ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 27.09.2022

ಮುಂಜಾವಿನ ಬೆಳಕಿನ್ನೂ ಹರಿದಿರಲಿಲ್ಲ. ಸಾಮ್ರಾಟನಂತೆ ತಾನೂ ದಿನದ ಹದಿನೆಂಟು ತಾಸು ದುಡಿದು ಪ್ರಖ್ಯಾತನಾಗಬೇಕೆಂದು ಕರುನಾಡ ಸಾಮಂತರಾಜ ಅಂತಃಪುರದಲ್ಲಿ ನಿದ್ದೆಯಿಂದ ಎದ್ದು ಕೂತಿದ್ದ. ಆದರೆ - ಮಾಡುವುದು ಏನೆಂದು ತೋಚದೆ ಆಕಳಿಸುತ್ತಲಿದ್ದ. ಅಷ್ಟೊತ್ತಿಗೆ ಯಾರೋ ಬಾಗಿಲ ಬಡಿದಂತಾಗಿ, ನೋಡಿದರೆ ಗೂಢಚಾರ ತಲೆತಗ್ಗಿಸಿ ಹೊರಗೆ ನಿಂತಿದ್ದ. ಸುದ್ಧಿ ಏನೆಂದು ಕೇಳಲು, ಗೂಢಚಾರ ಕಿವಿಯಲ್ಲಿ ಪಿಸುಗುಟ್ಟಿ, ಸಾಮಂತರಾಜನ ಪ್ರತಿಕ್ರಿಯೆಗೆ ಅಲ್ಲೇ ನಿಂತರೆ ಕಪಾಳಮೋಕ್ಷ ಆದೀತೆಂದು ಕೂಡಲೇ ಅಲ್ಲಿಂದ ಹೊರಟು ಹೋದ. ಇತ್ತ ಸಾಮ್ರಾಟ ವಿಷಣ್ಣನಾಗಿ ಪಲ್ಲಂಗದ ಮೇಲೆ ಕುಸಿದು ಕುಳಿತ. ಗೂಢಚಾರ ಕಿವಿಯಲ್ಲಿ ಪಿಸುಗುಟ್ಟಿದ ಮಾತುಗಳು, ಅಲೆಅಲೆಯಾಗಿ ಕೋಣೆಯ ಗೋಡೆಗಳಿಗೆ ಬಡಿದು ಪ್ರತಿಧ್ವನಿಸಿದವು. ಕೇಳಲಾರದೆ ಕಿವಿ ಮುಚ್ಚಿಕೊಂಡ.

“ಯಾರಲ್ಲಿ….ಸೇನಾಪತಿಯನ್ನು ಬರ ಹೇಳಿ“ ಎಂದ ಸಾಮಂತರಾಜನ ಅರಚಾಟಕ್ಕೆ ಬೆದರಿದ ರಾಜಭಟ ಓಡಿ ಹೋಗಿ ಸೇನಾಪತಿಯನ್ನು ಕರೆತಂದ. “ವಿರೋಧಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರೆ ನೀವುಗಳು ಕಡ್ಲೇಕಾಯಿ ತಿಂತಿದ್ದೀರಾ?” ಎಂದು ತರಾಟೆಗೆ ತೆಗೆದುಕೊಂಡ. ಕಾರಣ ಏನೆಂದು ತಿಳಿಯದೆ ಸೇನಾಪತಿ “ಮಹಾರಾಜರು…ವಿಷಯ ಏನೆಂದು..?” ಎಂದು ಬಾಯ್ತೆರೆಯುವಷ್ಟರಲ್ಲಿ ಸಾಮಂತರಾಜ ಒಂದೇ ಸಮನೆ ಮಕ್ಕಳಂತೆ ಅಳಲು ಪ್ರಾರಂಭಿಸಿದ. ‘ಅಯ್ಯೋ!’ ಎಂದು ಕೂಗುತ್ತ ಜೋರಾಗಿ ರೋಧಿಸುವುದು ಊಳಿಟ್ಟಂತೆ ಕೇಳಿ ಬರುತ್ತಿತ್ತು.

