ಭೂರಿದತ್ತ ಜಾತಕ ಕಥೆ: ವೇದಗಳು ಮತ್ತು ಯಜ್ಞದಂತಹ ಕರ್ಮಕಾಂಡಗಳ ಅರ್ಥಹೀನತೆಯ ಬಗ್ಗೆ ತರ್ಕಬದ್ಧ ವಿವರ- ರಮಾಕಾಂತ ಪುರಾಣಿಕರ 22ನೇ ಅಂಕಣ

ಭೂರಿದತ್ತ ಜಾತಕ ಕಥೆ: ವೇದಗಳು ಮತ್ತು ಯಜ್ಞದಂತಹ ಕರ್ಮಕಾಂಡಗಳ ಅರ್ಥಹೀನತೆಯ ಬಗ್ಗೆ ತರ್ಕಬದ್ಧ ವಿವರ- ರಮಾಕಾಂತ ಪುರಾಣಿಕರ 22ನೇ ಅಂಕಣ

Updated : 08.08.2022

ನಮೋ ಅರಹತೋ ಭಗವತೋ ಸಮ್ಮಾ ಸಂಬುದ್ಧಸ್ಸ

ಭೂರಿದತ್ತ ಜಾತಕ ಕಥೆ (ಜಾತಕ ಕಥೆ-543) ಒಂದು ದೀರ್ಘವಾದ ಕಥೆಯಾಗಿದ್ದು ಇಲ್ಲಿ ಭೂರಿದತ್ತ ಬೋಧಿಸತ್ವರು ವೇದಗಳು ಮತ್ತು ಯಜ್ಞದಂತಹ ಕರ್ಮಕಾಂಡಗಳು ಹೇಗೆ ಅರ್ಥಹೀನವಾಗಿವೆ ಮತ್ತು ಕೇವಲ ಬ್ರಾಹ್ಮಣರ ಸ್ವಾರ್ಥಕ್ಕಾಗಿ ರಚಿತವಾಗಿವೆ ಅನ್ನುವದನ್ನು ತರ್ಕಬದ್ಧವಾಗಿ ನಾಗರಿಗೆ ಹೇಳುತ್ತಾರೆ. ಆ ಮುಖ್ಯಬಾಗವನ್ನಿಲ್ಲಿ ಮಾತ್ರ ನಾನು ಕೊಡುತ್ತಿದ್ದೇನೆ.

ಧೃತರಾಷ್ಟ್ರನೆಂಬ ನಾಗಲೋಕದ ರಾಜನಿಗೆ ಸಮುದ್ರಜಾ ಎಂಬ ರಾಣಿಯಿಂದ ( ಇವಳು ವಾರಣಾಸಿಯ ರಾಜಕುಮಾರ ಮತ್ತು ಒಬ್ಬ ನಾಗಕನ್ಯೆಯಿಂದ ಹುಟ್ಟಿದವಳು) ನಾಲ್ಕು ಮಕ್ಕಳು ಹುಟ್ಟುತ್ತಾರೆ. ಮೊದಲನೆಯವನು ಸುದರ್ಶನ, ಎರಡನೆಯವನು ಭೂರಿದತ್ತ (ಬೋಧಿಸತ್ವ) , ಮೂರನೆಯವನು ಸುಭಗ ಮತ್ತು ನಾಲ್ಕನೆಯವನು ಅರಿಟ್ಠ. ಒಮ್ಮೆ ಭೂರಿದತ್ತನು ದೇವಲೋಕ ಪ್ರಾಪ್ತಿಗಾಗಿ ಯಮುನಾ ನದಿಯ ದಂಡೆಗೆ ಬಂದು ಉಪವಾಸ ವೃತವನ್ನು ಮಾಡುತ್ತಿದ್ದನು. ಮತ್ತು ರಾತ್ರಿ ಸಮಯದಲ್ಲಿ ನಾಗಕನ್ಯೆಯರು ಬಂದು ಭೂರಿದತ್ತ ನಾಗರನ್ನು ಪೂಜಿಸಿ ನೃತ್ಯಗೀತಾದಿಗಳನ್ನು ಪ್ರದರ್ಶಿಸಿ ತಿರುಗಿ ನಾಗಲೋಕಕ್ಕೆ ಹೋಗುತ್ತಿದ್ದರು.

