ಕೆಂಟಿಗ್ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದ.   

ಆ ದಿನ ಆರ್ಯ ಸ್ವದೇಶಿ ಉತ್ಪನ್ನ ಸಂಸ್ಥೆಯ ಬಹುನಿರೀಕ್ಷಿತ, ಮಹತ್ವಾಕಾಂಕ್ಷೆ ಹೊತ್ತ ಉತ್ಪನ್ನವೊಂದರ ಮಾರುಕಟ್ಟೆ ಬಿಡುಗಡೆ ಕಾರ್ಯಕ್ರಮವಿತ್ತು. “ ಎಣಿಸಿದ ಕಜ್ಜಾಯದಂತೆ ತಿಂಗ್ಳಾತಿಂಗ್ಳು ಬರುತ್ತಿದ್ದ ಸಂಬಳದ ಕೆಲ್ಸ ಬಿಟ್ಟು, ಸೋಪು ಶಾಂಪು ಮಾರೋ ಕೆಲ್ಸಕ್ಕೆ ಸೇರಿರೊ ನಿಮ್ಮನ್ನ, ಮಕ್ಳಗೋಕೂ ಮಾತ್ರೆ ಕೊಡೋ ಆ ನಿಮ್ಮ ಬಾಬಾಸ್ವಾಮೀಜಿನೇ ತಾರೀಫ್ ಮಾಡ್ಬೇಕು “ ಅಂತ ಎತ್ತಾಡೋ ಹೆಂಡ್ತಿಗೆ ತನ್ನ ಕಂಪನಿ ಯಾವ ಮಟ್ಟದ್ದೆಂದು ತೋರಿಸೋಕೆ, ದೊಡ್ಡ ದೊಡ್ಡ ಮನುಷ್ಯರಿರೋ ಜಾಗಕ್ಕೆ ಬರಲ್ಲ ಅಂದ್ರು, ಜುಲುಮೆ ಮಾಡಿ ಸತ್ಯೇಂದ್ರ ಚಕ್ರವರ್ತಿ, ಹೆಂಡತಿಯನ್ನು ಮೀಟಿಂಗಿಗೆ ಕರೆದೊಯ್ದಿದ್ದ.  

ಹಳೇ ಏರ್ ಪೋರ್ಟ್ ಮುಖ್ಯರಸ್ತೆಯಲ್ಲಿದ್ದ ಪಂಚತಾರಾ ಲೀಲಾ ಪ್ಯಾಲೇಸ್ ಹೋಟೆಲ್ಗೆ ಬರೋ ಹೊತ್ತಿಗೆ, ಕಾರಿನ ಎಸಿಯನ್ನು ಆಸ್ವಾದಿಸುತ್ತ  ನಿದ್ರಾವಶನಾಗಿದ್ದ ಸತ್ಯೇಂದ್ರ ಚಕ್ರವರ್ತಿ, ಟ್ಯಾಕ್ಸಿ ಕ್ಯಾಬ್ ಡ್ರೈವರ್ “ಸಾರ್, ನಿಮ್ ಲೋಕೆಷನ್ ಬಂತು“ ಅಂದಾಗಲೇ ಕಣ್ಣುಜ್ಜಿಕೊಂಡು ಎಚ್ಚೆತ್ತ. ಕಾರು ಬಾಡಿಗೆಯನ್ನು ಮೊಬೈಲ್ನಲ್ಲೇ ಗೂಗಲ್ ಪೇ ಮಾಡಿ, ತೊಟ್ಟ ಬಾಡಿಗೆ ಬ್ಲೇಸರನ್ನು, ಕುತ್ತಿಗೆಗೆ ಬಿಗಿದಿದ್ದ ಟೈಯನ್ನು ಸರಿ ಪಡಿಸಿಕೊಳ್ಳುತ್ತ, ಲ್ಯಾಪ್ ಟ್ಯಾಪ್ ಬ್ಯಾಗನ್ನು ಹೊತ್ತು ಹೋಟೆಲ್ ಮುಖ್ಯದ್ವಾರದ ಕಡೆಗೆ ಬಿರುಸಾಗಿ ನಡೆದಾಗ, ಹೆದರಿದ ಹರಿಣಿಯಂತೆ ಕಾರಿನಿಂದಿಳಿದ ಭಾರತಿ, ಥೇಟ್ ಅರಮನೆಯಂತೆ ಕಣ್ಣಿನ ಅಳತೆಗೆ ನಿಲುಕದಿದ್ದ ಆ ಭವ್ಯ ಹೋಟೆಲ್ಲನ್ನು ನೋಡುತ್ತ ಗರಬಡಿದವಳಂತೆ ನಿಂತುಬಿಟ್ಟಳು. “ಹಾಗೆಲ್ಲ ಬಾಯ್ಬಿಟ್ಕೊಂಡು ನೋಡಬೇಡ. ನೋಡಿದೋರು ಹಳ್ಳಿ ಗುಗ್ಗುಗಳು ಫಸ್ಟ್ ಟೈಮ್ ಇಂಥ ಹೊಟೇಲ್ಲಿಗೆ ಬರ್ತಿರೋದು ಅಂದ್ಕೊತಾರೆ” ಎಂದು ಅವಳ ರಟ್ಟೆ ಹಿಡಿದು ಮುಂದೆ ಸಾಗಿದ. “ಹಂಗಂದ್ರೆ ತಾವು ದಿನಾ ಬರ್ತಿರೊ ಈ ಹೋಟೆಲ್ಗೆ?” ಅಂದರೆ, “ಇದರ ಅಪ್ಪನಂತ ಹೋಟೆಲ್ಗೂ ಹೋಗಿದ್ದೀನಿ. ನಿಂಗದು ಗೊತ್ತಾಗ್ಲಿ ಅಂತಾನೇ ಕರ್ಕೊಂಡು ಬಂದಿರೋದು…ಬಾ ಬೇಗ. ಮೀಟಿಂಗ್ ಶುರುವಾಗಿರುತ್ತೆ” ಎಂದು ಅವಸರಿಸಿದ.

ಒಳಾಂಗಣಕ್ಕೆ ಬಂದರೆ – ಒಮ್ಮೆ ನೋಡಿದ್ದ ಮೈಸೂರು ಅರಮನೆಯನ್ನೂ ನಾಚಿಸುವಂಥ, ಅಷ್ಟೆತ್ತರದ ಚಾವಣಿ, ಅಲ್ಲಿಂದ ನೇತು ಬಿದ್ದಿದ್ದ ಬೃಹತ್ ತೂಗು ದೀಪಗಳ ಗೊಂಚಲು, ಗೋಡೆಯ ಮೇಲೆಲ್ಲ ದೊಡ್ಡ ಚಿತ್ರಭಿತ್ತಿಗಳು, ತಣ್ಣನೆಯ ಹವಾನಿಯಂತ್ರಣದೊಡನೆ ಆಗಾಗ ಬೀಸುವ ಸುಗಂಧದ ಗಾಳಿ. ಯಾವಾಗಲಾದರೊಮ್ಮೆ ದರ್ಶಿನಿ ಹೋಟೆಲ್ಲಿಗೆ ಹೋಗಿ ನಿಂತು ಮಸಾಲೆದೋಸೆ ತಿಂದು ಬರೋ ಅಭ್ಯಾಸವಿದ್ದ ಭಾರತಿಗೆ ಆ ವೈಭೋಗವನ್ನು ನೋಡಿ ತಲೆ ಸುತ್ತು ಬಂದಂತಾಯಿತು.  

ರಾಜ ಮಹಾರಾಜರ ವೇಷಭೂಷಣದಲ್ಲಿ, ಕೈಗೆ ಬಿಳಿಗವಸು ತೊಟ್ಟ ವೈಟರುಗಳು ಕೈಯಲ್ಲಿ ಟ್ರೇ ಹಿಡಿದು ಸಾಫ್ಟು ಹಾಟು ಡ್ರಿಂಕ್ಸನ್ನು ಟೇಬಲಲ್ಲಿ ಶಿಸ್ತಾಗಿ ಇಸ್ತ್ರಿಯಾದವರಂತೆ ಸಣ್ಣ ಮುಗುಳ್ನಗೆ ಬೀರುತ್ತ ಮೆಲುದನಿಯಲ್ಲಿ ಹರಟುತ್ತಿದ್ದವರಿಗೆ ಸರಬರಾಜು ಮಾಡುತ್ತಿದ್ದರು. ಎಲ್ಲಾ ಟೇಬಲ್ಲುಗಳು ಭರ್ತಿಯಾಗಿ, ಮೂಲೆಯೊಂದರಲ್ಲಿ ಕಂಡ ಸೋಫಾದಲ್ಲಿ ಸತ್ಯೇಂದ್ರ ಚಕ್ರವರ್ತಿ, ಭಾರತಿ ಆಸೀನರಾದರು. 

“ಯುವರ್ ಅಟೆನ್ಶನ್…ಪ್ಲೀಸ್…ಡಿಯರ್ ಬ್ರದರ್ಸ್ ಅನ್ಡ್ ಸಿಸ್ಟರ್ಸ್…… “. 

ಕೈಲಿ ಮೈಕಿಡಿದ ಯವಕನೊಬ್ಬ ವೇದಿಕೆಯಲ್ಲಿ ಕಾಣಿಸಿಕೊಂಡ. ಇಂಗ್ಲೀಷಲ್ಲಿ ಚಟಪಟ ನಿರರ್ಗಳವಾಗಿ ಮಾತಾಡುತ್ತ, ಕೂಗಾಡುತ್ತ ವೇದಿಕೆಯ ತುಂಬಾ ಅತ್ತಿಂದಿತ್ತ ಕುಣಿಯುತ್ತ, ಹಾರಾಡುತ್ತ, ಮೇಜುವಾನಿಯಲ್ಲಿ ಆನಂದಿಸುತ್ತಿದ್ದ ಸಭಿಕರೆಲ್ಲರ ಗಮನ ತನ್ನತ್ತ ಸೆಳೆಯಲು ಯಶಸ್ವಿಯಾದ.

“ನಮ್ಮ ದೇಶ ಎಂಥಾ ಮಹಾನ್ ದೇಶ. ಮಹಾನ್ ಸಾಧುಸಂತರ, ತ್ಯಾಗಿಗಳ ನೆಲೆವೀಡು. ವಿಶ್ವಕ್ಕೆ ಸೊನ್ನೆಯನ್ನು ಕೊಟ್ಟೆವು ಎಂದರೆ ನಗಬೇಡಿ. ಆ ಸೊನ್ನೆ ಇಲ್ಲದಿದ್ದರೆ ಗಣಿತಶಾಸ್ತ್ರ ಇರಲು ಸಾಧ್ಯವಿತ್ತೆ? ಪ್ಲಾಸ್ಟಿಕ್ ಸರ್ಜರಿ ಮೊದಲು ಮಾಡಿದ್ದು ನಮ್ಮ ವೈದ್ಯಶಾಸ್ತ್ರ….ಆದಿಪೂಜಿತನೇ ಅದರ ಮೊದಲ ಪ್ರಯೋಗ… ವಿಮಾನವನ್ನು ಕಂಡುಹಿಡಿದದ್ದು ನಾವು…..ಶತಮಾನಗಳ ಹಿಂದೆ ತೇತ್ರಾಯುಗದ ಪುಷ್ಪಕವಿಮಾನ ನಿಮಗೆ ನೆನಪಿಲ್ಲವೇ?…..”

