ಬರ ಸಿನಿಮಾ - ಭ್ರಷ್ಟ ವ್ಯವಸ್ಥೆಯಲ್ಲಿ ದುಷ್ಟ ರಾಜಕಾರಣದ ಅನಾವರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಬರ ಸಿನಿಮಾ - ಭ್ರಷ್ಟ ವ್ಯವಸ್ಥೆಯಲ್ಲಿ ದುಷ್ಟ ರಾಜಕಾರಣದ ಅನಾವರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 25.10.2022

ನಿಷ್ಠಾವಂತ, ಪ್ರಾಮಾಣಿಕ ಜಿಲ್ಲಾಧಿಕಾರಿಯೊಬ್ಬ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಅನುಭವಿಸುವ ತವಕ, ತಲ್ಲಣವನ್ನು ಅನಾವರಣಗೊಳಿಸುವ ‘ಬರ’ ಸಿನಿಮಾ ತೆರೆಕಂಡಿದ್ದು 1982ರಲ್ಲಿ. ಅಂದರೆ ಸರಿಸುಮಾರು ನಲವತ್ತು ವರುಷಗಳ ಹಿಂದಿನ ಚಿತ್ರವನ್ನು ನೋಡಿದರೆ, ಭಾರತದಲ್ಲಿ ರಾಜಕೀಯ ನೈತಿಕತೆಯು ಪಾತಾಳಕ್ಕಿಳಿಯುತ್ತಿದೆ ಹೊರತು ಸುಧಾರಿಸುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬರ ಒಂದು ರಾಜಕೀಯ ಚಿತ್ರವಾಗಿ ಹಿಂದೆಂದಿಗಿಂತಲೂ ಅದರ ಕಥಾಹಂದರಕ್ಕಾಗಿ ಈಗ ಹೆಚ್ಚು ಪ್ರಸ್ತುತವಾಗಿದೆ.

ಸಿನಿಮಾವು ಮಳೆ ಬಾರದೆ ಬರ ಬಂದ ಬೀದರಿನ ರಾಜವಾಡಿ ಎಂಬ ಊರಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಊರಲ್ಲಿ ಬಾವಿ, ಕೆರೆಗಳು ಬತ್ತಿ ಹೋಗಿ ಕುಡಿಯುವುದಕ್ಕೂ ನೀರಿಲ್ಲದೆ, ದನಗಳಿಗೆ ಮೇವಿಲ್ಲದೆ ಮನುಷ್ಯರಿಗೆ ಹೊಟ್ಟೆ ಹಿಟ್ಟಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲು ಅಲ್ಲಿ ಒಬ್ಬ ಗಂಗಾಧರಸ್ವಾಮಿ ಎಂಬ ವ್ಯಾಪಾರಿ ಇದ್ದಾನೆ. ನಾಕಾಬಂಧಿಯಾಗಿರುವ ರಸ್ತೆಯಲ್ಲಿ ಜೋಳಕಾಳುಗಳನ್ನು ಅಕ್ರಮವಾಗಿ ಸಾಗುತ್ತಿರುವಾಗ ಸಿಕ್ಕಿಹಾಕಿಕೊಂಡ ಅವನ ಲಾರಿಯನ್ನು ಬಿಡಿಸಲು ಸಹಾಯಕ್ಕೆ ಪೊಲೀಸ್ ಅಧಿಕಾರಿ ಇದ್ದಾನೆ. ಆದರೆ, ಅದೇ ರಸ್ತೆಯಲ್ಲಿ ಬಂದ ಬಸ್ಸೊಂದನ್ನು ತಪಾಸಣೆ ಮಾಡುವಾಗ, ಹುಡುಗನೊಬ್ಬನು ಹಿಡಿದಿದ್ದ ಕೈಚೀಲದಲ್ಲಿ ಮೂರ್ನಾಲ್ಕು ಕೆಜಿಯಷ್ಟು ಜೋಳವಿದೆಯೆಂದು ಬಂಧಿಸುವುದು ವಿಪರ್ಯಾಸವಾಗಿ ಕಾಣುತ್ತದೆ.

