ಧಮ್ ಇದ್ದು…ತಾಕತ್ತಿದ್ದು…ನಿದ್ದೆ ಹೊಡೆದ ಕುರ್ಚಿಗಳು; ಎಚ್ಚೆತ್ತ ಜನಗಳ ದೇಶ ಕಟ್ಟೊ ಜಾಥಾವು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಧಮ್ ಇದ್ದು…ತಾಕತ್ತಿದ್ದು…ನಿದ್ದೆ ಹೊಡೆದ ಕುರ್ಚಿಗಳು; ಎಚ್ಚೆತ್ತ ಜನಗಳ ದೇಶ ಕಟ್ಟೊ ಜಾಥಾವು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 13.09.2022

ತನ್ನ ಆಳ್ವಿಕೆಯ ಬಗ್ಗೆ ಜನ ರೋಸೆದ್ದು ಹೀಯಾಳಿಸುತ್ತಿರುವುದರ ಜೊತೆಗೆ ದಿನೇ ದಿನೇ ಹೆಚ್ಚುತ್ತಿದ್ದ ಜನನಾಯಕನ ಜನಪ್ರಿಯತೆಯಿಂದ  ಕರುನಾಡ ಸಾಮಂತರಾಜ ಕಂಗೆಟ್ಟಿದ್ದ. ಸಾಮ್ರಾಟನ ಭಕ್ತರನ್ನು ಛೂ ಬಿಟ್ಟು ಜನಗಳ ನಡುವೆ ಬೆಂಕಿ ಹಚ್ಚಿ ತನ್ನ ದುರಾಡಳಿತದ ಬೇಳೆ ಬೇಯಿಸಿಕೊಳ್ಳುವ ಕೆಲಸ ಅಷ್ಟೊಂದು ಫಲಕಾರಿಯಾಗದೆ ಸಾಮಂತರಾಜ ಕೈ ಸುಟ್ಟುಕೊಂಡಿದ್ದ. ಸಾಲದ್ದಕ್ಕೆ- ಕಾಮಗಾರಿ ಕೆಲಸಗಳಲ್ಲಿ ಗುತ್ತಿಗೆದಾರರಿಂದ ಶೇಕಡ ನಲವತ್ತು ಓನ್ಲೀ ಲಂಚವನ್ನು ತಾನು, ತನ್ನ ಮನೆಮುರುಕ ಮಂತ್ರಿಗಳು ಸದ್ದಿಲ್ಲದೆ ಹೆಗ್ಗಣದಂತೆ ತಿಂದು ಕೊಬ್ಬುತ್ತಿರುವ ಸುದ್ಧಿ ಹೇಗೊ ನಾಡಲ್ಲೆಲ್ಲ ಹಬ್ಬಿ, ಜನರು “ಸಾಮಂತರಾಜನು ಸೇರಿ ಎಲ್ಲಾ ಮಂತ್ರಿಗಳು ಲಂಚಕೋರರು, ಭ್ರಷ್ಟರು. ಇಂಥವರು ನಮಗೆ  ದೇಶಭಕ್ತಿ, ಧರ್ಮರಕ್ಷಣೆ ಬಗ್ಗೆ ಪಾಠ ಹೇಳೋಕೆ ಬರ್ತಾರೆ…..ಮೂರು ಬಿಟ್ಟವರು” ಎಂದು ಯಾವ ಹೆದರಿಕೆಯಿಲ್ಲದೆ ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದರು. ಅದು ಹೇಗೊ ಸಾಮ್ರಾಟನ ಕಿವಿಯಲ್ಲೂ ಪ್ರತಿಧ್ವನಿಸಿ ಸಾಮಂತರಾಜನಿಗೆ  ಇರುಸುಮುರುಸಾಯಿತು.

