ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 01.11.2022

ಕರುನಾಡಿನ ಸಾಮಂತರಾಜ ಆದಿನ ತನ್ನ ಮಂಡಲದ ಕುತಂತ್ರಿ ಮಂತ್ರಿಗಳ ತುರ್ತು ಸಭೆ ಕರೆದಿದ್ದ. ಸಭೆಗೆ ಬಂದು ಆಸೀನರಾದ ಎಲ್ಲರೂ ಚರ್ಚೆಯ ವಿಷಯವೇನೆಂದು ತಿಳಿಯದೆ – “ಸಾಮಂತರು ಶೇಕಡ ನಲವತ್ತು ಲಂಚವನ್ನು ಇನ್ನು ಹೆಚ್ಚಿಗೆ ಮಾಡಬಹುದು” ಎಂದು ಒಬ್ಬ ಮತ್ತೊಬ್ಬನ  ಕಿವಿಯಲ್ಲಿ ಪಿಸುಗುಟ್ಟಿದರೆ “ಹು…ಹು…ಹಾಗಿರುವುದಿಲ್ಲ. ಬಹುಶಃ ಬರೋ ಲಂಚದಲ್ಲಿ ತನ್ನ ಪಾಲನ್ನು ಹೆಚ್ಚಿಗೆ ಕೇಳಲು ಇರಬಹುದು” ಎಂದು ತಂತಮ್ಮ ಮನಸ್ಸಿಗೆ ತೋಚಿದಂತೆ ಮಾತಾಡಿಕೊಳ್ಳುತ್ತಿದ್ದರು. ಈ ಪಿಸುಮಾತಿನ ಗುಸುಗುಸು ಶಬ್ಧದ ಮಧ್ಯೆ, ಸಾಮಂತರಾಜ ಕುಳಿತ್ತಿದ್ದ ಸಿಂಹಾಸನ ಅಲುಗಾಡುತ್ತಿರುವ ಕಡೆ ಅವರೆಲ್ಲರ ಗಮನ ಹರಿಯಿತು. ಸೂಕ್ಷ್ಮದಲ್ಲಿ ಗಮನಿಸಿದಾಗ ಸಾಮಂತರಾಜನ ತೊಡೆ ಗಡಗಡ ನಡುಗುತ್ತಿತ್ತು. ಹಾಗೆ ನಡುಗಿದ ತೊಡೆಯ ಕಂಪನ ಕುಳಿತ ಸಿಂಹಾಸನಕ್ಕೆ ಹರಿದು ಅದೂ ಅಲುಗಾಡ ತೊಡಗಿತ್ತು. ತೊಡೆ ಏಕೆ ತರತರ ನಡುಗುತ್ತಿದೆಯೆಂದು ಸಾಮಂತರಾಜನನ್ನು ಕೇಳಲು ಯಾರೂ ಧೈರ್ಯ ಮಾಡಲಿಲ್ಲ. ಆದರೆ, ಸಭೆಗೆ ಅತಿಥಿಯಾಗಿ ಬಂದಿದ್ದ ಕೇಂದ್ರ ಮಂತ್ರಿ ಚೊಂಬಕ್ಕ ನಗುತ್ತ “ಅಣ್ಣ…ಏನಾಯ್ತು? ನಿಮ್ಮ ತೊಡೆ ಏಕೆ ಹಾಗೆ ನಡುಗುತ್ತಿದೆ?” ಎಂದು ಕೇಳಿಯೇ ಬಿಟ್ಟಳು.

ಆ ಮಾತಿನಿಂದ ಬೇಸರಗೊಂಡ ಸಾಮಂತರಾಜ “ನೀವೇನು ನಾಡಿನ ಅಭಿವೃದ್ಧಿ ಬಗ್ಗೆ ಚರ್ಚಿಸಲು ಬಂದಿದ್ದೀರೊ ಇಲ್ಲಾ ನನ್ನ ನಡುಗುವ ತೊಡೆ ನೋಡೊದಕ್ಕೆ ಬಂದಿದ್ದೀರೊ?” ಎಂದಾಗ ಚೊಂಬಕ್ಕನಿಗೆ ಅಪಮಾನವಾದಂತಾಗಿ ಬೆವರಿಳಿದ ಮುಖವನ್ನು ಸೆರಗಿನಿಂದ ಒರೆಸಿಕೊಂಡಳು.