ಹೀಗೆ ಒಂದೊಂದು ಉದಾಹರಣೆಯನ್ನು ಹೇಳಿ ತುಸು ವಿರಾಮವಿತ್ತಾಗ ನೆರೆದಿದ್ದವರಿಂದ ಕಿವಿಯ ತಮಟೆ ಹರಿಯುವಂತೆ ಚಪ್ಪಾಳೆ, ಪಂಚತಾರಾ ಹೋಟೆಲ್ಲಿನ ಸಭ್ಯತೆಯನ್ನು ಮರೆತು ಶಿಳ್ಳೆಗಳು ಮೊಳಗುತ್ತಿದ್ದವು. 

“ಈಗ ಅಂಥದ್ದೇ ಒಂದು ಆವಿಷ್ಕಾರವನ್ನು ನಮ್ಮೆಲ್ಲರ ಪೂಜ್ಯ ಶ್ರೀಶ್ರೀಶ್ರೀ ಬಾಬಾ ನಾಮದೇವಸ್ವಾಮಿಗಳು ಮಾಡಿದ್ದಾರೆ. ಅದು ಇದುವರೆಗೆ ತಯಾರಾಗಿ ಜನಮನ್ನಣೆ ಗಳಿಸಿರುವ ಎಲ್ಲಾ ಪ್ರಾಡಕ್ಟ್ ಗಳಿಗೆ ಮುಕುಟಪ್ರಾಯವಾಗಲಿದೆ” ಎಂದಾಗ, 

ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟತೊಡಗಿದರು. ತುಸು ಹೊತ್ತಾದರೂ ಕರಡಾತನ ನಿಲ್ಲದಿದ್ದಾಗ ವೇದಿಕೆಯ ಕೇಂದ್ರ ಭಾಗದಲ್ಲಿ ಸಿಂಹಾಸನದಲ್ಲಿ ಆಸೀನರಾಗಿದ್ದ ಕಾವಿಧಾರಿ ನಾಮದೇವಸ್ವಾಮಿ ತನ್ನ ಅರೆನೆರೆತ ಗಡ್ಡ ನೀವುತ್ತ, ‘ಸಾವಧಾನ….ಸಾವಧಾನ’ ಎಂದದ್ದಕ್ಕೆ ಇಡೀ ಸಭಾಂಗಣ ಪಿನ್ ಡ್ರಾಪ್ ಸೈಲೆನ್ಸ್ ಆಯಿತು. 

“………ಪ್ರಾಡಕ್ಟನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿ ಮತ್ತು ಆ ಕುರಿತು ಒಂದೆರೆಡು ಮಾತಾಡಲು ನಾನು ಆರ್ಯ ಸ್ವದೇಶಿ ಉತ್ಪನ್ನ ಪ್ರಚಾರ ಮತ್ತು ಮಾರಾಟ ಸಂಸ್ಥೆಯ ಪರವಾಗಿ ಹಾಗೂ ಅದರಲ್ಲಿ ಭಾಗಿದಾರರಾದ ನಿಮ್ಮೆಲ್ಲರ ಪರವಾಗಿ ನಮ್ಮೆಲ್ಲರ ಮೆಚ್ಚಿನ ಆರೋಗ್ಯಮಂತ್ರಿಯವರನ್ನು ವೇದಿಕೆ ಆಹ್ವಾನಿಸುತ್ತಿದ್ದೇನೆ” ಎಂದಾಗ ಇಡೀ ಸಭಾಂಗಣವೇ ಮತ್ತೆ ಚಪ್ಪಾಳೆ ತಟ್ಟಿತು.  

“ಆರ್ಯ ಸ್ವದೇಶಿ ಉತ್ಪನ್ನಗಳು ಸಾತ್ವಿಕವಾಗಿದ್ದು ದೇಶಾದ್ಯಂತ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪರದೇಶದಲ್ಲಿ ತಯಾರಾದ ವಸ್ತುಗಳನ್ನು ತ್ಯಜಿಸಿ, ನಮ್ಮ ದೇಶದಲ್ಲಿಯೇ ತಯಾರಾದ ಉತ್ಪನ್ನಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಬಳಸಿ ನಾವು ಆತ್ಮನಿರ್ಭರರಾಗುವಂತೆ ಮಾಡಬೇಕು. ಈ ಕಾರ್ಯ ಬಾಬಾ ನಾಮದೇವ ಸ್ವಾಮೀಜಿಯವರ ನಿರ್ದೇಶನದಲ್ಲಿ ಚೆನ್ನಾಗಿ ನಡೆಯುತ್ತಿದೆ. ಜನರ ದೈಹಿಕ ಆರೋಗ್ಯದ ಕಾಳಜಿ ಬಹುಮುಖ್ಯ. ಹಾಗೆ ಮಾನಸಿಕ ಚಿಂತನೆಗಳು ಕೂಡ. ಅಂದರೆ ನಮ್ಮ ಜನರು ಹೆಚ್ಚಾಗಿ ಯುವಜನರು ಪರದೇಶದ ಸಂಸ್ಕೃತಿಯಿಂದ ಹೆಚ್ಚು ಆಕರ್ಷಣೆಗೆ ಒಳಗಾಗಿ ನಮ್ಮ ಸನಾತನ ಸಂಸ್ಕೃತಿ, ಸಂಪ್ರದಾಯ, ಆಚಾರವಿಚಾರಗಳನ್ನು ಮರೆಯುತ್ತಿದ್ದಾರೆ. ಇದು ಬಹಳ ದುರಾದೃಷ್ಟದ, ನೋವಿನ ಸಂಗತಿ.

ಇದಕ್ಕೆ ಪರಿಹಾರ ಕೋರಿ ನಮ್ಮ ಸರ್ಕಾರ ಬಾಬಾರಲ್ಲಿ ವಿನಂತಿಸಿಕೊಳ್ಳಲಾಯಿತು. ಸ್ವಾಮೀಜಿಗಳು ತಮ್ಮ ಅಖಂಡ ತಪಸ್ಸಿನ ಬಲದಿಂದ ಮತ್ತು ತಮ್ಮ ಅಗಾಧ ಜ್ಞಾನವನ್ನು ಧಾರೆಯೆರೆದು ಅಲ್ಪಾವಧಿಯಲ್ಲಿಯೇ ಒಂದು ದಿವೌಷಧವನ್ನು ಕಂಡುಹಿಡಿದಿದ್ದಾರೆ. ಇದರ ನಿರಂತರ ಸೇವನೆಯಿಂದ ವಿಸ್ಮೃತಿಗೆ ಒಳಗಾದ ಜನರಲ್ಲಿ ನಮ್ಮ ಭವ್ಯ ಸಂಸ್ಕೃತಿಯನ್ನು ಅವರಲ್ಲಿ ಪುನರ್ ಪ್ರತಿಷ್ಠಾಪಿಸಲಾಗುತ್ತದೆ. ಇದರಿಂದ ದೇಶದ ಮೇಲೆ ಪ್ರೇಮ, ಭಕ್ತಿ ಹೆಚ್ಚಾಗುತ್ತದೆ. ಇದು ಈಗಾಗಲೇ ವಿದೇಶಿ ವ್ಯಾಮೋಹಕ್ಕೆ ಒಳಗಾದವರಲ್ಲಿ ಪ್ರಯೋಗಿಸಿ ಯಶಸ್ವಿಯಾಗಿದೆ. ಈ ದೇಶಭಕ್ತಿಯ ಉದ್ದೀಪನ ಘನ ಉದ್ದೇಶಕ್ಕಾಗಿ ನಮ್ಮ ಸರ್ಕಾರ ಮಹಾನ್ ದೇಶ್ ಹೆಸರಿನ ಈ ಮದ್ದನ್ನು ತಯಾರಿಸಿ, ಕಡಿಮೆ ದರದಲ್ಲಿ ಜನರಿಗೆ ವಿತರಿಸಲು ಸಂಸ್ಥೆಗೆ ಅನುದಾನವನ್ನು ಕೊಡಲು ನಿರ್ಧರಿಸಿದೆ. ಸ್ವದೇಶಿ ಉತ್ಪನ್ನಗಳ ಮಾರಾಟದ ಕುಟುಂಬದವರಾದ ನೀವುಗಳು ಈ ಮದ್ದನ್ನು ಹೆಚ್ಚುಹೆಚ್ಚು ಜನರಿಗೆ ಪರಿಚಯಿಸಿ ಎಲ್ಲರಲ್ಲೂ ದೇಶಭಕ್ತಿ ಹೆಚ್ಚಾಗುವಂತೆ ಮಾಡಬೇಕು…….”

ಹೀಗೆ ಸಾಗಿದ ಆರೋಗ್ಯಮಂತ್ರಿಗಳ ಭಾಷಣದಿಂದ ಪುಳಕಿತರಾದ ನೆರೆದಿದ್ದವರು ಸಭಾಂಗಣದ ಚಾವಣಿ ಕಿತ್ತು ಹೋಗುವಂತೆ ಚಪ್ಪಾಳೆ ತಟ್ಟಿದರು. 

