Flash News:
ಮುಚ್ಚಿಟ್ಟ ಜಾಡಿಯಲಿ ಬಚ್ಚಿಟ್ಟ ಸುಳ್ಳುಗಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಮುಚ್ಚಿಟ್ಟ ಜಾಡಿಯಲಿ ಬಚ್ಚಿಟ್ಟ ಸುಳ್ಳುಗಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 04.10.2022

ಮುಚ್ಚಿಟ್ಟ ಜಾಡಿಯಲಿ ಬಚ್ಚಿಟ್ಟ ಸುಳ್ಳುಗಳು
ಕೊನೆಗೆ ನಿರೀಕ್ಷಿಸುತ್ತಿದ್ದ ಆ ಸುದಿನ ಭರತಖಂಡಕ್ಕೆ ಸೌಭಾಗ್ಯವಾಗಿ ಒದಗಿಬಂದಿತ್ತು.

ತನ್ನ ಎಕ್ಕಡದ ನಾಲಿಗೆಯಿಂದ ಜನಾಳ್ವಿಕೆಯನ್ನು ಕೊಚ್ಚಿ ಹಾಕಿದ ಮಾಯಾವಿ, ಸಾಮ್ರಾಟನಾಗುವುದಕ್ಕೂ ಮುಂಚಿನ ಮಾತು. ದೇಶಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ – ಶತ್ರುದೇಶದ ನಾಶ, ತೆರಿಗೆಗಳ್ಳರು ವಿದೇಶದಲ್ಲಿ ಬಚ್ಚಿಟ್ಟ ಕಪ್ಪುಹಣ ವಾಪಸ್ಸು ತಂದು ಪ್ರಜೆಗಳಿಗೆ ಹಂಚಿಕೆ, ಯುವಜನರಿಗೆ ಕೋಟಿ ಕೋಟಿ ಉದ್ಯೋಗ, ರೈತರ ವರಮಾನ ದ್ವಿಗುಣ, ದೀನದಲಿತರ ಅದರಲ್ಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಖೊಟ್ಟಿ ಭರವಸೆಯನ್ನು ಕೊಟ್ಟು ಸಿಂಹಾಸನದ ಗಾದಿಯನ್ನು ಹಿಡಿದದ್ದು ಈಗ ಇತಿಹಾಸ.  

ಪ್ರಜೆಗಳು ಕೊಟ್ಟ ಭರವಸೆಗಳನ್ನು ನಿಜವೆಂದು ನಂಬಿದರು. ಆದರೆ, ಅಚ್ಚೇದಿನದ ಉತ್ಪ್ರೇಕ್ಷಿತ ಮಾತಿನ ಮೋಡಿಗೆ ಮರುಳಾಗಿ, ಯೋಚನಾ ಶಕ್ತಿಯನ್ನು ಕಳೆದುಕೊಂಡು ದೇಶಭಕ್ತಿ ಮತ್ತು ಧರ್ಮರಕ್ಷಣೆಯ ಹೆಸರಲ್ಲಿ ವ್ಯಕ್ತಿಆರಾಧನೆಯಲ್ಲಿ ತೊಡಗಿ, ಕೇಸರಿ ಶಾಲನ್ನು ಹೊದೆದು ಸಾಮ್ರಾಟನ ಅಖಂಡ ಭಕ್ತರಾಗಿ ಅನೇಕರು ದೀಕ್ಷೆ ಪಡೆದದ್ದು ನಾಡಿನ ದುರಂತ.   

