ಆರ್ಟಿಕಲ್‌ 15 – ಕಾನೂನಿನ ಮುಂದೆ ಎಲ್ಲರೂ ಸಮಾನರು: ವಿ.ಸೂ – ಮುಸ್ಲಿಮರನ್ನು ಹೊರತು ಪಡಿಸಿ: ಉಮರ್ ಫಾರೂಖ್ ಅವರ ಅಂಕಣ

ಆರ್ಟಿಕಲ್‌ 15 – ಕಾನೂನಿನ ಮುಂದೆ ಎಲ್ಲರೂ ಸಮಾನರು: ವಿ.ಸೂ – ಮುಸ್ಲಿಮರನ್ನು ಹೊರತು ಪಡಿಸಿ: ಉಮರ್ ಫಾರೂಖ್ ಅವರ ಅಂಕಣ

Updated : 06.08.2022

ಭಾರತದ ಜನತೆಯಾದ ನಾವು
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ, ಪ್ರಜಾ ಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ: ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು: ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು: ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ,
ನಮ್ಮ ಸಂವಿಧಾನ ಸಭೆಯಲ್ಲಿ,
1949ನೇಯ ಇಸವಿಯ ನವೆಂಬರ್‌ತಿಂಗಳ 26 ನೇ ದಿನದಂದು
ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.

ಆರ್ಟಿಕಲ್‌ 15 – ಕಾನೂನಿನ ಮುಂದೆ ಎಲ್ಲರೂ ಸಮಾನರು
ವಿ. ಸೂ – ಮುಸ್ಲಿಮರನ್ನು ಹೊರತು ಪಡಿಸಿ
ಧರ್ಮ, ಜಾತಿ, ಸ್ಥಳ, ಲಿಂಗ, ಮೂಲ ವಂಶದ ಆಧಾರದ ಮೇಲೆ ಭಾರತದ ಯಾವುದೇ ಪ್ರಜೆಗೆ ತಾರತಮ್ಯ ಮಾಡುವುದು ಕ್ರೈಂ ಆಗುತ್ತದೆ. ಅಂದ್ರೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ನಮ್ಮ ಸಂವಿಧಾನ ಸಾರುತ್ತದೆ. ಆದರೆ ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ಇದನ್ನು ಮರೆತಿದೆ. ಸಂವಿಧಾನದ ಪೀಠಿಕೆಯಲ್ಲಿರುವ ವ್ಯಕ್ತಿ ಘನತೆ, ಜಾತ್ಯತೀತತೆ ಮತ್ತು ಧರ್ಮ ನಿರಪೇಕ್ಷ ಎಂಬ ಮುಂತಾದ ಮಾನವೀಯ ಮೌಲ್ಯಗಳು ಹಾಗೂ ಮಾನವ ಹಕ್ಕುಗಳ ಸಂರಕ್ಷಣೆಯ ಕುರಿತು ಗೊತ್ತೇ ಇಲ್ಲ ಅನ್ಸುತ್ತೆ. ಓ.. ಕ್ಷಮಿಸಿ ಬಾಬಾ ಸಾಹೇಬ ಅಂಬೇಡ್ಕರ್‌ ಬರೆದ ಸಂವಿಧಾನದ ಬಗ್ಗೆ ಇವರಿಗೆ ಪಾಠ ಮಾಡುವುದು ತಪ್ಪು ಅಲ್ವಾ? ಯಾಕಂದ್ರೆ ಇವರು ಒಪ್ಪಿ ಅಪ್ಪಿರೋದು ಮನು ಎಂಬ ಐನಾತಿ ಬರೆದ ದುರುಳ ಮನುಸ್ಮೃತಿ ಪುಸ್ತಕಕ್ಕೆ.