ಮಹಾನ್ ದೇಶ್ ದಿವೌಷಧಕ್ಕೆ ದಿನಪತ್ರಿಕೆಗಳಲ್ಲಿ, ಟಿವಿಗಳಲ್ಲಿ, ನಗರದೆಲ್ಲೆಡೆ ಬ್ಯಾನರ್ಗಳನ್ನಾಕಿ ಕಂಪನಿ ಭಾರೀ ಪ್ರಚಾರ ನಡೆಸಿತು. ಅದಕ್ಕೆ ತಕ್ಕಂತೆ ಅದರ ಮಾರಾಟವು ಹೆಚ್ಚಿ, ಸತ್ಯೇಂದ್ರ ಚಕ್ರವರ್ತಿಗೆ ಕೆಲಸ ಹೆಚ್ಚಾಗಿ ಬಿಡುವು ಸಿಗದಾಯಿತು. ಬೈಕಲ್ಲಿ ಧೂಳು ಹೊಗೆ ಕುಡಿಯುತ್ತ ಟ್ರಾಫಿಕ್ಕಿನಲ್ಲಿ ಇಡೀ ನಗರ ಸುತ್ತಾಡಿ ದಣಿಯುವಾಗ ಸೊಂಬೇರಿ ಮನಸ್ಥಿತಿಯವನಿಗೆ, ಕೆಲವೊಮ್ಮೆ ಸುತ್ತಾಟ ಸಾಕುಬೇಕೆನಿಸುತ್ತಿತ್ತು. ಆದರೆ, ತಾನೂ ದಿವೌಷಧವನ್ನು ದಿನದ ಮೂರೊತ್ತು ಸೇವಿಸುತ್ತಿದ್ದರಿಂದ ಅವನಲ್ಲಿ ಹೊಸ ಚೈತನ್ಯವೊಂದು ತುಂಬಿ ಹೆಚ್ಚು ಲವಲವಿಕೆಯಿಂದಿರಲು ಸಾಧ್ಯವಾಗಿತ್ತು. ಹಗಲೆಲ್ಲ ತಿರುಗಾಡಿ, ಸುಸ್ತಾಗಿ ಮನೆಗೆ ತಡವಾಗಿ ಬರುತ್ತಿದ್ದವನು ಊಟ ಮಾಡಿ ಹಾಸಿಗೆಗೆ ಬಿದ್ದರೆ ಗೊರಕೆ ಹೊಡೆಯುತ್ತ ನಿದ್ರೆಗೆ ಜಾರಿ ಬಿಡುತ್ತಿದ್ದನು. 

ರಾತ್ರಿ ಮಲಗಿದವನು ಗೊರಕೆ ಹೊಡೆಯುವುದು ಹೊಸ ವಿಷಯವಲ್ಲವಾದರೂ, ಗೊರಕೆ ಶಬ್ಧ ಹಿಂದೆಂದಿಗಿಂತ ಹೆಚ್ಚಾಗಿ, ಕಿವಿಗಡಚ್ಚಿಕ್ಕುವ ಶಬ್ಧಕ್ಕೆ ನಿದ್ರೆ ಬಾರದೆ ಅವನನ್ನು ಅಲುಗಾಡಿಸಿ ಎಚ್ಚರಿಸುವ ಭಾರತಿ, ಸುಸ್ತಾದವನು ವಿಶ್ರಮಿಸಿಕೊಳ್ಳಲೆಂದು ತಾನೇ ದೂರ ಹೋಗಿ ಮಲಗುತ್ತಿದ್ದಳು. ಹಾಗೆ ಮಲಗುವಾಗ ತುಟಿಗಳ ನಡುವಿಂದ ಆಚೆ ಬಿದ್ದ ನಾಲಿಗೆ ಗೊರಕೆ ಹೊಡೆದಂತೆ ಅದುರುವುದನ್ನು ಗಮನಿಸಿದ್ದಳು. 

ಇತ್ತೀಚಿಗೆ ಸತ್ಯೇಂದ್ರ ಚಕ್ರವರ್ತಿಯ ನಡಾವಳಿಯಲ್ಲಿ ಕೆಲವು ಬದಲಾವಣೆಗಳು ಕಂಡವು. ಯಾವಾಗಲೂ ಇಲ್ಲದಿದ್ದನ್ನು ಕಲ್ಪಿಸಿ ಹೇಳುತ್ತ, ತರಲೆ ಮಾಡುತ್ತ ಸದಾ ಗಹಗಹಿಸಿ ನಗುತ್ತ, ಗೆಲುವಿನಿಂದಿರುತ್ತಿದ್ದವನು ಗಂಭೀರ ವದನನಾದ. ಹಣೆಗೆ ರೂಪಾಯಿ ಕಾಸಿನಗಲ ಕುಂಕುಮ ಬೊಟ್ಟಿಟ್ಟು, ಸದಾ ಯಾವುದಾದರೂ ಶ್ಲೋಕವನ್ನು ಬಾಯಲ್ಲಿ ಗುಣಿಗುಣಿಸುತ್ತ ಕಣ್ಮುಚ್ಚಿ ಪದೇ ಪದೇ ತನ್ನ ತಾನೇ ವಂದಿಸುವನು. ಚಿನ್ನದ ಲೇಪನದ ಕಟ್ಟುಗಾಜು ಹಾಕಿಸಿದ ದೇಶದ ಭೂಪಟವನ್ನು ಗೋಡೆಗೆ ನೇತಾಕಿ, ಕುಂಕುಮ ಹಚ್ಚಿ, ಹೂಹಾರ ಹಾಕಿ, ಸಮಯ ಸಿಕ್ಕಾಗೆಲ್ಲ ಅದರ ಮುಂದೆ ಪದ್ಮಾಸನದಲ್ಲಿ ಜಪಕ್ಕೆ ಕುಳಿತು ಬಿಡುವನು. ಭಾರತಿಗೆ ಇವೆಲ್ಲ ವಿಲಕ್ಷಣವಾಗಿ ಕಂಡರೂ, ತಟವಟ ಮಾತಾಡುವುದು ನಿಂತಂತೆ ಕಂಡು ಸಮಾಧಾನಗೊಂಡಳು.

ಮಹಾನ್ ದೇಶ್ ಕೇಸರಿ ಲೇಹ್ಯವನ್ನು ಸೇವಿಸುತ್ತಿದ್ದ ಕೆಲವು ಸ್ವದೇಶಿ ಉತ್ಪನ್ನ ಸಂಸ್ಥೆಯ ಸದಸ್ಯರಲ್ಲಿ ಮತ್ತು ಗಿರಾಕಿಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿಯೂ ವೈಪರೀತ್ಯ ಕಾಣತೊಡಗಿತು. ದಿನಕ್ಕೆ ಮೂರೊತ್ತು ಒಂದು ಚಮಚದಷ್ಟು ಸೇವಿಸಬೇಕಿದ್ದ ಲೇಹ್ಯವನ್ನು ಕೆಲವರು ದೇಶಭಕ್ತಿ ಹೆಚ್ಚಾಗಲೆಂದು ನಾಲ್ಕೈದು ಬಾರಿ ಸೇವಿಸಿದ್ದರಿಂದ, ತಲೆಸುತ್ತುವುದು, ವಾಂತಿಭೇದಿಯಂತ ದೇಹಬಾಧೆಗಳು ಶುರುವಾದವು. ಇನ್ನೂ ಕೆಲವರು ಮತ್ತೇರಿದವರಂತೆ ಅಳಿದು ಹೋದ ಇತಿಹಾಸದ ಸುವರ್ಣಯುಗದ ದೇಶದ ಸ್ಥಿತಿಯನ್ನು ನೆನೆಯುತ್ತ, ಆ ಕಾಲದಲ್ಲಿದ್ದಂತೆ ಕಲ್ಪಿಸಿಕೊಳ್ಳುತ್ತ  ಭ್ರಮೆಯಲ್ಲಿ ಬಡಬಡಿಸತೊಡಗಿದರು.

ಮತ್ತೂ ಕೆಲವರು ಅಮಲೇರಿದವರಂತೆ ಜನಗಳ ಮೇಲೆ ಮುಗಿಬಿದ್ದರು. ಅದರಲ್ಲೂ ಧಾರ್ಮಿಕ ಸ್ಥಳಗಳಲ್ಲಿ ಪ್ಯಾಂಟು ಶರಟು, ಮಿಡಿ, ಜೀನ್ಸ್ ತೊಟ್ಟ ಯುವತಿಯರು, ಹೆಂಗಸರನ್ನು ಕಂಡರೆ ಅಲ್ಲೇ ನಿಲ್ಲಿಸಿ ಸೀರೆ ಉಟ್ಟುಕೊಳ್ಳುವಂತೆ ದಬಾಯಿಸತೊಡಗಿದರು. ಪಬ್, ಬಾರ್ ಗಳಲ್ಲಿ ಸಹಪಾಠಿ ಹುಡುಗರೊಂದಿಗೆ ಮದ್ಯ ಸೇವಿಸುತ್ತ ಹರಟುತ್ತ ಕುಳಿತ ಕಾಲೇಜು ಹೆಣ್ಣುಮಕ್ಕಳ ಜುಟ್ಟು ಹಿಡಿದು ಬೀದಿಗುಂಟ ಎಳೆದಾಡಿ ನೆಲಕ್ಕೆ ಚೆಲ್ಲಿದರು. ಅವರೊಂದಿಗಿದ್ದ ಹುಡುಗರನ್ನಂತೂ ಹಿಗ್ಗಾಮುಗ್ಗಾ ಮುಖಮೂತಿ ನೋಡದೆ ಚಚ್ಚಿ, ಕೈಗೆ ಸಿಕ್ಕ ಕೋಲುಗಳಿಂದ ಬಾರಿಸಿದರು. ಅವಮಾನಿತರಾದ ಆ ಯುವಕ, ಯುವತಿಯರ ಗೋಳನ್ನು ಸಾಗುತ್ತಿದ್ದ ಜನರು ನಿಂತು ನೋಡಿದರೆ ಹೊರತು ಹೊಡೆಯುತ್ತಿದ್ದವರ ಎದುರಿಸಲು ಯಾರೂ ಧೈರ್ಯ ಮಾಡಲಿಲ್ಲ. 

ಸನಾತನ ಸಂಸ್ಕೃತಿಗೆ ಅಪಚಾರ ಎಸಗುವಂತೆ ವಿದೇಶಿಯರ ಅನುಕರಣೆ ಮಾಡಿ ವಸ್ತ್ರ ಧರಿಸುವುದರ ವಿರುದ್ಧ ಅದನ್ನು ನಿಷೇಧಿಸಬೇಕೆಂಬ ಜನರ ಒತ್ತಡ ಸರ್ಕಾರ ಮೇಲೆ ಜಾಸ್ತಿಯಾಗ ತೊಡಗಿತು. ತುದಿಗಾಲಲ್ಲಿ ನಿಂತ ಸರ್ಕಾರ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ, ಸರ್ಕಾರಿ ಸ್ಕೂಲು ಕಾಲೇಜುಗಳಲ್ಲಿ ದೇಶಿ ವಸ್ತ್ರಸಂಹಿತೆ ಜಾರಿಗೊಳಿಸಿ ಕಾನೂನು ಪಾಸು ಮಾಡಿತು. ಅದರಂತೆ ಹೆಣ್ಣುಮಕ್ಕಳು ಸೀರೆ, ಚೂಢಿದಾರ್, ಸಲ್ವಾರ್ ಕಾಮಿಜ್, ಲಂಗ ಬ್ಲೌಸ್ ತೊಡಲು ಮಾತ್ರ ಅವಕಾಶವಿದ್ದು, ಬೇರೆ ದಿರಿಸು ತೊಟ್ಟವರಿಗೆ ಪ್ರವೇಶ ನಿರಾಕರಿಸಲಾಯಿತು. ಕೇವಲ ಹೆಣ್ಣುಮಕ್ಕಳಿಗೆ ಮಾತ್ರವೇಕೆ ವಸ್ತ್ರಸಂಹಿತೆ ಎಂಬ ಕೂಗು ಕೆಲವು ಮಹಿಳಾಸಂಘಟನೆಗಳಿಂದ ಪ್ರತಿಭಟನೆ ಬಂತಾದರೂ ಅದಕ್ಕೆ ಜನ ಬೆಂಬಲವಿಲ್ಲದೆ ಗಾಳಿಯಲ್ಲಿ ಕರಗಿ ಹೋಯಿತು. 