ಒಂದು ಸಾರಿ ಬೇಟೆಯಾಡಿ ಮಾಂಸವನ್ನು ಮಾರುವ ಬ್ರಾಹ್ಮಣನೊಬ್ಬ ಬೇಟೆಗಾಗಿ ಬಂದು ತಡರಾತ್ರಿಯಾದುದರಿಂದ ಭೂರಿದತ್ತರು ಉಪವಾಸವಿದ್ದ ಸ್ಥಳದ ಹತ್ತಿರದಲ್ಲೇ ಮಲಗಿಕೊಳ್ಳುತ್ತಾನೆ. ಆ ರಾತ್ರಿ ನಾಗಕನ್ಯೆಯರು ಬಂದು ನೃತ್ಯ-ಗೀತಗಳನ್ನು ಮಾಡುವಾಗ ಎಚ್ಚರಾಗಿ ನೋಡಿ ಆಶ್ಚರ್ಯ ಪಡುತ್ತಾನೆ. ನಾಗತರುಣಿಯರು ಈ ಮನುಷ್ಯನನ್ನು ನೋಡಿ ಅಲ್ಲಿ ಅಂತರ್ಧಾನರಾಗಿ ನಾಗಲೋಕಕ್ಕೆ ಹೊರಟುಹೋಗುತ್ತಾರೆ. ಭೂರಿದತ್ತನು ಈ ಬ್ರಾಹ್ಮಣನಿಗೆ ತನ್ನ ಪರಿಚಯವನ್ನು ಹೇಳಿ ಅವನನ್ನು ತನ್ನ ನಾಗಲೋಕಕ್ಕೆ ಕರೆದುಕೊಂಡು ಹೋಗಿ ರಾಜಾತಿಥ್ಯವನ್ನು ಮಾಡಿ ಕೆಲ ದಿನ ತನ್ನ ಲೊಕದಲ್ಲೇ ಇರಿಸಿಕೊಂಡು ಬೇಕಾದಷ್ಟು ಸಿರಿ ಸಂಪತ್ತು ಕೊಟ್ಟು ಅವನ ಮನೆಗೆ ಕಳಿಸುತ್ತಾನೆ. ಆದರೆ ಆ ಬ್ರಾಹ್ಮಣ ತನ್ನ ದುಷ್ಟ ಗುಣದಿಂದಾಗಿ ಮತ್ತೆ ದರಿದ್ರನಾಗುತ್ತಾನೆ.

ಹೀಗಿರುವಾಗ ಈ ಬ್ರಾಹ್ಮಣನು ಒಬ್ಬ ಗರುಡ ಮಂತ್ರವನ್ನು ತಿಳಿದುಕೊಂಡು ತನಗೆ ಬೇಕಾದ ಶಕ್ತಿಶಾಲಿಯಾದ ಹಾವನ್ನು ಹುಡುಕುತ್ತಿರುವ ಅಲಂಬಾಯನನೆಂಬ ಇನ್ನೊಬ್ಬ ಬ್ರಾಹ್ಮಣನನ್ನು ಬೇಟಿಯಾಗುತ್ತಾನೆ ಮತ್ತು  ಆತನಲ್ಲಿರುವ ಮಣಿಯ ಆಶೆಯಿಂದ ಧ್ಯಾನದಲ್ಲಿ ನಿರತನಾದ ತನಗೆ ಉಪಕಾರವನ್ನೇ ಮಾಡಿದ ಭೂರಿದತ್ತ ನಾಗರಾಜನ ಸ್ಥಳವನ್ನು ತೋರಿಸುತ್ತಾನೆ. ಅಂದಿನಿಂದ ಅಲಂಬಾಯನನು ಹಾವಾಡಿಗನಂತೆ ಊರೂರು ತಿರುಗುತ್ತ ಭೂರಿದತ್ತ ನಾಗರಾಜನಿಂದ ವಿಧವಿಧವಾದ ಆಟಗಳನ್ನು ತೋರಿಸುತ್ತ ಲಕ್ಷಾಂತರ ಹಣ ಸಂಪಾದಿಸುತ್ತಿರುತ್ತಾನೆ. ಉಪವಾಸ ಮತ್ತು ಅಹಿಂಸಾ ವೃತದಲ್ಲಿದ್ದ ಬೋಧಿಸತ್ವರು ಯಾವುದೇ ದ್ವೇಷವಿಲ್ಲದೆ ಅವನು ಹೇಳಿದಂತೆ ಕೇಳಿಕೊಂಡಿರುತ್ತಾರೆ.