ಹಾಗೆ ದೀಕ್ಷೆ ಪಡೆದ ಭಕ್ತರು ಕೊಟ್ಟ ಭರವಸೆಯ ಈಡೇರಿಕೆಯನ್ನು ಪ್ರಶ್ನಿಸುವುದು ಇರಲಿ, ಸಾಮ್ರಾಟನು ತರುತ್ತಿದ್ದ ಕ್ರೂರ ಕಾನೂನುಗಳಿಗೂ ಉಧೋ ಉಧೋ ಎನ್ನುತ್ತಿದ್ದರು. ಸಾಲದಕ್ಕೆ - ಕಪ್ಪುಹಣ, ಶೇಕಡ ನಲವತ್ತು ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಅಸುರಕ್ಷತೆ ಬಗ್ಗೆ ಮತ್ತು ಕರಾಳ ಕಾನೂನುಗಳ ಬಗ್ಗೆ ಪ್ರಶ್ನಿಸುವವರನ್ನು ಖಂಡಿಸುವವರನ್ನು ತಮ್ಮ ಹರಿತ ನಾಲಿಗೆಗಳಿಂದ ಹೊಲಸು ಮಾತಾಡಿ ಬಲಿ ಹಾಕುತ್ತಿದ್ದರು. ಆ ಕಾರಣಕ್ಕೆ ಜನಸಾಮಾನ್ಯರು ಪ್ರಶ್ನಿಸುವುದಕ್ಕೆ ಹಿಂಜರಿಕೆ ತೋರಿದ್ದಲ್ಲದೆ ಸಾಮ್ರಾಟನು ಕೊಟ್ಟ ಭರವಸೆಯ ಮಾತುಗಳನ್ನೂ ಮರೆತೇ ಹೋಗಿದ್ದರು. ಆದರೆ ಚಮತ್ಕಾರವೊಂದು ನಡೆದು ಹೋಯಿತು.

ಸಾಮ್ರಾಟನ ಹುಟ್ಟುದಿನ ಹತ್ತಿರದಲ್ಲಿತ್ತು. ತನ್ನ ಹುಟ್ಟುಹಬ್ಬದಂದು ಪ್ರಜೆಗಳಿಗೆ ವಿಶೇಷವಾಗಿ ಭಕ್ತರಿಗೆ ತಾನೊಂದು ಅಚ್ಚರಿಯ ಕೊಡುಗೆಯನ್ನು ಪ್ರಕಟಿಸಲಿದ್ದೇನೆಂದು ಸಾಮ್ರಾಟ ಎಲ್ಲೆಡೆ ಡಂಗುರ ಸಾರಿಸಿದ. ಜನರು ಆಸೆಗಣ್ಣುಗಳಿಂದ ಎಂತಹ ಕೊಡುಗೆ ಅದಾಗಿರಬಹುದೆಂದು ಊಹಿಸುತ್ತ, ಹುಟ್ಟುದಿನದ ನಿರೀಕ್ಷೆ ಮಾಡತೊಡಗಿದರು. ಅರಮನೆಗೆ ದಿನವೂ ಸಾವಿರಾರು ಗಾಡಿಗಳಲ್ಲಿ ಪಿಂಗಾಣಿ ಜಾಡಿಗಳು ಬರುತ್ತಿದ್ದದ್ದು ಅವರ ಭರವಸೆ ಹೆಚ್ಚಲು ಕಾರಣವಾಯಿತು.   