ಸರ್ಕಾರ ಜಾರಿ ಗೊಳಿಸಿದ ವಸ್ತ್ರಸಂಹಿತೆಯಿಂದ ಉತ್ತೇಜನಗೊಂಡವರು ಈಗ ಮಾಂಸಾಹಾರದ ಬಗ್ಗೆ ವರಾತ ತೆಗೆದರು. ಮಾಂಸ ಭಕ್ಷಣೆ ರಾಕ್ಷಸರ ಪ್ರವೃತ್ತಿ. ಅದರಲ್ಲೂ ಮುಕ್ಕೋಟಿ ದೇವರಿರುವ ಗೋಮಾಂಸವನ್ನು ತಿನ್ನುವವರು ದೇಶದ್ರೋಹಿಗಳೇ ಸರಿಯೆಂದು, ಕೊಲ್ಲುವ ಇರಾದೆಯಿರದೆ ಹಣಕಾಸು ತೊಂದರೆಗಾಗಿ ದನಗಳ ಮಾರಾಟ ಮಾಡುವವರನ್ನು ಸಹ ಮನಸೋ ಇಚ್ಚೆ ಥಳಿಸಲಾಯಿತು. ಸರ್ಕಾರ ಅವರ ದೇಶಭಕ್ತಿಗೆ ಮೆಚ್ಚಿ, ಅಂಥವರನ್ನು ಗೋರಕ್ಷಕರೆಂದು ಕರೆದು ಅವರ ಮೇಲೆ ಯಾವ ಕಾನೂನು ಶಿಕ್ಷಿಸದಂತೆ ಠರಾವು ಮಾಡಲಾಯಿತು.     

ಸ್ಕೂಲಿಂದ ಬಂದ ಪುಟ್ಟಿ ಆಟೊದಿಂದಿಳಿದು ಗಾಬರಿಯಿಂದ ಮನೆ ಹೊಕ್ಕು ಭಾರತಿಯ ಕಾಲನ್ನು ತಬ್ಬಿಹಿಡಿದಳು.     “ಏನಾಯ್ತು ಪುಟ್ಟಿ?” ಎಂದರೆ, ಅಳು ಮುಖಮಾಡಿಕೊಂಡಳೇ ಹೊರತು ಮಾತಾಡಲು ತೊದಲಿದಳು. “ ಆಯ್ತು ಬಾ  “ತಿಂಡಿ ಕೊಡತ್ತೇನೆಂದು ನೀರು ಕುಡಿಸಿ ಸಮಾಧಾನ ಮಾಡುವಾಗ, ಸುಧಾರಿಸಿಕೊಂಡವಳು ಶಾಲೆಯಲ್ಲಿ ನಡೆದ ಘಟನೆಯನ್ನು ಹೇಳಿ “ನಾನು ಸ್ಕೂಲಿಗೆ ಹೋಗಲ್ಲ!” ಎಂದು ಅಳಲು ಶುರುಮಾಡಿದಳು. ಮೊದಲಿಗೆ ಅವಳ ಮಾತನ್ನು ಕೇಳಿದ ಭಾರತಿಗೆ ನಂಬಲು ಸಾಧ್ಯವಿರಲಿಲ್ಲ. ಆದರೆ, ಆರು ವರ್ಷದ ಪುಟ್ಟಿ ಸುಳ್ಳು ಹೇಳುವುದಕ್ಕೆ ಕಾರಣವಿರಲಿಲ್ಲ. 

ತದೇಕಚಿತ್ತದಿಂದ ತರಗತಿಯಲ್ಲಿ ಮೇಷ್ಟ್ರು ಹೇಳುತ್ತಿದ್ದ ಪುರಾಣ ಋಷಿಮುನಿಯರ ಕತೆಯನ್ನು ಆಲಿಸುತ್ತಿದ್ದ ಪುಟ್ಟಿಗೆ ಮೇಷ್ಟ್ರರ ನಾಲಿಗೆ ಮಾರುದ್ಧವಾಗಿ ಬಾಯಿಯಾಚೆ ಬಂದು ಒಳಗೋದ ಹಾಗೆ ಅನಿಸಿತು. ಕತೆಯಲ್ಲಿ ತಲ್ಲೀನಳಾಗಿದ್ದವಳು, ಕತೆಗೆ ಕಿವಿಗೊಡದೆ ಮೇಷ್ಟ್ರರ ನಾಲಿಗೆ ಯಾವಾಗ ಉದ್ಧವಾಗಿ ಹೊರಚಾಚುತ್ತದೆಂದು ಕಾಯ ತೊಡಗಿದಳು. ಕಣ್ಣರಳಿಸಿ ನೋಡುತ್ತಾ ಇದ್ದಕ್ಕಿದಂತೆ ನಾಲಿಗೆ ಹೊರಚಾಚಿ ತನ್ನತ್ತಲೇ ಬಂದಂತೆ ಭಾಸವಾಗಿ ಭಯಗೊಂಡು ಕಣ್ಮುಚ್ಚಿ ನೆಲಕ್ಕೆ ಮುಖ ಮಾಡಿ ಕೂತವಳು ತರಗತಿ ಮುಗಿಯುವವರೆಗೂ ಮೇಲೇಳಲಿಲ್ಲ.  

ಭಾರತಿಗೆ ಈಗ ಪರಿಸ್ಥಿತಿಯ ಗಂಭೀರತೆ ಚೂರೇ ಚೂರೇ ಅರಿವಿಗೆ ಬರತೊಡಗಿತು. ಸತ್ಯೇಂದ್ರ ಚಕ್ರವರ್ತಿ ರಾತ್ರಿ ಗೊರಕೆ ಹೊಡೆಯುತ್ತ ಮಲಗಿರುವಾಗ ತುಟಿಗಳಾಚೆ ನಾಲಿಗೆ ಚಾಚಿರುವುದನ್ನು ಅವಳು ಗಮನಿಸಿದ್ದಳು, ಅದು ದಿನೇ ದಿನೇ ಇಂಚಿಂಚೆ ಉದ್ದವಾಗುತ್ತಿರುವಂತೆ ಭಾಸವಾಗಿ ಕಳವಳಗೊಂಡಿದ್ದಳು. ಆ ರಾತ್ರಿ ಗೊರಕೆ ಹೊಡೆಯುವ ಸದ್ಧಿಗೆ ನಿದ್ದೆಗೆಟ್ಟು, ಎದ್ದುಕೂತರೆ ಬಾಯಿಯಾಚೆ ಬಿದ್ದ, ಉಸಿರಾಟದ ಏರಿಳಿತಕ್ಕೆ ತಕ್ಕಂತೆ ನೆಗೆದಾಡುತ್ತಿದ್ದ ಮಾರುದ್ದದ ನಾಲಿಗೆ “ರ್ರೀ!” ಎಂದು ಕೂಗುವ ಹೊತ್ತಿಗೆ ಬಿಲ ಸೇರುವ ಹಾವಿನಮರಿಯಂತೆ ಸುರ್ರೆಂದು ಬಾಯಿಯೊಳಗೆ ನಾಲಿಗೆ ಸೇರಿಕೊಳ್ಳುವುದನ್ನು ನೋಡಿ ಭಯಭೀತಳಾಗುತ್ತಿದ್ದಳು. ತಡವರಿಸಿಕೊಂಡು ಎದ್ದು, ಏನು ಆಗಿರದಂತೆ ಮಲಗಿದ್ದ ಗಂಡನನ್ನು ನೋಡಿ ತಾನೇ ಕಲ್ಪಿಸಿಕೊಂಡಿರಬೇಕೆಂದು ಮತ್ತೆ ಹಾಸಿಗೆಗೆ ಮರಳಿದ್ದಳು. 

ನಂತರದ ದಿನಗಳಲ್ಲಿ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಹೊಟೇಲ್ಲು, ಪಾರ್ಕ್ – ಎಲ್ಲೆಲ್ಲೂ ಜನರು ಉದ್ದುದ್ದ ನಾಲಿಗೆಯ ಜನರನ್ನು ಕಂಡಿರುವುದಾಗಿಯೂ, ಅದರಿಂದ ಗಾಬರಿಗೊಂಡು ಕೆಲವರು ಮಾತಾಡಿದರೆ, ಮತ್ತೂ ಕೆಲವರು ಬಹುಶಃ ಮಹಾನ್ ದೇಶ್ ಕೇಸರಿ ಲೇಹ್ಯದ ಪರಿಚಯವಿದ್ದವರು “ ಅಯ್ಯೋ ಅದು ಆಗಬೇಕದ್ದೇ! ಯಾಕೆಂದರೆ ನಮ್ಮ ಜನಕ್ಕೆ ದೇಶ ಅಂದ್ರೆ ಎಷ್ಟು ಅಸಡ್ಡೆ ಅಂದ್ರೆ ಅವರಿಗೆ ಚಿಕ್ಕದಾಗಿ ಹೇಳಿದರೆ ತಲೆಗೆ ಹೋಗುವುದಿಲ್ಲ. ಉದ್ದುದ್ದ ಹೇಳಬೇಕು “ ಎಂದು ಸಮರ್ಥಿಸುತ್ತಿದ್ದರು.  

ಬ್ರೇಕಿಂಗ್ ನ್ಯೂಸಿಗಾಗಿ ಸದಾ ಬಕಪಕ್ಷಿಯಂತೆ ಬಾಯ್ತೆರೆದು ಕೂತಿರುವ ಸುದ್ದಿ ಚಾನೆಲ್ಲುಗಳಿಗಂತೂ ಉದ್ದುದ್ದ ನಾಲಿಗೆ ಸುದ್ಧಿ ಹಬ್ಬವಾಗಿ ಒದಗಿಬಂತು. ಸಮಾಜಸೇವಕರನ್ನು, ರಾಜಕಾರಣಿಗಳನ್ನು, ಜನಸಾಮಾನ್ಯರನ್ನು, ಆಳುವ ಪಕ್ಷದ ಕಾರ್ಯಕರ್ತರನ್ನು ಸ್ಟುಡಿಯೊದಲ್ಲಿ ಕೂಡಿಸಿಕೊಂಡು ಹಗಲು ರಾತ್ರಿ ಬಿಸಿಬಿಸಿ ಚರ್ಚೆ ನಡೆಸಿತು.

