ದೇವರ ಭಜನೆ ಮಕ್ಕಳ ಅಪೌಷ್ಟಿಕತೆ ನಿವಾರಣೆ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ದೇವರ ಭಜನೆ ಮಕ್ಕಳ ಅಪೌಷ್ಟಿಕತೆ ನಿವಾರಣೆ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 06.09.2022

ಭರತಖಂಡದ ಸಾಮ್ರಾಟನ ಭಕ್ತರ ಮನೆಗಳಲ್ಲಿ ದಿನ ಬೆಳಗಾದರೆ ಮಡಿಯುಟ್ಟು, ಸಾಮ್ರಾಟನ ಪಟಕ್ಕೆ ಕುಂಕುಮ ಹಚ್ಚಿ, ಹೂಹಾರ ಹಾಕಿ, ಮಂಗಳಾರತಿ ಎತ್ತಿ ಪೂಜೆ ಮಾಡಿ, ಸಾಮ್ರಾಟ ಚಿರಂಜೀವಿಯಾಗಲೆಂದು ಜೈಕಾರ ಕೂಗಿ ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ಹಂಚುವುದು. ನಂತರ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗಲೂ ಸಾಮ್ರಾಟನ ಗುಣಗಾನ ಮಾಡುತ್ತ ದಿನದೂಡುವುದು ನಾಡಿನ ಪ್ರಜೆಗಳಿಗೆಲ್ಲ ತಿಳಿದದ್ದೇ. ಆದರೆ, ಇತ್ತೀಚಿಗೆ ಹೊಸ ಬೆಳವಣಿಗೆಯೆಂಬಂತೆ ಮೂರು ಹೊತ್ತು ಭಕ್ತಗಣಗಳು ಪಾಳಿಯಾಗಿ ಲೌಡ್ ಸ್ಪೀಕರ್ ಹಾಕಿ ಮನೆಯಲ್ಲಿ ಭಜನೆ ಮಾಡುವುದು ಎಲ್ಲೆಡೆ ಕಂಡು ಬಂದ ಸಾಮಾನ್ಯ ದೃಶ್ಯವಾಗಿತ್ತು. ಭಕ್ತ -  ಸಹೋದ್ಯೋಗಿಗಳಿಂದ, ಸಹಪಾಠಿಗಳಿಂದ, ಸಂಬಂಧಿಕರಿಂದ, ಗೆಳೆಯರಿಂದ ದಿನಾಲೂ ಬೇಡವೆಂದರೂ ಸಾಮ್ರಾಟರ ಸಾಹಸ ಯಶೋಗಾಥೆಯನ್ನು ಕಿವಿಗೆ ಬೈರಿಗೆಯಿಂದ ಕೊರೆಸಿಕೊಳ್ಳುವುದೇ ಜನರಿಗೆ ಸಂಕಷ್ಟವಾಗಿತ್ತು. ಅಂಥದ್ದರಲ್ಲಿ ಹೊಸ ಭಜನೆ ಪ್ರಹಸನ, ಇತ್ತ ಕ್ಯಾಕರಿಸಿ ಉಗುಳಲು ಆಗದ ಅತ್ತ ನುಂಗಲು ಆಗದ ಸಂದರ್ಭ ಸೃಷ್ಟಿಯಾಗಿ ಜನಸಾಮಾನ್ಯರು ಅದನ್ನು ಅನುಭವಿಸದೇ ಬೇರೆ ದಾರಿಯಿರಲಿಲ್ಲ.