ಅಷ್ಟೊತ್ತಿಗೆ ತನ್ನ ಮೂವತ್ತೆರಡು ಹಲ್ಲುಗಳನ್ನು ಪ್ರದರ್ಶಿಸುತ್ತ ಅಲ್ಲಿಗೆ ಬಂದ ಭಕ್ತಗಣದ ಅಧ್ಯಕ್ಷ ಕುಟಿಲ ಪಳೀನ್ ಕುಮಾರ “ಏನಾಯಿತು? ಮಹಾಸ್ವಾಮಿಗಳು ಹಾಗೇಕೆ ಊಳಿಡುತ್ತಿದ್ದಾರೆ. ಅವರಿಗೆ ಹುಚ್ಚುನಾಯಿ ಏನಾದರೂ ಕಡಿಯಿತೇ?” ಎಂದ. ಸೇನಾಪತಿ ಗೊತ್ತಿಲ್ಲವೆಂಬಂತೆ ತಲೆಯಾಡಿಸಿ “ರಾತ್ರಿ ಮಾರುವೇಷದಲ್ಲಿ ಸಂಚರಿಸುತ್ತಿದ್ದಾಗ ಹುಚ್ಚುನಾಯಿ ಕಚ್ಚಿರುವ ಸಾಧ್ಯತೆ ಇದೆ. ಒಬ್ಬಂಟಿಯಾಗಿ ಹೋಗಬೇಡಿ ಎಂದು ಎಷ್ಟು ಸರ್ತಿ ಹೇಳಿದರೂ ನಮ್ಮ ಮಾತನ್ನು ಕೇಳುವುದಿಲ್ಲ” ಎಂದ. ಇವರ ಮಾತು ಸಾಮಂತರಾಜನ ಕಿವಿಗೆ ಬಿದ್ದು, ಅಳುವುದನ್ನು ನಿಲ್ಲಿಸಿ “ಅಯ್ಯೋ…ಕರುನಾಡಿನ ಮಾನ ಮಾರ್ಯಾದೆ ಬೀದೀಲಿ ಹರಾಜು ಆಗುತ್ತಿದೆ. ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?” ಎಂದು ಮತ್ತೆ ಅಳೋದಿಕ್ಕೆ ಆರಂಭಿಸಿದ.

ತನಿಖೆ ಮಾಡಲಾಗಿ ಸಾಮಂತರಾಜನ ಗೋಳಿಗೆ ಕಾರಣ ತಿಳಿದು ಬಂತು. ಹೇಗೊ ಭಕ್ತಗಣಗಳು ತನ್ನ ಬೆನ್ನಿಗಿದ್ದಾರೆಂಬ ಹುಚ್ಚುಧೈರ್ಯದಿಂದ ಸಾಮಂತರಾಜ ಮತ್ತು ಅವನ ಮಂತ್ರಿಮಂಡಲದ ಮನೆ ಮುರುಕ ಮಂತ್ರಿಗಳು ವರ್ತಕರಿಂದ, ಗುತ್ತಿಗೆದಾರರಿಂದ, ಆಯಕಟ್ಟಿನ ಜಾಗಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡುವುದರಿಂದ…ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲಲ್ಲಿ ಶೇಕಡ ನಲವತ್ತು ಸ್ಟ್ಯಾಂಡರ್ಡ್ ರೇಟು ನಿಗದಿ ಪಡಿಸಿ ಲಂಚವನ್ನು ಎಗ್ಗಿಲ್ಲದೆ ಮೇಯುತ್ತಿದ್ದರು. ಆ ಬಗ್ಗೆ ನೊಂದವರು ದೂರು ಕೊಟ್ಟರೂ ಕ್ಯಾರೇ ಅನ್ನದೇ ಲಂಚವನ್ನು ಸಿಕ್ಕಸಿಕ್ಕಲ್ಲಿ ಬಾಚುವುದು ನಿರಂತರ ಸಾಗಿ ರೋಸೆದ್ದ ಜನರು ಬೀದಿ, ಗಲ್ಲಿಯ ಗೋಡೆಯ ಮೇಲೆಲ್ಲ ಸಾಮಂತರಾಜನ ಭಾವಚಿತ್ರವನ್ನು ಬಿಡಿಸಿ ‘ಭ್ರಷ್ಟ ಗುರು ಸಾಮ್ರಾಟ – ಶಿಷ್ಯ ಸಾಮಂತರಾಜ ಲಂಚಕೋರ” ಎಂದು ರಾತ್ರೋರಾತ್ರಿ ಬರೆದದ್ದು, ಸಾಮಂತರಾಜನಿಗೆ ಮುಖಕ್ಕೆ ಮಸಿ ಬಳಿದಂತಾಗಿತ್ತು.