 “ದಿನನಿತ್ಯ ಗೃಹಪಯೋಗಿ ವಸ್ತು, ಇಂಧನ ಬೆಲೆಗಳು ದಿನೇದಿನೇ ಹೆಚ್ಚಾಗಿ ಬಡಜನರ ಬದುಕು ಹೈರಾಣರಾಗುತ್ತಿದೆ. ಸಮಾಜದ ಅಂಚಿನಲ್ಲಿರುವವರು, ಅಲ್ಪಸಂಖ್ಯಾತರು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಿರಂತರ ಸಾಗಿದೆ. ಸರ್ಕಾರಕ್ಕೆ ಅದರ ಬಗ್ಗೆ ಕಾಳಜಿಯಿಲ್ಲ. ಯಾವುದೋ ಕಂಪನಿಗೆ ಲೇಹ್ಯ ತಯಾರಿಸಲು ಜನರ ತೆರಿಗೆ ಹಣವನ್ನು ವ್ಯಯ ಮಾಡುತ್ತಿದೆ. ಇದು ಜನದ್ರೋಹ!“ ಎಂದು ಸಾಮಾಜಿಕ ಕಾರ್ಯಕರ್ತರು ವಾದಿಸಿದರೆ, “ಇದು ವಿತಂಡವಾದ. ದೇಶದಲ್ಲಿ ಬಡತನವೆಲ್ಲಿದೆ? ನಮ್ಮ ದೇಶ ಜಗತ್ತಿನಲ್ಲಿಯೇ ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ವಿಶ್ವಗುರುವಾಗಿ ಬೆಳೆಯುತ್ತಿದೆ. ನಿಮ್ಮಂತವರಿಂದಲೇ ಜನರು ಹಾದಿ ತಪ್ಪಿ ದೇಶದ ಬಗ್ಗೆ ನಿರಾಭಿಮಾನಿಗಳಾಗಿದ್ದಾರೆ” ಎಂದು ಆಳುವ ಪಕ್ಷದ ಬೆಂಬಲಿಗರು ವ್ಯಗ್ರರಾಗಿ ಮೇಲೆ ಬಿದ್ದರು.  

ಆಳುವ ಪಕ್ಷವನ್ನು ಓಲೈಸಲೆಂದೇ ಇರುವ ಹಲವು ಟಿವಿ ಚಾನೆಲ್ಲುಗಳು, ಮಹಾನ್ ದೇಶ್ ಕೇಸರಿ ಲೇಹ್ಯವನ್ನು ಶತಮಾನದ ಆವಿಷ್ಕಾರವೆಂದು ಪ್ರಚಾರ ಮಾಡಿ, ಯುವಕರೆಲ್ಲರೂ ದೇಶದ ಒಳಿತಿಗಾಗಿ ಅದರ ಸದುಪಯೋಗಪಡಿಸಿಕೊಂಡು ಅಸಲೀ ದೇಶಭಕ್ತರಾಗಬೇಕೆಂಬ ವಾರ್ತೆಯನ್ನು ಪುನರುಕ್ತಿ ಮಾಡಿದವು. ಅಲ್ಲದೆ, ಮತ್ತೂ ಪ್ರಚಾರವನ್ನು ವ್ಯಾಪಕಗೊಳಿಸಲು ಯಾರ್ಯಾರ ನಾಲಿಗೆ ಎಷ್ಟು ಉದ್ದವಾಗಿದೆ ಎಂದು ಸರ್ವೆ ಮಾಡಿ, ರ್ಯಾಕಿಂಗ್ ಕೊಡಲು ಆರಂಭಿಸಿತು. ಲೇಹ್ಯದ ಬಗ್ಗೆ ಅಪಹಾಸ್ಯ ಮಾಡುವ, ಅವೈಜ್ಞಾನಿಕವೆಂದು ಹೇಳುವವರನ್ನು ಸ್ಟುಡಿಯೊದಲ್ಲಿ ಒಟ್ಟಾಕಿ, ಉದ್ದುದ್ದ ನಾಲಿಗೆಯವರನ್ನು ಕರೆಸಿ ಅವರ ಮೇಲೆ ಬೈಗುಳದ ಮಳೆಯನ್ನೇ ಕರೆದು ಬಾಯಿ ಬಂದು ಮಾಡಲಾಯಿತು. 

ಹಾಗೆಯೇ, ಸಾಮಾಜಿಕ ಜಾಲತಾಣ – ಫೇಸ್ಬುಕ್, ಟಿಟ್ವರ್, ವಾಟ್ಸಪ್, ಕ್ಲಬ್ ಹೌಸ್ ಗಳಲ್ಲಿ ಉದ್ದದ್ದ ನಾಲಿಗೆಯವರು ತಮ್ಮ ವಿರೋಧಿಗಳನ್ನು ಮಣಿಸಲು ಗುಂಪು ಕಟ್ಟಿಕೊಂಡು, ಮೊದಲಿಗೆ ದೇಶಾಭಿಮಾನದ ಬಗ್ಗೆ, ದೇಶಭಕ್ತಿಯ ಅಗತ್ಯತೆ ಬಗ್ಗೆ ತಿಳಿಹೇಳಲು ಪ್ರಯತ್ನಿಸಿ, ಬರೀ ಪ್ರಚಲಿತ ಸಮಸ್ಯೆಗಳ ಬಗ್ಗೆಯೇ ಮಾತಾಡುವವರನ್ನು ಮನವೊಲಿಸಲು ಸೋತಾಗ, ಕೊನೆಯ ಅಸ್ತ್ರವೆಂಬಂತೆ ಉದ್ದುದ್ದ ನಾಲಿಗೆಯನ್ನು ಬಳಸಿ ಅವರನ್ನು ವೈಯಕ್ತಿಕವಾಗಿ ನಿಂದಿಸಿ, ಅಲ್ಲಿಗೂ ಮಣಿಯದಿದ್ದಲ್ಲಿ ಅವರ ಕುಟುಂಬದ ಅಮ್ಮ, ಅಕ್ಕ, ತಂಗಿಯರನ್ನು ನಾಲಿಗೆಯಿಂದ ಬೀದಿಗೆ ಎಳೆತಂದು ವಾಚಾಮಗೋಚರವಾಗಿ ಬೈದು ತೇಜೋವಧೆ ಮಾಡುವುದು ನಿರಂತರವಾಗಿ ಸಾಗಿತು.

ಹೊತ್ತುಹೊತ್ತಿಗೆ ಲೇಹ್ಯ ಸೇವಿಸುತ್ತಿದ್ದರೂ ಕೆಲವರಿಗೆ ನಾಲಿಗೆ ಉದ್ದವಾಗದಿದ್ದದ್ದು, ಹಲವರಿಗೆ ಉದ್ದವಾಗಿದ್ದರೂ ಎಲ್ಲರದೂ ಒಂದೇ ಅಳತೆ ಇಲ್ಲದದ್ದು – ಸತ್ಯಶೋಧಿಸುವ ಕೆಲ ಮಾಧ್ಯಮದವರಿಗೆ ಬಾಬಾ ನಾಮದೇವರ ಸಂಶೋಧನೆ ಬಗ್ಗೆ ಸಂದೇಹ ಹುಟ್ಟಿ, ದೇಶದ ಕೆಲ ವಿಜ್ಞಾನಿಗಳನ್ನು, ವೈದ್ಯರನ್ನು ಆ ಬಗ್ಗೆ ಕಾರಣ ಕೇಳಿದರೆ ಉತ್ತರಿಸಲು ಯಾರೂ ಆಸಕ್ತಿ ತೋರಲಿಲ್ಲ. 

ಆದರೆ, ದೇಶದಲ್ಲಿಯೇ ಖ್ಯಾತಿ ಪಡೆದ ಜನಾನುರಾಗಿ, ಇಎನ್ಟಿ ತಜ್ಞ ವೈದ್ಯ ಡಾ. ದೀಪಕ್ ಹಳದೀಪುರ್ ಅವರು “ದೇಶಭಕ್ತಿ ಎಂಬುದು ಒಬ್ಬ ವ್ಯಕ್ತಿ ಮತ್ತು ಆತನು ಹುಟ್ಟಿ, ಬೆಳೆದ ನೆಲದ ಬಗ್ಗೆ ಇರುವ ಭಾವನಾತ್ಮಕ ಸಂಬಂಧ. ಅದು ಆತ್ಮಕ್ಕೆ ಸಂಬಂಧಿಸಿದ್ದು. ಕೇವಲ ಲೇಹ್ಯ ಸೇವನೆಯಿಂದ ದೇಶಭಕ್ತಿ ಹುಟ್ಟುತ್ತೆ, ಬೆಳೆಯುತ್ತೆ ಎಂಬುದು ಮೂರ್ಖತನದ ಮಾತಾಗಿರುವುವಾಗ ನಾಲಿಗೆ ಎಷ್ಟು ಉದ್ದ ಏಕೆ ಬೆಳೆಯಿತು ಎಂಬ ಪ್ರಶ್ನೆಗೆ ಅರ್ಥವಿಲ್ಲ. ಹಾಗೊಮ್ಮೆ ಅದು ನಿಜವೇ ಆಗಿದ್ದಲ್ಲಿ, ತಮ್ಮ ಸಂಶೋಧನೆಯಲ್ಲಿ ಆಗಿರುವ ಎಡವಟ್ಟಿನಿಂದ ನಾಲಿಗೆಯ ಉದ್ದದಲ್ಲಿ ಏರುಪೇರಾಗಿರಬಹುದು!“ ಎಂದು ವ್ಯಂಗ್ಯಮಿಶ್ರಿತ ಮಾತಿನಲ್ಲಿ ಪ್ರತಿಕ್ರಯಿಸಿದ್ದು, ಭಾರೀ ಸುದ್ಧಿಯಾಗಿ ತಟ್ಟನೆ ಬಾಬಾ ನಾಮದೇವ ಸ್ವಾಮೀಜಿಗಳು ಅದಕ್ಕೆ ಕೋಪೋದ್ರಿಕ್ತರಾಗಿ ಪ್ರತಿಕ್ರಯಿಸಿದರು.