ಆದದ್ದೇನೆಂದರೆ….ಆ ದಿನ ಸಾಮ್ರಾಟ ಇತೀಚಿಗಷ್ಟೆ ನೋಡಿದ ಹಳೆಯ ಹಿಂದಿ ಸಿನಿಮಾವನ್ನು ಮೆಲುಕು ಹಾಕುತ್ತ, ಚಿತ್ರದಲ್ಲಿನ  ಖಳನಾಯಕನ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡು ಅದೇ ಗುಂಗಿನಲ್ಲಿದ್ದ. ಬಾಲ್ಯದಲ್ಲಿಯೇ ಮೊಸಳೆಯನ್ನು ಹಿಡಿದು ಮನೆಗೆ ತಂದ ತನ್ನ ಸಾಹಸ, ಮನೋಸ್ಥೈರ್ಯದ ಕುರುಹಾಗಿ ಮಾಡಿಸಿದ್ದ ಚಿನ್ನದ ಮೊಸಳೆಯನ್ನು ಸವರುತ್ತ, ಚಿತ್ರದಲ್ಲಿ ಖಳನಾಯಕ ಹೇಳುವಂತೆ ಆಗಾಗ್ಗೆ ‘ಮೊಗ್ಯಾಮ್ಬೊ ಖುಷ್ ಹುವಾ’ ಎಂದು ಕೂಗುತ್ತ ಗಹಗಹಿಸಿ ನಗುತ್ತಿದ್ದ. ಮೊಗ್ಯಾಮ್ಬೊ ಪಾತ್ರ ತನ್ನಂತೆ ಇದೆಯೆಂದು ಅವನಿಗೆ ಬಹಳ ಖುಷಿಯಾಗಿತ್ತು. ಅರಮನೆಯ ಸಿಬ್ಬಂದಿ, ಮನೆ ಮುರುಕ ಮಂತ್ರಿಗಳಿಗೆ ಸಾಮ್ರಾಟನ ಈ ನಡೆ ವಿಚಿತ್ರವಾಗಿ ಕಂಡರೂ ಉಸಿರೆತ್ತದೆ ‘ವಾವ್…ಅದ್ಭುತವಾಗಿ ಥೇಟ್ ಮೊಗ್ಯಾಮ್ಬೊನಂತೆ ಕಾಣುತ್ತಿದ್ದೀರಿ…ಮಹಾಸ್ವಾಮಿ’ ಎಂದು ತಾರೀಫು ಮಾಡುತ್ತಿದ್ದರು.  

ಆ ಹೊತ್ತಿಗೆ ಅಲ್ಲಿಗೆ ಬಂದ ತನ್ನ ಅಚ್ಚುಮೆಚ್ಚಿನ ಪತ್ರಕರ್ತ ಬಕೆಟ್ ಸ್ವಾಮಿ “ಸಾಮ್ರಾಟರಿಗೆ ಜಯವಾಗಲಿ… ಮಹಾಸ್ವಾಮಿಗಳೆ… ನಿಮಗೊಂದು ಸಂತೋಷದ ಸುದ್ಧಿ” ಎಂದ. ಬಕೆಟ್ ಸ್ವಾಮಿ ಅವಕಾಶ ಸಿಕ್ಕಾಗೆಲ್ಲ ತನಗೆ ಮಸ್ಕಾ ಹೊಡೆಯಲು ತುದಿಗಾಲಲ್ಲಿ ನಿಂತಿರುವವನೆಂದು ತಿಳಿದಿರುವ ಸಾಮ್ರಾಟ ಹೆಚ್ಚು ಉತ್ತೇಜಿತನಾಗದೆ “ಏನು ವಿಷಯ?” ಎಂಬಂತೆ ಹಣೆಯಲ್ಲಿ ಗೆರೆ ಮೂಡಿಸಿದ.
“ಮಹಾಸ್ವಾಮಿಗಳೇ ಈಗಷ್ಟೇ ಬಂದ ಬಿಸಿಬಿಸಿ ಸುದ್ಧಿ. ಜಾಗತಿಕ ಹಸಿವು ಸೂಚ್ಯಂಕದ ವರದಿ ಈಗಷ್ಟೇ ಬಿಡುಗಡೆಯಾಗಿದೆ. ಅದರಲ್ಲಿ ನಮ್ಮ ದೇಶ ಒಟ್ಟು ೧೧೬ ಅಂಕಗಳಲ್ಲಿ ೧೦೧ ಅಂಕ ಪಡೆದಿದೆ. ಅಂಕಗಳು ಪಕ್ಕದ ವೈರಿ ದೇಶಗಳಿಗಿಂತ ಹೆಚ್ಚಿದೆ” ಎಂದ.  