“ಹೊಟ್ಟೆ ಬಿರಿಯೋ ಹಾಗೆ ಲಂಚದ ಹೇಸಿಗೆ ತಿಂತಿರೋದು ಇವರುಗಳು…ಹೇಳ್ತಿರೋದು ನಾಡಿಗೆ ಅವಮಾನ ಆಗ್ತಿದೆಯಂತ…ಎಂಥಾ ಮೂರು ಬಿಟ್ಟ ಜನಗಳು” ಎಂದು ಗೊಣಗಿಕೊಂಡ ಸೇನಾಪತಿ, ಕೂಡಲೇ ಗೋಡೆ ಬರಹಗಾರರನ್ನು ಶೀಘ್ರ ಬಂಧಿಸುವಂತೆ ಆಜ್ಞಾಪಿಸಿದ. ಆದರೆ ಜನರನ್ನು ಬಂಧಿಸಿದಷ್ಟು ಗೋಡೆ ಬರಹಗಳ ಅಭಿಯಾನ ನಿಲ್ಲದೆ ಮತ್ತೂ ವ್ಯಾಪಕವಾಗಿ ಸಾಗಿತು.

ಇದು ಕರುನಾಡಿನ ಕತೆಯಾದರೆ, ಅತ್ತ ಭರತಖಂಡದ ರಾಜಧಾನಿಯಲ್ಲಿ ಒಂದಷ್ಟು ಬೆಳವಣಿಗೆಗಳು ಆದವು.

ಬೆಲೆ ಏರಿಕೆ, ನಿರುದ್ಯೋಗ, ಹಸಿವು, ಅತ್ಯಾಚಾರ, ಕೋಮು ಗಲಭೆಗಳಿಂದ ಜನರು ಜರ್ಜರಿತರಾಗಿ ಬದುಕಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದರು. ಅದನ್ನು ಕಂಡು ಮರುಗಿದ ಸಾಮ್ರಾಟ ದೇಶದಲ್ಲಿ ಶಾಂತಿ, ನೆಮ್ಮದಿಯನ್ನು ಸ್ಥಾಪಿಸುವ ಸಲುವಾಗಿ  ಹಿಮಾಲಯದ ಗುಹೆಯೊಂದರಲ್ಲಿ ತಪಸ್ಸು ಮಾಡಬೇಕೆಂದು ನಿರ್ಧರಿಸಿದ. ಕಾವಿ ವಸ್ತ್ರಧಾರಿಯಾಗಿ, ಹಣೆಗೆ ಢಾಳಾಗಿ ಕಾಣುವಂತೆ ಕುಂಕುಮ ಹಚ್ಚಿ, ವಿಭೂತಿ ಪಟ್ಟೆ ಎಳೆದು ರಥವನ್ನೇರಿ ಕುಳಿತ. ಸಾರಥಿ ಹೊರಡಲು ಅನುವಾದರೆ “ಸ್ವಲ್ಪ…ತಾಳು” ಎಂದು ಸನ್ನೆ ಮಾಡುತ್ತಿದ್ದ. ದೂರದಲ್ಲಿ ತನ್ನ ನೆಚ್ಚಿನ ಸುದ್ಧಿಗಾರರಾದ ಬಕೆಟ್ ಸ್ವಾಮಿ, ತುತ್ತೂರಿ ಕುಮಾರಿ ಕ್ಯಾಮೆರಾಗಳನ್ನೊತ್ತು ತನ್ನ ಹಿಂಬಾಲಿಸುವುದ ಕಂಡು ಸಾರಥಿಗೆ ಹೊರಡಲು ಹೇಳಿದ.  
ಹಿಮಾಲಯದಲ್ಲಿ ಗುಹೆಯೊಂದನ್ನು ಆಯ್ಕೆ ಮಾಡಿ ತಪಸ್ಸಿಗೆ ಕೂಡಬೇಕು ಎನ್ನುವಷ್ಟರಲ್ಲಿ ಒಳಗಿಂದ ಬಂದ ಕಾಡುಪ್ರಾಣಿಯ ಗುಟುರಿಗೆ ಹೆದರಿ, ಎದ್ದು ಬಿದ್ದು ಆಚೆಗೆ ಸಾಮ್ರಾಟ ಓಡಿ ಬಂದ. ಮೈಯೆಲ್ಲ ಬೆವತು ಉಸಿರು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತ್ತು.