ಮಾನ್ಯ ಬೊಮ್ಮಾಯಿಯವರೇ ನಿಮಗೂ ಮಾಂಸ ಇದೆ, ಮಜ್ಜೆ ಇದೆ, ಮನಸ್ಸೂ ಇದೆ, ನೀವು ಕೂಡಾ ಮನುಷ್ಯರೆಂದೇ ನಾನು ಅಂದುಕೊಂಡಿದ್ದೇನೆ. ಅದಕ್ಕಾಗಿಯೇ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳ ಬಯಸುತ್ತೇನೆ. ಸಮಯವಿದ್ದರೆ, ಇಲ್ಲದಿದ್ದರೆ ಸಮಯ ಮಾಡಿಕೊಂಡು ನಮಗೆ ಉತ್ತರ ಕೊಡಲೇಬೇಕು. ಯಾಕಂದ್ರೆ ನೀವು ಈ ದೇಶದ ಶೋಷಿತ ಸಮುದಾಯದ ಮುಳುಗದ ಸೂರ್ಯನಾಗಿ ಕಂಗೊಳಿಸುತ್ತಿರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನದ ಪ್ರಕಾರವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಿ, ಗೆದ್ದಿದ್ದೀರಿ, ಈಗ ಮುಖ್ಯಮಂತ್ರಿಯೂ ಆಗಿದ್ದೀರಿ. ಸಂವಿಧಾನದ ಪೀಠಿಕೆ ಓದಿಯೇ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಅಷ್ಟೇ ಅಲ್ಲ, ನಿಮ್ಮ ತಂದೆ ಸಹ ಇದೇ ಸಂವಿಧಾನದಡೀ ಮುಖ್ಯಮಂತ್ರಿಯಾಗಿದ್ದರು. ಅದಕ್ಕೇ ನೀವು ನನ್ನ ಪ್ರಶ್ನೆಗಳಿಗೆ ಉತ್ತರಿಸಲೇಬೇಕು.

ಮಾನ್ಯ ಬಸವರಾಜ ಬೊಮ್ಮಾಯಿಯವರೇ… ನೀವಿಗ ಬಿಜೆಪಿಯ ವಕ್ತಾರ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ಕರುನಾಡ ಕರಾವಳಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಒಟ್ಟು 3 ಕೊಲೆಗಲಾಗಿವೆ. ಮೂವರಲ್ಲಿ ಮೊದಲು ಸತ್ತಿದ್ದು ಮುಸ್ಲಿಮನಾದರೆ, ಎರಡನೆಯವನು ಹಿಂದೂ, ಮತ್ತೆ ಅದಕ್ಕೆ ಪ್ರತೀಕಾಕಾರವಾಗಿ ಬಲಿಯಾಗಿದ್ದು ಮುಸ್ಲಿಂ. ಮಾನ್ಯ ಸಿಎಂ ಸಾಹೇಬರೇ ಅವರ ಹೆಸರು ಮಸೂದ್‌, ಪ್ರವೀಣ್‌ ಮತ್ತು ಫಾಝಿಲ್.‌ ಆದರೆ ಹಿಂದೂವಿನ ಜೀವ ಮಾತ್ರ ಜೀವವಾ? ಮುಸ್ಲಿಮರ ಜೀವಕ್ಕೆ ಬೆಲೆ ಇಲ್ವಾ ಬೊಮ್ಮಾಯಿಯವರೇ? ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಯಾಕ್ರೀ ತಾರತಮ್ಯ ಮಾಡ್ತೀರಾ? ಪ್ರವೀಣ್‌ ಹಿಂದೂ ಅನ್ನುವುದಕ್ಕಿಂತ ಆತನೊಬ್ಬ ಕಠೋರ ಬಿಜೆಪಿ ಕಾರ್ಯಕರ್ತನಾಗಿದ್ದ ಮತ್ತು ಸಂಘ ಪರಿವಾರದ ಸದಸ್ಯನಾಗಿದ್ದ. ಅವನಿಗೆ ಶತ್ರುಗಳು ಇದ್ದಿದ್ದರಲ್ಲಿ – ಯಾವ ಅತಿಶಯೋಕ್ತಿಯೂ ಇಲ್ಲ. ಆದರೆ ಮಸೂದ್‌ ಮತ್ತು ಫಾಝಿಲ್‌ ಮತ್ತು ಯಾವ ಪಕ್ಷ, ಸಂಘಟನೆಗಳೊಂದಿಗೂ ಗುರುತಿಸಿಕೊಂಡಿರಲಿಲ್ಲವಲ್ಲ? ಮತ್ಯಾಕೆ ಇವರಿಬ್ಬರನ್ನು ಕೊಂದರು? ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಅಲ್ವಾ ಬೊಮ್ಮಾಯಿಯವರೇ? ಈ ನಾಡಿನಲ್ಲಿ ಮುಸ್ಲಿಮನಾಗಿ ಹುಟ್ಟುವುದೇ ತಪ್ಪಾ ಸಿಎಂ ಸಾಹೇಬರೇ?