ಜನವಿರೋಧಿ ಕೇಸರಿ ಆಳ್ವಿಕೆಯನ್ನು ಖಂಡಿಸುವವರನ್ನು, ಭಕ್ತಗಣಗಳು ನಿಷ್ಠೆಯಿಂದ ಸಾಮ್ರಾಟನಂತೆ ದಿನದ ಹದಿನೆಂಟು ತಾಸು  ನಾಲಿಗೆಯನ್ನೇ ಹತಾರು ಮಾಡಿಕೊಂಡು ಸದೆಬಡಿಯುತ್ತಿರುವಾಗ, ಕರುನಾಡಿನ ಸಾಮಂತರಾಜ ಅವನ ಮಂತ್ರಿಗಳು ಶೇಕಡ  ನಲವತ್ತು ಲಂಚವನ್ನು ಜೇಬಿಗಿಳಿಸುತ್ತ ಸುಖ ಸಂತೋಷದಿಂದ ಕಾಲಹರಣ ಮಾಡುತ್ತಿರುವ ಕಾಲದಲ್ಲಿ - ಆ ರಾತ್ರಿ ಗಡದ್ದಾಗಿ ಮಲಗಿದ್ದ ಸಾಮಂತರಾಜನಿಗೆ ಕನಸೊಂದು ಬಿದ್ದಿತ್ತು. ಕನಸಲ್ಲಿ – ಗಲ್ಲಿಗಲ್ಲಿಗಳಲ್ಲಿ ಗೋಡೆಗಳ ಮೇಲೆ ಪೇಸಿಎಮ್ ಪೋಸ್ಟರ್ ಗಳು ಕಂಡು, ಅವುಗಳಲ್ಲಿದ್ದ ತನ್ನ ಭಾವಚಿತ್ರ ತನ್ನನ್ನೇ ಅಣಕಿಸುವಂತೆ ಗಹಗಹಸಿ ನಗುತ್ತಿತ್ತು. ನಿದ್ದೆಯಿಂದ ಎಚ್ಚೆತ್ತವನು ನೀರು ಕುಡಿದು ಮತ್ತೆ ನಿದ್ದೆಗೆ ಜಾರಿದರೆ - ಈಗ ಭಾರತ ಐಕ್ಯತಾ ಯಾತ್ರೆಯ ಭಾರೀ ಜನಸ್ತೋಮ ತನ್ನತ್ತಲೇ ಓಡಿ ಬರುತ್ತಿರುವ ಹಾಗೆ ಕಂಡು ಬೆಚ್ಚಿ ಎದ್ದು ಕೂತಾಗ ಹಾಸಿಗೆ ಒದ್ದೆಯಾಗಿ, ಬಂದ ದುರ್ನಾತಕ್ಕೆ ಮೂಗು ಮುಚ್ಚಿದ. ಶೌಚಾಲಯಕ್ಕೆ ಹೋಗಿ ಬಂದು ಹಾಸಿಗೆಯಲ್ಲಿ ಕುಳಿತರೆ ತೊಡೆ ನಡುಗಲು ಆರಂಭಿಸಿತ್ತು. ಮುಂಬರಲಿರುವ ಚುನಾವಣೆಯಲ್ಲಿ ಸೋತು ಸುಣ್ಣವಾದರೆ ಗತಿಯೇನು? ಎಂದು ಯೋಚಿಸಿ, ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಹೇಗೆ ತಿರುಗಿಸಬೇಕೆಂದು ಚಿಂತಿಸುವುದಕ್ಕಾಗಿ ತುರ್ತು ಸಭೆಯನ್ನು ಕರೆದಿದ್ದ.

ಸಭೆಯಲ್ಲಿ ಮನೆ ಮುರುಕ ಮಂತ್ರಿಗಳು ಸುಧೀರ್ಘವಾಗಿ ಚರ್ಚಿಸಿ ಕೊನೆಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಅಸಂಸ್ಕೃತ ಕುಮಾರ ಕೊಟ್ಟ ಸಲಹೆಯಂತೆ, ಕನ್ನಡ ಅಸ್ಮಿತೆಯ ನಾಡಗೀತೆಗಳನ್ನು ಕೋಟಿ ಕಂಠಗಳಲ್ಲಿ ನಾಡಿನೆಲ್ಲೆಡೆ ಹಾಡಬೇಕೆಂದು ಸಭೆ ಒಮ್ಮತಕ್ಕೆ ಬಂದಿತು. ಅಂತೆ ಸಾಮಂತರಾಜ ಎಲ್ಲೆಡೆ ಕನ್ನಡಗೀತೆ ಮೊಳಗುವಂತೆ ಆಜ್ಞಾಪಿಸಿದ.