“ಡಾ. ದೀಪಕ್ ಹಳದೀಪುರ್ ಒಬ್ಬ ಅವಿವೇಕಿ. ಅವರಿಗೆ ನಮ್ಮ ಪುರಾತನ ವೈದ್ಯಪದ್ಧತಿಯಲ್ಲಾಗಲಿ, ನಮ್ಮ ಸನಾತನ ಸಂಸ್ಕೃತಿಯಲ್ಲಾಗಲಿ ನಂಬಿಕೆಯಿಲ್ಲ. ಅವನೊಬ್ಬ ಪಾಷಾಂಡಿ. ನಮ್ಮ ಸಂಶೋಧನೆ ನಿಖರವಾದುದು. ನಾವು ಕಂಡುಹಿಡಿದ ದಿವೌಷಧ ನೂರಕ್ಕೆ ನೂರು ಪರಿಣಾಮಕಾರಿಯಾದುದು. ಎಲ್ಲರೂ ಲೇಹ್ಯ ಸೇವಿಸಬಹುದು. ಆದರೆ, ಯಾರಲ್ಲಿ ನಿಜ ದೇಶಭಕ್ತಿ ಇರವುದಿಲ್ಲವೋ ಅವರ ನಾಲಿಗೆ ಬೆಳೆಯದು. ಹಾಗೆ, ಯಾರ ನಾಲಿಗೆ ಹೆಚ್ಚು ಬೆಳೆಯುತ್ತದೋ ಅವರು ಹೆಚ್ಚು ದೇಶಭಕ್ತರೆಂದು ಅರ್ಥ. ಅಷ್ಟರಮಟ್ಟಿಗೆ ಮಹಾನ್ ದೇಶ್ ಲೇಹ್ಯ ಕೆಲಸ ಮಾಡಿದೆ” 

ಬಡ ಅಣ್ಣನ ಕಿವುಡ ಮಗನಿಗೆ ಸಾವಿರಾರು ರೂಪಾಯಿ ಬೆಲೆಯ ಶ್ರವಣಸಾಧನ ಕೊಳ್ಳಲು ಆಗದಿದ್ದಾಗ, ಡಾ.ದೀಪಕ್ ಹಳದೀಪುರ್ ಶ್ರವಣಯಂತ್ರವನ್ನು ಉಚಿತವಾಗಿ ಕೊಟ್ಟು ಮಾತಾಡುವ ತರಬೇತಿಯನ್ನೂ ಕೊಟ್ಟದ್ದು ಭಾರತಿಯ ನೆನಪಿಗೆ ಬಂತು. ಅಲ್ಲದೆ – ನಗರದಲ್ಲಿ, ಹಳ್ಳಿಹಳ್ಳಿಗಳಲ್ಲಿ ಕಿವುಡರಾಗಿ ಹುಟ್ಟಿ, ಅದರಿಂದ ಮೂಗರಾದ ನೂರಾರು ಶ್ರವಣದೋಷ ಮಕ್ಕಳಿಗೆ ಉಚಿತ ಚಿಕಿತ್ಸೆ, ಶ್ರವಣಸಾಧನವನ್ನು ಉಚಿತವಾಗಿ ನೀಡುತ್ತಿರುವ ಜನೋಪಕಾರಿ ಡಾ. ದೀಪಕ್ ಹಳದೀಪುರ್ ಬಗ್ಗೆ ಸ್ವಾಮೀಜಿ ಕೇವಲವಾಗಿ ಮಾತನಾಡಿದ್ದು ಹಲವರಿಗೆ ಬೇಸರ ತಂದಂತೆ ಭಾರತಿಗೆ ಸಿಟ್ಟು ತಂದಿತು.

ಗಂಡನ ಸಂಪಾದನೆ, ಸಂಸಾರ ನಿರ್ವಹಣೆ ಬಗ್ಗೆ ಅಷ್ಟೆ ತಲೆಕೆಡಿಸಿಕೊಂಡಿದ್ದ ಭಾರತಿಗೆ, ಸತ್ಯೇಂದ್ರ ಚಕ್ರವರ್ತಿಯ ಕಂಪನಿ, ಅವನ ದುಡಿಮೆಯ ವೈಖರಿ ಬಗ್ಗೆ ಅಸಹ್ಯ ಹುಟ್ಟತೊಡಗಿತು. ಮಗಳು ಹೆದರಿ ಶಾಲೆಗೆ ಹೋಗುವುದಿಲ್ಲವೆಂದು ಹಠಮಾಡಿದಾಗ, ಒಂದೆರೆಡು ದಿನಗಳಿಗೆ ಅವಳು ಸುಧಾರಿಸಬಹುದು ಎಂದುಕೊಂಡಿದ್ದರೆ, ಪುಟ್ಟಿ ಬೇರೆ ಶಾಲೆಗೆ ಹೋಗುತ್ತೇನೆ ಆದರೆ ಉದ್ದನಾಲಿಗೆ ಮೇಷ್ಟ್ರು ಇರುವ ಶಾಲೆಗೆ ಹೋಗಲಾರೆ ಎಂದು ರಚ್ಚು ಹಿಡಿದದ್ದು ಅವಳನ್ನು ಅಸಹಾಯಕ ಸ್ಥಿತಿಗೆ ದೂಡಿತ್ತು. 

ಇಷ್ಟರಲ್ಲಿ ಅವಳಿಗೆ ಮತ್ತಷ್ಟು ಮುಜುಗರವಾಗುವ ಸಂದರ್ಭ ಬಂದಿತು. ಉದ್ದನಾಲಿಗೆ ಹೊಂದಿರುವವರಲ್ಲಿ ಈಗ ಸತ್ಯೇಂದ್ರ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದು, ಆ ಸಮಾಚಾರವನ್ನು ಭಾರತಿಗೆ ನೆರೆಹೊರೆಯವರು ಮೆಚ್ಚುಗೆಯಿಂದಲೇ ಅಭಿನಂದನೆಯನ್ನು ಹೇಳಿದರೂ, ಭಾರತಿಗೆ ಮೈಯೆಲ್ಲ ಮುಳ್ಳುಗಳು ಎದ್ದ ಅನುಭವವಾಯಿತು. 

“ಲೇಹ್ಯ ಮಾರಾಟ ಮಾಡಿದ್ದು, ಸಾಕು! ಇನ್ಮೇಲೆ ಅದು ಬಿಟ್ಟು ಬೇರೆ ಕೆಲ್ಸ ಹುಡುಕಿ. ಎಲ್ಲಾ ಕಡೆ ಮುಗ್ಧಜನಗಳನ್ನೇ ಬೈದಾಡಿಕೊಳ್ಳೊದನ್ನು ನೋಡಿದರೆ ಆ ಕೆಲ್ಸ ಬಿಡೋದೆ ವಾಸಿ ಅನ್ಸುತ್ತೆ“ ಅಂದರೆ, ಏಕಾಏಕಿ ಸತ್ಯೇಂದ್ರ ಚಕ್ರವರ್ತಿ ಹೆಂಡತಿಯ ಮೇಲೆ ಎರಗಿದ. “ಮೊದ್ಲು ಕಂಪನಿ ಬದಲಾಯಿಸಿದ್ರೆ ವಟವಟ ಅಂತಿದ್ದಿ. ಈಗ ಕೈತುಂಬ ಸಂಬಳ, ಕಮೀಷನ್ ಸಿಕ್ತಿರೋ ಕೆಲ್ಸನಾ ಬೇಡ ಅಂತೀದ್ದಿಯ! ನಿನ್ನ ಮಾತಿಗೆ ನಾನ್ ಕುಣೀಬೇಕಾ? ಜನರೆಲ್ಲ ನಮ್ ಸಂಸ್ಕೃತಿ ಮರ್ತು ಪರದೇಶಿಗಳಾಗಿದ್ದಾರೆ. ಅದಕ್ಕಾಗಿ ಲೇಹ್ಯ ಮಾರೋದು ಕೂಡ ದೇಶಸೇವೆ ಅಲ್ವಾ?“ 

ಯಾವತ್ತು ಸೌಮ್ಯವಾಗಿ ನಡೆದುಕೊಳ್ಳುವವನು, ಬಿರುಗಣ್ಣ ಬಿಡುತ್ತ ಮೈಮೇಲೆ ದೆವ್ವ ಮೆಟ್ಟಿದವನ ಹಾಗೆ ಮೇಲೆ ಬಿದ್ದ ರೀತಿಗೆ ಭಾರತಿಯ ಬಾಯಿಯ ಪಸೆ ಒಣಗಿ ಬೆದರಿದಳು. 

ಆಳುವ ಸರ್ಕಾರದ ಅಧಿಕಾರಾವಧಿ ಮುಗಿಯುತ್ತ ಬಂದು, ಚುನಾವಣೆ ಹೊಸ್ತಿಲಲ್ಲಿ ನಿಂತಿತ್ತು. ಎಲ್ಲೆಡೆಯೂ ಬೆಲೆಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ತಳಸಮುದಾಯದ ಜನರ, ಅಲ್ಪಸಂಖ್ಯಾತರ, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಜನರಲ್ಲಿ ಅಸಮಾಧಾನದ ಅಲೆಯಿದ್ದು ಚಳುವಳಿಗಳಾಗುತ್ತಿರುವಾಗ, ಅವುಗಳಿಗೆ ಪ್ರತಿಕ್ರಯಿಸಿ ಆಳುವ ಪಕ್ಷ ಮತ್ತೆ ಅಧಿಕಾರ ಹಿಡಿಯುವುದು ಕಷ್ಟಸಾಧ್ಯವಾಗಿತ್ತು. ಹೇಗೊ ಜನರನ್ನು ಮನಸ್ಸನ್ನು ಸಮಸ್ಯೆಗಳಿಂದ ಬೇರೆಡೆ ಭಾವನಾತ್ಮಕ ವಿಷಯಗಳ ಕಡೆ ಸೆಳೆದು ಚುನಾವಣೆ ಗೆಲ್ಲಬೇಕಿತ್ತು. ಆಳುವ ಪಕ್ಷದ ಥಿಂಕ್ ಟ್ಯಾಕರ್ಸ್ ಆ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಒಂದು ಮಾಸ್ಟರ್ ಪ್ಲಾನ್ ತಯಾರಿಸಿದರು. 

ಆರ್ಯ ಸ್ವದೇಶಿ ಉತ್ಪನ್ನ ಪ್ರಚಾರ ಮತ್ತು ಮಾರಾಟ ಸಂಸ್ಥೆಯ ಮಹಾನ್ ದೇಶ್ ಲೇಹ್ಯ ಭರ್ಜರಿಯಾಗಿ ಮಾರಾಟವಾಗುತ್ತಿತ್ತು. ಅದಕ್ಕಾಗಿ ಶ್ರಮವಹಿಸುತ್ತಿದ್ದ ಕಂಪನಿಯ ಸದಸ್ಯರನ್ನು ಸೇರಿಸಿ ಒಂದು ಹೊಸ ಐಟಿ ಸೆಲ್ಲನ್ನು  ಶುರುಮಾಡಲಾಯಿತು. ಉದ್ದುದ್ದ ನಾಲಿಗೆಯ ಆ ಸದಸ್ಯರ ಮುಖ್ಯ ಕಾರ್ಯಸೂಚಿ, ಎಲ್ಲಾ ಮಾಧ್ಯಮಗಳಲ್ಲೂ ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಆಳುವ ಪಕ್ಷದ ಪರ ಪ್ರಚಾರ ನಡೆಸುವುದು ಮತ್ತು ಸರ್ಕಾರ ವಿರೋಧಿ ಚರ್ಚೆಗಳನ್ನು ತಮ್ಮ ನಾಲಿಗೆಯಿಂದ ಮಟ್ಟಹಾಕುವುದು.  