ಸರಿ. ಎಂದಿನಂತೆ ಸಾಮಂತರಾಜನನ್ನು ಕರೆದು ಸಾಮ್ರಾಟ ಮುಖಕ್ಕೆ ಮಂಗಳಾರತಿ ಎತ್ತಿದ. “ಅಲ್ಲಯ್ಯ…ನಿನಗೆ ಎಷ್ಟು ಸರ್ತಿ ವಾರ್ನಿಂಗ್ ಮಾಡೋದು? ನಾನೇ ಲಂಚ ತಿನ್ನಲ್ಲ…ನಿಂಗೆ ಗೊತ್ತಿಲ್ವ? ಆದ್ರೆ ವ್ಯಾಪಾರಿಗಳಿಗೆ ಗಂಟಲು ಮಟ್ಟ ತಿನ್ನಿಸ್ತೀನಿ? ಯಾಕೆ ಗೊತ್ತಾ? ಆಗ ಜನರಿಗೆ ನಮ್ ಮೇಲೆ ಡೌಟು ಬರೊಲ್ಲ. ಆಮೇಲೆ ಬೇಕಾದಾಗ ಅವರಿಂದ ಪೀಕುಸ್ತೀನಿ. ಅದು ಜಾಣತನ. ನಿಂಗೆ ಅಷ್ಟು ಗೊತ್ತಾಗೊಲ್ವೆ! ಆದ್ರೆ ನೀನು…ಜನರಿಗೆ ತಿಳಿಯೋ ಹಾಗೆ ಡೈರೆಕ್ಟಾಗಿ ಶೇಕಡ ನಲವತ್ತು ತಿನ್ತಿದ್ದೀಯ?“ ಎಂದು ಹೋಮ್ ವರ್ಕ್ ಮಾಡದ ವಿದ್ಯಾರ್ಥಿಗೆ ದಂಡಿಸುವಂತೆ ಸಾಮ್ರಾಟ ಬಾಲಬೋಧೆ ಮಾಡಿದ.

ತನ್ನ ಧಾಂಡಿಗ ಐವತ್ತಾರು ಇಂಚಿನೆದೆಯ ದೇಹದ ಮುಂದೆ ಕುಬ್ಜನಾಗಿ, ವಿಷಣ್ಣನಾಗಿ ಹ್ಯಾಪು ಮೋರೆ ಹಾಕಿ ನಿಂತಿದ್ದ ಸಾಮಂತರಾಜನನ್ನು ನೋಡಿ, ಸಮಾಧಾನ ಹೇಳುವಂತೆ “ಆಯಿತು. ಇನ್ನು ಮೇಲೆ ನಿನ್ನ ರಾಜ್ಯಕ್ಕೆ ನಾನು ಪ್ರತಿ ಅಮಾವಾಸ್ಯೆಗೆ ಬರುತ್ತೇನೆ. ಭಕ್ತರನ್ನೆಲ್ಲ ಗುಡ್ಡೆ ಹಾಕು. ಭಜನೆ ಮಾಡಿ ಆ ಜನನಾಯಕನನ್ನು ಮಟ್ಟ ಹಾಕೋಣ” ಎಂದ. ಅಲ್ಲಿಗೆ ನಿಟ್ಟುಸಿರು ಬಿಟ್ಟ ಸಾಮಂತರಾಜ, ಇತ್ತೀಚಿಗಷ್ಟೆ ಭಕ್ತಗಣಗಳು ತನ್ನ ಮಂತ್ರಿಗಳ ಮೇಲೆಯೇ ಎಗರಿ ಬಿದ್ದ ಕೋಪವೂ ಶಮನವಾಗುವುದೆಂದು ಸಂತೋಷಗೊಂಡ.    
 
ಬಂದರು ನಾಡಿಗೆ ಬಂದ ಸಾಮ್ರಾಟ ಆ ಊರನ್ನು ವಿಶ್ವಭೂಪಟದಲ್ಲಿ ಎದ್ದು ಕಾಣುವಂತೆ, ಕೋಟ್ಯಾಂತರ ವರಹಗಳ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆಂದು ಬುರುಡೆ ಬಿಟ್ಟ. ಭಕ್ತಗಣಗಳು ಅದನ್ನು ಕೇಳಿದ್ದೆ ಹುಚ್ಚೆದ್ದು ಉಧೋ ಎಂದವು. ಅಲ್ಲಿಗೆ ತೇಪೆ ಹಾಕಿದ ಕೆಲಸ ಮುಗಿಸಿ ಹೊರಟ ಸಾಮ್ರಾಟ, ಸಾಮಂತರಾಜನ ಕಿವಿಯಲ್ಲಿ “ಎಲ್ಲಾ ಸರಿಹೋಯಿತೆಂದು ಕೊಂಡು ಅರಮನೆಯಲ್ಲೇ ಗೂಟ ಬಡಿದು ಶೇಕಡ ನಲವತ್ತು ಬಂತೇ ಎಂದು ಲೆಕ್ಕಾಚಾರ ಹಾಕುತ್ತ ಕೂಡಬೇಡ. ನಿನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿ. ಜನರ ನಾಡಿ ಬಡಿತ ತಿಳಿಯಲು ಜನರ ಉತ್ಸವವನ್ನು ಮಾಡು. ನಿನಗೆ ಬೊಗಳೆ ಬಿಡೋಕೆ ಬರಲ್ಲ…ಬೊಗಳೆ ಬಿಟ್ರು ವಿರೋಧಿಗಳ ಕೈಯಲ್ಲಿ ಸಿಕ್ಕಕೊತೀಯ. ಯಾಕೆಂದ್ರೆ ನೀನು ಅಸಲಿಗೆ ನಮ್ಮ ಪೂರ್ವಾಶ್ರಮ ಮಾಧವ ಕೃಪಾಕಟಾಕ್ಷ ಕುಟೀರದಲ್ಲಿ ತರಬೇತಿ ಪಡೆದವನಲ್ಲ. ಅದಕ್ಕಾಗಿ ನಮ್ಮ ಅರಮನೆಯಲ್ಲಿ ಒಬ್ಬ ಬಾಯಿಬಡುಕ ಮಂತ್ರಿ ಇದ್ದಾಳೆ. ವಿಸ್ಮೃತಿ ರಾಣೀಂತ. ಅವಳನ್ನು ಕಳಿಸುತ್ತೇನೆ. ಅವಳಿಂದಲಾದರೂ ಬಾಯಿಬಡಿಯುವುದನ್ನು ಕಲಿ” ಎಂದು ಬುಲೆಟ್ ಟ್ರೈನನ್ನು ಹತ್ತಿ ರಾಜಧಾನಿಗೆ ತೆರಳಿದ.  