ನೂರಾರು ಗಾಯಕರು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಸುಮಧುರ ಕಂಠದೊಂದಿಗೆ ಮತ್ತು ಮನೆ ಮರುಕ ಮಂತ್ರಿಗಳು ತಮ್ಮ ಗಾರ್ದಭ ಶಾರೀರದೊಂದಿಗೆ ಕನ್ನಡಗೀತೆಗಳನ್ನು ಹಾಡಿದರು. ದಿನಪತ್ರಿಕೆಗಳಲ್ಲಿ ಅದು ಹೆಚ್ಚು ಪ್ರಚಾರ ಪಡೆಯಿತೇ ಹೊರತು ಜನರ ಮನದಾಳದಲ್ಲಿ ಅಂಥ ಪರಿಣಾಮ ಬೀರಲಿಲ್ಲ.

ಗುಪ್ತಚರ ಇಲಾಖೆಯ ಅಧಿಕಾರಿಗಳಲ್ಲಿ ಸಾಮಂತರಾಜ ಆ ಬಗ್ಗೆ ಕಾರಣ ಕೇಳಲಾಗಿ ಅವರು “ಸ್ವಾಮಿಗಳೇ…ತಾವು ತಪ್ಪಾಗಿ ತಿಳಿಯಬಾರದು. ಜನರು - ಈ ಸಾಮಂತರಾಜ, ಅವನ ಮನೆಮುರುಕ ಮಂತ್ರಿಗಳು ಊಸರವಳ್ಳಿಗಳು. ನಮ್ಮನ್ನು ಯಾಮಾರಿಸಲು ಹೀಗೆ ನಾಟಕವಾಡುತ್ತಿದ್ದಾರೆ. ಅವರ ಎದೆ ಸೀಳಿದರೆ ಸಾಸಿವೆ ಕಾಳಿನಷ್ಟು ಕನ್ನಡಾಭಿಮಾನಿ ಅಲ್ಲಿ ಸಿಗುವುದಿಲ್ಲ. ಕನ್ನಡ ಮಕ್ಕಳ ಪಠ್ಯಪುಸ್ತಕದಲ್ಲಿ ವಿಷವಿಕ್ಕಿದವರು. ಮಾಧವ ಕೃಪಕಾಟಕ್ಷ ಕುಟೀರದ ಬಾಲಂಗೋಚಿಗಳು. ಯಾವತ್ತೂ ಸಂಸ್ಕೃತ, ಹಿಂದಿ ಎಂದು ಬಾಯಿ ಬಡಿಯುವ ಕನ್ನಡದ್ರೋಹಿಗಳು..ಎಂದು ಲೇವಡಿ ಮಾಡುತ್ತಿದ್ದಾರೆ” ಎಂದು ವರದಿ ಮಾಡಿದರು.

ಸಾಮಂತರಾಜ ಮತ್ತೆ ಚಿಂತೆಗೆ ಜಾರಿದ. ಅರಮನೆಯ ಹೊರಗೆ ಆ ಸಂಜೆ ಅದೇಕೊ ನಾಯಿಗಳು ಒಂದೇ ಸಮನೆ ಬೊಗಳುತ್ತ, ಊಳಿಡುತ್ತಿದ್ದವು. ತಟ್ಟನೆ ಸಾಮಂತರಾಜನ ತಲೆಯ ಮೇಲೆ ಬಲ್ಬು ಉರಿದು “ಜನ ನನ್ನನ್ನು ನಂಬುವುದಿಲ್ಲ. ಆದರೆ ಶಂಖದಿಂದ ತೀರ್ಥ ಬಂದರೆ…..” ಎಂದು ಖುಷಿಯಿಂದ ಚಿಟಿಕೆ ಹೊಡೆದು “ಯಾರಲ್ಲಿ?” ಎಂದು ಕೂಗಿ ಕೇಸರಿವಾಣಿ ಪತ್ರಿಕೆಯ ವಿಷಭಟ್ಟನನ್ನು ಬರಹೇಳಿದ.