“ಮಹಾಸ್ವಾಮಿಗಳು ತಪ್ಪಾಗಿ ಭಾವಿಸಬಾರದು. ತಪಸ್ಸಿಗೆ ತಾವು ಎಲ್ಲಿ ಕೂತರೂ ಭಕ್ತರು ಅದನ್ನೇ ಗುಹೆಯೆಂದು ನಂಬುತ್ತಾರೆ. ಅದಕ್ಕಾಗಿ ಇಷ್ಟು ದೂರ ಬರಬೇಕಿರಲಿಲ್ಲ. ನಮ್ಮ ಸ್ಟುಡಿಯೊದಲ್ಲೇ ಗುಹೆಯ ಸೆಟ್ ಹಾಕಿಸಿ ಬಿಡುತ್ತಿದ್ದೆ. ಇರಲಿ…ಇಲ್ಲಿ ಬನ್ನಿ…ಹಾಗೆ ಸಮಾಧಿ ಸ್ಥಿತಿಯಲ್ಲಿ ಒಂದು ಪೋಸ್ ಕೊಡಿ” ಎಂದು ಅಲ್ಲೇ ಬಂಡೆಗಳ ಮಧ್ಯೆ ಇದ್ದ ಪೊಟರೆಯೊಂದನ್ನು ತೋರಿದ.

ದೇಶವಾಸಿಗಳ ನೆಮ್ಮದಿ, ಉತ್ಸಾಹಕ್ಕಾಗಿ ಸಾಮ್ರಾಟರು ಗುಹೆಯಲ್ಲಿ ತಪಸ್ಸು ಮಾಡುತ್ತಿರುವ ಸುದ್ಧಿ ಎಲ್ಲೆಲ್ಲೂ ಬಿತ್ತರವಾಯಿತು. ಭಕ್ತಗಣಗಳು ಸುದ್ಧಿ ಪತ್ರಿಕೆಗಳಲ್ಲಿ ಅದನ್ನು ನೋಡಿ ಕಣ್ಣಿಗೆ ಒತ್ತಿಕೊಂಡರೆ ಹೊರತು, ಜನರಲ್ಲಿ ಉತ್ಸಾಹ ಉಕ್ಕಲಿಲ್ಲ. ತನ್ನ ಸಲಹೆಯನ್ನು ಕೇಳದೆ ಯಾವುದೊಂದು ಊರ್ಜಿತವಾಗದು ಎಂದು ಸಾಮ್ರಾಟನ ಚಡ್ಡಿದೋಸ್ತ್ ಅಪರಿಮಿತ ಕುತಂತ್ರಿ ಕುಹಕ ನಗೆ ಬೀರುತ್ತ “ಅದಕ್ಯಾಕೆ ಅಷ್ಟೊಂದು ಕಷ್ಟ ಪಡುತ್ತೀರ? ಜನರಿಗೆ ವಿಶೇಷವಾದುದ್ದನ್ನ ತೋರಿಸಬೇಕು. ವಿದೇಶದಿಂದ ಗುಳ್ಳೇನರಿಗಳನ್ನು ತರಿಸಿ. ಆಗ ನೋಡಿ ಜನರು ಹೇಗೆ ಹುಚ್ಚೆದ್ದು ಕುಣಿಯುತ್ತಾರೆ” ಎಂದ. ಗೆಳೆಯನ ಸಲಹೆಗೆ ಸಾಮ್ರಾಟ ಮೆಚ್ಚುಗೆ ಸೂಚಿಸಿದರೂ ಕಳ್ಳಬುದ್ಧಿಗೆ ಹೆಸರುವಾಸಿಯಾದ ಗುಳ್ಳೇನರಿಗಳನ್ನು ಸೂಚಿಸಿದ್ದು, ತನ್ನ ಪೂರ್ವಶ್ರಮ ಮಾಧವ ಕೃಪಾಕಟಾಕ್ಷ ಕುಟೀರದ ದೇಶಭಕ್ತರನ್ನು ಅಣಕಿಸುವಂತೆ ಅನಿಸಿತು. ಅದಕ್ಕಾಗಿ ವಿದೇಶದಿಂದ ಗುಳ್ಳೇನರಿಗಳ ಬದಲಿಗೆ ಚಿರತೆಗಳನ್ನು ತರಲು ಆಜ್ಞೆ ಮಾಡಿದ.