ಮತ್ತೊಂದು ದೃಶ್ಯದಲ್ಲಿ – ಊರಿಗೆ ಭೇಟಿ ಇತ್ತ ಮುಖ್ಯಮಂತ್ರಿಯಲ್ಲಿ ಜಿಲ್ಲಾಧಿಕಾರಿ ತುರ್ತಾಗಿ ಗಂಜಿಕೇಂದ್ರಗಳನ್ನು ತೆರೆಯಲು ವಿನಂತಿಸುತ್ತಾನೆ. ಆದರೆ, ಮುಖ್ಯಮಂತ್ರಿ ಅದನ್ನು ಸಾರಾಸಗಟಾಗಿ ನಿರಾಕರಿಸುತ್ತಾನೆ. ಕಾರಣ – ಯಾವಾಗಲೂ ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ತನ್ನ ಶತ್ರು, ಗೃಹಮಂತ್ರಿ ರುದ್ರಪ್ಪನ ಕ್ಷೇತ್ರವದು. ಅವನು ಮಂತ್ರಿ ಪದವಿಯಿಂದ ಇಳಿಯುವವರೆಗೂ ಊರಿಗೆ ಸಹಾಯ ಸಾಧ್ಯವಿಲ್ಲವೆನ್ನುತ್ತಾನೆ. ಆದರೆ, ಇದೇ ಮುಖ್ಯಮಂತ್ರಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ “ದೇಶದಲ್ಲಿ ಬರದಿಂದ ಸಾವು ಎಲ್ಲಿ ಆಗಿದೆ? ಇದೆಲ್ಲ ವಿರೋಧಿಗಳ ಕುತಂತ್ರ” ಎಂದು ತದ್ವಿರುದ್ಧವಾದ ಹೇಳಿಕೆಯನ್ನು ನೀಡುತ್ತಾನೆ.

ಈ ಚಿತ್ರದ ಪ್ರೊಟಾಗನಿಸ್ಟ್ ಜಿಲ್ಲಾಧಿಕಾರಿ ಅಥವಾ ಕಲೆಕ್ಟರ್ ಸತೀಶ್ ಚಂದ್ರ. ಸ್ಥಿತಿವಂತ ಕುಟುಂಬದವನಾದರೂ ಬಡವರ ಬಗ್ಗೆ ಅಪಾರ ಕಾಳಜಿಯುಳ್ಳ, ಪ್ರಾಮಾಣಿಕ ಅಧಿಕಾರಿ. ಸಮಾಜವಾದ ತತ್ವದಲ್ಲಿ ನಂಬಿಕೆ ಇರಿಸಿ ತನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದವ. ಅವನ ಜನರ ಕಾಳಜಿ ಎಷ್ಟು ಪ್ರಾಮಾಣಿಕವೆಂದರೆ ಜನರು ನೀರಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಸಂಕಟ ಪಡುವುದನ್ನು ಕಂಡು ತಾನೂ ಅದರಲ್ಲಿ ಭಾಗಿಯಾಗಲು ರಾತ್ರಿಯ ಊಟ ಮಾಡುವುದನ್ನು ಬಿಟ್ಟಿರುತ್ತಾನೆ. ಸದಾ ಜೀಪಲ್ಲಿ ಊರನ್ನು ಸುತ್ತುತ್ತ ಜನರ ಸಂಕಟಗಳನ್ನು ಆಲಿಸುವುದರಲ್ಲಿ ನಿರತನಾದವನಿಗೆ, ಹೆಂಡತಿ ಮಗನೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ಇಂಥ  ಜಿಲ್ಲಾಧಿಕಾರಿಗೆ ಪ್ರಜಾಪ್ರಭುತ್ವದಂಥ ಜನಪರ ವ್ಯವಸ್ಥೆಯಲ್ಲಿಯೂ ಜನರಿಗೆ ಸಂಕಟಗಳಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನಿಧಾನವಾಗಿ ಅರಿವಿಗೆ ಬರುತ್ತದೆ. ಸಾವಿನ ಮನೆಯಲ್ಲೂ ರಾಜಕೀಯ ಮೇಲಾಟ ನಡೆಸುವ ರಾಜಕಾರಣಿಗಳ ಬಗ್ಗೆ ಜಿಲ್ಲಾಧಿಕಾರಿ ಸತೀಶ್ ಚಂದ್ರನ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯನ್ನು ಚಿತ್ರ ಕಟ್ಟಿಕೊಡುತ್ತದೆ.  