ಸಾಮಂತರಾಜನಿಗೆ ರಾತ್ರಿಯೆಲ್ಲ ನಿದ್ದೆ ಕಣ್ಣಿಗೆ ಹತ್ತಲಿಲ್ಲ. ಮಾತ್ತೆತ್ತಿದರೆ ಸಾಮ್ರಾಟ ತನ್ನನ್ನು ಆಕ್ಸಿಡೆಂಟಲ್ ಸಾಮಂತರಾಜ,  ಮಾಧವ ಕೃಪಾಕಟಾಕ್ಷ ಕುಟೀರಕ್ಕೆ ಪರಕೀಯ ಎಂದು ಹಂಗಿಸುವುದು ಅಪಮಾನವಾಗಿ ಕಂಡಿತು. ಬಾಯಿಬಡಿಯುವುದನ್ನು ಒಬ್ಬ ಹೆಣ್ಣಿಂದ ಕಲಿಯಬೇಕೆ? ಕನ್ನಡಿಯಲ್ಲಿ ಬಾಯಿ ತೆರೆದು ನಾಲಿಗೆಯನ್ನು ಹೊರಚಾಚಿ ನೋಡಿಕೊಂಡ. ಮೊಂಡಾಗಿದ್ದ ನಾಲಿಗೆ! ಸಾಮ್ರಾಟ ಹೇಳುವುದರಲ್ಲೂ ಅರ್ಥವಿದೆ ಅನಿಸಿತು.
 
ಬೆಳಿಗ್ಗೆ ಎದ್ದವನೇ ರಾಜಭಟರನ್ನು ಕರೆದು ಆಸ್ಥಾನ ದರ್ಜಿಯನ್ನು ಬರಹೇಳಿದ. ಕುಟೀರದಲ್ಲಿ ಎಲ್ಲರೂ ತೊಡುವಂಥ ದೊಗಳೆ ಚಡ್ಡಿಯನ್ನು ತುರ್ತಾಗಿ ಹೊಲೆದು ತರಲು ಆಜ್ಞಾಪಿಸಿದ. ಅವರಸದಲ್ಲಿ ಅಳತೆ ಪಡೆದು ದರ್ಜಿ ಹೊಲೆದುಕೊಂಡು ಬಂದ ಚಡ್ಡಿ ತುಸು ಹೆಚ್ಚೇ ದೊಗಳೆ ಆಗಿತ್ತು. ಗೊಣಗುತ್ತಲೇ ಚಡ್ಡಿಯನ್ನು ತೊಟ್ಟು ಸಾಮಂತರಾಜ ಮಾಧವ ಕೃಪಾಕಟಾಕ್ಷ ಕುಟೀರದ ಕಡೆ ಹೆಜ್ಜೆ ಹಾಕಿದ. ಆದರೆ, ಕುಟೀರದ ಗೇಟಲ್ಲಿ ಕಾವಲು ನಿಂತ ಭಕ್ತಗಣಗಳು ಕೈಯಲ್ಲಿ ಲಾಠಿ ಇಲ್ಲದ್ದಕ್ಕೆ ಅವನಿಗೆ ಪ್ರವೇಶ ನಿರಾಕರಿಸಿದ್ದು ಸಾಮಂತರಾಜನಿಗೆ ಸಿಟ್ಟುಬಂತು. ಸಾಮ್ರಾಟನ ಬುಡವನ್ನೇ ಅಲುಗಾಡಿಸುವ ಸಾಮರ್ಥ್ಯವಿರುವ ಅರ್ಚಕ ಕುಟೀರದಲ್ಲಿರುವಾಗ ತಾನು ಬಾಲ ಬಿಚ್ಚಿ ಪ್ರಯೋಜನವಿಲ್ಲವೆಂದು ಅವನ ಅರಿವಿಗೆ ಬಂತು. ಅಲ್ಲೇ ಇದ್ದ ಮರದ ರೆಂಬೆಯೊಂದನ್ನು ಮುರಿದು, ಅದನ್ನೇ ಲಾಠಿಯಂತೆ ಹಿಡಿದು ಝಳಪಿಸುತ್ತ ಕುಟೀರದ ಒಳ ಹೊಕ್ಕವನಿಗೆ ಆಶ್ಚರ್ಯ ಕಾದಿತ್ತು.  