ಸಾಮ್ರಾಟ ತಟ್ಟನೆ ಎದ್ದು ನಿಂತು “ಹೌದಾ!...ಜನರು ದೇಶದಲ್ಲಿ ಹಸಿವೆಯಿಂದ ಸಾಯುತ್ತಿದ್ದಾರೆ ಎಂದು ಸುಳ್ಳೇ ಬೊಬ್ಬೆ ಹೊಡೆಯುವ ವಿರೋಧಿಗಳ ಬಾಯಿ ಮುಚ್ಚಿಸಲು ಇದು ತಕ್ಕ ಉತ್ತರ. ನಮಗೆ ಬಹಳ ಸಂತೋಷವಾಗಿದೆ” ಎಂದು ಕೊರಳಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದ. ಬಕೆಟ್ ಸ್ವಾಮಿ ಜೊಲ್ಲು ಸುರಿಸುತ್ತ ಕಂಠೀಹಾರವನ್ನು ಕ್ಯಾಚ್ ಹಿಡಿದ.

ಅಷ್ಟರಲ್ಲಿ ಅಲ್ಲಿಗೆ ಬಂದ ಸಾಮ್ರಾಟನ ಚಡ್ಡಿದೋಸ್ತ್ ಅಪರಿಮಿತ ಕುತಂತ್ರಿ “ಸುದ್ದಿಯನ್ನು ಸರಿಯಾಗಿ ಓದಿದ್ಯೇನಯ್ಯ? ಕೊಡಯ್ಯ ಇಲ್ಲಿ ಕಂಠೀಹಾರನ….” ಎಂದು ಸಿಟ್ಟಿನಿಂದ ಬಕೆಟ್ ಸ್ವಾಮಿಯ ಕೈಲಿದ್ದ ಹಾರವನ್ನು ಕಸಿದ.  
 
“ಸಾಮ್ರಾಟರೇ…ಇದು ಕೆಟ್ಟಸುದ್ದಿ. ಬಕೆಟ್ ಸ್ವಾಮಿ ಹೇಳಿದಂತೆ ೧೦೧ ಗಳಿಸಿರುವ ಅಂಕವಲ್ಲ. ಅದು ರ್ಯಾಕಿಂಗ್. ಅಂದ್ರೆ ೧೧೬ ದೇಶಗಳಲ್ಲಿ ನಮ್ಮ ದೇಶ ೧೦೧ ಸ್ಥಾನದಲ್ಲಿದೆ. ನಮ್ಮ ಎನಿಮಿ ದೇಶಗಳು ನಮಗಿಂತ ಒಳ್ಳೆಯ ರ್ಯಾಕಿಂಗ್ ಪಡೆದಿವೆ. ಅಲ್ಲದೆ ನಮ್ಮ ಶಾಲಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂಬ ವರದಿ ಬೇರೆ ಬಂದಿದೆ” ಎಂದು ಅಪರಿಮಿತ ಕುತಂತ್ರಿ ಹೇಳಿದ್ದೆ, ಸಾಮ್ರಾಟನ ಕೋಪ ನೆತ್ತಿಗೇರಿತು. “ಇದೆಲ್ಲ ವಿರೋಧಿಗಳದ್ದೇ ಕೈವಾಡ. ಸುಳ್ಳು ಸುಳ್ಳೇ ವರದಿಯನ್ನು ಕೊಟ್ಟಿದ್ದಾರೆ” ಎಂದು ಹಲ್ಲುಕಡಿದ.  

ಕೈಗೆ ಬಂದಿದ್ದ ಕಂಠೀಹಾರವನ್ನು ಕಳೆದುಕೊಂಡು ನಿರಾಶನಾಗಿದ್ದ ಬಕೆಟ್ ಸ್ವಾಮಿ, ಸಾಮ್ರಾಟನನ್ನು ಮೆಚ್ಚಿಸಲು “ಮಕ್ಕಳಿಗೆ ಮೊಟ್ಟೆ ಹಂಚಿದರೆ ಹೇಗೆ?” ಎಂದ. ಅದಕ್ಕೆ ಸಾಮ್ರಾಟ “ಕೂಡದು….ಅದು ಸಾತ್ವಿಕ ಆಹಾರವಲ್ಲ. ಕರುನಾಡಿನ ನಮ್ಮ ಸಾಮಂತರಾಜ ಮೊಟ್ಟೆ ಬದಲಿಗೆ ಕಡಲೇ ಬರ್ಫಿಯನ್ನು ಹಂಚುತ್ತಿರುವುದು ನಿಂಗೆ ಗೊತ್ತಿಲ್ಲವೇ?” ಎಂದದ್ದು, ಬಕೆಟ್ ಸ್ವಾಮಿಗೆ  ಮುಖಭಂಗವಾಯಿತು.