ವಿದೇಶಗಳಿಂದ ಬಂದ ಚಿರತೆಗಳನ್ನು ಸಾಮ್ರಾಟ - ಹ್ಯಾಟು, ತಂಪುಕನ್ನಡಕ ತೊಟ್ಟು ಹಾಲಿವುಡ್ ನಟರ ಗೆಟಪ್ಪಿನಲ್ಲಿ ಸ್ವಾಗತಿಸಿ, ಅಭಯಾರಣ್ಯಕ್ಕೆ ಬಿಟ್ಟು “ಮಿತ್ರೋ… ಚಿರತೆ ಆಗಮನದಿಂದ ದೇಶವಾಸಿಗಳು ಹರ್ಷಿತರಾಗಿ ಉತ್ಸಾಹದಿಂದ ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ” ಎಂದು ಬೊಗಳೆ ಹೊಡೆದ. ಮತ್ತೂ ಉತ್ಸಾಹ ಹೆಚ್ಚಾಗಲೆಂದು ಚಿರತೆಗಳಿಗೆ ನಾಮಕರಣ ಸ್ಪರ್ಧೆಯನ್ನು ಏರ್ಪಡಿಸಿದ. ಚಿರತೆಗಳಿಗೆ ಹೆಸರುಗಳನ್ನು ಜನರೇ ಸೂಚಿಸುವಂತೆ ಹೇಳಿ, ಆಯ್ಕೆಯಾದ ಹೆಸರನ್ನು ಸೂಚಿಸಿದವರಿಗೆ ಬಹುಮಾನವನ್ನು ಕೊಡಲಾಗುವುದೆಂದು ಡಂಗುರ ಸಾರಿಸಿದ. ಉತ್ಸಾಹದಿಂದ ಜನರು ಚಿರತೆಗಳಿಗೆ ಹಲವು ಹೆಸರನ್ನು ಸೂಚಿಸಿದರು. ಅವುಗಳಲ್ಲಿ ಕೆಲವು ಸ್ಯಾಂಪಲ್ಲುಗಳು – ನಟಭಯಂಕರ, ಹರಕುಬಾಯಿ, ವ್ಯಾಪಾರಿ ಮಿತ್ರ, ಫೇಕ್ ಫಕೀರ, ಚೋರ್ ಚೌಕೀಧಾರ್, ರಾಷ್ಟ್ರಪಿತ್ತ, ಜುಮ್ಲಾ ಬಾಜ್, ಶೋಕಿಲಾಲ…ಎಕ್ಸೆಟ್ರಾ…ಎಕ್ಸೆಟ್ರಾ.

ಜನರು ಸೂಚಿಸಿದ ಹೆಸರುಗಳನ್ನು ನೋಡಿದ ಸಾಮ್ರಾಟ, ತಾನು ಯಾರಿಗಾಗಿ ಹೆಸರು ಕೇಳಿದ್ದೆ ಎಂದು ಗೊಂದಲಗೊಂಡ.

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News