ಪೂರ್ವಾಶ್ರಮದಲ್ಲಿ ಬೆಳೆದ ತನ್ನ ಮನೆ ಮುರುಕಮಂತ್ರಿಗಳು ಅಲ್ಲಿ ಆಗಲೇ ಸರದಿಯಲ್ಲಿ ನಿಂತಿದ್ದರು. ಕುಟೀರದ ಅರ್ಚಕ ಒಬ್ಬೊಬ್ಬರ ನಾಲಿಗೆಯ ಮೊಂಡನ್ನು ಪರಿಶೀಲಿಸಿ, ತನ್ನ ಕೈಲ್ಲಿದ್ದ ಪವಿತ್ರಗ್ರಂಥವನ್ನು ಉಲ್ಲೇಖಿಸುತ್ತ ಮೊಂಡಾದ ನಾಲಿಗೆಯನ್ನು ಸಾಣೆ ಹಿಡಿದು ಚೂಪು ಮಾಡುತ್ತಿದ್ದ. ಸಾಮಂತರಾಜನ ನಾಲಿಗೆಯನ್ನು ನೋಡಿ “ಇದೇನು ಇಷ್ಟು ಮೊಂಡಾಗಿದೆ. ಒಮ್ಮೆಗೆ ಹರಿತ ಮಾಡುವುದು ಕಷ್ಟ. ಧಮ್ ಇದ್ರೆ…ತಾಕತ್ತಿದ್ರೆ…ಅಂತ ಜಪ ಮಾಡುತ್ತಿರು. ಬೇಗ ಚೂಪಾಗುತ್ತೆ” ಎಂದು ಆರ್ಶೀವದಿಸಿದ.

ಜನರ ಕಲ್ಯಾಣಕ್ಕಾಗಿ ಮಾಡಿರದ ಹಲವು ಯೋಜನೆಗಳ ಬಗ್ಗೆ ಬುರುಡೆ ಬಿಡುವುದಕ್ಕಾಗಿ ಜನ ಸ್ಪಂದನೆ ಎಂಬ ಬೃಹತ್ ಕಾರ್ಯಕ್ರಮವನ್ನು ಸಾಮಂತರಾಜ ಘೋಷಿಸಿದ. ಕಣ್ಣುನೋಟಕ್ಕೂ ಮಿಗಿಲಾದ ವಿಸ್ತಾರದ ಗುಡಾರವನ್ನು ದೊಡ್ಡಮೈದಾನದಲ್ಲಿ ಹಾಕಿಸಿ “ಧಮ್ ಇದ್ರೆ….ತಾಕತ್ತಿದ್ರೆ” ಎಂದು ಜಪ ಮಾಡುತ್ತ ವೇದಿಕೆ ಹತ್ತಿದ. ಮೈಲಿಗಟ್ಟಲೆ ಉದ್ದ ಕುಳಿತು ಕೊಳ್ಳಲು ವ್ಯವಸ್ಥೆ ಇದ್ದರೂ, ಭಕ್ತಗಣಗಳನ್ನು ಬಿಟ್ಟರೆ ಕಡಿಮೆ ಸಂಖ್ಯೆಯಲ್ಲಿ ಜನಸಾಮಾನ್ಯರು ಕಂಡು ನಿರಾಶೆಯಾದರೂ ತೋರ್ಗೊಡದೆ “ಧಮ್ ಇದ್ರೆ….ತಾಕತ್ತಿದ್ರೆ ನನ್ನನ್ನು ಸಿಂಹಾಸನದಿಂದ ಕೆಳಗಿಳಿಸಲಿ” ಎಂದು ಜನನಾಯಕನಿಗೆ ರಣವೀಳ್ಯ ನೀಡಿದ. ಅವನೂ ಸೇರಿದಂತೆ ಅವನ ಮನೆಮುರುಕ ಮಂತ್ರಿಗಳು ಭಾಷಣ ಬೀಗಿಯುತ್ತ ಜನನಾಯಕನ ಮೇಲೆ ಬೈಯ್ಗುಳದ ಮಳೆಗರೆದರು.