ಈಗಾಗಲೇ ಉದ್ದನಾಲಿಗೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಸತ್ಯೇಂದ್ರ ಚಕ್ರವರ್ತಿಯನ್ನು ಅದರ ಸಿಇಒ ಮಾಡಲಾಯಿತು. ಸಿಕ್ಕ ಬಡ್ತಿಯಿಂದ ಸತ್ಯೇಂದ್ರ ಚಕ್ರವರ್ತಿಗೆ ಸ್ವರ್ಗ ಒಂದೇ ಗೇಣಷ್ಟೆ ದೂರದಲ್ಲಿತ್ತು. ಕೊಟ್ಟ ಜವಾಬ್ದಾರಿಯನ್ನು ನಿರೀಕ್ಷೆಗಿಂತ ಹೆಚ್ಚು ಮಾಡಿ ತೋರಿಸುವ ಭರವಸೆ, ಹುಮ್ಮಸ್ಸನ್ನು ಅವನು ಪಕ್ಷದ ಅಧ್ಯಕ್ಷರಿಗೆ ತೋರಿದ.  

ಸತ್ಯೇಂದ್ರ ಚಕ್ರವರ್ತಿಯ ಉದ್ದುದ್ದ ನಾಲಿಗೆಯ ಬಗ್ಗೆ ದೇಶಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೂ, ಕೆಲವರು ಬೆನ್ನ ಹಿಂದೆ ಅವನು ಬಳಸುವ ಅನಾಗರೀಕ ಭಾಷೆಯ ಬಗ್ಗೆ ತುಚ್ಚವಾಗಿ ಮಾತಾಡುವುದನ್ನು ಕೇಳಿದ್ದ ಭಾರತಿಗೆ ಹೊಸ ಕೆಲಸ ಖುಷಿಯನ್ನೇನು ತರಲಿಲ್ಲ. “ಮೈ ಬಗ್ಗಿಸಿ ಕೆಲಸ ಮಾಡೋದು ಬಿಟ್ಟು, ನಾಲಿಗೆಯಿಂದ ಹಣ ಮಾಡೋ ಕೆಲಸ ನಮಗ್ಯಾಕೆ?” ಎಂದು ತಗಾದೆ ತೆಗೆದಳು. ಅವಳ ಮಾತಿಗೆ ಸತ್ಯೇಂದ್ರ ಕಿಲುಬುಕಾಸಿನ ಬೆಲೆ ಕೊಡಲಿಲ್ಲ. ಅಷ್ಟಕ್ಕೂ ಸತ್ಯೇಂದ್ರ ಅವಳ ಮಾತಿಗೆ ಕಿವಿಯಾಗವುದ ಬಿಟ್ಟು ಬಹಳ ದಿನಗಳಾಗಿದ್ದವು. 

ಉದ್ದುದ್ದ ನಾಲಿಗೆಗಳು ಎಲ್ಲೆಡೆ ಹರಿದಾಡ ತೊಡಗಿತು. ಸತ್ಯವನ್ನು ಅರಹುವುದು ಅರಿಯುವುದು ಸಾರ್ವಜನಿಕ ಸ್ಥಳಗಳಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ ಎಲ್ಲಿಯೂ ಅವಕಾಶವಿಲ್ಲದಾಯಿತು. ಜನರ ಸಂಕಟಗಳ ನೋವನ್ನು, ಭ್ರಷ್ಟವ್ಯವಸ್ಥೆಯನ್ನು ಖಂಡಿಸಲಾಗದೆ ಸತ್ಯಪ್ರತಿಪಾದಕರು ನಲುಗಿದರು. ಕಕ್ಕಿಕೊಳ್ಳಬೇಕಾದ ಮಾತುಗಳು ಹೊರಬರದೆ ಹೊಟ್ಟೆಯಲ್ಲೇ ಉಳಿದು ಒದ್ದಾಡತೊಡಗಿತು. ಅದರಿಂದ ಕೆಲವರಿಗೆ ಕರುಳು ಕಿತ್ತು ಬರುವ ಅನುಭವವಾದರೆ, ಹಲವರಿಗೆ ಹೃದಯಬಡಿತ ವಿಪರೀತವಾಗಿ ಎದೆನೋವು ಕಾಣಿಸತೊಡಗಿತು. 

ಡಾ. ದೀಪಕ್ ಹಳದೀಪುರ್ ಅವರನ್ನು ಪ್ರತಿಷ್ಟಿತ ಟಿವಿ ಚಾನಲ್ಲೊಂದು ಅವರ ಪ್ರಮುಖ ಕಾರ್ಯಕ್ಷೇತ್ರವಾದ ಮಕ್ಕಳ ಶ್ರವಣ ದೋಷದ ಬಗ್ಗೆ ಅರಿವು ಮೂಡಿಸುವುದು ಮತ್ತು ಚಿಕಿತ್ಸಾ ಅನುಭವ, ಕಾರ್ಯವೈಖರಿಯನ್ನು ಹಂಚಿಕೊಳ್ಳಲು, ತನ್ನ ಪ್ರಸಿದ್ಧ ಸತ್ಯಮೇವ ಜಯತೆ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಆಳುವ ಸರ್ಕಾರದ ಜನವಿರೋಧಿ ನೀತಿಗಳನ್ನು, ಪ್ರಾಪಗಂಡಗಳನ್ನು ಡಾಕ್ಟರರು ಖಡಕ್ಕಾಗಿ ಖಂಡಿಸುವುದು ಚಾನೆಲ್ಲಿಗೆ ತಿಳಿದ ವಿಷಯವೇ ಆದ್ದರಿಂದ ಅವರ ಉದ್ದೇಶವೇನಿತ್ತೊ ಆಳುವ ಸರ್ಕಾರದ ಕಡೆಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಡಾಕ್ಟರಿಗೆ ಮೇಕಪ್ ಮಾಡಿಸಿ ಸ್ಟುಡಿಯೋಗೆ ಕರೆತಂದಾಗ, ಅಲ್ಲಿ ಸತ್ಯೇಂದ್ರ ಚಕ್ರವರ್ತಿ ಮತ್ತು ಅವನ ಸಹಚರರನ್ನು ನೋಡಿ ಡಾಕ್ಟರರು, ಈ ಮೊದಲು ಅವರ ಭಾಗವಹಿಸುವಿಕೆ ಬಗ್ಗೆ ತಮಗೆ ತಿಳಿಸದಿದ್ದಕ್ಕೆ ಬೇಸರಗೊಂಡು, ಸಂದರ್ಶನದಲ್ಲಿ ಭಾಗವಹಿಸಲು ನಿರಾಕರಿಸಿದರು. ಗಾಬರಿಗೊಂಡ ಕಾರ್ಯಕ್ರಮದ ನಿರ್ಮಾಪಕ “ ವಿಷಯ ಮುಚ್ಚಿಟ್ಟು ಕಾರ್ಯಕ್ರಮ ಮಾಡುವ ಉದ್ದೇಶ ತಮಗಿರಲಿಲ್ಲ. ಸುದ್ಧಿ ಮುಟ್ಟಿಸುವಲ್ಲಿ ಎಲ್ಲೋ ತಮ್ಮಿಂದ ತಪ್ಪಾಗಿದೆ. ಸಂದರ್ಶನವು ನಿಮ್ಮ ಕಾರ್ಯವ್ಯಾಪ್ತಿಗೆ ಸೀಮಿತವಾಗಿರುತ್ತದೆ. ಆಗಲೇ ಘೋಷಿತವಾಗಿರುವುದರಿಂದ ಕಾರ್ಯಕ್ರಮವನ್ನು ನಿಲ್ಲಿಸಲಾಗುವುದಿಲ್ಲ. ದಯವಿಟ್ಟು ಸಹಕರಿಸಿ” ಎಂದು ಕೈಮುಗಿದು ಬೇಡಿದ.

ಹೊಸದಾಗಿ ಹೊಲೆಸಿದ್ದ ಸೂಟು ಹಾಕಿಕೊಂಡು, “ಯಾವಾಗ್ಲೂ ನನ್ ಬಗ್ಗೆ ಬರೇ ಕುಂಟೇಕೊಸರು ತಗೀತಿಯಾ! ನಾನೆಷ್ಟು ಫೇಮಸ್ ಆಗಿದ್ದೀನಿ ಅಂತ ನಿಂಗೆ ಗೊತ್ತಿಲ್ಲ. ಟಿವಿಲೀ ಇವತ್ತು ಬರ್ತೀನಿ ನೋಡು“ ಎಂದು ಕುಣಿಯುತ್ತ ಮನೆ ಮುಂದೆ ಬಂದು ನಿಂತ ಕಾರಲ್ಲಿ ಸತ್ಯೇಂದ್ರ ಚಕ್ರವರ್ತಿ ಹೋಗಿದ್ದ. 

ಟಿವಿಲೀ ಬರೋ ಗಂಡನನ್ನು ನೋಡೊ ಉತ್ಸಾಹವಿರದಿದ್ದರೂ ಪುಟ್ಟಿಯ ಒತ್ತಾಯಕ್ಕೆ ಭಾರತಿ ಟಿವಿ ಮುಂದೆ ಕೂತಿದ್ದಳು. 

ಟಿವಿಯಲ್ಲಿ ಕಾರ್ಯಕ್ರಮವು ಸಾಂಗವಾಗಿ ನಡೆದಿತ್ತು. ಡಾ. ದೀಪಕ್ ಹಳದೀಪುರ್ ತಮ್ಮ ವೃತ್ತಿ ಬದುಕಿನಲ್ಲಾದ ಮಕ್ಕಳ ಶ್ರವಣದೋಷದ ಬಗೆಗಿನ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಮಧ್ಯೆ ಬಾಯಿ ಹಾಕಿದ ಸತ್ಯೇಂದ್ರ ಚಕ್ರವರ್ತಿ “ ಆಳುವ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಅಂದದ್ದಕ್ಕೆ “ಇದು ರಾಜಕೀಯ ವೇದಿಕೆಯಲ್ಲ. ಇಎನ್ಟಿ ಬಗ್ಗೆ ನಿಮ್ಮ ಪ್ರಶ್ನೆಗಳಿದ್ದರೆ ಕೇಳಿ“ ಎಂದರು.  

