68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡ ನಟ ಸೂರ್ಯ, ಅಜಯ್‌ ದೇವಗನ್‌

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡ ನಟ ಸೂರ್ಯ, ಅಜಯ್‌ ದೇವಗನ್‌

Updated : 23.07.2022

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ತಮಿಳಿನ ‘ಸೂರಾರೈ ಪೋಟ್ರು’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ‘ತಲೆದಂಡ’, ‘ಡೊಳ್ಳು’ ‘ನಾದದ ನವನೀತ’ ಹಾಗೂ ತುಳುವಿನ ‘ಜೀಟಿಗೆ’ ಚಿತ್ರಗಳು ರಜತ ಕಮಲ ಬಾಚಿಕೊಂಡಿವೆ.

ಈವರೆಗೂ ಪ್ರಶಸ್ತಿಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿ ಈ ಬಾರಿ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

‘ಸೂರಾರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಸೂರ್ಯ ಅತ್ಯುತ್ತಮ ನಟ ಹಾಗೂ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಶಾಲಿನಿ ಉಷಾ ನಾಯರ್‌, ನಿರ್ದೇಶಕಿ ಸುಧಾ ಕೊಂಗರ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನ (ಜಿ.ವಿ.ಪ್ರಕಾಶ್‌ ಕುಮಾರ್‌) ಪ್ರಶಸ್ತಿಯೂ ಇದೇ ಚಿತ್ರಕ್ಕೆ ಲಭಿಸಿದೆ. ಹಿಂದಿಯ ‘ತಾನಾಜಿ – ದಿ ಅನ್‌ಸಂಗ್‌ ವಾರಿಯರ್‌’ ಚಿತ್ರಕ್ಕಾಗಿ ಅಜಯ್‌ ದೇವಗನ್‌ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ನಟ ಸೂರ್ಯ ಅವರ ಜೊತೆ ಹಂಚಿಕೊಂಡಿದ್ದಾರೆ. 

ನಟ ದಿವಂಗತ ಸಂಚಾರಿ ವಿಜಯ್‌ ಅಭಿನಯದ ‘ತಲೆದಂಡ’ (ನಿರ್ದೇಶನ: ಪ್ರವೀಣ್‌ ಕೃಪಾಕರ್‌) ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು ₹ 1.50 ಲಕ್ಷ ನಗದು ಒಳಗೊಂಡಿದೆ. ಸಾಗರ್‌ ಪುರಾಣಿಕ್‌ ನಿರ್ದೇಶನದ ‘ಡೊಳ್ಳು’ ಚಿತ್ರವೂ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಅಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ (ಆಡಿಯೋಗ್ರಫಿ) ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ₹ 50 ಸಾವಿರ ನಗದು ಒಳಗೊಂಡಿದೆ. ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಚಿತ್ರಗಳ ವಿಭಾಗದಲ್ಲಿ ತುಳು ಚಿತ್ರ ‘ಜೀಟಿಗೆ’ಗೆ (ನಿರ್ದೇಶನ: ಸಂತೋಷ್‌ ಮಾಡ) ರಜತ ಕಮಲ ಲಭಿಸಿದೆ. ಅತ್ಯುತ್ತಮ ಕಲೆ, ಸಂಸ್ಕೃತಿ ಆಧಾರಿತ ಚಿತ್ರ ವಿಭಾಗದ ಅಡಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ– ಡಾ.ಪಂಡಿತ್‌ ವೆಂಕಟೇಶ್‌ ಕುಮಾರ್‌’ ರಜತ ಕಮಲ ಪ್ರಶಸ್ತಿ ಪಡೆದಿದೆ.

ಮಲಯಾಳಂನ ‘ಅಯ್ಯಪ್ಪನುಂ ಕೋಷಿಯುಂ’ ಚಿತ್ರಕ್ಕಾಗಿ ದಿವಂಗತ ಕೆ.ಆರ್‌. ಸಚ್ಚಿದಾನಂದನ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಒಲಿದುಬಂದಿದೆ. ಇದೇ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ರಾಜಶೇಖರ್‌, ಮಾಫಿಯಾ ಸಸಿ ಹಾಗೂ ಸುಪ್ರೀಂ ಸುಂದರ್‌ ಅವರಿಗೆ ಉತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ‘ಅಯ್ಯಪ್ಪನ್‌’ ಪಾತ್ರಕ್ಕಾಗಿ ಬಿಜು ಮೆನನ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಹಾಗೂ ತಮಿಳು ಚಿತ್ರ ‘ಸಿವರಂಜಿನಿಯುಂ ಇನ್ನುಂ ಸುಲಾ ಪೆಂಗಳುಂ’ನ ಅಭಿನಯಕ್ಕಾಗಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.

‘ಮಂಡೇಲ’ (ತಮಿಳು) ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶನಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಯು ಮದೊನ್ನೆ ಅಶ್ವಿನ್‌ ಅವರಿಗೆ ಲಭಿಸಿದೆ. ಇದೇ ಚಿತ್ರಕ್ಕೆ ಅಶ್ವಿನ್ ಅವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ. 

ಇತರ ವಿಭಾಗಗಳು: ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಚಿತ್ರ: ಅಯ್ಯಪ್ಪನುಂ ಕೋಶಿಯುಂ), ಅತ್ಯುತ್ತಮ ಹಿನ್ನೆಲೆ ಗಾಯಕ ರಾಹುಲ್‌ ದೇಶಪಾಂಡೆ (ಚಿತ್ರ: ಮಿ ವಸಂತರಾವ್‌), ಅತ್ಯುತ್ತಮ ಛಾಯಾಗ್ರಹಣ: ಸುಪ್ರತಿಮ್‌ ಭೋಲ್‌ (ಚಿತ್ರ: ಅವಿಜಾತ್ರಿಕ್‌), ಅತ್ಯುತ್ತಮ ಸಂಕಲನಕಾರ: ಶ್ರೀಕರ ಪ್ರಸಾದ್‌ (ಸಿವರಂಜಿನಿಯುಂ ಇನ್ನುಂ ಸಿಲಾ ಪೆಂಗಳುಂ), ಅತ್ಯುತ್ತಮ ನಿರ್ಮಾಣ ವಿನ್ಯಾಸದ ಚಿತ್ರ: ಕಪ್ಪೆಲ (ಮಲಯಾಳಂ).


© Copyright 2022, All Rights Reserved Kannada One News