ಸಿನಿಮಾ ಬರದಂಥ ಘಟನೆಯನ್ನು ಆಧಾರಿಸಿದ ಚಿತ್ರವಾದರೂ ಇಲ್ಲಿ ಜಿಲ್ಲಾಧಿಕಾರಿಯಾಗಿ ಪ್ರಾಟಗಾನಿಸ್ಟ್ ಇದ್ದರೆ ಅಂಟಾಗನಿಸ್ಟ್ ಅಥವಾ ಪ್ರತಿನಾಯಕನಾಗಿ ಮತ್ತೊಂದು ಆಕರ್ಷಣೀಯ ಪಾತ್ರವಿದೆ. ಅದೇ ಭೀಮೋಜಿ ಪಾತ್ರ. ಯಾವುದೇ ಅನ್ಯಾಯದ ವಿರುದ್ಧ ಜನಪರ ಚಳುವಳಿ, ಹೋರಾಟ ಮಾಡುವ ಒಬ್ಬ ನುರಿತ ಮಾತುಗಾರ. ಅಕ್ರಮ ದಾಸ್ತಾನು ಇಟ್ಟುಕೊಂಡ ಗಂಗಾಧರಸ್ವಾಮಿ, ಜನರಿಗೆ ತಾನು ಒಳ್ಳೆಯವನಂತೆ ಬಿಂಬಿಸಿಕೊಳ್ಳಲು ಹುಗ್ಗಿ ಹಂಚುವುದನ್ನು ಛೇಡಿಸುತ್ತಾನೆ. ಹಾಗೆ, ಭೂದಾನ ಮಾಡುತ್ತೇನೆಂದು ತನ್ನ ಜಮೀನನ್ನು ಬಡಬಗ್ಗರಿಗೆ ಹಂಚಿದಾಗ, ನೆಲವನ್ನು ಎಲ್ಲರಿಗೂ ಸಮಾನವಾಗಿ ಹಂಚದೆ ಸ್ವಜನರಿಗೆ ಹಂಚುತ್ತಿದ್ದಾನೆಂದು ಪ್ರತಿಭಟಿಸಿ, ತನ್ನವರೊಂದಿಗೆ ‘ಭೂಮಿ ನಮ್ಮ ಹಕ್ಕು’ ಎಂದು ಕೂಗುತ್ತ ಗಂಗಾಧರಸ್ವಾಮಿ ದಾನ ಮಾಡಿದ್ದ ಜಮೀನನ್ನು ಕಬ್ಜ ಮಾಡುತ್ತಾನೆ. ಹಾಗೆ ಮಾಡುವಾಗ ಪತ್ರಕರ್ತರ ಕ್ಯಾಮೆರಾಗಳಿಗೆ ಪೋಸು ಕೊಟ್ಟು ಪ್ರಚಾರ ಗಿಟ್ಟಿಸುತ್ತಾನೆ.

ಮಳೆ ಬಾರದೆ ನೀರಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಜನ ಸಾಯುತ್ತಿರುವಾಗ ಜಿಲ್ಲಾಧಿಕಾರಿ, ಗೃಹಮಂತ್ರಿಯನ್ನು ಜಿಲ್ಲೆಯನ್ನು ಕ್ಷಾಮಪೀಡಿತ ಪ್ರದೇಶವೆಂದು ಘೋಷಿಸಿದರೆ ಕೇಂದ್ರಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತೆ ಎಂದರೆ ಅವನು ಮುಖ್ಯಮಂತ್ರಿಯ ಮೇಲಿನ ಜಿದ್ದಿನಿಂದ ಒಪ್ಪುವುದಿಲ್ಲ. ಇಬ್ಬರು ರಾಜಕಾರಣಿಗಳಿಗೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಬರ ಹಾಗೆ ಇರಬೇಕು ಎಂದು ಬಯಸುತ್ತಾರೆ.

ಚಿತ್ರದಲ್ಲಿ ಬರುವ ಎರಡು ಘಟನೆಗಳು ತಮ್ಮ ವೈರುಧ್ಯತೆಗಳಿಂದ ಗಮನ ಸೆಳೆಯುತ್ತದೆ.

