ಉದ್ಯಮಿಗೆ ಹನಿಟ್ರ್ಯಾಪ್: ಹಣಕ್ಕೆ ಬೇಡಿಕೆ ಇಟ್ಟಿದ್ದ ಸ್ಯಾಂಡಲ್ ವುಡ್ ನಟನ ಬಂಧನ

ಉದ್ಯಮಿಗೆ ಹನಿಟ್ರ್ಯಾಪ್: ಹಣಕ್ಕೆ ಬೇಡಿಕೆ ಇಟ್ಟಿದ್ದ ಸ್ಯಾಂಡಲ್ ವುಡ್ ನಟನ ಬಂಧನ

Updated : 13.08.2022

ಬೆಂಗಳೂರು: ನಗರದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ ಹಣಕ್ಕೆ ಬೇಡಿಕೆ ಇಟ್ಟ ಸ್ಯಾಂಡಲ್‍ ವುಡ್‍ ನಟ ಯುವರಾಜ್ ನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಟ ಜೆಪಿ ನಗರ ಯುವರಾಜ್ ಅಲಿಯಾಸ್ ಯುವನನ್ನು ತೀವ್ರ ವಿಚಾರಣೆ ನಡೆಸಲಾಗಿದೆ.

ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ. ಇದೀಗ ಹನಿಟ್ರ್ಯಾಪ್ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾನೆ.

ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಂದಿಗೆ ಯುವ ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯವಾಗಿದ್ದರು.

ಉದ್ಯಮಿ ಕೂಡ ಪರಿಚಯದ ಯುವತಿರೆಂದು ಸಲುಗೆಯಿಂದ ಚಾಟ್ ಮಾಡಿದ್ದರು. ಆ ಬಳಿಕ ಅಶ್ಲೀಲ ಚಾಟ್ ಮಾಡಿರುವ ಆರೋಪದಡಿ ನಟ ಯುವ ನಾವು ಕ್ರೈಮ್ ಪೊಲೀಸರೆಂದು ಭೇಟಿಯಾಗಿ ಬೆದರಿಕೆ ಹಾಕಿದ್ದಾನೆ.

ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಈ ಕೇಸ್ ಮುಂದುವರಿಸದಿರಲು ಹಣ ಕೊಡಲೇಬೇಕೆಂದು ಕೇಳಿದ್ದಾನೆ. ಮೊದಲಿಗೆ ಐವತ್ತು ಸಾವಿರ ರೂ. ನಂತರ ಬ್ಯಾಂಕ್‍ನಿಂದ ಮೂರು ಲಕ್ಷ ರೂ. ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಯುವ ಪಡೆದಿದ್ದ ಎಂದು ಉದ್ಯಮಿ ಆರೋಪಿಸಿದ್ದಾರೆ.

ಯುವ ಒಂದು ಬಾರಿ ಹಲಸೂರು ಗೇಟ್ ಬಳಿ ಬಂದು ಹಣ ಪಡೆದಿದ್ದ. ಆ ಬಳಿಕ ಉದ್ಯಮಿಗೆ ಅನುಮಾನ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಕೇಸ್ ದಾಖಲಿಸಿಕೊಂಡು ದೂರಿನ ಅನ್ವಯ ಆರೋಪಿ ಯುವನನ್ನು ಹಲಸೂರು ಗೇಟ್ ಪೊಲೀಸರು ಇದೀಗ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

© Copyright 2022, All Rights Reserved Kannada One News