ಆದದ್ದು ಆಗಿ ಹೋಯ್ತು. ಆಗಿದ್ದರ ಬಗ್ಗೆ ಚಿಂತಿಸಿ ಪ್ರಯೋಜನವೇನು ಇಲ್ಲ. ಹೋದ ಜೀವ ವಾಪಸ್‌ ಬರೋದೂ ಇಲ್ಲ. ಆದರೆ ಮುಖ್ಯಮಂತ್ರಿಗಳೇ ಮುಸ್ಲಿಮರಿಬ್ಬರ ಹತ್ಯೆಯ ತನಿಖೆಯನ್ನು ಲೋಕಲ್‌ ಪೊಲೀಸ್‌ ಕೈಯಲ್ಲಿ ಕೊಟ್ಟು, ಪ್ರವೀಣ್‌ ಸಾವಿನ ತನಿಖೆಯನ್ನು ಮಾತ್ರ ಎನ್‌ಐಎಗೆ ಕೊಟ್ಟರೆ ಏನು ಅರ್ಥ ಸಾಹೇಬರೇ? ಇಂಥ ತಾರತಮ್ಯ ಮಾಡುತ್ತಿರುವ ನಿಮಗೆ ತಿಂದ ಅನ್ನ ಕರುಗುತ್ತಾ ಸರ್?‌ ಸಿಎಂ ಸಾಹೇಬರೇ,, ಮೊದಲ ಹತ್ಯೆಯಾಗಿದ್ದು ಮಸೂದ್‌ನದ್ದು, ನಂತರ ಪ್ರವೀಣ್‌ನದ್ದು, ನೀವು ಮಂಗಳೂರಿನಲ್ಲಿದ್ದಾಗಲೇ ಆದ ಹತ್ಯೆ ಫಾಝಿಲ್‌ನದ್ದು. ಆದರೂ ಬೊಮ್ಮಾಯಿಯವರೇ ನೀವು ಭೇಟಿ ಕೊಟ್ಟು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಪ್ರವೀಣ್‌ ಕುಟುಂಬಸ್ಥರಿಗೆ ಮಾತ್ರ. ಅನತಿ ದೂರದಲ್ಲಿದ್ದ ಮಸೂದ್‌ ಕುಟುಂಬಸ್ಥರರನ್ನು ಭೇಟಿಯಾಗಿ, ನಿಮ್ಮೊಂದಿಗೆ ನಾವಿದ್ದೇವೆ ಅಂತ ಧೈರ್ಯದ ಮಾತುಗಳನ್ನು ಹೇಳುವ ಮನಸ್ಸು ಯಾಕೆ ಮಾಡಲಿಲ್ಲ? ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಮುಟ್ಟಿಕೊಂಡು ಹೇಳಿ, ಅವತ್ತು ರಾತ್ರಿ ನಿಮಗೆ ಕಣ್ತುಂಬಾ ನಿದ್ದೆ ಬಂತಾ ಸಿಎಂ ಸರ್?
ಅಲ್ಲಾರೀ ಮುಖ್ಯಮಂತ್ರಿಗಳೇ, ಮುಸ್ಲಿಮರು ಸೇರಿ ರಾಜ್ಯದ ಜನ ಕಟ್ಟುವ ತೆರಿಗೆ ಹಣದಲ್ಲಿ ಪ್ರವೀಣ್‌‌ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಟ್ಟಿರಲ್ಲ – ಅದೇ ಮಸೂದ್‌ ಮತ್ತು ಫಾಸಿಲ್‌ ಕುಟುಂಬಕ್ಕೆ ಯಾಕೆ ಕೊಡಲಿಲ್ಲ? ಹರಿದ ಮೂವರ ರಕ್ತದ ಬಣ್ಣ ಒಂದೇ ಅಲ್ವಾ. ಮೂವರು ಕುಟುಂಬಸ್ಥರ ಕಣ್ಣೀರು ಒಂದೇ ಬಣ್ಣದ್ದಲ್ವಾ? ಇಂಥ ದುಷ್ಟತನಕ್ಕೆ ನಿಮ್ಮ ಮನಸ್ಸು ಒಪ್ಪುತ್ತಾ ಸರ್?‌