ಒಂದೆಡೆ - ದೈವ, ಧರ್ಮದಲ್ಲಿ ಅಪಾರ ನಂಬಿಕೆಯುಳ್ಳ ಜಿಲ್ಲಾಧಿಕಾರಿಯ ತಂದೆಗೆ ಬರದಂಥ ಪರಿಸ್ಥಿತಿಯಲ್ಲಿ ಮನುಷ್ಯರಿಗಿಂತ ಮೇವು, ನೀರಿಲ್ಲದೆ ಸಾಯುವ ದನಗಳ ಮೇಲೆ ಪ್ರೀತಿ, ಕಾಳಜಿ ತೋರಿ ಗೋಶಾಲೆಯನ್ನು ತೆರೆಯುತ್ತಾನೆ. ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸುತ್ತಾನೆ.

ಇನ್ನೊಂದೆಡೆ ಭೀಮೋಜಿ – ನಿಗದಿತ ದರಕ್ಕಿಂತ ಹೆಚ್ಚಿಗೆ ಕಾಳಸಂತೆಯಲ್ಲಿ ಜೋಳವನ್ನು ಮಾರುತ್ತಿದ್ದ ವರ್ತಕರ ಅಂಗಡಿಗಳಿಗೆ ದಾಳಿ ಮಾಡಿ ಜನರಿಗೆ ಕಂಟ್ರೋಲ್ ರೇಟಿಗೆ ಜೋಳ ಸಿಗುವಂತೆ ಮಾಡುತ್ತಾನೆ. ಹಾಗೆ ಗಂಗಾಧರಸ್ವಾಮಿಯ ಗೋದಾಮಿಗೂ ದಾಳಿ ಇಟ್ಟು ಬಚ್ಚಿಟ್ಟ ಜೋಳವನ್ನು ಹಂಚುವಂತೆ ಮಾಡುತ್ತಾನೆ.

ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಅಸಹಾಯಕತೆಯಿಂದ ತೊಳಲಾಡುವ ಜಿಲ್ಲಾಧಿಕಾರಿ ಬೇಸತ್ತು ಒಮ್ಮೆ ರಾಜೀನಾಮೆ ಕೊಡಲು ನಿರ್ಧರಿಸಿದಾಗ, ಸಮಾಜಸೇವಕಿ ಹೆಂಡತಿ ರೇಖಾಳ ಸಲಹೆಯಂತೆ ನೀರು ಹುಡುಕಲು ನಿರ್ಧರಿಸುತ್ತಾನೆ. ಮೂರ್ನಾಲ್ಕು ಕಡೆ ಬೋರ್ ಹಾಕಿದರೂ ಬಂಡೆಗಳ ಜಾಗದಲ್ಲಿ ನೀರು ಸಿಗದೆ, ಕೊನೆಗೆ ಅಚ್ಚರಿಯೆಂಬಂತೆ ಒಬ್ಬ ಕುರುಡ ಕೋಲಿಡಿದು ನೀರಿರುವ ಜಾಗವನ್ನು ಪತ್ತೆ ಹಚ್ಚುತ್ತಾನೆ. ಅದೇ ಹೊತ್ತಿಗೆ ಮಳೆಗಾಗಿ ಜಿಲ್ಲಾಧಿಕಾರಿಯ ತಂದೆ ಮಾಡಿಸುವ ಯಜ್ಞದ ಮತ್ತು ಬೋರ್ ಹಾಕುವ ಸನ್ನಿವೇಶಗಳು, ಮನುಷ್ಯ ಪ್ರಯತ್ನ ಮತ್ತು ಮಳೆಗಾಗಿ ದೇವರಿಗೆ ಮೊರೆಯಿಟ್ಟ ದೃಶ್ಯಗಳಾಗಿ ಒಂದಾದ ಮೇಲೊಂದರಂತೆ ತೆರೆಯಲ್ಲಿ ಮೂಡುತ್ತದೆ.