ಅತ್ತ ಭೂರಿದತ್ತನ ತಾಯಿ ಮತ್ತು ಸೋದರರು ಅವನು ಎಲ್ಲಿಯೂ ಕಾಣದೇ ಚಿಂತಿತರಾಗಿ, ಅವರ ಸೋದರರು ಒಂದೊಂದು ದಿಕ್ಕಿಗೆ ಹುಡುಕಲು ಹೊರಡುತ್ತಾರೆ. ಅಣ್ಣ ಸುದರ್ಶನನು ಮಾಯಾವಿ ಹಾವಾಡಿಗನನ್ನು ಕಂಡುಹಿಡಿದು ಭೂರಿದತ್ತನನ್ನು ಕರೆದುಕೊಂಡು ಹೋಗುತ್ತಾನೆ. ಬ್ರಾಹ್ಮಣ ಅಲಂಬಾಯನನು ಕುಷ್ಟರೋಗಪೀಡಿತನಾಗಿ ನರಳುತ್ತಾನೆ. ಇನ್ನೊಬ್ಬ ಸಹೋದರ ಸುಭಗನು ಅಲಂಬಾಯನನನ್ನು “ಉಪಕಾರ ಮಾಡಿದ ಭೂರಿದತ್ತನಿಗೆ ದ್ರೋಹ ಮಾಡಿದ ಬ್ರಾಹ್ಮಣ ನೀನು “ ಎನ್ನುತ್ತ ಅವನನ್ನು ಕೊಲ್ಲಲು ಬರುತ್ತಾನೆ. ಆಗ ಹೆದರಿದ ಅಲಂಬಾಯನನು “ ನಾನು ವೇದ ಪಾಠ ಮಾಡಿರುವೆನಾದ್ದರಿಂದ, ಯಜ್ಞ ಮಾಡುವನಾದ್ದರಿಂದ, ಅಗ್ನಿಪೂಜಕ ಬ್ರಾಹ್ಮಣನಾದ್ದರಿಂದ ನನ್ನನ್ನು ನೀನು ಕೊಲ್ಲಲಾಗದು” ಎನ್ನುತ್ತಾನೆ. ಸಂದೇಹಗೊಂಡ ಸುಭಗನು ಅವನನ್ನು ಅಣ್ಣನ ಹತ್ತಿರ ಕರೆದುಕೊಂಡು ಬರುತ್ತಾನೆ. ಆಗ ಅಲ್ಲಿಯೇ ಇದ್ದ ಕೊನೆಯ ಸಹೋದರ ಅರಿಟ್ಠ ಕೂಡ ಬ್ರಾಹ್ಮಣ ಶ್ರೇಷ್ಠತೆಯ ಬಗ್ಗೆಯೇ ಹೇಳುತ್ತಾನೆ. “ಸುಭಗನೇ, ಲೋಕದಲ್ಲಿ ಯಜ್ಞವೂ ವೇದವೂ ಶ್ರೇಷ್ಠವಾಗಿವೆ. ವೇದಗಳಿಂದ ಕೂಡಿದ ಬ್ರಾಹ್ಮಣನು ಶ್ರೇಷ್ಠನಾಗಿದ್ದಾನೆ. ಈ ಜಗತ್ತನ್ನು ಬ್ರಹ್ಮನು ಸೃಷ್ಠಿಸಿದನು. ಬ್ರಾಹ್ಮಣರಿಗೆ ಅಧ್ಯಯನ, ಕ್ಷತ್ರಿಯರಿಗೆ ರಾಜ್ಯವಾಳುವದು, ವೈಶ್ಯರಿಗೆ ಕೃಷಿ ಮತ್ತು ಶೂದ್ರರಿಗೆ ಸೇವೆ ಮಾಡಬೇಕೆಂದು ವಿಧಿಸಿದನು. ಬ್ರಾಹ್ಮಣರಿಗೆ ದಾನ ಕೊಟ್ಟರೆ ಪುಣ್ಯ ಬರುತ್ತದೆ. ಎಲ್ಲ ರಾಜರೂ ಬ್ರಾಹ್ಮಣರ ಸಹಾಯದಿಂದ ಯಾಗಗಳನ್ನು ಮಾಡಿಯೇ ದೇವಲೋಕವನ್ನು ಹೊಂದಿದ್ದಾರೆ.” ಹೀಗೆ ಹೇಳಲು ಇದನ್ನೆಲ್ಲ ಕೇಳುತ್ತಿದ್ದ ಬೋಧಿಸತ್ವ ಭೂರಿದತ್ತನು ಇವರಿಗೆ ತಪ್ಪು ತಿಳುವಳಿಕೆ ಇದೆ. ಇದನ್ನು ದೂರಮಾಡಬೇಕೆಂದುಕೊಂದು ಎಲ್ಲ ನಾಗರನ್ನೂ ಕರೆದು ತಮ್ಮ ಕುಟುಂಬ ಮತ್ತು ಎಲ್ಲ ನಾಗಪ್ರಜೆಗಳಿಗೆ ಉಪದೇಶ ಮಾಡುತ್ತಾರೆ.