ಆ ದಿನ ಅರಮನೆಯು ಸ್ವರ್ಗವನ್ನು ಮೀರಿಸುವಂತೆ ಅಲಂಕಾರ ಮಾಡಿಕೊಂಡಿತ್ತು. ಅರಮನೆಯ ಮುಂದೆ ಭಾರೀ ಜನಸ್ತೋಮ ಸೇರಿ ಸಾಮ್ರಾಟನ ಮಾತನ್ನು ಆಲಿಸಲು ತುದಿಗಾಲಲ್ಲಿ ನಿಂತಿದ್ದರು. ಅರಮನೆಯ ಉಪ್ಪರಿಗೆಗೆ ಬಂದು ನಿಂತ ಸಾಮ್ರಾಟ “ ನನ್ನ ಪ್ರೀತಿಯ ಮಿತ್ರೋ…ದೇಶವಾಸಿಗಳೇ…ಇಂದು ನಿಮ್ಮೆಲ್ಲರ ಎಲ್ಲಾ ಸಂಕಷ್ಟಗಳು ಬಗೆಹರಿದು ನಿಮ್ಮ ಬಾಳು ಬಂಗಾರವಾಗುವ ದಿನ ಬಂದಿದೆ. ನನ್ನ ಪಟ್ಟಾಭಿಷೇಕದ ಹೊತ್ತಲ್ಲಿ ನಿಮ್ಮೆಲ್ಲರಿಗೂ ಹದಿನೈದು ಲಕ್ಷ ವರಹಗಳನ್ನು ಕೊಡುತ್ತೇನೆಂದು ವಾಗ್ಧಾನ ಮಾಡಿದ್ದೆ. ಆ ಬಗ್ಗೆ, ಆಗಲೂ ಈಗಲೂ ನನ್ನ ವಿರೋಧಿಗಳು ಆಡಿಕೊಂಡು ಅಪಹಾಸ್ಯ ಮಾಡುತ್ತಾರೆ. ಅವರಿಗೆ ನನ್ನನ್ನು ಕಂಡರೆ ಆಗದು.
ಆದರೆ, ನನ್ನ ಪರಾಕ್ರಮದ ಬಗ್ಗೆ ಅರಿವಿರುವ ವಿದೇಶದ ರಾಜರುಗಳು ಹೆದರಿ, ಕಳ್ಳ ವ್ಯಾಪಾರಿಗಳು, ಕಾಳಸಂತೆಕೋರರು, ಶ್ರೀಮಂತರು ತಮ್ಮಲ್ಲಿ ಬಚ್ಚಿಟ್ಟಿದ್ದ ಅಷ್ಟೂ ಕಪ್ಪುಹಣವನ್ನು ವಾಪಸ್ಸು ಕಳಿಸಿದ್ದಾರೆ. ಅದನ್ನು ಇಂದು ನಿಮ್ಮೆಲ್ಲರಿಗೂ ಹಂಚುತ್ತೇನೆ.
ನೀವ್ಯಾರೂ ಅದಕ್ಕಾಗಿ ಅರಮನೆಗೆ ಬಂದು ಸಾಲಿನಲ್ಲಿ ನಿಂತು ಬಸವಳಿಯುವುದು ಬೇಡ. ಹಣ ತುಂಬಿದ ಪಿಂಗಾಣಿ ಜಾಡಿಗಳನ್ನು ಎಲ್ಲರ ಮನೆ ಬಾಗಿಲಿಗೆ ಅರಮನೆಯೇ ತಲುಪಿಸುತ್ತದೆ” ಎಂದು ಹೇಳಿದ ಸಾಮ್ರಾಟ ತುಸು ಹೊತ್ತು ಮೌನಕ್ಕೆ ಜಾರಿದ.