ಕೊನೆಯಲ್ಲಿ ಚಿತ್ರ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಮುಖ್ಯಮಂತ್ರಿ, ರುದ್ರಪ್ಪನನ್ನು ಹಣಿಯಲು ಕುತಂತ್ರವೊಂದನ್ನು ಹೂಡುತ್ತಾನೆ. ಭೀಮೋಜಿಗೆ ಊರಿನಲ್ಲಿ ಕೋಮುದಂಗೆ ಎಬ್ಬಿಸಲು ಆಜ್ಞಾಪಿಸುತ್ತಾನೆ.

ಊರಲ್ಲಿ ಸರ್ಕಾರಿ ಪ್ರಾಯೋಜಿತ ಕೋಮುದಂಗೆ ಏಳುತ್ತದೆ. ಸೌಹಾರ್ದತೆಯಿಂದ ಬದುಕಿದ್ದ ಹಿಂದು ಮುಸ್ಲಿಮರು ಒಬ್ಬರ ಮೇಲೊಬ್ಬರು ವಿನಾಕಾರಣ ಎರಗುತ್ತಾರೆ. ಕೊಲೆ, ಅತ್ಯಾಚಾರಗಳು ಯಾರ ತಡೆಯಿಲ್ಲದೆ ಸಾಗುತ್ತದೆ. ಎಲ್ಲೆಲ್ಲೂ ಜನರು ಟೈರು, ಕಂಬಿಗಳನ್ನಿಟ್ಟು ರಸ್ತೆಯನ್ನು ಬಂದು ಮಾಡುತ್ತಾರೆ. ತೆರವು ಮಾಡಲು ಬಂದ ಪೊಲೀಸರ ಮೇಲೆಯೇ ಕಲ್ಲನ್ನು ತೂರುತ್ತಾರೆ. ರಸ್ತೆಯಲ್ಲಿ ಜನರ ಸಂಚಾರವಿಲ್ಲದೆ ಊರು ಸ್ಮಶಾನವಾಗಿ ಕಾಣುತ್ತದೆ.  
 
ಎಸ್ ಪಿ ಗಲಭೆಯನ್ನು ನಿಯಂತ್ರಿಸಲು ಫೈರಿಂಗ್ ಮಾಡಲು ಅನುಮತಿ ಕೇಳಿದಾಗ, ಅಮಾಯಕ ಜನರು ಸಾಯುವುದನ್ನು ತಪ್ಪಿಸಲು ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿ, ಶಾಲೆಗೆ ಹೋಗಿ ಹಿಂದಿರುಗದ ಮಗನನ್ನು ರಿಕ್ಷಾ ಚಾಲಕ ಮುನೀರ್ ಸುರಕ್ಷಿತವಾಗಿ ಕರೆದುಕೊಂಡು ಬಂದಾಗ ಅನಿವಾರ್ಯತೆಯಿಂದ ಫೈರಿಂಗ್ ಗೆ ಅನುಮತಿ ಕೊಡುತ್ತಾನೆ. ಪೊಲೀಸರ ಗುಂಡಿಗೆ ಅಮಾಯಕರ ಹೆಣಗಳು ಉರುಳುತ್ತದೆ.

ಮುಂದೆ - ಮನೆ ಒಳಾಂಗಣದ ದೃಶ್ಯದಲ್ಲಿ, ರೇಡಿಯೊದಲ್ಲಿ ಗೃಹಮಂತ್ರಿ ರುದ್ರಪ್ಪ ಜನರ ಸಾವಿನ ಹೊಣೆಯನ್ನು ಹೊತ್ತು ರಾಜೀನಾಮೆ ಕೊಟ್ಟದ್ದು ಬಿತ್ತರವಾಗುತ್ತದೆ. ನಂತರ ಮುಖ್ಯಮಂತ್ರಿಯಿಂದ ಜಿಲ್ಲಾಧಿಕಾರಿಗೆ ಫೋನು ಕರೆ ಬರುತ್ತದೆ. ಜಿಲ್ಲಾಧಿಕಾರಿ ಮುಗ್ಧಜನರು ಗುಂಡಿಗೆ ಬಲಿಯಾದ ಮೇಲೆ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದಾರೆಂದು ಎಸ್ ಪಿ ಗೆ ತಿಳಿಸಿ ನಿಟ್ಟುಸಿರು ಬಿಡುತ್ತಾನೆ. ಎಸ್ ಪಿ – ‘ಈ ದರಿದ್ರ ದೇಶದಲ್ಲಿ ಎಲ್ಲವೂ ಪಾಲಿಟಿಕ್ಸ್ ಬ್ಲಡಿ ಪಾಲಿಟಿಕ್ಸ್’ ಎನ್ನುವಾಗ ದೃಶ್ಯ ಫ್ರಿಜ್ ಆಗುತ್ತದೆ. ಚಿತ್ರ ಮುಗಿಯುತ್ತದೆ.   