ಮಾನ್ಯ ಸಿಎಂ ಸಾಹೇಬರೇ ನಿಮ್ಮ ತಂದೆಯವರೇನಾದರೂ ಇಂದು ಬದುಕಿದ್ದರೆ, ನಿಮ್ಮ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರೇನೋ. ಯಾಕಂದ್ರೆ ಅವರ್ಯಾವತ್ತು ನಿಮ್ಮ ಹಾಗೇ ತಾರತಮ್ಯದ ಅನಿಷ್ಟತೆಯನ್ನು ಮೂಸಿಯೂ ನೋಡಿದವರಲ್ಲ. ನೀರ್‌ ಸಾಬ್‌ಎಂದೇ ಖ್ಯಾತರಾಗಿದ್ದ ಅಬ್ದುಲ್‌ ನಝೀರ್‌ ಸಾಬ್‌ ಕ್ಯಾನ್ಸರ್‌ ಪೀಡಿತರಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಮಲಗಿಕೊಂಡಿದ್ದಾಗ, ಅಂದು ಮುಖ್ಯಮಂತ್ರಿಯಾಗಿದ್ದ ಸೀನಿಯರ್‌ ಬೊಮ್ಮಾಯಿ ಆಸ್ಪತ್ರೆಗೆ ಬಂದು, ಆರೋಗ್ಯ ವಿಚಾರಿಸಿ, “ನಿಮ್ಮ ಕುಟುಂಬಕ್ಕೆ ಏನಾದ್ರೂ ಸಹಾಯ ಬೇಕಿದ್ರೆ ಹೇಳಿ ನಜೀರ್‌ ಸಾಬ್.‌ ನಾನು ನೋಡಿಕೊಳ್ತೇನೆʼ ಅಂದರಂತೆ. ಅದಕ್ಕೆ ʼನನಗೇನೂ ಬೇಕಾಗಿಲ್ಲ, ನಾನೀಗ ಸಾವಿರ ಕುಟುಂಬಗಳ ಯೋಜನೆ ರೂಪಿಸಿದ್ದೇನೆ. ಅದರಂತೆ ಪ್ರತಿ ತಾಲೂಕಿನಲ್ಲೂ ಸಾವಿರ ಮನೆಗಳನ್ನು ನಿರ್ಮಿಸಿ ಬಿಡಿ. 5 ವರ್ಷದಲ್ಲಿ ವಸತಿ ಸಮಸ್ಯೆ ಬಗೆಹರೆದರಷ್ಟೇ ಸಾಕುʼ ಅಂದರಂತೆ. ಸಾವಿನ ಕ್ಷಣದಲ್ಲೂ ಸಮಾಜದ ಬಗ್ಗೆ ಅಂತಃಕರಣ ಹೊಂದಿದ ನೀರ್‌ಸಾಬ್‌ರ ಬಗ್ಗೆ ಆಸ್ಪತ್ರೆಯ ಹೊರಗೆ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ ಸೀನಿಯರ್‌ ಬೊಮ್ಮಾಯಿ. ಅಂಥ ಒಬ್ಬ ಜಾತ್ಯತೀತನ, ಸಮಾಜವಾದಿಯ ಹೊಟ್ಟೆಯಲ್ಲಿ ನೀವು ಅದೇಗೆ ಹುಟ್ಟಿದಿರಿ ಬಸವರಾಜ ಬೊಮ್ಮಾಯಿಯವರೇ? ಇವತ್ತು ನಿಮ್ಮ ಆಟಾಟೋಪವನ್ನು ಕಂಡು ನಿಮ್ಮ ತಂದೆಯವರ ಆತ್ಮ ಅದೆಷ್ಟು ದುಃಖಿಸುತ್ತಿರಬಹುದು ಯೋಚಿಸಿ ಸಿಎಂ ಸರ್.

