ಬಿಲ್ಕಿಸ್ ಬಾನು ನಿಮ್ಮ ಮನೆ ಮಗಳಾಗಿದ್ದರೇ...:ಶಿವಸುಂದರ್ ಅವರ ಕವಿತೆ

ಬಿಲ್ಕಿಸ್ ಬಾನು ನಿಮ್ಮ ಮನೆ ಮಗಳಾಗಿದ್ದರೇ...:ಶಿವಸುಂದರ್ ಅವರ ಕವಿತೆ

Updated : 29.08.2022

ಅಂದ ಹಾಗೆ ಸಜ್ಜನರೆ ..
ಬಿಲ್ಕಿಸ್ ಬಾನು ನಿಮ್ಮ ಮಗಳಾಗಿದ್ದಾರೆ

ಅತ್ಯಾಚಾರ ಮಾಡಿದವರನ್ನು
ಹಸುಗೂಸನ್ನು ಕೊಂದವರನ್ನೂ
ನಿಮ್ಮ ಮನೆಯೊಳಗೇ ಕರೆದು
ರಾಷ್ಟ್ರವೀರರೆಂದು  ಸತ್ಕರಿಸುತ್ತಿದ್ದಿರಾ? ..

ಅಂದಹಾಗೆ ಧರ್ಮಭೀರುಗಳೇ..

ಪರದೈವವನ್ನಲ್ಲದೆ
ನಿಮ್ಮ ಮನೆದೇವರನ್ನು
ನೆಲಸಮಮಾಡಿದವರನ್ನು

ಧರ್ಮರಕ್ಷಕರೆಂದು ಗೌರವಿಸುತ್ತಿದ್ದಿರಾ..?

ಪರಮಾತ್ಮನ ನೆನೆದು
ತಿನ್ನುವ ಪ್ರಸಾದವನ್ನು

ಪಾಪವೆನ್ನುವ ಕಾನೂನನ್ನು
ಪಾಲಿಸುತ್ತಿದ್ದಿರಾ ?

ಅಯ್ಯಾ,

ಮನಸ್ಸಾಕ್ಷಿಯಿರುವ
ಮನುಷ್ಯರಾಗಿದ್ದರೆ
ನಿಜಹೇಳಿ...

ಕಷ್ಟಸುಖ ಹಂಚಿಕೊಂಡವರೇ
ಕಳ್ಳುಬಳ್ಳಿ ಕಡಿದುಕೊಂಡು
ಕತ್ತಿಹಿಡಿದು ನಿಂತುಬಿಟ್ಟರೆ...

ದೇಶಕ್ಕೇದೇಶವೇ...

ಇಪ್ಪತ್ತು ನಾಲಕ್ಕು ಗಂಟೆ
ನಿಮ್ಮ ಊಟ, ನಿಮ್ಮ ನೋಟ,
ನಿಮ್ಮ ಪೂಜೆಪಾಠ ಗಳನ್ನೂ..
ಪರಿಶೀಲಿಸುವ
ಪೊಲೀಸ್ ಠಾಣೆಯಾಗಿಬಿಟ್ಟರೆ ....

ಪ್ರತಿದಿನ ಪ್ರತಿಕ್ಷಣ    
ಅನುಮಾನಿಸುತ್ತಾ , ಅವಮಾನಿಸುತ್ತಾ ..

ನೀವು ತಿನ್ನುವ ಅನ್ನವನ್ನು,
ನಿಮ್ಮ  ಅಂಗಡಿಯನ್ನು,
ಗುಡಿಸಲನ್ನು, ಗುಡಿಯನ್ನು
ಮಾನವನ್ನು, ಪ್ರಾಣವನ್ನು ..
ಬೀದಿಬೀದಿಯಲ್ಲಿ ಹರಾಜುಹಾಕಿಬಿಟ್ಟರೆ...

ನಿಮ್ಮ ಆಕ್ರಂದನಗಳು ಜೋಗುಳದಂತೆ
ಕೇಳಿಸುತ್ತಿದ್ದರೆ...

ಕೊಲೆಗಾರರನ್ನು
ಸನ್ಮಾನಿಸುತ್ತಾ...

ಕೊಂದಶವಗಳನ್ನೂ ಕೂಡ  ಕಟಕಟೆಯಲ್ಲಿ
ನಿಲ್ಲಿಸುತ್ತಿದ್ದರೆ ..

ನೀವು ಏನು ಮಾಡುತ್ತಿದ್ದಿರಿ?

ನಿಜ ಹೇಳಿ

ನೀವು ಏನು ಮಾಡುತ್ತಿದ್ದಿರಿ ?

- ಶಿವಸುಂದರ್

© Copyright 2022, All Rights Reserved Kannada One News