“ಏನ್ ಸಾರ್. ಹೀಗಂತೀರಾ? ನಮ್ಮ ಸರ್ಕಾರ ಎಷ್ಟೊಂದು ಕೆಲ್ಸ ಮಾಡಿದೆ. ದೇಶದ ಐದುನದಿಗಳನ್ನು ಜೋಡಿಸಿ ಕೃಷಿಗೆ, ಕುಡಿಯುವ ನೀರಿಗೆ ಬರ ಬರದಂತೆ ಮಾಡಿದ್ದಾರೆ. ಎಲ್ಲಾ ಹಳ್ಳಿಗಳಿಗೆ ಪುಕ್ಕಟೆ ನೀರು, ಕರೆಂಟ್, ಗ್ಯಾಸನ್ನು ಕೊಟ್ಟಿದ್ದಾರೆ. ರೈತರ ಇನ್ ಕಮ್ ಡಬ್ಬಲ್ ಆಗಿ ಅವರು ಕೃಷಿಯನ್ನೇ ಮರೆತಿದ್ದಾರೆ. ನಮ್ಮ ಪ್ರಧಾನಿಗಳ ದೂರದೃಷ್ಟಿಯಿಂದ ಅರಬ್ ದೇಶಗಳಿಗೆ ನೀರನ್ನು ಕೊಟ್ಟು ಅದರ ಬದಲಿಗೆ ಪೆಟ್ರೋಲನ್ನು ಫ್ರೀ ತರಿಸಿಕೊಳ್ಳುತ್ತಿದ್ದೇವೆ. ಹಲವೆಡೆ ಚಿನ್ನದ ರಸ್ತೆಗಳನ್ನು ಮಾಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಜನರಲ್ಲಿ ದೇಶಭಕ್ತಿ ಹೆಚ್ಚಾಗುವಂತೆ ಮಾಡಿದ್ದೇವೆ…”

ಹೀಗೆ ಓತಪ್ರೋತವಾಗಿ ಸತ್ಯೇಂದ್ರ ಚಕ್ರವರ್ತಿ ಹೇಳುತ್ತಿದ್ದಾಗ, ಡಾಕ್ಟರರು ಸಹನೆಗೆಟ್ಟರು. 

“ಸಾಕು ನಿಲ್ಸಿ….ನಿಮ್ಮ ಅಸಂಬದ್ಧ ಮಾತುಗಳನ್ನ…..ಎಷ್ಟೂಂತ ಸುಳ್ಳನ್ನು ಹೇಳ್ತೀರಾ? ನಿಮ್ಮ ಮಾತನ್ನ ಲೇಹ್ಯ ತಿನ್ನುವವರು ನಂಬಬೇಕಷ್ಟೆ…”

ಲೇಹ್ಯದ ಮಾತು ಬರುತ್ತಿದ್ದಂತೆ ಸತ್ಯೇಂದ್ರ ಚಕ್ರವರ್ತಿ ಮತ್ತು ಅವನ ಸಹಚರರು ಮೇಜು ಕುಟ್ಟುತ್ತ ರೋಷದಿಂದ ಎದ್ದು  ನಿಂತು ಕೂಗಾಡ ತೊಡಗಿದರು.   

“ವಯಸ್ಸಾಗಿದೆ ಅಂತ ಮಾರ್ಯಾದೆ ಕೊಟ್ರೆ ನಮ್ ಬಾಬಾ ಸ್ವಾಮೀಜಿಯವರ ಬಗ್ಗೆ ಹಗುರವಾಗಿ ಮಾತಾಡ್ತೀರಾ! ನಿಮಗೆ ದೇಶದ ಬಗ್ಗೆ ಒಂದಿಷ್ಟಾದರೂ ಅಭಿಮಾನವಿದೆಯೇ? ನೀವು ದೇಶದ್ರೋಹಿಗಳು……” 

ಉದ್ದುದ್ದ ನಾಲಿಗೆಗಳು ಆಚೆಗೆ ಒಟ್ಟಿಗೆ ಬಂದು ಡಾಕ್ಟರರ ಬಾಯಿಯನ್ನು ಕಟ್ಟಿಹಾಕಿದವು. ನಿರೂಪಕನು ಸ್ಟುಡಿಯೊದಲ್ಲಿ ಅಚಾನಾಕ್ಕಾಗಿ ಆದ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಬೈಗುಳದ ದಾಳಿಯನ್ನು ನಿಲ್ಲಿಸಲಾಗಲಿಲ್ಲ. ಇದ್ದಕ್ಕಿದಂತೆ ವಿಪರೀತ ಬೆವರುತ್ತಿದ್ದ ಡಾಕ್ಟರ್ ಎದೆ ಹಿಡಿದುಕೊಂಡು ಏಕಾಏಕಿ ನೆಲಕ್ಕೆ ಕುಸಿದರು. ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮ ನಿಂತು ಪರದೆಗೆ ಕತ್ತಲಾವರಿಸಿತು. 

ಕಣ್ಣರಳಿಸಿಕೊಂಡು ಟಿವಿಯಲ್ಲಿದ್ದ ಅಪ್ಪನನ್ನು ಆನಂದದಲ್ಲಿ ನೋಡುತ್ತಿದ್ದ ಪುಟ್ಟಿ, ಇದ್ದಕ್ಕಿದಂತೆ ಶಾಲೆಯ ಮೇಷ್ಟ್ರಂತೆ ಅಪ್ಪನ ಉದ್ದುದ್ದ ನಾಲಿಗೆಯನ್ನು ಕಂಡು ಭಯಭೀತಳಾಗಿ ಕಣ್ಮುಚ್ಚಿ ಅಮ್ಮನ ಸೆರಗು ಸೇರಿದ್ದಳು. ಡಾಕ್ಟರರು ಎದೆ ಹಿಡಿದುಕೊಂಡು ಕುಸಿದದ್ದಕ್ಕೊ ಅಥವಾ ದುಡಿಮೆಗೆಂದು ಹೋದ ತನ್ನ ಗಂಡ ಕಂಡುಕೊಂಡ ಭಂಡತನಕ್ಕೊ ಭಾರತಿಯ ಗಂಟಲುಬ್ಬಿ ಬಂದು ಕಣ್ಣೀರಾಡಿತು. ಬೀದಿಬೀದಿಯಲ್ಲಿ ಎಗ್ಗಿಲ್ಲದೆ ರಂಪಾಟ ಮಾಡಿಕೊಳ್ಳುವ ಗಂಡ ಸರಿ ಹೋಗುವ ಯಾವ ಸೂಚನೆಯೂ ಕಾಣದೆ ವ್ಯಾಕುಲಗೊಂಡಳು.

ಯುದ್ಧದಲ್ಲಿ ಗೆದ್ದವನಂತೆ ಭಾರೀ ಖುಷಿಯಲ್ಲಿ, ಹೊರಗಡೆಯೇ ಉಂಡು ಬಂದಿದ್ದ ಸತ್ಯೇಂದ್ರ ಚಕ್ರವರ್ತಿ ಪಕ್ಕದ ರೂಮಿನಲ್ಲಿ ಮಲಗಿ ಆಗಲೇ ಗೊರಕೆ ಹೊಡೆಯುತ್ತಿದ್ದ. ಭಾರತಿಗೆ ಹಾಸಿಗೆಯಲ್ಲಿ ಎಷ್ಟು ಹೊರಳಾಡಿದರೂ ಕಣ್ರೆಪ್ಪೆಗಳು ಕೂಡಲಿಲ್ಲ. ಪದೇ ಪದೇ ಟಿವಿಲೀ ಕಂಡ ದೃಶ್ಯಗಳೇ ಕಣ್ಮುಂದೆ ಹಾದು ಹೋಗುತ್ತಿದ್ದವು. ಗಾಬರಿಯಿಂದ ಹೊರಬರದೆ ಅಮ್ಮನ ಬಲವಂತಕ್ಕೆ ಒಂದಷ್ಟು ತಿಂದ ಪುಟ್ಟಿ ಪಕ್ಕದಲ್ಲೇ ನಿದ್ದೆಗೆ ಜಾರಿದ್ದಳು. ಬಹಳ ಹೊತ್ತು ಹಾಗೆ ಮಲಗಿದ್ದ ಭಾರತಿ ಏನೋ ನಿರ್ಧಾರ ಮಾಡಿದಂತೆ ಎದ್ದು ಕೂತಳು.

ಸೀದಾ ಅಡುಗೆಮನೆಗೆ ಹೋಗಿ ತರಕಾರಿ ಹೆಚ್ಚುವ ಚಾಕು ಹಿಡಿದು ಸತ್ಯೇಂದ್ರ ಮಲಗಿದ್ದ ರೂಮನ್ನು ಹೊಕ್ಕಳು. ಮಂಚದ ಪಕ್ಕದಲ್ಲಿ ನಿಂತು ಗಂಡನನ್ನೇ ದಿಟ್ಟಿಸುತ್ತ ನಿಂತಳು. ಗೊರಕೆಯ ಲಯಕ್ಕೆ ತಕ್ಕಂತೆ ನಾಲಿಗೆ ಬಾಯಿಂದ ಹೊರಬಂದು ಒಳ ಹೋಗುತ್ತಿತ್ತು. ಸಮಯ ಸಾಧಿಸಿ ನಾಲಿಗೆಯನ್ನು ಹಿಡಿದು ಸರಕ್ಕೆಂದು ಚಾಕುವಿನಲ್ಲಿ ತರಿದು ಹಾಕಿದಳು. ಎಡಗೈಲಿ ಜೀವಂತ ನಾಲಿಗೆ ಅದುರುತ್ತಿದ್ದರೆ ಬಲಗೈಲಿದ್ದ ಚಾಕುವಿನಲ್ಲಿ ರಕ್ತ ಸುರಿಯುತ್ತಿತ್ತು. ಸತ್ಯೇಂದ್ರ ಚಕ್ರವರ್ತಿಯ ಬಾಯಿಂದ ರಕ್ತ ನಲ್ಲಿಯಲ್ಲಿ ನೀರು ಬಂದಂತೆ ಧಾರಾಕಾರವಾಗಿ ಸುರಿಯುತ್ತಿತ್ತು. 

ಮುಂಬಾಗಿಲು ತೆಗೆದು ರಸ್ತೆಗೆ ಬಂದು ನಾಲಿಗೆಯನ್ನು ದೂರಕ್ಕೆ ಬಯಲಿಗೆ ಎಸೆದಳು. ಸತ್ಯೇಂದ್ರನ ಬಾಯಿಂದ ಹರಿದ ರಕ್ತ ರೂಮಿನಾಚೆ, ಮನೆಯಾಚೆಗೂ ಬಂದು ರಸ್ತೆ ತುಂಬ ಹರಿಯ ತೊಡಗಿತು. ಅದರಿಂದ ಎದ್ದ ಸುಳ್ಳುಗಳು ಉಸಿರುಗಟ್ಟಿ ತುಪತುಪನೆ ಕುಣಿದು ಸಾಯುತ್ತಿದ್ದವು. 

ಚಂದ್ರಪ್ರಭ ಕಠಾರಿ

© Copyright 2022, All Rights Reserved Kannada One News