ರಾಮನಗರದ ಮಿಟ್ಸುಬಿಷಿ ಕಂಪನಿ ಏಕಾಏಕಿ ಬಂದ್: ಕಾರ್ಮಿಕರು ಕಂಗಾಲು

ರಾಮನಗರದ ಮಿಟ್ಸುಬಿಷಿ ಕಂಪನಿ ಏಕಾಏಕಿ ಬಂದ್: ಕಾರ್ಮಿಕರು ಕಂಗಾಲು

Updated : 09.11.2022

ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ ಲಿಮಿಟೆಡ್ ಕಂಪನಿಗೆ ಏಕಾಏಕಿ ಬೀಗ ಹಾಕಿದ್ದು, 54ಕ್ಕೂ ಹೆಚ್ಚು ಕಾರ್ಮಿಕರು ದಿಕ್ಕೆಟ್ಟಿದ್ದಾರೆ.

ಶುಕ್ರವಾರ ರಾತ್ರಿ ಕಾರ್ಮಿಕರು ಮನೆಗೆ ತೆರಳಿದ ನಂತರ ಕಂಪನಿ ಆಡಳಿತ ಮಂಡಳಿ ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಂಪನಿಯನ್ನು ಬಂದ್​ ಮಾಡಿದೆ. ಅಲ್ಲದೆ, 54 ಖಾಯಂ ಕಾರ್ಮಿಕರ ಬ್ಯಾಂಕ್‌ ಖಾತೆಗೆ ತಲಾ ₹4 ಲಕ್ಷ ಹಣ ಹಾಕಲಾಗಿದೆ.

ಅಲ್ಲದೆ, ʼಗೇಟಿನ ಮೇಲೆ ಪೂರ್ವಾನುಮತಿಯಿಲ್ಲದೆ ಯಾವುದೇ ವ್ಯಕ್ತಿಗಳು ಕಂಪನಿಯ ಆವರಣಕ್ಕೆ ಪ್ರವೇಶಿಸಲು ಅನುಮತಿ ಇಲ್ಲʼ ಎಂದು ನೋಟಿಸ್‌ ಅಂಟಿಸಲಾಗಿದೆ. ಶನಿವಾರ ಎಂದಿನಂತೆ ಕೆಲಸಕ್ಕೆ ಬಂದ ಕಾರ್ಮಿಕರು ಗೇಟಿಗೆ ಬೀಗ ಹಾಕಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ಇನ್ನು ಕಾರ್ಮಿಕರ ಖಾತೆಗೆ ₹4 ಲಕ್ಷ ಹಣ ಹಾಕಿರುವ ಕುರಿತು ಕಂಪನಿಯ ಮಾನವ ಸಂಪನ್ಮೂಲಾಧಿಕಾರಿ (ಹೆಚ್‌ಆರ್‌) ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸೋಮವಾರ ಸಂಜೆ ಕಂಪನಿ ಅಧಿಕಾರಿಗಳು, ಕಾರ್ಮಿಕರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ಯಾವ ಅಧಿಕಾರಿಯೂ ಮಾತುಕತೆಗೆ ಬಂದಿಲ್ಲ ಎಂಬುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ ಲಿಮಿಟೆಡ್ ಕಂಪನಿಯಿಂದ ಬೆಮೆಲ್‌, ಮೆಟ್ರೋ ಕಾಮಗಾರಿಗೆ ಅಗತ್ಯವಾದ ಕೆಲ ಎಲೆಕ್ಟ್ರಾನಿಕ್‌ ವಸ್ತುಗಳನ್ನ ಸರಬರಾಜು ಮಾಡಲಾಗುತ್ತಿತ್ತು. ಇಂತಹ ಕಂಪನಿ ದಿಢೀರ್‌ ಬಂದ್‌ ಆಗಿರುವ ಕುರಿತು ಇದುವರೆಗೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಹಾಸನ, ಬೆಳಗಾವಿ ಹಾಗೂ ಬಿಜಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಕಂಪನಿ ನಂಬಿ ಬಂದ ಕಾರ್ಮಿಕರು, ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

© Copyright 2022, All Rights Reserved Kannada One News