“ಎಲೈ ಅರಿಟ್ಠನೇ, ನೀನು ಸುಳ್ಳು ಹೇಳಿ ವೇದಗಳನ್ನು, ಯಜ್ಞಗಳನ್ನು ಪ್ರಶಂಸಿಸುತ್ತೀಯಾ. ವೇದವಿಧಿಗನುಸಾರವಾಗಿ ಮಾಡುವ ಯಜ್ಞಗಳು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುವದಿಲ್ಲ. ವೇದಾಧ್ಯಯನವು ಧೈರ್ಯವಂತರ ದೌರ್ಭಾಗ್ಯವಾಗಿದೆ. ಮೂರ್ಖರ ಸೌಭಾಗ್ಯವಾಗಿದೆ. ಸತ್ಯಾಸತ್ಯಗಳನ್ನು ತಿಳಿಯದ ಮೂರ್ಖನು ಅದನ್ನು ನಿಜವೆಂದು ನಂಬುತ್ತಾನೆ. ಮಿತ್ರದ್ರೋಹಿಯಾದವನನ್ನು, ಜೀವ ಹಿಂಸಕನನ್ನು ವೇದಗಳು ಉಳಿಸಿಕೊಳ್ಳಲಾರವು. ಮನುಷ್ಯನು ಅಗ್ನಿಗೆ ಕಟ್ಟಿಗೆಯನ್ನಾಗಲಿ, ಹುಲ್ಲನ್ನಾಗಲಿ ಹಾಕುವದರಿಂದ ಪುಣ್ಯ ಸಂಪಾದನೆಯಾಗುವದಾದರೆ ಇದ್ದಿಲು ಮಾಡುವವನೂ, ಅಡುಗೆ ಮಾಡುವವನೂ, ಶವ ಸುಡುವವನೂ ಎಲ್ಲರೂ ಪುಣ್ಯವಂತರಾಗುತ್ತಾರೆ. ಪುಣ್ಯಕರ್ಮಗಳನ್ನು ಮಾಡದೆ ಕೇವಲ  ವೇದಮಂತ್ರಗಳಿಂದ ಅಗ್ನಿಗೆ ಆಹುತಿ ಕೊಡುವದರಿಂದ ಹೇಗೆ ಪುಣ್ಯ ಸಿಗುತ್ತದೆ ? ಅಗ್ನಿಯನ್ನು ದೇವತೆ ಎನ್ನುತ್ತಾರೆ, ನೀರನ್ನು ದೇವತೆ ಎನ್ನುತ್ತಾರೆ, ಅದೆಲ್ಲಾ ಸುಳ್ಳು. ಬ್ರಾಹ್ಮಣರು ಬ್ರಹ್ಮನೇ ಸೃಷ್ಠಿಕರ್ತನೆನ್ನುತ್ತಾರೆ.