ವಿಷಭಟ್ಟ, ಸಾಮಂತರಾಜನ ಹೊಸ ಮನೆಹಾಳು ಐಡಿಯಾಕ್ಕೆ ತಲೆದೂಗಿ “ನಾವು ದೀಪಾವಳಿಯ ಬೋನಸ್ಸಾಗಿ ಅದನ್ನೇ ನಿರೀಕ್ಷಿಸುತ್ತಿದ್ದೆವು” ಎಂದು ಬಾಯಿಂದ ಬಂದ ಜೊಲ್ಲನ್ನು ಅಂಗಿಯ ತೋಳಿನಿಂದ ಒರೆಸಿಕೊಂಡ.

ಅರಮನೆಯ ಅಡುಗೆ ಸಾಲಿನಲ್ಲಿ ನೂರಾರು ಸ್ವೀಟ್ ಬಾಕ್ಸುಗಳು ಬಂದಿಳಿದವು. ಆದರೆ, ಮುಖ್ಯ ಬಾಣಸಿಗನಿಗೆ ಯಾವ್ಯಾವ ಸಿಹಿತಿಂಡಿಗಳನ್ನು ತಯಾರಿಸಿ ಸ್ವೀಟ್ ಬಾಕ್ಸುಗಳಲ್ಲಿ ಹಾಕಬೇಕೆಂದು ಗೊಂದಲವಾಯಿತು. ಆ ಬಗ್ಗೆ ಸಾಮಂತರಾಜನಲ್ಲಿ ಹೇಳಿಕೊಂಡಾಗ “ಅಯ್ಯೋ…ಸಿಹಿತಿಂಡಿಗಾಗಿ ಬಾಕ್ಸುಗಳನ್ನು ತರಿಸಿಲ್ಲ. ಅದರಲ್ಲಿ ನಾಯಿ ಬಿಸ್ಕತ್ತುಗಳನ್ನು ಹಾಕಿ” ಎಂದ. ಹೌಹಾರಿದ ಬಾಣಸಿಗ ಸುಧಾರಿಸಿಕೊಂಡು “ಮಹಾಸ್ವಾಮಿಗಳೇ…ಪೊಮೆರಿನ್, ಜರ್ಮನ್ ಶೆಫರ್ಡ್, ಬುಲ್ ಡಾಗ್, ಹಸ್ಕಿ, ಕಂಟ್ರಿ ಹೀಗೆ     ಹತ್ತಾರು ನಾಯಿತಳಿಗಳಿವೆ. ಯಾವ ತಳಿಗೆ ಬಿಸ್ಕತ್ತನ್ನು ತರಿಸಿ ಹಾಕೋದು” ಅಂದ. ಸಾಮಂತರಾಜನಿಗೆ ಸಹನೆಗೆಟ್ಟಿತು. “ಕಂತ್ರಿ…   ಕಜ್ಜಿನಾಯಿಗೆ ಇಷ್ಟವಾಗೊ ಬಿಸ್ಕತ್ ತರಿಸಿ ಹಾಕಿ” ಎಂದ ಸಿಟ್ಟಿನಿಂದ.

ಕೇಸರಿ ಟೇಪು ಸುತ್ತಿಕೊಂಡು ಅಲಂಕರಿಸಿಕೊಂಡ ಸ್ವೀಟ್ ಬಾಕ್ಸುಗಳು, ನಾಡಿನೆಲ್ಲೆಡೆ ಆಯ್ದ ಬಕೆಟ್ ಪತ್ರಕರ್ತರಿಗೆ ಕೊರಿಯರ್ ಆದವು. ಸ್ವೀಟ್ ಬಾಕ್ಸಿನಲ್ಲಿರಿಸಿದ್ದ ದುಡ್ಡಿನ ಕವರನ್ನು ಜೇಬಿಗಿಳಿಸಿದ ಪೀತಪತ್ರಿಕೆಗಳ ವರದಿಗಾರರು ಬಿಸ್ಕತ್ತನ್ನು ಸಂತೋಷದಿಂದ ಮುಕ್ಕಿ ಸಾಮಂತರಾಜನ ಗುಣಗಾನ ಮಾಡುತ್ತ ಬೊಗಳುವುದಕ್ಕೆ ಮುಂದಾದರು.

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News