ಕೋಮು ದ್ವೇಷವನ್ನು ಹಂಚಿ ಅಧಿಕಾರದಲ್ಲಿ ಉಳಿಯುವುದು ಇಂದಿಗೂ ರಾಜಕಾರಣಿಗಳಿಗೆ ಕೊನೆಯ ಅಸ್ತ್ರವಾಗಿ ಉಳಿದಿದೆ. ಪ್ರಸ್ತುತ ದುರಿತಕಾಲದಲ್ಲಿ ಹುಸಿ ದೇಶಪ್ರೇಮ, ಧರ್ಮರಕ್ಷಣೆ ಹೆಸರಲ್ಲಿ ದೇಶದಲ್ಲಿ ಭೌದ್ಧಿಕ ಬರಗಾಲ ನೆಲೆಯೂರಿದೆ. ಗೋರಕ್ಷಣೆಯ ವಿಷಯವಂತೂ ಈಗ ಗೋರಕ್ಷಣೆಯು ನೆಪವಾಗಿ ಅನ್ಯಧರ್ಮೀಯರನ್ನು ಸದೆ ಬಡಿಯುವುದಕ್ಕೆ ಬಳಕೆಯಾಗುತ್ತಿದೆ. ಹಾಗಾಗಿ ಈ ಚಿತ್ರ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ.  

ಇನ್ನು ಚಿತ್ರದ ಪಾತ್ರವರ್ಗಕ್ಕೆ ಬರುವುದಾದರೆ, ಕಲೆಕ್ಟರ್ ಪಾತ್ರದಲ್ಲಿ ತಮ್ಮ ಎಂದಿನ ಸಹಜಾಭಿನಯದಿಂದ ಅನಂತನಾಗ್ ಗಮನ ಸೆಳೆಯುತ್ತಾರೆ. ಹಾಗೆ, ಮುಖ್ಯಮಂತ್ರಿಯ ಬಲಗೈ ಭಂಟನಾಗಿ ಸಿ ಆರ್ ಸಿಂಹರ ನಟನೆ ಸಿನಿಮಾದ ಪ್ಲಸ್ ಪಾಯಿಂಟ್. ಶಿವರಾಮ್ ತಮ್ಮ ಎಂದಿನ ಮುಖ್ಯವಾಹಿನಿ ಚಿತ್ರದಲ್ಲಿನ ಮ್ಯಾನರಿಸಮ್ ಬಿಟ್ಟು ರುದ್ರಪ್ಪನ ಪಾತ್ರವನ್ನು ಹಾಗೂ ಕಲೆಕ್ಟರ್ ಹೆಂಡತಿಯಾಗಿ ಲವ್ ಲಿನ್ ಮಧು ಚೆನ್ನಾಗಿ ನಿಭಾಸಿದ್ದಾರೆ. ಇನ್ಸ್ ಪೆಕ್ಟರ್ ಆಗಿ ನಾರಾಯಣ ರಾವ್, ಗಂಗಾಧರಸ್ವಾಮಿಯ ಪಾತ್ರದಲ್ಲಿ ನಿತಿನ್ ಶೇಟಿ ಸಹಜ ಅಭಿನಯವಿದೆ. ಉಳಿದ ತಾರಾಗಣದಲ್ಲಿ ಉಮಾ ಶಿವಕುಮಾರ್, ಪಂಕಜ್ ಧೀರ್ ಇದ್ದಾರೆ.    
ಅಶೋಕ್ ಗುಂಜಾಲ್ ರ ಛಾಯಾಗ್ರಹಣ ಬೀದರಿನ ಕೋಟೆಕೊತ್ತಲು, ಬಡತನದಲ್ಲಿ ಅದ್ದಿ ಹೋದ ಬಡವರ ನಿಸ್ತೇಜ ಬದುಕನ್ನು ಚೆನ್ನಾಗಿ ಸೆರೆಹಿಡಿದಿದೆ. ಅದರಲ್ಲೂ – ಚಿತ್ರದ ಆರಂಭದಲ್ಲಿ ಮುದುಕಿಯೊಬ್ಬಳು  ಜಿಲ್ಲಾಧಿಕಾರಿ ಕುಡಿಯಲು ನೀರು ಕೇಳಿದಾಗ ತಂದಿಟ್ಟ ಖಾಲಿ ಕೊಡ ಉರುಳಿ ಹೋಗುವ ದೃಶ್ಯ,  ಬೋರ್ ಹಾಕುವಾಗ ನೀರು ಒಸರುವ ಮೊದಲೇ ಬಿಂದಿಗೆಗಳನ್ನು ಹಿಡಿದು ನಿಂತ ಹೆಂಗಸರ ದೃಶ್ಯ, ಗಲಭೆಯ ದೃಶ್ಯಗಳು ಕಣ್ಣಿಗೆ ಕಟ್ಟುವಂತಿದೆ.

