ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

Updated : 29.09.2022

ಹೊಸದಿಲ್ಲಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ತಲೆದೋರಿದ ಬಿಕ್ಕಟ್ಟಿನ ನಂತರ ಇಂದು ಕಾಂಗ್ರೆಸ್(Congress) ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ಭೇಟಿ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿ, ತಮ್ಮ ರಾಜ್ಯದಲ್ಲಿ ತಮ್ಮ ನಿಷ್ಠಾವಂತ ಶಾಸಕರ ಬಂಡಾಯಕ್ಕೆ 'ನೈತಿಕ ಹೊಣೆ' ಹೊತ್ತು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ರಾಜಸ್ಥಾನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಬಳಿ ಕ್ಷಮೆ ಕೋರಿರುವುದಾಗಿಯೂ ಅವರು ತಿಳಿಸಿದ್ದಾರೆ.

ಕ್ಷಮೆಯಾಚಿಸುವ ಮೂಲಕ ಗೆಹ್ಲೋಟ್ ಅವರು ರಾಜಸ್ಥಾನ ಸಿಎಂ ಹುದ್ದೆಯನ್ನು ಉಳಿಸಿಕೊಂಡಿದ್ದಾರೆಂದು ತಿಳಿಯಲಾಗಿದೆ. ಆದರೆ ತಾನು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಯೇ ಆತವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಸೋನಿಯಾ ಗಾಂಧಿ ಅವರಿಗೆ ಬಿಟ್ಟ ವಿಚಾರ ಎಂದು ಗೆಹ್ಲೋಟ್ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಗೆಹ್ಲೋಟ್ ಅವರು ಸೋನಿಯಾ ಗಾಂಧಿ ಅವರ ಮೊದಲ ಆದ್ಯತೆಯಾಗಿದ್ದರು ಎಂದೇ ತಿಳಿಯಲಾಗಿತ್ತು. ಇದೀಗ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಸದ್ಯ ಶಶಿ ತರೂರ್ ಹಾಗೂ ದಿಗ್ವಿಜಯ್ ಸಿಂಗ್ ಕಣದಲ್ಲಿ ಉಳಿಯುತ್ತಾರೆ. ಆದರೆ ಗಾಂಧಿ ಕುಟುಂಬದ ಆಶೀರ್ವಾದವಿರುವ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನಾಂಕವಾಗಿದೆ.

ಅಶೋಕ್ ಗೆಹ್ಲೋಟ್ ಅವರು ಪಕ್ಷಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದರೂ ಸಿಎಂ ಹುದ್ದೆ ಉಳಿಸಿಕೊಳ್ಳುವ ಇಂಗಿತ ಹೊಂದಿದ್ದರು. ಆದರೆ ಇದಕ್ಕೆ ರಾಹುಲ್ ಗಾಂಧಿ ವಿರೋಧಿಸಿದ್ದರು.

ರಾಜಸ್ಥಾನ ಸಿಎಂ ಹುದ್ದೆ ಪಡೆಯಬೇಕೆಂಬ ಇಚ್ಛೆಯಿಂದ ಬಹಳ ಕಾಲ ಕಾದಿರುವ ಸಚಿನ್ ಪೈಲಟ್ ಅವರನ್ನೂ ಸೋನಿಯಾ ಗಾಂಧಿ ಅವರು ಭೇಟಿಯಾಗುವ ನಿರೀಕ್ಷೆಯಿದೆ.

© Copyright 2022, All Rights Reserved Kannada One News