ನಂತರ - “ಆದರೆ, ಒಂದು ಮಾತು…ನೀವ್ಯಾರು ಬಟ್ಟೆ ಸುತ್ತಿ ಮುಚ್ಚಿ ರಾಜಮುದ್ರೆ ಹಾಕಿದ ಜಾಡಿಗಳ ಬಾಯಿಯನ್ನು ತೆರೆಯಬಾರದು. ಈ ಹಣವನ್ನು ನಿಮಗೆ ನಾವು ಭವಿಷ್ಯನಿಧಿಯಾಗಿ ಕೊಡುತ್ತಿದ್ದೇವಷ್ಟೆ! ಆ ಕಾರಣದಿಂದ ನಮ್ಮ ಜೀವಿತಾವಧಿ ಮುಗಿಯುವವರೆಗೂ ಯಾರೂ ಜಾಡಿಯ ಬಾಯಿಯನ್ನು ತೆರೆಯುವಂತಿಲ್ಲ. ಹಾಗೂ ಉದ್ಧಟತನದಿಂದ ತೆರೆದರೆ, ಆಗುವ ಅನಾಹುತದ ಪೂರ್ಣ ಜವಾಬ್ದಾರಿ ಅವರದ್ದೇ ಆಗಿರುತ್ತೆ” ಎಂದಾಗ ನೆರೆದಿದ್ದ ಹಲವರು ಸಾಮ್ರಾಟನ ಮಾತಿನಿಂದ ಗೊಂದಲಗೊಂಡರು. ಆದರೆ, ಎಂದಿನಂತೆ ಭಕ್ತಗಣಗಳು “ಸಾಮ್ರಾಟನಿಗೆ ಜಯವಾಗಲಿ….ಸಾಮ್ರಾಟ ಚಿರಾಯುವಾಗಲಿ” ಎಂದು ಮುಗಿಲು ಮುಟ್ಟುವಂತೆ ಜಯಕಾರವನ್ನು ಹಾಕಿದವು. ಅಲ್ಲೊಬ್ಬ “ಇವರಿಗೇನು ತಲೆ ಕೆಟ್ಟಿದೆಯಾ? ಸಾಮ್ರಾಟ ಚಿರಾಯುವಾಗಲಿ ಎಂದು ಕೂಗುತ್ತಿದ್ದಾರೆ. ಹಾಗಾದರೆ ಜಾಡಿಯ ಮುಚ್ಚಳವನ್ನು ನಾವು ಎಂದಿಗೂ ತೆರೆಯುವಂತೆಯೇ ಇಲ್ಲ. ಹಾಗಿದ್ದಲ್ಲಿ ಹದಿನೈದು ಲಕ್ಷ ಕೊಟ್ಟೆ ಎನ್ನುವ ಸಾಮ್ರಾಟನ ಮಾತಿನಲ್ಲಿ ಅರ್ಥವಿದೆಯೇ?” ಎಂದು ಗೊಣಗಿಕೊಂಡ. ಅವನ ಸುತ್ತಲಿದ್ದ ಜನರು ಅವನ ಮಾತಿಗೆ ಹ್ಞುಗುಟ್ಟಿದರೂ, ಸುತ್ತಲಿದ್ದ ಭಕ್ತಗಣಕ್ಕೆ ಹೆದರಿ ಧ್ವನಿಯೆತ್ತಲಿಲ್ಲ.

ಬಂಡಿಗಳಲ್ಲಿ ಹೊತ್ತು ಬಂದ ಪಿಂಗಾಣಿ ಜಾಡಿಗಳು ನಾಡಿನ ಎಲ್ಲರ ಮನೆಗೂ ವಿತರಣೆಯಾಯಿತು. ಸಾಮ್ರಾಟನ ಭಕ್ತರು ತಮ್ಮ ಮನೆ ಬಾಗಿಲಿಗೆ ಜಾಡಿಗಳು ಬಂದಾಗ ಅದಕ್ಕೆ ಕುಂಕುಮ ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕೈಮುಗಿದು ಜೋಪಾನವಾಗಿ ಎತ್ತಿ ತಂದು ದೇವರ ಕೋಣೆಯಲ್ಲಿ ಇರಿಸಿದರು. “ಹಣದ ಅವಶ್ಯಕತೆ ಇಲ್ಲದವರು ಜಾಡಿಯನ್ನು ಅರಮನೆಗೆ ಹಿಂತಿರುಗಿಸಿ. ಆ ಹಣವನ್ನು ನಾಡಿನ ಕಲ್ಯಾಣದ ಕೆಲಸಕ್ಕೆ ಉಪಯೋಗಿಸಲು ಅನುವು ಮಾಡಿಕೊಡಬೇಕು” ಎಂದು ಸಾಮ್ರಾಟ ಹೇಳಿದ್ದರಿಂದ, ಅವನ ಮೇಲಿನ ಅಭಿಮಾನದಿಂದ ಸ್ಥಿತಿವಂತರು ಜಾಡಿಯನ್ನು ಸ್ವೀಕರಿಸಲಿಲ್ಲ.