ಮತ್ತೆ ಬ್ರಹ್ಮನು ಅಗ್ನಿಯನ್ನು ಪೂಜಿಸುತ್ತಾನೆನ್ನುತ್ತಾರೆ. ಬ್ರಹ್ಮನು ಸರ್ವಶ್ರೇಷ್ಠನಾದರೆ ಅವನು ಅಗ್ನಿಯನ್ನೇಕೆ ಪೂಜಿಸಬೇಕು ? ಮತ್ತು ಇನ್ನೂ ಹೆಚ್ಚಿನ ಲಾಭಕ್ಕಾಗಿ ಪಶುಬಲಿಯನ್ನು ಸೇರಿಸಿದರು. ಬ್ರಾಹ್ಮಣರಿಗೆ ಅಧ್ಯಯನವನ್ನು, ಕ್ಷತ್ರಿಯರಿಗೆ ರಾಜ್ಯವಾಳುವದನ್ನು, ವೈಶ್ಯರಿಗೆ ಕೃಷಿಯನ್ನು ಮತ್ತು ಶೂದ್ರರಿಗೆ ಈ ಮೂರೂ ವರ್ಣದವರ ಸೇವೆಯನ್ನು ಮಾಡಬೇಕೆಂದೂ ಬ್ರಹ್ಮನು ವಿಧಿಸಿದ್ದಾರೆನ್ನುತ್ತಾರೆ. ಆದರೆ ಬ್ರಾಹ್ಮಣರು ಶಸ್ತ್ರಗಳನ್ನು ಹಿಡಿದು ತಿರುಗಾಡುತ್ತಾರೆ. ಕ್ಷತ್ರಿಯರು, ವೈಶ್ಯರು ತಮ್ಮದಲ್ಲದ ಕೆಲಸ ಮಾಡುತ್ತಾರೆ. ಕ್ಷತ್ರಿಯರು ದೇಶವನ್ನಾಳಲು ಹುಟ್ಟಿದ್ದರೆ ಆಮಾತ್ಯರ ,ಪ್ರಜೆಗಳ ಬೇಂಬಲವಿಲ್ಲದೆ ಹೇಗೆ ದೇಶ ನಡೆಸಲು ಸಾಧ್ಯ?. ಇವನ್ನೆಲ್ಲಾ ಬ್ರಹ್ಮನು ಏಕೆ ಸರಿಯಾಗಿ ನಿಯಮಿಸುತ್ತಿಲ್ಲ ? ಬ್ರಹ್ಮನು ಲೋಕಕ್ಕೆಲ್ಲಾ ಈಶ್ವರನಾದರೆ, ಪ್ರಾಣಿಗಳಿಗೆಲ್ಲಾ ಸ್ವಾಮಿಯಾದರೆ  ಈ ಸುಳ್ಳು ,ಅನ್ಯಾಯ ,ವಂಚನೆಗಳನ್ನೇಕೆ ಹುಟ್ಟಿಸಿದ್ದಾನೆ?