ತಮ್ಮ ಉದ್ಧಾರಕ್ಕಾಗಿ ಸಾಮಂತರಾಜ ಮಾಡಲಿರುವ ಜನಸೇವೆಯ ಕಾರ್ಯಕ್ರಮಗಳ ಬಗ್ಗೆ ಮಾತುಗಳು ಕೇಳದೆ, ಬಂದಿದ್ದ ಅಲ್ಪಸ್ವಲ್ಪ ಜನರು ಮೈದಾನದಿಂದ ಕಾಲ್ತೆಗೆದರು. ಈಗ ಇಡೀ ಮೈದಾನ ಖಾಲಿ ಕಂಡು ಒಂದಷ್ಟು ವೇದಿಕೆ ಮುಂದಿದ್ದ ಭಕ್ತಗಣವನ್ನು ಬಿಟ್ಟರೆ ಹಾಕಿದ್ದ ಕುರ್ಚಿಗಳು ನಿದ್ದೆಗೆ ಜಾರಿದ್ದವು.

ಆ ಹೊತ್ತಿಗೆ – ಸಾಮ್ರಾಟನ ಆಜ್ಞೆಯಂತೆ ರಾಜಧಾನಿಯಿಂದ ಬಂದಿದ್ದ ಬಾಯಿಬಡುಕಿ ಮಂತ್ರಿ ವಿಸ್ಮೃತಿರಾಣಿ ಮೈಮೇಲೆ ಅಣ್ಣಮ್ಮದೇವಿ ಬಂದಂತೆ ನಡುಗುತ್ತ, ಆರ್ಭಟಿಸುತ್ತ ವೇದಿಕೆ ಏರಿದಳು. ತನ್ನ ಉದ್ದುದ್ದ ನಾಲಿಗೆಯನ್ನು ಹರಿಯ ಬಿಟ್ಟು ಸಾಮ್ರಾಟನನ್ನು ಜೋಕರ್ ಎಂದು ಆಡಿಕೊಳ್ಳುವ ವಿರೋಧಿಗಳನ್ನು, ಜನನಾಯಕನನ್ನು ಮನಸೋ ಇಚ್ಚೆ ಜರಿದಳು. ಗಂಟಲು ಹರಿಯುವಂತೆ ಕೂಗಿದ ಅವಳ ಭಾಷಣಕ್ಕೆ ವೇದಿಕೆ ಮೇಲಿದ್ದವರು ನಡುಗಿದರೆ, ಮೈದಾನದಲ್ಲಿದ್ದ ಲಕ್ಷಲಕ್ಷ ಕುರ್ಚಿಗಳು ನಿದ್ದೆಯಿಂದ ಎದ್ದು ಕುಳಿತವು.   

ಖಾಲಿ ಕುರ್ಚಿಗಳಿಗೆ ತಮ್ಮ ಭಾಷಣದ ಪ್ರತಾಪವನ್ನು ತೋರುತ್ತಿದ್ದ ಕರುನಾಡಿನ ಸಾಮಂತರಾಜ ಮತ್ತು ಅವನ
ಮನೆ ಮುರುಕಮಂತ್ರಿಗಳ ಕುಣಿದಾಟವನ್ನು ಮಾಯದರ್ಪಣದಲ್ಲಿ ನೋಡುತ್ತಿದ್ದ ಸಾಮ್ರಾಟ ಹಲ್ಲುಕಡಿದ. ಚಡ್ಡಿಗೆಳೆಯ ಅಪರಿಮಿತ ಕುತಂತ್ರಿಯ ಕುಟಿಲತೆಯಿಂದ ಗಳಿಸಿದ್ದ ರಾಜ್ಯವು ಕೈತಪ್ಪಿ ಹೋಗುವ ಭಯ ಅವನಲ್ಲಿ ಸಣ್ಣಗೆ ಮನೆ ಮಾಡಿತು. ಅದೇ ಚಿಂತೆಯಲ್ಲಿರುವಾಗಲೇ ಮಾಯದರ್ಪಣದಲ್ಲಿ ಮೂಡಿದ ದೃಶ್ಯ ಅವನನ್ನು ಮತ್ತೂ ಕಂಗೆಡಿಸಿತು.