“ವರದಿಯಲ್ಲಿ ವೈರಿಗಳ ಕೈವಾಡ ಇರಬಹುದು. ಅದನೇ ಇರಲಿ. ನಾವು ಇದಕ್ಕೆ ಉಪಾಯ ಹುಡುಕಬೇಕು. ಇಲ್ಲದಿದ್ರೆ ಈ ಸುದ್ಧಿ ವಿರೋಧಿಗಳಿಗೆ ಚಪ್ಪರಿಸಲು ಉಪ್ಪಿನಕಾಯಿ ಆಗುತ್ತದೆ” ಎಂದು ತಲೆಯನ್ನು ಕೆರೆಯುತ್ತ ಅಪರಿಮಿತ ಕುತಂತ್ರಿ ಚಿಂತಿಸತೊಡಗಿದ. ಸಾಮ್ರಾಟ ತನ್ನ ಚಡ್ಡಿದೋಸ್ತ್ ಖಿನ್ನತೆಗೆ ಒಳಗಾಗಿದ್ದನ್ನು ನೋಡಿ “ಚಿಂತೆ ಬೇಡ…ಗೆಳೆಯ. ಎಲ್ಲಿಯವರೆಗೂ ನಮ್ಮಲ್ಲಿ ಭಕ್ತಿ ಎಂಬ ಅಸ್ತ್ರ ಇರುತ್ತದೊ ಅಲ್ಲಿಯವರೆಗೂ ಅಸಾಧ್ಯವೆನ್ನುವ ಮಾತೇ ಇಲ್ಲ. ಈ ಕೂಡಲೇ ಡಂಗುರ ಹೊಡೆಸು. ನಾಡಿನ ಸಮಸ್ತ ಜನರು ಮುಖ್ಯವಾಗಿ ನಮ್ಮ ಭಕ್ತಗಣಗಳು ನಿರಂತರ ದೇವರ ಭಜನೆಯನ್ನು ಮಾಡಲಿ. ಅದರಿಂದ ಅಪೌಷ್ಟಿಕತೆ ನಿವಾರಣೆ ಆಗುತ್ತದೆ” ಎಂದು ಅಜ್ಞೆ ಮಾಡಿದ.

“ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಎಲ್ಲರೂ ತಾಳಮದ್ದಲೆ ಸಮೇತ ದೇವರ ಭಜನೆ ಮಾಡಬೇಕು. ಇದು ಸಾಮ್ರಾಟರ ಕಟ್ಟಾಜ್ಞೆ” ಎಂದು ತಮಟೆ ಬಡಿಯುತ್ತ ಡಂಗುರ ಸಾಗುತ್ತಿದ್ದನ್ನು ಬೀದಿ ಬಡಮಕ್ಕಳು ತಮಾಷೆಯಿಂದ ನೋಡುತ್ತಿದ್ದರೆ, ಭಕ್ತಗಣಗಳು ಆಗಲೇ ಭಜನೆಯನ್ನು  ಶುರುಮಾಡಿದ್ದರು. ಇವೆಲ್ಲ ಆವಾಂತರವನ್ನು ನೋಡುತ್ತಿದ್ದ ಶಿಕ್ಷಕರು, ಪ್ರಜ್ಞಾವಂತ ನಾಗರೀಕರು, ವೈದ್ಯರು ಗುಟ್ಟಾಗಿ ಹಣೆ ಚಚ್ಚಿಕೊಂಡು ಬಾಯಿಗೆ ಬೀಗ ಜಡಿದುಕೊಂಡರು.

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News