ಸಚೇ ಹಿ ಸೊ ಸುಜ್ಝತಿ ಯೊ ಹನಾತಿI ಹತೊ ಪಿ ಸೊ ಸಗ್ಗ ಮುಪೇತಿ ಠಾನಂ II

ಭೋವಾದಿ ಭೋವಾದಿನ ಮಾರಭೆಯ್ಯುಂI ಯೇ ವಾಪಿ ತೇಸಂ ಅಭಾಸದ್ದಹೆಯುಂII

ಹತ್ಯೆ ಮಾಡಿಸುವವನೂ, ಹತ್ಯೆಯಾಗುವವನೂ ಸ್ವರ್ಗಕ್ಕೆ ಹೋಗುವದಾದರೆ ಬ್ರಾಹ್ಮಣರು ಬ್ರಾಹ್ಮಣರ ಹತ್ಯೆ ಮಾಡಲಿ. ಹಾಗೆ ನಂಬಿಕೆಯಿಟ್ಟುಕೊಳ್ಳಲಿ. ಪ್ರಾಣಿಗಳು ತಮ್ಮನ್ನು ಬಲಿಕೊಡು ಎಂದು ಕೇಳಿಕೊಳ್ಳುವದಿಲ್ಲ. ಯೂಪಸ್ತಂಬಕ್ಕೆ ಕಟ್ಟಿದ ಪ್ರಾಣಿಯಿಂದ ಸಂಪತ್ತು, ಸ್ವರ್ಗ ದೊರಕುವದಾದರೆ ಬ್ರಾಹ್ಮಣರು ತಮಗಾಗಿಯೇ ಯಜ್ಞ ಮಾಡಿಕೊಳ್ಳಲಿ. ನೂರಾರು ಕಾಗೆಗಳು ಸೇರಿಕೊಂಡು ಒಂಟಿ ಗೂಬೆಯನ್ನು ಕುಕ್ಕಿ ಕೊಲ್ಲುವಂತೆ ಯಜಮಾನನನ್ನು ಕೊಳ್ಳೆ ಹೊಡೆದು ಯಾಗಶಾಲೆಯಿಂದ ಹೊರಡುತ್ತಾರೆ. ಸಮುದ್ರ ದಂಡೆಯಲ್ಲಿ ಸ್ನಾನ ಮಾಡುತ್ತಿದ್ದ ಒಬ್ಬ ಬ್ರಾಹ್ಮಣನನ್ನು ನೀರಿನ ಅಲೆಯು ಕೊಚ್ಚಿಕೊಂಡು ಹೋಯಿತೆಂದು, ಆಗ ಅವನು ಸಮುದ್ರದ ನೀರು ಉಪ್ಪಾಗಲೆಂದೂ ಶಾಪ ಕೊಟ್ಟನೆಂದೂ ಕತೆ ಹೇಳುತ್ತಾರೆ.  ಹಾಗಿದ್ದಲ್ಲಿ ಎಷ್ಟು ಜನ ಬ್ರಾಹ್ಮಣರು ನದಿಯಲ್ಲಿ ಹೋಗಿಲ್ಲ ?  ಎಷ್ಟು ಭಾವಿಗಳ ನೀರು ಉಪ್ಪಾಗಿಲ್ಲ ? ಇದಕ್ಕೆಲ್ಲಾ ಬ್ರಾಹ್ಮಣರ ಶಾಪವೇ ಕಾರಣವೇನು ?

ಎಂತಹ ಚಾಂಡಾಲರ ಮಗನೂ ವೇದವಿದ್ಯೆ ಕಲಿತರೆ ಅವನ ಶಿರವೇನೂ ನೂರು ಹೋಳಾಗದು. ಈ ಮಂತ್ರಗಳೆಲ್ಲಾ ಸುಳ್ಳೆಂದು ಗೊತ್ತಾಗಿ ಅವರನ್ನೇ ಕೊಲ್ಲುತ್ತದೆ. ಈ ಮಂತ್ರಗಳೆಲ್ಲಾ ಮಿಥ್ಯಾ ಚಿಂತನೆಯ ಪರಿಣಾಮ.”

ಹೀಗೆ ಬೋಧಿಸತ್ವರು ಅವರ ಮತಗಳನ್ನು ಖಂಡಿಸಿ ಸತ್ಯ ಧರ್ಮಗಳ ಸ್ಥಾಪನೆ ಮಾಡಿದರು. ಇದರಿಂದ ನಾಗರುಗಳಿಗೆ ಸಂತೋಷವಾಯಿತು.
ಭವತು ಸಬ್ಬ ಮಂಗಲಂ, ರಕ್ಖಂತು ಸಬ್ಬ ದೇವತಾ

© Copyright 2022, All Rights Reserved Kannada One News