ಭರತಖಂಡದ ದಕ್ಷಿಣದ ತುದಿಯಿಂದ ಉತ್ತರಕ್ಕೆ ಸಾವಿರಾರು ಮೈಲು ಕಾಲ್ನಡಿಗೆಯಲ್ಲಿ ನೂರಾರು ಜನರೊಂದಿಗೆ ಹೆಜ್ಜೆ ಹಾಕುತ್ತ, ದಾರಿಯಲ್ಲಿ ಸಿಕ್ಕ ಅತೀ ಸಾಮಾನ್ಯರಿಗೆ ಪ್ರೀತಿಯ ಅಪ್ಪುಗೆ ಹಂಚುತ್ತ ಅಲ್ಲೊಬ್ಬ ಸಾಗುತ್ತಿದ್ದ. ಅವನೊಂದಿಗೆ ಮೆರವಣಿಗೆ ಹೊರಟಿದ್ದ ಜನರು “ದೇಶ ಒಡೆಯಬೇಡಿ….ದೇಶವನ್ನು ಜೋಡಿಸಿ” ಎಂದು ಕೂಗುತ್ತ, ಚಪ್ಪಾಳೆ ತಟ್ಟುತ್ತ ಹರ್ಷದಿಂದ ನಡೆಯುತ್ತಿದ್ದರು. ಅದನ್ನು ನೋಡಿದ ಸಾಮ್ರಾಟನ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು. ಇಷ್ಟು ವರ್ಷ ಧರ್ಮರಕ್ಷಣೆ, ದೇಶಭಕ್ತಿ ಹೆಸರಲ್ಲಿ ಜನರ ನಡುವೆ ಬಿತ್ತಿದ್ದ ವಿಷಬೀಜಗಳು ಮೊಳಕೆಯೊಡೆದು ಚಿಗುರುವ ಹೊತ್ತಲ್ಲಿ ಇವನ್ಯಾರು ಹಚ್ಚಿದ್ದ ಬೆಂಕಿಗೆ ನೀರೆರೆಯುತ್ತಿರುವವನು? ಅವನು ತನ್ನ ಮೊದಲ ವೈರಿಯ ವಂಶದ ಕುಡಿಯೆಂದು ತಿಳಿಯಲು ಸಾಮ್ರಾಟನಿಗೆ ಬಹಳ ಸಮಯ ಹಿಡಿಯಲಿಲ್ಲ. ಕೂಡಲೇ ಬಾಡಿಗೆ ಭಕ್ತಗಣಕ್ಕೆ ಅವನ ಎರಗಲು ಆಜ್ಞಾಪಿಸಿದ.

ಅವನು ಉಟ್ಟ ಬಟ್ಟೆ, ತೊಟ್ಟ ಪಾದರಕ್ಷೆ ವಿದೇಶದ್ದು ಎಂದು ಭಕ್ತಗಣಗಳು ತಮ್ಮ ಹರಿತ ನಾಲಿಗೆಯನ್ನು ಹರಿಯಬಿಟ್ಟವು. ಆದರೆ, ವಿಜ್ಞಾನವೇ ದೇಶದ ಭವಿಷ್ಯವೆಂದು ನಂಬಿ ಅದರಂತೆ ದೇಶವನ್ನು ಕಟ್ಟಿದ ಮಹನೀಯನ ವಂಶದ ಕುಡಿ ಯಾವುದರ ಪರಿವೇ ಇಲ್ಲದೆ ಹಸನ್ಮುಖ ಹೊತ್ತು, ದೇಶವನ್ನು ಜೋಡಿಸುವ ಆಸೆ ಹೊತ್ತ ದೃಢ ಮನಸ್ಸುಗಳೊಂದಿಗೆ ದಿಟ್ಟ ಹೆಜ್ಜೆ ಹಾಕಿತು.

ಚಂದ್ರಪ್ರಭ ಕಠಾರಿ   
cpkatari@yahoo.com

© Copyright 2022, All Rights Reserved Kannada One News