ಜಾಡಿಯಲ್ಲಿ ಚಿನ್ನದ ನಾಣ್ಯಗಳನ್ನೇ ಕೊಟ್ಟಿದ್ದರೆ ಅದನ್ನು ಈಗ ಯಾಕೆ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು  ಉಪಯೋಗಿಸಬಾರದು? ಸಾಮ್ರಾಟ ಸಾಯುವವರೆಗೂ ಯಾಕೆ ಕಾಯಬೇಕು? ಎಂಬ ಪ್ರಶ್ನೆಗಳು ಕೆಲವರಲ್ಲಿ ಉದ್ಭವಿಸಿದವು. ಇನ್ನೂ ಕೆಲವರು, ಸಾಮ್ರಾಟ ಮೊದಲು ಮಾಯಾವಿಯಾಗಿದ್ದವನು. ಅವನ ಮಾತಿಗೆ ವಿರೋಧವಾಗಿ ಮುಚ್ಚಳ ತೆರೆದರೆ ಏನಾದರೂ ಅನಾಹುತ ಸಂಭವಿಸಿದರೆ ಗತಿ ಏನೆಂದು ಚಿಂತೆಗೀಡಾದರು. ಆದರೆ - ಕೆಲ ಪ್ರಜ್ಞಾವಂತ ನಾಗರೀಕರು, ಸಾಮ್ರಾಟನ ಕುಯುಕ್ತಿಯನ್ನು ಬಲ್ಲವರು ಇದು ಜನರ ಬಾಯಿ ಮುಚ್ಚಿಸಲು ಅವನು ಕಟ್ಟಿರುವ ಮತ್ತೊಂದು ಆಟವೆಂದು ಬಗೆದು, ಅದನ್ನು ಬಯಲಿಗೆಳೆಯಬೇಕೆಂದು ನಿರ್ಧರಿಸಿದರು.

ಹಾಗೆ ಯೋಚಿಸಿದವರು ಆ ರಾತ್ರಿಯೇ ರಾಜಮುದ್ರೆ ಇದ್ದ ಅರಗಿನ ಅಂಟನ್ನು ಕಿತ್ತು, ಜಾಡಿಯ ಬಾಯಿಗೆ ಸುರುಳಿಯಾಗಿ ಸುತ್ತಿದ್ದ ಬಟ್ಟೆಯನ್ನು ಬಿಚ್ಚಿದರು. ಪಿಂಗಾಣಿ ಮುಚ್ಚಳವನ್ನು ತಿರುಪಿ ಒಳ ಇಣಿಕಿ ದಂಗಾದರು. ಜಾಡಿಯ ಒಳಗಡೆ ಕೈಹಾಕಿ, ಹೊರ ತೆಗೆದರೆ ಮುಷ್ಟಿಯ ತುಂಬ ಚಿನ್ನದ ನಾಣ್ಯಗಳಿರದೆ ಹುಣಸೇಬೀಜವಿತ್ತು. ಜಾಡಿಯನ್ನು ದಬ್ಬಾಕಿ ಒಳಗಿದ್ದ ಎಲ್ಲಾ ಹುಣಸೇಬೀಜವನ್ನು ನೆಲಕ್ಕೆ ಸುರುವಿದರು. ಅಲ್ಲಿಗೆ ಅವರಿಗೆ ಸ್ವಷ್ಟವಾಗಿತ್ತು. ಹಣದ ಬದಲಿಗೆ ಹುಣಸೇಬೀಜವನ್ನು ಕೊಟ್ಟು, ತನ್ನ ಜೀವಿತಕಾಲದವರೆಗೂ ಸಿಂಹಾಸನದಲ್ಲಿ ಉಳಿಯಲು ಅದನ್ನು ತೆರೆಯಕೂಡದೆಂದು ಆಜ್ಞಾಪಿಸಿದ್ದಾನೆಂದು ಅವರಿಗೆ ಹೊಳೆಯಿತು.