ಸಿಎಂ ಸರ್‌ ನಿಮ್ಮ ದುಷ್ಟತನಕ್ಕೆ ಕೊನೆ ಎಂದು ಹೇಳಿ ಬಿಡಿ. ಹೋಗಿ ಹೋಗಿ ಆ ಯೋಗಿ ಆದಿತ್ಯನಾತನ ಡಬ್ಬಾ ಆಡಳಿತವನ್ನು ಕರ್ನಾಟಕ್ಕೆ ತರ್ತೀವಿ ಅಂತ ಹೇಳ್ತಿರಲ್ಲ – ನಿಮ್ಮ ಭಂಡತನಕ್ಕೆ ಕೊನೆ ಯಾವಾಗ ಅಂತ ಹೇಳ್ಬಿಡಿ ಸಿಎಂ ಸರ್. ‌ನೇತ್ರಾವತಿಯ ಒಡಲಿನಲ್ಲಿ ಹರಿದ ಮುಸ್ಲಿಮರ ನೆತ್ತರು ಕರ್ನಾಟಕದಾದ್ಯಂತ ಹರಿಯಬೇಕೆ? ಜೀವ ಕಳೆದುಕೊಂಡವರ ಕುಟುಂಬಸ್ಥರ ಕಣ್ಣೀರಿನಿಂದ ಉಪ್ಪಾದ ನೇತ್ರಾವತಿ ನದಿಯಂತೆ ಕರ್ನಾಟಕದ ಎಲ್ಲಾ ನದಿಗಳು ಮಳೆಯ ಬದಲು ಕಣ್ಣೀರಿನಿಂದಲೇ ಪ್ರವಾಹ ಧುಮ್ಮಿಕ್ಕಿ ಬರಬೇಕೆ?
ಸಿಎಂ ಸರ್‌, ಸರ್ವ ಜನಾಂಗದ ಶಾಂತಿಯ ತೋಟ ಎಂದು ನಾಡಗೀತೆ ಹಾಡುವಾಗ ಎದ್ದು ನಿಲ್ಲುತ್ತಿರಲ್ಲ, ಆ ನಾಡಿಗೆ ʼಯೋಗಿಯ ಮಾಡೆಲ್‌ʼ ತರಲು ಬಯಸುತ್ತಿದ್ದೀರಲ್ಲ – ಅದೇ ಯೋಗಿಯ ನಾಡು ಪಬ್ಲಿಕ್‌ ಅಫೇರ್ಸ್‌ ಇಂಡೆಕ್ಸ್‌ ಪ್ರಕಾರ ಅಭಿವೃದ್ಧಿಯ ವಿಚಾರದಲ್ಲಿ ಕಳಪೆ ಪ್ರದರ್ಶನ ತೋರಿ ಕೊನೆಯ ಸ್ಥಾನದಲ್ಲಿದೆ. ದೇಶದಲ್ಲೇ ಅತೀ ಹೆಚ್ಚು ಕಸ್ಟೋಡಿಯಲ್‌ ಡೆತ್‌ ನಡೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 2021 ರಲ್ಲಿ 501 ಕಸ್ಟೋಡಿಯಲ್‌ ಡೆತ್‌ ಸಂಭವಿಸಿವೆ. ಅಂಥ ಯೋಗಿ ಮಾಡೆಲ್‌ ನಮ್ಮ ಕರ್ನಾಟಕಕ್ಕೆ ಮಾದರಿಯಾಗಬೇಕಾ ಬೊಮ್ಮಾಯಿಯವರೇ? ಮೊನ್ನೆ ಅದ್ಯಾವುದೋ ನಾಯಿಯ ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತಿರಲ್ಲ – ಇವತ್ತು ಮೂವರ ಕೊಲೆಯಾಗಿದೆ. ಒಬ್ಬನ ಮನೆಗೆ ಹೋಗಿ ಮೊಸಳೆ ಕಣ್ಣೀರು ಸುರಿಸಿದ್ದೀರಿ. ಇನ್ನಿಬ್ಬರ ಜೀವಕ್ಕೆ ಮೊಸಳೇ ಕಣ್ಣೀರು ಸಹ ಇಲ್ವಾ ಸರ್?‌ ಎಲ್ಲಾ ಬತ್ತಿ ಹೋಗಿ ಬಿಟ್ಟಿತೇ?

ಬೇಡ ಸಿಎಂ ಸರ್, ಇದು ಕರ್ನಾಟಕ. ಇಲ್ಲಿ ಶಿಶುನಾಳ ಶರೀಫರಿಗೆ ಮಾರ್ಗದರ್ಶಿ ಗುರು ಗೋವಿಂದ ಭಟ್ಟರಾಗಿದ್ದರೆ, ಗಂಗೂಬಾಯಿ ಹಾನಗಲ್‌ ರೂಪುಗೊಳ್ಳುವುದರ ಹಿಂದೆ ಉಸ್ತಾದ್‌ ಅಬ್ದುಲ್‌ ಕರೀಂ ಖಾನರು ಇದ್ದರು. ಇಂಥ ಕರ್ನಾಟಕಕ್ಕೆ ನೀವು ಬೇಡ, ನಿಮ್ಮ ಯೋಗಿ ಮಾಡೆಲ್ಲೂ ಬೇಕಾಗಿಲ್ಲ. ನೀವು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಟ್ಟ ಕೊಡುಗೆಯೂ ಏನು ಇಲ್ಲ. ರಾಜೀನಾಮೆ ಕೊಟ್ಟು ನಮ್ಮ ಕರ್ನಾಟಕಕ್ಕೆ ನೆಮ್ಮದಿ ಇರಲು ಅವಕಾಶ ಮಾಡಿಕೊಡಿ ಸಾಕು. ಅದೇ ನೀವು ನಮಗೆ ಕೊಡಬಹುದಾದ ಬಹು ದೊಡ್ಡ ಕೊಡುಗೆ.

© Copyright 2022, All Rights Reserved Kannada One News