ಸೌಹಾರ್ದ ಭಾರತ ಕಟ್ಟಬೇಕಿದೆ: ಬರಗೂರು ರಾಮಚಂದ್ರಪ್ಪ

ಸೌಹಾರ್ದ ಭಾರತ ಕಟ್ಟಬೇಕಿದೆ: ಬರಗೂರು ರಾಮಚಂದ್ರಪ್ಪ

Updated : 23.10.2022

ದಯವೇ ಧರ್ಮದ ಮೂಲವಯ್ಯ ಎಂಬುದನ್ನು ಬಿಟ್ಟು, ಭಯವೇ ಧರ್ಮದ ಮೂಲವಯ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಸೌಹಾರ್ದ ಭಾರತ ಕಟ್ಟಬೇಕು. ಸಮಾನತೆಯ ಸಮಾಜ ಕಟ್ಟಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ʼಸೌಹಾರ್ದ ಭಾರತʼ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಸಂವಿಧಾನ ಪೀಠಿಕೆ ಓದುವ ಮೂಲಕ ಮಾತನಾಡಿದರು.

“ಧಾರ್ಮಿಕ ಮೂಲಭೂತವಾದ ದೇವರ ಮಧ್ಯದಲ್ಲಿ ಸಂಘರ್ಷ ಉಂಟು ಮಾಡುತ್ತಿದ್ದಾರೆ. ದೇವರ ಹೆಸರಲ್ಲಿ ಮೋಕ್ಷ, ಧರ್ಮದ ಹೆಸರಲ್ಲಿ ಮೌಢ್ಯ ಬಿತ್ತಬೇಡಿ” ಎಂದು ಸಲಹೆ ಹೇಳಿದರು.

“ದೇಶವನ್ನು ನಾಶಪಡಿಸಬೇಕಾದರೆ, ಧರ್ಮ ಧರ್ಮಗಳ ನಡುವೆ ಪರಸ್ಪರ ಹೊಡೆದಾಟ, ವಿಷ ಬೀಜ ಬಿತ್ತಿದರೆ ಸಾಕು, ಆ ದೇಶ ನಾಶವಾಗುವ ಅಂತಿಮ ದಿನಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವು ವರ್ಷಗಳ ಹಿಂದೆಯೇ ರಷ್ಯಾದ ಕ್ರಾಂತಿಕಾರಿಯೊಬ್ಬರು ಹೇಳಿದ್ದಾರೆ” ಎಂದು ತಿಳಿಸಿದರು.

“ಸರ್ಕಾರ ಯಾವುದೇ ಜಾತಿ-ಧರ್ಮಗಳ ನಡುವೆ ತಾರತಮ್ಯ ಧೋರಣೆ ಮಾಡದೆ ಸಮಾನವಾಗಿ ನೋಡಿದಾಗ ನಮ್ಮ ದೇಶ ಜಾತ್ಯಾತೀತ ದೇಶವಾಗುತ್ತದೆ. ಸರಳವಾಗಿ ಸಮಸ್ಯೆ ಮಾಡುವುದರಲ್ಲಿ ನಾವು ಪ್ರಸಿದ್ಧರು. ಹಾಗಾಗಿ ನಮ್ಮ ದೇಶದ ಒಳಿತಿಗಾಗಿ ಪರಸ್ಪರ ಜಾತಿ, ಧರ್ಮಗಳ ನಡುವಿನ ಬಾಂಧವ್ಯವನ್ನು ನಾವು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಿಂಧನೂರು ಶಾಸಕ ವೆಂಕಟ್ ನಾಡಗೌಡ, ಮಾಜಿ ಶಾಸಕ ಹಂಪನ್ ಗೌಡ ಬಾದರ್ಲಿ, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಇನ್ನಿತರರು ಇದ್ದರು.

© Copyright 2022, All Rights Reserved Kannada One News