ಗರಮ್ ಹವಾ ಸಿನಿಮಾ ಖ್ಯಾತಿಯ ಎಂ ಎಸ್ ಸತ್ಯು ಅವರ ಅಚ್ಚುಕಟ್ಟಾದ ನಿರ್ದೇಶನದ ಈ ಚಿತ್ರದಲ್ಲಿ, ಹಳ್ಳಿಯ ಜನರನ್ನು ಬಳಸಿಕೊಂಡಿರುವುದು ನೈಜತೆಯಿಂದ ಕೂಡಿ ಅಚ್ಚರಿ ಮೂಡಿಸುತ್ತದೆ. ಮತ್ತೊಂದು ವಿಶೇಷ – ಇಡೀ ಚಿತ್ರದಲ್ಲಿ ಅವರು ಎಲ್ಲಿಯೂ ಮುಖ್ಯಮಂತ್ರಿಯ ಮುಖವನ್ನು ತೋರುವುದಿಲ್ಲ. ಗಡಸು ಧ್ವನಿ ಮಾತ್ರ ವಾಯ್ಸ್ ಒವರಾಗಿ ಕೇಳುತ್ತದೆ. ಆದರೆ, ಚುಟ್ಟ ಹಿಡಿದು, ಚಿನ್ನದ ಲೇಪನದ ಕೈಗಡಿಯಾರ ತೊಟ್ಟ ಮುಖ್ಯಮಂತ್ರಿಯ ಕೈಬೆರಳುಗಳ ಚಲನೆಯಲ್ಲಿ ಅಧಿಕಾರ ಮದ, ಅಹಂಕಾರವನ್ನು ಸಂಕೇತಿಕವಾಗಿ  ಕಟ್ಟಿ ಕೊಟ್ಟಿದ್ದಾರೆ.

ಬರ ಸಿನಿಮಾವು ಯು ಆರ್ ಅನಂತಮೂರ್ತಿಯವರ ಕತೆ ಆಧಾರಿತವಾಗಿದೆ. ಚಿತ್ರಕತೆಯನ್ನು ಶಾಮಾಜೈದಿ ಮತ್ತು ಜಾವೇದ್ ಸಿದ್ಧಿಕಿ ಬರೆದಿದ್ದಾರೆ. ಸಂಭಾಷಣೆ ಎಸ್ ರಾಮಸ್ವಾಮಿ ಅವರದು. ಹಿನ್ನೆಲೆಯಲ್ಲಿ ಬರುವ ಎರಡು ಗೀತೆಯನ್ನು ನಿಸಾರ್ ಅಹಮದ್, ಸಿದ್ಧಲಿಂಗಯ್ಯ ರಚಿಸಿದ್ದಾರೆ. ಸಂಗೀತ ನಿರ್ದೇಶನವನ್ನು ಮೈಸೂರು ಅನಂತಸ್ವಾಮಿ ಮತ್ತು ಸಿದ್ಧಲಿಂಗಯ್ಯ ಅವರು ನಿರ್ವಹಿಸಿದ್ದಾರೆ.   

ಚಂದ್ರಪ್ರಭ ಕಠಾರಿ
cpkatari@yahoo.com


© Copyright 2022, All Rights Reserved Kannada One News