ದಿನಗಳೆದಂತೆ ಜನರೆಲ್ಲ ಈ ಮೋಸದಾಟದ ಬಗ್ಗೆ ಮಾತಾಡಿಕೊಳ್ಳುವುದು, ಮಾರುವೇಷದಲ್ಲಿದ್ದ ಸಾಮ್ರಾಟನ ಚಡ್ಡಿದೋಸ್ತು ಅಪರಿಮಿತ ಕುತಂತ್ರಿಯ ಕಿವಿಗೆ ಬಿತ್ತು. ಅದನ್ನು ಸಾಮ್ರಾಟನಿಗೆ ತಿಳಿಸಿ ಮುಂದೇನು ಮಾಡುವುದು ಎಂದು ಇಬ್ಬರೂ ಚರ್ಚಿಸಿ, ಕೊನೆಗೊಂದು ಡಂಗುರ ಸಾರಿದರು.

“ಮಹಾಜನಗಳೇ….ಸಾಮ್ರಾಟರ ಆಜ್ಞೆಯಂತೆ ಯಾರೂ ಪಿಂಗಾಣಿ ಜಾಡಿಯ ಮುಚ್ಚಳವನ್ನು ಅವರ ಜೀವಿತಾವಧಿಯಲ್ಲಿ ತೆರೆಯಬಾರದು. ಹಾಗೆ ತೆರೆದರೆ ಚಿನ್ನದ ವರಹಗಳು ಕೆಲಸಕ್ಕೆ ಬಾರದ ಹುಣಸೇಬೀಜಗಳಾಗುತ್ತದೆ….ಎಚ್ಚರ…ಎಚ್ಚರ” ಎಂದು ಗಲ್ಲಿಗಲ್ಲಿಗಳಲ್ಲಿ ಡಂಗುರ ಮೊಳಗಿತು.

ಭಕ್ತಗಣಗಳು ಕೆನ್ನೆ ಕೆನ್ನೆಗೆ ಬಡಿದುಕೊಂಡು ಜಾಡಿಯ ಬಾಯಿಗೆ ಬಿಗಿಯಾಗಿ ಮತ್ತೊಂದಷ್ಟು ಬಟ್ಟೆಯನ್ನು ಸುತ್ತಿದರು. ರೋಸೆದ್ದ ಪ್ರಜ್ಞಾವಂತ ನಾಗರೀಕರು “ಇದು ಪ್ರಜೆಗಳಿಗೆ ಮಾಡಿದ ಸಹಿಸಲಾಗದ ಅಪಮಾನ. ಸಾಮ್ರಾಟ ಒಬ್ಬ ಮೋಸಗಾರ….ವಂಚಕ” ಎಂದು ಧಿಕ್ಕಾರ ಕೂಗುತ್ತ, ಅರಮನೆಯ ಮುಂದೆ ಜಾಡಿಯಲ್ಲಿದ್ದ ಹುಣಸೇಬೀಜಗಳನ್ನು ಸುರಿದು, ಜಾಡಿಯನ್ನು ನೆಲಕ್ಕೆ ಒಗೆದು ಪುಡಿಪುಡಿ ಮಾಡಿದರು. ಹಾಗೆ ಜನರು ಸುಳ್ಳೆಂಬ ಹುಣಸೇಬೀಜವನ್ನು ಸುರಿದು ಹೋಗುತ್ತಿದ್ದರೆ ಅದು ಗುಡ್ಡವಾಗಿ ಬೆಳೆಯುತ್ತ ಬೆಟ್ಟವಾಗಿ ಅರಮನೆಯನ್ನು ಮುಚ್ಚುವಂತೆ ಎತ್ತರಕ್ಕೆ ಬೆಳೆಯಿತು.   

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News